ಕಾಂಬೋಡಿಯಾದ ಹೊಸವರ‍್ಶದ ಆಚರಣೆ

– .

cambodia new year

ಕಾಂಬೋಡಿಯಾದ ಹೊಸವರ‍್ಶ ಸಾಂಪ್ರದಾಯಿಕ ಸೌರವರ‍್ಶವನ್ನು ಆದರಿಸಿದೆ. ಬಾರತದಲ್ಲೂ ಸೌರಮಾನ ಯುಗಾದಿಯಂದು ಹೊಸವರ‍್ಶ ಆಚರಿಸುವ ಹಲವು ರಾಜ್ಯಗಳಿವೆ. ಕಾಂಬೋಡಿಯಾದಲ್ಲಿ ಸಾಮಾನ್ಯವಾಗಿ ಸುಗ್ಗಿಯ ರುತುವಿನ ಅಂತ್ಯದೊಂದಿಗೆ ಇದು ಹೊಂದಿಕೊಳ್ಳುತ್ತದೆ. ಈ ವರ‍್ಶ ಏಪ್ರಿಲ್ 21ರಂದು ಸೌರಮಾನ ಯುಗಾದಿಯಿತ್ತು. ಕಾಂಬೋಡಿಯಾದ ಹೊಸವರ‍್ಶ ಆಚರಣೆಗೂ, ವಿಶ್ವದ ಅನೇಕ ರಾಶ್ಟ್ರಗಳ ಹೊಸವರ‍್ಶದ ಆಚರಣೆಗೂ ಸಾಕಶ್ಟು ಬಿನ್ನತೆ ಇದೆ. ಬಹುತೇಕ ರಾಶ್ಟ್ರಗಳು ಹೊಸವರ‍್ಶವನ್ನು ಒಂದು ದಿನದ ಉತ್ಸವವನ್ನಾಗಿ ಆಚರಿಸಿದರೆ, ಕಮೇರ್‌ ಹೊಸವರ‍್ಶ ಆಚರಣೆ ಮೂರು ದಿನಗಳ ಕಾಲದಶ್ಟು ವಿಸ್ತಾರವಾಗಿರುತ್ತದೆ. ಕಾಂಬೋಡಿಯನ್ ಹೊಸವರ‍್ಶ ನಡೆಯುವ ಮೂರು ದಿನಗಳ ಕಾಲ ಸಾರ‍್ವಜನಿಕ ರಜೆಯನ್ನು ಗೋಶಿಸಲಾಗುತ್ತದೆ. ಕಮೇರ್ ನುಡಿಯನಲ್ಲಿ ಇದನ್ನು “ಚೌಲ್ ಚಮ್ ತೆಮಿ” ಎಂದು ಕರೆಯಲಾಗುತ್ತೆ. ಇದನ್ನು ಕನ್ನಡಕ್ಕೆ ತರ‍್ಜುಮೆ ಮಾಡಿದಲ್ಲಿ ಅಕ್ಶರಶಹ “ಹೊಸವರ‍್ಶಕ್ಕೆ ಪ್ರವೇಶಿಸು” ಎಂಬ ಅರ‍್ತ ಕೊಡುತ್ತದೆ.

ಸೌರಮಾನ ಯುಗಾದಿಯ ಸಮಯ ಸಾಮಾನ್ಯವಾಗಿ ಸುಗ್ಗಿಯ ಕೊನೆ ಹಾಗೂ ಮೊದಲ ಮಳೆಯ ಆಗಮನದ ದಿನಗಳಲ್ಲಿ ಬರುತ್ತದೆ. ಸುಗ್ಗಿ ಮುಗಿಯುವ ಹೊತ್ತಲ್ಲಿ, ಮಳೆಯಿರದ ಕಾರಣ ಕ್ರುಶಿ ಚಟುವಟಿಕೆಗಳು ಬಹುತೇಕ ಸ್ತಗಿತವಾಗಿರುತ್ತವೆ. ಇದೇ ಹಿನ್ನೆಲೆಯಲ್ಲಿ, ಈ ಸಮಯ ಹೊಸ ವರ‍್ಶವನ್ನು ಬರಮಾಡಿಕೊಳ್ಳಲು ಬಹಳ ಪ್ರಶಸ್ತವಾಗಿರುವುದರಿಂದ, ಎಲ್ಲಾ ರೈತಾಪಿ ವರ‍್ಗದವರೂ ಮುಕ್ತವಾಗಿ ಬಾಗವಹಿಸಲು ಸಾದ್ಯವಾಗುತ್ತದೆ. ಈ ದಾರ‍್ಮಿಕ ನಂಬಿಕೆಯ ಹಾಗೂ ಹವಾಮಾನದ ಕಾರಣಗಳಿಂದಾಗಿ ಈ ದಿನಗಳನ್ನು ಹೊಸವರ‍್ಶ ಆಚರಣೆಗೆ ಅನುವು ಮಾಡಿಕೊಳ್ಳಲಾಗಿದೆ. ಕಾಂಬೋಡಿಯಾದ ಜೊತೆ ಜೊತೆಗೆ ತೈಲ್ಯಾಂಡ್ ಮತ್ತು ಲಾವೋಸ್‍ನಲ್ಲೂ ಸಹ ಇದೇ ರೀತಿಯಲ್ಲಿ, ಇದೇ ದಿನಗಳಲ್ಲಿ ಹೊಸ ವರ‍್ಶದ ಆಚರಣೆ ನಡೆಯುತ್ತದೆ.

ಹೊಸವರ‍್ಶದ ಸಂಬ್ರಮಾಚರಣೆಯ ಕಿರುನೋಟ 

ಕಮೇರ್ ಹೊಸವರ‍್ಶದ ಸಂಬ್ರಮಾಚರಣೆಯ ಮೊದಲ ದಿನವನ್ನು ‘ಮೋಹಾ ಸಂಗ್‍ಕ್ರಾನ್’ ಎಂದು ಗುರುತಿಸಲಾಗುತ್ತದೆ. ಅಂದಿನ ಪ್ರಾರಂಬ, ಬುದ್ದನ ಪ್ರತಿಮೆಗೆ ಅರ‍್ಪಣೆ ಮಾಡುವುದರ ಮೂಲಕ ಆಗುತ್ತದೆ. ಕಾಂಬೋಡಿಯಾದ ಜನರು ಇದನ್ನು ‘ಸ್ರುಶ್ಟಿಯ ದಿನ’ ಎಂದು ನಂಬಿದ್ದಾರೆ. ಕಮೇರ್ ಸಂಪ್ರದಾಯದವರು, ತಾವು ವಾಸಿಸುವ ಮನೆಗಳನ್ನು ಸ್ವಚ್ಚಗೊಳಿಸುವುದರೊಂದಿಗೆ ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಇಡೀ ಮನೆಗೆ ಬೆಳಕನ್ನು ಚೆಲ್ಲುತ್ತಾರೆ. ಪೂಜಾ ವೇದಿಕೆಯ ಮೇಲಿನ ಬುದ್ದನ ಪ್ರತಿಮೆಗೆ ಆಹಾರ ಪದಾರ‍್ತಗಳನ್ನು ಸಮರ‍್ಪಿಸಿ ಆತ್ಮಗಳನ್ನು ಆಹ್ವಾನಿಸುತ್ತಾರೆ.

ಹೊಸವರ‍್ಶದ ಆಚರಣೆಯ ಎರಡನೆಯ ದಿನವನ್ನು ‘ವನಬಾಟ್’ ಎನ್ನಲಾಗುತ್ತದೆ. ವನಬಾಟ್ ದಿನದಂದು ಕಮೇರ್‌ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪನ್ನು ದರಿಸಿ ದಾನ ದರ‍್ಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನ ಬಹಳ ಪ್ರಮುಕವಾದದ್ದು, ಜೀವನದಲ್ಲಿ ಅತಿ ಕಡಿಮೆ ಅದ್ರುಶ್ಟಶಾಲಿಗಳು ಎನ್ನಬಹುದಾದ ಬಡವರು, ಸೇವಕರು, ಸೂರಿಲ್ಲದವರಿಗೆ ಸಹಾಯ ಮಾಡುವ ದಿನವಾಗಿದೆ. ಅಂದು ಉಳ್ಳವರು, ಕೊಡುವ ಮನಸ್ಸಿರುವ ಎಲ್ಲರೂ, ದಾನದ ಮೂಲಕ ಸಹಾಯ ಹಸ್ತ ಚಾಚುವ ದಿನವಾಗಿದೆ. ಈ ರೀತಿ ಸಹಾಯ ಮಾಡಿದ ನಂತರ ಬೌದ್ದವಿಹಾರಗಳಿಗೆ ಹೋಗಿ, ತಮ್ಮ ಕುಟುಂಬದ ಪೂರ‍್ವಜರಿಗೆ ಗೌರವ ಸಲ್ಲಿಸುತ್ತಾರೆ. ಈ ಸುದಿನದ ಸವಿ ನೆನಪಿಗಾಗಿ ತಮ್ಮ ತಮ್ಮ ಕುಟುಂಬದಲ್ಲೇ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಪದ್ದತಿಯೂ ಇದೆ.

ಮೂರನೆಯ ದಿನ ಬೆಳಿಗ್ಗೆ ಎದ್ದು ಶುಚಿರ‍್ಬೂತವಾಗಿ, ಸನ್ಯಾಸಿಗಳಿಂದ ಆಶೀರ‍್ವಚನ ಪಡೆಯಲು ದೇವಸ್ತಾನಗಳಿಗೆ ಬೇಟಿ ನೀಡುತ್ತಾರೆ. ಈ ದಿನವನ್ನು ‘ಲೆಯುಂಗ್ ಸಕ್ಕ್’ ಎಂದು ಗುರುತಿಸುತ್ತಾರೆ. ಬುದ್ದನ ಪ್ರತಿಮೆಯನ್ನು ಸ್ವಚ್ಚಗೊಳಿಸಿ, ನಂತರ ಹೂವುಗಳಿಂದ ಅಲಂಕರಿಸುತ್ತಾರೆ. ಈ ರೀತಿಯಲ್ಲಿ ಬುದ್ದನ ಪ್ರತಿಮೆಯನ್ನು ಸ್ವಚ್ಚಗೊಳಿಸಿದಲ್ಲಿ, ಶುದ್ದಿಗೊಳಿಸಿದಲ್ಲಿ, ಮುಂದಿನ ದಿನಗಳು ಸುಬಿಕ್ಶವಾಗಿರಲಿದ್ದು, ಮಳೆ ಬೆಳೆಗೆ ಯಾವುದೇ ಹಾನಿಯಿರುವುದಿಲ್ಲ, ತೊಂದರೆಗಳಿರುವುದಿಲ್ಲ ಎಂಬ ನಂಬಿಕೆ ಕಮೇರ್ ಜನರಲ್ಲಿದೆ.

ಈ ಎಲ್ಲಾ ವಿಶೇಶತೆಗಳಿಂದಾಗಿ ಕಮೇರ್ ಅತವಾ ಕಾಂಬೋಡಿಯನ್ ಹೊಸವರ‍್ಶದ ಆಚರಣೆ ಕಾಂಬೋಡಿಯಾದ ಬಹುಮುಕ್ಯ ಸಂಬ್ರಮಾಚರಣೆಗಳಲ್ಲಿ ಒಂದಾಗಿದೆ.

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: wikimedia.orglanguageconnections.com , 123newyear.com , yourphnompenh.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: