ನಿರಾಶೆಯ ಮಾತುಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು

–  ಪ್ರಕಾಶ್ ಮಲೆಬೆಟ್ಟು.

ಸಂಬಂದಗಳು ಸ್ಪೂರ‍್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂದಗಳಿಗಿಂತಲೂ ಹೆಚ್ಚು ಪ್ರಬಾವಶಾಲಿಯಾಗಿರಬೇಕು. ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ, ನಿಮ್ಮ ಯಶಸ್ಸಿಗೆ ಸ್ಪೂರ‍್ತಿ ಯಾರೆಂದು ? ಸಾಮಾನ್ಯವಾಗಿ, ತನ್ನ ಯಶಸ್ಸಿಗೆ ತಾನೇ ಕಾರಣ ಅನ್ನುವ ಉತ್ತರ ಯಾರು ಸಹ ಕೊಡುವುದಿಲ್ಲ ಅಲ್ವೇ ! ಪ್ರತಿಯೊಬ್ಬರ ಜೀವನದ ಯಶೋಗಾತೆಯ ಹಿಂದೆ, ಸ್ಪೂರ‍್ತಿಯ ಚಿಲುಮೆಯಾಗಿ ಯಾರಾದರೂ ಇದ್ದೇ ಇರುತ್ತಾರೆ. ಇತ್ತೀಚಿಗೆ ತೆರೆಕಂಡ ‘ತೂಪಾನ್’ ( Thoofaan ) ಎನ್ನುವ ಒಂದು ಹಿಂದಿ ಚಲನಚಿತ್ರದಲ್ಲಿ, ಕತಾನಾಯಕಿಯು ಅಡ್ಡದಾರಿ ಹಿಡಿದಿದ್ದ ಕತಾನಾಯಕನನ್ನು ತನ್ನ ಸ್ಪೂರ‍್ತಿಯುತ ಮಾತಿನಿಂದ ಒಬ್ಬ ಯಶಸ್ವಿ ಕ್ರೀಡಾಪಟುವಾಗಲು ಪ್ರೇರೇಪಿಸುತ್ತಾಳೆ. ಇಲ್ಲಿ ಕತಾನಾಯಕನ ಯಶಸ್ಸಿಗೆ ಆತನ ಕಟಿಣ ಪರಿಶ್ರಮ ಮತ್ತು ಆತನಿಗೆ ತರಬೇತಿ ನೀಡಿದವರ ಶ್ರಮ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡರೂ, ಅದಕ್ಕೂ ಮಿಗಿಲಾಗಿ ಆತನಲ್ಲಿ ಸ್ಪೂರ‍್ತಿ ತುಂಬಿದ ಕತಾನಾಯಕಿ ಪ್ರಮುಕ ಕಾರಣಳಾಗುತ್ತಾಳೆ. ಇದು ಒಂದು ಸಿನಿಮಾ ನಿಜ. ಆದರೆ ವಾಸ್ತವ ಜಗತ್ತಿಗೆ ತುಂಬಾ ಹತ್ತಿರವಾಗಿದೆ. ಕನಸು ಕಾಣದವರು ಯಾರಿದ್ದಾರೆ ಹೇಳಿ? ಆದರೆ ಎಶ್ಟೋ ಸಲ ಕನಸುಗಳಿಗೆ ಸೂಕ್ತ ಒತ್ತಾಸೆ ದೊರೆಯದೆ, ಅವು ಚಿಗುರಿನಲ್ಲೇ ಮುದುಡಿ ಹೋಗಿಬಿಡುತ್ತವೆ.

 

ಈ ನಿಟ್ಟಿನಲ್ಲಿ ಒಂದು ಪುಟ್ಟ ಕತೆ ನನಗಿಲ್ಲಿ ನೆನಪಿಗೆ ಬರುತ್ತಿದೆ. ಒಮ್ಮೆ ಒಬ್ಬ ದಾರಿಹೋಕ ರಸ್ತೆಯ ಬದಿಯಲ್ಲಿ ಒಂದು ಆನೆ ತರಬೇತಿ ಕೇಂದ್ರವನ್ನು ನೋಡುತ್ತಾನೆ. ಆನೆಗಳನ್ನು ನೋಡುವ ಕುತೂಹಲದಿಂದ, ಆತ ಆ ಕೇಂದ್ರದೊಳಗೆ ಹೋಗುತ್ತಾನೆ. ಅಲ್ಲಿ ಅನೇಕ ಆನೆಗಳಿರುತ್ತವೆ ಮತ್ತು ಪರಮಾಶ್ಚರ‍್ಯವೇನೆಂದರೆ ಆ ಆನೆಗಳ ಒಂದು ಕಾಲನ್ನು ಒಂದು ಚಿಕ್ಕ ಹಗ್ಗದಿಂದ ಕಟ್ಟಿ ಹಾಕಿರಲಾಗುತ್ತದೆ. ಆ ಆನೆಗಳ ಶಕ್ತಿಯ ಮುಂದೆ ಆ ಹಗ್ಗ ಏನೇನೂ ಅಲ್ಲ! ಹೀಗಿದ್ದರೂ ಸಹ ಆನೆಗಳು ಆ ಹಗ್ಗವನ್ನು ಕಿತ್ತು ಹಾಕುವ ಪ್ರಯತ್ನ ಮಾಡುತ್ತಿರಲಿಲ್ಲ. ಇದನ್ನು ಕಂಡ ದಾರಿಹೋಕ, ಕುತೂಹಲದಿಂದ ಆ ಆನೆಗಳ ತರಬೇತುದಾರರಲ್ಲಿ;  ‘ಆ ಆನೆಗಳೇಕೆ ಹಗ್ಗ ಕಿತ್ತುಕೊಳ್ಳದೆ ಸುಮ್ಮನಿವೆ?’ ಎನ್ನುತ್ತಾನೆ. ಆಗ ಆ ತರಬೇತುದಾರ ನಕ್ಕು ಹೀಗೆ ನುಡಿಯುತ್ತಾನೆ; ‘ಆ ಆನೆಗಳನ್ನು ಮೊತ್ತ ಮೊದಲು ಈ ತರಬೇತಿ ಕೇಂದ್ರಕ್ಕೆ ತಂದಾಗ ಅವು ಮರಿಗಳಾಗಿದ್ದವು. ಆಗ ನಾವು ಈ ತೆಳ್ಳನೆಯ ಹಗ್ಗದಿಂದ ಅವುಗಳ ಒಂದು ಕಾಲನ್ನು ಕಟ್ಟುತ್ತಿದ್ದೆವು ಮತ್ತು ಅಂದು ಅವುಗಳನ್ನು ತಡೆದಿಡಲು ಈ ಹಗ್ಗದ ಬಲ ಸಾಕಿತ್ತು. ಆಗ ಆ ಹಗ್ಗವನ್ನು ಕಿತ್ತು ಹಾಕುವ ಪ್ರಯತ್ನ ಮಾಡುತಿದ್ದ ಮರಿಯಾನೆಗಳಿಗೆ, ಅದನ್ನು ಕಿತ್ತು ಹಾಕಲು ಸಾದ್ಯವಾಗುತ್ತಿರಲಿಲ್ಲ. ಆದರೆ ಈಗ ಅವು ಬೆಳೆದು ದೊಡ್ಡವುಗಳಾಗಿದ್ದರೂ, ತಮಗಿಂತ ಆ ಹಗ್ಗ ಬಲಶಾಲಿ ಎನ್ನುವ ನಂಬಿಕೆ ಅವುಗಳಲ್ಲಿ ಬೇರೂರಿದೆ’.

 

ಬದುಕಿನ ಪ್ರತಿಕ್ಶಣ ಸವಾಲಿನದಾಗಿರುವಾಗ ನಮ್ಮ ಸಂಬಂದಗಳು ಪರಸ್ಪರ ಸ್ಪೂರ‍್ತಿ ತುಂಬಬೇಕೇ ವಿನಾ ನಿರಾಶೆಯ ಕೂಪಕ್ಕೆ ತಳ್ಳಬಾರದು. ನಮ್ಮ ಬದುಕು ಕೂಡ ಹೀಗೆಯೇ ಅಲ್ಲವೆ! ಎಶ್ಟೋ ಬಾರಿ ಆ ಆನೆಗಳಶ್ಟೇ ಸಾಮರ‍್ತ್ಯ ನಮ್ಮೊಳಗೇ ಇರುತ್ತದೆ. ಆದರೆ ನಮ್ಮೊಳಗಿನ ಅಳುಕುಗಳು ಎನ್ನಬಹುದಾದ ಒಂದು ಸಣ್ಣ ಹಗ್ಗವು, ನಮ್ಮನ್ನು ಪ್ರಯತ್ನ ಮಾಡದಂತೆ ಕಟ್ಟಿಹಾಕಿ ಬಿಟ್ಟಿರುತ್ತದೆ. ನಾವು ಆ ಹಗ್ಗಕ್ಕಿಂತ ಶಕ್ತಿಶಾಲಿ ಎನ್ನುವ ಅರಿವು ಮೂಡಿಸುವ ಪ್ರೇರಕ ಶಕ್ತಿ ನಮಗೆ ಸಿಗದಿದ್ದರೆ ನಾವು ಬೆಳೆಯಲು ಸಾದ್ಯವಾಗುವುದಿಲ್ಲ. ಆದರೆ ಪ್ರತಿ ಸಂದರ‍್ಬದಲ್ಲೂ, ಯಾರಾದರೂ ಸ್ಪೂರ‍್ತಿಯಾಗಿ ನಮ್ಮ ಜೊತೆಗಿರುತ್ತಾರೆ ಎಂದು ಹೇಳಲು ಸಾದ್ಯವಿಲ್ಲ. ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಸಲುವಾಗಿ, ನಮ್ಮ ಜೀವನದಲ್ಲಿ ಬರುವ ಪ್ರತಿ ವ್ಯಕ್ತಿಯೂ ಕೂಡ ಆ ಸಣ್ಣ ಹಗ್ಗದಂತೆ. ಅಯ್ಯೋ ನಿನಗೆ ಅಂತಹ ಅರ‍್ಹತೆ ಇಲ್ಲ. ನಮಗೆ ಇವೆಲ್ಲಾ ಏಕೆ ಬೇಕು? ಅವೆಲ್ಲ ಸಾದ್ಯವೇ ಇಲ್ಲ ಬಿಡು. ಈ ರೀತಿಯಾಗಿ ಮಾತನಾಡುವ ಜನರ ಸಂಕ್ಯೆಗೆ ಕೊರತೆಯೇನೂ ಇಲ್ಲ. ಇಂತಹ ಜನರೊಳಗೊಟ್ಟಿನ ಸಂಬಂದಗಳಿಗಿಂತಲೂ, ನಮಗೆ ನಮ್ಮ ಮೇಲಿರುವ ಆತ್ಮವಿಶ್ವಾಸ, ಗಟ್ಟಿಯಾಗಿರಬೇಕು!. ಕಾಲೆಳೆಯುವವರು ತುಂಬಾ ಜನ ಇರುತ್ತಾರೆ. ಅವರ ಮಾತುಗಳಿಗೆ ಕೆಲವೊಮ್ಮೆ ನಾವು ಕಿವುಡರಾಗಬೇಕಾಗುತ್ತದೆ.

 

ಒಮ್ಮೆ ಕಪ್ಪೆಗಳ ಹಿಂಡೊಂದು ಸವಾರಿ ಹೊರಟಿದ್ದವು. ಅವುಗಳಲ್ಲಿ ಎರಡು ಕಪ್ಪೆಗಳು ಆಯತಪ್ಪಿ ಒಂದು ಗುಂಡಿಯೊಳಗೆ ಬಿದ್ದುಬಿಡುತ್ತವೆ. ಗುಂಡಿ ತುಂಬಾ ಆಳವಾಗಿರುತ್ತದೆ. ಉಳಿದ ಕಪ್ಪೆಗಳಿಗೆ ಅವು ಮೇಲೆ ಬರಲು ಸಾದ್ಯವೇ ಇಲ್ಲ ಎಂದೆನಿಸುತ್ತದೆ. ಅಶ್ಟರಲ್ಲಿ ಕೆಳಗೆ ಬಿದ್ದ, ಈ ಎರಡು ಕಪ್ಪೆಗಳು ಮೇಲಕ್ಕೆ ನೆಗೆಯುವ ಪ್ರಯತ್ನ ಮೊದಲು ಮಾಡುತ್ತವೆ. ಆಗ ಉಳಿದ ಕಪ್ಪೆಗಳು ಜೋರಾಗಿ ಕೂಗಿ, ಹೀಗೆ ಹೇಳುತ್ತವೆ; ಮೇಲೆ ನೆಗೆದು ಸುಮ್ಮನೆ ಗಾಯಮಾಡಿಕೊಂಡು ಏಕೆ ಪ್ರಾಣಹಿಂಸೆ ಮಾಡಿಕೊಂಡು ಸಾಯುತ್ತೀರ? ನೀವು ಬದುಕಲು ಸಾದ್ಯವಿಲ್ಲ ಹಾಗಾಗಿ ಕೆಳಗೇ ಇದ್ದು ಬಿಡಿಯೆಂದು. ಅವುಗಳ ಮಾತು ಕೇಳಿದ ಒಂದು ಕಪ್ಪೆ ತನ್ನ ಪ್ರಯತ್ನ ಬಿಟ್ಟು ಬಿಡುತ್ತದೆ. ಆದರೆ ಮತ್ತೊಂದು ಕಪ್ಪೆ ಸುಮ್ಮನೆ ಕೈಚೆಲ್ಲಿ ಕೂರುವುದಿಲ್ಲ. ಕಡೆಗೂ ಪ್ರಯತ್ನಪಟ್ಟು ಮೇಲೆ ಬಂದು ತನ್ನ ಪ್ರಾಣ ಉಳಿಸಿಕೊಂಡು ಬಿಡುತ್ತದೆ. ಆ ಕಪ್ಪೆಗೆ ಕಿವುಡು. ಹಾಗಾಗಿ ಉಳಿದವರು ಕೂಗಿ ಹೇಳಿದ್ದು ಅದಕ್ಕೆ ಕೇಳಿಸಿರುದಿಲ್ಲ. ನಿಜ, ಜನರ ಮಾತುಗಳು ನಮ್ಮ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತವೆ ! ಹಾಗಾಗಿ ನಾವು ಕೆಲವೊಮ್ಮೆ ನಿರಾಶೆಯ ಮಾತುಗಳಿಗೆ ಕಿವುಡರಾಗಬೇಕಾಗುತ್ತದೆ. ಅಶ್ಟೇ ಅಲ್ಲ ಮಾತನಾಡುವಾಗಲೂ ಕೂಡ ತುಂಬಾ ಯೋಚನೆ ಮಾಡಿ ಮಾತನಾಡಬೇಕು. ಯಾರಾದರೂ ಸಲಹೆ ಕೇಳಿದಾಗ ಸುಮ್ಮನೆ ಬಾಯಿಗೆ ಬಂದ ಹಾಗೆ ಬಿಟ್ಟಿ ಸಲಹೆಗಳನ್ನು ಕೊಡಬಾರದು. ಕೆಲವೊಮ್ಮೆ ನಮ್ಮ ಸಲಹೆಗಳು; ಇತರರ ಬದುಕು ಮತ್ತು ಸಾವಿನ ನಡುವಿನ ಪ್ರಶ್ನೆಯ ಸುತ್ತಲಿನ ಸಂದರ‍್ಬದ ಮೇಲೆ ಪ್ರಬಾವ ಬೀರಬಹುದು. ಆದಕಾರಣ ನಾಲ್ಕು ದಿನದ ಬದುಕಿನಲ್ಲಿ ಪರಸ್ಪರ ಸ್ಪೂರ‍್ತಿ ತುಂಬುವ ಕಾರ‍್ಯ ನಮ್ಮ ನಡುವೆ ನಡೆಯಬೇಕು.

 

( ಚಿತ್ರ ಸೆಲೆ: wikihow )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: