ದೈರ‍್ಯವಿದ್ದರೆ ಎಲ್ಲವೂ ಸಾದ್ಯ

– ಸಂಜೀವ್ ಹೆಚ್. ಎಸ್.

ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ‍್ಶಗಳ ಹಿಂದೆ ಒಂದು ವಿಮಾನ ಪತನವಾಯಿತು. ಆ ವಿಮಾನ ನಾಪತ್ತೆ ಆದ ಸುದ್ದಿ ತಿಳಿದರೂ ಸಹ, ಅದು ಎಲ್ಲಿ ಪತನವಾಯಿತು ಎಂಬುದು ತಿಳಿಯದೆ ಹೋಯಿತು. ಕೊನೆಗೆ ಅದರ ಹುಡುಕಾಟ ನಡೆಸಿದ ನಾಲ್ಕು ಐದು ದಿನಗಳ ನಂತರ, ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನವಾಗಿದೆ ಎಂದು ತಿಳಿದುಬಂತು. ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾದ್ಯತೆ ಇರಬಹುದು ಎಂಬ ಯೋಚನೆಯನ್ನು ಎಲ್ಲರೂ ಕೈ ಬಿಟ್ಟಿದ್ದರು. ಆದರೆ ಸೈನಿಕರ ಹುಡುಕಾಟದ ತಂಡ ಸಾಗರದಲ್ಲಿ ಹುಡುಕಾಟ ಶುರು ಮಾಡಿ, ಕೊನೆಗೂ ಪತನಗೊಂಡ ವಿಮಾನದ ಅವಶೇಶ ಪತ್ತೆ ಹಚ್ಚಿದರು. ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು. ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದ್ರುಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನು ತಾವೇ ನಂಬಲು ಆಗಲಿಲ್ಲ. ತೇಲುತ್ತಿರುವ ವಿಮಾನದ ಒಂದು ತುಂಡಿನ ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದ್ರುಶ್ಯ ಅವರಿಗೆ ಕಂಡಿತು. ಕೂಡಲೇ ಅವರು ಅಲ್ಲಿಗೆ ಹೋಗಿ, ಆ ತಾಯಿ ಮಗುವನ್ನು ಪರೀಕ್ಶೆ ಮಾಡಿ ನೋಡಿದರು. ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು. ಅವರು ಜೀವಂತ ಇರುವುದು ಕಾತ್ರಿ ಮಾಡಿಕೊಂಡು, ಅವರಿಗೆ ಪ್ರತಮ ಚಿಕಿತ್ಸೆ ನೀಡಿ ಬದುಕಿಸಿದರು. ಇಡೀ ಜಗತ್ತಿಗೆ ಇದೊಂದು ಪವಾಡ ಎಂದೆನಿಸಿತು. ಮೈ ಹೆಪ್ಪುಗಟ್ಟಿಸುವ ಚಳಿ, ಸುತ್ತಲೂ ನೀರು, ತೇಲುತ್ತಿರುವ ಹೆಣಗಳು, ಆಹಾರ ಮತ್ತು ಕುಡಿಯಲು ನೀರು ಸಹ ಇಲ್ಲ! ಎಂತಹ ಗಟ್ಟಿ ಗುಂಡಿಗೆ ಇದ್ದರೂ, ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡವಾಗಿತ್ತು.

ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ‍್ಶನ ಮಾಡಿದಾಗ ಆಕೆ ಹೇಳಿದ ಮಾತುಗಳಿವು; ‘ಆಕಾಶದಲ್ಲಿ ವಿಮಾನ ಸ್ಪೋಟವಾಯಿತು.ಏನಾಯಿತು! ಎಂದು ಅರಿವು ಆಗುವಶ್ಟರಲ್ಲಿ ನಾವು ವಿಮಾನದಿಂದ ಹೊರಬಿದ್ದು, ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು. ಸುತ್ತಲೂ ನೋಡಿದಾಗ ಬರೀ ನೀರು. ಕೆಲವರು ಈಜಲು ಪ್ರಯತ್ನಿಸಿದರು, ಕೆಲವರು ಆದ ಅಪಗಾತಕ್ಕೆ ನೀರಿಗೆ ಬೀಳುವ ಮೊದಲೇ ಸತ್ತುಹೋಗಿದ್ದರು. ಮಗು ನನ್ನ ತೊಡೆ ಮೇಲೆ ಇದ್ದುದ್ದರಿಂದ ನೀರಿಗೆ ಬೀಳುವವರೆಗೆ ಮಗುವನ್ನು ಅಪ್ಪಿಕೊಂಡೇ ಇದ್ದೆ. ನಾನು ಸಹ ಈಜಲು ಪ್ರಯತ್ನಿಸಿದೆ, ಆದರೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ.ಕೊನೆಗೆ ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು. ಏನಾದರೂ ಆಗಲಿ ನಾನು ಸಾಯುವುದಿಲ್ಲ, ಬದುಕಿಯೇ ಬದುಕುತ್ತೇನೆ ಎಂದು ಕಶ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ. ನನಗೆ ಬರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು. ನನ್ನ ದೈರ‍್ಯವೇ ನನ್ನನ್ನು ಬದುಕಿಸಿತು’.

ಎಂತಹ ಮನೋದೈರ‍್ಯವಲ್ಲವೇ! ಇದನ್ನು ನಾನು ಎಲ್ಲಿ ಓದಿದ್ದು, ಯಾವಾಗ ಓದಿದ್ದು ಎಂಬ ನೆನಪಿಲ್ಲ.ಆದರೆ ಇದರಿಂದ ನಮಗೆ ತಿಳಿಯುವ ವಿಶಯವೇನೆಂದರೆ, ಸಾವನ್ನು ಎದುರಿಸುವ ಶಕ್ತಿ ಇರುವುದು ಮನಸ್ಸಿಗೆ, ಮಾನಸಿಕ ದೈರ‍್ಯ ಇದ್ದರೆ ಎಂತಹ ಕಾಯಿಲೆ ಬಂದರೂ ಸಾವನ್ನು ಎದುರಿಸಬಹುದು .ಕೊನೆಯ ಕ್ಶಣದವರೆಗೂ ದೈರ‍್ಯ ಕಳೆದುಕೊಳ್ಳಬಾರದು. ಮನಸ್ಸಿನಲ್ಲಿ ಬಯ ಬೀತಿ ಉಂಟಾದರೆ, ಉಸಿರಾಟದಲ್ಲಿ ಏರುಪೇರಾಗುತ್ತದೆ. ಉದ್ವೇಗ ಉಂಟಾಗುತ್ತದೆ. ನನಗೆ ಏನೋ ಆಗುತ್ತದೆ, ನಾನು ಸಾಯುತ್ತೇನೆ ಎಂಬ ಬಾವನೆ ಮನಸ್ಸಿನಲ್ಲಿ ಬಂದರೆ, ಯಾವುದೇ ಔಶದಿ ಕೂಡ ಬದುಕಿಸಲು ಸಾದ್ಯವಿಲ್ಲ. ದೈರ‍್ಯ ಇದ್ದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಗುಣ ಆಗಬಹುದು, ಇಲ್ಲವೇ ಕಾಯಿಲೆ ತೀವ್ರತೆ ಕಡಿಮೆಯಾಗಬಹುದು.

ಹುಟ್ಟಿದ ಮನುಶ್ಯ ಸಾಯಲೇ ಬೇಕು ನಿಜ, ಆದರೆ ಬಯ ಬೀತಿ ಸಾವಿಗೆ ಇನ್ನೂ ಬೇಗ ಆಹ್ವಾನ ಕೊಡುತ್ತದೆ. ಮನೆಯಲ್ಲಿ ಒಬ್ಬ ಸದಸ್ಯ ಬಯ ಪಟ್ಟರೆ, ಬಯ ಸಾಂಕ್ರಾಮಿಕ ರೋಗದಂತೆ ಹರಡಿ ಮನೆಯ ಸದಸ್ಯರೆಲ್ಲರೂ ಬಯ ಪಡುತ್ತಾರೆ. ನಾವು ಬಯಪಟ್ಟುಕೊಳ್ಳುವುದನ್ನು ಬಿಟ್ಟು, ಎಲ್ಲರಿಗೂ ದೈರ‍್ಯ ತುಂಬಿ, ಎಂತಹ ಸನ್ನಿವೇಶ ಬಂದರೂ ದೈರ‍್ಯ ಕಳೆದುಕೊಳ್ಳಬೇಡಿ ಎಂದು ಹುರಿದುಂಬಿಸಬೇಕು. ಹಾಗಂತ ದೈರ‍್ಯ ತಂದುಕೊಳ್ಳಲು ದುಶ್ಚಟಗಳಿಗೆ ದಾಸರಾಗಬಾರದು. ದುಶ್ಚಟಗಳು ಯಾವತ್ತಿಗೂ ಶರೀರಕ್ಕೆ ಹಾನಿ ಮಾಡುತ್ತದೆ. ದೇಹಕ್ಕೆ ಒಳ್ಳೆಯ ಆಹಾರ ನೀಡಿ, ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಯನ್ನು ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಇದರ ಜೊತೆಗೆ ಒಂದಿಶ್ಟು ವ್ಯಾಯಾಮ, ಯೋಗ, ದ್ಯಾನ, ದಾನ ದರ‍್ಮಗಳು ನಮ್ಮನ್ನು ದನಾತ್ಮಕವಾಗಿ ಚಿಂತಿಸಲು ಸಹಾಯ ಮಾಡುತ್ತವೆ. ಮನಸ್ಸು ಪಾಸಿಟಿವ್ ಆಗಿ ಯೋಚಿಸಲು ಶುರು ಮಾಡಿದರೆ ಬದುಕಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ ನಮ್ಮಲ್ಲಿಯೇ ಸಿಗುತ್ತದೆ. ಪ್ರಯತ್ನಿಸಿ ನೋಡಿ, ಬದಲಾವಣೆಗೆ ನಾಂದಿ ಹಾಡಿ.

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: