ಪಂಪ ಬಾರತ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.

ಪಾತ್ರಗಳು

ಧೃತರಾಷ್ಟ್ರ – ಕುರುವಂಶದ ಹಿರಿಯ ಮಗ. ಅಂಬಿಕೆ ಮತ್ತು ವ್ಯಾಸ ರಿಸಿಯ ಮಗ.
ಪಾಂಡು – ಕುರುವಂಶದ ಎರಡನೆಯ ಮಗ. ಅಂಬಾಲಿಕೆ ಮತ್ತು ವ್ಯಾಸ ರಿಸಿಯ ಮಗ
ವಿದುರ – ಅಂಬಿಕೆಯ ದಾಸಿ ಮತ್ತು ವ್ಯಾಸ ರಿಸಿಯ ಮಗ.
ಕುಂತಿ – ಪಾಂಡುರಾಜನ ಮೊದಲನೆಯ ಹೆಂಡತಿ.
ಮಾದ್ರಿ – ಪಾಂಡುರಾಜನ ಎರಡನೆಯ ಹೆಂಡತಿ.
ಕಿಂದಮ – ಕಾಡಿನಲ್ಲಿ ನೆಲೆಸಿದ್ದ ಒಬ್ಬ ಮುನಿ. ಪಾಂಡುರಾಜನಿಗೆ ಶಾಪವನ್ನು ನೀಡಿದವನು.
ಗಾಂಗೇಯ – ಗಂಗಾದೇವಿ ಮತ್ತು ಶಂತನು ರಾಜನ ಮಗ.

============================

ಶಾಪಕ್ಕೆ ಗುರಿಯಾದ ಪಾಂಡುರಾಜ

ಕಲ್ಪಲತೆಗಳ್ ಎರಡಱ ನಡುವಣ ಕಲ್ಪವೃಕ್ಷಮ್ ಇರ್ಪಂತೆ ಆಕೆಗಳ್ ಇರ್ವರುಮ್ ಎರಡುಮ್ ಕೆಲದೊಳಿರೆ ಇರ್ದ ಪಾಂಡುರಾಜಂಗೆ ಧೃತರಾಷ್ಟ್ರನ್ ಅಂಗಹೀನನ್ ಎಂದು ವಿವಾಹದ ಒಸಗೆಯೊಡನೆ ಪಟ್ಟಬಂಧದ ಒಸಗೆಯಮ್ ಮಾಡಿ ನೆಲನನ್ ಆಳಿಸೆ; ಗಂಡರ ನೆತ್ತಿಯೊಳ್ ಬಾಳನ್ ಇನ್ನು ಒತ್ತಿ ಊಱುಗುಮ್ ಎಂದೊಡೆ ಮೀಱುವೆವು ಎಂಬ ಮಾಂಡಳಿಕರ್, ಈಯದರ್ ಎಂಬ ಅದಟರ್, ವಯಲ್ಗೆ ಮೆಯ್ದೋಱುವೆವು ಎಂಬ ಪೂಣಿಗರ್ ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ , ಪಾಂಡರಾಜನಾ ತೇಜದ ದಳ್ಳುರಿ ಏನ್ ಪಿರಿದೊ ನಭಕ್ಕೆ ಪಾಱಿದುದು.

ಸಮುದ್ರಮುದ್ರಿತ ಧರಾಚಕ್ರಮ್ ಬೆಸಕೆಯ್ದತ್ತು ; ಪ್ರತಾಪಕ್ಕೆ ಅಗುರ್ವಿಸೆ ದಿಶಾಚಕ್ರಮ್ ಗೋಳುಂಡೆಗೊಳುತ್ತುಮ್ ಇರ್ದುದು . ಪೊದಳ್ದ ಆಜ್ಞೆಗಮ್ ಪೆಸರ್ಗಮ್ ವಿಯಚ್ಚಕ್ರಮ್ ಮುನ್ನಮೆ ರೂಪುವೋದುದು . ಆ ಜಸಮ್ ಸಮಂತು ಎಂಬಿನಮ್ ಪಾಂಡುರಮ್ ಆದುದು. ಆ ನೃಪರೊಳ್ ಆರ್ ಆ ಪಾಂಡುರಾಜಂಬರಮ್; ಅಂತು ಪಾಂಡುರಾಜನ್ ಅಧಿಕ ತೇಜನುಮ್, ಅವನತ ವೈರಿ ಭೂಭೃತ್ ಸಮಾಜನುಮ್ ಆಗಿ ನೆಗಳುತ್ತ ಇರ್ದು,

ಒಂದು ದಿವಸಮ್ ಅಳ್ತಿಯಿಮ್ ತೋಪಿನ ಬೇಂಟೆಯನ್ ಆಡಲ್ ಪೋಗಿ….ದಿವ್ಯಮುನಿಯುಮ್ ಮನೋಜಸುಖಕ್ಕೆ ಸೋಲ್ತು ನೆರೆಯಲ್ಕೆ ಇನಿಯಳನ್ ಅಳ್ತಿಯಿಂದೆ ಮೃಗಿ ಮಾಡಿ ಅಲಂಪಿನೆ ಮೃಗಮ್ ಆಗಿ ಮರಳ್ದು ಕೂಡೆ…..ಮೆಲ್ಲನೆ ಮೃಗಮ್ ಎಂದು ಸಾರ್ದು….ನೆಱನಮ್ ನೋಡಿ ನರೇಂದ್ರನ್ ಮೃಗಚಾರಿಯಮ್ ಭೋಂಕನೆ ಎಚ್ಚು ಮಾಣದೆ ಒಂದು ಮಾರಿಯನ್ ತನಗೆ ತಂದನ್ . ಆಗಳ್ ಪ್ರಳಯದ ಉಳ್ಕುಮ್ ಉಳ್ಕುವಂತೆ ತನ್ನ ಎಚ್ಚ ಅಂಬು ಮುನಿಕುಮಾರನ ಕಣ್ಣೊಳಮ್ ಎರ್ದೆಯೊಳಮ್ ಉಕ್ಕೆ .. …

ಕಿಂದಮ ಮುನಿ: ಪೇಳಿಮ್ ಎನ್ನನ್ ಆವನ್ ಎಚ್ಚನ್?

(ಎಂಬ ಮುನಿಯ ಮುನಿದ ಸರಮನ್ ಕೇಳ್ದು ಬಿಲ್ಲನ್ ಅಂಬುಮನ್ ಈಡಾಡಿ ತನ್ನ ಮುಂದೆ ನಿಂದಿರ್ದ ಭೂಪನಮ್ ಮುನಿ ನೋಡಿ…)

ಕಿಂದಮ ಮುನಿ: ಸನ್ನತದಿಮ್ ರತಕ್ಕೆ ಎಳಸಿ ನಲ್ಲಳೊಳ್ ಓತು ಒಡಗೂಡಿದ ಎನ್ನನ್ ಇಂತು ಅನ್ನಯಮ್ ಎಚ್ಚುದರ್ಕೆ ಅದು ದಂಡಮ್ ಪೆಱತಿಲ್ಲ . ನಲ್ಲಳೊಳ್ ಒಱಲ್ದು ನೀನ್ ನಡೆ ನೋಡಿಯುಮ್ ಬಯಸಿ ಕೂಡಿಯುಮ್ ಆಗಡೆ ಸಾವೆಯಾಗಿ ಪೋಗಿನ್ನು.

(ಎನೆ ರೌದ್ರಶಾಪ ಪರಿತಾಪ ವಿಳಾಪದೊಳ್)

ಪಾಂಡುರಾಜ: (ತನ್ನಲ್ಲಿಯೇ) ಎನ್ನ ಗೆಯ್ದ ಕಾಮಾಂಕ್ರಾಂತಕ್ಕೆ ಕಾಮಕೃತಮ್ ಏನ್ ಪಿರಿದಲ್ತು. ಎತ್ತ ವನಮ್ ಎತ್ತ… ಮೃಗಯಾವೃತ್ತಕಮ್. ಈ ತಪಸ್ವಿ ಎತ್ತ ….ಆನ್ ಎತ್ತ . ಮೃಗಮ್ ಎಂದು ಎಂತು ಎಚ್ಚೆನ್. ಇದೆಲ್ಲಮ್ ಅಘಟಿತಘಟಿತಮ್ . ಆತ್ಮಕರ್ಮಾಯತ್ತಮ್ ಪೆಱತಲ್ತು.

( ಎಂದು ಚಿಂತಿಸುತ್ತುಮ್ ಪೊಳಲ್ಗೆ ಮಗುಳ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮ್ ಎಲ್ಲಮಮ್ ಪೇಳ್ದು , ಸಮಸ್ತವಸ್ತುಗಳಮ್ ದೀನ ಅನಾಥಜನಂಗಳ್ಗೆ ಸೂಱೆಗೊಟ್ಟು ನಿಜ ಪರಿವಾರಮಮ್ ಬರಿಸಿ)

ಪಾಂಡುರಾಜ: ಅನಂಗ ಜಂಗಮಲತಾ ಲಲಿತಾಂಗಿಯರಿಂದಮ್ ಅಲ್ತೆ ಸಂಸಾರಮ್ ಎಂಬುದು ಸಾರಮ್. ಇದು ತನ್ಮುನಿ ಶಾಪದಿಂದಮ್ ಇನ್ ಎನಗೆ ತಪ್ಪುದು. ವನವಾಸದೊಳ್ ಇರ್ಪೆನ್. ಇದರ್ಕೆ ಇನ್ನಾರುಮ್ ವಕ್ರಿಸದಿರಿಮ್.

(ಎಂದು ದುರ್ವಾರ ಪರಾಕ್ರಮನ್ ತಳರೆ, ಬಾರಿಸಿವಾರಿಸಿ ಕುಂತಿ ಮಾದ್ರಿಯರ್ ಬೆನ್ನ ಬೆನ್ನನೆ ಬರೆ ಬಿನ್ನ ಬಿನ್ನನೆ ಪೋಗಿ, ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ ಭಂಗಮಮ್; ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಸಿತೋತ್ತುಂಗಮಮ್ ; ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತಮಂತ್ರ ಪೂತಾಂಗಮಮ್ ; ಉದ್ಯಚ್ಛೃಂಗಮನ್ ಆ ಶತಶೃಂಗಮಮ್ ನೃಪನೆಯ್ದಿದನ್.)

============================

ಪದ ವಿಂಗಡಣೆ ಮತ್ತು ತಿರುಳು

ಕಲ್ಪಲತೆ+ಗಳ್; ಲತೆ=ಬಳ್ಳಿ/ಹಂಬು; ವೃಕ್ಷ=ಮರ; ದೇವಲೋಕದ ಒಡೆಯನಾದ ದೇವೇಂದ್ರನ ಅಮರಾವತಿ ಪಟ್ಟಣದ ಉದ್ಯಾನದಲ್ಲಿ ಕಲ್ಪವ್ರುಕ್ಶ ಎಂಬ ಮರ ಮತ್ತು ಕಲ್ಪಲತೆ ಎಂಬ ಹೆಸರಿನ ಬಳ್ಳಿಗಳಿವೆ. ಈ ಲತೆ ಮತ್ತು ಮರದ ಬಳಿ ನಿಂತು ವ್ಯಕ್ತಿಯು ತನ್ನ ಮನದಲ್ಲಿ ಕೋರಿಕೊಂಡ ಬಯಕೆಗಳೆಲ್ಲವನ್ನೂ ಇವು ಈಡೇರಿಸುತ್ತವೆ ಎಂಬ ಕಲ್ಪನೆಯು ಜನಮನದಲ್ಲಿದೆ; ಇರ್ಪ+ಅಂತೆ; ಇರ್ಪ=ಇರುವ; ಅಂತೆ=ಹಾಗೆ; ಇರ್ದ=ಕಂಡುಬರುತ್ತಿರುವ;

ಕಲ್ಪಲತೆಗಳ್ ಎರಡಱ ನಡುವಣ ಕಲ್ಪವೃಕ್ಷಮ್ ಇರ್ಪಂತೆ ಇರ್ದ=ಎರಡು ಕಲ್ಪಲತೆಗಳ ನಡುವೆ ಕಂಗೊಳಿಸುತ್ತಿರುವ ಕಲ್ಪವ್ರುಕ್ಶದಂತೆ ಕಂಡುಬರುತ್ತಿರುವ;

ಆಕೆ+ಗಳ್; ಆಕೆಗಳು=ಮದುವಣಗಿತ್ತಿಯರಾದ ಕುಂತಿ ಮತ್ತು ಮಾದ್ರಿ; ಇರ್ವರ್+ಉಮ್; ಉಮ್=ಊ; ಎರಡು+ಉಮ್; ಕೆಲ+ಒಳ್+ಇರೆ; ಕೆಲ=ಪಕ್ಕ; ಇರೆ=ಇರಲು;

ಆಕೆಗಳ್ ಇರ್ವರುಮ್ ಎರಡುಮ್ ಕೆಲದೊಳಿರೆ ಇರ್ದ ಪಾಂಡುರಾಜಂಗೆ=ತನ್ನ ಅಕ್ಕಪಕ್ಕದಲ್ಲಿ ಮದುವಣಗಿತ್ತಿಯರಾದ ಕುಂತಿ ಮತ್ತು ಮಾದ್ರಿಯರೊಡನೆ ಕುಳಿತಿರುವ ಪಾಂಡುರಾಜನಿಗೆ;

ಅಂಗ=ದೇಹ; ಹೀನ=ಊನಗೊಂಡಿರುವುದು/ಇಲ್ಲದಿರುವುದು; ಅಂಗಹೀನ=ಕಣ್ಣು ಕಾಣದ ಕುರುಡ; ವಿವಾಹ=ಮದುವೆ/ಲಗ್ನ; ಒಸಗೆ+ಒಡನೆ; ಒಸಗೆ=ಮಂಗಳ ಕಾರ‍್ಯ; ಒಡನೆ=ಜತೆಯಲ್ಲಿಯೇ; ಪಟ್ಟ=ಸಿಂಹಾಸನ/ವ್ಯಕ್ತಿಯನ್ನು ರಾಜನನ್ನಾಗಿ ಮಾಡುವಾಗ ಅವನ ಹಣೆಗೆ ಕಟ್ಟುವ ಪಟ್ಟಿ; ಬಂಧ=ಕಟ್ಟು; ಪಟ್ಟಬಂಧ=ವ್ಯಕ್ತಿಯ ಹಣೆಗೆ ಗದ್ದುಗೆಯ ಸೂಚಕವಾದ ಪಟ್ಟಿಯೊಂದನ್ನು ಕಟ್ಟಿ, ತಲೆಗೆ ಕಿರೀಟವನ್ನು ತೊಡಿಸಿ, ಸಿಂಹಾಸನದಲ್ಲಿ ಕುಳ್ಳಿರಿಸುವುದು; ನೆಲನ್+ಅನ್; ನೆಲ=ನಾಡು/ರಾಜ್ಯ; ಅನ್=ಅನ್ನು; ಆಳಿಸೆ=ಆಡಳಿತವನ್ನು ನಡೆಸುವಂತೆ ಮಾಡಲು;

ಧೃತರಾಷ್ಟ್ರನ್ ಅಂಗಹೀನನ್ ಎಂದು ವಿವಾಹದ ಒಸಗೆಯೊಡನೆ ಪಟ್ಟಬಂಧದ ಒಸಗೆಯಮ್ ಮಾಡಿ ನೆಲನನ್ ಆಳಿಸೆ=ಕುರುವಂಶದ ಮಕ್ಕಳಲ್ಲಿ ಹಿರಿಯವನಾದ ದ್ರುತರಾಶ್ಟ್ರನು ಹುಟ್ಟುಗುರುಡನಾಗಿದ್ದರಿಂದ, ಕುರುವಂಶದ ಎರಡನೆಯ ಮಗನಾದ ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರೊಡನೆ ಮದುವೆಯನ್ನು ಮಾಡುವಾಗಲೇ ಗಾಂಗೇಯನು ಪಾಂಡುವಿಗೆ ರಾಜಪಟ್ಪವನ್ನು ಕಟ್ಟಿ ನಾಡನ್ನು ಆಳಿಸತೊಡಗಲು;

ಗಂಡ=ಶೂರ/ವೀರ; ನೆತ್ತಿ+ಒಳ್; ನೆತ್ತಿ=ತಲೆಯ ಮೇಲಿನ ಜಾಗ; ಒಳ್=ಅಲ್ಲಿ; ಬಾಳ್+ಅನ್; ಬಾಳ್=ಕತ್ತಿ; ಒತ್ತು=ಚುಚ್ಚು/ತಿವಿ/ಅದುಮು; ಊಱು=ನೆಡು/ಇಡು/ನಾಟಿಸು; ಊಱುಗುಮ್ ಎಂದೊಡೆ=ನೆಡುತ್ತೇನೆ ಎಂದು ಹೇಳಿದರೆ;

ಇನ್ನು ಗಂಡರ ನೆತ್ತಿಯೊಳ್ ಬಾಳನ್ ಒತ್ತಿ ಊಱುಗುಮ್ ಎಂದೊಡೆ=ಇನ್ನು ಮುಂದೆ ತನ್ನ ಆಡಳಿತಕ್ಕೆ ಎದುರಾಗಿ ಬರುವ ವೀರರ ನೆತ್ತಿಯಲ್ಲಿ ಕತ್ತಿಯನ್ನು ಚುಚ್ಚಿ ನೆಡಲಾಗುವುದು ಎಂದು ಪಾಂಡುರಾಜನು ಅಬ್ಬರಿಸಲು; ಇದೊಂದು ರೂಪಕವಾಗಿ ಬಳಕೆಯಾಗಿದೆ. ಅಂದರೆ ಎದುರಾಳಿಯು ಎಂತಹ ವೀರನೇ ಆಗಿರಲಿ ಅವನ ಸೊಕ್ಕನ್ನು ಅಡಗಿಸಿ ಅಡಿಯಾಳನ್ನಾಗಿ ಮಾಡಿಕೊಳ್ಳುತ್ತೇನೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಮೀಱು=ಕಡೆಗಣಿಸು/ಲೆಕ್ಕಿಸದಿರು; ಎಂಬ=ಎನ್ನುವ/ಎಂದು ಹೇಳುವ; ಮಾಂಡಳಿಕ=ರಾಜನ ಕಯ್ ಕೆಳಗೆ ರಾಜ್ಯಕ್ಕೆ ಸೇರಿದ ಒಂದು ಪ್ರಾಂತ್ಯವನ್ನು ಆಳುತ್ತಿರುವವನು;

ಮೀಱುವೆವು ಎಂಬ ಮಾಂಡಳಿಕರ್=ರಾಜನ ಇರುವಿಕೆಯನ್ನೇ ಲೆಕ್ಕಿಸದೆ ತಮ್ಮ ಇಚ್ಚೆಗೆ ತಕ್ಕಂತೆ ನಡೆದುಕೊಳ್ಳುತ್ತೇವೆ ಎಂದು ಎದುರುಬೀಳುವ ಮಾಂಡಲಿಕರು;

ಈ=ಕೊಡು/ನೀಡು; ಈಯದರ್=ಕೊಡುವುದಿಲ್ಲ; ಅದಟ=ಶೂರ/ಪರಾಕ್ರಮಿ/ಎದೆಗಾರ;

ಈಯದರ್ ಎಂಬ ಅದಟರ್=ರಾಜನಿಗೆ ಕಪ್ಪಕಾಣಿಕೆಗಳನ್ನು ನೀಡುವುದಿಲ್ಲವೆಂದು ಹೇಳುವ ಎದೆಗಾರರು;

ವಯಲ್=ರಣರಂಗ/ಕಾಳೆಗದ ನೆಲ; ಮೆಯ್+ತೋಱುವೆವು; ಮೆಯ್ದೋರು=ಹಾಜರಾಗುವುದು/ಕಾಣಿಸಿಕೊಳ್ಳುವುದು; ಪೂಣ್=ಆಣೆಯಿಕ್ಕು/ಪಣ ತೊಡು;

ವಯಲ್ಗೆ ಮೆಯ್ದೋಱುವೆವು ಎಂಬ ಪೂಣಿಗರ್=ರಾಜನನ್ನು ರಣರಂಗದಲ್ಲಿ ಎದುರಿಸಲು ಬರುತ್ತೇವೆಯೇ ಹೊರತು ರಾಜನಿಗೆ ಎಂದೆಂದಿಗೂ ಅಡಿಯಾಳಾಗುವುದಿಲ್ಲ ಎಂದು ಪಣ ತೊಟ್ಟಿರುವವರು;

ಅಡಂಗು=ಹಿಂದಕ್ಕೆ ಸರಿ/ಮರೆಯಾಗು; ಕುನುಂಗು=ಬಗ್ಗು/ಬಾಗು; ಸಿಡಿಲ್=ಚೆದರು/ಹರಡು; ಜೋಲು=ಕುಸಿದು ಬೀಳು/ಇಳಿ ಬೀಳು; ಕಾಯ್ಪು+ಆರೆ; ಕಾಯ್ಪು=ಮುನಿಸು/ಉದ್ವೇಗ/ಬಿಸುಪು; ಆರು=ತಣ್ಣಗಾಗು/ನಂದು;

ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ=ರಾಜನಿಗೆ ಕಪ್ಪಕಾಣಿಕೆಗಳನ್ನು ನೀಡದೆ, ರಾಜನ ಅಪ್ಪಣೆಗಳನ್ನು ಲೆಕ್ಕಿಸದೆ ಎದುರಾಗಿ ನಡೆಯುತ್ತಿದ್ದ ಮಾಂಡಲಿಕರನ್ನು ಮತ್ತು ಇತರ ವೀರರನ್ನು ಪಾಂಡುರಾಜನು ತನ್ನ ಬಾಹುಬಲದಿಂದ ಸದೆಬಡಿಯಲು ಎದುರಾಳಿಗಳ ಸೊಕ್ಕು ಅಡಗಿ, ಅವರೆಲ್ಲರೂ ಚದುರಿಹೋಗಿ ಕುಗ್ಗಿ ಕುಸಿದು ತಣ್ಣಗಾದರು;

ತೇಜ=ಹೊಳಪು/ಕಾಂತಿ/ಶಕ್ತಿ; ದಳ್ಳುರಿ=ದೊಡ್ಡ ಪ್ರಮಾಣದ ಬೆಂಕಿ/ದಗದಗನೆ ಹತ್ತಿ ಉರಿಯುತ್ತಿರುವ ಬೆಂಕಿ; ತೇಜದ ದಳ್ಳುರಿ=ಇದೊಂದು ರೂಪಕವಾಗಿ ಬಳಕೆಯಾಗಿದೆ. ಪಾಂಡುರಾಜನ ತೋಳಿನ ಬಲ ಮತ್ತು ಹಗೆಗಳನ್ನು ಸದೆಬಡಿಯಬಲ್ಲ ಪರಾಕ್ರಮದ ಹಿರಿಮೆಯನ್ನು ಸೂಚಿಸುತ್ತದೆ; ಪಿರಿದು=ದೊಡ್ಡದು; ನಭ=ಆಕಾಶ/ಗಗನ; ಪಾಱು=ಹಾರು/ನೆಗೆ;

ಪಾಂಡರಾಜನಾ ತೇಜದ ದಳ್ಳುರಿ ಏನ್ ಪಿರಿದೊ ನಭಕ್ಕೆ ಪಾಱಿದುದು=ಪಾಂಡುವಿನ ಪರಾಕ್ರಮ ಬಹು ದೊಡ್ಡದು. ದಗದಗನೆ ಉರಿಯುತ್ತಿರುವ ದಳ್ಳುರಿಯು ಹೇಗೆ ಗಗನದ ಕಡೆಗೆ ಬಹು ಎತ್ತರೆತ್ತರಕ್ಕೆ ಏರುತ್ತದೆಯೋ ಅಂತೆಯೇ ಪಾಂಡುರಾಜನ ಪರಾಕ್ರಮವು ಅಚ್ಚರಿಯನ್ನು ಉಂಟುಮಾಡುವಂತೆ ದೊಡ್ಡದಾಗಿ ಎಲ್ಲೆಡೆಯಲ್ಲಿಯೂ ಹಬ್ಬಿತ್ತು;

ಸಮುದ್ರ=ಕಡಲು; ಮುದ್ರಿತ=ಸುತ್ತುಗಟ್ಟು/ಸುತ್ತುವರಿ; ಧರಾ=ಭೂಮಿ; ಚಕ್ರ=ಮಂಡಲ; ಧರಾಚಕ್ರ=ಬೂಮಂಡಲ/ರಾಜ್ಯ/ಸಾಮ್ರಾಜ್ಯ; ಬೆಸಕಯ್=ಹೇಳಿದ ಕೆಲಸವನ್ನು ಮಾಡು/ಅಪ್ಪಣೆಯನ್ನು ಪರಿಪಾಲಿಸು;

ಸಮುದ್ರಮುದ್ರಿತ ಧರಾಚಕ್ರಮ್ ಬೆಸಕೆಯ್ದತ್ತು=ಕಡಲಿನಿಂದ ಸುತ್ತುವರಿದ ರಾಜ್ಯದಲ್ಲಿ ಪಾಂಡುರಾಜನ ಅಪ್ಪಣೆಯಂತೆ ಆಡಳಿತ ನಡೆಯುತ್ತಿತ್ತು;

ಪ್ರತಾಪ=ಶಕ್ತಿ/ಪರಾಕ್ರಮ; ಅಗುರ್=ಹೆದರು; ಅಗುರ್ವಿಸೆ=ಹೆದರಿಕೊಂಡು; ದಿಶಾ=ದಿಕ್ಕು; ದಿಶಾಚಕ್ರ=ದಿಕ್ಕುಗಳಿಂದ ಕೂಡಿರುವ ಬೂಮಂಡಲ; ಗೋಳುಂಡೆ+ಕೊಳ್+ಉತ್ತ+ಉಮ್; ಗೋಳುಂಡೆ=ಅತಿಯಾದ ಸಂಕಟ/ಮಿತಿಮೀರಿದ ಅಳಲು; ಕೊಳ್=ಹೊಂದು/ಪಡೆ; ಉಮ್=ಊ; ಇರ್ದುದು=ಇತ್ತು;

ಪ್ರತಾಪಕ್ಕೆ ಅಗುರ್ವಿಸೆ ದಿಶಾಚಕ್ರಮ್ ಗೋಳುಂಡೆಗೊಳುತ್ತುಮ್ ಇರ್ದುದು=ಪಾಂಡುರಾಜನ ಪ್ರತಾಪಕ್ಕೆ ಹೆದರಿ ಬೂಮಂಡಲದ ರಾಜರೆಲ್ಲರೂ ಅತಿಯಾದ ಸಂಕಟದಿಂದ ಗೋಳಿಡುತ್ತಿದ್ದರು;

ಪೊದಳ್=ಪ್ರಕಟವಾಗು; ಆಜ್ಞೆ=ಅಪ್ಪಣೆ; ಪೆಸರ್=ಹೆಸರು; ವಿಯಚ್ಚಕ್ರ=ಗಗನ ಮಂಡಲ/ಆಕಾಶ ಪ್ರದೇಶ; ಮುನ್ನಮ್=ಮೊದಲು; ರೂಪು+ಪೋದುದು; ರೂಪು=ಆಕಾರ; ಪೋದುದು=ಹೋಯಿತು; ರೂಪುವೋದುದು=ಮರೆಯಾಯಿತು

ಪೊದಳ್ದ ಆಜ್ಞೆಗಮ್ ಪೆಸರ್ಗಮ್ ವಿಯಚ್ಚಕ್ರಮ್ ಮುನ್ನಮೆ ರೂಪುವೋದುದು=ಪಾಂಡುರಾಜನಿಂದ ಪ್ರಕಟಗೊಂಡ ಅಪ್ಪಣೆಯಿಂದ ಮತ್ತು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ ಹೆಸರಿನಿಂದ ಗಗನ ಮಂಡಲವೇ ಮರೆಯಾಯಿತು; ಈ ಬಗೆಯ ಅತಿಶಯದ ನುಡಿಗಳ ಮೂಲಕ ಪಾಂಡುರಾಜನ ಶಕ್ತಿ ಮತ್ತು ಹೆಸರನ್ನು ಕೊಂಡಾಡಲಾಗುತ್ತಿದೆ;

ಜಸ=ಯಶಸ್ಸು/ಕೀರ್ತಿ; ಸಮಂತು=ಸೊಗಸು/ಅಂದ/ಚೆನ್ನಾಗಿ; ಎಂಬಿನಮ್=ಎನ್ನುವ ಹಾಗೆ; ಪಾಂಡುರ=ಬಿಳಿಯ ಬಣ್ಣ; ಆದುದು=ಆಯಿತು;

ಆ ಜಸಮ್ ಸಮಂತು ಎಂಬಿನಮ್ ಪಾಂಡುರಮ್ ಆದುದು=ಪಾಂಡುರಾಜನ ಕೀರ‍್ತಿಯು ಬಹಳ ಚೆನ್ನಾಗಿದೆ ಎನ್ನುವಂತೆ ಎಲ್ಲೆಡೆಯಲ್ಲಿಯೂ ಬೆಳಗತೊಡಗಿತು;

ನೃಪರ್+ಒಳ್; ನೃಪ=ರಾಜ; ಆರ್=ಯಾರು; ಪಾಂಡುರಾಜಮ್+ಬರಮ್; ಬರ=ವರೆಗೆ;

ಆ ನೃಪರೊಳ್ ಆರ್ ಆ ಪಾಂಡುರಾಜಂಬರಮ್=ರಾಜರ ಸಮೂಹದಲ್ಲಿ ಪಾಂಡುರಾಜನ ಪರಾಕ್ರಮ ಮತ್ತು ಕೀರ‍್ತಿಗೆ ಸಮಾನರಾದವರು ಯಾರೊಬ್ಬರೂ ಇಲ್ಲ. ಅಂದರೆ ಇವನ ಮಟ್ಟಕ್ಕೆ ಏರುವ ಶಕ್ತಿ ಇನ್ನಿತರ ರಾಜರಲ್ಲಿ ಇಲ್ಲ;

ಅಂತು=ಆ ರೀತಿ; ಅಧಿಕ=ಹೆಚ್ಚಿನ ; ತೇಜನ್+ಉಮ್; ತೇಜ=ಶಕ್ತಿ; ತೇಜನ್=ಶಕ್ತಿವಂತ; ಉಮ್=ಊ;

ಅಂತು ಪಾಂಡುರಾಜನ್ ಅಧಿಕ ತೇಜನುಮ್=ಆ ರೀತಿ ಪಾಂಡುರಾಜನು ದೊಡ್ಡ ಶಕ್ತಿಶಾಲಿಯೂ;

ಅವನತ=ಬಗ್ಗಿದ; ವೈರಿ=ಹಗೆ/ಶತ್ರು; ಭೂಭೃತ್=ರಾಜ; ಸಮಾಜನ್+ಉಮ್; ಸಮಾಜ=ಗುಂಪು/ಸಮೂಹ;

ಅವನತ ವೈರಿ ಭೂಭೃತ್ ಸಮಾಜನುಮ್ ಆಗಿ=ಹಗೆಗಳಾಗಿದ್ದ ರಾಜರ ಸಮೂಹವು ತನಗೆ ತಲೆಬಗ್ಗಿ ನಡೆಯುವಂತೆ ಮಾಡಿ;

ನೆಗಳ್=ಹೆಸರುವಾಸಿಯಾಗು/ಕೀರ್ತಿವಂತನಾಗು; ಇರ್ದು+ಒಂದು;

ನೆಗಳುತ್ತ ಇರ್ದು=ಹೆಸರುವಾಸಿಯಾಗಿ ಬಾಳುತ್ತಿರಲು;

ಅಳ್ತಿ+ಇನ್; ಅಳ್ತಿ=ಒಲವು/ಪ್ರೀತಿ/ಆಸೆ; ಇನ್=ಇಂದ; ತೋಪು=ಮರಗಿಡಗಳಿಂದ ಕಿಕ್ಕಿರಿದು ತುಂಬಿರುವ ಪ್ರದೇಶ; ಬೇಂಟೆ+ಅನ್; ಬೇಂಟೆ=ಪ್ರಾಣಿಗಳನ್ನು ಸೆರೆಹಿಡಿಯುವುದು ಇಲ್ಲವೇ ಕೊಲ್ಲುವುದು; ತೋಪಿನ ಬೇಂಟೆ=ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವಾಗ ಬೇಟೆಗಾರರು ಅನುಸರಿಸುವ ತಂತ್ರಗಳಲ್ಲಿ ಒಂದು ಬಗೆಯದು; ಅನ್=ಅನ್ನು; ಪೋಗಿ=ಹೋಗಿ;

ಒಂದು ದಿವಸಮ್ ಅಳ್ತಿಯಿನ್ ತೋಪಿನ ಬೇಂಟೆಯನ್ ಆಡಲ್ ಪೋಗಿ=ಒಂದು ದಿನ ಪಾಂಡುರಾಜನು ತುಂಬಾ ಆಸೆಯಿಂದ ತೋಪಿನ ಬೇಟೆಯಾಡಲೆಂದು ಕಾಡಿಗೆ ಬಂದು;

ದಿವ್ಯ+ಮುನಿ+ಉಮ್; ದಿವ್ಯ=ಉತ್ತಮವಾದುದು; ಮುನಿ=ರಿಸಿ; ಉಮ್=ಊ; ಮನೋಜ=ಹೆಣ್ಣು ಗಂಡಿನ ಮಯ್ ಮನದ ಕಾಮ, ಪ್ರಣಯ ಮತ್ತು ಪ್ರೇಮದ ಒಳಮಿಡಿತಗಳಿಗೆ ಒಬ್ಬ ದೇವತೆಯನ್ನು ಕಲ್ಪಿಸಿಕೊಳ್ಳಲಾಗಿದೆ. ಈ ದೇವತೆಯನ್ನು ‘ ಮನೋಜ/ಮದನ/ಮನ್ಮತ/ಕಾಮದೇವ ’ ಎಂಬ ಹೆಸರುಗಳಲ್ಲಿ ಕರೆಯುತ್ತಾರೆ; ಮನೋಜಸುಖ=ಗಂಡುಹೆಣ್ಣಿನ ದೇಹಗಳ ಕೂಡುವಿಕೆಯಿಂದ ದೊರೆಯುವ ಆನಂದ; ಸೋಲ್=ಮೋಹಗೊಳ್ಳುವುದು;

ದಿವ್ಯಮುನಿಯುಮ್ ಮನೋಜಸುಖಕ್ಕೆ ಸೋಲ್ತು=ಕಿಂದಮನೆಂಬ ಹೆಸರಿನ ದೊಡ್ಡ ಮುನಿಯೊಬ್ಬನು ಹೆಣ್ಣಿನ ದೇಹದೊಡನೆ ಕಾಮದ ನಂಟನ್ನು ಹೊಂದಿ ಆನಂದವನ್ನು ಪಡೆಯಬೇಕೆಂಬ ಮೋಹಕ್ಕೆ ಒಳಗಾಗಿ;

ನೆರೆ=ಕೂಡು; ನೆರೆಯಲ್ಕೆ=ಜತೆಗೂಡುವುದಕ್ಕಾಗಿ; ಇನಿಯಳ್+ಅನ್; ಇನಿಯಳ್=ಹೆಂಡತಿ; ಇನಿಯಳನ್=ತನ್ನ ಒಲವಿನ ಹೆಂಡತಿಯನ್ನು; ಅಳ್ತಿ+ಇಂದೆ; ಮೃಗಿ=ಹೆಣ್ಣು ಜಿಂಕೆ;

ನೆರೆಯಲ್ಕೆ ಇನಿಯಳನ್ ಅಳ್ತಿಯಿಂದೆ ಮೃಗಿ ಮಾಡಿ=ದೇಹದ ಮಿಲನಕ್ಕಾಗಿ ತನ್ನ ಒಲವಿನ ಹೆಂಡತಿಯನ್ನು ಪ್ರೀತಿಯಿಂದ ಹೆಣ್ಣು ಜಿಂಕೆಯನ್ನಾಗಿ ಮಾಡಿ;

ಅಲಂಪು=ಬಹಳವಾದ ಬಯಕೆ/ಹೆಚ್ಚಿನ ಆಸೆ; ಮೃಗ=ಜಿಂಕೆ/ಯಾವುದೇ ಒಂದು ಬಗೆಯ ಪ್ರಾಣಿ; ಮರಳ್=ಕುದಿ/ಒಳಮಿಡಿತಗಳ ಉದ್ವೇಗ/ಕಾಮದ ಬಿಸಿ; ಕೂಡು=ಸೇರು;

ಅಲಂಪಿನೆ ಮೃಗಮ್ ಆಗಿ ಮರಳ್ದು ಕೂಡೆ=ಅತಿ ಹೆಚ್ಚಿನ ಬಯಕೆಯಿಂದ ಕಿಂದಮ ರಿಸಿಯು ತಾನು ಗಂಡು ಜಿಂಕೆಯಾಗಿ ರೂಪುಗೊಂಡು ಕಾಮದ ಒಳಮಿಡಿತಗಳಿಂದ ಬಿಸುಪೇರಿ ತನ್ನ ಹೆಂಡತಿಯೊಡನೆ ಜತೆಗೂಡಿರಲು;

ನರೇಂದ್ರ=ರಾಜ; ಮೆಲ್ಲನೆ=ಸದ್ದು ಕೇಳಿಸದಂತೆ ಹೆಜ್ಜೆಗಳನ್ನು ಇಡುತ್ತ; ಸಾರ್=ಹತ್ತಿರಕ್ಕೆ ಬರುವುದು/ಸಮೀಪಿಸು;

ನರೇಂದ್ರನ್ ಮೆಲ್ಲನೆ ಸಾರ್ದು ಮೃಗಮ್ ಎಂದು=ಪಾಂಡುರಾಜನು ಮೆಲ್ಲಗೆ ಹತ್ತಿರ ಬಂದು, ಕಾಮಪರವಶರಾಗಿ ಜತೆಗೂಡಿದ್ದ ಮುನಿದಂಪತಿಯನ್ನು ಕಾಡಿನ ಪ್ರಾಣಿಯೆಂದು ತಿಳಿದು; (ಅದನ್ನು ಬೇಟೆಯಾಡಲು ಸರಿಯಾದ ಆಯಕಟ್ಟಿನ ಜಾಗಕ್ಕೆ ಗುರಿಯಿಟ್ಟು)

ನೆಱ=ಆಯಕಟ್ಟಿನ ಜಾಗ/ಸರಿಯಾದ ಜಾಗ; ಮೃಗಚಾರಿ+ಅನ್; ಮೃಗಚಾರಿ=ಜಿಂಕೆಯ ರೂಪವನ್ನು ತಳೆದು ಕಾಮಕ್ರೀಡೆಯಲ್ಲಿ ತಲ್ಲೀನನಾಗಿದ್ದ ರಿಸಿಯನ್ನು; ಭೋಂಕನೆ=ತಟ್ಟನೆ/ಕೂಡಲೇ; ಎಚ್ಚು=ಬಾಣವನ್ನು ಪ್ರಯೋಗಿಸು;

ನೆಱನಮ್ ನೋಡಿ ಮೃಗಚಾರಿಯನ್ ಭೋಂಕನೆ ಎಚ್ಚು=ಪ್ರಾಣಿಯನ್ನು ಕೊಲ್ಲಲು ಆಯಕಟ್ಟಿನ ಜಾಗ ಯಾವುದೆಂಬುದನ್ನು ಸರಿಯಾಗಿ ಗುರುತಿಸಿ ಕಾಮಕ್ರೀಡೆಯಲ್ಲಿ ತೊಡಗಿದ್ದ ಕಿಂದಮ ರಿಸಿಯ ಮೇಲೆ ತಟ್ಟನೆ ಬಾಣವನ್ನು ಬಿಟ್ಟನು;

ಮಾಣ್=ಸುಮ್ಮನಿರು; ಮಾರಿ=ಜನಪದರ ಕಲ್ಪನೆಯಲ್ಲಿ ರೂಪುಗೊಂಡಿರುವ ದೇವತೆಯೊಬ್ಬಳ ಹೆಸರು. ಈಕೆಯು ಯಾವುದೇ ಕಾರಣದಿಂದ ಕೋಪಗೊಂಡರೆ, ತನ್ನ ಕೋಪಕ್ಕೆ ಕಾರಣರಾದವರನ್ನು ಸಾವುನೋವುಗಳಿಗೆ ಗುರಿಮಾಡುತ್ತಾಳೆ ಎಂಬ ಅಂಜಿಕೆಯು ಜನಮನದಲ್ಲಿದೆ; ಮಾರಿಯನ್ ತನಗೆ ತಂದನ್=ಇದೊಂದು ನುಡಿಗಟ್ಟು. ವ್ಯಕ್ತಿಯು ಮಾಡುವ ಕೆಲಸವು ಕೆಲವೊಮ್ಮೆ ಆತನ ಪಾಲಿಗೆ ಬಹುಬಗೆಯ ಸಾವು ನೋವನ್ನು ತರುತ್ತದೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಮಾಣದೆ ಒಂದು ಮಾರಿಯನ್ ತನಗೆ ತಂದನ್=ಬಾಣವನ್ನು ಬಿಡುವುದಕ್ಕೆ ಮೊದಲು ಸರಿಯಾಗಿ ನೋಡದೆ ಇಲ್ಲವೇ ತಿಳಿಯದೆ ಹೊಡೆದಿದ್ದರಿಂದ ಪಾಂಡುರಾಜನು ತನ್ನ ಜೀವನಕ್ಕೆ ದೊಡ್ಡ ಗಂಡಾಂತರವನ್ನು ತಂದುಕೊಂಡನು;

ಪ್ರಳಯ=ನಿಸರ‍್ಗದಲ್ಲಿ ಉಂಟಾಗುವ ಏರಿಳಿತಗಳಿಂದ ಪ್ರಪಂಚದ ಬದುಕು ಕೊನೆಗೊಳ್ಳುವುದು; ಉಳ್ಕೆ=ಮುಗಿಲಿನ ಕಡೆಯಿಂದ ನೆಲದ ಕಡೆಗೆ ಬೀಳುವ ಕೆಂಡದ ಕಣಗಳಂತೆ ಹೊಳೆಯುವ ವಸ್ತು; ಉಳ್ಕುಮ್=ಉಳ್ಕೆಯು; ಉಳ್ಕು+ಅಂತೆ; ಉಳ್ಕು=ವೇದನೆಯನ್ನುಂಟುಮಾಡು; ಅಂತೆ=ಹಾಗೆ/ಆ ರೀತಿ; ಎಚ್ಚ=ಬಿಟ್ಟ/ಹೊಡೆದ; ಅಂಬು=ಬಾಣ; ಕಣ್ಣ್+ಒಳ್+ಅಮ್; ಎರ್ದೆ+ಒಳ್+ಅಮ್; ಉಕ್ಕೆ=ನೋವನ್ನುಂಟುಮಾಡಲು;

ಆಗಳ್ ಪ್ರಳಯದ ಉಳ್ಕುಮ್ ಉಳ್ಕುವಂತೆ ತನ್ನ ಎಚ್ಚ ಅಂಬು ಮುನಿಕುಮಾರನ ಕಣ್ಣೊಳಮ್ ಎರ್ದೆಯೊಳಮ್ ಉಕ್ಕೆ=ಆಗ ಪ್ರಳಯಕಾಲದಲ್ಲಿ ಮುಗಿಲಿನಿಂದ ನೆಲದ ಮೇಲೆ ಉಳ್ಕೆಗಳು ಉರಿಯುತ್ತ ಬೀಳುವಂತೆ ತಾನು ಹೊಡೆದ ಬಾಣದ ಮೊನೆಯು ಕಿಂದಮ ಮುನಿಯ ಕಣ್ಣಿನಲ್ಲಿ ಮತ್ತು ಎದೆಯೊಳಕ್ಕೆ ನಾಟಿಕೊಂಡು ವೇದನೆಯನ್ನುಂಟುಮಾಡಲು;

ಪೇಳ್=ಹೇಳು; ಎನ್ನನ್=ನನ್ನನ್ನು; ಆವನ್=ಯಾರು; ಎಚ್ಚನ್=ಹೊಡೆದವನು;

ಪೇಳಿಮ್ ಎನ್ನನ್ ಆವನ್ ಎಚ್ಚನ್=ಹೇಳಿರಿ… ನನ್ನನ್ನು ಹೊಡೆದವರು ಯಾರು;

ಎಂಬ=ಎನ್ನುವ; ಮುನಿ=ಸಿಟ್ಟಾಗು/ಕೋಪಗೊಳ್ಳು; ಸರಮ್+ಅನ್; ಸರ=ದನಿ;

ಎಂಬ ಮುನಿಯ ಮುನಿದ ಸರಮನ್ ಕೇಳ್ದು=ಎಂದು ನುಡಿದ ಕಿಂದಮ ಮುನಿಯ ಕೋಪದ ದನಿಯನ್ನು ಕೇಳಿ;

ಅಂಬುಮ್+ಅನ್; ಅನ್=ಅನ್ನು; ಈಡಾಡು=ಬಿಸಾಡು/ದೂರ ಎಸೆ; ನಿಂದು+ಇರ್ದ; ಭೂಪನ್+ಅಮ್; ಭೂಪ=ರಾಜ;

ಬಿಲ್ಲನ್ ಅಂಬುಮನ್ ಈಡಾಡಿ ತನ್ನ ಮುಂದೆ ನಿಂದಿರ್ದ ಭೂಪನಮ್ ಮುನಿ ನೋಡಿ=ಕಯ್ಗಳಲ್ಲಿ ಇದ್ದ ಬಿಲ್ಲುಬಾಣಗಳನ್ನು ಬಿಸಾಡಿ, ತನ್ನ ಮುಂದೆ ನಿಂತುಕೊಂಡಿರುವ ರಾಜನನ್ನು ಕಿಂದಮ ಮುನಿಯು ನೋಡಿ;

ಸನ್ನತ+ಇಮ್; ಸನ್ನತ=ತೀವ್ರವಾದ ಕಾಮನೆಯಿಂದ; ರತ=ಗಂಡು ಹೆಣ್ಣಿನ ಮಯ್ ಮನದ ಕೂಟ; ಎಳಸು=ಬಯಸು/ಆಸೆಪಟ್ಟು; ನಲ್ಲಳ್+ಒಳ್; ಒಳ್=ಅಲ್ಲಿ; ಓತು=ಪ್ರೀತಿಸು; ಒಡಗೂಡು=ಸೇರು/ಮಿಲನ; ಎನ್ನನ್=ನನ್ನನ್ನು;

ಸನ್ನತದಿಮ್ ರತಕ್ಕೆ ಎಳಸಿ ನಲ್ಲಳೊಳ್ ಓತು ಒಡಗೂಡಿದ ಎನ್ನನ್=ಕಾಮದ ನಂಟನ್ನು ಹೊಂದಿ ಆನಂದಿಸಬೇಕೆಂಬ ಬಯಕೆಯಿಂದ ಹೆಂಡತಿಯೊಡನೆ ಪ್ರೀತಿಯಿಂದ ಜತೆಗೂಡಿದ್ದ ನನ್ನನ್ನು;

ಇಂತು=ಈ ರೀತಿ; ಅನ್ನಯ=ಅನ್ಯಾಯ/ನ್ಯಾಯವಲ್ಲದ ರೀತಿಯ ವರ‍್ತನೆ; ಎಚ್ಚುದರ್ಕೆ=ಬಾಣದಿಂದ ಹೊಡೆದಿರುವುದಕ್ಕೆ;

ಇಂತು ಅನ್ನಯಮ್ ಎಚ್ಚುದರ್ಕೆ=ಈ ರೀತಿ ಅನ್ಯಾಯವಾಗಿ ಬಾಣದಿಂದ ಹೊಡೆದಿರುವುದಕ್ಕೆ;

ದಂಡ=ವ್ಯಕ್ತಿಯು ಮಾಡಿದ ತಪ್ಪಿಗೆ ನೀಡುವ ಶಿಕ್ಶೆ; ಪೆಱತು+ಇಲ್ಲ; ಪೆಱತು=ಬೇರೆಯದು/ಮತ್ತೊಂದು;

ಅದು ದಂಡಮ್ ಪೆಱತಿಲ್ಲ=ಈಗ ನೀನು ಮಾಡಿರುವ ಅನ್ಯಾಯಕ್ಕೆ ಮತ್ತೊಂದು ಬಗೆಯ ದಂಡನೆಯನ್ನು ನಾನು ನಿನಗೆ ನೀಡುವುದಿಲ್ಲ;

ನಲ್ಲಳ್+ಒಳ್; ಒಱಲ್=ಮೋಹಿಸು/ಪ್ರೀತಿಸು/ಕಾಮಿಸು; ನಡೆ=ಚೆನ್ನಾಗಿ/ಬಹಳವಾಗಿ; ನೋಡಿ+ಉಮ್; ಬಯಸು=ಹಂಬಲಿಸು; ಕೂಡಿ+ಉಮ್; ಕೂಡು=ಕಾಮದ ಮಿಲನ; ಆಗಡೆ=ಆ ಗಳಿಗೆಯಲ್ಲಿಯೇ; ಸಾವೆ+ಆಗಿ; ಸಾವು=ಮರಣ; ಪೋಗು+ಇನ್ನು;

ನಲ್ಲಳೊಳ್ ಒಱಲ್ದು ನೀನ್ ನಡೆ ನೋಡಿಯುಮ್ ಬಯಸಿ ಕೂಡಿಯುಮ್ ಆಗಡೆ ಸಾವೆಯಾಗಿ=ನಿನ್ನ ನಲ್ಲೆಯನ್ನು ಕಾಮದ ಕಣ್ಣಿನಿಂದ ನೋಡುತ್ತ, ಅವಳ ದೇಹದೊಡನೆ ಬೆರೆತು ಆನಂದಿಸಬೇಕೆಂಬ ತುಡಿತದಿಂದ ನೀನು ಅವಳೊಡನೆ ನೀನು ಮಿಲನಗೊಳ್ಳುತ್ತಿರುವ ಗಳಿಗೆಯಲ್ಲಿಯೇ ನಿನಗೆ ಸಾವು ಬರುತ್ತದೆ;

ಪೋಗು+ಇನ್ನು; ಪೋಗು=ಹೋಗು; ಎನೆ=ಎಂದು ನುಡಿಯಲು;

ಪೋಗಿನ್ನು ಎನೆ=ಇನ್ನು ಇಲ್ಲಿಂದ ಹೊರಡು ಎನ್ನಲು;

ರೌದ್ರ=ಉಗ್ರವಾದುದು; ಶಾಪ=ಕೆಡುಕಾಗಲೆಂದು ಹೇಳುವ ನುಡಿ/ಸಾವುನೋವುಗಳು ಉಂಟಾಗಲೆಂದು ಹೇಳುವ ಮಾತು; ಪರಿತಾಪ=ಅತಿ ಹೆಚ್ಚಿನ ಸಂಕಟ; ವಿಳಾಪ+ಒಳ್; ವಿಳಾಪ=ಅಳುವಿಕೆ/ರೋದನ;

ರೌದ್ರ ಶಾಪ ಪರಿತಾಪ ವಿಳಾಪದೊಳ್=ಉಗ್ರವಾದ ಶಾಪಕ್ಕೆ ಗುರಿಯಾಗಿ ಅತಿಹೆಚ್ಚಿನ ಸಂಕಟದಿಂದ ಕಣ್ಣೀರಿಡುತ್ತಾ…

ಎನ್ನ=ನನ್ನ; ಗೆಯ್=ಮಾಡು; ಕಾಮ+ಆಕ್ರಾಂತಕ್ಕೆ; ಕಾಮ=ಗಂಡುಹೆಣ್ಣಿನ ಕೂಡುವಿಕೆ; ಆಕ್ರಾಂತ=ದಾಳಿ ಮಾಡುವುದು; ಕಾಮಾಂಕ್ರಾಂತ=ಕಾಮ ಕ್ರೀಡೆಯಲ್ಲಿದ್ದವರ ಮೇಲೆ ದಾಳಿ ಮಾಡುವುದು; ಕೃತ=ಮಾಡಿದ; ಕಾಮಕೃತ=ಕಾಮಕ್ರೀಡೆಯಲ್ಲಿದ್ದಾಗಲೇ ಸಾವು ಬರಲೆಂಬ ಶಾಪ; ಪಿರಿದು+ಅಲ್ತು; ಪಿರಿದು=ದೊಡ್ಡದು/ಹೆಚ್ಚಿನದು; ಅಲ್ತು=ಅಲ್ಲ;

ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮ್ ಏನ್ ಪಿರಿದಲ್ತು=ಕಾಮದ ತುಡಿತದಿಂದ ಒಲಿದು ಒಂದಾಗಿದ್ದವರ ಮೇಲೆ ಬಾಣವನ್ನು ಹೊಡೆದು ಅಡ್ಡಿಪಡಿಸಿದ ನನಗೆ, ಕಾಮಕೂಟದಲ್ಲಿದಲ್ಲಿದ್ದಾಗಲೇ ನನಗೂ ಸಾವು ಬರಲಿ ಎಂಬ ಕಿಂದಮ ಮುನಿಯ ಶಾಪದ ನುಡಿ ಏನು ದೊಡ್ಡದಲ್ಲ. ಅಂದರೆ ಇಂತಹ ಶಾಪಕ್ಕೆ ನಾನು ತಕ್ಕವನಾಗಿದ್ದೇನೆ. ನಾನು ಮಾಡಿದ ತಪ್ಪು ದೊಡ್ಡದು;

ಎತ್ತ=ಯಾವ ಕಡೆ; ವನ=ಕಾಡು; ಮೃಗಯಾ+ವೃತ್ತಕಮ್; ಮೃಗಯಾ=ಬೇಟೆ/ಶಿಕಾರಿ; ವೃತ್ತಕ=ಕೆಲಸ; ಮೃಗಯಾವೃತ್ತಕ=ಪ್ರಾಣಿಗಳನ್ನು ಬೇಟೆಯಾಡುವುದು;

ಎತ್ತ ವನಮ್ ಎತ್ತ ಮೃಗಯಾವೃತ್ತಕಮ್=ಎಲ್ಲೋ ಒಂದು ಕಡೆ ಇರುವ ಕಾಡಿಗೆ ಮತ್ತೊಂದು ಎಡೆಯಿಂದ ನಾನು ಬೇಟೆಯಾಡಲೆಂದು ಬಂದೆ;

ತಪಸ್ವಿ=ರಿಸಿ; ಆನ್=ನಾನು;

ಈ ತಪಸ್ವಿ ಎತ್ತ ಆನ್ ಎತ್ತ=ಈ ತಪಸ್ವಿಯು ಯಾರೋ ನಾನಾರೋ. ಅಂದರೆ ಈ ಮೊದಲು ಇಬ್ಬರು ಒಬ್ಬರನ್ನೊಬ್ಬರು ಅರಿಯೆವು;

ಎಚ್ಚೆನ್=ಬಾಣವನ್ನು ಹೊಡೆದೆನು;

ಮೃಗಮ್ ಎಂದು ಎಂತು ಎಚ್ಚೆನ್=ಕಾಡಿನ ಪ್ರಾಣಿಯೆಂದು ತಿಳಿದು ಬಾಣದಿಂದ ಹೊಡೆದೆನು;

ಇದು+ಎಲ್ಲಮ್; ಅಘಟಿತ=ನಡೆಯದ ಸಂಗತಿ; ಘಟಿತ=ನಡೆದ ಸಂಗತಿ;

ಇದೆಲ್ಲಮ್ ಅಘಟಿತಘಟಿತಮ್=ಇದೆಲ್ಲವೂ ಒಂದಕ್ಕೊಂದು ಸಂಬಂದವೇ ಇಲ್ಲದಂತಿದ್ದರೂ, ನಡೆಯಬಾರದ್ದೆಲ್ಲವೂ ನಡೆದೇಹೋಯಿತು;

ಆತ್ಮ+ಕರ್ಮ+ಆಯತ್ತಮ್; ಆತ್ಮ=ಜೀವಿ/ವ್ಯಕ್ತಿ/ತನ್ನ; ಕರ್ಮ=ಕೆಲಸ; ಆಯತ್ತ=ಕೂಡಿರುವುದು/ಒಳಗೊಂಡಿರುವುದು; ಪೆಱತು+ಅಲ್ತು; ಪೆಱತು=ಬೇರೆಯದು/ಮತ್ತೊಂದು; ಅಲ್ತು=ಅಲ್ಲ; ಆತ್ಮಕರ್ಮ=ವ್ಯಕ್ತಿಯು ಮಾಡಿದ ಒಳ್ಳೆಯ ಇಲ್ಲವೇ ಕೆಟ್ಟ ಕೆಲಸ;

ಆತ್ಮಕರ್ಮಾಯತ್ತಮ್ ಪೆಱತಲ್ತು=ಯಾವುದೇ ವ್ಯಕ್ತಿಯು ತಾನು ಮಾಡಿದ ಒಳ್ಳೆಯ ಕೆಲಸಕ್ಕೆ ಒಳ್ಳೆಯದನ್ನು ಇಲ್ಲವೇ ಮಾಡಿದ ಕೆಟ್ಟ ಕೆಲಸಕ್ಕೆ ಕೆಟ್ಟದ್ದನ್ನು ಹೊಂದಲೇಬೇಕು. ಈಗ ನಡೆದಿರುವುದು ಮತ್ತೇನು ಅಲ್ಲ. ಅಂದರೆ ನಾನು ಮಾಡಿದ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದಿದೆನು;

ಪೊಳಲ್=ಪಟ್ಟಣ; ಮಗುಳ್ದು+ವಂದು; ಮಗುಳ್=ಹಿಂತಿರುಗು; ವಂದು=ಬಂದು;

ಎಂದು ಚಿಂತಿಸುತ್ತುಮ್ ಪೊಳಲ್ಗೆ ಮಗುಳ್ದುವಂದು=ಎಂದು ಚಿಂತಿಸುತ್ತ ಹಸ್ತಿನಾವತಿಗೆ ಹಿಂತಿರುಗಿ ಬಂದು;

ತತ್+ವೃತ್ತಾಂತಮ್; ತತ್=ಆ ; ವೃತ್ತಾಂತ=ಸಂಗತಿ/ಸುದ್ದಿ;

ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮ್ ಎಲ್ಲಮಮ್ ಪೇಳ್ದು=ಗಾಂಗೇಯ, ಗಾಂಗೇಯ, ದ್ರುತರಾಶ್ಟ್ರ ಮತ್ತು ವಿದುರರಿಗೆ ಕಾಡಿನಲ್ಲಿ ನಡೆದ ಸಂಗತಿಯೆಲ್ಲವನ್ನೂ ವಿವರವಾಗಿ ತಿಳಿಸಿ; ಮತ್ತು ವಿದುರರಿಗೆ ಕಾಡಿನಲ್ಲಿ ನಡೆದ ಸಂಗತಿಯೆಲ್ಲವನ್ನೂ ವಿವರವಾಗಿ ತಿಳಿಸಿ;

ಸಮಸ್ತ=ಸಕಲ/ಎಲ್ಲವನ್ನು; ದೀನ=ಬಡವ; ಅನಾಥ+ಜನಮ್+ಗಳ್ಗೆ; ಅನಾಥ=ದಿಕ್ಕಿಲ್ಲದವನು/ತಬ್ಬಲಿ; ಸೂಱೆ+ಕೊಟ್ಟು; ಸೂಱೆ=ಅತಿಶಯ/ಹೆಚ್ಚಾಗಿ; ಸೂಱೆಗೊಡು=ದೊಡ್ಡ ಪ್ರಮಾಣದಲ್ಲಿ ದಾನಮಾಡು;

ಸಮಸ್ತವಸ್ತುಗಳಮ್ ದೀನ ಅನಾಥಜನಂಗಳ್ಗೆ ಸೂಱೆಗೊಟ್ಟು=ಪಾಂಡುರಾಜನು ತನ್ನ ಬಳಿಯಿದ್ದ ಸಕಲ ವಸ್ತುಗಳೆಲ್ಲವನ್ನೂ ಬಡವರಿಗೆ ಮತ್ತು ದಿಕ್ಕಿಲ್ಲದ ಜನರಿಗೆ ದಾನಮಾಡಿ;

ನಿಜ=ತನ್ನ; ಪರಿವಾರಮ್+ಅಮ್; ಪರಿವಾರ=ಕುಟುಂಬಕ್ಕೆ ಸೇರಿದ ಜನರು, ನೆಂಟರು ಮತ್ತು ಬೇಕಾದವರು;

ನಿಜ ಪರಿವಾರಮಮ್ ಬರಿಸಿ=ಪಾಂಡುರಾಜನು ತನ್ನ ಪರಿವಾರದವರನ್ನೆಲ್ಲಾ ಬಳಿಗೆ ಕರೆಸಿಕೊಂಡು;

ಅನಂಗ=ಮದನ/ಕಾಮದೇವ; ಜಂಗಮ=ಬಳುಕುವ; ಲತಾ=ಬಳ್ಳಿ; ಲಲಿತ+ಅಂಗಿಯರ್+ಇಂದಮ್; ಲಲಿತ=ಚೆಲುವು/ಸುಂದರ; ಅಂಗ=ದೇಹ; ಲಲಿತಾಂಗಿ=ಚೆಲುವೆ/ಸುಂದರಿ; ಅಲ್ತೆ=ಅಲ್ಲವೇ; ಸಂಸಾರ=ಕುಟುಂಬ/ಜೀವನ; ಸಾರ=ತಿರುಳು/ಉತ್ತಮವಾದುದು;

ಅನಂಗ ಜಂಗಮಲತಾ ಲಲಿತಾಂಗಿಯರಿಂದಮ್ ಅಲ್ತೆ ಸಂಸಾರಮ್ ಎಂಬುದು ಸಾರಮ್=ಜೀವನದಲ್ಲಿ ಸಾರವತ್ತಾದುದು ಎಂದರೆ ಮದನನ ಬಳುಕುವ ಬಳ್ಳಿಗಳಂತಿರುವ ಚೆಲುವೆಯರೊಡನೆ ಒಲವು ನಲಿವಿನಿಂದ ಕೂಡಿಬಾಳುವುದಲ್ಲವೇ; ಅಂತಹ ಚೆಲುವೆಯರ ಒಡನಾಟವಿಲ್ಲವೆಂದರೆ ಬದುಕಿನಲ್ಲಿ ಯಾವುದೇ ಬಗೆಯ ಆನಂದವೂ ಇಲ್ಲ, ಗುರಿಯೂ ಇಲ್ಲ;

ಇದು=ಹೆಂಡತಿಯರೊಡನೆ ಕಾಮದ ನಂಟನ್ನು ಹೊಂದಿ ಬಾಳುವ ಆನಂದ; ತತ್+ಮುನಿ; ಶಾಪ+ಇಂದಮ್; ಇನ್=ಇನ್ನು ಮುಂದೆ; ತಪ್ಪುದು=ಇಲ್ಲದಂತಾಯಿತು;

ಇದು ತನ್ಮುನಿ ಶಾಪದಿಂದಮ್ ಇನ್ ಎನಗೆ ತಪ್ಪುದು=ಹೆಂಡತಿಯರೊಡನೆ ಕಾಮದ ನಂಟನ್ನು ಹೊಂದಿ ಬಾಳುವ ಆನಂದವು ಆ ಕಿಂದಮ ಮುನಿಯು ನೀಡಿದ ಶಾಪದಿಂದ ಇನ್ನು ಮುಂದೆ ನನ್ನ ಬಾಳಿನಲ್ಲಿ ದೊರೆಯದಂತಾಯಿತು;

ವನವಾಸ+ಒಳ್; ವನವಾಸ=ಕಾಡಿನಲ್ಲಿ ನೆಲೆಸುವುದು; ಇರ್ಪೆನ್=ಇರುವೆನು;

ವನವಾಸದೊಳ್ ಇರ್ಪೆನ್=ಆದ್ದರಿಂದ ನಾನು ಕಾಡಿನಲ್ಲಿ ವಾಸಮಾಡುತ್ತೇನೆ;

ಇದರ್ಕೆ=ಇದಕ್ಕೆ; ಇನ್ನು+ಆರುಮ್; ಆರುಮ್=ಯಾರೊಬ್ಬರೂ; ವಕ್ರ=ತೊಂದರೆ/ಅಡ್ಡಿ; ವಕ್ರಿಸದಿರಿ=ಅಡ್ಡಿಪಡಿಸಬೇಡಿ; ದುರ್ವಾರ=ಯಾರಿಂದಲೂ ತಡೆಯಲಾಗದ; ಪರಾಕ್ರಮನ್=ವೀರ; ತಳರು=ಹೊರಡು/ತೆರಳು;

ಇದರ್ಕೆ ಇನ್ನಾರುಮ್ ವಕ್ರಿಸದಿರಿಮ್ ಎಂದು ದುರ್ವಾರ ಪರಾಕ್ರಮನ್ ತಳರೆ=ನನ್ನ ನಿಲುವಿಗೆ ಯಾರೂ ಅಡ್ಡಿ ಮಾಡಬೇಡಿ ಎಂದು ಹೇಳಿ ನಿಶ್ಚಿತ ಮನದ ಪಾಂಡುರಾಜನು ಕಾಡಿನತ್ತ ನಡೆಯಲು;

ಬಾರಿಸು/ವಾರಿಸು=ತಡೆಯುವುದು/ಅಡ್ಡಿಪಡಿಸುವುದು;

ಬಾರಿಸಿ ವಾರಿಸಿ=ಪಾಂಡುವನ್ನು ಕಾಡಿಗೆ ತೆರಳಬೇಡವೆಂದು ಅಡ್ಡಿಪಡಿಸಿ ಅವನನ್ನು ಹೋಗಬೇಡವೆಂದು ಬೇಡಿಕೊಳ್ಳುತ್ತ;

ಬೆನ್ನ ಬೆನ್ನನೆ ಬರೆ=ಹಿಂಬಾಲಿಸಿಕೊಂಡು ಬರುತ್ತಿರಲು;

ಕುಂತಿ ಮಾದ್ರಿಯರ್ ಬೆನ್ನ ಬೆನ್ನನೆ ಬರೆ=ಕುಂತಿ ಮಾದ್ರಿಯರು ಪಾಂಡುರಾಜನನ್ನೇ ಹಿಂಬಾಲಿಸಿಕೊಂಡು ಬರುತ್ತಿರಲು;

ಬಿನ್ನ=ಏನೊಂದು ಮಾತನಾಡದೆ;

ಬಿನ್ನ ಬಿನ್ನನೆ ಪೋಗಿ=ತನ್ನನ್ನು ಹಿಂಬಾಲಿಸಿಕೊಂಡು ಬಂದ ಕುಂತಿ ಮಾದ್ರಿಯರೊಡನೆ ಪಾಂಡುರಾಜನು ಏನೊಂದು ಮಾತನಾಡದೆ ಸುಮ್ಮನೆ ಕಾಡಿನತ್ತ ತೆರಳಿದನು;

ತುಂಗ=ಎತ್ತರವಾದ/ದೊಡ್ಡದಾದ; ವನ್ಯ=ಕಾಡಿನಲ್ಲಿ ಹುಟ್ಟಿ ಬೆಳೆದ; ಮತಂಗಜ=ಆನೆ; ದಂತ+ಆಘಾತ; ದಂತ=ಆನೆಯ ಕೋರೆ; ಆಘಾತ=ಪೆಟ್ಟು; ನಿಪಾತ=ಹಾಳು/ನಾಶ/ಪತನ; ಸಲ್ಲಕೀ=ಬೇಲದ ಮರ; ಭಂಗ=ತುಂಡು/ಮುರಿಯುವಿಕೆ;

ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ ಭಂಗಮಮ್=ದೊಡ್ಡಗಾತ್ರದ ಕಾಡಾನೆಯ ದಂತದ ತಿವಿತಕ್ಕೆ ಮುರಿದು ಕೆಳಕ್ಕೆ ಬಿದ್ದಿರುವ ಬೇಲದ ಮರದಿಂದ ಕೂಡಿದ;

ಮಣಿ=ರತ್ನ; ಮೌಕ್ತಿಕ=ಮುತ್ತು; ನೀಳ=ನೀಲಿ ಬಣ್ಣದ ಹರಳು; ಸ್ಥೂಳ=ದಪ್ಪನಾದ; ಶಿಲಾ=ಕಲ್ಲಿನ ಬಂಡೆ; ಪ್ರವಿಭಾಸಿತ+ಉತ್ತುಂಗಮ್+ಅಮ್; ಪ್ರವಿಭಾಸಿತ=ಚೆನ್ನಾಗಿ ಹೊಳೆಯುವ; ಉತ್ತುಂಗ=ಎತ್ತರವಾದ/ಉನ್ನತವಾದ;

ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಸಿತೋತ್ತುಂಗಮಮ್=ಮುತ್ತು ರತ್ನ ನೀಲಿಯ ಹರಳುಗಳ ಬಣ್ಣದಿಂದ ಕಂಗೊಳಿಸುತ್ತಿರುವ ಉನ್ನತವಾದ ಕಲ್ಲುಬಂಡೆಗಳಿಂದ ಕೂಡಿರುವ;

ಮುಖ್ಯ=ಹಿರಿಮೆ/ದೊಡ್ಡದು; ಮುಖ+ಅಂಭೋಜ+ಉದರ; ಅಂಭೋಜ=ತಾವರೆ; ಉದರ=ನಡುವೆ; ನಿರ್ಗತ=ಹೊರಹೊಮ್ಮಿದ; ಮಂತ್ರ=ದೇವತೆಗಳ ಮಹಿಮೆಯನ್ನು ಕೊಂಡಾಡುವ ನುಡಿಗಳು; ಪೂತ+ಅಂಗಮ್+ಅಮ್; ಪೂತ=ಪವಿತ್ರವಾದದು; ಅಂಗ=ಬಾಗ;

ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಮ್=ದೊಡ್ಡ ಮುನಿಗಳ ಮೊಗತಾವರೆಯ ಬಾಯಿಂದ ಹೊರಹೊಮ್ಮುತ್ತಿರುವ ಪವಿತ್ರವಾದ ಮಂತ್ರಗಳಿಂದ ಕೂಡಿರುವ;

ಉದ್ಯತ್+ಶೃಂಗಮ್+ಅನ್; ಉದ್ಯತ್=ಎತ್ತರವಾದದು; ಶೃಂಗ=ಬೆಟ್ಟದ ತುದಿ/ಕೋಡು; ಉದ್ಯತ್ ಶೃಂಗ=ಎತ್ತರೆತ್ತರವಾದ ಕೋಡುಗಳಿಂದ ಕೂಡಿರುವ ಬೆಟ್ಟ; ಶತ=ನೂರು; ಶತಶೃಂಗಮ್+ಅಮ್; ಶತಶೃಂಗ=ಒಂದು ಪರ್ವತದ ಹೆಸರು. ಅತ್ಯಂತ ಎತ್ತರವಾದ ಕೋಡುಗಳಿಂದ ಕೂಡಿದ ಬೆಟ್ಟಗಳ ಶ್ರೇಣಿಯಿಂದ ಕೂಡಿರುವ ಪರ್ವತದ ನೆಲೆ; ನೃಪನ್+ಎಯ್ದಿದನ್; ನೃಪ=ರಾಜ; ಎಯ್=ಸೇರು/ಬರು; ಎಯ್ದಿದನ್=ಸೇರಿದನು/ಬಂದನು;

ಉದ್ಯಚ್ಛೃಂಗಮನ್ ಆ ಶತಶೃಂಗಮಮ್ ನೃಪನೆಯ್ದಿದನ್= ಉನ್ನತವಾದ ಕೋಡುಗಳಿಂದ ಕೂಡಿದ್ದ ಶತಶ್ರುಂಗ ಪರ‍್ವತದ ನೆಲೆಗೆ ಪಾಂಡುರಾಜನು ಬಂದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: