ಪಂಪ ಬಾರತ ಓದು – 10ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ದ್ವಿತೀಯ ಆಶ್ವಾಸದ 46 ನೆಯ ಗದ್ಯದಿಂದ 50 ನೆಯ ಪದ್ಯದ ವರೆಗಿನ ಪಟ್ಯ)

ಪಾತ್ರಗಳು:

ದ್ರುಪದ – ಪಾಂಚಾಲ ದೇಶದ ಅರಸ. ಚತ್ರಾವತಿ ಪಟ್ಟಣದಲ್ಲಿ ನೆಲೆಸಿದ್ದಾನೆ.
ದ್ರೋಣ – ಬರದ್ವಾಜ ರಿಸಿಯ ಮಗ.
ಪಡಿಯರ – ಅರಮನೆಯ ದ್ವಾರಪಾಲಕ

============================

ದ್ರೋಣನಿಗೆ ಅಪಮಾನ

ತನ್ನ ಒಡನಾಡಿಯಪ್ಪ ಕೆಳೆಯನ್ ದ್ರುಪದನ್ ಛತ್ರಾವತಿಯೊಳ್ ಅರಸು ಗೆಯ್ದಪನ್ ಎಂದು ಕೇಳ್ದು , ಆ ಪೊಳಲ್ಗೆ ವಂದು ದ್ರುಪದನ ಅರಮನೆಯ ಬಾಗಲೊಳ್ ನಿಂದು ಪಡಿಯಱನನ್ ಕರೆದು…

ದ್ರೋಣ: ನಿಮ್ಮೊಡನಾಡಿದ ಕೆಳೆಯನ್ ದ್ರೋಣನೆಂಬ ಪಾರ್ವನ್ ಬಂದನೆಂದು ನಿಮ್ಮರಸಂಗೆ ಅಱಿಯೆ ಪೇಳ್.

(ಎಂಬುದುಮ್ ಆತನ್ ಆ ಮಾಳ್ಕೆಯೊಳೆ ಬಂದು ಅಱಿಪುವುದುಮ್, ದ್ರುಪದನ್ ರಾಜ್ಯಮದಿರಾ ಮದೋನ್ಮತ್ತನುಮ್ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ…)

ದ್ರುಪದ: ಪೇಳ್, ಏನ್ ದ್ರೋಣನ್ ಎಂಬನ್ ಪಾರ್ವನೆ…ಏನ್ ಎಂತು ಎನಗೆ ಕೆಳೆಯನೇ… ಆರ್ಗೆ ಅಂತು ಎಂಬನ್… ದಲ್, ಪಿರಿದುಮ್ ಭ್ರಾಂತು… ಅಂತಪ್ಪನನ್ ಅಱಿಯೆನ್ ನೂಂಕು.

(ಎಂದು ಸಭೆಯೊಳ್ ನುಡಿದನ್. ಪಡಿಯಱನ್ ಬಂದು ಅಂತು ನುಡಿದುದನ್ ಆ ಮಾಳ್ಕೆಯೊಳೆ ಅಱಿಪೆ, ದ್ರೋಣನ್ ಒತ್ತಂಬದಿಂದ ಒಳಗಮ್ ಪೊಕ್ಕು ದ್ರುಪದನನ್ ಕಂಡು…)

ದ್ರೋಣ: ಅಣ್ಣ, ನೀಮುಮ್ ಆಮುಮ್ ಒಡನೆ ಓದಿದೆವು ಎಂಬುದನ್ ಅಱಿಯಿರೆ.

ದ್ರುಪದ: ನಿನ್ನನ್ ಆನ್ ಅಱಿಯೆನ್. ಮಹೀಪತಿಗಮ್ ದ್ವಿಜವಂಶಜಗಮ್ ಏತಱ ಕೆಳೆ.. ಅದೆಲ್ಲಿ ಕಂಡೆಯೊ… ಇಂತು ಮಾನಸರ್ ನಾಣಿಲಿಗರಪ್ಪರೆ…

(ಎಂಬ ಮಾತುಗಳ್ ನೆಱಗೊಳೆ, ಆ ದ್ರುಪದನ್ ಕುಂಭಸಂಭವನನ್ ಕಡು ಸಿಗ್ಗು ಮಾಡಿದನ್. ಅಂತು ಮಾಡಿದುದುಮ್ ಅಲ್ಲದೆ… )

ದ್ರುಪದ: ಈ ನಾಣಿಲಿ ಪಾರ್ವನನ್ ಎಳೆದು ಕಳೆಯಿಮ್.

(ಎಂಬುದುಮ್ ದ್ರೋಣನ್ ಇಂತು ಎಂದನ್.)

ದ್ರೋಣ: ನುಡಿ ತಡವಪ್ಪುದು ಒಂದು; ಮೊಗದೊಳ್ ಮುಱುಕಮ್ ದೊರೆಕೊಳ್ವುದು ಒಂದು; ನಾಣ್ಗೆ ಎಡೆಗುಡದೆ ಇರ್ಪುದು ಒಂದು; ನುಡಿಗಳ್ ಮೊಱೆಯನ್ ಮಱೆಯಿಪ್ಪುದು ಒಂದು; ಇಂತು ಕಳ್ಗುಡಿದವರ ಅಂದಮ್ ಸಿರಿ ಸಾರ್ತರೆ ಸಾರ್ವುದು. ಅದರ್ಕೆ ಸಿರಿ ಕಳ್ಳೊಡವುಟ್ಟಿತು ಎಂಬುದನ್ ಸಂದೆಯಮ್ ಪಡದೆ ಜಲಕ್ಕನೆ ಈಗಳ್ ಅಱಿದೆನ್.

( ಸೈರಿಸದೆ…)

ಖಳ ನೊಳವಿಂಗೆ ಕುಪ್ಪೆ ವರಮ್ ಎಂಬವೊಲ್; ನಿನ್ನದು ಒಂದು ಅಳವು ಆಂಬರಮ್ ಉಂಟೆ. ಒಡನೆ ಓದಿದ ಒಂದು ಬೆರಗಿಂಗೆ ಕೊಲಲ್ಕೆ ಎನಗೆ ಆಗದು . ಈ ಸಭಾವಳಯದೊಳ್ ಎನ್ನನ್ ಏಳಿಸಿದ ನಿನ್ನನ್ ಎನ್ನ ಚಟ್ಟರಿಮ್ ಅನಾಕುಳಮ್ ತಳವೆಳಗಾಗೆ ಕಟ್ಟಿಸದೆ ಮಾಣ್ಬೊಡೆ ಕೆಮ್ಮನೆ ಮೀಸೆವೊತ್ತೆನೇ…

(ಎಂದು ಆರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವನ್ ಕೃಪನ ಮನೆಯೊಳ್ ಅಪಗತಪರಿಶ್ರಮನ್ ಆಗಿ ಇರ್ದು…)

============================

ಪದ ವಿಂಗಡಣೆ ಮತ್ತು ತಿರುಳು

ಒಡನಾಡಿ+ಅಪ್ಪ; ಒಡನಾಡಿ=ಜತೆಗಾರ; ಪಾಂಚಾಲ ದೇಶದ ಪ್ರುಶತನ ರಾಜನ ಮಗನಾದ ದ್ರುಪದ ಮತ್ತು ಬರದ್ವಾಜನೆಂಬ ರಿಸಿಯ ಮಗನಾದ ದ್ರೋಣ –ಇವರಿಬ್ಬರು ಹರೆಯದಲ್ಲಿ ಯಜ್ನಸೇನನೆಂಬ ರಿಸಿಯ ಬಳಿಯಲ್ಲಿ ಬಿಲ್ ವಿದ್ಯೆಯನ್ನು ಕಲಿಯುವಾಗ ಒಡನಾಡಿಗಳಾಗಿದ್ದರು; ಅಪ್ಪ=ಆಗಿದ್ದ; ಕೆಳೆಯ=ಗೆಳೆಯ; ಛತ್ರಾವತಿ+ಒಳ್; ಅರಸು=ರಾಜ/ದೊರೆ; ಒಳ್=ಅಲ್ಲಿ ; ಗೆಯ್=ಮಾಡು;

ತನ್ನ ಒಡನಾಡಿಯಪ್ಪ ಕೆಳೆಯನ್ ದ್ರುಪದನ್ ಛತ್ರಾವತಿಯೊಳ್ ಅರಸು ಗೆಯ್ದಪನ್ ಎಂದು ಕೇಳ್ದು=ವಿದ್ಯೆಯನ್ನು ಕಲಿಯುವಾಗ ತನ್ನ ಒಡನಾಡಿಯೂ ಗೆಳೆಯನೂ ಆಗಿದ್ದ ದ್ರುಪದನು ಈಗ ಚತ್ರಾವತಿ ಪಟ್ಟಣದಲ್ಲಿ ದೊರೆತನವನ್ನು ಮಾಡುತ್ತಿದ್ದಾನೆ ಎಂಬುದನ್ನು ದ್ರೋಣನು ಕೇಳಿ ತಿಳಿದು;

ಪೊಳಲ್=ಪಟ್ಟಣ; ವಂದು=ಬಂದು;

ಆ ಪೊಳಲ್ಗೆ ವಂದು=ಆ ಪಟ್ಟಣಕ್ಕೆ ಬಂದು;

ದ್ರುಪದನ ಅರಮನೆಯ ಬಾಗಲೊಳ್ ನಿಂದು=ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತುಕೊಂಡು;

ಪಡಿಯಱನ್+ಅನ್; ಪಡಿಯಱ=ಬಾಗಿಲು ಕಾಯುವವನು/ದ್ವಾರಪಾಲಕ; ಅನ್=ಅನ್ನು;

ಪಡಿಯಱನನ್ ಕರೆದು=ಬಾಗಿಲು ಕಾಯುತ್ತಿರುವವನನ್ನು ಕರೆದು;

ನಿಮ್ಮ+ಒಡನೆ+ಆಡಿದ; ಒಡನೆ=ಜೊತೆಯಲ್ಲಿ; ಆಡು=ವ್ಯವಹರಿಸು ; ದ್ರೋಣನ್+ಎಂಬ; ಎಂಬ=ಎನ್ನುವ ; ಪಾರ್ವ=ಬ್ರಾಹ್ಮಣ ; ಬಂದನ್+ಎಂದು; ನಿಮ್ಮ+ಅರಸಂಗೆ; ಅಱಿ=ತಿಳಿ/ಗ್ರಹಿಸು; ಎಂಬುದುಮ್=ಎಂದು ಹೇಳಲು;

ನಿಮ್ಮೊಡನಾಡಿದ ಕೆಳೆಯನ್ ದ್ರೋಣನೆಂಬ ಪಾರ್ವನ್ ಬಂದನೆಂದು ನಿಮ್ಮರಸಂಗೆ ಅಱಿಯೆ ಪೇಳ್ ಎಂಬುದುಮ್=ನಿಮ್ಮ ಜೊತೆಯಲ್ಲಿ ವಿದ್ಯೆಯನ್ನು ಕಲಿತ ಗೆಳೆಯನಾದ ದ್ರೋಣನೆಂಬ ಹೆಸರಿನ ಒಬ್ಬ ಬ್ರಾಹ್ಮಣ ಬಂದಿದ್ದಾನೆಂದು ನಿಮ್ಮ ಅರಸರ ಗಮನಕ್ಕೆ ಬರುವಂತೆ ಹೇಳು ಎನ್ನಲು;

ಮಾಳ್ಕೆ+ಒಳ್+ಎ; ಮಾಳ್ಕೆ=ರೀತಿ/ಪ್ರಕಾರ; ಅಱಿಪುವುದು+ಉಮ್; ಅಱಿಪುವುದು=ತಿಳಿಸುವುದು; ಉಮ್=ಊ;

ಆತನ್ ಆ ಮಾಳ್ಕೆಯೊಳೆ ಬಂದು ಅಱಿಪುವುದುಮ್=ಬಾಗಿಲು ಕಾಯುವವನು ರಾಜನಾದ ದ್ರುಪದನ ಬಳಿಗೆ ಬಂದು ದ್ರೋಣನು ಹೇಳಿದ ರೀತಿಯಲ್ಲಿಯೇ ಎಲ್ಲವನ್ನೂ ಹೇಳಲು;

ಮದಿರಾ=ಹೆಂಡ/ಮದ್ಯ/ಕುಡಿದಾಗ ಮಯ್ ಮನಕ್ಕೆ ಅಮಲನ್ನು ಉಂಟುಮಾಡುವ ಪಾನೀಯ; ಮದ+ಉನ್ಮತ್ತನ್+ಉಮ್; ಮದ=ಸೊಕ್ಕು/ಗರ‍್ವ; ಉನ್ಮತ್ತ=ಕೊಬ್ಬಿದ;

ದ್ರುಪದನ್ ರಾಜ್ಯಮದಿರಾ ಮದೋನ್ಮತ್ತನುಮ್=ರಾಜ್ಯದ ಆಡಳಿತದ ಗದ್ದುಗೆಯನ್ನೇರಿ ಸಿಂಹಾಸನದಲ್ಲಿ ಕುಳಿತಿರುವ ದ್ರುಪದನು ಅರಸುತನದ ಸೊಕ್ಕಿನಿಂದ ಕೊಬ್ಬಿದವನಾಗಿ;

ಗರ್ವ=ತಾನೇ ದೊಡ್ಡವನೆಂಬ ಅಹಂಕಾರ; ಗ್ರಹ=ಹಿಡಿಯುವುದು; ಗರ್ವಗ್ರಹ=ಅಹಂಕಾರದಿಂದ ಕೂಡಿದವನಾಗಿ; ವ್ಯಗ್ರ+ಚಿತ್ತನ್+ಉಮ್+ಆಗಿ; ವ್ಯಗ್ರ=ಉದ್ವೇಗ/ಆಕ್ರೋಶ; ಚಿತ್ತ=ಮನಸ್ಸು; ವ್ಯಗ್ರಚಿತ್ತ=ಕೋಪ,ತಾಪ,ಆವೇಶ, ಆಕ್ರೋಶಗಳಿಂದ ಕೂಡಿರುವ ಮನಸ್ಸು/ಉದ್ರಿಕ್ತಗೊಂಡಿರುವ ಮನಸ್ಸು;

ಗರ್ವಗ್ರಹ ವ್ಯಗ್ರಚಿತ್ತನುಮಾಗಿ=ಸೊಕ್ಕಿನಿಂದ ಕೂಡಿ ಉದ್ರಿಕ್ತಗೊಂಡಿರುವ ಮನದ ವ್ಯಕ್ತಿಯಾಗಿ;

ಮೇಗು+ಇಲ್ಲದೆ; ಮೇಗು=ಒಳ್ಳೆಯದು;

ಮೇಗಿಲ್ಲದೆ=ಒಳ್ಳೆಯತನವಿಲ್ಲದೆ/ಒಳ್ಳೆಯ ನಡೆನುಡಿಯಿಲ್ಲದೆ;

ಪಾರ್ವ=ಬ್ರಾಹ್ಮಣ;

ಪೇಳ್, ಏನ್ ದ್ರೋಣನ್ ಎಂಬನ್ ಪಾರ್ವನೆ=ಏನು… ದ್ರೋಣನೆಂಬುವನು ಬ್ರಾಹ್ಮಣನೇ;

ಎಂತು=ಯಾವ ಬಗೆಯಲ್ಲಿ/ಹೇಗೆ; ಕೆಳೆಯ=ಗೆಳೆಯ/ಮಿತ್ರ;

ಏನ್ ಎಂತು ಎನಗೆ ಕೆಳೆಯನೇ=ಅವನು ಹೇಗೆ ತಾನೆ ನನ್ನ ಗೆಳೆಯನಾಗುತ್ತಾನೆ;

ಆರ್+ಗೆ; ಆರ್=ಯಾರು;

ಆರ್ಗೆ ಅಂತು ಎಂಬನ್=ಯಾರಿಗೆ ಗೆಳೆಯನೆಂದು ಆ ರೀತಿ ಹೇಳುತ್ತಿದ್ದಾನೆ;

ದಲ್=ನಿಜವಾಗಿಯೂ; ಪಿರಿದು+ಉಮ್; ಪಿರಿದು=ದೊಡ್ಡದು; ಭ್ರಾಂತು=ಇರುವುದನ್ನು ಇಲ್ಲವೆಂದು ಇಲ್ಲದ್ದನ್ನು ಇದೆಯೆಂದು ತಿಳಿದುಕೊಂಡಿರುವುದು/ತಪ್ಪು ತಿಳುವಳಿಕೆ;

ದಲ್, ಪಿರಿದುಮ್ ಭ್ರಾಂತು=ರಾಜನಾದ ನನ್ನನ್ನು ತನ್ನ ಗೆಳೆಯನೆಂದು ಹೇಳಿಕೊಳ್ಳುತ್ತಿರುವ ಆ ವ್ಯಕ್ತಿಯು ತಪ್ಪು ತಿಳುವಳಿಕೆಯಿಂದ ಕೂಡಿದ್ದಾನೆ;

ಅಂತು+ಅಪ್ಪನ್+ಅನ್; ಅಂತು=ಆ ರೀತಿ; ಅಪ್ಪನ್=ಆಗಿರುವವನನ್ನು; ಅಱಿಯೆನ್=ಆ ರೀತಿಯ ಹೆಸರುಳ್ಳ ಯಾವೊಬ್ಬ ವ್ಯಕ್ತಿಯೂ ನನಗೆ ಗೊತ್ತಿಲ್ಲ; ನೂಂಕು=ತಳ್ಳು/ದೂಡು/ದಬ್ಬು;

ಅಂತಪ್ಪನನ್ ಅಱಿಯೆನ್ ನೂಂಕು=ಅಂತಹ ವ್ಯಕ್ತಿಯನ್ನು ನಾನು ಕಂಡಿಲ್ಲ, ಅವನ ಹೆಸರನ್ನು ಕೇಳಿಲ್ಲ. ಅವನನ್ನು ಅರಮನೆಯಿಂದ ಹೊರತಳ್ಳು;

ಸಭೆ+ಒಳ್; ಸಭೆ=ಓಲಗ/ದರ‍್ಬಾರು; ಒಳ್=ಅಲ್ಲಿ ;

ಎಂದು ಸಭೆಯೊಳ್ ನುಡಿದನ್=ಎಂದು ದ್ರುಪದನು ತನ್ನ ಒಡ್ಡೋಲಗದಲ್ಲಿ ನುಡಿದನು;

ಅಱಿಪೆ=ತಿಳಿಸಲು;

ಪಡಿಯಱನ್ ಬಂದು ಅಂತು ನುಡಿದುದನ್ ಆ ಮಾಳ್ಕೆಯೊಳೆ ಅಱಿಪೆ=ಬಾಗಿಲು ಕಾಯುವವನು ಓಲಗದಿಂದ ಹೊರಬಂದು ದ್ರುಪದನು ನುಡಿದ ಮಾತುಗಳನ್ನು ಅದೇ ರೀತಿಯಲ್ಲಿಯೇ ದ್ರೋಣನಿಗೆ ಹೇಳಲು;

ಒತ್ತಂಬ+ಇಂದ; ಒತ್ತಂಬ=ಬಲಾತ್ಕರ/ಒತ್ತಾಯ; ಪೊಕ್ಕು=ಒಳನುಗ್ಗಿ;

ದ್ರೋಣನ್ ಒತ್ತಂಬದಿಂದ ಒಳಗಮ್ ಪೊಕ್ಕು ದ್ರುಪದನನ್ ಕಂಡು=ದ್ರೋಣನು ದ್ವಾರಪಾಲಕರ ಅಡೆತಡೆಗಳನ್ನು ಲೆಕ್ಕಿಸದೆ ಒಡ್ಡೋಲಗದ ಒಳಕ್ಕೆ ನುಗ್ಗಿ ಬಂದು ದ್ರುಪದನನ್ನು ನೋಡಿ ;

ಅಣ್ಣ=ವಯಸ್ಸಿನಲ್ಲಿ ಹಿರಿಯರಾಗಿರುವ ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ. ಕೆಲವೊಮ್ಮೆ ಹಿರಿಯರಾದವರು ಇಲ್ಲವೇ ದೊಡ್ಡ ಗದ್ದುಗೆಯಲ್ಲಿರುವವರು ಕೆಟ್ಟತನದಿಂದ ನಡೆದುಕೊಂಡಾಗ, ಅವರ ಕೆಟ್ಟ ವರ‍್ತನೆಯನ್ನು ಎತ್ತಿ ತೋರಿಸಲು “ಅಣ್ಣ“ ಎಂಬ ಪದವನ್ನು ವ್ಯಂಗವಾಗಿ ಬಳಸಲಾಗುತ್ತದೆ; ಈ ಸಮಯದಲ್ಲಿ ದ್ರುಪದನ ಕೆಟ್ಟ ವರ‍್ತನೆಯಿಂದ ಮನನೊಂದ ದ್ರೋಣನು ಗೆಳೆಯನಿಗೆ ತಮ್ಮಿಬ್ಬರ ಗೆಳೆತನದ ಹಿನ್ನೆಲೆಯನ್ನು ತಿಳಿಸುವ ಮುನ್ನ ಈ ಪದವನ್ನು ಆಡುತ್ತಿದ್ದಾನೆ; ನೀಮುಮ್=ನೀವು; ಆಮುಮ್=ನಾವು ; ಎಂಬುದನ್=ಎನ್ನುವ ಸಂಗತಿಯನ್ನು; ಅಱಿಯಿರೆ=ಗೊತ್ತಿಲ್ಲವೇ/ತಿಳಿದಿಲ್ಲವೇ;

ಅಣ್ಣ, ನೀಮುಮ್ ಆಮುಮ್ ಒಡನೆ ಓದಿದೆವು ಎಂಬುದನ್ ಅಱಿಯಿರೆ=ಅಣ್ಣಾ, ನೀವು ನಾವು ಜತೆಯಲ್ಲಿ ಓದಿದೆವು ಎಂಬುದು ತಿಳಿದಿಲ್ಲವೇ. ಅಂದರೆ ಮರೆತುಹೋಗಿದೆಯೇ;

ಆನ್=ನಾನು;

ನಿನ್ನನ್ ಆನ್ ಅಱಿಯೆನ್=ನೀನು ಯಾರೆಂಬುದು ನನಗೆ ಗೊತ್ತಿಲ್ಲ;

ಮಹೀಪತಿಗೆ+ಅಮ್; ಮಹೀಪತಿ=ಬೂಮಂಡಲಕ್ಕೆ ಒಡೆಯನಾದ ರಾಜ; ದ್ವಿಜ+ವಂಶಜಮ್+ಗೆ+ಅಮ್; ದ್ವಿಜ=ಬ್ರಾಹ್ಮಣ; ವಂಶ=ಕುಲ; ವಂಶಜ=ಕುಲದಲ್ಲಿ ಹುಟ್ಟಿದವನು ; ಏತಱ=ಯಾವುದರ/ಯಾವ ಬಗೆಯಲ್ಲಿ; ಕೆಳೆ=ಗೆಳೆತನ;

ಮಹೀಪತಿಗಮ್ ದ್ವಿಜವಂಶಜಂಗಮ್ ಏತಱ ಕೆಳೆ=ನಾಡನ್ನಾಳುವ ರಾಜನಿಗೂ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ವ್ಯಕ್ತಿಗೂ ಯಾವ ಬಗೆಯಲ್ಲಿ ಹೇಗೆ ತಾನೆ ಗೆಳೆತನ ಉಂಟಾಗುತ್ತದೆ;

ಅದು+ಎಲ್ಲಿ; ಕಾಣು=ನೋಡು/ತಿಳಿ;

ಅದೆಲ್ಲಿ ಕಂಡೆಯೊ=ಎಲ್ಲಾದರೂ ನೀನು ಕಂಡಿದ್ದೀಯೆನೋ;

ಇಂತು=ಈ ರೀತಿ ; ನಾಣಿಲಿ+ಗ+ಅರ್+ಅಪ್ಪರೆ; ನಾಣ್=ನಾಚಿಕೆ/ಲಜ್ಜೆ; ನಾಣಿಲಿ=ನಾಚಿಕೆಯಿಲ್ಲದ/ಲಜ್ಜೆಯಿಲ್ಲದ; ನಾಣಿಲಿಗ=ನಾಚಿಕೆಯಿಲ್ಲದ ವ್ಯಕ್ತಿ ; ಅಪ್ಪರೆ=ಆಗುತ್ತಾರೆಯೇ ; ಮಾನಸ=ವ್ಯಕ್ತಿ/ಮಾನವ;

ಇಂತು ಮಾನಸರ್ ನಾಣಿಲಿಗರಪ್ಪರೆ=ಈ ರೀತಿ ವ್ಯಕ್ತಿಗಳು ನಿನ್ನಂತೆ ನಾಚಿಕೆಯಿಲ್ಲದೆ ನಡೆದುಕೊಳ್ಳುತ್ತಾರೆಯೇ;

ನೆಱ+ಕೊಳ್+ಎ; ನೆಱ=ಮನಸ್ಸಿನ ಆಳ/ಮನದ ಮೂಲ; ಕೊಳ್=ತಾಗು/ಮುಟ್ಟು; ನೆಱಗೊಳ್=ಮನಸ್ಸಿಗೆ ಹೆಚ್ಚಿನ ನೋವನ್ನುಂಟು ಮಾಡುವುದು;

ಎಂಬ ಮಾತುಗಳ್ ನೆಱಗೊಳೆ=ದ್ರುಪದನು ಆಡಿದ ಮಾತುಗಳು ದ್ರೋಣನ ಮನಸ್ಸಿಗೆ ಹೆಚ್ಚಿನ ಗಾಸಿಯನ್ನುಂಟುಮಾಡಲು;

ಕುಂಭ+ಸಂಭವನ್+ಅನ್; ಕುಂಭ=ಕೊಡ/ಬಿಂದಿಗೆ; ಸಂಭವ=ಹುಟ್ಟು ; ಕುಂಭಸಂಭವ=ಕೊಡದಲ್ಲಿ ಹುಟ್ಟಿದವನು/ದ್ರೋಣ; ಕಡು=ಬಹಳವಾಗಿ/ಹೆಚ್ಚಾಗಿ; ಸಿಗ್ಗು=ಅಪಮಾನ;

ಆ ದ್ರುಪದನ್ ಕುಂಭಸಂಭವನನ್ ಕಡು ಸಿಗ್ಗು ಮಾಡಿದನ್=ರಾಜನಾಗಿದ್ದ ದ್ರುಪದನು ದ್ರೋಣನಿಗೆ ತುಂಬಾ ಅಪಮಾನವನ್ನು ಮಾಡಿದನು;

ಅಂತು ಮಾಡಿದುದುಮ್ ಅಲ್ಲದೆ=ಆ ರೀತಿ ಮಾಡಿದ್ದು ಅಲ್ಲದೆ;

ಕಳೆ+ಇಮ್; ಕಳೆ=ಬಿಡು/ತೊರೆ; ಎಂಬುದುಮ್=ಎಂದು ಹೇಳಲು;

ಈ ನಾಣಿಲಿ ಪಾರ್ವನನ್ ಎಳೆದು ಕಳೆಯಿಮ್ ಎಂಬುದುಮ್=ನಾಚಿಕೆಯಿಲ್ಲದೆ ನನ್ನ ಬಳಿ ಬಂದಿರುವ ಈ ಬ್ರಾಹ್ಮಣನ್ನು ಒಡ್ಡೋಲಗದಿಂದ ಎಳೆದುಕೊಂಡು ಹೋಗಿ ಹೊರಕ್ಕೆ ತಳ್ಳಿರಿ ಎಂದು ಅಪ್ಪಣೆ ಮಾಡಲು;

ದ್ರೋಣನ್ ಇಂತು ಎಂದನ್=ದ್ರೋಣನು ಈ ರೀತಿ ನುಡಿಯತೊಡಗಿದನು;

ರಾಜತನದ ಸಿರಿಯ ಸೊಕ್ಕಿನಿಂದ ಮೆರೆಯುತ್ತಿರುವ ದ್ರುಪದನ ನಡೆನುಡಿಯ ಚಹರೆಗಳನ್ನು ಅಮಲನ್ನುಂಟುಮಾಡುವ ಪಾನೀಯಗಳನ್ನು ಕುಡಿದ ವ್ಯಕ್ತಿಯ ಮಯ್ ಮನದ ಚಹರೆಗಳಿಗೆ ದ್ರೋಣನು ಹೋಲಿಸತೊಡಗಿದ್ದಾನೆ;

ನುಡಿ=ಮಾತು/ಸೊಲ್ಲು; ತಡವು+ಅಪ್ಪುದು; ತಡವು=ತಡೆ/ನಿಲ್ಲು ; ಅಪ್ಪುದು=ಆಗುವುದು;

ನುಡಿ ತಡವಪ್ಪುದು ಒಂದು=ವ್ಯಕ್ತಿಯು ಸಲೀಸಾಗಿ ಮಾತನಾಡಲಾಗದೆ ಅವನು ಆಡುವ ಮಾತುಗಳು ತಡವರಿಸತೊಡಗುತ್ತವೆ, ಕುಡಿದ ವ್ಯಕ್ತಿಯಲ್ಲಿ ಕಂಡು ಬರುವ ಒಂದು ಚಹರೆ;

ಮೊಗ+ಒಳ್; ಮೊಗ=ಮುಕ ;ಮುಱುಕು+ಅನ್; ಮುಱುಕು=ವಕ್ರತೆ/ಡೊಂಕು/ಸಿಂಡರಿಸು/ಗಂಟಿಕ್ಕು; ದೊರೆಕೊಳ್=ಕಾಣಿಸಿಕೊಳ್ಳುವುದು/ಕಂಡುಬರುವುದು ;

ಮೊಗದೊಳ್ ಮುಱುಕಮ್ ದೊರೆಕೊಳ್ವುದು ಒಂದು=ಮೊಗದಲ್ಲಿ ವಕ್ರತೆಯು ಕಂಡು ಬರುತ್ತದೆ/ಮೊಗವು ಸಿಂಡರಿಸಿಕೊಳ್ಳುತ್ತದೆ. ಇದು ಮತ್ತೊಂದು ಚಹರೆ;

ಎಡೆ+ಕುಡದೆ; ಎಡೆ=ಅವಕಾಶ; ಕುಡು=ಕೊಡು; ಎಡೆಗುಡು=ಅವಕಾಶವನ್ನು ನೀಡುವುದು; ಇರ್ಪುದು=ಇರುವುದು;

ನಾಣ್ಗೆ ಎಡೆಗುಡದೆ ಇರ್ಪುದು ಒಂದು=ನಾಚಿಕೆಯ ನಡೆನುಡಿಗಳಿಗೆ ಅವಕಾಶವನ್ನೇ ನೀಡದಿರುವುದು/ಮತ್ತೊಬ್ಬರ ಮನ ನೋಯಿಸುವಂತೆ ನಡೆದುಕೊಳ್ಳುವುದು; “ನಾಚಿಕೆಯ ನಡೆನುಡಿ“ ಎಂದರೆ ವ್ಯಕ್ತಿಯು “ತನ್ನ ನಡೆನುಡಿಯನ್ನು ನೋಡಿದ ಜನರು ತನ್ನ ಬಗ್ಗೆ ಏನೆಂದುಕೊಳ್ಳುವರೋ ಇಲ್ಲವೇ ಅಸಹ್ಯಪಟ್ಟುಕೊಳ್ಳುವರೋ“ ಎಂಬ ಅಂಜಿಕೆಯಿಂದ ಸದಾಕಾಲ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕೆಂಬ ಎಚ್ಚರವನ್ನು ಹೊಂದಿರುವುದು;

ನುಡಿ=ಆಡುವ ಮಾತು; ಮೊಱೆ+ಅನ್; ಮೊಱೆ=ನಂಟು/ಸಂಬಂದ/ಗೆಳೆತನ; ಮಱೆ+ಇಪ್ಪುದು; ಮಱೆ=ನೆನಪಿಸಿಕೊಳ್ಳದಿರುವುದು; ಇಪ್ಪುದು=ಇರುವುದು;

ನುಡಿಗಳ್ ಮೊಱೆಯನ್ ಮಱೆಯಿಪ್ಪುದು ಒಂದು=ವ್ಯಕ್ತಿಗಳ ನಡುವಣ ನಂಟನ್ನೇ ಮರೆತು ಇಲ್ಲವೇ ಕಡೆಗಣಿಸಿ ಮಾತನಾಡುವುದು ಮತ್ತೊಂದು ಚಹರೆ;

ಇಂತು=ಈ ರೀತಿ ; ಕಳ್+ಕುಡಿದವರ; ಕಳ್=ಹೆಂಡ/ಮತ್ತು ಬರಿಸುವ ಯಾವುದೇ ಪಾನೀಯ; ಅಂದ=ರೀತಿ/ಬಗೆ;

ಇಂತು ಕಳ್ಗುಡಿದವರ ಅಂದಮ್=ಕಳ್ಳುಕುಡಿದವರ ವರ‍್ತನೆಯು ಈ ರೀತಿಗಳಲ್ಲಿ ಕಂಡುಬರುತ್ತದೆ;

ಸಿರಿ=ಸಂಪತ್ತು/ಒಡವೆವಸ್ತು; ಸಾರ್=ಹತ್ತಿರಕ್ಕೆ ಬರು; ಸಾರ್ತರೆ=ಬಳಿಸಾರಿ ಬಂದಾಗ; ಸಾರ್ವುದು=ಬರುತ್ತದೆ;

ಸಿರಿ ಸಾರ್ತರೆ ಸಾರ್ವುದು=ಯಾವುದೇ ವ್ಯಕ್ತಿಗೆ ಸಿರಿಯು ಬಂದಾಗ ಅದು ಒಡವೆ ವಸ್ತುಗಳ ಸಂಪತ್ತಾಗಿರಬಹುದು ಇಲ್ಲವೇ ಉನ್ನತ ಆಡಳಿತದ ಗದ್ದುಗೆಯಾಗಿರಬಹುದು, ಸಿರಿಬಂದ ವ್ಯಕ್ತಿಯು ಕಳ್ಳು ಕುಡಿದವನಂತೆಯೇ ಆಡತೊಡಗುತ್ತಾನೆ;

ಅದರ್ಕೆ=ಅದಕ್ಕೆ;

ಕಳ್+ಒಡ+ಪುಟ್ಟಿತು; ಒಡ=ಜತೆಯಲ್ಲಿ ; ಪುಟ್ಟಿತು=ಹುಟ್ಟಿತು ; ಸಂದೆಯ+ಅಮ್; ಸಂದೆಯ=ಸಂದೇಹ/ಸಂಶಯ; ಜಲಕ್ಕನೆ=ತಟ್ಟನೆ/ಒಮ್ಮೆಲೆ/ನಿಚ್ಚಳವಾಗಿ;

ಸಿರಿ ಕಳ್ಳೊಡವುಟ್ಟಿತು ಎಂಬುದನ್ ಸಂದೆಯಮ್ ಪಡದೆ ಜಲಕ್ಕನೆ ಈಗಳ್ ಅಱಿದೆನ್= ಈಗ ನಿನ್ನ ವರ‍್ತನೆಯನ್ನು ನೋಡುತ್ತಿದ್ದಂತೆಯೇ ಸಿರಿವಂತಿಕೆಯು ಕಳ್ಳಿನ ಜತೆಜತೆಯಲ್ಲಿಯೇ ಹುಟ್ಟಿತು ಎಂಬುದನ್ನು ಯಾವುದೇ ಸಂದೇಹವಿಲ್ಲದೆ ತಟಕ್ಕನೇ ನಾನು ಅರಿತುಕೊಂಡೆನು; ಕಳ್ಳನ್ನು ಕುಡಿದಾಗ ಅಮಲೇರಿದ ವ್ಯಕ್ತಿಯು ತನ್ನ ಮಯ್ ಮನದ ಮೇಲಣ ಅರಿವನ್ನು ಕಳೆದುಕೊಳ್ಳುವಂತೆಯೇ ಸಿರಿಯ ಮದವೇರಿದ ವ್ಯಕ್ತಿಯು ಅರಿವನ್ನು ಕಳೆದುಕೊಂಡು ವರ‍್ತಿಸುತ್ತಾನೆ;

ಸೈರಿಸದೆ=ತಡೆದುಕೊಳ್ಳಲಾರದೆ/ದ್ರುಪದನಿಂದ ಉಂಟಾದ ಅಪಮಾನವನ್ನು ದ್ರೋಣನು ಸಹಿಸಿಕೊಳ್ಳಲಾರದೆ;

ಖಳ=ಕೀಳಾದುದು; ನೊಳವು=ನೊಣ; ಖಳ ನೊಳವು=ಕೊಳಕನ್ನೆ ಬಯಸುವ ನೊಣ; ಕುಪ್ಪೆ=ಹೊಲಸು/ತಿಪ್ಪೆ; ವರ=ಉತ್ತಮವಾದ ; ಎಂಬ+ವೊಲ್; ವೊಲ್=ಅಂತೆ/ಹಾಗೆ;

ಖಳ ನೊಳವಿಂಗೆ ಕುಪ್ಪೆ ವರಮ್ ಎಂಬವೊಲ್=ಕೊಳಕನ್ನೇ ಬಯಸುವ ನೊಣಕ್ಕೆ ಕಸಕಡ್ಡಿಗಳಿಂದ ಕೊಳತು ನಾರುತ್ತಿರುವ ತಿಪ್ಪೆಗುಂಡಿಯೇ ಚೆನ್ನಾಗಿ ಕಾಣುವಂತೆ ನೀನು ಕೂಡ ಸೊಕ್ಕಿನಿಂದ ಕೂಡಿದ ಕೆಟ್ಟ ನಡೆನುಡಿಗಳನ್ನೇ ದೊಡ್ಡದೆಂದು ತಿಳಿದಿರುವೆ;

ಅಳವು=ಕಸುವು/ಶಕ್ತಿ ; ಆಂಬರಮ್=ಆನ್+ವರಮ್; ಆನ್=ನಾನು; ವರಮ್=ವರೆಗೂ; ಆಂಬರಮ್=ನನ್ನವರೆಗೂ; ಉಂಟೆ=ಇರುವುದೆ;

ನಿನ್ನದು ಒಂದು ಅಳವು ಆಂಬರಮ್ ಉಂಟೆ=ನಿನ್ನ ಒಂದು ಶಕ್ತಿಯು ನನ್ನವರೆಗೂ ಇರುವುದೇ. ಅಂದರೆ ನನ್ನ ಶಕ್ತಿಯ ಮುಂದೆ ನಿನ್ನದು ಏನೇನೂ ಅಲ್ಲ;

ಬೆರಗು=ಅತಿಶಯ/ಹೆಚ್ಚಳ/ಸೋಜಿಗ;

ಒಡನೆ ಓದಿದ ಒಂದು ಬೆರಗಿಂಗೆ ಕೊಲಲ್ಕೆ ಎನಗೆ ಆಗದು=ನಿನ್ನ ಜತೆಯಲ್ಲಿ ಓದಿರುವ ಒಂದು ಅತಿಶಯವಾದ ನಂಟಿನಿಂದಾಗಿ ನಿನ್ನನ್ನು ಕೊಲ್ಲಲು ನನಗೆ ಮನಸ್ಸಾಗದು;

ಸಭಾ+ವಳಯ+ಒಳ್; ಸಭಾ=ಒಡ್ಡೋಲಗ ; ವಲಯ=ಪ್ರದೇಶ ; ಎನ್ನನ್=ನನ್ನನ್ನು ; ಏಳಿಸು=ಅವಹೇಳನ ಮಾಡು/ನಿಂದಿಸು;

ಈ ಸಭಾವಳಯದೊಳ್ ಎನ್ನನ್ ಏಳಿಸಿದ ನಿನ್ನನ್=ಈ ನಿನ್ನ ಒಡ್ಡೋಲಗದಲ್ಲಿ ನನ್ನನ್ನು ಅಪಮಾನಗೊಳಿಸಿದ ನಿನ್ನನ್ನು;

ಎನ್ನ=ನನ್ನ ; ಚಟ್ಟರ್+ಇಮ್; ಚಟ್ಟ=ಗುಡ್ಡ/ಶಿಶ್ಯ ; ಅನಾಕುಳ=ಸಲೀಸು/ಸರಾಗ; ಇಮ್=ಇಂದ ; ತಳವೆಳಗು+ಆಗೆ; ತಳವೆಳಗು=ದಿಗಿಲು/ಅಂಜಿಕೆ; ಕಟ್ಟಿಸು=ಬಂದಿಸು/ಸೆರೆಹಿಡಿ; ಮಾಣ್=ಬಿಡು; ಮಾಣ್ದೊಡೆ=ಬಿಟ್ಟರೆ; ಕೆಮ್ಮನೆ=ಸುಮ್ಮನೆ; ಮೀಸೆ+ಪೊತ್ತೆನೇ=ಮೀಸೆ ಹೊತ್ತವನಾಗುವುದಿಲ್ಲವೇ. ಅಂದರೆ ಮೀಸೆ ಹೊತ್ತಿದ್ದರೂ ನಾನು ಗಂಡಸಾಗುವುದಿಲ್ಲ; ಮೀಸೆಯನ್ನು ಗಂಡಸುತನದ/ಪರಾಕ್ರಮದ ಸಂಕೇತವಾಗಿ ಜನಸಮುದಾಯ ಕಲ್ಪಿಸಿಕೊಂಡಿದೆ;

ಎನ್ನ ಚಟ್ಟರಿಮ್ ಅನಾಕುಳಮ್ ತಳವೆಳಗಾಗೆ ಕಟ್ಟಿಸದೆ ಮಾಣ್ಬೊಡೆ ಕೆಮ್ಮನೆ ಮೀಸೆವೊತ್ತೆನೇ=ನನ್ನ ಶಿಶ್ಯರಿಂದ ಬಹಳ ಸಲೀಸಾಗಿ ನಿನ್ನನ್ನು ಅಂಜಿಸಿ ಹೆಡೆಮುರಿ ಕಟ್ಟಿಸದಿದ್ದರೆ ನಾನು ಸುಮ್ಮನೆ ಮೀಸೆ ಹೊತ್ತಂತೆ ಆಗುವುದಲ್ಲವೇ?

ಆರೂಢ+ಪ್ರತಿಜ್ಞನ್+ಆಗಿ; ಆರೂಢ=ಕಯ್ಗೊಂಡ; ಪ್ರತಿಜ್ಞೆ=ಶಪತ/ಪಣ;

ಎಂದು ಆರೂಢಪ್ರತಿಜ್ಞನಾಗಿ=ಎಂದು ಪಣವನ್ನು ತೊಟ್ಟು;

ನಾಗಪುರ=ಹಸ್ತಿನಾವತಿ; ವಂದು=ಬಂದು ; ಭಾವ=ಹೆಂಡತಿಯ ಅಣ್ಣ ; ಕೃಪ=ಹಸ್ತಿನಾವತಿಯಲ್ಲಿ ರಾಜಕುಮಾರರಿಗೆ ವಿದ್ಯೆಯನ್ನು ಹೇಳಿಕೊಡುತ್ತಿದ್ದ ಗುರು. ಈತನ ತಂಗಿ ಕ್ರುಪೆಯನ್ನು ದ್ರೋಣನು ಮದುವೆಯಾಗಿದ್ದನು; ಅಪಗತ+ಪರಿಶ್ರಮನ್; ಅಪಗತ=ಬಿಟ್ಟುಹೋದ; ಪರಿಶ್ರಮ=ಆಯಾಸ/ಬಳಲಿಕೆ ; ಅಪಗತಪರಿಶ್ರಮ=ಬಳಲಿಕೆಯನ್ನು ನಿವಾರಿಸಿಕೊಳ್ಳುವುದು;

ನಾಗಪುರಕ್ಕೆ ವಂದು ತಮ್ಮ ಭಾವನ್ ಕೃಪನ ಮನೆಯೊಳ್ ಅಪಗತಪರಿಶ್ರಮನ್ ಆಗಿ ಇರ್ದು=ದ್ರೋಣನು ಅಲ್ಲಿಂದ ಹಸ್ತಿನಾವತಿಗೆ ಬಂದು, ತನ್ನ ಹೆಂಡತಿಯ ಅಣ್ಣನಾದ ಕ್ರುಪನ ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks