ಕುವೆಂಪು ಕವನಗಳ ಓದು – 15ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಪೊದೆಯ ಹಕ್ಕಿ ಎದೆಯ ಹಕ್ಕಿ

ಟುವ್ವಿ ಟುವ್ವಿ ಟುವ್ವಿ ಟುವ್ವಿ
ಎಂದು ಹಕ್ಕಿ ಕೂಗಿತು
ಅದರ ಹಾಡು ಬಂದು ಎನ್ನ
ಎದೆಯ ಗೂಡ ತಾಗಿತು

ಟುವ್ವಿ ಟುವ್ವಿ ಟುವ್ವಿ ಟುವ್ವಿ
ಎಂದು ಎನ್ನ ಎದೆಯೊಳೊಂದು
ಹಕ್ಕಿ ಕೂಗತೊಡಗಿತು
ಆಗ ಎನ್ನ ಎದೆಯೊಳೊಂದು
ಹಕ್ಕಿ ಇರುವುದೆಂಬುದನ್ನು
ನಾನು ಗೊತ್ತು ಹಿಡಿದೆನು

ಟುವ್ವಿ ಟುವ್ವಿ ಟುವ್ವಿ ಟುವ್ವಿ
ಎಂದು ಹಕ್ಕಿ ಹಾಡಿತು
ಎದೆಯ ಹಕ್ಕಿ ಟುವ್ವಿ ಟುವ್ವಿ
ಎನ್ನುತದನು ಕೂಡಿತು

ಪೊದೆಯ ಮೇಲೆ ಇದ್ದ ಹಕ್ಕಿ
ಮೋಹಿಸೆದೆಯ ಹಕ್ಕಿಯ
ಟುವ್ವಿ ಟುವ್ವಿ ಟುವ್ವಿ ಟುವ್ವಿ
ಎಂದು ಮತ್ತೆ ಹಾಡಿತು

ಎದೆಯ ಹಕ್ಕಿ ಟುವ್ವಿ ಎಂದು
ಮತ್ತೆ ಅದನು ಕೂಡಿತು
ಒಂದು ಬೇಡಿತೊಂದು ಕಾಡಿ
ತೊಂದು ಸುಮ್ಮನಾಡಿತು

ಎದೆಯ ದನಿಯ ಪೊದೆಯ ಉಲಿಯ
ಆಲಿಸುತ್ತ ನಲಿದೆನು
ಎದೆಯ ಹಕ್ಕಿಗಾಗಿ ಪೊದೆಯ
ಹಕ್ಕಿಯನ್ನು ಒಲಿದೆನು

ಹಕ್ಕಿಯ ಕೊರಳಿನಿಂದ ಹೊರಹೊಮ್ಮುತ್ತಿರುವ ಇಂಪಾದ ದನಿಯನ್ನುಕೇಳಕೇಳುತ್ತಿದ್ದಂತೆಯೇ ಕವಿಯ ಮನದಲ್ಲಿ ಉಂಟಾದ ಒಳಮಿಡಿತಗಳನ್ನು ಈ ಕವನದಲ್ಲಿ ಹೇಳಲಾಗಿದೆ.

( ಪೊದೆ=ದಟ್ಟವಾಗಿ ಬೆಳೆದು ಒಂದಕ್ಕೊಂದು ಹೆಣೆದುಕೊಂಡಂತಿರುವ ಮರಗಿಡಬಳ್ಳಿಗಳ ಗುಂಪು; ಹಕ್ಕಿ=ರೆಕ್ಕೆಪುಕ್ಕಗಳನ್ನು ಹೊಂದಿ ಆಕಾಶದಲ್ಲಿ ಹಾರಾಡಬಲ್ಲ ಒಂದು ಬಗೆಯ ಜೀವಿ; ಪೊದೆಯ ಹಕ್ಕಿ=ನಿಸರ‍್ಗದ ಮಡಿಲಲ್ಲಿ ಪೊದೆಯೊಂದರ ಮೇಲೆ ಕುಳಿತಿರುವ ಹಕ್ಕಿ; ಎದೆ=ಮನಸ್ಸು; ಎದೆಯ ಹಕ್ಕಿ=’ ಕವಿಯ ಮನಸ್ಸು’ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ;

ಟುವ್ವಿ ಟುವ್ವಿ ಟುವ್ವಿ ಟುವ್ವಿ=ಹಕ್ಕಿಯ ಕೊರಳಿನಿಂದ ಹೊರಹೊಮ್ಮುತ್ತಿರುವ ದನಿಯ ನಾದ ಮತ್ತು ಲಯದ ಸ್ವರೂಪವನ್ನು ಸೂಚಿಸಲು ಈ ಪದಗಳನ್ನು ಬಳಸಲಾಗಿದೆ; ಕೂಗು=ದನಿ ಮಾಡು; ಹಾಡು=ನುಡಿ ರಚನೆಯನ್ನು ರಾಗ ಮತ್ತು ಲಯಕ್ಕೆ ಅನುಗುಣವಾಗಿ ಹೇಳುವುದು; ಅದರ ಹಾಡು=ಹಕ್ಕಿಯ ಕೊರಳಿನಿಂದ ಹೊರಹೊಮ್ಮುತ್ತಿರುವ ದನಿಯು ಇಂಪಾದ ಹಾಡಿನ ರೂಪದಲ್ಲಿ ಕೇಳಿಬರುತ್ತಿದೆ; ಎನ್ನ=ನನ್ನ; ಗೂಡು=ನೆಲೆ; ತಾಗು=ಮುಟ್ಟು;

ಎನ್ನ ಎದೆಯ ಗೂಡ ತಾಗಿತು=ನನ್ನ ಮನಸ್ಸನ್ನು ಮುಟ್ಟಿತು; ಎದೆ+ಒಳ್+ಒಂದು; ಎನ್ನ ಎದೆಯೊಳೊಂದು ಹಕ್ಕಿ=ಕವಿಯ ಮನಸ್ಸಿನಲ್ಲಿ ಉಂಟಾಗುವ ಒಳಮಿಡಿತಗಳನ್ನು ಸೂಚಿಸಲು ಈ ನುಡಿಗಳು ರೂಪಕವಾಗಿ ಬಳಕೆಯಾಗಿವೆ;

ಎನ್ನ ಎದೆಯೊಳೊಂದು ಹಕ್ಕಿ ಕೂಗತೊಡಗಿತು=ಪೊದೆಯ ಹಕ್ಕಿಯ ಹಾಡಿನ ದನಿಯನ್ನು ಕೇಳುತ್ತಿದ್ದಂತೆಯೇ, ಅದರಿಂದ ಪ್ರೇರಣೆಗೊಂಡು ಕವಿಯ ಮನದಲ್ಲಿ ಬಹುಬಗೆಯ ಒಳಮಿಡಿತಗಳು ಮೂಡತೊಡಗಿದವು; ಆಗ=ಹಕ್ಕಿಯ ದನಿಯನ್ನು ಕೇಳುತ್ತಿರುವ ಗಳಿಗೆಯಲ್ಲಿ; ಇರುವುದು+ಎಂಬುದನ್ನು; ಗೊತ್ತು ಹಿಡಿದೆನು=ಅರಿತುಕೊಂಡೆನು;

ಎನ್ನ ಎದೆಯೊಳೊಂದು ಹಕ್ಕಿ ಇರುವುದೆಂಬುದನ್ನು ನಾನು ಗೊತ್ತು ಹಿಡಿದೆನು=ನಿಸರ‍್ಗದಲ್ಲಿನ ನೋಟ ಮತ್ತು ತನ್ನ ಜೀವನದ ಪ್ರಸಂಗಗಳಿಂದ ಉಂಟಾದ ಒಳಮಿಡಿತಗಳನ್ನು ಹೊರಹಾಕಲು ಪೊದೆಯ ಹಕ್ಕಿಯು ಹೇಗೆ ದನಿ ಮಾಡುತ್ತಿದೆಯೋ ಅಂತೆಯೇ ಮಾನವ ಜೀವಿಯಾದ ನಾನು ಕೂಡ ಜಗತ್ತಿನಲ್ಲಿ ಕಾಣುವ ನೋಟಗಳನ್ನು ಮತ್ತು ನನ್ನ ಬದುಕಿನ ಒಳಮಿಡಿತಗಳನ್ನು ನುಡಿಗಳ ಮೂಲಕ ಹೇಳಿಕೊಳ್ಳಬಲ್ಲೆನು ಎಂಬುದನ್ನು ಅರಿತುಕೊಂಡೆನು;

ಎದೆಯ ಹಕ್ಕಿ=ಕವಿಯ ಮನಸ್ಸು; ಎನ್ನುತ+ಅದನು; ಅದನು=ಹಕ್ಕಿಯ ಹಾಡನ್ನು; ಕೂಡು=ಸೇರು; ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡಿತು ಎದೆಯ ಹಕ್ಕಿ ಟುವ್ವಿ ಟುವ್ವಿ ಎನ್ನುತದನು ಕೂಡಿತು=ಪೊದೆಯ ಹಕ್ಕಿಯ ಹಾಡಿನ ಜತೆ ಕವಿಯ ಮನದ ಹಾಡು ಜತೆಗೂಡಿತು; ಮೋಹಿಸಿ+ಎದೆಯ; ಮೋಹ=ಒಲವು/ಮನಸೋಲುವುದು; ಮೋಹಿಸಿ=ಮೋಹಗೊಂಡು; ಮತ್ತೆ=ಇನ್ನೊಮ್ಮೆ;

ಪೊದೆಯ ಮೇಲೆ ಇದ್ದ ಹಕ್ಕಿ ಮೋಹಿಸೆದೆಯ ಹಕ್ಕಿಯ ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಮತ್ತೆ ಹಾಡಿತು=ಇದೊಂದು ಕವಿ ಕಲ್ಪನೆ. ಕವಿಯ ಮನದ ಒಳಮಿಡಿತಗಳ ದನಿಯನ್ನು ಆಲಿಸಿ ಮೋಹಗೊಂಡ ಪೊದೆಯ ಹಕ್ಕಿಯು ಕವಿಯ ಮನದ ಹಕ್ಕಿಯೊಡನೆ ಒಲವಿನಿಂದ ಜತೆಗೂಡಿ ಟುವ್ವಿ ಟುವ್ವಿ ಎಂದು ಹಾಡತೊಡಗಿತು;

ಎದೆಯ ಹಕ್ಕಿ ಟುವ್ವಿ ಎಂದು ಮತ್ತೆ ಅದನು ಕೂಡಿತು=ಈಗ ಪೊದೆಯ ಹಕ್ಕಿ ಮತ್ತು ಕವಿ ಮನದ ಹಕ್ಕಿ ಜತೆಗೂಡಿ ಹಾಡತೊಡಗಿದವು;

ಬೇಡಿತು+ಒಂದು; ಬೇಡು=ಯಾಚಿಸು/ಕೇಳು; ಕಾಡಿತು+ಒಂದು; ಕಾಡು=ಬಯಸಿದ್ದನ್ನು ಪಡೆಯಲೇಬೇಕೆಂಬ ಹಂಬಲಕ್ಕೆ ಒಳಗಾಗುವುದು; ಸುಮ್ಮನೆ+ಆಡಿತು; ಒಂದು ಬೇಡಿತೊಂದು ಕಾಡಿತೊಂದು ಸುಮ್ಮನಾಡಿತು=ಕವಿಯ ಮನಸ್ಸು ಪೊದೆಯ ಹಕ್ಕಿಯಂತೆಯೇ ತಾನೂ ಹಾಡಬೇಕೆಂದು ಹಂಬಲಿಸುತ್ತಿದೆ; ಎದೆಯ ದನಿ=ಕವಿಯ ಮನಸ್ಸಿನಲ್ಲಿ ತುಡಿಯುತ್ತಿರುವ ಒಳಮಿಡಿತ; ಉಲಿ=ದನಿ/ಕೂಗು; ಪೊದೆಯ ಉಲಿ=ಪೊದೆಯ ಹಕ್ಕಿಯ ಹಾಡು; ಆಲಿಸು=ಮನವಿಟ್ಟು ಕೇಳು/ತಲ್ಲೀನನಾಗಿ ಕೇಳುವುದು; ನಲಿ=ಆನಂದಿಸು;

ಎದೆಯ ದನಿಯ ಪೊದೆಯ ಉಲಿಯ ಆಲಿಸುತ್ತ ನಲಿದೆನು=ಈ ಸನ್ನಿವೇಶದಲ್ಲಿ ಕವಿಯು ತನ್ನ ಮನದಲ್ಲಿ ಉಂಟಾದ ಒಳಮಿಡಿತಗಳನ್ನು ಮತ್ತು ಪೊದೆಯ ಹಕ್ಕಿಯ ದನಿಯನ್ನು ಕೇಳುತ್ತ ಆನಂದಗೊಂಡನು;

ಒಲಿ=ಮೆಚ್ಚು/ಬಯಸು/ಮೋಹಗೊಳ್ಳು; ಎದೆಯ ಹಕ್ಕಿಗಾಗಿ ಪೊದೆಯ ಹಕ್ಕಿಯನ್ನು ಒಲಿದೆನು=ಹಕ್ಕಿಯಂತೆಯೇ ಹಾಡುತ್ತ ನನ್ನ ಮನದೊಳಗಿನ ಒಳಮಿಡಿತಗಳನ್ನು ನುಡಿಯ ರೂಪದಲ್ಲಿ ಹೊರಹೊಮ್ಮಿಸಬೇಕೆಂಬ ಬಯಕೆಯಿಂದ ಪೊದೆಯ ಹಕ್ಕಿಯನ್ನು ಮೆಚ್ಚಿಕೊಂಡೆನು.)

(ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: