ಐರನ್ ಡೋಮ್ – ಸುದ್ದಿಯಲ್ಲಿರುವ ಇಸ್ರೇಲಿನ ಕಬ್ಬಿಣದ ಕವಚ

– ನಿತಿನ್ ಗೌಡ.

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಜಗಳ ಮತ್ತೆ ಶುರುವಾಗಿದೆ. ಈ ನಾಡುಗಳ ನಡುವಿನ ತಿಕ್ಕಾಟಕ್ಕೆ ಬಹಳ ದೊಡ್ಡ ಹಿನ್ನೆಲೆಯಿದೆ. ರಾಕೆಟ್-ಮದ್ದುಗಳ ಸದ್ದು ಈಗಲೂ ಕೇಳಿಬರುತ್ತಿದ್ದು ಕೊರೊನಾದ ಸುದ್ದಿಯನ್ನು ಕೊಂಚ ಬದಿಗೆ ಸರಿಸಿ ಈ ಬೆಳವಣಿಗೆ ಎಲ್ಲರ ಗಮನ ಸೆಳೆದಿರುವುದು ನಿಜವೇ. ಈ ತಿಕ್ಕಾಟದಲ್ಲಿ,  ಪ್ಯಾಲೆಸ್ತೈನ್ ದಾಳಿಯನ್ನು ತಡೆಯಲು ಇಸ್ರೇಲ್ ಬಳಸುತ್ತಿರುವ ಕಾವಲಿನ ಏರ‍್ಪಾಡು ಎಲ್ಲರ ಗಮನ ಸೆಳೆದಿದೆ .

ಹೇಗಿದೆ ಆ ಏರ‍್ಪಾಡು? ಇಸ್ರೇಲ್ ಆ ಏರ‍್ಪಾಡನ್ನು ಕಟ್ಟಿಕೊಂಡ ಹಿನ್ನೆಲೆಯೇನು? ಆ ಏರ‍್ಪಾಡು ಕೆಲಸ ನಡೆಸುವ ಬಗೆ ಹೇಗೆ? ಎಂಬುದರ ಬಗ್ಗೆ ಒಂದಶ್ಟು ಮಾಹಿತಿ ನೀಡುವ ಪ್ರಯತ್ನವಿದಶ್ಟೇ.

ಈ ಏರ‍್ಪಾಡಿನ ಹೆಸರು  ಐರನ್ ಡೋಮ್(Iron Dome) ಎಂದಾಗಿದೆ. ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುವ  ನಡು-ಮೂಡಣ (Middle east) ಬಾಗದಲ್ಲಿ, ಆಗಾಗ ತಿಕ್ಕಾಟಗಳು ನಡೆಯುತ್ತಿರುತ್ತವೆ. 2006 ರಲ್ಲಿ ಇಸ್ರೇಲ್-ಲೆಬನಾನ್ ನಡುವಣ ಕಾಳಗದ ಹೊತ್ತಲ್ಲಿ, ಹೆಜ್ಬುಲ್ಲಾ(Hezbollah) ಮುಂದಾಳತ್ವದಲ್ಲಿ ಬಡಗಣ(north) ಇಸ್ರೇಲ್ ಮೇಲೆ, ಕಡಿಮೆ ದೂರ ಸಾಗುವ ಅಂದಾಜು 4000 ರಾಕೆಟ್‍‍ಗಳ ದಾಳಿ ನಡೆದು ಹಲವು ಇಸ್ರೇಲಿಗರು ಅಸುನೀಗುತ್ತಾರೆ. ಇದಲ್ಲದೇ ಇಸ್ರೇಲ್, ಹಮಾಸ್ ಗುಂಪಿನಿಂದ ಗಾಜಾದ ಮೂಲಕ ಪದೇ ಪದೇ ದಾಳಿಗೆ ಒಳಗಾಗುತ್ತಿತ್ತು. ಈ ದಾಳಿಗಳನ್ನು ತಡೆಯಲು ‘ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್'(Israel Aerospace Industries) ಕೂಟವು ‘ರಪಾಯಿಲ್ ಅಡ್ವಾನ್ಸ್ ಡಿಪೆನ್ಸ್ ಸಿಸ್ಟಮ್’ (Rafael Advanced Defense Systems) ಜೊತೆಗೂಡಿ ಹುಟ್ಟುಹಾಕಿದ ಕಾವಲಿನ ಏರ‍್ಪಾಡೇ ಈ ಐರನ್ ಡೋಮ್.

ಐರನ್ ಡೋಮ್

ಇಸ್ರೇಲ್ ಅಳವಡಿಸಿಕೊಂಡಿರುವ ಈ ಕಾವಲಿನ ಏರ‍್ಪಾಡು, ಇಸ್ರೇಲಿನತ್ತ ಹಾರಿಬರುವ ರಾಕೆಟ್ ಮತ್ತು ಮಿಸೈಲ್‍ಗಳನ್ನು ಗಾಳಿಯಲ್ಲೇ ತಡೆದು ಪುಡಿ ಮಾಡಬಲ್ಲದ್ದಾಗಿದೆ (air defense security system). ಸುಮಾರು 70 ಕಿ.ಮೀ ದೂರದಿಂದ ಇಸ್ರೇಲಿನತ್ತ ಚಿಮ್ಮಿಬರುವ ರಾಕೆಟ್ ಗಳನ್ನು ಪತ್ತೆ ಹಚ್ಚುವ ಅಳವು ಐರನ್ ಡೋಮ್‍ಗಿದೆ ಮತ್ತು ಇದು, ಇಸ್ರೇಲ್  ಮುಂಬರುವ ದಾಳಿಗಳನ್ನು ತಡೆಯಲು ಕೈಗೊಳ್ಳುತ್ತಿರುವ ಬಹು-ಪಂಕ್ತಿಯ( Multi tier) ಕಾವಲು ಏರ‍್ಪಾಡಿನ ಒಂದು ಬಾಗವಾಗಿದೆ. ಇದನ್ನು 27 ಮಾರ‍್ಚ್  2011 ರಂದು ಮೊದಲ ಬಾರಿಗೆ  ಕಾರ‍್ಯಾಚರಣೆಗೆ  ನಿಯೋಜಿಸಲಾಯಿತು.

ಐರನ್ ಡೋಮ್

 ಐರನ್ ಡೋಮ್ ಕೆಲಸ ಮಾಡುವ ಬಗೆ:

ಐರನ್ ಡೋಮ್ ಮುಕ್ಯವಾಗಿ 3 ಗಟಕಗಳನ್ನ ಹೊಂದಿದೆ. ಈ ಮೇಲಿನ ತಿಟ್ಟದ(Image) ಆಸರೆಯಿಂದ ಅವುಗಳ ಬಗ್ಗೆ ಅರಿಯಬಹುದು.

  • ಮೊದಲ ಗಟಕ – ಜಾಡು ಪತ್ತೆಮಾಡುವ ಮತ್ತು ಹಿಂಬಾಲಿಸುವ ರಡಾರ್ (Detection and Tracking Radar)

ಇದು ಐರನ್ ಡೋಮ್ ಹರವಿನ ಸರಹದ್ದಿನಲ್ಲಿ ಯಾವುದೇ ಎದುರಾಳಿಯ ರಾಕೆಟ್ ಮತ್ತು ಮಿಸೈಲ್ ಗಳು ಬಂದಲ್ಲಿ, ಅವುಗಳು ಇರುವ ಜಾಗದ ಸರಿಯಾದ ಇರುವೆಡೆಯನ್ನು(Position) ಮತ್ತು ಅವು ಸಾಗುವ ದಾರಿಯನ್ನು (Trajectile) ಹಿಂಬಾಲಿಸಿ, ಆ ಮಾಹಿತಿಯನ್ನು ಎರಡನೇ ಗಟಕಕ್ಕೆ  ಕಳುಹಿಸುತ್ತಿರುತ್ತದೆ.

  • ಎರಡನೇ ಗಟಕ – ಕಾಳಗ ನಿರ‍್ವಹಣಾ ಮತ್ತು ಹತೋಟಿ ಗಟಕ (Battle Management and Control unit)

ರಡಾ‍‍ರ್‍‍ಗಳಿಂದ  ಬಂದ ಮಾಹಿತಿಯ ಮೇಲೆ ಈ ಗಟಕದ ಕಂಪ್ಯೂಟರ್ ಎದುರಾಳಿ ರಾಕೆಟ್‍‍ಗಳು ಎಲ್ಲಿ ದಾಳಿ ಮಾಡುತ್ತವೆ ಎಂದು ಪತ್ತೆ ಹಚ್ಚುತ್ತದೆ ಮತ್ತು  ಪ್ರತಿದಾಳಿಗಾಗಿ ಮೂರನೇ ಗಟಕವನ್ನು ಅಣಿಗೊಳಿಸುತ್ತದೆ.

  • ಮೂರನೇ ಗಟಕ-  ತಡೆದಾಳಿ  ಮಿಸೈಲ್  ಸಿಡಿಸುವ ಗಟಕ ( Interceptor missile firing unit)

ಇದು 2ನೇ ಗಟಕದ ಅಣತಿಯಂತೆ, ಎದುರಾಳಿಯ ರಾಕೆಟ್‍‍ಗಳನ್ನು ಹೊಡೆದುರುಳಿಸಲು  ತಡೆದಾಳಿ ಮಿಸೈಲ್‍‍ಗಳನ್ನು( Interceptor missile) ಹಾರಿಸುತ್ತದೆ. ಈ ಮಿಸೈಲ್‍ಗಳು 2ನೇ ಗಟಕದ ಜೊತೆ ಒಂದು ಮೇಳೈಸುವಿಕೆ(Synchronization) ಹೊಂದಿದ್ದು, ಎದುರಾಳಿ ರಾಕೆಟ್‍‍ಗಳ ಇರುವೆಡೆಯ(Position) ಮತ್ತು ಸಾಗುವ  ದಾರಿಯ (Trajectile) ಬಗ್ಗೆ ಎಡೆಬಿಡದೆ ಮಾಹಿತಿ ಪಡೆಯುತ್ತಿರುತ್ತವೆ. ಆಮೇಲೆ ಜನಸಂದಣಿ ಇಲ್ಲದ ಒಂದು ನಡುನೆಲೆಯ(Neutral) ಜಾಗಕ್ಕೆ ಎದುರಾಳಿಯ  ಮಿಸೈಲಿನ ಸಿಡಿತಲೆಯನ್ನು( WarHead) ಕೊಂಡೊಯ್ದು ,ಅವುಗಳನ್ನು ಹೊಡೆದುರುಳಿಸುತ್ತವೆ. ಜನರ ಪ್ರಾಣ ಉಳಿಸುವ ಚಳಕವಿದಾಗಿದೆ.

ಹೀಗೆ ಈ ಮೂರು ಗಟಕಗಳು ಸೇರಿ  ಎದುರಾಳಿಯು, ದಾಟಲಾಗದಂತ ಕಬ್ಬಿಣದ ಕವಚದಂತ ಏರ‍್ಪಾಟನ್ನು ಒದಗಿಸಿಕೊಟ್ಟಿರುವುದರಿಂದ ‘ಐರನ್ ಡೋಮ್’ ಹೆಸರು ಬಂದಂತಿದೆ. ಈ ಐರನ್ ಡೋಮ್ 80-90% ನಿಕರತೆ ಹೊಂದಿದೆ ಎಂದು ಹೇಳಲಾಗಿದೆ. ಈ ಐರನ್ ಡೋಮಿಗೂ ಸಹ ಒಂದು ತಡೆಮಟ್ಟ(Threshold) ಇದ್ದು, ಅದನ್ನು ಮೀರಿ ಒಂದೇ ಬಾರಿಗೆ ಹೆಚ್ಚಿನ ಮಿಸೈಲ್‍ಗಳ ಮಳೆ ಸುರಿಸಿದಲ್ಲಿ ಈ ಕಬ್ಬಿಣದ ಕವಚವನ್ನು ಉರುಳಿಸಬಹುದು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಎದುರಾಳಿ ಪಡೆ ಇಸ್ರೇಲ್ ಮೇಲೆ ಪದೇ ಪದೇ ದಾಳಿ ಮಾಡುತ್ತಿರುತ್ತದೆ.

ಇದಲ್ಲದೆ ಇಸ್ರೇಲ್, ಎದುರಾಳಿಯು ಬಳಸುವ ಪ್ರತಿದಾಳಿ ಅಸ್ತ್ರಗಳು ಮತ್ತು ಅವುಗಳು ಇರುವ ದೂರವನ್ನು ನೆಲೆಯಾಗಿಟ್ಟುಕೊಂಡು, ಆ ದಾಳಿಗೆ ಇದಿರಾಗಿ ಐರನ್ ಬೀಮ್ (ಇದು ಲೇಸರ್ ಕಿರಣಗಳನ್ನು ಬಳಸುತ್ತದೆ), ಸ್ಪೈಡರ್-ಎಸ್.ಆರ್ (Spyder short range), ಸ್ಪೈಡರ್-ಎಮ್.ಆರ್ (Spyder -Mid range), ಡೇವಿಡ್ಸ್ ಸ್ಲಿಂಗ್ (David’s Sling), ಆರೋ-2 (Arrow-2), ಆರೋ-3 (Arrow-3) ಎಂಬ ಬಗೆ ಬಗೆಯ ಕಾವಲು ಏರ‍್ಪಾಡುಗಳನ್ನೂ ಬಳಸುತ್ತದೆ.

ಕೆಳಗಿನ ಈ ತಿಟ್ಟ ಇಸ್ರೇಲ್ ಹೊಂದಿರುವ ಇತರೆ ಮಿಸೈಲ್ ಸಂಬಂದಿತ ಕಾವಲು ಎರ‍್ಪಾಡುಗಳ ಚಿತ್ರಣ ನೀಡುತ್ತದೆ.

missile range

ಜಗತ್ತಿನ ಆಳ್ಮೆಯ ಹರವು (Political spectrum) ಏನೇ ಇರಲಿ, ಇಸ್ರೇಲ್ ಇಂತಹ ಹೊಸ ಹೊಸ ಕಾಳಗದ ಕಾವಲಿನ ಏರ‍್ಪಾಡುಗಳ ಮೂಲಕ ಎಲ್ಲರನ್ನು ಬೆರಗಾಗಿಸುತ್ತಿರುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org  , wikipedia.org , wikimedia.org , wikipedia.org , youtube.com , wikimedia.org , wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks