ಪಂಪ ಬಾರತ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆಯ ಆಶ್ವಾಸದ 73 ರ ಗದ್ಯದಿಂದ 80 ರ ಗದ್ಯದ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

 ಪಾತ್ರಗಳು

ಅಂಬೆ – ಕಾಶಿರಾಜನ ಹಿರಿಯ ಮಗಳು. ಕಾಶಿರಾಜನಿಗೆ ಅಂಬೆ-ಅಂಬಿಕೆ-ಅಂಬಾಲೆ ಎಂಬ ಹೆಸರಿನ ಮೂವರು ಹೆಣ್ಣು ಮಕ್ಕಳಿದ್ದರು.
ಶಂತನು – ಹಸ್ತಿನಾವತಿಯ ರಾಜ.
ಸತ್ಯವತಿ – ರಾಣಿ, ಶಂತನು ರಾಜನ ಹೆಂಡತಿ.
ಚಿತ್ರಾಂಗದ ಮತ್ತು ವಿಚಿತ್ರವೀರ್ಯ – ಶಂತನು ಮತ್ತು ಸತ್ಯವತಿಯ ಇಬ್ಬರು ಗಂಡು ಮಕ್ಕಳು.
ಗಾಂಗೇಯ – ಶಂತನು ಮತ್ತು ಗಂಗಾದೇವಿಯ ಮಗ.
ಸಾಲ್ವಲ – ಅಂಬೆಯನ್ನು ಮದುವೆಯಾಗಲು ಬಯಸಿ ಅವಳಿಗೆ ಚಿಕ್ಕಂದಿನಲ್ಲಿ ಉಂಗುರವನ್ನು ತೊಡಿಸಿದ್ದ ಒಬ್ಬ ರಾಜಕುಮಾರ
ಪರಶುರಾಮ – ಗಾಂಗೇಯನ ವಿದ್ಯಾಗುರುಗಳು.
ದಾಶರಾಜ – ಸತ್ಯವತಿಯ ಸಾಕು ತಂದೆ.

ಅಂಬೆ ಪ್ರಸಂಗ

ಶಂತನುವುಮ್ ಸತ್ಯವತಿಯುಮ್ ಅನ್ಯೋನ್ಯ ಆಸಕ್ತಚಿತ್ತರಾಗಿ ಕೆಲವು ಕಾಲಮ್ ಇರ್ಪನ್ನೆಗಮ್; ಅವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಮ್ ಪ್ರತಾಪಿಗಳುಮ್ ಆಗಿ ಬಳೆಯುತ್ತ ಇರ್ಪನ್ನೆಗಮ್;

ಶಂತನು ಪರಲೋಕ ಪ್ರಾಪ್ತನ್ ಆದೊಡೆ ಗಾಂಗೇಯನ್ ತದುಚಿತ ಪರಲೋಕ ಕ್ರಿಯೆಗಳಮ್ ಮಾಡಿ, ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕೆ ಅಧಿಷ್ಠಾನಮ್ ಕಟ್ಟುವಂತೆ ಚಿತ್ರಾಂಗದಂಗೆ ಪಟ್ಟಮನ್ ಕಟ್ಟಿ ರಾಜ್ಯಮ್ಗೆ ಯಿಸುತ್ತುಮ್ ಇರ್ಪನ್ನೆಗಮ್;

ಒರ್ವ ಗಂಧರ್ವನೊಳೆ ದ್ವಂದ್ವಯುದ್ಧಮಮ್ ಪೊಣರ್ಚೆ ಚಿತ್ರಾಂಗದನ್ ಕುರುಕ್ಷೇತ್ರಮನ್ ಕಳಮ್ ಪೇಳ್ದು ಕಾದಿ ಸತ್ತೊಡೆ, ಗಾಂಗೇಯನ್ ವಿಚಿತ್ರವೀರ್ಯನನ್ ಧರಾಭಾರ ಧುರಂಧರನನ್ ಮಾಡಿ…

ನಿಜಭುಜ ಪ್ರಾರಂಭದಿನ್ ಸಕಲ ಕ್ಷತ್ರಿಯ ಮೋಹದಿನ್ ಪೋಗಿ ರಾಜಸುತರೊಳ್ ತಾಗಿ ಕಾದಿ ಕೆಲರ್ ನೊಂದೊಡೆ, ತನ್ನ ಅಂಕದ ಒಂದು ಉಗ್ರಸಾಯಕದಿನ್ ನಾಯಕರನ್ ಪಡಲ್ವಡಿಸುತುಮ್, ಅಂಬೆ ಅಂಬಿಕೆ ಅಂಬಾಲೆ ಎಂಬ ಬಾಲೆಯರನ್ ಅಂದು ತಾನ್ ತಂದನ್ ಭೀಷ್ಮನ್ ಏನ್ ಯಶೋಭಾಗಿಯೋ…

ಅಂತು ತಂದು ತನ್ನ ತಮ್ಮನ್ ವಿಚಿತ್ರವೀರ್ಯಂಗೆ ಆ ಮೂವರ್ ಕನ್ನೆಯರನ್ ಪಾಣಿಗ್ರಹಣಮ್ ಗೆಯ್ವಾಗಳ್ ಎಲ್ಲರಿನ್ ಪಿರಿಯಾಕೆ…

ಅಂಬೆ: ನಿನ್ನನ್ ಅಲ್ಲದೆ ಪೆಱರನ್ ಒಲ್ಲೆನ್.

(ಎಂದು ಇರ್ದೊಡೆ ಮತ್ತಿನ ಇರ್ವರುಮನ್ ಮದುವೆಯನ್ ಮಾಡಿ ಗಾಂಗೇಯನ್ ಅಂಬೆಯನ್ ಇಂತು ಎಂದನ್ )

ಗಾಂಗೇಯ : ಅತ್ತ ಸುರೇಶ್ವರ ಆವಸಥಮ್ …ಇತ್ತ ಮಹೀತಳಮ್…ಉತ್ತ ಪನ್ನಗೋದಾತ್ತ ಸಮಸ್ತ ಲೋಕಮ್ ಅಱಿದಂತಿರೆ ಪೂಣ್ದ ಎನಗೆ, ಅಂಗಜೋತ್ಪತ್ತಿ ಸುಖಕ್ಕೆ ಸೋಲಲ್ ಆಗದು. ಪುರುಷವ್ರತಮ್ ಅಳಿಗುಮ್. ಪಂಕಜಾನನೇ, ಅಬ್ಬೆ ಎಂಬ ಮಾತನ್ ಈಗಳ್ ಅತ್ತಿಗೆ ಎಂದು ಎನಲ್ ಎನಗೆ ಏನ್ ಅಕ್ಕುಮೊ .

( ಎಂದು ನುಡಿದ ಗಾಂಗೇಯನ ನುಡಿಯೊಳ್ ಅವಸರಮನ್ ಪಸರಮನ್ ಪಡೆಯದೆ ತನಗೆ ಕಿಱಿಯಂದು ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಪೋಗಿ…)

ಅಂಬೆ : ನೀನ್ ಎನ್ನನ್ ಕೈಕೊಳವೇಳ್ಕುಮ್.

( ಎಂದೊಡೆ ಆತನ್ ಇಂತು ಎಂದನ್….)

ಸಾಲ್ವಲ : ಸರಿತ್ಸುತನ್ ಆ ಬಂಡಣದೊಳ್ ಎನ್ನನ್ ಓಡಿಸಿ ನಿನ್ನನ್ ಕೊಂಡುಯ್ದನ್. ಅದಱಿನ್ ಆನುಮ್ ಪೆಂಡತಿಯೆನ್ ಆದೆನ್. ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರ್ ಅಬಲೇ..

( ಎಂದು ಸಾಲ್ವಲನ್ ಪರಿಭವದೊಳ್ ಆದ ತನ್ನ ಸಿಗ್ಗಮ್ ಸಾಲ್ವಿನಮ್ ಉಂಟುಮಾಡಿದೊಡೆ, ಆತನ ಮನಮನ್ ಒಡಂಬಡಿಸಲಾಱದೆ ಪರಶುರಾಮನಲ್ಲಿಗೆ ಪೋಗಿ..)

ಅಂಬೆ : ಎನ್ನ ಸ್ವಯಂವರದೊಳ್ ನೆರೆದ ಅರಸು ಮಕ್ಕಳ್ ಎಲ್ಲರುಮನ್ ಭೀಷ್ಮನ್ ಓಡಿಸಿ, ಎನ್ನನ್ ಕೊಂಡುಬಂದು ಮದುವೆಯನ್ ನಿಲಲ್ ಒಲ್ಲದೆ ಅಟ್ಟಿ ಕಳೆದೊಡೆ , ಎನ್ನ ದೆವಸಮುಮ್ ಜವ್ವನಮುಮ್ ಅಡವಿಯೊಳಗೆ ಪೂತ ಪೂವಿನಂತೆ ಕಿಡಲ್ ಈಯದೆ, ಆತನನ್ ಎನ್ನನ್ ಪಾಣಿಗ್ರಹಣಮ್ ಗೆಯ್ವಂತು ಮಾಡು, ಮಾಡಲಾಱದೊಡೆ ಕಿಚ್ಚಮ್ ದಯೆಗೆಯ್ವುದು ..

( ಎಂದು ಅಂಬೆ ಕಣ್ಣ ನೀರನ್ ತುಂಬೆ..)

ಪರಶುರಾಮ : ನಯಮನ್ ನಂಬುವೊಡೆ ಎನ್ನ ಪೇಳ್ವ ಸತಿಯನ್ ಕೈಕೊಂಡನ್. ಮೀಱಿ ಮೇಣ್ ದುರ್ಣಯಮನ್ ನಚ್ಚುವೊಡೆ, ಎನ್ನನ್ ಉಗ್ರ ರಣದೊಳ್ ಮಾರ್ಕೊಂಡನ್ . ಶಂತನು ಸುತಂಗೆ ಆರಯೆ ಕಜ್ಜಮ್ ಪೆಱತಿಲ್ಲ . ಎನ್ನನ್ ಕರಮ್ ನಂಬಿದ ಅಂಬೆಯೊಳ್ ಎನ್ನ ಅಂಬೆ ವಲಮ್ ವಿವಾಹವಿಧಿಯನ್ ಮಾಳ್ಪೆನ್. ಪೆಱರ್ ಮಾಳ್ಪರೇ.

( ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವನ್ ಗಾಂಗೇಯನ್ ಕೇಳ್ದು ಇದಿರ್ ವಂದು ಕನಕ ರಜತ ಪಾತ್ರಂಗಳೊಳ್ ಅರ್ಘ್ಯಮನ್ ಕೊಟ್ಟು ಪೊಡಮಟ್ಟು…)

ಗಾಂಗೇಯ : ಬೆಸನ್ ಏನ್ 

ಪರಶುರಾಮ: ಪೇಳ್ವೆನ್… ಎನ್ನ ಬೆಸನನ್ ಕೈಕೊಳ್ವುದು. ಪಸುರ್ವಂದರ್ ಪಸೆಯೆಂಬ ಇವನ್ ಸಮೆದು ಈ ಕನ್ನೆಯನ್ ನೀನ್ ಕೈಕೊಳ್. ಚಿತ್ತದೊಳ್ ಕೊಳಲ್ಕಾಗದು ಎಂಬ ಎಸಕಮ್ ಉಳ್ಳೊಡೆ ಈಗಳ್ ಇವರ್ ಎಮ್ಮ ಆಚಾರ್ಯರ್ ಎಂದು ಓವದೆ, ಮಾಣದೆ ಏರ್ವೆಸನನ್ ಕೈದುಗೊಳ್ . ಎರಡಱೊಳ್ ಮೆಚ್ಚಿತ್ತು ಏನ್ ಎಂದಪಯ್.

(ಎಂದು ನುಡಿದ ಪರಶುರಾಮನ ನುಡಿಯನ್ ಗಾಂಗೇಯನ್ ಕೇಳ್ದು…)

ಗಾಂಗೇಯ : ಎನಗೆ ವೀರಶ್ರೀಯುಮ್ ಕೀರ್ತಿಶ್ರೀಯುಮ್ ಅಲ್ಲದೆ ಉಳಿದ ಪೆಂಡಿರ್ ಮೊಱೆಯಲ್ಲ. ನೀವ್ ಇದನ್ ಏಕೆ ಆಗ್ರಹಮ್ ಗೆಯ್ವಿರಿ.

 ಪರಶುರಾಮ : ಎಂತುಮ್ ಎಮ್ಮೊಳ್ ಕಾದಲ್ವೇಳ್ವುದು 

(ಎಂದು ಕೆಳರ್ದು ಅಂದು ಉಗ್ರ ರಣಾಗ್ರಹ ಪ್ರಣಯದಿಂದ ಆಗಳ್ ಕುರುಕ್ಷೇತ್ರಮನ್ ಕಳಮ್ ಪೇಳ್ದು , ಇರ್ವರುಮ್ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂಕುಲದಿಂದ ಒರ್ವರನ್ ಒರ್ವರ್ ಎಚ್ಚು, ನಿಜ ಪೀಠಾಂಭೋಜದಿನ್ ಬ್ರಹನ್ ಉಚ್ಚಳಿಪನ್ನಮ್ ಈ ತ್ರೈಲೋಕ್ಯದೊಳ್ ಪಿರಿದೊಂದು ಸಂಕಟಮನ್ ಮಾಡಿದರ್. ಅತರ್ಕ್ಯನ್ ವಿಕ್ರಾಂತನ್ ಭುಜಬಲನ್ ಅಸಾಮಾನ್ಯನ್ ಅಧಿಕನ್ ಪ್ರತಾಪನ್. ಪೋಗು, ಈತಂಗೆ ಎಣೆಯೆ ದಿವಿಜರ್…ವಾಯುಪಥದೊಳ್ ಶಿತಾಸ್ತ್ರಂಗಳ್ ಪೊಂಕಮ್ ಕಿಡಿಸೆ ಸುಗಿದನ್ ಭಾರ್ಗವನ್…

 ಇದೇನ್ ಪ್ರತಿಜ್ಞಾ ಗಾಂಗೇಯಂಗೆ ಅದಿರದೆ ಇದಿರ್ ನಿಲ್ವನ್ನರ್ ಒಳರೇ. ಅಂತು ಗಾಂಗೇಯನೊಳ್ ಪರಶುರಾಮನ್ ಕಾದಿ ಬಸವಳಿದು ಉಸಿರಲಪ್ಪೊಡಮ್ ಆರದೆ ಮೂರ್ಛೆವೋಗಿರ್ದನನ್ ಕಂಡು ಕೋಪಾಗ್ನಿಯಿಂದಮ್ ಅಂಬೆಯೆಂಬ ದಂಡುರುಂಬೆ)

ಅಂಬೆ : ( ಗಾಂಗೇಯನಿಗೆ )ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆ.

(ಎಂದು ಅಗ್ನಿಶರೀರೆಯಾಗಿ, ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ, ಕಾರಣಾಂತರದೊಳ್ ಶಿಖಂಡಿಯಾಗಿರ್ದಳ್.)

==============================================

ಪದ ವಿಂಗಡಣೆ ಮತ್ತು ತಿರುಳು

ಶಂತನು+ಉಮ್; ಉಮ್=ಊ; ಸತ್ಯವತಿ+ಉಮ್; ಅನ್ಯೋನ್ಯ=ಒಬ್ಬರು ಮತ್ತೊಬ್ಬರೊಡನೆ; ಆಸಕ್ತಚಿತ್ತರ್+ಆಗಿ; ಆಸಕ್ತಚಿತ್ತರ್=ಮೋಹಗೊಂಡವರು; ಇರ್ಪ+ಅನ್ನೆಗಮ್; ಇರ್ಪ=ಇರುವ; ಅನ್ನೆಗಮ್=ಆ ವರೆಗೆ/ಆ ತನಕ;

ಶಂತನುವುಮ್ ಸತ್ಯವತಿಯುಮ್ ಅನ್ಯೋನ್ಯ ಆಸಕ್ತಚಿತ್ತರಾಗಿ ಕೆಲವು ಕಾಲ ಇರ್ಪನ್ನೆಗಮ್=ಶಂತನೂ ಸತ್ಯವತಿಯೂ ಪರಸ್ಪರ ಒಲವು ನಲಿವಿನಿಂದ ಜತೆಗೂಡಿ ಕೆಲಕಾಲ ಬಾಳುತ್ತಿರಲು;

ಬೇಟ=ಬಯಕೆ/ಆಸೆ; ಕಂದಲ್+ಗಳ್+ಅಂತೆ; ಕಂದಲ್=ಮೊಳಕೆ/ಚಿಗುರು; ಅಂತೆ=ಹಾಗೆ; ವಿಚಿತ್ರವೀರ್ಯರ್+ಎಂಬ; ಎಂಬ=ಎನ್ನುವ;

ಅವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳು ಪುಟ್ಟಿ=ಅವರ ಮೋಹದ ಕುಡಿಗಳಂತೆ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯರೆಂಬ ಇಬ್ಬರು ಮಕ್ಕಳು ಹುಟ್ಟಿ;

ಮಹಾ=ದೊಡ್ಡ; ಪ್ರಚಂಡರ್+ಉಮ್; ಪ್ರತಾಪಿ+ಗಳ್+ಉಮ್; ಪ್ರಚಂಡ=ಬಲಶಾಲಿ; ಪ್ರತಾಪಿ=ಕೀರ‍್ತಿವಂತ; ಬಳೆ=ಬೆಳೆ;

ಮಹಾ ಪ್ರಚಂಡರುಮ್ ಪ್ರತಾಪಿಗಳುಮ್ ಆಗಿ ಬಳೆಯುತ್ತ ಇರ್ಪನ್ನೆಗಮ್=ಹೆಚ್ಚಿನ ಬಲಶಾಲಿಗಳಾಗಿಯೂ ಕೀರ‍್ತಿವಂತರಾಗಿಯೂ ಬೆಳೆಯುತ್ತಿರಲು;

ಪರಲೋಕ=ವ್ಯಕ್ತಿಯು ಸತ್ತ ನಂತರ ಅವನ ಆತ್ಮ ಇಲ್ಲವೇ ಜೀವ ಮತ್ತೊಂದು ಲೋಕಕ್ಕೆ ಹೋಗುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ; ಪ್ರಾಪ್ತ=ಹೊಂದುವುದು; ಆದೊಡೆ=ಆದರೆ;

ಶಂತನು ಪರಲೋಕ ಪ್ರಾಪ್ತನ್ ಆದೊಡೆ=ಶಂತನು ಸಾವನ್ನಪ್ಪಲು;

ತದುಚಿತ=ಆಗ ಮಾಡಬೇಕಾದ; ಪರಲೋಕ ಕ್ರಿಯೆ=ವ್ಯಕ್ತಿಯು ಸತ್ತ ನಂತರ ಅವನ ಜೀವಕ್ಕೆ ಪರಲೋಕದಲ್ಲಿ ಸದ್ಗತಿಯು ದೊರೆಯಲೆಂದು ಮಾಡುವ ಆಚರಣೆಗಳು;

ತದುಚಿತ ಪರಲೋಕ ಕ್ರಿಯೆಗಳಮ್ ಮಾಡಿ=ಸಾವಿನ ನಂತರದ ಕ್ರಿಯೆಗಳನ್ನು ಮಾಡಿ;

ಮುನ್ನೆ=ಈ ಮೊದಲು; ನುಡಿವಳಿ+ಎಂಬ; ನುಡಿವಳಿ=ಕೊಟ್ಟ ಮಾತು/ವಾಗ್ದಾನ; ಪ್ರಾಸಾದ=ಉಪ್ಪರಿಗೆ/ಮಹಡಿ; ಅಧಿಷ್ಠಾನ=ತಳಹದಿ/ಅಡಿಪಾಯ;

ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕೆ ಅಧಿಷ್ಠಾನಮ್ ಕಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಮ್ ಕಟ್ಟಿ=ದೊಡ್ಡ ಕಟ್ಟಡಕ್ಕೆ ಅಡಿಪಾಯವನ್ನು ಹಾಕುವಂತೆ ಎಂಬುದು ಒಂದು ರೂಪಕವಾಗಿ ಬಳಕೆಯಾಗಿದೆ. ತನ್ನ ತಂದೆಯಾದ ಶಂತನುವಿಗೆ ಸತ್ಯವತಿಯನ್ನು ಮದುವೆ ಮಾಡಿಸುವಾಗ “ಶಂತನು ದೊರೆಯ ಸಾವಿನ ನಂತರ ತಾನು ಪಟ್ಟಕ್ಕೆ ಬರದೆ, ಸತ್ಯವತಿಯ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಿಗೆ ರಾಜ್ಯದ ಪಟ್ಟವನ್ನು ಕಟ್ಟುತ್ತೇನೆ“ ಎಂದು ಸತ್ಯವತಿಯ ತಂದೆಯಾದ ದಾಶರಾಜನಿಗೆ ನೀಡಿದ್ದ ವಾಗ್ದಾನವನ್ನು ಕಾರ‍್ಯರೂಪಕ್ಕೆ ತರುವಂತೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ;

ಗೆಯ್=ಮಾಡು; ಗೆಯಿಸುತ್ತ+ಉಮ್;

ರಾಜ್ಯಮ್ ಗೆಯಿಸುತ್ತುಮ್ ಇರ್ಪನ್ನೆಗಮ್=ಚಿತ್ರಾಂಗದನಿಂದ ರಾಜ್ಯದ ಆಡಳಿತವನ್ನು ನಡೆಸುತ್ತಿರಲು;

ಒರ್ವ=ಒಬ್ಬ; ದ್ವಂದ್ವಯುದ್ಧ=ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಕಾಳಗ; ಪೊಣರ್=ಉಂಟಾಗು; ಕಳಂ+ಪೇಳ್ದು; ಕಳ=ರಣರಂಗ; ಪೇಳ್ದು=ಹೇಳಿ;

ಒರ್ವ ಗಂಧರ್ವನೊಳೆ ದ್ವಂದ್ವಯುದ್ಧಮಮ್ ಪೊಣರ್ಚೆ ಚಿತ್ರಾಂಗದನ್ ಕುರುಕ್ಷೇತ್ರಮಮ್ ಕಳಂಬೇಳ್ದು ಕಾದಿ ಸತ್ತೊಡೆ=ಚಿತ್ರಾಂಗದನಿಗೆ ಒಬ್ಬ ಗಂದರ‍್ವನೊಡನೆ ಕಾದಾಡುವ ಸನ್ನಿವೇಶ ಉಂಟಾಗಲು, ಕುರುಕ್ಶೇತ್ರವನ್ನು ರಣರಂಗವನ್ನಾಗಿ ಗೊತ್ತುಪಡಿಸಿ ಹೋರಾಡುವಾಗ ಚಿತ್ರಾಂಗದನು ಸಾವನ್ನಪ್ಪಲು;

ಧರಾಭಾರ=ನಾಡನ್ನು ಆಳುವ ಜವಾಬ್ದಾರಿ; ಧುರಂಧರ=ತನ್ನ ಪಾಲಿನ ಕೆಲಸವನ್ನು ಚೆನ್ನಾಗಿ ಮಾಡುವವನು;

ಗಾಂಗೇಯನ್ ವಿಚಿತ್ರವೀರ್ಯನನ್ ಧರಾಭಾರ ಧುರಂಧರನಮ್ ಮಾಡಿ=ಗಾಂಗೇಯನು ವಿಚಿತ್ರವೀರ‍್ಯನನ್ನು ರಾಜ್ಯದ ಆಡಳಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತಹ ವ್ಯಕ್ತಿಯನ್ನಾಗಿ ರೂಪಿಸಿ;

ನಿಜ=ತನ್ನ; ಭುಜ=ತೋಳು; ಪ್ರಾರಂಭ=ಮೊದಲು ಮಾಡುವಿಕೆ ;

ನಿಜಭುಜ ಪ್ರಾರಂಭದಿನ್=ತನ್ನ ತೋಳ್ಬಲವನ್ನು ತೋರಿಸುವ ಉದ್ದೇಶದಿಂದ;

ಸಕಲ ಕ್ಷತ್ರಿಯ ಮೋಹದಿನ್= ವೀರನೆಂಬ ಕೀರ‍್ತಿಯನ್ನು ಪಡೆಯಬೇಕೆಂಬ ಕ್ಶತ್ರಿಯ ಸಹಜವಾದ ಆಸೆಯಿಂದ;

ಪೋಗಿ ತಾಗಿ ಕಾದಿ ಕೆಲರ್ ನೊಂದಡೆ=ತನ್ನ ಹೆಣ್ಣುಮಕ್ಕಳ ಮದುವೆಗಾಗಿ ಕಾಶಿರಾಜನು ಅಣಿಗೊಳಿಸಿದ್ದ ಸ್ವಯಂವರ ಮಂಟಪಕ್ಕೆ ಹೋಗಿ, ಅಲ್ಲಿದ್ದವರ ಮೇಲೆ ಆಕ್ರಮಣ ಮಾಡಿ ಕಾದಾಡುವಾಗ ಕೆಲವರು ನೋವಿಗೀಡಾದರೆ;

ಅಂಕ=ಹೆಸರು; ಉಗ್ರ=ಪ್ರಚಂಡ; ಸಾಯಕ=ಬಾಣ; ಪಡಲ್ವಡಿಸು=ಚೆಲ್ಲಾಪಿಲ್ಲಿಯಾಗಿ ಚದುರುವಂತೆ ಮಾಡುವುದು;

ತನ್ನ ಅಂಕದ ಒಂದು ಉಗ್ರಸಾಯಕದಿನ್ ರಾಜಸುತರೊಳ್ ನಾಯಕರನ್ ಪಡಲ್ವಡಿಸುತುಮ್=ಗಾಂಗೇಯನು ತನ್ನ ಹೆಸರುಳ್ಳ ಒಂದು ಹರಿತವಾದ ಬಾಣವನ್ನು ಪ್ರಯೋಗಿಸಿ ರಾಜಕುಮಾರರಲ್ಲಿ ನಾಯಕರಾಗಿದ್ದವರನ್ನು ಚೆಲ್ಲಾಪಿಲ್ಲಿಯಾಗಿ ದಿಕ್ಕೆಟ್ಟು ಓಡುವಂತೆ ಮಾಡಿ;

ಅಂಬೆ ಅಂಬಿಕೆ ಅಂಬಾಲೆ ಎಂಬ ಬಾಲೆಯರನ್ ಅಂದು ತಾನ್ ತಂದನ್=ಅಂಬೆ ಅಂಬಿಕೆ ಅಂಬಾಲೆ ಎಂಬ ಹೆಸರಿನ ಕಾಶಿರಾಜನ ಮೂವರು ಹೆಣ್ಣುಮಕ್ಕಳನ್ನು ಹಸ್ತಿನಾವತಿಗೆ ಕರೆತಂದನು;

ಭೀಷ್ಮನ್ ಏನ್ ಯಶೋಭಾಗಿಯೋ=ಅಬ್ಬಾ! ಬೀಶ್ಮನು ಎಂತಹ ದೊಡ್ಡ ಕೀರ‍್ತಿಗೆ ಪಾತ್ರನಾಗಿದ್ದಾನೆ;

ಪಾಣಿ=ಕಯ್; ಗ್ರಹಣ=ಹಿಡಿಯುವುದು; ಪಾಣಿಗ್ರಹಣ=ಮದುವೆ; ಗೆಯ್ವ+ಆಗಳ್; ಗೆಯ್ವಾಗಳ್=ಮಾಡಲು ತೊಡಗಿದಾಗ.

ಅಂತು ತಂದು ತನ್ನ ತಮ್ಮನ್ ವಿಚಿತ್ರವೀರ್ಯಂಗೆ ಆ ಮೂವರ್ ಕನ್ನೆಯರನ್ ಪಾಣಿಗ್ರಹಣ ಗೆಯ್ವಾಗಳ್=ಆ ರೀತಿ ಕರೆತಂದ ಮೂವರು ತರುಣಿಯರನ್ನು ತನ್ನ ತಮ್ಮ ವಿಚಿತ್ರವೀರ‍್ಯನೊಡನೆ ಮದುವೆಯನ್ನು ಮಾಡಲು ಮುಂದಾದಾಗ;

ಎಲ್ಲರಿನ್=ಎಲ್ಲರಿಗಿಂತ; ಪಿರಿದು+ಆಕೆ; ಪಿರಿದು=ದೊಡ್ಡದು; ಪಿರಿಯಾಕೆ=ಹಿರಿಯಳು/ದೊಡ್ಡವಳು; ಪೆಱರನ್=ಬೇರೆಯವರನ್ನು; ಒಲ್ಲೆನ್=ಒಪ್ಪುವುದಿಲ್ಲ; ಇರ್ದಡೆ=ಇದ್ದರೆ;

ಎಲ್ಲರಿನ್ ಪಿರಿಯಾಕೆ ನಿನ್ನನ್ ಅಲ್ಲದೆ ಪೆಱರನ್ ಒಲ್ಲೆನ್ ಎಂದು ಇರ್ದಡೆ=ಆ ಮೂವರು ಹೆಣ್ಣುಮಕ್ಕಳಲ್ಲಿ ಎಲ್ಲರಿಗಿಂತ ದೊಡ್ಡವಳಾದ ಅಂಬೆಯು ಗಾಂಗೇಯನನ್ನು ಕುರಿತು “ನಿನ್ನನ್ನಲ್ಲದೆ ನಾನು ಬೇರೆಯವರನ್ನು ಮದುವೆಯಾಗುವುದಿಲ್ಲ” ಎಂದು ಹೇಳಲು;

ಮತ್ತಿನ=ಉಳಿದ;

ಮತ್ತಿನ ಇರ್ವರುಮನ್ ಮದುವೆಯನ್ ಮಾಡಿ=ಇನ್ನುಳಿದ ಅಂಬಿಕೆ ಮತ್ತು ಅಂಬಾಲೆಯರನ್ನು ವಿಚಿತ್ರವೀರ‍್ಯನೊಡನೆ ಮದುವೆಯನ್ನು ಮಾಡಿ;

ಗಾಂಗೇಯನ್ ಅಂಬೆಯನ್ ಇಂತು ಎಂದನ್=ಗಾಂಗೇಯನು ಅಂಬೆಗೆ ಈ ರೀತಿ ಹೇಳಿದನು;

ಅತ್ತ=ಆ ಕಡೆ; ಸುರೇಶ್ವರ=ದೇವೇಂದ್ರ; ಆವಸಥ=ಮನೆ; ಸುರೇಶ್ವರ ಆವಸಥ=ದೇವಲೋಕ; ಇತ್ತ=ಈಕಡೆ; ಮಹೀತಳ=ಬೂಲೋಕ; ಉತ್ತ=ಮತ್ತೊಂದು ಕಡೆಯಲ್ಲಿ; ಪನ್ನಗ+ಉದಾತ್ತ; ಪನ್ನಗ=ಹಾವು/ನಾಗ; ಉದಾತ್ತ=ಉನ್ನತವಾದ/ದೊಡ್ಡದಾದ; ಪನ್ನಗೋದಾತ್ತ ಲೋಕ=ದೊಡ್ಡದಾಗಿರುವ ನಾಗಲೋಕ; ಸಮಸ್ತ=ಎಲ್ಲವೂ/ಎಲ್ಲರೂ; ಅರಿದ+ಅಂತೆ+ಇರೆ; ಅಱಿದಂತಿರೆ=ಗೊತ್ತಾಗುವಂತೆ; ಪೂಣ್=ಪ್ರಮಾಣ ಮಾಡು/ಮಾತು ಕೊಡು;

ಅತ್ತ ಸುರೇಶ್ವರ ಆವಸಥಮ್ ಇತ್ತ ಮಹೀತಳಮ್ ಉತ್ತ ಪನ್ನಗೋದಾತ್ತ ಲೋಕಮ್ ಸಮಸ್ತ ಅಱಿದಂತಿರೆ ಪೂಣ್ದ ಎನಗೆ=ಆ ಕಡೆ ದೇವಲೋಕ, ಈ ಕಡೆ ಬೂಲೋಕ, ಮತ್ತೊಂದೆಡೆಯಲ್ಲಿರುವ ನಾಗಲೋಕಗಳೆಲ್ಲಕ್ಕೂ ಗೊತ್ತಾಗುವಂತೆ ವಾಗ್ದಾನವನ್ನು ನೀಡಿರುವ ನನಗೆ;

ಅಂಗಜ+ಉತ್ಪತ್ತಿ; ಅಂಗಜ=ಕಾಮ/ಮದನ; ಉತ್ಪತ್ತಿ=ಹುಟ್ಟುವಿಕೆ; ಅಂಗಜೋತ್ಪತ್ತಿ ಸುಖ=ಹೆಣ್ಣು ಗಂಡು ಜತೆ ಗೂಡಿ ಕಾಮದ ನಂಟನ್ನು ಪಡೆದಾಗ ಉಂಟಾಗುವ ಆನಂದ; ಸೋಲ್+ಅಲ್; ಸೋಲ್=ಮೋಹಗೊಳ್ಳುವುದು/ಪರವಶವಾಗುವುದು;

ಅಂಗಜೋತ್ಪತ್ತಿ ಸುಖಕ್ಕೆ ಸೋಲಲ್ ಆಗದು=ಕಾಮದ ಆನಂದವನ್ನು ಪಡೆಯುವುದಕ್ಕಾಗಿ ಮೋಹಗೊಳ್ಳುವುದು ಸರಿಯಲ್ಲ;

ವ್ರತ=ವ್ಯಕ್ತಿಯು ತಾನಾಗಿಯೇ ಕಯ್ಗೊಡಿರುವ ನಡವಳಿಕೆ; ಪುರುಷವ್ರತ=ಹೆಣ್ಣಿನೊಡನೆ ಕಾಮದ ನಂಟನ್ನು ಹೊಂದಬಾರದೆಂಬ ಸಂಕಲ್ಪ; ಅಳಿ=ನಾಶವಾಗು/ಹಾನಿಗೊಳ್ಳು;

ಪುರುಷವ್ರತ ಅಳಿಗುಮ್=ಹೆಣ್ಣಿನ ಸಂಗವನ್ನು ನಿರಾಕರಿಸಿರುವ ನನ್ನ ಸಂಕಲ್ಪವು ಹಾಳಾಗುತ್ತದೆ;

ಪಂಕಜ+ಆನನೆ; ಪಂಕಜ=ತಾವರೆ; ಆನನ=ಮುಕ/ಮೊಗ; ಪಂಕಜಾನನೆ=ತಾವರೆಯಂತಹ ಮೊಗವುಳ್ಳವಳು; ಅಬ್ಬೆ=ತಾಯಿ; ಅಳ್ತಿ+ಗೆ>ಅಳ್ತಿಗೆ>ಅತ್ತಿಗೆ; ಅಳ್ತಿ=ಪ್ರೀತಿ; ಅತ್ತಿಗೆ=ಪ್ರೀತಿ ಪಾತ್ರಳಾದವಳು/ಒಲಿದವಳು; ಅಕ್ಕುಮೊ=ಆಗುವುದೋ;

ಪಂಕಜಾನನೇ ಅಬ್ಬೆ ಎಂಬ ಮಾತನ್ ಈಗಳ್ ಅತ್ತಿಗೆ ಎಂದು ಎನಲ್ ಎನಗೆ ಏನ್ ಅಕ್ಕುಮೊ=ಎಲೈ ಅಂಬೆ, ನಿನ್ನನ್ನು ಮೊದಲುಗೊಂಡು ಎಲ್ಲ ಹೆಣ್ಣುಗಳನ್ನು ನನ್ನ ತಾಯಿಯ ಸಮಾನರೆಂದು ತಿಳಿದಿರುವ ನನಗೆ ಈಗ ನಿನ್ನನ್ನು ಕಾಮದ ನೋಟದಿಂದ ನೋಡುತ್ತ ‘ ಒಲಿದವಳು ’ ಎಂದು ಕರೆಯುವುದಕ್ಕೆ ಹೇಗೆ ತಾನೆ ಆಗುತ್ತದೆ;

ನುಡಿ+ಒಳ್; ಅವಸರ=ಹೊತ್ತು/ವೇಳೆ; ಪಸರ=ಸಲಿಗೆ/ಪ್ರೀತಿ;

ಎಂದು ನುಡಿದ ಗಾಂಗೇಯನ ನುಡಿಯೊಳ್ ಅವಸರಮಮ್ ಪಸರಮಮ್ ಪಡೆಯದೆ=ಗಾಂಗೇಯನು ಆಡಿದ ನುಡಿಗಳಲ್ಲಿ ತನಗೆ ಅವನನ್ನು ಗಂಡನನ್ನಾಗಿ ಪಡೆಯುವ ಅವಕಾಶವಾಗಲಿ ಇಲ್ಲವೇ ಪ್ರೀತಿಯಾಗಲಿ ಇಲ್ಲದಿರುವುದನ್ನು ತಿಳಿದು;

ಕಿಱಿಯಂದು=ಚಿಕ್ಕಂದಿನಲ್ಲಿ; ಉಂಗುರ+ಇಟ್ಟ; ’ಉಂಗುರವಿಡುವುದು’ ಒಂದು ಬಗೆಯ ಆಚರಣೆ. ಪರಸ್ಪರ ಒಲಿದ ಹೆಣ್ಣುಗಂಡುಗಳು ಒಬ್ಬರ ಕಯ್ ಬೆರಳಿಗೆ ಮತ್ತೊಬ್ಬರು ಉಂಗುರವನ್ನು ತೊಡಿಸಿ, ಮುಂದೆ ತಾವಿಬ್ಬರು ಮದುವೆಯಾಗಲಿರುವುದನ್ನು ನಿಶ್ಚಯ ಮಾಡಿಕೊಳ್ಳುತ್ತಾರೆ; ಸಾಲ್ವಲನ್+ಎಂಬ; ಅರಸನ+ಅಲ್ಲಿಗೆ; ಪೋಗಿ=ಹೋಗಿ;

ತನಗೆ ಕಿಱಿಯಂದು ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಪೋಗಿ=ತನಗೆ ಚಿಕ್ಕಂದಿನಲ್ಲಿ ಉಂಗುರನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನ ಬಳಿಗೆ ಬಂದು;

ಕೈಕೊಳ್=ಸ್ವೀಕರಿಸು/ಪಡೆಯುವುದು; ವೇಳ್ಕುಮ್=ಬೇಕು;

ನೀನ್ ಎನ್ನನ್ ಕೈಕೊಳವೇಳ್ಕುಮ್=ನೀನು ನನ್ನನ್ನು ಮದುವೆಯಾಗಬೇಕು;

ಬಂಡಣ+ಒಳ್; ಬಂಡಣ=ಕಾಳಗ/ಹೋರಾಟ; ಸರಿತ್+ಸುತನ್; ಸರಿತ್=ಗಂಗೆ; ಸುತ=ಮಗ; ಸರಿತ್ಸುತ=ಗಂಗಾದೇವಿಯ ಮಗನಾದ ಗಾಂಗೇಯ; ಕೊಂಡು+ಉಯ್ದನ್; ಕೊಂಡು=ಅಪಹರಿಸಿ; ಉಯ್ದನ್=ಒಯ್ದನು;

ಆ ಬಂಡಣದೊಳ್ ಸರಿತ್ಸುತನ್ ಎನ್ನನ್ ಓಡಿಸಿ ನಿನ್ನನ್ ಕೊಂಡುಯ್ದನ್=ನಿನ್ನ ಸ್ವಯಂವರದ ಸಮಯದಲ್ಲಿ ನಡೆದ ಕಾಳಗದಲ್ಲಿ ಗಾಂಗೇಯನು ನನ್ನನ್ನು ಹೊಡೆದೋಡಿಸಿ ನಿನ್ನನ್ನು ಅಪಹರಿಸಿಕೊಂಡು ಹೋದನು;

ಅದಱಿನ್=ಆದ್ದರಿಂದ; ಪೆಂಡತಿ+ಎನ್; ಪೆಂಡತಿ=ಹೆಣ್ಣು; ಆದೆನ್=ಆಗಿದ್ದೇನೆ;

ಅದಱಿನ್ ಪೆಂಡತಿಯೆನ್ ಆದೆನ್=ಗಾಂಗೇಯನಿಂದ ಸೋಲನ್ನುಂಡ ಕಾರಣದಿಂದಾಗಿ ನಾನು ಕೂಡ ಹೆಣ್ಣೇ ಆಗಿದ್ದೇನೆ;

ಪೆಂಡತಿಯೆನ್ ಆದೆನ್=ನಾನು ಕೂಡ ಹೆಣ್ಣಾಗಿದ್ದೇನೆ ಎಂಬುದು ಒಂದು ರೂಪಕವಾಗಿ ಬಳಕೆಯಾಗಿದೆ. ಹೋರಾಟದಲ್ಲಿ ಗಂಡಾದವನು ಹಗೆಯ ಎದುರಾಗಿ ಗೆಲ್ಲಬೇಕು ಇಲ್ಲವೇ ಸಾಯಬೇಕು. ಬದುಕಿ ಉಳಿದರೆ ಆತ ಹೆಣ್ಣಿಗೆ ಸಮಾನ ಎಂಬ ನಿಲುವು ಸಮಾಜದಲ್ಲಿದೆ;

ಅದು+ಎಂತು; ಎಂತು=ಯಾವ ರೀತಿ; ಬೆರಸು=ಕೂಡು; ಅಬಲೆ=ಹೆಚ್ಚಿನ ಶಕ್ತಿಯಿಲ್ಲದವಳು;

ಪೆಂಡಿರ್ ಪೆಂಡಿರೊಳ್ ಅದೆಂತು ಬೆರೆಸುವರ್ ಅಬಲೆ=ನೀನೇ ಹೇಳು, ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಜತೆಯಲ್ಲಿ ಅದು ಹೇಗೆ ತಾನೆ ಮದುವೆಯಾಗಲು ಆಗುತ್ತದೆ;

ಪರಿಭವ=ಸೋಲು; ಸಿಗ್ಗು=ಅವಮಾನ; ಸಾಲ್ವಿನಮ್=ವಿವರವಾಗಿ;

ಸಾಲ್ವಲನ್ ಪರಿಭವದೊಳ್ ಆದ ತನ್ನ ಸಿಗ್ಗನ್ ಸಾಲ್ವಿನಮ್ ಉಂಟುಮಾಡಿದೊಡೆ=ಕಾಳಗದಲ್ಲಿ ಗಾಂಗೇಯನಿಂದ ಉಂಟಾದ ಸೋಲಿನಿಂದ ತನ್ನ ಮನಸ್ಸಿಗೆ ಉಂಟಾದ ನೋವನ್ನು ಸಾಲ್ವಲನು ವಿವರವಾಗಿ ಅಂಬೆಯೊಡನೆ ಹೇಳಿಕೊಂಡಾಗ;

ಒಡಂಬಡಿಸಲ್+ಆಱದೆ; ಒಡಂಬಡಿಸು=ಒಪ್ಪಿಸು;

ಆತನ ಮನಮನ್ ಒಡಂಬಡಿಸಲಾಱದೆ=ಅವನ ಮನಸ್ಸನ್ನು ಒಲಿಸಿಕೊಳ್ಳಲಾಗದೆ;

ಪರಶುರಾಮನಲ್ಲಿಗೆ ಪೋಗಿ=ಗಾಂಗೇಯನ ಗುರುಗಳಾಗಿದ್ದ ಪರಶುರಾಮನ ಬಳಿಗೆ ಹೋಗಿ;

ನೆರೆ=ಸೇರು/ಜತೆಗೂಡು; ಮಕ್ಕಳ್+ಎಲ್ಲರುಮನ್;

ಎನ್ನ ಸ್ವಯಂವರದೊಳ್ ನೆರೆದ ಅರಸು ಮಕ್ಕಳೆಲ್ಲರುಮನ್ ಭೀಷ್ಮನ್ ಓಡಿಸಿ=ನನ್ನನ್ನು ಮದುವೆಯಾಗಲೆಂದು ಸ್ವಯಂವರ ಮಂಟಪದಲ್ಲಿ ನೆರೆದಿದ್ದ ಅರಸು ಮಕ್ಕಳೆಲ್ಲರನ್ನೂ ಬೀಶ್ಮನು ಓಡಿಸಿ;

ಎನ್ನನ್ ಕೊಂಡುಬಂದು=ನನ್ನನ್ನು ಅಪಹರಿಸಿಕೊಂಡು ಬಂದು;

ನಿಲ್=ಆಗು; ಒಲ್ಲದೆ=ಇಚ್ಚಿಸದೆ; ಅಟ್ಟು=ಓಡಿಸು; ಕಳೆ=ಬಿಡು/ತೊರೆ;

ಮದುವೆಯಮ್ ನಿಲಲ್ ಒಲ್ಲದೆ ಅಟ್ಟಿ ಕಳೆದೊಡೆ=ನನ್ನನ್ನು ಮದುವೆಯಾಗಲು ಒಲ್ಲದೆ ತೊರೆದಿರುವುದರಿಂದ;

ದೆವಸ=ದಿನ; ಜವ್ವನ=ಯೌವನ; ಅಡವಿ+ಒಳಗೆ; ಅಡವಿ=ಕಾಡು; ಪೂತ=ಅರಳಿದ; ಕಿಡು=ನಾಶವಾಗು/ಹಾಳಾಗು; ಈ=ಅವಕಾಶವನ್ನು ನೀಡು; ಈಯದೆ=ಅವಕಾಶವನ್ನು ಕೊಡದೆ;

ಎನ್ನ ದೆವಸಮುಮ್ ಜವ್ವನಮುಮ್ ಅಡವಿಯೊಳಗೆ ಪೂತ ಪೂವಿನಂತೆ ಕಿಡಲ್ ಈಯದೆ=ಕಾಡಿನೊಳಗೆ ಅರಳಿದ ಹೂವು ಯಾರ ಮುಡಿಗೂ ಸೇರದೆ ಕೆಳಕ್ಕೆ ಬಿದ್ದು ಹಾಳಾಗುವಂತೆ ಜೀವನದಲ್ಲಿ ನನ್ನ ಹರೆಯ ಮತ್ತು ಆಯುಸ್ಸು ಹಾಳಾಗಲು ಅವಕಾಶವನ್ನು ನೀಡದೆ;

ಆತನನ್ ಎನ್ನಮ್ ಪಾಣಿಗ್ರಹಣಮ್ ಗೆಯ್ವಂತು ಮಾಡು=ಅವನು ನನ್ನನ್ನು ಮದುವೆಯಾಗುವಂತೆ ಮಾಡು;

ಮಾಡಲ್+ಆಱದೊಡೆ; ಕಿಚ್ಚು=ಬೆಂಕಿ;

ಮಾಡಲಾಱದೊಡೆ ಕಿಚ್ಚಮ್ ದಯೆಗೆಯ್ವುದು=ಗಾಂಗೇಯನೊಡನೆ ನನ್ನ ಮದುವೆಯನ್ನು ಮಾಡುವುದಕ್ಕೆ ನಿನ್ನಿಂದ ಆಗದಿದ್ದರೆ ನನಗೆ ಸಾವನ್ನಾದರೂ ಕರುಣಿಸು;

ಎಂದು ಅಂಬೆ ಕಣ್ಣ ನೀರನ್ ತುಂಬೆ=ಎಂದು ಮೊರೆಯಿಡುತ್ತ ಅಂಬೆಯ ಅಳತೊಡಗಿದಳು; ಅತ್ತ ತಾನು ಒಲಿದಿದ್ದ ಸಾಲ್ವಲನನ್ನು ಪಡೆಯಲಾಗದೆ, ಇತ್ತ ಗಾಂಗೇಯನನ್ನು ಮದುವೆಯಾಗಲಾಗದೆ ಸಂಕಟದಿಂದ ಬೇಯುತ್ತಿರುವ ಅಂಬೆಯ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು;

ನಯ=ನ್ಯಾಯ/ವಿವೇಕ/ನೀತಿ; ನಂಬು=ನೆಚ್ಚು/ನೆಮ್ಮು;

ನಯಮಮ್ ನಂಬುವೊಡೆ ಎನ್ನ ಪೇಳ್ದ ಸತಿಯನ್ ಕೈಕೊಂಡನ್=ವಿವೇಕದಿಂದ ನಡೆದುಕೊಳ್ಳುವುದೇ ಸರಿಯೆಂದು ಗಾಂಗೇಯನು ಅರಿತುಕೊಂಡರೆ ನಾನು ಹೇಳಿದ ಹೆಣ್ಣನ್ನು ಮದುವೆಯಾಗುತ್ತಾನೆ;

ಅಂತು+ಅಲ್ಲದೆ; ಅಂತಲ್ಲದೆ=ಹಾಗಲ್ಲದೆ: ಮೀಱಿ=ಕಡೆಗಣಿಸಿ; ಮೇಣ್=ಇಲ್ಲವೇ; ದುರ್ಣಯ=ಕೆಟ್ಟ ನಿಲುವು/ತಪ್ಪುನಿರ‍್ಣಯ/ಸರಿಯಲ್ಲದ ತೀರ‍್ಮಾನ; ನಚ್ಚು=ನಂಬು/ಅವಲಂಬಿಸು;

 ಅಂತಲ್ಲದೆ ಮೀಱಿ ಮೇಣ್ ದುರ್ಣಯಮನ್ ನಚ್ಚುವೊಡೆ=ನಾನು ಹೇಳಿದ ಹೆಣ್ಣನ್ನು ಮದುವೆಯಾಗದೆ, ನನ್ನ ಮಾತಿಗೆ ಎದುರಾದ ನಿಲುವನ್ನು ತಳೆದರೆ;

ಉಗ್ರ=ಪ್ರಚಂಡ; ರಣ+ಒಳ್; ಮಾರ್=ಎದುರಾಗು/ಪ್ರತಿಬಟಿಸು;

ಎನ್ನನ್ ಉಗ್ರ ರಣದೊಳ್ ಮಾರ್ಕೊಂಡನ್=ಪ್ರಚಂಡವಾದ ಕಾಳಗದಲ್ಲಿ ನನ್ನನ್ನು ಎದುರುಗೊಳ್ಳುತ್ತಾನೆ;

ಸುತ=ಮಗ; ಆರಯ್=ಯೋಚಿಸು/ಚಿಂತಿಸು; ಕಜ್ಜ=ಕಾರ‍್ಯ/ಕೆಲಸ; ಪೆಱತು+ಇಲ್ಲ; ಪೆಱತು=ಮತ್ತೊಂದು/ಬೇರೆ;

ಶಂತನು ಸುತಂಗೆ ಆರಯೆ ಕಜ್ಜಮ್ ಪೆಱತಿಲ್ಲ=ಯಾವ ರೀತಿಯಲ್ಲಿ ಚಿಂತಿಸಿ ನೋಡಿದರೂ ಈಗ ಗಾಂಗೇಯನಿಗೆ ಬೇರೆ ದಾರಿಯೇ ಇಲ್ಲ. ನನ್ನ ಮಾತಿಗೆ ಮನ್ನಣೆಯನ್ನು ನೀಡಿ ಗಾಂಗೇಯನು ಅಂಬೆಯನ್ನು ಮದುವೆಯಾಗಬೇಕು ಇಲ್ಲವೇ ನನ್ನೊಡನೆ ಕಾಳಗವನ್ನು ಮಾಡಬೇಕು; ಕರಂ=ಬಹಳವಾಗಿ/ಹೆಚ್ಚಾಗಿ; ವಿವಾಹ+ವಿಧಿ+ಅನ್; ವಿಧಿ=ಆಚರಣೆ;

ಎನ್ನನ್ ಕರಮ್ ನಂಬಿದ ಅಂಬೆಯೊಳ್ ವಿವಾಹವಿಧಿಯನ್=ನನ್ನನ್ನು ಬಹಳವಾಗಿ ನಂಬಿ ಬಂದಿರುವ ಅಂಬೆಯ ಮದುವೆಯ ಕಾರ‍್ಯವನ್ನು;

ಅಂಬು=ಬಾಣ; ವಲಮ್=ನಿಶ್ಚಯವಾಗಿಯೂ; ಮಾಳ್ಪೆನ್=ಮಾಡುತ್ತೇನೆ;

ಎನ್ನ ಅಂಬೆ ವಲಮ್ ಮಾಳ್ಪೆನ್=ನನ್ನ ಬಾಣದ ಮೂಲಕವೇ ಮಾಡುತ್ತೇನೆ. ಅಂದರೆ ನನ್ನ ಪರಾಕ್ರಮದಿಂದ ಗಾಂಗೇಯನ್ನು ಮಣಿಸಿ, ಈ ಮದುವೆಯನ್ನು ನಡೆಸುತ್ತೇನೆ;

ಪೆಱರ್ ಮಾಳ್ಪರೇ=ಬೇರೆಯವರಿಂದ ಈ ಮದುವೆಯನ್ನು ಮಾಡಲಾಗುತ್ತದೆಯೇ, ಅಂದರೆ ನನ್ನಿಂದ ಮಾತ್ರ ನೆರವೇರುತ್ತದೆ;

ನಾಗಪುರ=ಹಸ್ತಿನಾವತಿ; ವರ್ಪ=ಬರುತ್ತಿರುವ; ಬರವನ್=ಆಗಮನದ ಸುದ್ದಿಯನ್ನು;

ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವನ್ ಗಾಂಗೇಯನ್ ಕೇಳ್ದು=ಹಸ್ತಿನಾವತಿಯತ್ತ ಬರುತ್ತಿರುವ ಪರಶುರಾಮನ ಆಗಮನದ ಸುದ್ದಿಯನ್ನು ಕೇಳಿ ತಿಳಿದ ಗಾಂಗೇಯನು;

 ಇದಿರ್+ಬಂದು; ಇದಿರು=ಮುಂದೆ; ಕನಕ=ಚಿನ್ನ; ರಜತ=ಬೆಳ್ಳಿ; ಪಾತ್ರ=ತಟ್ಟೆ/ಬಟ್ಟಲು; ಅರ್ಘ್ಯ=ಮನೆಗೆ ಬಂದ ಗುರುಹಿರಿಯರಿಗೆ ಕೈಕಾಲು ತೊಳೆಯಲು ಕೊಡುವ ನೀರು; ಪೊಡಮಡು=ನಮಸ್ಕರಿಸು/ಅಡ್ಡಬೀಳು;

ಇದಿರ್ವಂದು ಕನಕ ರಜತ ಪಾತ್ರಂಗಳೊಳ್ ಅರ್ಘ್ಯಮನ್ ಕೊಟ್ಟು ಪೊಡಮಟ್ಟು=ಚಿನ್ನದ ಮತ್ತು ಬೆಳ್ಳಿಯ ತಟ್ಟೆ ಬಟ್ಟಲುಗಳಲ್ಲಿ ನೀರನ್ನು ನೀಡಿ ಗುರುಗಳ ಸೇವೆಯನ್ನು ಮಾಡಿ ನಮಸ್ಕರಿಸಿ;

ಬೆಸನ=ಕೆಲಸ/ಅಪ್ಪಣೆ/ಆದೇಶ;

ಬೆಸನ್ ಏನ್=ನನ್ನಿಂದ ಯಾವ ಕೆಲಸವಾಗಬೇಕು ಹೇಳಿರಿ;

ಪೇಳ್ವೆನ್ ಎನ್ನ ಬೆಸನಮ್ ಕೈಕೊಳ್ವುದು=ಹೇಳುತ್ತೇನೆ. ಅದರಂತೆ ನಾನು ಹೇಳಿದ ಕೆಲಸವನ್ನು ನೀನು ಮಾಡುವುದು;

 ಪಸುರ್+ಪಂದರ್; ಪಸುರ್=ಹಸಿರು; ಪಂದರ=ಚಪ್ಪರ; ಪಸುರ್ವಂದರ್=ಹಸಿರಾದ ಎಲೆಗಳಿಂದ ಕೂಡಿದ ಗರಿಗಳನ್ನು ಹೆಣೆದು ಮಾಡಿರುವ ಚಪ್ಪರ; ಪಸೆ+ಎಂಬ; ಪಸೆ=ಹಸೆಮಣೆ; ಸಮೆ=ಅಣಿಗೊಳಿಸುವುದು/ಸಜ್ಜುಗೊಳಿಸುವುದು; ಇವಮ್=ಇವನ್ನು; ಸಮೆದು=ರಚಿಸಿ;

ಪಸುರ್ವಂದರ್ ಪಸೆಯೆಂಬ ಇವಮ್ ಸಮೆದು=ಹಸಿರಿನ ತಳಿರು ತೋರಣಗಳಿಂದ ಕೂಡಿರುವ ಚಪ್ಪರವನ್ನು ಹಾಕಿ, ಮದುಮಕ್ಕಳು ಕುಳಿತುಕೊಳ್ಳಲು ಬೇಕಾದ ಹಸೆಮಣೆಗಳನ್ನು ಇಟ್ಟು;

ಈ ಕನ್ನೆಯನ್ ನೀನ್ ಕೈಕೊಳ್= ಈ ತರುಣಿಯನ್ನು ನೀನು ಮದುವೆಯಾಗು;

ಚಿತ್ತ+ಒಳ್; ಚಿತ್ತ=ಮನಸ್ಸು; ಕೊಳಲ್ಕೆ+ಆಗದ; ಬೆಸಕ=ವಿಚಾರ/ಆಲೋಚನೆ;

ಚಿತ್ತದೊಳ್ ಕೊಳಲ್ಕಾಗದ ಬೆಸಕಮ್ ಉಳ್ಳೊಡೆ=ಇವಳನ್ನು ಮದುವೆಯಾಗಬಾರದೆಂಬ ಆಲೋಚನೆಯು ನಿನ್ನ ಮನಸ್ಸಿನಲ್ಲಿದ್ದರೆ;

ಓವು=ಪ್ರೀತಿ/ಒಲವು; ಓವದೆ=ಪ್ರೀತಿಯನ್ನು ತೊರೆದು/ಲೆಕ್ಕಿಸದೆ;

ಇವರ್ ಎಮ್ಮ ಆಚಾರ್ಯರ್ ಎಂದು ಓವದೆ=ಇವರು ನಮ್ಮ ಗುರುಗಳು ಎನ್ನುವ ಒಲವನ್ನು ತೊರೆದು;

ಮಾಣದೆ=ಸುಮ್ಮನಿರದೆ; ಏರ್+ಬೆಸನಮ್; ಏರ್=ಕಾಳಗ; ಏರ್ವೆಸನ=ಕಾಳಗವನ್ನು ಮಾಡುವುದು; ಕೈದು=ಶಸ್ತ್ರ/ಹತಾರ;

ಮಾಣದೆ ಏರ್ವೆಸನಮ್ ಕೈದುಗೊಳ್=ಗುರುವೆಂದು ಹಿಂಜರಿಯದೆ ಆಯುದವನ್ನು ಹಿಡಿದು ಹೋರಾಡು;

ಮೆಚ್ಚು=ಒಪ್ಪು/ಸಮ್ಮತಿಸು; ಮೆಚ್ಚಿತ್ತು=ಒಪ್ಪುಗೆಯಾದುದು;

ಎರಡಱೊಳ್ ಮೆಚ್ಚಿತ್ತು ಏನ್ ಎಂದಪಯ್=ಅಂಬೆಯನ್ನು ಮದುವೆಯಾಗು ಇಲ್ಲವೇ ನನ್ನೊಡನೆ ಹೋರಾಡು, ಇವೆರಡರಲ್ಲಿ ನಿನ್ನ ಆಯ್ಕೆ ಯಾವುದು? ಇದಕ್ಕೆ ನೀನೇನು ಹೇಳುತ್ತೀಯೆ?

ಶ್ರೀ=ಲಕ್ಶ್ಮಿ; ವ್ಯಕ್ತಿಯ ಬಳಿಯಿರುವ ಬೂಮಿ, ಬೆಲೆಬಾಳುವ ಒಡವೆ ವಸ್ತು ಹಣ, ರಾಜ್ಯದ ಒಡೆತನದ ಗದ್ದುಗೆ ಮುಂತಾದ ಸಂಪತ್ತಿಗೆ ಜನಸಮುದಾಯ ಲಕ್ಶ್ಮಿ ಎಂಬ ಹೆಣ್ಣು ದೇವತೆಯನ್ನು ಕಲ್ಪಿಸಿಕೊಂಡಿದೆ; ಅದನ್ನು ಇಲ್ಲಿ ವ್ಯಕ್ತಿಯ ಪರಾಕ್ರಮಕ್ಕೆ ಮತ್ತು ಕೀರ‍್ತಿಗೂ ವಿಸ್ತರಿಸಲಾಗಿದೆ; ಅಲ್ಲದೆ=ಬಿಟ್ಟು; ಮೊಱೆ+ಅಲ್ಲ; ಮೊಱೆ=ನಂಟು; ಮೊಱೆಯಲ್ಲ=ನಂಟಿಲ್ಲ;

ಎನಗೆ ವೀರಶ್ರೀಯುಮ್ ಕೀರ್ತಿಶ್ರೀಯುಮ್ ಅಲ್ಲದೆ ಉಳಿದ ಪೆಂಡಿರ್ ಮೊಱೆಯಲ್ಲ=ನನಗೆ ವೀರಲಕ್ಶ್ಮಿ ಮತ್ತು ಕೀರ‍್ತಿಲಕ್ಶ್ಮಿ ಎಂಬ ಹೆಣ್ಣುಗಳೊಡನೆ ನಂಟು ಇದೆಯೇ ಹೊರತು ಉಳಿದ ಯಾವ ಹೆಣ್ಣುಗಳ ಜತೆಯಲ್ಲೂ ನನಗೆ ನಂಟಿಲ್ಲ;

ಆಗ್ರಹಂ+ಗೆಯ್ವಿರಿ; ಆಗ್ರಹ=ಒತ್ತಾಯ/ಬಲವಂತ;

ಇದನ್ ಏಕೆ ಆಗ್ರಹಂ ಗೆಯ್ವಿರಿ=ಈ ರೀತಿ ಏಕೆ ಬಲವಂತ ಮಾಡುತ್ತಿರುವಿರಿ; ಕೆಳರ್ದು=ಕೆರಳಿ/ಉದ್ರಿಕ್ತನಾಗಿ;

ಎಂತುಮ್=ಹೇಗಾದರೂ; ಎಮ್ಮೊಳ್=ನಮ್ಮೊಡನೆ; ಕಾದಲ್+ವೇಳ್ವುದು; ಕೆಳರ್=ಕೋಪಿಸು/ಕನಲು;

ಎಂತುಮ್ ಎಮ್ಮೊಳ್ ಕಾದಲ್ವೇಳುದು ಎಂದು ಕೆಳರ್ದು=ಹಾಗೆ ಹೇಳುವುದಾದರೆ ನೀನು ನಮ್ಮೊಡನೆ ಕಾಳಗವನ್ನು ಮಾಡು ಎಂದು ಪರಶುರಾಮನು ಕೋಪದಿಂದ ಕೆರಳಿ;

ಉಗ್ರ=ಪ್ರಚಂಡವಾದ; ರಣ+ಆಗ್ರಹ; ರಣ=ಕಾಳಗ; ಆಗ್ರಹ=ಮೇಲೆ ಬೀಳುವುದು; ಪ್ರಣಯ=ಅನುರಾಗ/ಮೋಹ; ರಣಾಗ್ರಹ ಪ್ರಣಯ=ಕಾಳಗವನ್ನು ಮಾಡಲೇಬೇಕೆಂಬ ಸಂಕಲ್ಪದಿಂದ;

ಉಗ್ರ ರಣಾಗ್ರಹ ಪ್ರಣಯದಿಂದ ಆಗಳ್ ಕುರುಕ್ಷೇತ್ರಮಮ್ ಕಳಮ್ ಪೇಳ್ದು =ದೊಡ್ಡದಾಗಿ ಹೋರಾಡಲೇಬೇಕೆಂಬ ಉದ್ದೇಶದಿಂದ ಕುರುಕ್ಶೇತ್ರವನ್ನು ರಣರಂಗವನ್ನಾಗಿ ಗೊತ್ತುಪಡಿಸಿ;

ಇರ್ವರುಮ್=ಇಬ್ಬರೂ; ಐಂದ್ರ=ಇಂದ್ರನ ಹೆಸರಿನ ಬಾಣ; ವಾರುಣ=ವರುಣದೇವನ ಹೆಸರಿನ ಬಾಣ; ವಾಯವ್ಯ+ಆದಿ; ವಾಯವ್ಯ=ವಾಯುದೇವನ ಹೆಸರಿನ ಬಾಣ; ಆದಿ=ಮೊದಲಾದ; ದಿವ್ಯ+ಅಸ್ತ್ರ; ದಿವ್ಯ=ಉತ್ತಮವಾದ; ಅಸ್ತ್ರ=ಬಾಣ; ಸಂಕುಲ=ಸಮೂಹ; ಎಚ್ಚು=ಬಾಣ ಪ್ರಯೋಗ ಮಾಡು;

ಇರ್ವರುಮ್ ಐಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂಕುಲದಿಂದ ಒರ್ವರನ್ ಒರ್ವರ್ ಎಚ್ಚು=ಒಬ್ಬರು ಮತ್ತೊಬ್ಬರ ಮೇಲೆ ಇಂದ್ರ, ವರುಣ, ವಾಯವ್ಯ ಎಂಬ ಹರಿತವಾದ ಬಾಣಗಳನ್ನು ಬಿಡುತ್ತಿರುವಾಗ;

ನಿಜ=ತನ್ನ; ಪೀಠ+ಅಂಭೋಜದಿನ್; ಪೀಠ=ಗದ್ದುಗೆ; ಅಂಭೋಜ=ತಾವರೆ; ಉಚ್ಚಳಿಪ+ಅನ್ನಮ್; ಉಚ್ಚಳಿಪ+ಅನ್ನಮ್; ಉಚ್ಚಳಿಸು=ಮೇಲೆ ನೆಗೆ/ಚಿಮ್ಮು/ಹಾರು; ಅನ್ನಮ್=ಹಾಗೆ;

ನಿಜ ಪೀಠಾಂಭೋಜದಿನ್ ಬ್ರಹ್ಮನ್ ಉಚ್ಚಳಿಪನ್ನಮ್=ತಾವರೆಯ ಪೀಟದಲ್ಲಿ ಕುಳಿತಿದ್ದ ಬ್ರಹ್ಮದೇವನೇ ಮೇಲಕ್ಕೆ ಹಾರಿಬೀಳುವ ಹಾಗೆ; ಇದೊಂದು ರೂಪಕ. ಕಾಳಗದಿಂದ ಉಂಟಾಗುತ್ತಿರುವ ತೀವ್ರ ಪರಿಣಾಮ ಸೂಚಿಸುತ್ತದೆ;

ತ್ರೈಲೋಕ್ಯ+ಒಳ್; ತ್ರೈಲೋಕ್ಯ=ಮೂರು ಲೋಕಗಳು; ಪಿರಿದು+ಒಂದು; ಸಂಕಟಮ್+ಅನ್;

ಈ ತ್ರೈಲೋಕ್ಯದೊಳ್ ಪಿರಿದೊಂದು ಸಂಕಟಮನ್ ಮಾಡಿದರ್=ದೇವಲೋಕ, ಬೂಲೋಕ, ಪಾತಾಳಲೋಕವೆಂಬ ಮೂರು ಲೋಕಗಳಲ್ಲಿ ಅತಿ ಹೆಚ್ಚಿನ ಸಂಕಟವನ್ನು ಉಂಟುಮಾಡಿದರು;

ವಿಕ್ರಾಂತ=ಪರಾಕ್ರಮ; ಅತರ್ಕ್ಯಮ್=ತರ‍್ಕಕ್ಕೆಸಿಗದು;

ವಿಕ್ರಾಂತಮ್ ಭುಜಬಲಮ್ ಅಸಾಮಾನ್ಯಮ್ ಅಧಿಕಮ್ ಅತರ್ಕ್ಯಮ್=ಗಾಂಗೇಯನ ಪರಾಕ್ರಮ, ಬಾಹುಬಲ ತುಂಬ ದೊಡ್ಡದು ಹಾಗೂ ಅಸಾಮಾನ್ಯವಾದುದು ಮಾತ್ರವಲ್ಲ, ಊಹಾತೀತವಾದುದು ಅಂದರೆ ಮಾತಿಗೆ ನಿಲುಕದ್ದು;

ಈತಂಗೆ=ಇವನಿಗೆ; ಎಣೆ=ಸಮಾನ; ದಿವಜ=ದೇವತೆ; ಪೋಗು=ಹೋಗು/ಬಿಡು;

ಈತಂಗೆ ಎಣೆಯೆ ದಿವಜರ್ ಪೋಗು=ಈತನಿಗೆ ದೇವತೆಗಳು ಸಮರಲ್ಲ. ಪರಶುರಾಮನು ಗೆಲುತ್ತಾನೆ ಎಂಬ ಮಾತನ್ನು ಬಿಡು; ಗಾಂಗೇಯ ಮತ್ತು ಪರಶುರಾಮನ ನಡುವೆ ನಡೆಯುತ್ತಿರುವ ಕಾಳಗವನ್ನು ನೋಡುತ್ತಿರುವವರು ಗಾಂಗೇಯನ ಬಗ್ಗೆ ಈ ಬಗೆಯ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವಂತೆ ಚಿತ್ರಿಸಲಾಗಿದೆ;

ವಾಯುಪಥದೊಳ್=ಗಗನ ಮಾರ‍್ಗದಲ್ಲಿ; ಶಿತ+ಅಸ್ತ್ರಂ+ಗಳ್; ಶಿತ=ಹರಿತವಾದ/ಚೂಪಾದ; ಪೊಂಕಮ್+ಕಿಡಿಸೆ; ಪೊಂಕ=ಸೊಕ್ಕು/ಅಹಂಕಾರ; ಕಿಡಿಸೆ=ನಾಶಮಾಡಲು/ಅಡಗಿಸಲು; ಭಾರ್ಗವನ್=ಪರಶುರಾಮನು; ಸುಗಿದನ್=ಹಿಮ್ಮೆಟ್ಟಿದನು/ಹಿಂಜರಿದನು;

ವಾಯುಪಥದೊಳ್ ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಭಾರ್ಗವನ್ ಸುಗಿದನ್=ಗಗನದಲ್ಲಿ ಹಾರಿಬರುತ್ತಿರುವ ಗಾಂಗೇಯನ ಹರಿತವಾದ ಬಾಣಗಳ ಪೆಟ್ಟಿನಿಂದ ಪರಶುರಾಮನು ಬಲಗುಂದಿ ಹಿಮ್ಮೆಟ್ಟಿದನು;

ಅದಿರು=ನಡುಗು/ಕಂಪಿಸು; ನಿಲ್ವ+ಅನ್ನರ್; ಅನ್ನರ್=ಅಂತಹ ವ್ಯಕ್ತಿಗಳು;

ಇದೇನ್ ಪ್ರತಿಜ್ಞಾ ಗಾಂಗೇಯಂಗೆ ಅದಿರದೆ ಇದಿರ್ ನಿಲ್ವನ್ನರ್ ಒಳರೇ=ಯಾವ ಹೆಣ್ಣನ್ನು ಮದುವೆಯಾಗುವುದಿಲ್ಲವೆಂದು ಪ್ರತಿಜ್ನೆಯನ್ನು ಮಾಡಿರುವ ಗಾಂಗೇಯನಿಗೆ ಹೆದರದೆ ಎದುರು ನಿಂತು ಹೋರಾಡುವವರು ಯಾರಾದರೂ ಇದ್ದಾರೆಯೇ;

ಬಸವಳಿದು=ಬಲವು ಕುಗ್ಗಿ/ಶಕ್ತಿಯು ಅಡಗಿ; ಉಸಿರಲ್+ಅಪ್ಪೊಡಮ್; ಉಸಿರಲ್=ಉಸಿರಾಡಲು; ಅಪ್ಪೊಡಮ್=ಆದರೂ ; ಆರದೆ=ಶಕ್ತನಾಗದೆ; ಮೂರ್ಛೆ+ಪೋಗಿ+ಇರ್ದನನ್;

ಅಂತು ಗಾಂಗೇಯನೊಳ್ ಪರಶುರಾಮನ್ ಕಾದಿ ಬಸವಳಿದು ಉಸಿರಲಪ್ಪೊಡಮ್ ಆರದೆ ಮೂರ್ಛೆವೋಗಿರ್ದನನ್ ಕಂಡು=ಆ ಬಗೆಯಲ್ಲಿ ಗಾಂಗೇಯನೊಡನೆ ಕಾದಾಡಿ ದೇಹದ ಬಲವು ಕುಗ್ಗಿ ಉಸಿರಾಡಲೂ ಆಗದೆ, ಮಯ್ ಮೇಲಿನ ಅರಿವನ್ನು ಕಳೆದುಕೊಡು ಕೆಳಕ್ಕೆ ಉರುಳಿದ ಪರಶುರಾಮನನ್ನು ನೋಡಿ;

ಕೋಪ+ಅಗ್ನಿ+ಇಂದಮ್; ದಂಡುರುಂಬೆ=ದಿಟ್ಟೆಯಾದ ಹೆಣ್ಣು/ಎದೆಗಾತಿ/ಕೆಚ್ಚುಳ್ಳವಳು; ವಧಾ+ಅರ್ಥಮ್+ಆಗಿ; ವಧಾ=ಕೊಲ್ಲುವುದು; ಅರ್ಥ=ಉದ್ದೇಶ/ಗುರಿ; ಪುಟ್ಟುವೆನ್+ಅಕ್ಕೆ; ಅಕ್ಕೆ=ಆಗಲಿ; ಪುಟ್ಟುವೆನಕ್ಕೆ=ಹುಟ್ಟುತ್ತೇನೆ; ಅಗ್ನಿ=ಬೆಂಕಿ; ಅಗ್ನಿಶರೀರೆ=ಬೆಂಕಿಗೆ ತನ್ನ ದೇಹವನ್ನು ಒಡ್ಡಿಕೊಂಡು;

ಕೋಪಾಗ್ನಿಯಿಂದಮ್ ಅಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆ ಎಂದು ಅಗ್ನಿಶರೀರೆಯಾಗಿ= ಹತಾಶೆಯಿಂದ ಉಂಟಾದ ಕೋಪದಿಂದ ಕೆರಳಿದ ದಿಟ್ಟತನದ ವ್ಯಕ್ತಿತ್ವವುಳ್ಳ ಅಂಬೆಯು “ನಿನ್ನ ಸಾವಿಗೆ ಕಾರಣಳಾಗುವಂತೆ ಮತ್ತೊಮ್ಮೆ ಹುಟ್ಟಿಬರುತ್ತೇನೆ “ ಎಂದು ಗಾಂಗೇಯನ ಮುಂದೆ ಕೂಗಿ ಹೇಳುತ್ತ ಬೆಂಕಿಗೆ ಬಿದ್ದು ಸಾವನ್ನಪ್ಪಿದಳು;

ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ=ದ್ರುಪದ ರಾಜನ ಪಟ್ಟದ ರಾಣಿಗೆ ಮಗನಾಗಿ ಹುಟ್ಟಿ;

ಕಾರಣ+ಅಂತರ+ಒಳ್; ಶಿಖಂಡಿ+ಆಗಿ+ಇರ್ದಳ್; ಶಿಖಂಡಿ=ನಪುಂಸಕ;

ಕಾರಣಾಂತರದೊಳ್ ಶಿಖಂಡಿಯಾಗಿರ್ದಳ್=ಕಾರಣಾಂತರಗಳಿಂದ ನಪುಂಸಕನಾಗಿ ಬದಲಾದಳು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: