ನಗು ನಗುತಾ ನಲಿ…

– ಸಂಜೀವ್ ಹೆಚ್. ಎಸ್.

ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ ನಗು ಮೂಡುತ್ತದೆ. ನಗುವಿನಿಂದಲೇ ಆರೋಗ್ಯ ಉತ್ತಮಗೊಳ್ಳುತ್ತದೆ ಎಂಬುದು ಅಕ್ಶರಶಹ ಸತ್ಯವಾದ ಮಾತು. ನಮ್ಮ ಬದುಕಿನ ಹಲವು ಜಟಿಲ ಸಮಸ್ಯೆಗಳನ್ನು ತಿಳಿಗೊಳಿಸುವ ಸ್ವಬಾವ ನಗುವಿಗೆ ಇದೆ. ನಾವು ಆಕರ‍್ಶಿತರಾಗುವುದು ನಗುವಿನಿಂದಲೇ.

ನಗುನಗುತ್ತಾ ಬಾಳುವುದು ಯಾರಿಗೆ ಇಶ್ಟ ಇಲ್ಲ ಹೇಳಿ? ಎಲ್ಲರೂ ನಗುತ್ತಾ ಬಾಳಲು ಇಚ್ಚಿಸುತ್ತಾರೆ ಆದರೆ ಕಶ್ಟಕಾರ‍್ಪಣ್ಯಗಳು ಎದುರಾದಾಗ ನಗು, ಮುಕದಿಂದ ಮಾಯವಾಗುತ್ತದೆ.‌ ಕಶ್ಟ ಮತ್ತು ಸುಕ ಜೀವನದ ಒಂದೇ ನಾಣ್ಯದ ಎರಡು ಮುಕಗಳು,‌ ಇದು ಎರಡು ಮುಕಗಳಿಗೆ ಸದಾ ಮುಗುಳ್ನಗೆ ಎಂಬ ಆಬರಣವನ್ನು ತೊಡಿಸಿದಾಗ ನಾಣ್ಯ ಸಮತೋಲನದ‌‌ ಬವ್ಯ ಆನಂದವನ್ನು ಅನುಬವಿಸುತ್ತದೆ.

ಮಾನವನ ಮುಕ ಲಕ್ಶಣ ನಗುವಿನಿಂದ ಹೊರಹೊಮ್ಮುತ್ತದೆ. ನಗು ಮುಕದ ಸೌಂದರ‍್ಯವನ್ನು ಹೆಚ್ಚಿಸುತ್ತದೆ, ನಗುವೆಂಬ ಆಬರಣಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಗುವಿನ ಹೊನಲಿಲ್ಲದ ಬದುಕು ಬೆಂಗಾಡಿನಂತೆ. ಮಾನವನ ‌ಸೌಂದರ‍್ಯವನ್ನು ದುಪ್ಪಟ್ಟು ಮಾಡುವ ಒಂದೇ ಒಂದು ಆಬರಣವೇನಾದರೂ ಇದ್ದರೆ ಅದು ನಗು ಮಾತ್ರ.‌ ಜೀವನದಲ್ಲಿ ಸುಕ-ದುಕ್ಕ, ನೋವು-ನಲಿವುಗಳ ನಡುವೆ ನಗಬಲ್ಲವರಿಗೆ ಬೂಮಿಯಲ್ಲಿಯೇ ಸ್ವರ‍್ಗವನ್ನು ನಿರ‍್ಮಿಸಬಲ್ಲ ಶಕ್ತಿಯನ್ನು ನೀಡುವುದು ನಗು.

ಕಹಿ ವಾತಾವರಣವನ್ನು ಸಿಹಿಯಾಗಿಸುವ ಅದ್ಬುತ ಶಕ್ತಿ ನಗುವಿಗಿದೆ. ನಗು ಮಾನಸಿಕ ಕ್ಶೋಬೆಗಳಿಗೆ ಪರಿಹಾರ.‌ ನಗುವಿನ ಗುಣ ಸ್ವಬಾವ ಆಚರಣೆ ವ್ಯಕ್ತಿಯಿಂದ ವ್ಯಕ್ತಿಗೆ ವಿಬಿನ್ನ, ವಿಚಿತ್ರವೂ ಹೌದು. ತಮಾಶೆ ಮಾಡುವಾಗ, ಚರ‍್ಚೆ ಮಾಡುವಾಗ, ಏನನ್ನೋ ನೆನೆಸಿಕೊಂಡಾಗ, ವಿಚಿತ್ರವಾದ ಮುಕಚರ‍್ಯೆಯನ್ನು ನೋಡಿದಾಗ ನಗುವು ತನಗೆ ತಾನೇ ಹೊರ ಹೊಮ್ಮುತ್ತದೆ.

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।

ಡಿ.ವಿ.ಜಿ.ಯವರ ಕಗ್ಗದ ಸಾಲುಗಳಲ್ಲಿ ಅಪಾರ ಅರ‍್ತವಿದೆ. ಸುಂದರವಾದ ನಗು ನಮ್ಮನ್ನು ಹೊಸ ಕೆಲಸಗಳಿಗೆ ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಪ್ರೇರೇಪಿಸುತ್ತಿದೆ.‌ ವೈದ್ಯಕೀಯವಾಗಿಯೂ ಅದಕ್ಕೆ ಅದರದ್ದೇ ಪ್ರಾಮುಕ್ಯತೆಯಿದ್ದು, ಎಂತಹ ಪರಿಸ್ತಿತಿಯಲ್ಲೂ ಮನತುಂಬಿ ನಕ್ಕಾಗ ಎಲ್ಲ ನೋವುಗಳು ಮರೆಯಾಗುತ್ತವೆ. ಇಂದು ಕೆಲಸದ ಒತ್ತಡ, ಸಮಯದ ಅಬಾವ ಮೊದಲಾದವುಗಳಿಂದಾಗಿ ಜನರು ಒಂದು ಕಡೆ ಸೇರಲು ಮಾತನಾಡಲು ನಗಲು ಪರಿತಪಿಸುವಂತಾಗಿದೆ. ಕೆಲವು ಮೆದುಳಿನ ಕೇಂದ್ರಗಳು ಸಾಮಾನ್ಯ ದೈಹಿಕ ಆರೋಗ್ಯ ಮತ್ತು ವಾಸ್ತವದ ಸಕಾರಾತ್ಮಕ ಗ್ರಹಿಕೆಗೆ ಕಾರಣವೆಂದು ವೈದ್ಯರು ಕಂಡುಹಿಡಿದಿದ್ದಾರೆ. ಈ ಕೇಂದ್ರಗಳ ಪ್ರಚೋದನೆಯು ಅನೇಕ ರೋಗಗಳನ್ನು ಗುಣಪಡಿಸುತ್ತದೆ.

ಮೆದುಳಿನಲ್ಲಿ ಒತ್ತಡ ಉಂಟುಮಾಡುವ ಕಾರ‍್ಟಿಸೋನ್ ಮತ್ತು ಅಡ್ರಿನಾಲಿನ್ ಹಾರ‍್ಮೋನುಗಳ ಉತ್ಪಾದನೆಯನ್ನು ನಗು ತಡೆಯುತ್ತದೆ. ಸಿರೊಟೋನಿನ್ ಮತ್ತು ಡೋಪಮೈನ್ ಮತ್ತು ಸಂತೋಶದ ಹಾರ‍್ಮೋನ್ – ಎಂಡಾರ‍್ಪಿನ್ ನರಪ್ರೇಕ್ಶಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಕಿನ್ನತೆ ಮತ್ತು ದೀರ‍್ಗಕಾಲದ ಆಯಾಸದಿಂದ ಬಳಲುತ್ತಿರುವ ಜನರಿಗೆ ಪ್ರಮುಕ ಔಶದಿ. ನಗುವಿನಿಂದ ಅಂಗಾಂಶಗಳು ಮತ್ತು ಅಂಗಗಳಿಗೆ ರಕ್ತ ಪೂರೈಕೆ ಹೆಚ್ಚಾಗುತ್ತದೆ, ರಕ್ತದೊತ್ತಡ ಸಾಮಾನ್ಯ ಸ್ತಿತಿಗೆ ಬರುತ್ತದೆ, ಆರೋಗ್ಯ ಮತ್ತು ಮನಸ್ತಿತಿ ಸುದಾರಿಸುತ್ತದೆ.

ನಗು ಬಹಳ ಪರಿಣಾಮಕಾರಿ ಜಿಮ್ನಾಸ್ಟಿಕ್ಸ್. ನಗೆಯ ಸಮಯದಲ್ಲಿಯ ಉಸಿರಾಡುವಿಕೆಯು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಗುವಾಗ ಶ್ವಾಸಕೋಶವು ಗಾಳಿಯಿಂದ ಸಂಪೂರ‍್ಣವಾಗಿ ಮುಕ್ತವಾಗುತ್ತದೆ. ಗಾಳಿ ವಿನಿಮಯವು ಮೂರರಿಂದ ನಾಲ್ಕು ಬಾರಿ ವೇಗಗೊಳ್ಳುತ್ತದೆ, ಕೊಲೆಸ್ಟ್ರಾಲ್, ತಲೆನೋವು ಕಡಿಮೆಯಾಗುತ್ತದೆ. ನಗುತ್ತಿರುವಾಗ, ಮುಕದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ, ಇದು ಮೆದುಳಿಗೆ ರಕ್ತ ಪೂರೈಕೆಗೆ ನೇರವಾಗಿ ಸಂಬಂದಿಸಿದೆ. ನಾವು ನಗುವಾಗ, 80 ಸ್ನಾಯು ಗುಂಪುಗಳು ಕಾರ‍್ಯನಿರ‍್ವಹಿಸುತ್ತವೆ: ಬುಜಗಳು ಚಲಿಸುತ್ತವೆ; ಕುತ್ತಿಗೆ, ಮುಕ ಮತ್ತು ಬೆನ್ನಿನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ, ಡಯಾಪ್ರಾಮ್ ಕಂಪಿಸುತ್ತದೆ, ನಾಡಿ ಚುರುಕುಗೊಳ್ಳುತ್ತದೆ. ನಗು ದೀರ‍್ಗಕಾಲದ ಉತ್ಸಾಹಕ್ಕೆ ಕಾರಣವಾಗುತ್ತದೆ.

ತಮ್ಮ ದಿನಚರಿಯನ್ನು, ಕಾರ‍್ಯವೈಕರಿಯನ್ನು, ಒತ್ತಡದಿಂದ ಜಟಿಲಗೊಳಿಸಿಕೊಳ್ಳದೆ, ತಮ್ಮ ಸಾಮರ‍್ತ್ಯಕ್ಕನುಗುಣವಾಗಿ ಸರಳಗೊಳಿಸಿಕೊಂಡಾಗ ಮಾತ್ರ ನಮ್ಮಿಂದ ಸಹಜ ನಗುವನ್ನು ತರಬಹುದು.

“ನಗುವುದಕ್ಕೆ ಜಿಪುಣತನವೇಕೆ? ನೋವ ನುಂಗಿ ನಗುವ ಚೆಲ್ಲಿ ಬಿಡೋಣ”

(ಚಿತ್ರ ಸೆಲೆ: freeimageslive.co.uk)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.