ಮನೆಯಲ್ಲೇ ಮಾಡಿ ಐಸಿಂಗ್ ಚಾಕೊಲೇಟ್ ಕೇಕ್

– ಸವಿತಾ.

chocolate icing cake, ಚಾಕಲೋಟ್ ಐಸಿಂಕ್ ಕೇಕ್

ಕೇಕ್ ಮಾಡಲು ಬೇಕಾಗುವ ಸಾಮಾನುಗಳು

 • ಗೋದಿ ಅತವಾ ಮೈದಾ ಹಿಟ್ಟು -1 ಬಟ್ಟಲು
 • ಬೆಲ್ಲದ ಪುಡಿ ಅತವಾ ಸಕ್ಕರೆ – 3/4 ಬಟ್ಟಲು
 • ಹಾಲು – 1 ಬಟ್ಟಲು
 • ಎಣ್ಣೆ ಅತವಾ ಬೆಣ್ಣೆ – 1/2 ಬಟ್ಟಲು
 • ಬೇಕಿಂಗ್ ಪೌಡರ್ – 1 ಚಮಚ
 • ಅಡುಗೆ ಸೋಡಾ – 1/2 ಚಮಚ
 • ಚಕ್ಕೆ – 1/4 ಇಂಚು
 • ಬಾದಾಮಿ – 4
 • ಗೋಡಂಬಿ – 4
 • ಏಲಕ್ಕಿ – 2
 • ಎಸ್ಸೆನ್ಸ್ – 2 ಹನಿ

ಚಾಕೋಲೇಟ್ ಐಸಿಂಗ್ ಮಾಡಲು ಬೇಕಾಗುವ ಸಾಮಾನುಗಳು

 • ಹಾಲು – 1/2 ಬಟ್ಟಲು
 • ಬೆಣ್ಣೆ – 1/2 ಚಮಚ
 • ಕೆನೆ – 1/4 ಬಟ್ಟಲು
 • ಕೋಕೋ ಪುಡಿ – 2 ಬಟ್ಟಲು
 • ನೀರು – 2 ಚಮಚ
 • ಸಕ್ಕರೆ – 2 ಚಮಚ

ಕೇಕ್ ಮಾಡುವ ಬಗೆ

ಗೋದಿ ಹಿಟ್ಟನ್ನು ಜರಡಿ ಹಿಡಿದು ಒಂದು ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಒಂದು ಬಟ್ಟಲು ಹಾಲಿಗೆ ಬೆಲ್ಲದ ಪುಡಿ ಇಲ್ಲವೇ ಸಕ್ಕರೆ ಹಾಕಿ ಕರಗಿಸಿ ಇಟ್ಟುಕೊಳ್ಳಿ. ಎಣ್ಣೆ ಹಾಕಿ ಚೆನ್ನಾಗಿ ತಿರುವಿದ ನಂತರ ಬಾದಾಮಿ ಮತ್ತು ಗೋಡಂಬಿಯನ್ನು ಸ್ವಲ್ಪ ಸಣ್ಣಗೆ ಕುಟ್ಟಿ ಹಾಕಿ. ಚಕ್ಕೆ ಮತ್ತು ಏಲಕ್ಕಿ ಪುಡಿ ಮಾಡಿ ಹಾಕಿ, ಏಲಕ್ಕಿ ಬದಲು ಎಸ್ಸೆನ್ಸ್ ಹಾಕಬಹುದು. ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಗೋದಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ತಿರುಗಿಸಿ ಇಟ್ಟುಕೊಳ್ಳಿ. ಒಲೆ ಹಚ್ಚಿ ಕುಕ್ಕರ್ ನಲ್ಲಿ ತಳಕ್ಕೆ ಒಂದೂವರೆ ಲೋಟದಶ್ಟು ನೀರು ಹಾಕಿ, ಒಂದು ಸ್ಟೀಲ್ ಸ್ಟ್ಯಾಂಡ್ ಅತವಾ ಒಂದು ಇಂಚು ಎತ್ತರದ ತಟ್ಟೆ ಉಲ್ಟಾ ಮಾಡಿ ಇಟ್ಟುಕೊಳ್ಳಿ.

ವಿಶಲ್ ಮತ್ತು ರಬ್ಬರ್ ತೆಗೆದು ಹಾಗೇ ಮುಚ್ಚಿ ಬಿಸಿ ಮಾಡಬೇಕು. ಮೊದಲ ಹತ್ತು ನಿಮಿಶ ಜೋರು ಉರಿಯಲ್ಲಿ ಬಿಸಿ ಮಾಡಿ. ಒಂದು ಸಣ್ಣ ಪಾತ್ರೆ ಅತವಾ ಅಗಲವಾದ ಡಬ್ಬಿಗೆ ಎಣ್ಣೆ ಹಚ್ಚಿ, ಸ್ವಲ್ಪ ಮೈದಾ ಹಿಟ್ಟು ಸಿಂಪಡಿಸಿ. ನಂತರ ಕಲಸಿದ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ಕಲಸಿ ನಂತರ ಪಾತ್ರೆಗೆ ಸುರಿದು ಸೆಟ್ ಮಾಡಿ. ಒಲೆ ಉರಿ ಮದ್ಯಮ ಇಟ್ಟು ಕುಕ್ಕರ್ ನಲ್ಲಿ ಹಿಟ್ಟು ಸುರಿದ ಪಾತ್ರೆ ಇಟ್ಟು 45 ರಿಂದ 50 ನಿಮಿಶದವರೆಗೆ ಬೇಯಿಸಿ ತೆಗೆಯಿರಿ. ಸಣ್ಣ ಉರಿಯಲ್ಲಿ ಬೇಯಿಸಿದರೆ ಒಂದು ತಾಸು ಹದಿನೈದು ನಿಮಿಶ ಆಗುತ್ತದೆ. ಚಾಕುವಿನಿಂದ ಚುಚ್ಚಿ ನೋಡಿ, ಅಂಟಿಕೊಳ್ಳದೇ ಒಣಗೆ ಬಂದರೇ ಬೆಂದಿದೆ ಅಂತ ತಿಳಿದು ಒಲೆ ಆರಿಸಿ. ಅರ‍್ದ ಗಂಟೆ ಬಿಟ್ಟು ತೆಗೆಯಿರಿ, ಈಗ ಕೇಕ್ ಆಗಿರುತ್ತದೆ.

ಚಾಕೋಲೇಟ್ ಐಸಿಂಗ್ ಮಾಡುವ ಬಗೆ

ಕೋಕೋ ಪುಡಿ ಮತ್ತು ಹಾಲಿನ ಕೆನೆಯನ್ನು ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಿ. ತವೆ ಬಿಸಿ ಮಾಡಿ ಅದರ ಮೇಲೆ ಒಂದು ಪಾತ್ರೆ ಇಟ್ಟು ನೀರು ಹಾಕಿ ಬಿಸಿ ಮಾಡಿ. ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ತಿರುಗಿಸಿ ಬೆಣ್ಣೆ ಸೇರಿಸಿ. ಬೆಣ್ಣೆ ಕರಗಿ ನೀರಾಗಿ ಕೋಕೋ ಪುಡಿ ಸ್ವಲ್ಪ ಗಟ್ಟಿ ಆಗುತ್ತಿದ್ದಂತೆ ಒಲೆ ಆರಿಸಿ. ಸಕ್ಕರೆ ಹಾಕಿ ತಿರುಗಿಸಿ, ಬಿಸಿಗೆ ಕರಗಿ ಎಲ್ಲ ಹೊಂದಿಕೊಂಡು ಕ್ರೀಮ್ ತರಹ ಆಗಬೇಕು.

ತಯಾರಿಸಿಟ್ಟಿರುವ ಕೇಕ್ ಅನ್ನು ನಡುವೆ ಅಡ್ಡ ಕತ್ತರಿಸಿ, ಎರಡು ಬಾಗ ಮಾಡಿ. ಒಂದು ಬಾಗಕ್ಕೆ ಚಾಕೋಲೇಟ್ ಐಸಿಂಗ್ ಅನ್ನು ಚಾಕುವಿನಿಂದ ಅಗಲವಾಗಿ ಹರಡಿ, ಇನ್ನೊಂದು ಅರ‍್ದ ಕತ್ತರಿಸಿಟ್ಟ ದುಂಡು ಕೇಕ್ ಮೇಲೆ ಹಾಕಿ. ಈಗ ಕೇಕ್ ವಿತ್ ಚಾಕೋಲೇಟ್ ಐಸಿಂಗ್ ಸವಿಯಲು ಸಿದ್ದ. ನಿಮಗೆ ಬೇಕಾದ ಹಾಗೆ ಅಲಂಕಾರ ಮಾಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: