ಕೂದಲಿನ ಸಂರಕ್ಶಣೆಗೆ ಸೀಗೆಬಳ್ಳಿ

– ಶ್ಯಾಮಲಶ್ರೀ.ಕೆ.ಎಸ್.

ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ವಿವಿದ ಬಗೆಯ ಶಾಂಪೂಗಳು ಲಬ್ಯವಿದ್ದು, ಅವುಗಳ ಮೊರೆ ಹೋಗುವುದರತ್ತ ಜನರ ಒಲವು ಹೆಚ್ಚಾಗುತ್ತಿದೆ. ಈ ಶಾಂಪೂಗಳು ನೈಸರ‍್ಗಿಕ ಉಡುಗೊರೆಯಾಗಿರುವ ಸೀಗೆಕಾಯಿಯನ್ನು ಮರೆಸಿಬಿಟ್ಟಿವೆ. ವೈಜ್ನಾನಿಕವಾಗಿ ’ಅಕೇಸಿಯ ಕಾನ್ಸಿನ್ನ (Acacia Concinna)’ ಎಂದು ಕರೆಯಲ್ಪಡುವ ಸೀಗೆಯು ಒಂದು ಮರಬಳ್ಳಿಯಾಗಿದ್ದು, ಹೆಚ್ಚಾಗಿ ಕಾಡುಗಳಲ್ಲಿ, ಹಳ್ಳಿಗಳಲ್ಲಿ ಕಂಡು ಬರುತ್ತವೆ.

ಪ್ರಾಚೀನ ಕಾಲದಿಂದಲೂ ಕೂದಲಿನ ಸಂರಕ್ಶಣೆಗಾಗಿ ಸೀಗೆಕಾಯಿ ಬಳಕೆಯಲ್ಲಿದೆ. ಕಾಡುಗಳಲ್ಲಿ ಯತೇಚ್ಚವಾಗಿ ಇವು ಕಂಡು ಬರುತ್ತವೆ. ಹಳ್ಳಿಗಳಲ್ಲಿ, ಬೇಲಿಗಳ ಸುತ್ತ ಇದನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಸೀಗೆಯು ಬಳ್ಳಿಯ ಹಾಗೆ ಇದ್ದು, ಅದರ ಬಳ್ಳಿಗಳು ಅಕ್ಕ ಪಕ್ಕದ ಮರ ಗಿಡಗಳನ್ನು ಆಶ್ರಯಿಸಿರುತ್ತವೆ. ಇದರ ಕಾಂಡವು ತಕ್ಕ ಮಟ್ಟಿಗೆ ದಪ್ಪಗಿರುತ್ತದೆ.  ಸೀಗೆಯು ರೆಂಬೆ ಕೊಂಬೆಗಳನ್ನು ಹೊಂದಿರುವುದಿಲ್ಲ, ಬದಲಾಗಿ ಬಳ್ಳಿಗಳನ್ನು ಹೊಂದಿರುತ್ತದೆ. ಈ ಕಾರಣದಿಂದ ಇದನ್ನು ಸೀಗೆಬಳ್ಳಿ ಎಂದು ಕರೆಯಲಾಗುತ್ತದೆ ಹಾಗೂ ಗ್ರಾಮೀಣ ಬಾಗದಲ್ಲಿ ಸೀಗೆಮಳೆ ಎಂದು ಕೂಡ ಕರೆಯಲಾಗುತ್ತದೆ.

ಸೀಗೆಬಳ್ಳಿಯ ಗುಣಲಕ್ಶಣಗಳು ಮತ್ತು ಬಳಕೆ

ಸೀಗೆಬಳ್ಳಿಗಳು ಮುಳ್ಳುಗಳಿಂದ ಕೂಡಿದ್ದು ಪೊದೆಯ ರೀತಿಯಲ್ಲಿ ಹಬ್ಬುತ್ತವೆ. ಸೀಗೆಬಳ್ಳಿಯಲ್ಲಿ ಸೀಗೆಕಾಯಿಗಳು ಗುಂಪು ಗುಂಪಾಗಿ ಬೆಳೆಯುತ್ತವೆ  ಹಾಗೂ ಬಳ್ಳಿಗಳಲ್ಲಿ ನೇತಾಡುತಿರುತ್ತವೆ. ಸೀಗೆಕಾಯಿಯ ತೊಗಟೆ ದಪ್ಪವಾಗಿದ್ದು, ಕಂದು ಬಣ್ಣದಲ್ಲಿರುತ್ತದೆ. ಇದರ ಪಸಲು ವರ‍್ಶಕ್ಕೊಮ್ಮೆ ದೊರೆಯುತ್ತದೆ. ಸೀಗೆಕಾಯಿಯ ಬಳ್ಳಿಯು ಮುಳ್ಳುಗಳಿಂದ ಕೂಡಿರುವುದರಿಂದ ದೋಟಿಯ ಸಹಾಯದಿಂದ ಕೆಡವಿ ಇದನ್ನು ಸಂಗ್ರಹಿಸಲಾಗುತ್ತದೆ. ತದನಂತರ ಇದನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಕೂದಲಿನ ಸಂರಕ್ಶಣೆಗೆ ಬಳಸಲಾಗುತ್ತದೆ. ಸೀಗೆಯ ಹೂಗಳು ನೋಡಲು ಬಿಳಿ ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ. ಇತ್ತೀಚೆಗೆ ಶಾಂಪೂವಿನ ಬಳಕೆ ಹೆಚ್ಛಾಗಿರುವುದರಿಂದ ಹಳ್ಳಿಗಳಲ್ಲಿ ಸೀಗೆಕಾಯಿಯ ಬೆಳೆಸುವುವಿಕೆ ಇಳಿಮುಕವಾಗಿದೆ.

ಸೀಗೆಯಲ್ಲಿ ಮತ್ತೊಂದು ಬಗೆಯ ಸೀಗೆಬಳ್ಳಿಯೂ ಇದ್ದು, ಈ ಬಳ್ಳಿಯನ್ನು ಸೀಗೆಸೊಪ್ಪು ಅತವಾ ಸೀಗೆ ಚಿಗುರಿಗಾಗಿ ಬೆಳೆಸಲಾಗುವುದು. ಇದು ಒಂದು ಬಗೆಯ ಸುವಾಸನೆಯಿಂದ ಕೂಡಿರುತ್ತದೆ ಹಾಗೂ ಎರಡೂ ಬಗೆಯ ಬಳ್ಳಿಗಳ ಎಲೆಗಳು ನೋಡಲು ಒಂದೇ ತರಹ ಇದ್ದು, ಹುಣಸೆ ಮರದ ಎಲೆಯಂತೆ ಕಾಣಸಿಗುತ್ತದೆ. ಸೀಗೆಕಾಯಿಯ ಬಳ್ಳಿಗಿಂತ ಸೀಗೆ ಸೊಪ್ಪಿನ ಬಳ್ಳಿಯು ನೋಡಲು ಚಿಕ್ಕದಾಗಿರುತ್ತದೆ. ಈ ವಾಸನೆಬರಿತ ಸೀಗೆಸೊಪ್ಪು ಆಯುರ‍್ವೇದೀಯ  ಗುಣಗಳನ್ನು ಕೂಡ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸೊಪ್ಪನ್ನು ಬಳಸಿ ಸಾಂಬಾರು ಮಾಡಲಾಗುವುದು. ಸೀಗೆಯು ತಿನ್ನಲೂ ತುಂಬಾ ರುಚಿಕರ ಹಾಗೂ ರಕ್ತ ಶುದ್ದಿ ಮಾಡುವಲ್ಲಿ ಬಹಳ ಮುಕ್ಯ ಪಾತ್ರವಹಿಸುತ್ತದೆ. ಸೀಗೆ ಸೊಪ್ಪು ಹೆಚ್ಚಾಗಿ ಕಾಡುಗಳಲ್ಲಿ ಕಂಡುಬರುತ್ತದೆ ಹಾಗೂ ಇದನ್ನು ಒಂದು ಔಶದೀಯ ಸಸ್ಯವೆಂದು ಹೇಳಲಾಗುವುದು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications