ಬೂತದ ಚರ‍್ಚು

– 

ಬೂತದ ಚರ‍್ಚು

ಚೆಕ್ ರಿಪಬ್ಲಿಕ್ ದೇಶದ ರಾಜದಾನಿ ಪ್ರಾಗ್ ನಿಂದ ಪೂರ‍್ವಕ್ಕೆ 200 ಕಿ.ಮಿ.ಗಿಂತಲೂ ಹೆಚ್ಚು ದೂರದಲ್ಲಿ ಲುಕೋವಾ ಎಂಬ ಹಳ್ಳಿಯಿದೆ. ಈ ಹಳ್ಳಿಯಲ್ಲಿ ‘ಕೊಸ್ಟೆಲ್ ಸ್ವತೆಹೋಜಿರಿ’ (ಸೆಂಟ್ ಜಾರ‍್ಜ್ ಚರ‍್ಚ್) ಎಂಬ ಪಾಳು ಬಿದ್ದ ಚರ‍್ಚು ಇದೆ. ಚರ‍್ಚಿನ ಕಟ್ಟಡ ಸಹ ಶಿತಿಲಗೊಂಡಿದೆ. ಇದನ್ನು ಪರಿತ್ಯಕ್ತಗೊಳಿಸಿ ನಲವತ್ತು ವರ‍್ಶಗಳೇ ಕಳೆದಿವೆ. ಆ ಹಳ್ಳಿಯ ಜನ, ಈ ಚರ‍್ಚು ದೆವ್ವ ಬೂತಗಳ ವಾಸಸ್ತಾನ ಎಂದು ಅಲ್ಲಿಗೆ ಹೋಗುವುದನ್ನೇ ತ್ಯಜಿಸಿದ್ದಾರೆ. ಆದರೆ ಇಂದು, ಅದೇ ದೆವ್ವ ಬೂತದ ಚರ‍್ಚು ಅಂತಾರಾಶ್ಟ್ರೀಯ ಕ್ಯಾತಿಗಳಿಸಿದೆ. ದೇಶ ವಿದೇಶಗಳಿಂದ ಪ್ರವಾಸಿಗಳು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಈ ರೀತಿಯ ಅಮೂಲಾಗ್ರ ಬದಲಾವಣೆಗೆ ಕಾರಣವಾದರು ಏನು? ಇದರ ಹಿಂದಿರುವ ಆ ಶಕ್ತಿ ಯಾವುದು? ಇದನ್ನು ಸುಸ್ತಿತಿಗೆ ತರಲು ಸ್ತಳೀಯ ಕಲಾವಿದರು ಅನುಸರಿಸಿದ ಮಾರ‍್ಗ ಮಾತ್ರ ಅನನ್ಯ!

ಈ ಚರ‍್ಚನ್ನು ನಿರ‍್ಮಿಸಿದ್ದು 1352ರಲ್ಲಿ. 1968ರಲ್ಲಿ ಅಂತ್ಯಕ್ರಿಯೆ ನಡೆಯುವ ಸಂದರ‍್ಬದಲ್ಲಿ ಇದರ ಮೇಲ್ಚಾವಣಿ ಕುಸಿದಿತ್ತು. ಈ ಗಟನೆಗೂ ಮುನ್ನ ಹಲವಾರು ಬಾರಿ ಈ ಚರ‍್ಚು ಬೆಂಕಿಯ ಅನಾಹುತಕ್ಕೆ ಒಳಗಾಗಿತ್ತು. ಕುಸಿತ ಹಾಗೂ ಬೆಂಕಿಯ ಅನಾಹುತಕ್ಕೆ ಅತಿಮಾನುಶ ಶಕ್ತಿಯೇ ಕಾರಣ ಎಂದು ಬಾವಿಸಿದ ಸ್ತಳೀಯರು ಈ ಚರ‍್ಚಿನಿಂದ ದೂರ ಸರಿದರು. ಚೆಕ್ ರಿಪಬ್ಲಿಕ್ ಕಮ್ಯೂನಿಶ್ಟರ ಆಳ್ವಿಕೆಯಲ್ಲಿ ಇದ್ದಶ್ಟು ದಿನ, ಸರ‍್ಕಾರ ಯಾವುದೇ ದರ‍್ಮವನ್ನೂ ಪ್ರತಿಪಾದಿಸದ ಕಾರಣ ಇದು ಸಮಸ್ಯೆಯಾಗಿ ಸ್ತಳೀಯರಿಗೆ ಕಾಣಲಿಲ್ಲ. ಅಲ್ಲಿಂದ ಅನೇಕ ವರ‍್ಶಗಳ ಕಾಲ ಈ ಚರ‍್ಚು ಹಾಗೇ ಉಳಿದ ಹಿನ್ನೆಲೆಯಲ್ಲಿ, ಅದರಿಂದ ಹೊತ್ತೊಯ್ಯಬಹುದಾದ ವರ‍್ಣ ಚಿತ್ರಗಳು, ದಾರ‍್ಮಿಕ ವಸ್ತುಗಳು, ಪ್ರತಿಮೆಗಳು, ಗಂಟೆ, ಗೋಪುರದ ಗಡಿಯಾರ ಮುಂತಾದ ವಸ್ತುಗಳು ಕ್ರಮೇಣ ಕಾಣೆಯಾದವು. ಒಯ್ಯಲಾಗದ ವಸ್ತುಗಳು ವಿಕ್ರುತ ಮನಸ್ಸಿನವರ ವಿದ್ವಂಸಕ ಕ್ರುತ್ಯಕ್ಕೆ ಬಲಿಯಾಯಿತು.

ಈ ಚರ‍್ಚು, ಚೆಕ್ ರಿಪಬ್ಲಿಕ್ ದೇಶದ ಸಾಂಸ್ಕ್ರುತಿಕ ಸ್ಮಾರಕ. ಅದರ ಪುನರುಜ್ಜೀವನ ಅವಶ್ಯಕ ಎಂದು ಅಲ್ಲಿನ ಜನ ನಿರ‍್ದರಿಸಿದ್ದಾದರೂ, ದನ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ. ಪಶ್ಚಿಮ ಬೊಹೆಮಿಯಾ ವಿಶ್ವವಿದ್ಯಾಲಯದ ಶಿಲ್ಪಕಲೆ ವಿದ್ಯಾರ‍್ತಿ ಜಕುಬ್ ಹದ್ರವಾ ಈ ಚರ‍್ಚಿನ ಬಗ್ಗೆ ತನ್ನದೇ ಆದ ವೈವಿದ್ಯಮಯ ಆಲೋಚನೆ ಹೊಂದಿದ್ದ. ಆತ ತನ್ನ ಸಹ ವಿದ್ಯಾರ‍್ತಿಗಳನ್ನು ಬಳಸಿಕೊಂಡು, ಅವರನ್ನು ಪ್ಲಾಸ್ಟಿಕ್ ಹಾಗೂ ರೈನ್ ಕೋಟುಗಳಲ್ಲಿ ಸುತ್ತಿ ಬೆಂಚುಗಳ ಮೇಲೆ ಕೂಡಿಸಿದ. ನಂತರ ಮೂವತ್ತು ಬೂತದ ಗೊಂಬೆಗಳನ್ನು ಪ್ಲಾಸ್ಟರ‍್-ಆಪ್-ಪ್ಯಾರೀಸ್‍ನಲ್ಲಿ ತಯಾರಿಸಿ ಈ ಚರ‍್ಚಿನಲ್ಲಿ ಪ್ರತಿಶ್ಟಾಪಿಸಿದ. ಶಿತಿಲವಾಗಿದ್ದ ಚರ‍್ಚಿನ ಬಗ್ಗೆ ಜನ ಮಾನಸದಲ್ಲಿ ಅಚ್ಚಾಗಿದ್ದ ವಿಶಯವನ್ನು ದೂರ ಮಾಡಲು ಸೂಕ್ತವಾದ ಪೂರಕ ವಾತಾವರಣ ಸ್ರುಶ್ಟಿಸಿದ. ಜಕುಬ್ ಹದ್ರವಾ ನಿರ‍್ಮಿಸಿದ ಬೂತದ ಪ್ರತಿಮೆಗಳು, ಈ ಪ್ರದೇಶದಲ್ಲಿ ನೆಲೆಸಿದ್ದ ಜರ‍್ಮನ್ನರನ್ನು ಹೋಲುವಂತೆ ಇದೆ ಎಂಬುದು ಆ ಪ್ರತಿಮೆಗಳನ್ನು ಸೂಕ್ಶ್ಮವಾಗಿ ಗಮನಿಸಿದವರ ಅಂಬೋಣ. ಎರಡನೇ ವಿಶ್ವ ಸಮರದ ನಂತರ ಚೆಕ್ ಸರ‍್ಕಾರ ಜರ‍್ಮನರನ್ನು ಇಲ್ಲಿಂದ ಎತ್ತಂಗಡಿ ಮಾಡಿದ್ದು ಇದಕ್ಕೆ ಪ್ರೇರಣೆ.

ಜಕುಬ್ ಹದ್ರವಾನ ಈ ಯೋಜನೆ ಯಶಸ್ಸುಗಳಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ‘ಈ ಬೂತದ ಚರ‍್ಚ್’ ಬಗ್ಗೆ ಸಾಕಶ್ಟು ಮಾತುಗಳು ಹರಿದಾಡಿದವು. ದೇಶಿಯ ಹಾಗೂ ಅಂತಾರಾಶ್ಟ್ರೀಯ ಪತ್ರಿಕೆಗಳಲ್ಲೂ ಇದರ ಬಗ್ಗೆ ಬರಹಗಳು ಪ್ರಕಟವಾಗಿ, ಇದರ ವೀಡಿಯೋಗಳು ವೈರಲ್ ಆದವು. ಲುಕೋವಾದ ಬೂತದ ಚರ‍್ಚನ್ನು ನೋಡಲು ಜನ ಸಾಗರವೇ ಹರಿದು ಬಂತು. ಬಂದವರಲ್ಲಿ ಹಲವಾರು ಸಂದರ‍್ಶಕರು ಚರ‍್ಚಿನ ಪುನರುತ್ತಾನಕ್ಕೆ ಸಾಕಶ್ಟು ದೇಣಿಗೆಯನ್ನು ನೀಡಿದ್ದರು. ದೇಣಿಗೆ ಹಾಗೂ ಚರ‍್ಚನ್ನು ನೋಡಲು ಬಂದವರಿಂದ ಪಡೆದ ಪ್ರವೇಶ ಶುಲ್ಕದ ಸಂಗ್ರಹದಿಂದ ಚರ‍್ಚಿನ ಮೇಲ್ಚಾವಣಿ ಮತ್ತು ಗೋಡೆಗಳನ್ನು ನವೀಕರಿಸಲು ಸಾದ್ಯವಾಯಿತು. ಪುನುರುಜ್ಜೀವನಗೊಂಡ ಈ ಚರ‍್ಚಿನಲ್ಲಿ ಸ್ತಳೀಯರು, ಜಕುಬ್ ಸ್ರುಶ್ಟಿಸಿದ ದೆವ್ವ ಬೂತಗಳ ಪ್ರತಿಮೆಗಳ ಜೊತೆ ಕುಳಿತು ಸಾಮೂಹಿಕ ಪ್ರಾರ‍್ತನೆ ಮಾಡಲು ಪ್ರಾರಂಬಿಸಿದರು. ಒಂದು ಕಾಲದಲ್ಲಿ ಪಾಳು ಬಿದ್ದಿದ್ದ ಈ ಚರ‍್ಚು ಇಂದು ವಿಶ್ವ ಪ್ರಸಿದ್ದಿ ಪಡೆದಿರುವುದರ ಹಿಂದೆ ಕೆಲಸ ನಿರ‍್ವಹಿಸಿದ ಕಾಣದ ಕೈಗಳ ಕೈಚಳಕವಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: amusingplanet.com, moodhunter.com, insider.com, atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: