ಕುವೆಂಪು ಕವನಗಳ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಕವಿ

ವಸಂತವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ
ವನದೇಕಾಂತದಿ ಪೆಣ್ ನವಿಲೆಡೆಯಲಿ
ಮಯೂರ ನೃತ್ತೋನ್ಮತ್ತ ವಿಲಾಸಕೆ
ರಾಜನ ಕತ್ತಿಯ ಗಣನೆಯೆ ಇಲ್ಲ
ನಿದಾಘವ್ಯೋಮದಿ ಮೆಲ್ಲಗೆ ಮೆಲ್ಲಗೆ
ತನ್ನೊಂದಿಚ್ಛೆಗೆ ತೇಲುವ ಮೇಘದ
ಆಲಸ್ಯಕೆ ಅರಸನ ಅಳುಕಿಲ್ಲ
ಗಾಳಿಯ ಮುತ್ತಿಗೆ ಮೈ ಜುಮ್ಮೆನ್ನಲು
ತೆರೆತೆರೆತೆರೆಯಹ ತಿಳಿಗೊಳದೆದೆಯಲಿ
ಮಿನುಮಿನು ಮಿಂಚುವ ನುಣ್ ಬೆಳುದಿಂಗಳ
ಲೀಲೆಗೆ ದೊರೆ ಮೆಚ್ಚುಗೆ ಬೇಕಿಲ್ಲ
ಸಿಡಿಲನು ಸಿಡಿಯುತೆ ಮೊಳಗುತೆ ನುಗ್ಗುವ
ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ
ಕೆಂಗಿಡಿ ಬಣ್ಣದ ಹೊಂಗೆರೆ ಮಿಂಚಿಗೆ
ಆಸ್ಥಾನದ ದಾಸ್ಯದ ಹುರುಪಿಲ್ಲ
ಕತ್ತಲೆ ಮುತ್ತಿದ ಬಾನಲಿ ಮಿಣುಕುವ
ತಾರೆಗೆ ದೊರೆಯಾಣತಿ ತೃಣವಿಲ್ಲ
ವಿಪ್ಲವ ಮೂರ್ತಿಯ ಸಖನಾಗಿಹನೈ
ಕವಿಗರಸುಗಿರಸುಗಳ ಋಣವಿಲ್ಲ
ಅವನಗ್ನಿಮುಖಿ
ಪ್ರಳಯಶಿಖಿ.

ನಾಡನ್ನು ಆಳುವ ರಾಜನ ಮುಂದೆ ಕವಿಯ ವ್ಯಕ್ತಿತ್ವ ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ಈ ಕವನದಲ್ಲಿ ಹೇಳಲಾಗಿದೆ.

( ವಸಂತ=ಮಾರ‍್ಚಿ ತಿಂಗಳಿನಿಂದ ಮೇ ತಿಂಗಳವರೆಗಿನ ಸಮಯ. ವಸಂತಕಾಲದಲ್ಲಿ ಹಣ್ಣೆಲೆಗಳು ಉದುರಿ ಚಿಗುರೆಲೆಗಳು ಸೊಂಪಾಗಿ ಬೆಳೆದು ಮರಗಿಡಗಳು ಕಂಗೊಳಿಸುತ್ತಿರುತ್ತವೆ; ವನ=ಕಾಡು/ಉದ್ಯಾನ; ವಸಂತವನ=ಹಚ್ಚಹಸಿರಾದ ಮರಗಿಡಬಳ್ಳಿಗಳಿಂದ ತುಂಬಿರುವ ವನ; ಕೂಗು=ದನಿ ಮಾಡು; ಕೋಗಿಲೆ=ಕಪ್ಪನೆಯ ಬಣ್ಣದ ಒಂದು ಹಕ್ಕಿ. ಇದರ ಕೊರಳಿನಿಂದ ಹೊರಹೊಮ್ಮುವ ಇಂಪಾದ ದನಿಯನ್ನು ಕೇಳಿದ ಜನರು “ ಕೋಗಿಲೆಯು ಹಾಡುತ್ತಿದೆ ‘ ಎಂದು ತಿಳಿದು ಆನಂದಪಡುತ್ತಾರೆ; ರಾಜ=ದೊರೆ; ಬಿರುದು=ಮೆಚ್ಚುಗೆಯ ಸೂಚಕವಾಗಿ ಕೊಡುವ ಪ್ರಶಸ್ತಿ; ಬಯಸು=ಹಂಬಲಿಸು;

ವಸಂತವನದಲಿ ಕೂಗುವ ಕೋಗಿಲೆ ರಾಜನ ಬಿರುದನು ಬಯಸುವುದಿಲ್ಲ=ಕೋಗಿಲೆಯು ತನ್ನ ಪಾಡಿಗೆ ತಾನು ತನ್ನ ಆನಂದಕ್ಕಾಗಿ ದನಿ ಮಾಡುತ್ತದೆಯೇ ಹೊರತು ರಾಜನು ಕೇಳಿ ಮೆಚ್ಚಿಕೊಂಡು ಬಿರುದನ್ನು ದಯಪಾಲಿಸಲೆಂದು ಹಂಬಲಿಸುವುದಿಲ್ಲ;

ಜೇನ್+ಪುಳು=ಜೇನುಂಬುಳು; ಜೇನು=ಸಿಹಿಯಾದ ಮಕರಂದ; ಪುಳು=ಹುಳು; ಜೇನುಹುಳು=ಹೂಗಳ ಮಕರಂದವನ್ನು ಹೀರಿಕೊಂಡು ಬಂದು ಸಿಹಿಯಾದ ಜೇನನ್ನು ತಯಾರುಮಾಡುವ ಹುಳು; ಮೊರೆ=ಜೇಂಕರಿಸು/ಗುಯ್ ಎಂದು ದನಿ ಮಾಡುವುದು; ಭಯ+ಇಂದ+ಅಲ್ಲ; ಭಯ=ಹೆದರಿಕೆ;

ಹೂವಿನ ಮರದಲಿ ಜೇನುಂಬುಳುಗಳು ಮೊರೆವುದು ರಾಜನ ಭಯದಿಂದಲ್ಲ=ಹೂವುಗಳ ಮಕರಂದವನ್ನು ಹೀರಿಕೊಂಡು ಬಂದು ಸಿಹಿಯಾದ ಜೇನನ್ನು ತಯಾರುಮಾಡುವಾಗ ಕೇಳಿಬರುವ ಜೇಂಕಾರದ ದನಿಯು ಜೀನುಹುಳಗಳ ಕೆಲಸದ ದನಿಯೇ ಹೊರತು, ರಾಜನಿಂದ ಎಲ್ಲಿ ಕೇಡಾಗುವುದೋ ಎಂಬ ಹೆದರಿಕೆಯಿಂದ ಅರಚುತ್ತಿರುವ ದನಿಯಲ್ಲ;

ವನದ+ಏಕಾಂತದಿ; ವನ=ಕಾಡು; ಏಕಾಂತ=ಜನ, ಪ್ರಾಣಿ, ಹಕ್ಕಿಗಳ ಗುಂಪಿಲ್ಲದ ಜಾಗ; ಪೆಣ್=ಹೆಣ್ಣು; ನವಿಲ್+ಎಡೆಯಲಿ; ನವಿಲು=ಒಂದು ಬಗೆಯ ಹಕ್ಕಿ; ಎಡೆ=ಬಳಿ/ಹತ್ತಿರ; ಮಯೂರ=ನವಿಲು; ನೃತ್ತೋನ್ಮತ್ತ=ನೃತ್ತ+ಉನ್ಮತ್ತ; ನೃತ್ತ=ಕುಣಿತ; ಉನ್ನತ್ತ=ಆವೇಶಗೊಂಡು; ವಿಲಾಸ=ಉಲ್ಲಾಸ/ಕ್ರೀಡೆ; ಕತ್ತಿ=ಹರಿತವಾದ ಹತಾರ; ಗಣನೆ=ಲೆಕ್ಕ;

ವನದೇಕಾಂತದಿ ಪೆಣ್ ನವಿಲೆಡೆಯಲಿ ಮಯೂರ ನೃತ್ತೋನ್ಮತ್ತ ವಿಲಾಸಕೆ ರಾಜನ ಕತ್ತಿಯ ಗಣನೆಯೆ ಇಲ್ಲ=ಕಾಡಿನ ನಿಸರ‍್ಗದ ಮಡಿಲಿನಲ್ಲಿ ಹೆಣ್ಣು ನವಿಲಿನ ಜತೆಗೂಡಿ ಒಲವು ನಲಿವಿನ ತುಡಿತಗಳಿಂದ ಕೂಡಿ ನರ‍್ತಿಸುತ್ತಿರುವ ಗಂಡು ನವಿಲಿಗೆ ರಾಜನ ಕತ್ತಿಯ ಅಂಕೆಯಿಲ್ಲ;

ನಿದಾಘ+ವ್ಯೋಮದಿ; ನಿದಾಘ=ಬೇಸಿಗೆಯ ಕಾಲ; ವ್ಯೋಮ=ಆಕಾಶ; ಮೆಲ್ಲಗೆ=ಮಂದಗತಿಯಲ್ಲಿ ಸಾಗುವುದು; ತನ್ನ+ಒಂದು+ಇಚ್ಛೆಗೆ; ಇಚ್ಛೆ=ಬಯಕೆ; ತೇಲು=ಗಾಳಿಯಲ್ಲಿ ಹಾರುವುದು; ಮೇಘ=ಮೋಡ; ಆಲಸ್ಯ=ಜಡತ್ವ/ಸೋಂಬೇರಿತನ; ಅರಸ=ರಾಜ; ಅಳುಕು+ಇಲ್ಲ; ಅಳುಕು=ಹೆದರಿಕೆ;

ನಿದಾಘವ್ಯೋಮದಿ ಮೆಲ್ಲಗೆ ಮೆಲ್ಲಗೆ ತನ್ನೊಂದಿಚ್ಛೆಗೆ ತೇಲುವ ಮೇಘದ ಆಲಸ್ಯಕೆ ಅರಸನ ಅಳುಕಿಲ್ಲ=ಬೇಸಿಗೆಯ ಮುಗಿಲಲ್ಲಿ ತನ್ನ ಪಾಡಿಗೆ ತಾನು ತೇಲುತ್ತ ಮಂದಗತಿಯಲ್ಲಿ ಸಾಗುತ್ತಿರುವ ಮೋಡಕ್ಕೆ ಅರಸನು ತನಗೆ ಏನು ಮಾಡುವನೋ ಎಂಬ ಚಿಂತೆಯಿಲ್ಲ;

ಮುತ್ತು=ಚುಂಬನ; ಜುಮ್ಮ್+ಎನ್ನಲು; ಜುಮ್ಮ್=ಮಯ್ ನವಿರೇಳುವುದು ; ತೆರೆ+ತೆರೆ+ತೆರೆ+ಅಹ; ತೆರೆ=ಅಲೆ/ತರಂಗ; ತಿಳಿ+ಕೊಳದ+ಎದೆಯಲಿ; ತಿಳಿ=ಕಸಕಡ್ಡಿಗಳಿಲ್ಲದೆ ಶುಚಿಯಾಗಿರುವ; ಕೊಳ=ಸರೋವರ; ಕೊಳದ ಎದೆಯಲಿ=ನೀರಿನ ಅಲೆಗಳ ಏರಿಳಿತದಲ್ಲಿ; ಮಿನುಮಿನು=ಚೆನ್ನಾಗಿ ಹೊಳೆಯುತ್ತಿರುವುದನ್ನು ಸೂಚಿಸುವ ಅನುಕರಣ ಶಬ್ದ; ಮಿಂಚು=ಪ್ರಕಾಶಮಾನವಾಗಿ ಕಂಗೊಳಿಸುವ; ನುಣ್=ಅಂದವಾದ/ಚೆಂದದ; ಬೆಳುಂದಿಗಳು=ಚಂದ್ರನಿಂದ ಹೊರಹೊಮ್ಮುತ್ತಿರುವ ಬೆಳಕು; ಲೀಲೆ=ಬೆಡಗು; ದೊರೆ=ರಾಜ; ಮೆಚ್ಚುಗೆ=ಹೊಗಳಿಕೆ; ಬೇಕು+ಇಲ್ಲ; ಬೇಕಿಲ್ಲ=ಅಗತ್ಯವಿಲ್ಲ;

ಗಾಳಿಯ ಮುತ್ತಿಗೆ ಮೈ ಜುಮ್ಮೆನ್ನಲು ತೆರೆತೆರೆತೆರೆಯಹ ತಿಳಿಗೊಳದೆದೆಯಲಿ ಮಿನುಮಿನು ಮಿಂಚುವ ನುಣ್ ಬೆಳುದಿಂಗಳ ಲೀಲೆಗೆ ದೊರೆ ಮೆಚ್ಚುಗೆ ಬೇಕಿಲ್ಲ=ಕೊಳದ ಮೇಲೆ ಬೀಸುತ್ತಿರುವ ಗಾಳಿಯ ಬಡಿತದಿಂದ ಉಂಟಾಗಿರುವ ನೀರಿನ ಅಲೆಗಳ ನಡುವೆ ಮಿನುಮಿನು ಹೊಳೆಯುತ್ತಿರುವ ಬೆಳುದಿಂಗಳಿನ ಸೊಬಗಿಗೆ ರಾಜನ ಮೆಚ್ಚುಗೆ ಬೇಕಿಲ್ಲ;

ಸಿಡಿಲು=ಮೋಡಗಳ ತಿಕ್ಕಾಟದಿಂದ ಕೋಲ್ಮಿಂಚಿನೊಡನೆ ಕೇಳಿಬರುವ ದೊಡ್ಡ ದನಿ; ಸಿಡಿ=ಚಿಮ್ಮುವ/ಹೊರಹೊಮ್ಮುವ; ಮೊಳಗು=ದನಿ/ಶಬ್ದ; ನುಗ್ಗು=ತಳ್ಳಿಕೊಂಡು ಮುಂದಕ್ಕೆ ಬರುವ; ಕಾರ್ಗಾಲ=ಕಾರ್+ಕಾಲ; ಕಾರ್=ಮಳೆಯ ಮೋಡ; ಕಾರ್ಗಾಲ=ಮಳೆಗಾಲ; ಕರ್ಮುಗಿಲ್=ಕರಿದು+ಮುಗಿಲ್; ಕರಿದು=ಕಪ್ಪನೆಯ ಬಣ್ಣ; ಮುಗಿಲ್=ಮೋಡ; ಕರ್ಮುಗಿಲ್=ಕಪ್ಪನೆಯ ಮೋಡ; ಹೊಮ್ಮು=ಹೊರಸೂಸು/ಕಾಣಿಸಿಕೊಳ್ಳುವುದು; ಕೆಂಗಿಡಿ=ಕೆಚ್ಚೆನೆಯ+ಕಿಡಿ; ಕೆಚ್ಚನೆ=ಕೆಂಪನೆಯ ಬಣ್ಣದ; ಕಿಡಿ=ಬೆಂಕಿಯ ತುಣುಕು; ಕೆಂಗಿಡಿ=ಬೆಂಕಿಯ ಕೆಂಪನೆಯ ಕಣ; ಹೊಂಗೆರೆ=ಹೊನ್+ಗೆರೆ; ಹೊನ್=ಬಂಗಾರ/ಚಿನ್ನ; ಗೆರೆ=ಸಾಲು; ಹೊಂಗೆರೆ=ಹೊನ್ನಿನ ಎಳೆ/ಗೆರೆ; ಮಿಂಚು=ಮೋಡಗಳ ತಿಕ್ಕಾಟದಿಂದಾಗಿ ಹೊರಹೊಮ್ಮುವ ಬೆಳಕು; ಆಸ್ಥಾನ=ರಾಜನ ಒಡ್ಡೋಲಗ; ದಾಸ್ಯ=ಊಳಿಗ; ಹುರುಪು+ಇಲ್ಲ; ಹುರುಪು=ಹುಮ್ಮಸ್ಸು;

ಸಿಡಿಲನು ಸಿಡಿಯುತೆ ಮೊಳಗುತೆ ನುಗ್ಗುವ ಕಾರ್ಗಾಲದ ಕರ್ಮುಗಿಲಿಂ ಹೊಮ್ಮುವ ಕೆಂಗಿಡೆ ಬಣ್ಣದ ಹೊಂಗೆರೆ ಮಿಂಚಿಗೆ ಆಸ್ಥಾನದ ದಾಸ್ಯದ ಹುರುಪಿಲ್ಲ=ಮುಂಗಾರಿನ ಕಪ್ಪುಮೋಡಗಳ ಎಡೆಯಿಂದ ಹೊರಹೊಮ್ಮುತ್ತಿರುವ ಸಿಡಿಲ ಗರ‍್ಜನೆಗೆ ಮೊದಲು ಹೊರಹೊಮ್ಮುವ ಚಿನ್ನದ ಗೆರೆಯ ಕೋಲ್ಮಿಂಚಿಗೆ ರಾಜನ ಒಡ್ಡೋಲಗದಲ್ಲಿ ಮಯ್ ಮನವನ್ನು ಮುದುಡಿಕೊಂಡು ಅಡಿಯಾಳಿನಂತೆ ನಡೆದುಕೊಳ್ಳಬೇಕಾದ ಅಗತ್ಯವಿಲ್ಲ;

ಮುತ್ತು=ಕವಿದಿರುವ/ಆವರಿಸಿರುವ; ಬಾನ್+ಅಲಿ; ಬಾನು=ಆಕಾಶ; ಬಾನಲಿ=ಆಕಾಶದಲ್ಲಿ; ಮಿಣುಕು=ಹೊಳೆಹೊಳೆಯುತ್ತಿರುವ; ತಾರೆ=ಚುಕ್ಕಿ; ದೊರೆ+ಆಣತಿ; ಆಣತಿ=ಅಪ್ಪಣೆ; ತೃಣ+ಇಲ್ಲ; ತೃಣ=ತುಸು/ಕಿಂಚಿತ್ತು ; ತೃಣವಿಲ್ಲ=ಕಿಂಚಿತ್ತಾದರೂ ಇಲ್ಲ;

ಕತ್ತಲೆ ಮುತ್ತಿದ ಬಾನಲಿ ಮಿಣುಕುವ ತಾರೆಗೆ ದೊರೆಯಾಣತಿ ತೃಣವಿಲ್ಲ=ಕತ್ತಲೆಯಿಂದ ತುಂಬಿರುವ ಗಗನದಲ್ಲಿ ಮಿಣುಕುತ್ತಿರುವ ಚುಕ್ಕಿಗೆ ದೊರೆಯ ಅಪ್ಪಣೆಯು ಕಿಂಚಿತ್ತಾದರೂ ತಟ್ಟುವುದಿಲ್ಲ;

ವಿಪ್ಲವ=ಕ್ರಾಂತಿ; ಮೂರ್ತಿ=ಪ್ರತಿಮೆ/ವಿಗ್ರಹ; ವಿಪ್ಲವಮೂರ್ತಿ=ಕ್ರಾಂತಿಕಾರಿ/ಕೆಡುಕನ್ನು ನಾಶಪಡಿಸಿ, ಒಳಿತನ್ನು ನೆಲೆಗೊಳಿಸುವ ವ್ಯಕ್ತಿ; ಸಖನ್+ಆಗಿ+ಇಹನೈ; ಸಖ=ಗೆಳೆಯ; ಇಹನ್=ಇರುವನು; ಆಗಿಹನೈ=ಆಗಿದ್ದಾನೆ; ಕವಿಗೆ+ಅರಸು+ಗಿರಸು+ಗಳ; ಕವಿ=ಕಾವ್ಯವನ್ನು ರಚಿಸುವವನು; ಅರಸುಗಿರಸು=ಯಾವುದೇ ವ್ಯಕ್ತಿ ಇಲ್ಲವೇ ವಸ್ತುವಿನ ಬಗ್ಗೆ ಬೇಸರವನ್ನು ಇಲ್ಲವೇ ತಿರಸ್ಕಾರವನ್ನು ಸೂಚಿಸುವಾಗ ಈ ರೀತಿಯ ಪದಗಳನ್ನು ಬಳಸಲಾಗುತ್ತದೆ; ಋಣ+ಇಲ್ಲ; ಋಣ=ಹಂಗು;

ವಿಪ್ಲವ ಮೂರ್ತಿಯ ಸಖನಾಗಿಹನೈ ಕವಿಗರಸುಗಿರಸುಗಳ ಋಣವಿಲ್ಲ=ಕ್ರಾಂತಿಕಾರಿಯ ಗೆಳೆಯನಾಗಿರುವ ಕವಿಗೆ ಅರಸನ ಹಂಗಿಲ್ಲ;

ಅವನ್+ಅಗ್ನಿ+ಮುಖಿ; ಅವನ್=ಕವಿಯು; ಅಗ್ನಿ=ಬೆಂಕಿ; ಮುಖಿ=ಮೊಗದವನು; ಅಗ್ನಿಮುಖಿ=ಬೆಂಕಿಯಂತೆ ಉರಿಯುವವನು; ಪ್ರಳಯ=ನಾಶ/ಅಳಿವು/ಎಲ್ಲವನ್ನೂ ಕೊನೆಗೊಳಿಸುವುದು; ಶಿಖಿ=ಬೆಂಕಿ; ಪ್ರಳಯಶಿಖಿ=ಪ್ರಳಯಕಾಲದ ಬೆಂಕಿಯಂತಿರುವವನು;

ಜನಪರವಾಗಿ ಚಿಂತಿಸುವ ಮತ್ತು ಜನರ ಒಳಿತಿಗಾಗಿ ಹೋರಾಡುವ ಕವಿಯು ರಾಜನಿಂದ ಯಾವುದೇ ಬಗೆಯ ಬಿರುದನ್ನು ಬಯಸುವುದಿಲ್ಲ; ರಾಜನನ್ನು ಕಂಡು ಅಂಜುವುದಿಲ್ಲ; ರಾಜನಿಂದ ಉಂಟಾಗುವ ಹಿಂಸೆಯನ್ನು ಲೆಕ್ಕಿಸುವುದಿಲ್ಲ; ರಾಜನ ಮೆಚ್ಚುಗೆಗಾಗಿ ನಡುಬಗ್ಗಿಸಿ ತಲೆತಗ್ಗಿಸಿ ನಡೆಯುವುದಿಲ್ಲ; ರಾಜನಿಗೆ ಅಡಿಯಾಳಾಗುವುದಿಲ್ಲ;

ನಿಸರ‍್ಗದ ನೆಲೆಯಲ್ಲಿ ಹಾಡುವ ಕೋಗಿಲೆ, ಅರಳುವ ಹೂವು, ಕುಣಿಯುವ ನವಿಲು, ತೇಲುವ ಮೋಡ, ಹೊಳೆಯುವ ಬೆಳುದಿಂಗಳು, ಮೊಳಗುವ ಸಿಡಿಲು, ಕಂಗೊಳಿಸುವ ಮಿಂಚು, ಮಿನುಗುವ ಚುಕ್ಕಿಗಳು ಹೇಗೆ ಸಹಜವಾಗಿ ತಂತಮ್ಮ ಅಂದಚೆಂದದ ಇರುವಿಕೆಯನ್ನು ತೋರಿಸುತ್ತವೆಯೋ ಅಂತೆಯೇ ಕವಿಯ ವ್ಯಕ್ತಿತ್ವವೂ ಸಹಜವಾಗಿ ರೂಪುಗೊಂಡಿರಬೇಕು. ಇಲ್ಲದಿದ್ದರೆ ರಾಜನಿಂದ ಬಿರುದನ್ನು ಪಡೆಯುವ ಕವಿಯು ರಾಜನ ಹಂಗಿಗೆ ಒಳಗಾಗುತ್ತಾನೆ; ರಾಜನನ್ನು ಕಂಡು ಹೆದರುವ ಕವಿಯು ರಾಜನ ತಪ್ಪುಗಳನ್ನು ಗುರುತಿಸಿ ಹೇಳುವ ಎದೆಗಾರಿಕೆಯನ್ನು ಕಳೆದುಕೊಳ್ಳುತ್ತಾನೆ; ರಾಜನು ನೀಡುವ ದಂಡನೆಗೆ ನಡುಗುವ ಕವಿಯು ರಾಜನ ದಬ್ಬಾಳಿಕೆಯ ಆಡಳಿತವನ್ನು ಮೂಕನಾಗಿ ಸಹಿಸಿಕೊಳ್ಳುತ್ತಾನೆ; ರಾಜನು ನೀಡುವ ಸಂಪತ್ತಿಗೆ ಕಯ್ ಒಡ್ಡುವ ಕವಿಯು ರಾಜನಿಗೆ ಅಡಿಯಾಳಾಗುತ್ತಾನೆ. ಈ ರೀತಿಯ ನಡೆನುಡಿಗಳಿಂದ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡ ವ್ಯಕ್ತಿಯು ಎಂದಿಗೂ ಕವಿಯಾಗಲಾರ.

ಕವಿಯ ವ್ಯಕ್ತಿತ್ವವನ್ನು ‘ ಅಗ್ನಿಮುಖಿ ಪ್ರಳಯಶಿಖಿ ’ ಎಂಬ ರೂಪಕದ ನುಡಿಯಲ್ಲಿ ಬಣ್ಣಿಸಲಾಗಿದೆ. ಪ್ರಳಯದ ಬೆಂಕಿಯು ಜಗತ್ತಿನಲ್ಲಿ ಇರುವುದೆಲ್ಲವನ್ನೂ ಸುಟ್ಟು ನಾಶಮಾಡಿ, ಹೊಸ ಹುಟ್ಟಿಗೆ ಹೇಗೆ ಕಾರಣವಾಗುವುದೋ ಅಂತೆಯೇ ರಾಜನ ಆಳ್ವಿಕೆಯಲ್ಲಿ ಕಂಡುಬರುವ ಸುಲಿಗೆ, ವಂಚನೆ ಮತ್ತು ಕ್ರೂರತನದ ದಬ್ಬಾಳಿಕೆಯನ್ನು ಕವಿಯು ತನ್ನ ಬರಹದಿಂದ ಜನಸಮುದಾಯಕ್ಕೆ ಮನವರಿಕೆ ಮಾಡಿ, ಅವರನ್ನು ಅರಿವಿನ ಮೂಲಕ ಎಚ್ಚರಿಸಿ, ರಾಜನ ಆಡಳಿತದಲ್ಲಿರುವ ಕೆಟ್ಟದ್ದರ ಎದುರಾಗಿ ಹೋರಾಡಬಲ್ಲ ಕಸುವನ್ನು ಜನಮನದಲ್ಲಿ ತುಂಬುತ್ತಾನೆ. ರಾಜನ ದುರಾಡಳಿತವನ್ನು ಕೊನೆಗಾಣಿಸಿ , ಜನಸಮುದಾಯದ ಬದುಕಿನಲ್ಲಿ ಒಳಿತನ್ನು ನೆಲೆಗೊಳಿಸಬಲ್ಲ ವ್ಯಕ್ತಿತ್ವವನ್ನು ಕವಿಯು ಹೊಂದಿದ್ದಾನೆ ಎಂಬುದನ್ನು ‘ ಅವನ್ ಅಗ್ನಿಮುಖಿ ಪ್ರಳಯಶಿಖಿ ‘ ಎಂಬ ರೂಪಕದ ನುಡಿಗಳು ಸೂಚಿಸುತ್ತವೆ.

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: