ಮೀನು ಸಾರು

– ನಿತಿನ್ ಗೌಡ.

ಮೀನು ಸಾರು

ಬೇಕಾಗುವ ಸಾಮಾನುಗಳು

  • ಮೀನು  – 1 ಕಿಲೋ
  • ಈರುಳ್ಳಿ – 2 (ಚಿಕ್ಕ ಗಾತ್ರ)
  • ಅರಿಶಿಣ – 1/2 ಚಮಚ
  • ಹಸಿ‌ ಮೆಣಸಿನ ಕಾಯಿ – 1 (ಒಗ್ಗರೆಣೆಗೆ)
  • ಬೆಳ್ಳುಳ್ಳಿ – 10 -12 ಎಸಳು
  • ಕಾಳುಮೆಣಸು – 10-12
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಬೀಜದ ಪುಡಿ(ದನಿಯಾ) – 3-4 ಚಮಚ
  • ಕಾರದ ಪುಡಿ  – 6-7 ಚಮಚ
  • ಕಾಯಿ – 1/2 ಹೊಳಕೆ
  • ಮೆಂತೆಕಾಳು – 4
  • ಎಣ್ಣೆ – 4-5 ಚಮಚ
  • ವಾಟೆ ಹುಳಿ – ರುಚಿಗೆ ತಕ್ಕಶ್ಟು
  • ಹುಣಸೆ ಹಣ್ಣು – ರುಚಿಗೆ ತಕ್ಕಶ್ಟು

ಮಾಡುವ ಬಗೆ:

ಮೊದಲಿಗೆ ಒಂದು ಹೆಂಚು ಅತವಾ ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1.5 ಹೆಚ್ಚಿದ ಈರುಳ್ಳಿ, ಕಾಳಮೆಣಸು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ ಇದರ ಜೊತೆಗೆ ಕಾರದ ಪುಡಿ, ಕೊತ್ತಂಬರಿ ಬೀಜದ ಪುಡಿ, ವಾಟೆಹುಳಿ, ಹುಣಸೆ ಹಣ್ಣು, ಮೆಂತೆಕಾಳು, ಕಾಯಿ ತುರಿ ಮತ್ತು ಅರಿಶಿಣವನ್ನು ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಗಸಿ ತೆಳ್ಳಗೆ ಬೇಕಾದಲ್ಲಿ  ಕಾಯಿ ಮತ್ತು ನೀರು ಕಡಿಮೆ ಹಾಕಿ. ತಾರಲೆ ಮೀನಿನ ಸಾರಾದರೆ, ಸಾರು ದಪ್ಪನಾಗಿ ಮಾಡಿದರೆ ಚೆನ್ನ, ಹಾಗಾಗಿ ಅರ‍್ದ ಕಾಯಿ ಹೊಳಕೆ ಹಾಕಬಹುದು. ಹೊಳೆ ಮೀನು, ರಗು, ಕಾಟ್ಲ, ಸುರಗಿ, ಪಾಂಪ್ಲೆಟ್ ಮೀನಾದರೆ ಸಾರು ತೆಳ್ಳಗೆ ಮಾಡಿದರೆ ಚೆನ್ನ. ಇದಕ್ಕೆ ಕಾಯಿ ಹೊಳಕೆ ಚೂರು ಕಡಿಮೆ ಹಾಕಬೇಕು.

ಈಗ ಮೀನುಗಳನ್ನು ಸೋಸಿ ತೊಳೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಒಂದು ಪಾತ್ರೆಗೆ 4 ಚಮಚ ಎಣ್ಣೆ, 1/2 ಈರುಳ್ಳಿ, ಒಂದು ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಟ್ಟುಕೊಳ್ಳಿ. ಆಮೇಲೆ ಮಿಕ್ಸಿಯಲ್ಲಿ ಮಾಡಿದ ಗಸಿಯನ್ನು ಒಗ್ಗರಣೆ‌ಗೆ ಹಾಕಿ, ಸ್ವಲ್ಪ ನೀರು ಹಾಕಿ 10-15 ನಿಮಿಶ ಒಂದು ಕುದಿ ಬರುವವರೆಗೆ ಬಿಡಿ. ಈಗ ತೊಳೆದಿಟ್ಟ ಮೀನುಗಳನ್ನು ಕುದಿಯುವ ಸಾರಿಗೆ ಹಾಕಿ, ಜೊತೆಗೆ ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ 10-15 ನಿಮಿಶ ಕಾಯಲು ಬಿಡಿ. ಈಗ ಬಿಸಿ ಬಿಸಿ ಮೀನು ಸಾರು ತಯಾರಾಗಿದೆ. ಇದನ್ನು ಅಕ್ಕಿ ರೊಟ್ಟಿ, ಮುದ್ದೆ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks