ವಿಸ್ಮಯ ಜಗತ್ತು : ಬಿಸಿನೀರಿನ ತೀರ!

– .

hot water beach

ಸಮುದ್ರ ತೀರದ ಬೀಚಿನಲ್ಲಿ ವಿಹರಿಸುವುದೇ ಒಂದು ರೋಮಾಂಚಕ ಅನುಬವ ನೀಡುತ್ತದೆ. ಅದರಲ್ಲೂ ಬಯಲು ಸೀಮೆಯವರಿಗೆ! ವಿಹರಿಸುವುದರ ಜೊತೆಗೆ, ಸಮುದ್ರದ ನೀರಿನಲ್ಲಿ ಮುಳುಗೆದ್ದು, ಉಪ್ಪುನೀರಿನಲ್ಲಿ ಎದ್ದು-ಬಿದ್ದು ಆಡುವ ಆಟ ನೀಡುವ ಕುಶಿ ಮತ್ತಾವುದರಲ್ಲೂ ಸಿಗುವುದಿಲ್ಲ. ಸರ‍್ವೇ ಸಾಮಾನ್ಯವಾಗಿ ಸಮುದ್ರತೀರದಲ್ಲಿ ನೀರು ವಾತಾವರಣದಶ್ಟೇ ಉಶ್ಣತೆ ಹೊಂದಿರುತ್ತದೆ. ಒಂದು ವೇಳೆ ಸಮುದ್ರದ ನೀರು ಸ್ನಾನ ಮಾಡುವಶ್ಟು ಬಿಸಿಯಾಗಿದ್ದಲ್ಲಿ, ಅದರ ಮಜವೇ ಬೇರೆಯಿರುತ್ತದೆ. ಜೊತೆಗೆ ಗಂಟೆಗಟ್ಟಲೇ, ದಿನಗಟ್ಟಲೇ ಅಂತಹ ಬಿಸಿನೀರಿನಲ್ಲೇ ಆಟವಾಡುತ್ತಾ ಕಾಲಹರಣ ಮಾಡುವವರಿಗೇನು ಕಡಿಮೆಯಿರುವುದಿಲ್ಲ. ಅಂತಹುದೇ ಒಂದು ಬೀಚ್ ನ್ಯೂಜಿಲೆಂಡಿನ ಕೋರಮ್ಯಾಂಡಲ್ ನ ಪರ‍್ಯಾಯ ದ್ವೀಪದಲ್ಲಿದೆ. ಈ ‘ಹಾಟ್‍‍ವಾಟರ್ ಬೀಚ್’ ವಿಶ್ವದಲ್ಲೇ ಇರುವ ಹಾಟ್‍‍ವಾಟರ್ ಬೀಚ್‍ಗಳಲ್ಲಿ ಅತ್ಯಂತ ಪ್ರಸಿದ್ದವಾದುದು. ಈ ಬೀಚಿನಲ್ಲಿ ಬಿಸಿನೀರು ಮತ್ತದರ ಬಿಸಿ ಮರಳಿನಿಂದ ತಂತಾನೆ ಮೇಲಕ್ಕೆ ಒಸರುತ್ತದೆ. ಬೀಚಿನ ಮರಳಿನಿಂದ ಮೇಲೇಳುವ ಬಿಸಿನೀರಿನ ತಾಪಮಾನ ಅಂದಾಜು 147° ಪ್ಯಾರನ್ಹೀಟ್ ಇರುತ್ತದೆ. ಅಂದರೆ ಅಂದಾಜು 64° ಸೆಂಟಿಗ್ರೇಡ್‍‍ನಶ್ಟು ಇರುತ್ತದೆ. ಈ ಮಟ್ಟದ ಉಶ್ಣಾಂಶ‍‍ದಲ್ಲಿ ಮೇಲೆ ಬರುವ ಬಿಸಿನೀರಿನ ಬುಗ್ಗೆಯು, ಮೇಲ್ಮೈಗೆ ಬಂದ ಕೂಡಲೇ, ಸಮುದ್ರದ ನೀರಿನ ಜೊತೆ ಬೆರೆತು ತಣ್ಣಗಾಗಿ ಸ್ನಾನದ ನೀರಿನ ಬಿಸಿಯ ಹದಕ್ಕೆ ಬರುತ್ತದೆ. ಇದು ಹೇಗೆ ಸಾದ್ಯ ಎಂಬುದರ ಬಗೆಗೆ, ಮುಂದೆ ವಿವರಣೆ ಪಡೆಯಲು ಪ್ರಯತ್ನಿಸೋಣ. ಇಂತಹ ನೀರಿನಲ್ಲಿ ಜಲಕ್ರೀಡೆಯಾಡಲು ಹಾತೊರೆಯುವ ಜನಕ್ಕೇನು ಕಡಿಮೆಯಿಲ್ಲ ಮತ್ತು ಇವರುಗಳಲ್ಲಿ ವಯೋಮಾನದ ಅಂತರ ಸಹ ಇರುವುದಿಲ್ಲ.

ನ್ಯೂಜಿಲೆಂಡಿನ ಈ ಬೀಚಿನಲ್ಲಿ ಮಾವೋರಿ ಮತ್ತು ಒರುವಾ ಎಂಬ ಎರಡು ಬಿರುಕುಗಳಿವೆ. ಈ ಎರಡು ಸ್ತಳಗಳನ್ನು ತಲುಪಲು ವಾಹನ ಪಾರ‍್ಕಿಂಗ್‍‍ನಿಂದ ಐದು ನಿಮಿಶಗಳ ಸಾದಾರಣ ನಡಿಗೆಯಶ್ಟು ದೂರವಿದೆ. ಈ ತಾಣದಿಂದಲ್ಲೇ ಮರಳಿನ ಅಡಿಯಿಂದ ಬಿಸಿನೀರು ಹೊರಹೊಮ್ಮುವುದು. ಇಲ್ಲಿ ಗಮನಿಸಬೇಕಾದ ಬಹುಮುಕ್ಯ ವಿಶಯವೇನೆಂದರೆ, ಬಿಸಿನೀರು ಎರಡು ಅಲೆಗಳು ಮೂಡುವ ನಡುವಿನ ಸಮಯದಲ್ಲಿ ಹೊರಬರುತ್ತವೆ. ಅಲೆ ಬಂದೊಡನೆ, ಮರಳಿನಿಂದ ಮೇಲೆ ಬಂದ ಬಿಸಿನೀರು ಅದರೊಡನೆ ಮಿಳಿತವಾಗಿ ಹದವಾದ ಉಶ್ಣತೆಗೆ ಬರುತ್ತದೆ. ಈ ನೀರು ಮತ್ತೆ ಸಮುದ್ರಕ್ಕೆ ಅಲೆಯ ಜೊತೆಯಾಗಿ ಹಿಂದಿರುಗುವುದನ್ನು ತಡೆಯಲು, ಅಲ್ಲಲ್ಲೇ ‘ಬಾತ್ ಟಬ್’ ರೀತಿಯ ಹೊಂಡಗಳನ್ನು ತೆಗೆದು, ಅದರಲ್ಲಿ ಕುಳಿತಲ್ಲಿ ಅದು ಒಂದು ವರ‍್ಣನೆಗೆ ನಿಲುಕದ ಹಾಗೂ ಪುನರ್ ಯೌವ್ವನ ಪಡೆದಂತಹ ಅನುಬವ ಪ್ರವಾಸಿಗರಿಗೆ ನೀಡುತ್ತದೆ. ಈ ಅನುಬವಕ್ಕಾಗಿ ಹಾತೊರೆಯುವ ಪ್ರವಾಸಿಗರು ವಿಶ್ವದಲ್ಲಿ ಸಾಕಶ್ಟಿದ್ದಾರೆ. ಸಮುದ್ರ ತೀರದಲ್ಲಿ ತಮಗೆ ಬೇಕಾದಶ್ಟು ವಿಸ್ತೀರ‍್ಣದಲ್ಲಿ ‘ಬಾತ್ ಟಬ್’ ರಚಿಸಿಕೊಳ್ಳಲು, ಸ್ವಂತ ಉಪಕರಣ ತರದೆ ಅತವಾ ಇಲ್ಲದೇ ಹೋದಲ್ಲಿ, ಪ್ರಸ್ತುತ ಐದು ಡಾಲರ್ ಬಾಡಿಗೆಗೆ ಸನಿಕೆ ದೊರೆಯುತ್ತದೆ, ಅದನ್ನು ಪಡೆದು ಉಪಯೋಗಿಸಬಹುದು. ಸನಿಕೆಯ ಬಾಡಿಗೆ ಐದು ಡಾಲರ್ ಆದರೂ, ಅದನ್ನು ಪಡೆಯಲು ಇಪ್ಪತ್ತು ಡಾಲರ್ ಟೇವಣಿ ಇಡುವುದು ಕಡ್ಡಾಯವಾಗಿದೆ.

ಬಿಸಿನೀರ ಬುಗ್ಗೆಗಳ ಹಿಂದಿರುವ ಕಾರಣ

ಈ ಸಮುದ್ರ ತೀರದಲ್ಲಿ ಬಾತ್ ಟಬ್ ರಚಿಸಿಕೊಳ್ಳಲು ಪ್ರಶಸ್ತವಾದ ಸ್ತಳ ಯಾವುದು? ಎಂಬುದನ್ನು ಮೊದಲು ಮನಗಾಣುವುದು ಬಹಳ ಮುಕ್ಯವಾದದ್ದು. ಈ ಸಮುದ್ರ ತೀರದಲ್ಲಿ ಎರಡು ಮೂರು ಸ್ತಳಗಳು ಬಾತ್ ಟಬ್ ರಚನೆಗೆ ಪ್ರಶಸ್ತವಲ್ಲ. ಆದ್ದರಿಂದ ಇದರ ಬಗ್ಗೆ ಎಚ್ಚರದಿಂದಿರಬೇಕು!. ಬೀಚಿನ ಮರಳಿನಲ್ಲಿ, ಎಲ್ಲೆಲ್ಲಿ ನೀರಿನ ಗುಳ್ಳೆಗಳು ಮೇಲಕ್ಕೆ ಬರುತ್ತಿರುವುದು ಕಂಡು ಬರುತ್ತದೆಯೋ ಆ ಸ್ತಳ ಬಾತ್ ಟಬ್ ರಚಿಸಲು ಪ್ರಶಸ್ತವಲ್ಲ. ಏಕೆಂದರೆ ನೀರಿನ ಗುಳ್ಳೆ ಮೇಲಕ್ಕೆ ಬರುತ್ತಿರುವುದು ಅದರಡಿಯಲ್ಲಿನ ನೀರು, ಮೈ ಸುಡುವಶ್ಟು ಬಿಸಿಯಾಗಿದೆ ಎಂಬುದರ ಸಂಕೇತವಾಗಿರುತ್ತದೆ. ಹಾಗಾಗಿ ಆ ಸ್ತಳವನ್ನು ಬಾತ್ ಟಬ್ ರಚನೆಗೆ ಉಪಯೋಗಿಸದಿರುವುದು ಸೂಕ್ತ. ಬಿಸಿನೀರಿನ ‘ಬೀಚ್ ಸ್ಪ್ರಿಂಗ್’ ಹಿಂದಿನ ವಿಜ್ನಾನ ನಿಜಕ್ಕೂ ಅದ್ಬುತ. ಬೀಚಿನ ಮರಳಿನ ಅಡಿಯಲ್ಲಿ ಸುಮಾರು ಎರಡು ಕಿಲೋಮೀಟರ್ ಆಳದಲ್ಲಿ ನೀರಿನ ಕೊಳ ಮತ್ತು ಬಿಸಿ ಬಂಡೆಗಳಿವೆ ಎಂದು ಸಂಶೋದಕರು ಹೇಳುತ್ತಾರೆ. ಇದು ಉಂಟಾಗಲು ಐದು ದಶಲಕ್ಶ ವರ‍್ಶಗಳ ಹಿಂದೆ ಸಂಬವಿಸಿದ ಜ್ವಾಲಾಮುಕಿಯ ಚಟುವಟಿಕೆಯೇ ಕಾರಣ ಎನ್ನಲಾಗಿದೆ. ಬಿಸಿ ಬಂಡೆಗಳ ಕಾರಣ, ನೀರು ಬಿಸಿಯಾದಾಗ ಸಾಮಾನ್ಯವಾಗಿ ಗನ ಅಳತೆ ಹೆಚ್ಚಾಗಿ ಅದರಿಂದ ಉಂಟಾಗುವ ಒತ್ತಡವೇ ಬಿಸಿನೀರು ಹೊರ ಬರಲು ಕಾರಣ ಎನ್ನಲಾಗಿದೆ. ಈ ಹಾಟ್ ವಾಟರ್ ಬೀಚ್ ವರ‍್ಶಪೂರ‍್ತಿ ಪ್ರವಾಸಿಗರಿಗೆ ತೆರೆದಿರುತ್ತದೆ. ದೈನಂದಿನ ಅವಿರತ ಶ್ರಮದಿಂದಾಗಿ ವಿಶ್ರಾಂತಿ ಬಯಸುವ ಎಲ್ಲರಿಗೂ ಇದು ಸೂಕ್ತ ತಾಣವಾಗಿದೆ. ನೈಸರ‍್ಗಿಕ ಸ್ತಳಗಳ ಆರಾದಕರು ನೋಡಲೇ ಬೇಕಾದ ಸ್ತಳ ‘ಹಾಟ್ ವಾಟರ್ ಬೀಚ್’ ಎಂದರೆ ತಪ್ಪಾಗಲಾರದು.

( ಮಾಹಿತಿ ಮತ್ತು ಚಿತ್ರ ಸೆಲೆ:  thecoromondel.com  , newzeland.com  , mybestplace.com , wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: