ನೆಜಾಪಾದ ಬೆಂಕಿ ಚೆಂಡುಗಳು

– .

ಎಲ್ಲಿಂದಲೋ ದುತ್ತೆಂದು ಆಕಾಶದಲ್ಲಿ ಕಾಣಿಸಿಕೊಂಡು ತೂರಿ ಬರುವ ಬೆಂಕಿಯ ಚೆಂಡುಗಳು, ಅದರ ನಿರೀಕ್ಶೆಯಲ್ಲಿ ಇದ್ದ ಹೋರಾಟಗಾರರ ಮತ್ತು ಯೋದರ ಮೇಲೆ ಬೀಳುತ್ತಿದ್ದವು. ಅವರುಗಳು ಸಹ ಅದರ ಹೊಡೆತದಿಂದ ತಪ್ಪಿಸಿಕೊಂಡು, ಬೆಂಕಿ ಚೆಂಡಿಗೆ ಹೆದರದೆ, ಕೈಕಟ್ಟಿ ಕೂರದೆ, ಪ್ರತೀಕಾರವಾಗಿ ತಮ್ಮಲ್ಲಿ ಸಿದ್ದವಿದ್ದ ಬೆಂಕಿ ಚೆಂಡುಗಳನ್ನು ಎದುರಾಳಿಗಳ ಮೇಲೆ ಹಾರಿ ಬಿಟ್ಟರು.

ಇದು ಯಾವುದೇ ಕದನ ಚಿತ್ರದ ತುಣುಕಿನ ವರ‍್ಣನೆಯಲ್ಲ. ಮದ್ಯ ಅಮೆರಿಕಾದ ಪುಟ್ಟ ನಾಡು ‘ಎಲ್ ಸಾಲ್ವಾಡರ‍್’ನ ರಾಜದಾನಿಯಿಂದ ಉತ್ತರಕ್ಕೆ ಸರಿ ಸುಮಾರು ಮೂವತ್ತು ಕಿಲೋಮೀಟರ‍್ ದೂರದಲ್ಲಿರುವ ನೆಜಾಪಾದಲ್ಲಿ ನಡೆಯುವ ಉತ್ಸವದ ಬಣ್ಣನೆ. ‘ಲಾ ರೆಕುರ‍್ಡಾ’ ಎಂಬ ಸಾಂಪ್ರದಾಯಿಕ ಉತ್ಸವದಲ್ಲಿ ಯೋದರಾಗಿ ಸುಮಾರು ನೂರೈವತ್ತು ಯುವಕರು ಎರಡು ಗುಂಪುಗಳಾಗಿ ಬಾಗವಹಿಸುತ್ತಾರೆ. ಬೆಂಕಿ ಚೆಂಡುಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ನಿರಂತರವಾಗಿ ಹಾರಾಡುತ್ತವೆ. ಈ ಬೆಂಕಿಯ ಚೆಂಡಿನ ಹಾವಳಿಯಿಂದ ಆಗಬಹುದಾದ ಅನಾಹುತಗಳಿಂದ ತಮ್ಮನ್ನು ರಕ್ಶಿಸಿಕೊಳ್ಳುವ ಸಲುವಾಗಿ ದಪ್ಪನೆಯ ಬಟ್ಟೆಯನ್ನು ತಲೆಗೆ ಪೇಟವನ್ನಾಗಿ ಸುತ್ತುವುದರ ಜೊತೆಗೆ ದೇಹ ಬಾಗಕ್ಕೂ ಬಿಗಿಯಾಗಿ ಸುತ್ತಿ ರಕ್ಶಣಾ ಕವಚವಾಗಿಸುತ್ತಾರೆ.

ಬಹಳ ಹಳೆಯದಾದ ‘ಲಾ ರೆಕುರ‍್ಡಾ’ ಉತ್ಸವ, ನೆಜಾಪಾ ಪೋಶಕ ಡಾಕ್ಟರ‍್ ಸ್ಯಾನ್ ಜೆರೋನಿಮಾ ಗೌರವಾರ‍್ತವಾಗಿ ಪ್ರತಿ ವರ‍್ಶ ಆಗಸ್ಟ್ 31ರಂದು ಆಚರಿಸುವ ಪರಿಪಾಟವಿದೆ. ಇದು 1922ರಿಂದ ಇಂದಿನವರವಿಗೂ ಅವ್ಯಾಹತವಾಗಿ ನಡೆದು ಬಂದ ಉತ್ಸವ. ಸ್ತಳೀಯರು ‘ಲಾಸ್ ಬೋಲಾನ್ ಡಿ ಪ್ಯೂಗೊ’ ಎಂದು ಕರೆಯುವ ಈ ವಿಲಕ್ಶಣ ಉತ್ಸವ ವಾಸ್ತವವಾಗಿ, ಸ್ಯಾನ್ ಜೆರೋನಿಮಾ ಮತ್ತು ದೆವ್ವದ ನಡುವಿನ ಹೋರಾಟದ ಸಾಂಕೇತಿಕ ಪುನರಾವರ‍್ತನೆಯಂತೆ.

ಈ ದೆವ್ವದ ಜೊತೆಗಿನ ಹೋರಾಟ ಆಗಿದ್ದಾದರೂ ಯಾವಾಗ? ಇದಕ್ಕೆ ಕಾರಣವಾದರೂ ಏನು?

1922ರಲ್ಲಿ ನೆಜಾಪಾ ಹಾಗೂ ಸುತ್ತ ಮುತ್ತಲಿನ ಪ್ರದೇಶದ ಜನರನ್ನು ಬಲವಂತವಾಗಿ ಅಲ್ಲಿಂದ ಒಕ್ಕಲು ಎಬ್ಬಿಸಲು ಒತ್ತಾಯಿಸಲಾಯಿತು. ಇದಕ್ಕೆ ಮೂಲ ಕಾರಣ, ಹತ್ತಿರದ ಜ್ವಾಲಾಮುಕಿಯು ಸ್ಪೋಟಿಸುವ ಸಂಬವ. ನೆಜಾಪಾದ ಜನ ಅಲ್ಲಿಂದ ಕಾಲ್ಕಿತ್ತು ಹೋಗುವ ಸಮಯದಲ್ಲಿ, ಜ್ವಾಲಾಮುಕಿ ಸ್ಪೋಟಗೊಂಡು ಅದರಿಂದ ಸಿಡಿದ ಬೆಂಕಿಯ ಚೆಂಡುಗಳು ಮುಗಿಲು ಮುಟ್ಟಿದ್ದವು. ನೆಜಾಪಾದ ಜನರು ಅದನ್ನು ಕಂಡಾಗ ಅವರ ಮನದಲ್ಲಿ ಮೂಡಿದ ಬಾವನೆ, ‘ಇದು ತಮ್ಮ ಪೋಶಕ ಸಂತ ಜೆರೋನಿಮಾ ಮೇಲೆ ದೆವ್ವಗಳು ಆಕ್ರಮಣ ಮಾಡುತ್ತಿವೆ’ ಎಂಬುದೇ ಆಗಿತ್ತು. ಸಂತ ಜೆರೋನಿಮಾ ನಿಜವಾಗಿಯೂ ದೆವ್ವಗಳೊಂದಿಗೆ ಹೋರಾಡುತ್ತಿದ್ದಾನೆ ಎಂಬ ನಂಬಿಕೆ ಅವರುಗಳದ್ದು. ಸಂತ ಜೆರೋನಿಮಾ ಮಾತ್ರ ತಮ್ಮನ್ನು ದೆವ್ವಗಳಿಂದ ರಕ್ಶಿಸಬಲ್ಲ ಎಂಬ ಬ್ರಮೆ ಅವರಲ್ಲಿತ್ತು. ನೆಜಾಪಾದ ಜನರ ದ್ರುಶ್ಟಿಯಲ್ಲಿ ಇದು ದುಶ್ಟ ನಿಗ್ರಹಣೆ.

ನೆಜಾಪಾದ ಜನರು ಈ ರೀತಿಯ ನಿಗ್ರಹಣಕ್ಕೆ ಸಾಕ್ಶಿಯಾದಂದಿನಿಂದಲೂ, ಈ ದಿನವನ್ನು ಅದಕ್ಕಾಗಿಯೇ ಮುಡಿಪಿಟ್ಟು, ಅದರ ಸವಿ ನೆನೆಪಿಗಾಗಿ ಪ್ರತಿ ವರ‍್ಶ ‘ಪೈರ‍್ ಬಾಲ್’ ಉತ್ಸವವನ್ನು ಆಚರಿಸುತ್ತಾರೆ. ಈ ಉತ್ಸವ ಸಂಗಟಿತವಾಗಿ ಅಲ್ಲಿನ ಜನರಿಂದಲೇ ಆಯೋಜನೆಯಾಗಿದೆ ಎಂದು ತಿಳಿಯದಿದ್ದಲ್ಲಿ, ಪ್ರವಾಸಿಗರಿಗೆ ನಿಜವಾಗಿಯೂ ಯುದ್ದ ವಲಯಕ್ಕೆ ನುಸುಳಿರುವ ಬಾವನೆ ಬರುವುದಂತೂ ಸತ್ಯ. ನೆಜಾಪಾದ ಜನರೇ ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು, ಈ ಉತ್ಸವದಲ್ಲಿ ಬಾಗಿಯಾಗುತ್ತಾರೆ. ಇದರಲ್ಲಿ ಹೆಚ್ಚಿನವರು ಯುವಕರೇ. ಅವರ ಮೇಲೆ ಇವರು, ಇವರ ಮೇಲೆ ಅವರು ಬೆಂಕಿ ಚೆಂಡುಗಳನ್ನು ಎಸೆದಾಡುವ ಮೋಜು, ವಿರೋದಿಗಳು ಬೆಂಕಿಯ ಚೆಂಡಿನಿಂದ ತಪ್ಪಿಸಿಕೊಳ್ಳಲು ನಡೆಸುವ ಹರಸಾಹಸವನ್ನು ಕಣ್ಣಾರೆ ಕಂಡು, ತಮ್ಮ ಗುಂಪನ್ನು ಹುರಿದುಂಬಿಸಲು ನೂರಾರು ಜನ ಪ್ರೇಕ್ಶಕರು ಸುತ್ತಲೂ ನೆರೆದಿರುತ್ತಾರೆ. ಯೋದರ ಪ್ರತಿ ನಡೆಯ ಮೇಲೂ ಅವರ ತೀಕ್ಶ್ಣ ದ್ರುಶ್ಟಿಯಿರುತ್ತದೆ. ಇನ್ನೂ ಹೆಚ್ಚಿನ ಉತ್ಸಾಹದಿಂದ ಹೋರಾಡಲು ಇವರುಗಳು ಪ್ರೇರೇಪಿಸುತ್ತಾರೆ.

ನೀರಿನಲ್ಲಿ ಒದ್ದೆ ಮಾಡಿಕೊಂಡ ಕೈಗವಸುಗಳು ಹಾಗೂ ಬಟ್ಟೆಗಳನ್ನು ದರಿಸಿದ ಕೆಚ್ಚೆದೆಯ ಹೋರಾಟಗಾರರು, ತಮ್ಮಲ್ಲಿನ ಬೆಂಕಿ ಚೆಂಡನ್ನು ವಿರೋದಿ ಪಾಳೆಯದ ಮೇಲೆ ಎಸೆಯುತ್ತಾರೆ. ಆದರೂ ಅವರ ದ್ರುಶ್ಟಿಯೆಲ್ಲಾ ಇಂದನದಲ್ಲಿ ಅದ್ದಿದ್ದ ಬೆಂಕಿ ಚೆಂಡುಗಳತ್ತಲೇ ಇರುತ್ತದೆ. ಬೆಂಕಿ ಚೆಂಡುಗಳನ್ನು ಎಸೆಯುವುದು ಎಶ್ಟು ಮುಕ್ಯವೋ, ತಮ್ಮ ಮೇಲೆ ಪ್ರಹಾರವಾದ ಬೆಂಕಿ ಚೆಂಡುಗಳಿಂದ ರಕ್ಶಿಸಿಕೊಳ್ಳುವುದು ಅಶ್ಟೇ ಮುಕ್ಯ. ಬೆಂಕಿಯ ಜೊತೆ ಸರಸ ಅತ್ಯಂತ ಅಪಾಯಕಾರಿ. ಒಂದು ರೀತಿಯಲ್ಲಿ ಗಮನಿಸಿದರೆ ಈ ಉತ್ಸವ ಸಹ ವಿಪತ್ತಿನದು. ಇದರಲ್ಲಿ ಬಾಗವಹಿಸುವ ಎಲ್ಲಾ ಯೋದರ ದ್ರುಶ್ಟಿ ಸದಾಕಾಲ ಬಹಳ ಚುರುಕಾಗಿರಬೇಕಾದ್ದು ಅವಶ್ಯ.

ಈ ಆಚರಣೆಗೆ ತಯಾರಿ ತಿಂಗಳುಗಳ ಮೊದಲೇ ಶುರುವಾಗುತ್ತದೆ

ಏನೆಲ್ಲಾ ರಕ್ಶಣಾ ವ್ಯವಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಅನುಸರಿಸಿದರೂ, ಬೆಂಕಿ ಚೆಂಡುಗಳು ಅತಿ ಹತ್ತಿರದಿಂದ ಎಸೆದಾಗ ಮುಕಕ್ಕೆ ಬಡಿಯುವುದು, ದರಿಸಿದ್ದ ಬಟ್ಟೆ ಹತ್ತಿಕೊಳ್ಳುವುದು, ಈ ಕಾರಣದಿಂದ ಯೋದರು ಗಾಯಾಳುಗಳಾಗುವುದು ಸಾಮಾನ್ಯ. ಇಶ್ಟೆಲ್ಲಾ ಅನಾಹುತಗಳಾಗುವ ಸಾದ್ಯತೆಯಿದ್ದರೂ ಪೈರ‍್ ಬಾಲ್ ಉತ್ಸವ ಅವ್ಯಾಹತವಾಗಿ ನಡೆದು ಬಂದಿದೆ. ಜನರ ಮನ್ನಣೆಯಿರುವುದೇ ಅದರ ದ್ಯೋತಕ. ಹತ್ತಿ ಬಟ್ಟೆಯಿಂದ ಮಾಡಲ್ಪಟ್ಟ ಈ ಬೆಂಕಿ ಚೆಂಡುಗಳನ್ನು, ಉತ್ಸವಕ್ಕೆ ಎರಡು ತಿಂಗಳ ಮುನ್ನವೇ ತಯಾರಿಸಲಾಗುತ್ತದೆ. ಹೀಗೆ ತಯಾರಾದ ಚೆಂಡುಗಳನ್ನು ಸೀಮೆ ಎಣ್ಣೆಯಲ್ಲಿ, ಗ್ಯಾಸೋಲಿನ್‍ನಲ್ಲಿ, ಉತ್ಸವದ ದಿನದವರೆಗೂ, ಅಂದಾಜು ಎರಡು ತಿಂಗಳುಗಳ ಕಾಲ ನೆನೆಸಿಡಲಾಗುತ್ತದೆ. ಬೆಂಕಿಯ ಚೆಂಡನ್ನು ಎಸೆದಾಗ, ಗಾಳಿಯೊಂದಿಗಿನ ಗರ‍್ಶಣೆಯಿಂದಾಗಿ ಆರದೆ ಅದು ನಿಗಿ ನಿಗಿ ಉರಿಯುತ್ತಿರಬೇಕು ಎಂಬುದೇ ಇದಕ್ಕೆ ಮೂಲ ಕಾರಣ.

ಈ ಉತ್ಸವದ ಪ್ರಾರಂಬಕ್ಕೂ ಮುನ್ನ ಐವತ್ತಕ್ಕೂ ಹೆಚ್ಚು ಕಾಗದದ ಆಕಾಶ ಬುಟ್ಟಿಗಳನ್ನು ಬಾಹ್ಯಾಕಾಶಕ್ಕೆ ಹಾರಿ ಬಿಡುವ ಪದ್ದತಿಯಿದೆ. ಬಹುಶಹ ಉತ್ಸವ ಪ್ರಾರಂಬವಾಗಿದೆ ಎಂದು ಸುತ್ತ ಮುತ್ತಲಿನವರಿಗೆ ತಿಳಿಸಲು ಹಾಗೂ ಅವರುಗಳನ್ನು ಆಹ್ವಾನಿಸಲು ಈ ಕ್ರಮವಿರಬೇಕು.

(ಮಾಹಿತಿ ಮತ್ತು ಚಿತ್ರ ಸೆಲೆ: diario1.comodditycentral.comtraditionscustoms.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: