ಮಾರುಕಟ್ಟೆಯಲ್ಲಿ ರೆಡ್‌ಮಿಯ ಹೊಸ ಪೋನ್ ನ ಮಿಂಚು

– ಆದರ‍್ಶ್ ಯು. ಎಂ.

ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್

ರೆಡ್‌ಮಿ ಇತ್ತೀಚೆಗೆ ನೋಟ್ 10 ಸರಣಿಯಲ್ಲಿ ಹೊಸ ಮೊಬೈಲ್ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್. ಈ ಪೋನ್ ಎಲ್ಲರ ಗಮನ ಸೆಳೆಯಲು ಕಾರಣವೆಂದರೆ ಇದರ ಆಕರ‍್ಶಕ ಸೌಲಬ್ಯಗಳು. ಹಾಗಿದ್ದರೆ ಈ ಪೋನ್ ನಲ್ಲಿ ಅಂತಹ ವಿಶೇಶ ಏನಿದೆ ಅಂತ ನೋಡೋಣ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಮೊಬೈಲ್ 6.67 ಇಂಚಿನ ಪೋನ್ ಆಗಿದ್ದು ಇದರ ಪರದೆ ಪೂರ‍್ತಿ HD+ ಆಗಿದೆ. ಈ ಪರದೆ ಸೂಪರ್ ಅಮೋಲೆಡ್ ಪರದೆ ಆಗಿದೆ. ಇದರಿಂದಾಗಿ ಬಣ್ಣಗಳು ಹಾಗೂ ಮುಕ್ಯವಾಗಿ ಕಪ್ಪು ಬಣ್ಣ ನೈಜವಾಗಿ ಕಾಣುತ್ತದೆ. ಜೊತೆಗೆ ಇಲ್ಲಿ ಪರದೆಯ ಮರುಮೂಡುವ ದರ (refresh rate) 120 Hz ಆಗಿದೆ. ಸಾಮಾನ್ಯವಾಗಿ ಈ ಸೂಪರ್ ಅಮೋಲೆಡ್ ಪರದೆ ಹಾಗೂ 120 Hz ಮರುಮೂಡುವ ದರ ದುಬಾರಿ ಪೋನ್ ಗಳಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ ರೆಡ್‌ಮಿ ಈ ಪೋನ್ ಮೂಲಕ ಇವೆರಡನ್ನೂ ಕಡಿಮೆ ಬೆಲೆಗೆ ಕೊಡುತ್ತಿದೆ. ಜೊತೆಗೆ ಈ ಪೋನ್ ನ ಪರದೆಯ ಹೊಳಪು 1200 ನಿಟ್ಸ್ ವರೆಗೂ ಇದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ನ ಬಹು ಮುಕ್ಯ ಆಕರ‍್ಶಣೆ ಅಂದರೆ ಇದರ ಕ್ಯಾಮೆರಾ. ಈ ಮೊಬೈಲ್ ನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿದ್ದು ಮೊದಲ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಗಳ ಕ್ಯಾಮೆರಾ ಆಗಿದೆ. ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಗಳ ಸೂಪರ್ ಮ್ಯಾಕ್ರೋ ಕ್ಯಾಮೆರಾ ಆಗಿದ್ದು ಇದರ ಮೂಲಕ ಸಣ್ಣ ಸಣ್ಣ ವಸ್ತುಗಳನ್ನು ದೊಡ್ಡದಾಗಿ ಪೋಟೋದಲ್ಲಿ ನೋಡಬಹುದು. ಮೂರನೇ ಕ್ಯಾಮೆರಾ ವೈಡ್ ಆಂಗಲ್ ಕ್ಯಾಮೆರಾ – ಇದರ ಮೂಲಕ 118 ಡಿಗ್ರಿ ಕೋನದವರೆಗೆ ಅಗಲ ಹರವಿನ (panoramic) ಪೋಟೋಗಳನ್ನು ತೆಗೆಯಬಹುದು. ನಾಲ್ಕನೆಯದು 2 ಮೆಗಾ ಪಿಕ್ಸೆಲ್ ಗಳ ಹಿನ್ನೆಲೆಯನ್ನು ಮಸುಕುಗೊಳಿಸುವ ಕ್ಯಾಮೆರಾ. ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಗಳ ಪಂಚ್ ಹೋಲ್ ಸೆಲ್ಪೀ ಕ್ಯಾಮೆರಾ ಇದೆ. ಅಂದರೆ ಸೆಲ್ಪೀ ಕ್ಯಾಮೆರಾವನ್ನು ಪರದೆಯ ಮೇಲಿನ ಮದ್ಯ ಜಾಗದಲ್ಲಿ ಪಂಚ್ ಹೊಡೆದ ಹಾಗಿದೆ. ಹಿಂಬದಿಯನ್ನು ಗಾಜಿನಲ್ಲಿ ಮಾಡಲಾಗಿದ್ದು, ಮುಂಬದಿಯ ಪರದೆಗೆ ಗೋರಿಲ್ಲಾ ಗ್ಲಾಸ್ 5 ಸುರಕ್ಶತೆಯಿದೆ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಮೊಬೈಲ್ ನಲ್ಲಿ ಚಾರ‍್ಜಿಂಗ್ ಗೆ ಟೈಪ್ ಸಿ ಚಾರ‍್ಜಿಂಗ್ ಕಿಂಡಿಯಿದೆ, ಇಯರ್ ಪೋನ್ ಗೆ 3.5 ಮಿ.ಮೀಟರ್ ದನಿ ಕಿಂಡಿಯಿದೆ. ಈ ಮೊಬೈಲನ್ನೇ ರಿಮೋಟ್ ಆಗಿ ಬಳಸಲು ಅವಗೆಂಪು ಬ್ಲಾಸ್ಟರ‍್(ಐಆರ್ ಬ್ಲಾಸ್ಟರ‍್) ಅನುಕೂಲವಿದೆ. ಈ ಪೋನ್ ನಲ್ಲಿ ಬೆರಳಚ್ಚು ಸಂವೇದಕ(fingerprint sensor) ಪೋನ್ ನ ಬಲಬದಿಯಲ್ಲಿ ಪವರ್ ಬಟನ್ ನಲ್ಲಿದೆ. ಮೆಮೋರಿ ಕಾರ‍್ಡ್ ಗೆ ಪ್ರತ್ಯೇಕವಾದ ಜಾಗವಿದ್ದು ಎರಡು 4G ಸಿಮ್ ಗಳನ್ನು ಬಳಸಬಹುದು. ಈ ಮೊಬೈಲ್ ಗೆ ಐಪಿ53 ಪ್ರಮಾಣ ಪತ್ರವಿದ್ದು ದೂಳು ಹಾಗೂ ತುಂತುರು ಹನಿಗಳಿಂದ ಸುರಕ್ಶತೆಯಿದೆ.

ರೆಡ್‌ಮಿಯ ಈ ಪೋನ್ ನಲ್ಲಿ 5,020 mAh ಅಳವುಳ್ಳ ಬ್ಯಾಟರಿ ಇದ್ದು, ಬೇಗ ಚಾರ‍್ಜ್ ಮಾಡುವ ಅನುಕೂಲತೆಯೂ ಇದೆ. ಮೊಬೈಲ್ ಜೊತೆಗೆ ಬೇಗ ಚಾರ‍್ಜ್ ಮಾಡಬಲ್ಲ 33 ವ್ಯಾಟ್ ಚಾರ‍್ಜರ್ ಅನ್ನು ರೆಡ್‌ಮಿ ಕೊಡುತ್ತಿದೆ. ಇದನ್ನು ಬಳಸಿ ಕೇವಲ ಅರ‍್ದ ಗಂಟೆಯಲ್ಲಿ ಈ ಮೊಬೈಲ್ಅನ್ನು 60% ಚಾರ‍್ಜ್ ಮಾಡಬಹುದು ಎಂದು ರೆಡ್‌ಮಿ ತಿಳಿಸಿದೆ. ಈ ಪೋನ್ ಪೂರ‍್ತಿ ಚಾರ‍್ಜ್ ಆಗಲು ಒಂದೂ ಕಾಲು ಗಂಟೆ ಬೇಕಾಗುತ್ತದೆ.

ಯಾವುದೇ ಮೊಬೈಲ್ ನ ಪ್ರದರ‍್ಶನ ಅವಲಂಬಿಸೋದು ಅದರ ಪ್ರೊಸೆಸ್ಸರ್ ಮೇಲೆ. ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಪೋನ್ ನಲ್ಲಿರೋದು ಹೊಸತಾದ ಸ್ನಾಪ್ ಡ್ರಾಗನ್ 732ಜಿ ಪ್ರೊಸೆಸರ್. ಇದು ಗೇಮಿಂಗ್ ಗೆ ಹಾಗೂ ದಿನನಿತ್ಯದ ಎಲ್ಲಾ ಕೆಲಸಗಳನ್ನು ಸುಲಲಿತವಾಗಿ ಮಾಡಬಲ್ಲದು. ರೆಡ್‌ಮಿ ಪ್ರಕಾರ ಈ ಪ್ರೊಸೆಸರ್ ಹಿಂದಿನ ಪ್ರೊಸೆಸರ್ ಗಳಿಗಿಂತ 15% ಹೆಚ್ಚು ವೇಗವಾಗಿದೆ. ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ನಲ್ಲಿರುವ ತಂತ್ರಾಂಶ ಆಂಡ್ರಾಯ್ಡ್ 12ಕ್ಕೆ ಪೂರಕವಾಗಿರುವ ಎಂಐಯುಐ 12 ಆಗಿದೆ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಮೂರು ಬಣ್ಣ ಗಳಲ್ಲಿ ಸಿಗಲಿದೆ. ಅವುಗಳೆಂದರೆ ಹಿಮಶಿಲೆ ನೀಲಿ, ಕಂಚಿನ ಬಣ್ಣ ಹಾಗೂ ಕಡುಗತ್ತಲು ಬಣ್ಣ. ಈ ಮೊಬೈಲ್ ಮೂರು ಏರ‍್ಪಾಡುಗಳಲ್ಲಿ ಸಿಗಲಿದ್ದು, 6 ಜಿಬಿ ರ‍್ಯಾಮ್ ಹಾಗೂ 64 ಜಿಬಿ ಆಂತರಿಕ ಮೆಮೋರಿ, 6 ಜಿಬಿ & 128 ಜಿಬಿ ಹಾಗೂ 8 ಜಿಬಿ & 128 ಜಿಬಿ ಆಂತರಿಕ ಮೆಮೋರಿ ಆಯ್ಕೆಗಳಿವೆ. ಇವುಗಳ ಬೆಲೆ ಕ್ರಮವಾಗಿ ರೂ. 18,999, ರೂ. 19,999 ಮತ್ತು 21,999 ಎಂದು ರೆಡ್‌ಮಿ ಹೇಳಿಕೊಂಡಿದೆ.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಮೊಬೈಲ್ ನ ಒಳ್ಳೆಯ ಅಂಶಗಳೆಂದರೆ 108 ಮೆಗಾಪಿಕ್ಸೆಲ್ ಕ್ಯಾಮೆರಾ, ಸೂಪರ್ ಆಮೋಲೆಡ್ ಪರದೆ, 120 Hz ಮರುಮೂಡುವ ದರ, ಒಳ್ಳೆಯ ಪ್ರೋಸೆಸರ್ ಹಾಗೂ ಇವೆಲ್ಲವನ್ನೂ ಕೊಡುತ್ತಿರುವ ಬೆಲೆ. ಸದ್ಯದ ಮಟ್ಟಿಗೆ 20 ಸಾವಿರ ರೂಪಾಯಿಗಳಲ್ಲಿ ಇಶ್ಟೊಂದು ಅನುಕೂಲತೆಗಳನ್ನು ಕೊಡುತ್ತಿರುವ ಮೊಬೈಲ್ ಬಹುಶಹ ಇದೊಂದೇ. ಆದರೆ ಈ ಪೋನ್ ನ ಬಹು ದೊಡ್ಡ ಕೊರತೆಯೆಂದರೆ ಇಶ್ಟೆಲ್ಲಾ ಕೊಟ್ಟು 5G ಆಯ್ಕೆ ಕೊಡದಿರುವುದು. ಹಾಗಾಗಿ ಇನ್ನೇನು 5G ಬಂದರೆ ಈ ಪೋನ್ಅನ್ನು ಬಿಟ್ಟು ಇನ್ನೊಂದು ಪೋನ್ ಕೊಂಡುಕೊಳ್ಳಬೇಕಾದ ಅನಿವಾರ‍್ಯತೆ ಬರುವ ಸಾದ್ಯತೆಗಳಿವೆ. 5G ಆಯ್ಕೆ ಒಂದನ್ನು ಕೊಟ್ಟಿದ್ದರೆ ಬಜೆಟ್ ದರದಲ್ಲಿ ದುಬಾರಿ ಪೋನ್ ನ ಹೆಚ್ಚೂ ಕಡಿಮೆ ಎಲ್ಲಾ ಆಯ್ಕೆಗಳು ಈ ಮೊಬೈಲ್‌ನಲ್ಲಿ ಸಿಕ್ಕಂತಾಗುತ್ತಿತ್ತು.

ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ನ ಕೊಂಡುಕೊಳ್ಳಬೇಕು ಅಂದುಕೊಳ್ಳುವವರು ಮಾರ‍್ಚ್ 18 ರ ಮದ್ಯಾಹ್ನ 12 ಗಂಟೆಯವರೆಗೆ ಕಾಯಲೇಬೇಕು.

ಈ ರೀತಿ ಕಡಿಮೆ ಬೆಲೆಯಲ್ಲಿ ಒಳ್ಳೊಳ್ಳೆಯ ಅನುಕೂಲತೆಗಳನ್ನು ಕೊಡುವುದರಿಂದ ಗ್ರಾಹಕರಿಗೆ ಬಹಳ ಉಪಯೋಗವಾಗುತ್ತದೆ. ಅನುಕೂಲತೆಗಳು ಹೆಚ್ಚಿದಶ್ಟು ಆಯ್ಕೆಗಳೂ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ರೆಡ್‌ಮಿ ಈ ಪೋನ್ ಮೂಲಕ ಒಂದು ದಿಟ್ಟ ಹೆಜ್ಜೆ ಇಟ್ಟ ಹಾಗೆ ಕಾಣುತ್ತದೆ.

(ಚಿತ್ರ ಸೆಲೆ: gsmarena.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks