ಕುವೆಂಪು ಕವನಗಳ ಓದು – 11ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ನನ್ನ ಬಯಕೆ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ
ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ
ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ
ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆ ಏನೆಂದು ಎಲ್ಲರರಿತಿರಲಿ
ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ
ನರಕವಿವನೊಳಗೊಂಡಿರಲು ನರಕವಿರಲಿ.

ತಮ್ಮ ಮಯ್ ಮನಕ್ಕೆ ಅರಿವು, ಒಲವು, ಆನಂದವನ್ನು ನೀಡುವಂತಹ ರೀತಿಯಲ್ಲಿ ನಿಸರ‍್ಗದ ಚೆಲುವು ಮತ್ತು ಒಳ್ಳೆಯ ಸಾಮಾಜಿಕ ಪರಿಸರವಿರಬೇಕು ಎಂಬ ಬಯಕೆಯನ್ನು ಕವಿಯು ಈ ಕವನದಲ್ಲಿ ಹೇಳಿಕೊಂಡಿದ್ದಾರೆ.

( ಬಯಕೆ=ಆಸೆ/ಹಂಬಲ; ಸದ್ದು+ಇರದ; ಸದ್ದು=ಗದ್ದಲ; ಇರದ=ಇಲ್ಲದ; ಪಸುರ‍್+ಉಡೆಯ; ಪಸುರು=ಹಸುರು ಬಣ್ಣ;  ಉಡೆ=ಬಟ್ಟೆ; ಪಸುರುಡೆ=ಹಸುರು ಬಣ್ಣದ ಉಡುಗೆ;ಮಲೆನಾಡು=ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ; ಬನ=ಕಾಡು; ಪಸುರುಡೆಯ ಮಲೆನಾಡ ಬನ=ಹಚ್ಚಹಸುರಿನ ಪಯಿರು ಪಚ್ಚೆ ಗಿಡಮರಗಳಿಂದ ಕೂಡಿರುವ ಕಾಡು;

ಮೊರೆ=ನೀರು ಹರಿಯುತ್ತಿರುವಾಗ ಅಲೆಗಳ ಉರುಳುವಿಕೆಯಿಂದ ಉಂಟಾದ ಜುಳುಜುಳು ನಾದ; ತೊರೆ+ಎಡೆ+ಅಲ್ಲಿ; ತೊರೆ=ಹೊಳೆ/ನದಿ; ಎಡೆ=ಜಾಗ/ಹತ್ತಿರ; ಗುಡಿಸಲ್+ಒಂದು+ಇರಲಿ; ಗುಡಿಸಲು=ಮರಗಿಡಗಳ ಸೊಪ್ಪುಸದೆಯ ಹೊದಿಕೆಯಿಂದ ಮಾಡಿರುವ ಚಿಕ್ಕ ಮನೆ;

ಗಿಳಿ=ಒಂದು ಬಗೆಯ ಹಕ್ಕಿ; ಗೊರವಂಕ=ಒಂದು ಬಗೆಯ ಹಕ್ಕಿ ; ಕೋಗಿಲೆ+ಗಳ+ಇಂಚರವು; ಕೋಗಿಲೆ=ಒಂದು ಬಗೆಯ ಹಕ್ಕಿ; ಇಂಚರ=ಇಂಪಾದ ದನಿ; ಕಲೆಯುತ+ಅಲೆ+ಅಲೆ+ಆಗಿ; ಕಲೆ=ಜತೆಗೂಡು; ಅಲೆ=ತರಂಗ; ತೇಲು=ನೀರಿನಲ್ಲಿ ತೇಲುವುದು ಇಲ್ಲವೇ ಗಾಳಿಯಲ್ಲಿ ಹಾರಿ ಬರುವುದು; ಬರುತ+ಇರಲಿ;

ಇಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ=ಹಕ್ಕಿಗಳ ಇಂಪಾದ ಗಾನ ಜತೆಗೂಡಿ ವಾಯುಮಂಡಲದಲ್ಲಿ ತೇಲಿ ಬರುತಿರಲಿ;

ಪಸಲೆ=ಹುಲ್ಲುಗಾವಲು; ದನ+ಗಳ್+ಅಂಬಾ; ಅಂಬಾ ಎಂಬ ದನಿ=ಹಸುಗಳ ಕೊರಳೊಳಗಿಂದ ಹೊರಹೊಮ್ಮುವ ದನಿ; ದನ ಕಾಯುವನು=ಗೊಲ್ಲ; ಕೊಳಲ್+ಒಡನೆ; ಕೊಳಲು=ಬಿದಿರಿನ ಕೊಳವೆಯಲ್ಲಿ ಗುಂಡನೆಯ ನಾಲ್ಕಾರು ತೂತುಗಳಿಂದ ತಯಾರಿಸಿರುವ ಒಂದು ಬಗೆಯ ವಾದ್ಯ. ಕೊಳಲಿನ ಒಂದು ಎಡೆಯಿಂದ ಊದಿದ ಉಸಿರು ನಾಲ್ಕಾರು ಎಡೆಗಳಲ್ಲಿ ಇಂಪಾದ ದನಿಯಾಗಿ ಹೊರಹೊಮ್ಮುತ್ತದೆ;

ಸಿರಿ+ಕನ್ನಡ; ಸಿರಿ=ಸಂಪತ್ತು/ಚೆಲುವು; ಸಿರಿಗನ್ನಡ=ಕನ್ನಡಿಗರ ಪಾಲಿಗೆ ಲೋಕದ ಚೆಲುವನ್ನು ಕಾಣುವಂತೆ ಮತ್ತು ಅರಿವಿನ ಸಂಪತ್ತನ್ನು ಪಡೆಯುವಂತೆ ಮಾಡಿರುವ ಕನ್ನಡ ನುಡಿ;

ಕಬ್ಬ=ಕಾವ್ಯ ; ಹಬ್ಬ=ನಿಸರ‍್ಗ ಮತ್ತು ದೇವರ ಹೆಸರಿನಲ್ಲಿ ಒಲವು ನಲಿವಿನಿಂದ ಮಾಡುವ ಉತ್ಸವ/ಆಚರಣೆ; ಸವಿ+ಊಟ+ಇಕ್ಕುತ+ಇರಲಿ+ಎನಗೆ; ಸವಿ=ಸಿಹಿ/ಹಿತವಾದುದು/ಪ್ರಿಯವಾದುದು;

ಸವಿಯೂಟ=ಇದೊಂದು ನುಡಿಗಟ್ಟಾಗಿ ಬಳಕೆಯಾಗಿದೆ. ಮಯ್ ಮನಕ್ಕೆ ಮುದವನ್ನು, ಅರಿವನ್ನು ಮತ್ತು ಒಳಿತನ್ನು ಉಂಟುಮಾಡುವುದು; ಇಕ್ಕುತಿರಲಿ=ನೀಡುತ್ತಿರಲಿ; ಎನಗೆ=ನನಗೆ;

ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ=ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ. ಪ್ರತಿನಿತ್ಯವೂ ಸಿರಿಗನ್ನಡ ಕಾವ್ಯಗಳನ್ನು ಓದುತ್ತ ಕೇಳುತ್ತ, ಲೋಕದ ಚೆಲುವು ಒಲವು ಮತ್ತು ಎಲ್ಲ ಕಾಲಕ್ಕೂ ಸಲ್ಲುವ ಸತ್ಯದ ಸಂಗತಿಗಳನ್ನು ತಿಳಿದು ನನ್ನ ಮನಸ್ಸು ಮುದಗೊಂಡು ಅರಳುವಂತಾಗಲಿ;

ಬಾಂದಳ=ಆಕಾಶ/ಗಗನ; ಬಾಂದಳದಿ ಹಾರಿದರೂ=ಮನದಲ್ಲಿ ಮೂಡುವ ಬಗೆಬಗೆಯ ಕಲ್ಪನೆಗಳ ಲೋಕದಲ್ಲಿ ವಿಹರಿಸುತ್ತಿದ್ದರೂ; ಬುವಿ=ಬೂಮಿ; ಜಾರುತ+ಇಹ; ಜಾರು=ಮೇಲಿನಿಂದ ಕೆಳಕ್ಕೆ ಸರಿ; ಇಹ=ಇರುವ;

ಬುವಿಯಲ್ಲಿ ಜಾರುತಿಹ=ಈ ಬೂಮಿಯ ಮೇಲಣ ಜೀವನದ ಏಳುಬೀಳುಗಳಿಗೆ ತನ್ನನ್ನು ಒಡ್ಡಿಕೊಂಡಿರುವ ಅಂದರೆ ಬದುಕನ್ನು ಪ್ರೀತಿಸುವ;

ರಸಿಕನ್+ಆಗಿ+ಇಹನ್+ಒಬ್ಬ; ರಸಿಕ=ಲೋಕದಲ್ಲಿನ ಚೆಲುವು ಒಲವಿನಲ್ಲಿ ಅಪಾರವಾದ ಆಸಕ್ತಿಯುಳ್ಳವನು; ಇಹನ್=ಇರುವವನು; ಗೆಳೆಯನ್+ಇರಲಿ+ಎನಗೆ; ಗೆಳೆಯ=ಮಿತ್ರ/ಸ್ನೇಹಿತ;

ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ=ಲೋಕದ ಚೆಲುವೆಲ್ಲವನ್ನೂ ಆನಂದದಿಂದ ಸವಿಯುತ್ತ, ಸದಾಕಾಲ ನನ್ನ ಮನಸ್ಸಿನ ಒಳಮಿಡಿತಗಳಿಗೆ ಸಮಾನವಾಗಿ ತುಡಿಯುವಂತಹ ಒಬ್ಬ ಗೆಳೆಯನು ಇರಲಿ;

ಬೈಗು+ಆಗೆ; ಬೈಗು=ಸಂಜೆ; ನಮ್ಮ+ಒಡನೆ; ಗಳಪಿ+ಅಲೆದು+ಅಡ್ಡಾಡೆ; ಗಳಪು=ಮಾತನಾಡು; ಅಲೆದು=ತಿರುಗಿ ; ಅಡ್ಡಾಡು=ಅತ್ತಿತ್ತ ಓಡಾಡು; ಗೋಪಾಲನ್+ಆಗಿರುವ; ಗೋಪಾಲ=ಗೋವುಗಳನ್ನು ಕಾಯುವವನು/ಗೊಲ್ಲ;

ತಿಮ್ಮನ್+ಎನಗೆ+ಇರಲಿ; ತಿಮ್ಮ=ಕವಿಯ ಓರಿಗೆಯವನು. ನಂಟಿನಲ್ಲಿ ಕವಿಗೆ ತಮ್ಮನಾಗಬೇಕು. ಕವಿಗೆ ಚಿಕ್ಕಂದಿನಲ್ಲಿ ಜತೆಗಾರನಾಗಿದ್ದವನು;

ಮೇಲೆ=ಕಾಲ ಉರುಳಿದ ನಂತರ/ವಯಸ್ಸಾದ ನಂತರ; ಬಾಳ್=ಜೀವನ; ನಾನ್+ಅಳಿದು; ಅಳಿ=ಸಾವನ್ನಪ್ಪಿ ; ಮರೆ+ಆಗೆ; ನನ್ನ+ಆಸೆ; ಏನ್+ಎಂದು; ಎಲ್ಲರು+ಅರಿತು+ಇರಲಿ; ಅರಿತು=ತಿಳಿದುಕೊಂಡು; ಸಗ್ಗ+ಇವನ್+ಒಳಗೊಂಡು+ಇರಲು;

ಸಗ್ಗ+ಎನಗೆ+ಇರಲಿ; ನರಕ+ಇವನ್+ಒಳಗೊಂಡು+ಇರಲು; ನರಕ+ಇರಲಿ;

ಸಗ್ಗ/ನರಕ=ಸ್ವರ‍್ಗ ಮತ್ತು ನರಕಗಳು ಮಾನವನ ಮನದ ಕಲ್ಪನೆಯಲ್ಲಿ ಮೂಡಿರುವ ಎರಡು ನೆಲೆಗಳು. ಸ್ವರ‍್ಗದಲ್ಲಿ ಚೆಲುವು ಒಲವು ನಲಿವು ನೆಲೆಗೊಂಡಿದೆ ಮತ್ತು ನರಕದಲ್ಲಿ ನೋವು ಸಂಕಟ ನೆಲೆಗೊಂಡಿದೆ. ಒಳ್ಳೆಯದನ್ನು ಮಾಡಿ ಸತ್ತವರು ಸ್ವರ‍್ಗಕ್ಕೂ ಮತ್ತು ಕೆಟ್ಟದ್ದನ್ನು ಮಾಡಿ ಸತ್ತವರು ನರಕಕ್ಕೂ ಹೋಗುತ್ತಾರೆ ಎಂಬುದು ಜನಮನದ ಕಲ್ಪನೆಯಲ್ಲಿದೆ;

ಇವನ್=ಇವನ್ನು; ಒಳಗೊಂಡಿರಲು=ತನ್ನಲ್ಲಿ ಹೊಂದಿದ್ದರೆ;

ಇವನೊಳಗೊಂಡಿರಲು=ದಟ್ಟವಾದ ಮಲೆನಾಡಿನ ಹಚ್ಚಹಸಿರಿನ ಸಿರಿ, ಜುಳುಜುಳು ನಾದವನ್ನು ಮಾಡುತ್ತ ಹರಿಯುವ ತೊರೆ, ಹಕ್ಕಿಗಳ ಇಂಪಾದ ಹಾಡು, ಗೊಲ್ಲನ ಕೊಳಲಿನ ಗಾನ, ಸಿರಿಗನ್ನಡ ಕಾವ್ಯಗಳ ನವರಸಗಳ ಉಣಿಸಿನ ಸವಿ, ಕವಿಯ ಮನಸ್ಸಿಗೆ ಸಮಾನವಾಗಿ ತುಡಿಯುವಂತಹ ಗೆಳೆಯ ಮತ್ತು ಕಾಡಿನಲ್ಲೆಲ್ಲಾ ತನ್ನೊಡನೆ ಅಲೆದಾಡುತ್ತ ಹರಟುವ ನೆಂಟ ತಿಮ್ಮ ಇರುವಂತಹ ಪರಿಸರ;

ಕವಿಗೆ ಸ್ವರ‍್ಗದ ಬಗ್ಗೆ ಒಲವಾಗಲಿ ಇಲ್ಲವೇ ನರಕದ ಬಗ್ಗೆ ಅಂಜಿಕೆಯಾಗಲಿ ಇಲ್ಲ. ಎಲ್ಲಿ ನಿಸರ‍್ಗದ ಚೆಲುವು, ಸಿರಿಗನ್ನಡದ ಅರಿವು ಮತ್ತು ಒಳ್ಳೆಯ ಗೆಳೆತನದ ನಂಟು ಇದೆಯೋ ಅದೇ ಅವರ ಪಾಲಿಗೆ ಆನಂದದ ನೆಲೆಯಾಗಿದೆ.

‘ನವರಸ ’ ಎಂದರೆ ಒಂಬತ್ತು ಬಗೆಯ ರಸಗಳು. ‘ ರಸ ‘ ಎಂದರೆ ಕಾವ್ಯವನ್ನು ಓದುವಾಗ ಇಲ್ಲವೇ ಕೇಳುವಾಗ ವ್ಯಕ್ತಿಯ ಮನದಲ್ಲಿ ಉಂಟಾಗುವ ಒಳಮಿಡಿತಗಳು. “ ಶ್ರುಂಗಾರ-ಹಾಸ್ಯ-ಕರುಣ-ರೌದ್ರ-ವೀರ-ಬಯಾನಕ-ಬೀಬತ್ಸ-ಅದ್ಬುತ-ಶಾಂತ “ ಎಂಬ ಒಂಬತ್ತು ಬಗೆಯ ರಸಗಳಿವೆ.)

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. chandrakanth patil says:

    ಬದುಕಿನ ಖುಷಿಯ ಕಲ್ಪನೆ ಸಾಗಿತು.

ಅನಿಸಿಕೆ ಬರೆಯಿರಿ: