ತಮಿಳುನಾಡಿನಲ್ಲೊಂದು ಅಚ್ಚರಿಯ ಬಂಡೆ

– .

ಕ್ರಿಶ್ಣನ ಬೆಣ್ಣೆ ಉಂಡೆ

ದಕ್ಶಿಣ ಬಾರತದ ಪ್ರವಾಸಿ ತಾಣಗಳಲ್ಲಿ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ತನ್ನದೇ ಆದ ಪ್ರಸಿದ್ದಿ ಹೊಂದಿದೆ. ಇಲ್ಲಿರುವ ದೈತ್ಯ ಬಂಡೆಯೊಂದು, ಬೌತಶಾಸ್ತ್ರದ ನಿಯಮಗಳನ್ನು ಗಾಳಿಗೆ ತೂರಿದೆಯೆಂದರೆ ಅಚ್ಚರಿಯಾಗುವುದಲ್ಲವೇ? ಇದು ನಿಜ. ತಲೆತಲಾಂತರಗಳಿಂದ ಬೆಟ್ಟದ ಇಳಿಜಾರಿನಲ್ಲಿರುವ ಸಣ್ಣ ಮೇಲ್ಮೈ  ಮೇಲೆ ನಿಂತಿರುವ ಈ ಬಂಡೆಯು, ಜೋರಾಗಿ ಗಾಳಿ ಬೀಸಿದಾಗ, ಯಾವ ಗಳಿಗೆಯಲ್ಲಾದರೂ ಉರುಳುತ್ತದೆಯೇನೋ ಎಂಬ ಸ್ತಿತಿಯಲ್ಲಿದೆ. ಇದೇ ಸ್ತಿತಿಯಲ್ಲಿ ನೂರಾರು, ಸಾವಿರಾರು ವರುಶಗಳಿಂದ ನಿಂತಿರುವ ಈ ಬಂಡೆಯನ್ನು ಸರಿಸಲು, ಅಲುಗಾಡಿಸಲು ನಡೆದ ಎಲ್ಲಾ ಯತ್ನಗಳು ಸೋತಿವೆ. ಈ ಅಸಾಮಾನ್ಯ ವಿದ್ಯಮಾನವನ್ನು ವಿವರಿಸಲು ವಿಜ್ನಾನಿಗಳು ಪಟ್ಟ ಪ್ರಯತ್ನ ಕೂಡ ತ್ರುಪ್ತಿಕರ ಉತ್ತರ ನೀಡಲು ಸೋತಿದೆ. ಇದು ಹೇಗೆ ಸಾದ್ಯ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸ್ತಿರವಾಗಿ ನಿಂತಿರುವ ಈ ಬಂಡೆಯನ್ನೇ ‘ಕ್ರಿಶ್ಣನ ಬೆಣ್ಣೆ ಉಂಡೆ’ ಎಂದು ಕರೆಯುವುದು ವಾಡಿಕೆಯಾಗಿದೆ.

ಸ್ತಳೀಯರು ಈ ಬಂಡೆಯನ್ನು ‘ವಾನ್ ಇರೈ ಕಲ್’ ಎನ್ನುತ್ತಾರೆ. ಇದನ್ನು ಅನುವಾದಿಸಿದರೆ ‘ಆಕಾಶದ ದೇವರ ಕಲ್ಲು’ ಎಂಬ ಹುರುಳಿದೆ. ಈ ದೈತ್ಯ ಬಂಡೆಯ ಅಸ್ತಿತ್ವದ ಬಗ್ಗೆ ಸ್ತಳೀಯರಲ್ಲಿ ಒಂದು ದಂತಕತೆಯಿದೆ. ಅದರಂತೆ, ದೇವರುಗಳೇ ಈ ಬಂಡೆಯನ್ನು ಮಹಾಬಲಿಪುರಂನಲ್ಲಿ ಇರಿಸಿದ್ದು, ಇದರ ಮೂಲ ಉದ್ದೇಶ, ಸ್ತಳೀಯರಿಗೆ ದೇವರು ತನ್ನ ಶಕ್ತಿಯನ್ನು ತೋರಿಸುವುದಾಗಿತ್ತೆಂದು ನಂಬಲಾಗಿದೆ. ಈ ಬಂಡೆಯನ್ನು ‘ಕ್ರಿಶ್ಣನ ಬೆಣ್ಣೆ ಉಂಡೆ’ ಎಂದು ಕರೆಯುವುದರ ಹಿಂದೆ ಸಹ ಒಂದು ಕತೆಯಿದೆ. ಈ ಬಂಡೆಯನ್ನು ವೀಕ್ಶಿಸಲು ಬರುವ ಪ್ರವಾಸಿಗರಿಗೆ ಮಾರ‍್ಗದರ‍್ಶಿಗಳು ’ಆಕಾಶದ ದೇವರ ಕಲ್ಲು’ ಎಂದು ಹೇಳುವ ಬದಲಿಯಾಗಿ ‘ಕ್ರಿಶ್ಣನ ಬೆಣ್ಣೆ ಉಂಡೆ’ ಎಂದು ಹೆಸರಿಸಿ ಅದನ್ನು ಪ್ರಚುರಗೊಳಿಸಿದರು. ಪುರಾಣದಲ್ಲಿ ಹೇಳಿದಂತೆ ಕ್ರಿಶ್ಣನಿಗೆ ಬಾಲ್ಯದಲ್ಲಿ ಬೆಣ್ಣೆಯ ಮೇಲೆ ಎಲ್ಲಿಲ್ಲದ ಮೋಹ. ಕದ್ದಾದರೂ ಬೆಣ್ಣೆಯನ್ನು ತಿನ್ನದಿದ್ದರೆ ಅವನಿಗೆ ಸಮಾದಾನವೇ ಇರುತ್ತಿರಲಿಲ್ಲ. ಹಾಗಾಗಿಯೇ ಅಲ್ಲವೇ ಕ್ರಿಶ್ಣನನ್ನು ‘ಬೆಣ್ಣೆ ಕ್ರಿಶ್ಣ’ ಎನ್ನುವುದು! ಬೆಣ್ಣೆಯನ್ನು ಎಲ್ಲಿ ಮುಚ್ಚಿಟ್ಟಿದ್ದರೂ ಸಹ ಅದನ್ನು ಕದ್ದು ತಿನ್ನುವುದನ್ನು ಆತ ಬಿಡುತ್ತಿರಲಿಲ್ಲ. ಹಾಗೆ ಕದ್ದು ತಿನ್ನುವಾಗ ಬಿದ್ದ ಒಂದು ತುಣಕು ಬೆಣ್ಣೆಯೇ ಈ ದೈತ್ಯ ಬಂಡೆ ಎಂಬುದು ಅವರ ವಾದ. ಒಮ್ಮೆ ಈ ಹೆಸರು ಪ್ರಚಾರಕ್ಕೆ ಬಂದ ನಂತರ, ಈ ದೈತ್ಯ ಬಂಡೆಗೆ ಇದು ಅನ್ವರ‍್ತನಾಮವಾಗಿದೆ.

ಕ್ರಿಶ್ಣನ ಈ ಬೆಣ್ಣೆ ಉಂಡೆ, ಅಂದಾಜು 250 ಟನ್ ತೂಕವಿದೆ. ಆರು ಮೀಟರ್ ಎತ್ತರವಿರುವ ಇದು ಐದು ಮೀಟರ್ ವ್ಯಾಸವನ್ನು ಹೊಂದಿದೆ. ಈ ದೈತ್ಯ ಬಂಡೆ ನಿಂತಿರುವುದು 45ಡಿಗ್ರಿ ಇಳಿಜಾರಿನಲ್ಲಿ ಮತ್ತು ಇದು ಇದರಡಿಯಲ್ಲಿರುವ ಬೆಟ್ಟದ ಬಂಡೆಯ ಮೇಲ್ಮಯ್ನೊಂದಿಗೆ ಅತಿ ಕನಿಶ್ಟ ಪ್ರದೇಶದಲ್ಲಿ ಸಂಪರ‍್ಕ ಹೊಂದಿದೆ. ಇಂತಹ ಅನಿಶ್ಚಿತ ಸ್ತಿತಿಯಲ್ಲಿದ್ದರೂ ಅದು ಉರುಳಿ ಬಿದ್ದಿಲ್ಲ. ಅಶ್ಟೇ ಏಕೆ? ಅದನ್ನು ಬಲವಂತದಿಂದ ಶಕ್ತಿ ಉಪಯೋಗಿಸಿ ತಳ್ಳಿದರೂ ಸಹ ಅಲುಗಾಡದೆ ಹಾಗೇ ನಿಂತಿದೆ.ಬಹುಶಹ ಈ ದೈತ್ಯ ಬಂಡೆ ನೈಸರ‍್ಗಿಕವಾಗಿಯೇ ರೂಪುಗೊಂಡಿರಬೇಕು. ಅದು ಅದರಡಿಯಲ್ಲಿರುವ ಕಲ್ಲಿನ ಬಂಡೆಯೊಂದಿಗೆ ಸಂಯೋಜನೆಗೊಂಡಿರಬೇಕು. ಹಾಗಾಗಿಯೇ ಅದು ಬಲವಾಗಿ ತನ್ನಡಿಯಲ್ಲಿರುವ ಕಲ್ಲಿನ ಜೊತೆ ಬೆಸೆದು ಹೋಗಿದೆ. ಈ ಕಾರಣದಿಂದ ಯಾವ ಶಕ್ತಿಯೂ ಅದನ್ನು ಅಲುಗಾಡಿಸದಾಗಿದೆ.

ಬೆಟ್ಟಕ್ಕೆ ಬೆಸೆದುಕೊಂಡಿರುವ ಈ ಕ್ರಿಶ್ಣನ ಬೆಣ್ಣೆ ಉಂಡೆಯನ್ನು ಅಲುಗಾಡಿಸುವ ಪ್ರಯತ್ನಗಳು ಕ್ರಿ.ಶ. 7ನೇ ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಈ ನಿಟ್ಟಿನ್ನಲ್ಲಿ, ಅಂದಿನ ಪಲ್ಲವ ರಾಜ ನರಸಿಂಹವರ‍್ಮನ ಕಾಲದಲ್ಲಿ ಮೊದಲ ಪ್ರಯತ್ನ ನಡೆಯಿತು ಮತ್ತು ಶಿಲ್ಪಿಗಳಲ್ಲದ ಶಿಲ್ಪಗಳಿಂದ ಈ ಬಂಡೆಯನ್ನು ರಕ್ಶಿಸುವ ಸಲುವಾಗಿ, ನರಸಿಂಹವರ‍್ಮನು ಬಂಡೆಯನ್ನು ಬೇರೆಡೆಗೆ ಸಾಗಿಸಲು ಪ್ರಯತ್ನ ಪಟ್ಟು ಸೋತನು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಆರ‍್ತರ್ ಲಾಲೆ ಎಂಬಾತನು 1908ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಗವರ‍್ನರ್ ಆಗಿದ್ದನು. ಈ ಬಂಡೆಯೇನಾದರೂ ಅಕಸ್ಮಾತ್ ಉರುಳಿ ಬಿದ್ದರೆ, ಬೆಟ್ಟದ ಬುಡದಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ನಾಶವಾಗುತ್ತವೆ ಎಂಬ ಆತಂಕವು ಆರ‍್ತರ‍್ನಲ್ಲಿ ಮನೆ ಮಾಡಿದ್ದುದ್ದರಿಂದ ಆತನು ಈ ದೈತ್ಯ ಬಂಡೆಯನ್ನು ಆ ಸ್ತಳದಿಂದ ಬೇರ‍್ಪಡಿಸಲು ಉದ್ದೇಶಿಸಿದ್ದನಂತೆ. ತನ್ನ ಈ ಯೋಜನೆಯನ್ನು ಕಾರ‍್ಯಗತಗೊಳಿಸಲು  ಈತ ಬಂಡೆಗೆ ಏಳು ಆನೆಗಳನ್ನು ಕಟ್ಟಿ ಅದನ್ನು ಎಳೆಸಲು ಪ್ರಯತ್ನ ಮಾಡಿ ಸೋತಿರುವುದು ಇತಿಹಾಸವಾಗಿದೆ. ಅಂದಿನಿಂದ ಇಂದಿನವರೆವಿಗೂ ಆ ಬಂಡೆ ಅಲ್ಲಾಡದೇ ಹಾಗೇ ನಿಂತಿದ್ದು, ಬೆಟ್ಟದ ಬುಡದಲ್ಲಿ ವಾಸಿಸುತ್ತಿರುವ ಕುಟುಂಬಗಳು ಇಂದಿಗೂ ಸುರಕ್ಶಿತವಾಗಿವೆ.

ಈ ದೈತ್ಯ ಬಂಡೆಯು ನಿಂತಿರುವ ಆದಾರದ ಮೇಲೆ ‘ತಾಂಜಾವೂರು ಬೊಮ್ಮಯ್’ ಸ್ರುಶ್ಟಿಯಾಯಿತು ಎನ್ನಲಾಗಿದೆ. ‘ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು’ ಕ್ಯಾತಿಯ ಹಾಡಿನಲ್ಲಿ ಕಾಣುವ ಬೊಂಬೆಗಳು ತಯಾರಾಗಿದ್ದು ಕ್ರಿ,ಶ.10ನೇ ಶತಮಾನದ ಉತ್ತರಾರ‍್ದ ಮತ್ತು 11ನೇ ಶತಮಾನದ ಆರಂಬದಲ್ಲಿ ಆಳ್ವಿಕೆ ನಡೆಸಿದ ರಾಜ ರಾಜ ಚೋಳನ್ ಅವರಿಂದ. ಅದಕ್ಕೆ ಈ ಕ್ರಿಶ್ಣನ ಬೆಣ್ಣೆಯ ಉಂಡೆಯೇ ಸ್ಪೂರ‍್ತಿ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

 

( ಚಿತ್ರ ಮತ್ತು ಮಾಹಿತಿ ಸೆಲೆ:  ancient-origins.net , amusingplanet.com , mysteryofIndia.comwikimedia.org  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: