ಗಣರಾಜ್ಯೋತ್ಸವದ ವಿಶೇಶ ಸಂಗತಿಗಳು

– .

ಗಣರಾಜ್ಯೋತ್ಸವ_Republic_Day_India

ಸುಮಾರು ಎರಡು ನೂರು ವರ‍್ಶಗಳ ಕಾಲ ಮತ್ತೊಬ್ಬರ ಅದೀನದಲ್ಲಿದ್ದ ಬಾರತ 1947ರ ಆಗಸ್ಟ್ 15ರಂದು ಸ್ವತಂತ್ರವಾಯಿತು. ಇದಾದ ಎರಡು ವರ‍್ಶ, ಐದು ತಿಂಗಳ ನಂತರ, ಅಂದರೆ 1950ರ ಜನವರಿ 26ರಂದು ಗಣರಾಜ್ಯವಾಯಿತು. ತನ್ನದೇ ಸಂವಿದಾನ ಅಂದಿನಿಂದ ಜಾರಿಗೊಳಿಸಲಾಯಿತು.

72ನೇ ಗಣರಾಜ್ಯೋತ್ಸವದ ಸಂಬ್ರಮ

ನಾಳೆ ಬಾರತ ತನ್ನ 72ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಆಚರಣೆಯಲ್ಲಿ ವಿವಿದ ರಾಜ್ಯಗಳ ಸ್ತಬ್ದ ಚಿತ್ರಗಳು, ಬಾರತೀಯ ಸೇನೆಯ ಮೂರು ವಿಬಾಗಗಳ ಬಲ ಪ್ರದರ‍್ಶನ ಹಾಗೂ ಹೊಸದಾಗಿ ಸೇರ‍್ಪಡೆಯಾಗಿರುವ ಯುದ್ದ ಉಪಕರಣಗಳು, ‘ವಿವಿದತೆಯಲ್ಲಿ ಏಕತೆ’ಯನ್ನು ಬಿಂಬಿಸುವ ಎಲ್ಲಾ ರಾಜ್ಯಗಳ ವಿಶಿಶ್ಟ, ವೈವಿದ್ಯ ನ್ರುತ್ಯ ಪ್ರದರ‍್ಶನಗಳು ಪ್ರಮುಕ ಆಕರ‍್ಶಣೆ. ಇವುಗಳನ್ನು ಸಾವಿರಾರು ಬಾರತೀಯರು, ಬಾರತದ ರಾಜದಾನಿ ದೆಹಲಿಯ ರಾಜ್‌ಪತ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನೋಡಿ ಕಣ್ತುಂಬಿಕೊಂಡರೆ, ಲಕ್ಶಾಂತರ ಮಂದಿ ದೇಶ ವಿದೇಶಗಳಲ್ಲಿ ನೇರ ಪ್ರಸಾರವನ್ನು ದೂರದರ‍್ಶನ ಹಾಗು ಇನ್ನಿತರೆ ದ್ರುಶ್ಯ ಮಾದ್ಯಮಗಳ ಮೂಲಕ ನೋಡುತ್ತಾರೆ.

ಗಣರಾಜ್ಯೋತ್ಸವದ ಹಿಂದಿರುವ ವಿಶೇಶ ಸಂಗತಿಗಳು

  • ಬಾರತ ದೇಶವು 26ನೇ ಜನವರಿ 1950ರ ಬೆಳಿಗ್ಗೆ 10:18 ಗಂಟೆಗೆ ಗಣರಾಜ್ಯವಾಯಿತು.
  • ಬಾರತ ಗಣರಾಜ್ಯವಾದ ಆರು ನಿಮಿಶಗಳ ತರುವಾಯ ರಾಶ್ಟ್ರಪತಿ ಬವನದ ದರ‍್ಬಾರ‍್ ಹಾಲಿನಲ್ಲಿ, ಡಾ. ರಾಜೇಂದ್ರ ಪ್ರಸಾದ್ ರವರು ಬಾರತದ ಮೊದಲ ರಾಶ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
  • ಗಣರಾಜ್ಯೋತ್ಸವದ ಪೆರೇಡ್ ಮೊದಲ ಬಾರಿ ರಾಜ್‌ಪತ್‌ನಲ್ಲಿ ನಡೆದದ್ದು 1955ರಲ್ಲಿ. ಅಂದರೆ 1950 ರಿಂದ 1954 ರವರೆಗೆ, ಐದು ವರ‍್ಶಗಳ ಕಾಲ ಗಣರಾಜ್ಯೋತ್ಸವದ ಆಚರಣೆಗೆ ಸಾಕ್ಶಿಯಾಗಿದ್ದು ಕೆಂಪು ಕೋಟೆ, ರಾಶ್ಟ್ರೀಯ ಕ್ರೀಡಾಂಗಣ, ಕಿಂಗ್ಸ್ ವೇ ಮತ್ತು ರಾಮಲೀಲಾ ಮೈದಾನಗಳು.
  • ಬಾರತ ಸಂವಿದಾನದ ಕರಡನ್ನು ತಯಾರಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಡಾ. ಬಿ.ಆರ‍್. ಅಂಬೇಡ್ಕರ‍್ ಅವರನ್ನು ಅದ್ಯಕ್ಶರನ್ನಾಗಿ ಚುನಾಯಿಸಿತು. ಡಾ. ಬಿ. ಆರ‍್. ಅಂಬೇಡ್ಕರ‍್ ಅದ್ಯಕ್ಶತೆಯಲ್ಲಿದ್ದ ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಐಯ್ಯಂಗಾರ‍್, ಅಲ್ಲಾಡಿ ಕ್ರಿಶ್ಣಸ್ವಾಮಿ ಅಯ್ಯರ‍್, ಡಾ. ಕೆ. ಎಂ. ಮುನ್ಶಿ, ಸಯ್ಯದ್ ಮೊಹಮ್ಮದ್ ಸಾದುಲ್ಲಾ, ಬಿ. ಎಲ್. ಮಿಟ್ಟರ‍್ ಹಾಗೂ ಡಿ. ಪಿ. ಕೈತಾನ್ ಇದ್ದರು.
  • ಬಾರತ ಸಂವಿದಾನದ ಕರಡು ಪ್ರತಿಯನ್ನು ಸಿದ್ದಪಡಿಸಲು ಎರಡು ವರ‍್ಶ, ಹನ್ನೊಂದು ತಿಂಗಳು, ಹದಿನೇಳು ದಿನ ತೆಗೆದುಕೊಂಡಿತ್ತು.
  • ಸಂವಿದಾನವು 22 ವಿಬಾಗ (ಪಾರ‍್ಟ್ಸ್), 448 ವಿದಿ (ಆರ‍್ಟಿಕಲ್ಸ್) ಹಾಗೂ 12 ಅನುಸೂಚನೆಗಳನ್ನು (ಶೆಡ್ಯೂಲ್ಗಳು) ಹೊಂದಿದೆ. ಇದು ಇಡೀ ವಿಶ್ವದಲ್ಲೇ ಅತಿ ದೀರ‍್ಗವಾದ ಸಂವಿದಾನ.
  • ಬಾರತದ ಸಂವಿದಾನ ಬೆರಳಚ್ಚಿನಲ್ಲಾಗಲಿ, ಮುದ್ರಣದಲ್ಲಾಗಲಿ ಇಲ್ಲ. ಬದಲಿಗೆ ಅಂದವಾದ ಕೈ ಬರಹದಲ್ಲಿ, ಹಿಂದಿ ಮತ್ತು ಆಂಗ್ಲ ಬಾಶೆಯಲ್ಲಿ ಬರೆಯಲಾಗಿದೆ.
  • ಕೈ ಬರಹದಲ್ಲಿರುವ ಬಾರತ ಸಂವಿದಾನದ ಪ್ರತಿಯಲ್ಲಿ, 308 ಅಸೆಂಬ್ಲಿ ಸದಸ್ಯರ ಹಸ್ತಾಕ್ಶರವಿದೆ. ಜನವರಿ 24, 1950ರಂದು ಅಸೆಂಬ್ಲಿ ಸದಸ್ಯರು ತಮ್ಮ ಹಸ್ತಾಕ್ಶರವನ್ನು ಸಂವಿದಾನದ ಪ್ರತಿಯಲ್ಲಿ ಲಗತ್ತಿಸಿದ್ದರು.
  • ಬಾರತ ಸಂವಿದಾನದ ಮೂಲ ಪ್ರತಿಯನ್ನು ಸಂಸತ್ತಿನ ಗ್ರಂತಾಲಯದಲ್ಲಿ ಸುರಕ್ಶಿತವಾಗಿ ಹೀಲಿಯಮ್ ಅನಿಲ ತುಂಬಿದ ಬಾಕ್ಸ್ ಗಳಲ್ಲಿ ಇಡಲಾಗಿದೆ.
  • ಈ ಸಂವಿದಾನವು ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಬ್ರಿಟಿಶ್ ಸಂಸತ್ತು ಅಂಗೀಕರಿಸಿದ 1935ರ ಬಾರತ ಸರ‍್ಕಾರದ ಆಕ್ಟ್ ಗೆ ಪರ‍್ಯಾಯವಾಯಿತು.
  • ಬಾರತೀಯರ ದ್ಯೇಯ ವಾಕ್ಯ “ಸತ್ಯಮೇವ ಜಯತೆ” ಅನ್ನು ಅತರ‍್ವ ವೇದದ ಮುಂಡಕ ಉಪನಿಶತ್ ನಿಂದ ಪಡೆಯಲಾಗಿದೆ.
  • ಗಣರಾಜ್ಯೋತ್ಸವದ ದಿನ ರಾಶ್ಟ್ರಪತಿಗಳು ಬಾರತದ ದ್ವಜವನ್ನು ಹಾರಿಸಿದ ನಂತರ 21 ಗನ್ ಸೆಲ್ಯೂಟ್ ನೀಡಲಾಗುವುದು.
  • ಗಣರಾಜ್ಯೋತ್ಸವ ದಿನದ ಆಚರಣೆ ಮೂರು ದಿನಗಳ ಕಾಲ ಇರುತ್ತದೆ, ಕೊನೆಯ ಕಾರ‍್ಯಕ್ರಮ ‘ಬೀಟಿಂಗ್ ದ ರೆಟ್ರೀಟ್’. ಇದು ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ಸೇನೆಯ ಉಪಸ್ತಿತಿಯಲ್ಲಿ ನಡೆಯುತ್ತದೆ.

ಎಲ್ಲರಿಗೂ ಗಣರಾಜ್ಯೋತ್ಸವದ ಶುಬಾಶಯಗಳು!

(ಮಾಹಿತಿ ಮತ್ತು ಚಿತ್ರ ಸೆಲೆ: bloombergquint.com, business-standard.com, indiatimes.com, bloombergquint.com, floweraura.com, pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ರಮೇಶ್ ಗೌಡ says:

    ಗಣರಾಜ್ಯೋತ್ಸವದ ವಿಶೇಷ ಸಂಗತಿಗಳು ಲೇಖನದಲ್ಲಿ ಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸಿದ್ದು ಅರ್ಥಪೂರ್ಣವಾಗಿದೆ ಸರ್.

ಅನಿಸಿಕೆ ಬರೆಯಿರಿ:

%d bloggers like this: