ಕುವೆಂಪು ಕವನಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ.

ಕುವೆಂಪು, kuvempu

ನೇಗಿಲಯೋಗಿ

ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ
ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೆ ಇಲ್ಲ
ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೇಗಿಲಿನಾಶ್ರಯದಿ
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು
ನೇಗಿಲ ಬಲದೊಳು ವೀರರು ಮೆರೆದರು
ಶಿಲ್ಪಿಗಳೆಸೆದರು, ಕವಿಗಳು ಬರೆದರು
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ

ಜನರ ಮನಸ್ಸಿಗೆ ಅರಿವನ್ನು ನೀಡುವ ಯೋಗಿಯಂತೆಯೇ ಜನರ ಹೊಟ್ಟೆಗೆ ಅನ್ನವನ್ನು ನೀಡಿ ಮಾನವ ಸಮುದಾಯವನ್ನು ಕಾಪಾಡುತ್ತಿರುವ ಬೇಸಾಯಗಾರನನ್ನು ಕವಿಯು ‘ ನೇಗಿಲಯೋಗಿ ’ ಎಂದು ಕರೆದು , ಬೇಸಾಯಗಾರರ ದುಡಿಮೆಯಿಂದಲೇ ಜಗತ್ತು ಉಳಿದು ಬೆಳೆದು ಬಾಳುತ್ತಿರುವುದನ್ನು ಈ ಕವನದಲ್ಲಿ ಬಣ್ಣಿಸಿದ್ದಾರೆ.

ನೇಗಿಲು=ಮಣ್ಣನ್ನು ಮೆತುಗೊಳಸಿ ಬೀಜವನ್ನು ಬಿತ್ತಲು ಮತ್ತು ಪಯಿರನ್ನು ನೆಡಲು ಹದಗೊಳಿಸುವುದಕ್ಕಾಗಿ ಬೂಮಿಯನ್ನು ಉಳುವ ಉಪಕರಣ; ಯೋಗಿ=ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು, ಲೋಕದ ಒಳಿತಿಗಾಗಿ ನಿರಂತರವಾಗಿ ಚಿಂತಿಸುತ್ತ, ಜನರಿಗೆ ಒಳ್ಳೆಯ ಅರಿವನ್ನು ತಿಳಿಯಹೇಳುತ್ತ, ಜನಸಮುದಾಯಕ್ಕೆ ಒಳಿತನ್ನು ಮಾಡುವಂತಹ ವ್ಯಕ್ತಿ; ಹೊಲ=ರಾಗಿ ಜೋಳ ಮುಂತಾದ ನೂರಾರು ಬಗೆಯ ಕಾಳು ಕಡ್ಡಿಗಳನ್ನು ಬೆಳೆಯುವ ಜಮೀನು; ಹಾಡು=ರಾಗಮಯವಾಗಿ ನುಡಿಗಳನ್ನು ಹೇಳುವುದು;

ಉಳುವಾ=ಉಳು+ಆ; ಉಳು=ದನಗಳ ಕೊರಳಿಗೆ ನೊಗವನ್ನು ಹೂಡಿ, ನೇಗಿಲನ್ನು ನೊಗಕ್ಕೆ ಬಿಗಿದು ಕಟ್ಟಿ, ದನಗಳನ್ನು ಮುನ್ನಡೆಸುತ್ತ ಬೂಮಿಯಲ್ಲಿ ಬಿಗಿಯಾಗಿರುವ ಮಣ್ಣನ್ನು ನೇಗಿಲಿನಿಂದ ಸೀಳಿ, ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಮಣ್ಣನ್ನು ಹದಗೊಳಿಸುವುದು; ನೋಡು+ಅಲ್ಲಿ; ಉಳುವಾ ಯೋಗಿಯ ನೋಡಲ್ಲಿ=ಹೊಲದಲ್ಲಿ ಉಳುಮೆಯನ್ನು ಮಾಡುತ್ತಿರುವ ಆ ನೇಗಿಲಯೋಗಿಯನ್ನು ನೋಡು;

ಫಲ=ಬೆಳೆ/ಉತ್ಪತ್ತಿ/ಹುಟ್ಟುವಳಿ; ಬಯಸು=ಹಂಬಲಿಸು; ಫಲವನು ಬಯಸದ =ಬೇಸಾಯಗಾರನು ತನಗೆ ಇಚ್ಚೆ ಬಂದ ಪ್ರಮಾಣದಲ್ಲಿಯೇ ಬೆಳೆಯನ್ನು ಪಡೆಯುತ್ತೇನೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು ಬೆಳೆಯನ್ನು ಒಡ್ಡಲಾಗುವುದಿಲ್ಲ. ಏಕೆಂದರೆ ಬೂಮಿಯಲ್ಲಿ ಬೆಳೆಯುವ ಬೆಳೆಯ ಪ್ರಮಾಣವು ಬೇಸಾಯಗಾರನ ದುಡಿಮೆಯ ಪರಿಶ್ರಮದ ಜತೆಗೆ ನಿಸರ‍್ಗದಲ್ಲಿ ನಡೆಯುವ ಆಗುಹೋಗುಗಳನ್ನು ಅವಲಂಬಿಸಿರುತ್ತದೆ. ಅಂದರೆ ಮಣ್ಣಿನ ಗುಣ, ಬಿಸಿಲು ಮಳೆ ಗಾಳಿಯಿಂದ ಕೂಡಿದ ವಾತಾವರಣವು ಬೆಳೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ;

ಸೇವೆ=ಊಳಿಗ/ಚಾಕರಿ/ಕಸುಬು/ಕಾಯಕ; ಪೂಜೆ=ದೇವರನ್ನು ಒಲಿಸಿಕೊಳ್ಳಲೆಂದು ದೇವರ ವಿಗ್ರಹದ ಮುಂದೆ ಹೂಹಣ್ಣುಕಾಯಿಗಳನ್ನಿಟ್ಟು, ದೂಪದೀಪಗಳನ್ನು ಬೆಳಗಿಸುತ್ತ ಮಾಡುವ ಆಚರಣೆ; ಸೇವೆಯೆ ಪೂಜೆಯು=ಮುಂಗಾರಿನ ಮಳೆಯು ಬರುವುದಕ್ಕೆ ಮೊದಲು ಹೊಲಗದ್ದೆತೋಟಗಳಿಗೆ ಗೊಬ್ಬರಗೋಡನ್ನು ಹೇರುವ; ದನಗಳ ಕೊರಳಿಗೆ ನೊಗವನ್ನು ಹೂಡಿ ಬೂಮಿಯನ್ನು ಉಳುವ; ಮಣ್ಣಿನ ಹೆಂಟೆಗಳನ್ನು ಒಡೆದು ಪುಡಿ ಮಾಡಿ ಬೂಮಿಯನ್ನು ಹದಗೊಳಿಸುವ; ಬೀಜವನ್ನು ಬಿತ್ತುವ; ಪಯಿರನ್ನು ನಾಟಿ ಮಾಡುವ; ಕಾಲಕಾಲಕ್ಕೆ ನೀರನ್ನು ಹಾಯಿಸುವ; ತೆಂಡೆಯೊಡೆದು ಬೆಳೆದಿರುವ ಸಸಿಗಳ ನಡುವೆ ಹುಟ್ಟಿಕೊಂಡಿರುವ ಕಳೆ ಗಿಡಗಳನ್ನು ಕೀಳುವ; ಬೆಳೆದ ಬೆಳೆಯನ್ನು ಕುಯ್ದು ಹೊರೆಕಟ್ಟಿ ಕಣಕ್ಕೆ ಸಾಗಿಸಿ ಒಕ್ಕಣೆ ಮಾಡುವ ಹತ್ತಾರು ಬಗೆಯ ಕೆಲಸಗಳೇ ಬೇಸಾಯಗಾರನು ಮಾಡುವ ಪೂಜೆಯಾಗಿರುತ್ತದೆ;

ಕರ್ಮ=ಕೆಲಸ/ದುಡಿಮೆ; ಇಹ=ಜೀವಜಗತ್ತು/ಪ್ರಪಂಚ; ಪರ=ಮತ್ತೊಂದು ಲೋಕ. ವ್ಯಕ್ತಿಯು ತನ್ನ ಜೀವನದಲ್ಲಿ ಇತರರಿಗೆ ಕೇಡನ್ನು ಮಾಡಿದ್ದರೆ ನರಕಲೋಕಕ್ಕೆ, ಒಳಿತನ್ನು ಮಾಡಿದ್ದರೆ ಸ್ವರ‍್ಗಲೋಕಕ್ಕೆ ಸತ್ತ ನಂತರ ಹೋಗುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ; ಸಾಧನ=ಸಲಕರಣೆ/ಉಪಕರಣ;

ಕರ್ಮವೆ ಇಹಪರ ಸಾಧನವು=ನೇಗಿಲಯೋಗಿಯ ದುಡಿಮೆಯೇ ಅವನ ಪಾಲಿಗೆ ಎಲ್ಲ ರೀತಿಯಿಂದಲೂ ಒಲವು ನಲಿವು ನೆಮ್ಮದಿಯನ್ನು ಕೊಡುವುದು; ಕಷ್ಟದೊಳ್+ಅನ್ನವ; ಕಷ್ಟ=ಸಂಕಟ/ತೊಂದರೆ; ಅನ್ನ=ಜೀವಿಗಳ ಉಳಿದು ಬೆಳೆದು ಬಾಳುವುದಕ್ಕೆ ಬೇಕಾದ ಎಲ್ಲಾ ಬಗೆಯ ಕಾಳುಕಡ್ಡಿ, ಹಣ್ಣುಕಾಯಿ, ದವಸದಾನ್ಯ ಸೊಪ್ಪುಸದೆ,ಹಾಲುಮೊಸರುಬೆಣ್ಣೆಯನ್ನು ಒಳಗೊಂಡ ವಸ್ತುಗಳು; ದುಡಿ=ಕೆಲಸ ಮಾಡು; ಕಷ್ಟದೊಳಗೆ ಅನ್ನವ ದುಡಿವವನು=ಹಗಲು ಇರುಳು ಎನ್ನದೆ, ಮಳೆ ಗಾಳಿ ಬಿಸಿಲಿಗೆ ಮಯ್ಯನ್ನು ಒಡ್ಡಿ, ಬೇಸಾಯದ ಕೆಲಸಗಳನ್ನು ಮಾಡಿ ಬೆವರನ್ನು ಬಸಿಯುತ್ತ, ತಾನು ಬೆಳೆದ ಬೆಳೆಗಳಿಗೆ ಮತ್ತು ತನ್ನ ಜೀವಕ್ಕೆ ಹಾವು, ಹಕ್ಕಿ, ಕ್ರಿಮಿಕೀಟ, ಪ್ರಾಣಿಗಳಿಂದ ಹಾನಿಯುಂಟಾಗುವುದನ್ನು ಲೆಕ್ಕಿಸದೆ ಬೇಸಾಯಗಾರನು ಬೆಳೆಗಳನ್ನು ಬೆಳೆಯುತ್ತಾನೆ;

ತ್ಯಾಗ=ಇತರರ ಒಳಿತಿಗಾಗಿ ತನ್ನದೆಲ್ಲವನ್ನೂ ನೀಡುವುದು; ತ್ಯಾಗಿ=ಬೇಸಾಯಗಾರನು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ ಸಾಲಸೋಲಗಳಿಗೆ ಗುರಿಯಾಗಿ ನರಳುತ್ತಾನೆ. ತನ್ನ ಶ್ರಮದ ದುಡಿಮೆಯ ಜತೆಗೆ ತನ್ನಲ್ಲಿದ್ದ ಒಡವೆವಸ್ತುಗಳನ್ನು ಕಳೆದುಕೊಂಡು ಜನಸಮುದಾಯಕ್ಕೆ ಅಗತ್ಯವಾದ ಅನ್ನವನ್ನು ಕೊಡುಗೆಯಾಗಿ ನೀಡುತ್ತಾನೆ; ಸೃಷ್ಟಿನಿಯಮ+ಒಳಗೆ+ಅವನೆ; ಸೃಷ್ಟಿ=ಜಗತ್ತು/ಪ್ರಪಂಚ; ನಿಯಮ=ಕಟ್ಟುಕಟ್ಟಲೆ; ಭೋಗಿ=ಒಲವು ನಲಿವು ನೆಮ್ಮದಿಯಿಂದ ಬಾಳುವವನು; ಸೃಷ್ಟಿನಿಯಮದೊಳಗವನೇ ಭೋಗಿ=ನಿಸರ‍್ಗದ ಮಡಿಲಿನಲ್ಲಿ ಬೇಸಾಯವನ್ನು ಮಾಡುತ್ತ, ಸರಳವಾದ ರೀತಿಯಲ್ಲಿಯೇ ಆನಂದವನ್ನು ಪಡೆಯುತ್ತಾನೆ;

ಲೋಕದೊಳ್+ಏನೇ; ಲೋಕ=ಪ್ರಪಂಚ; ಏನೇ=ಯಾವುದೇ ಬಗೆಯ; ಲೋಕದೊಳೇನೇ ನಡೆಯುತಲಿರಲಿ=ಪ್ರಪಂಚದಲ್ಲಿ ಯಾವುದೇ ಬಗೆಯ ಪ್ರಸಂಗಗಳು ನಡೆಯುತ್ತಿದ್ದರೂ, ಅಂದರೆ ನಿಸರ‍್ಗದಲ್ಲಿ ಏರುಪೇರು ಉಂಟಾದರೂ ಇಲ್ಲವೇ ಮಾನವಸಮುದಾಯದ ಜೀವನದಲ್ಲಿ ಒಳಿತು ಕೆಡುಕು ಉಂಟಾದರೂ; ತನ್ನೀ=ತನ್ನ+ಈ; ಕಾರ್ಯವ=ಕೆಲಸವನ್ನು; ಬಿಡನ್+ಎಂದೂ; ಎಂದೂ=ಯಾವಾಗಲೂ; ತನ್ನೀ ಕಾರ್ಯವ ಬಿಡನೆಂದು=ಯಾವೊಂದು ದಿನವೂ ಬೇಸಾಯದ ಕೆಲಸಗಳನ್ನು ನಿಲ್ಲಿಸುವುದಿಲ್ಲ. ಒಂದಲ್ಲ ಒಂದು ಬಗೆಯ ಕೆಲಸ ಹೊಲಗದ್ದೆತೋಟಗಳಲ್ಲಿ ನಡೆಯುತ್ತಲೇ ಇರುತ್ತದೆ;

ರಾಜ್ಯಗಳ್+ಉದಿಸಲಿ; ರಾಜ್ಯ=ರಾಜನೊಬ್ಬನ ಆಳ್ವಿಕೆಗೆ ಒಳಪಟ್ಟ ನಾಡು; ಉದಿಸು=ಹುಟ್ಟುವುದು; ರಾಜ್ಯಗಳ್+ಅಳಿಯಲಿ; ಅಳಿ=ನಾಶವಾಗುವುದು; ಹಾರು=ಇಲ್ಲವಾಗು; ಗದ್ದುಗೆ=ಸಿಂಹಾಸನ; ಮಕುಟ=ಕಿರೀಟ; ಮುತ್ತಿಗೆ=ಆಕ್ರಮಣ; ಸೈನಿಕರ್+ಎಲ್ಲ; ಸೈನಿಕ=ರಾಜನನ್ನು ಮತ್ತು ರಾಜ್ಯವನ್ನು ಕಾಪಾಡುವ ಹೊಣೆಯನ್ನು ಹೊತ್ತವನು;ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮಕುಟಗಳು=ಹೊಸ ರಾಜ್ಯಗಳು ಹುಟ್ಟಲಿ ಇಲ್ಲವೇ ಇರುವ ರಾಜ್ಯಗಳು ನಾಶಗೊಳ್ಳಲಿ; ರಾಜನು ಸಿಂಹಾಸನದಿಂದ ಹೊರಬಿದ್ದು, ಕಿರೀಟ ಕಳಚಿಬಿದ್ದರೂ ಅಂದರೆ ರಾಜನು ಆಡಳಿತವನ್ನು ಮಾಡುವ ಹಕ್ಕನ್ನು ಕಳೆದುಕೊಂಡರೂ;

ಬಿತ್ತು+ಉಳುವುದನು+ಅವ; ಬಿತ್ತು=ಬೀಜವನ್ನು ಹಾಕು/ಪಯಿರನ್ನು ನೆಡು; ಅವ=ಅವನು; ಬಿಡುವುದೆ ಇಲ್ಲ=ಬೇಸಾಯದ ಕೆಲಸಗಳನ್ನು ಮಾಡದೆ ಇರುವುದಿಲ್ಲ. ಬಿತ್ತುಳುವುದನವ ಬಿಡುವುದೆ ಇಲ್ಲ=ನಾನಾ ರೀತಿಯ ದುಡಿಮೆಯನ್ನು ವರುಶದ ಉದ್ದಕ್ಕೂ ಮಾಡುತ್ತಲೇ ಇರುವ ನೇಗಿಲಯೋಗಿಯು ದುಡಿಮೆಯನ್ನು ಮಾಡದೇ ಇರಲು ಆಗುವುದೇ ಇಲ್ಲ. ಏಕೆಂದರೆ ಬೇಸಾಯವು ಹೊಲಗದ್ದೆತೋಟಗಳ ಮಣ್ಣಿನ ಗುಣ, ಉರಿಯುವ ಸೂರ‍್ಯ; ಸುರಿಯುವ ಮಳೆ; ಬೀಸುವ ಗಾಳಿಯಿಂದ ಕೂಡಿದ ನಿಸರ‍್ಗದ ವಾತಾವರಣವನ್ನು ಅವಲಂಬಿಸಿದೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲಗಳಲ್ಲಿ ಮಾಡಬೇಕಾದ ಬೇಸಾಯದ ಕೆಲಸಗಳನ್ನು ಕಾಲಕ್ಕೆ ತಕ್ಕಂತೆ ಮಾಡದಿದ್ದರೆ ಒಡ್ಡಿದ ಬೆಳೆ ಹಾಳಾಗುತ್ತದೆ. ಹದ ನೋಡಿ ಆರಂಬ ಮಾಡಿದಿದ್ದರೆ ನೆಟ್ಟ ಬೀಜ ಮೊಳಕೆಯೊಡೆಯುವುದಿಲ್ಲ. ಸಸಿ ಬೆಳೆಯುವುದಿಲ್ಲ. ಬೆಳೆದ ಪಯಿರು ತೆನೆ ಕಚ್ಚುವುದಿಲ್ಲ. ಬೆಳೆಯು ಹತ್ತಾರು ಬಗೆಯ ರೋಗರುಜಿನಗಳಿಗೆ ಒಳಗಾಗಿ ಬೆಳೆಯು ನೆಲಕಚ್ಚುತ್ತದೆ;

ನಮ್ಮ+ಈ; ನಾಗರಿಕತೆ=ನಗರಗಳಲ್ಲಿ ನೆಲೆಸಿರುವ ವ್ಯಕ್ತಿಗಳ ಉಡುಗೆ ತೊಡುಗೆ ಮತ್ತು ಆಚಾರ ವಿಚಾರಗಳಲ್ಲಿ ಕಂಡುಬರುವ ಹೊಸತನ; ಸಿರಿ=ಸಂಪತ್ತು; ಮಣ್ಣ್+ಉಣಿ; ಉಣ್=ತಿನ್ನು; ಮಣ್ಣುಣಿ=ಮಣ್ಣಿನೊಡನೆ ಬೆರೆತಿರುವ; ನೇಗಿಲಿನ+ಆಶ್ರಯದಿ; ಆಶ್ರಯ=ಆಸರೆ/ನೆರವು;

ಬಾಳಿತು ನಮ್ಮೀ ನಾಗರಿಕತೆ ಸಿರಿ ಮಣ್ಣುಣಿ ನೇಗಿಲಿನಾಶ್ರಯದಿ=ಜನಸಮುದಾಯದ ಸಿರಿಸಂಪದಗಳಿಗೆ, ಕಲೆ, ಸಂಗೀತ, ಸಾಹಿತ್ಯದಿಂದ ಕೂಡಿದ ನಾಗರಿಕತೆಯ ಬೆಳವಣಿಗೆಗೆ ಮತ್ತು ಎಲ್ಲ ಬಗೆಯ ಚಟುವಟಿಕೆಗಳಿಗೆ ನೇಗಿಲ ದುಡಿಮೆಯೇ ಮೂಲ ಆಸರೆಯಾಗಿದೆ; ಕೈ+ಆಧಾರದಿ; ಆಧಾರ=ಅವಲಂಬನ/ಸಹಾಯ; ನೇಗಿಲ ಹಿಡಿದಾ ಕೈಗಳು=ಹೊಲಗದ್ದೆತೋಟಗಳಲ್ಲಿ ದುಡಿಯುತ್ತಿರುವ ಬೇಸಾಯಗಾರರು;

ದರ್ಪದೊಳ್+ಆಳಿದರು; ದರ್ಪ=ಸೊಕ್ಕು/ಗತ್ತು; ಆಳಿದರು=ಆಳ್ವಿಕೆಯನ್ನು ನಡೆಸಿದರು; ಬಲ=ಶಕ್ತಿ; ವೀರ=ಕಲಿ; ಮೆರೆ=ಒಪ್ಪು/ಬೀಗು; ವೀರರು ಮೆರೆದರು=ವೀರರು ತಮ್ಮ ಪರಾಕ್ರಮವನ್ನು ತೋರಿಸಿದರು; ಶಿಲ್ಪಿಗಳ್+ಎಸೆದರು; ಶಿಲ್ಪಿ=ಶಿಲೆಯನ್ನು ಉಳಿಯಿಂದ ಕೆತ್ತಿ ವಿಗ್ರಹವನ್ನು ಕಡೆಯುವವನು; ಎಸೆ=ಕಂಗೊಳಿಸು; ಶಿಲ್ಪಿಗಳೆಸೆದರು=ಶಿಲ್ಪಿಗಳು ಕೀರ‍್ತಿವಂತರಾದರು; ಕವಿ=ಕಾವ್ಯವನ್ನು ರಚಿಸುವವನು; ಬೇಸಾಯಗಾರರ ದುಡಿಮೆಯ ಉತ್ಪನ್ನದಿಂದಲೇ ದೊರೆಗಳು ದರ‍್ಪದಿಂದ ಆಳುತ್ತಿದ್ದಾರೆ; ವೀರರು ಪರಾಕ್ರಮದಿಂದ ಮೆರೆಯುತ್ತಿದ್ದಾರೆ; ಶಿಲ್ಪಿಗಳು ಶಿಲೆಯಲ್ಲಿ ಕಲೆಯ ಸೊಬಗನ್ನು ಮೂಡಿಸುತ್ತಿದ್ದಾರೆ; ಕವಿಗಳ ಕಾವ್ಯರಚನೆಯಿಂದ ಅಮರರಾಗಿದ್ದಾರೆ;

ಅರಿ=ತಿಳಿ; ಯಾರೂ ಅರಿಯದ=ಯಾರೊಬ್ಬರಿಗೂ ಗೊತ್ತಿಲ್ಲದ; ಅನ್ನವನ್+ಈಯುವನು; ಈಯು=ಕೊಡು; ಯಾರೂ ಅರಿಯದ ನೇಗಿಲ ಯೋಗಿಯೇ ಲೋಕಕೆ ಅನ್ನವನೀಯುವನು=ಜನರಿಗೆ ತಾವು ಉಣ್ಣುತ್ತಿರುವ ಆಹಾರದ ಬೆಳೆಗಳನ್ನು ಬೆಳೆಯುತ್ತಿರುವ ಮತ್ತು ತಾವು ಕುಡಿಯುವ ಹಾಲನ್ನು ನೀಡುವ ಎಮ್ಮೆ ಹಸುಗಳನ್ನು ಸಾಕಿ ಸಲಹುತ್ತಿರುವ ವ್ಯಕ್ತಿಗಳು ಯಾರು ಮತ್ತು ಅವರ ಹೆಸರೇನು ಎಂಬುದು ಗೊತ್ತಿರುವುದಿಲ್ಲ. ಏಕೆಂದರೆ ಬೇಸಾಯಗಾರನ ಹೆಗಲಿಗೆ ಹೆಗಲು ಕೊಟ್ಟು, ಅವನ ಜತೆಜತೆಯಲ್ಲಿಯೇ ಕೂಲಿಯವರು, ಜೀತದಾಳುಗಳು ಮತ್ತು ಹೆಂಗಸರು ಮಕ್ಕಳು ಹೊಲಗದ್ದೆತೋಟಗಳಲ್ಲಿ ತಮ್ಮ ಬೆವರನ್ನು ಬಸಿದು ಹಗಲಿರುಳು ಗೆಯ್ಯುತ್ತಿದ್ದಾರೆ. ಇಂತಹ ಕೋಟಿಗಟ್ಟಲೆ ಶ್ರಮಜೀವಿಗಳ ನಿರಂತರವಾದ ದುಡಿಮೆಯಿಂದಲೇ ಜನಸಮುದಾಯಕ್ಕೆ ಸದಾಕಾಲ ಅನ್ನ ದೊರೆಯುತ್ತಿದೆ;

ಹೆಸರನು ಬಯಸದೆ=ತನ್ನನ್ನು ಇತರರು ಹೊಗಳಬೇಕೆಂದು ಆಸೆಪಡದೆ; ಅತಿಸುಖಕೆ+ಎಳಸದೆ; ಅತಿಸುಖ=ಹೆಚ್ಚಿನ ಆನಂದ; ಎಳಸು=ಇಚ್ಚಿಸು; ಅತಿಸುಖಕೆಳಸದೆ=ಜೀವನದಲ್ಲಿ ಹೆಚ್ಚಿನ ಸವಲತ್ತುಗಳನ್ನು ಪಡೆದು, ಆನಂದ ತುತ್ತತುದಿಯಲ್ಲಿ ಓಲಾಡಬೇಕೆಂದು ಹಂಬಲಿಸದೆ; ಗೌರವಕೆ+ಆಶಿಸದೆ; ಗೌರವ=ಮನ್ನಣೆ/ಹಿರಿಮೆ; ಆಶಿಸು=ಬಯಸು;ಗೌರವಕಾಶಿಸದೆ=ಬಿರುದಾವಳಿಗಳನ್ನು ಪಡೆದು ಜನಮನ್ನಣೆಯನ್ನು ಹೊಂದಿ ದೊಡ್ಡ ಹೆಸರನ್ನು ಗಳಿಸಿ ಮೆರೆಯಬೇಕೆಂದು ಆಸೆಪಡದೆ;

ನೇಗಿಲ+ಕುಳ+ಒಳಗೆ+ಅಡಗಿದೆ; ಕುಳ=ನೇಗಿಲಿನ ಬುಡದಲ್ಲಿರುವ ಮರದ ತುಂಡಿಗೆ ಜೋಡಿಸಿರುವ ಕಬ್ಬಿಣದ ಪಟ್ಟಿ. ಇದರಿಂದ ಬೂಮಿಯ ಮಣ್ಣನ್ನು ಸೀಳಿ ಮಿದುಮಾಡಿ ಹದಗೊಳಿಸಲು ಆಗುತ್ತದೆ; ಅಡಗು=ಸೇರಿಕೆ/ಜೋಡಣೆ; ಧರ್ಮ=ವ್ಯಕ್ತಿಯು ತಾನು ಆಡುವ ಮಾತು ಮತ್ತು ಮಾಡುವ ದುಡಿಮೆಯಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು;

ನೇಗಿಲಕುಳದೊಳಗಡಗಿದೆ ಕರ್ಮ=ಲೋಕದಲ್ಲಿ ನಡೆಯುವ ಮಾನವನ ಎಲ್ಲ ಬಗೆಯ ಚಟುವಟಿಕೆಗಳಿಗೂ ನೇಗಿಲಯೋಗಿಯ ದುಡಿಮೆಯಿಂದ ಬೆಳೆಯುವ ಬೆಳೆಗಳೇ ಜೀವಶಕ್ತಿಯಾಗಿವೆ;

ನೇಗಿಲ ಮೇಲೆಯೆ ನಿಂತಿದೆ ಧರ್ಮ=ಮಾನವ ಸಮುದಾಯದ ಹೊಟ್ಟೆಯ ಹಸಿವನ್ನು ತಣಿಸಿ, ಜನರು ಒಲವು ನಲಿವು ನೆಮ್ಮದಿಯಿಂದ ಬಾಳುವುದಕ್ಕೆ ನೇಗಿಲ ದುಡಿಮೆಯೇ ತಳಹದಿಯಾಗಿದೆ. ಕೋಟಿಗಟ್ಟಲೆ ಬೇಸಾಯಗಾರರ ದುಡಿಮೆಯಿಂದ ರೂಪುಗೊಂಡಿರುವ “ನೇಗಿಲ ದರ‍್ಮ” ಜಗತ್ತಿನ ಜನಸಮುದಾಯದಲ್ಲಿ ಜಾತಿ ಮತ ಲಿಂಗ ಪ್ರಾಂತ್ಯವೆಂಬ ತಾರತಮ್ಯವನ್ನು ಮಾಡದೆ ಎಲ್ಲರಿಗೂ ಅನ್ನವನ್ನು ನೀಡುತ್ತಿದೆ.

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: