ಅಮೆಜಾನ್ ಮಳೆಕಾಡುಗಳ ಬಗ್ಗೆ ನಿಮಗೆಶ್ಟು ಗೊತ್ತು ?

– ನಿತಿನ್ ಗೌಡ.

‘ಅಮೆಜಾನ್ ಮಳೆಕಾಡು’, ಬೂಮಿಯ ಮೇಲಿನ ಅತಿ ದೊಡ್ಡ ಟ್ರಾಪಿಕಲ್/ಉಶ್ಣವಲಯದ ಮಳೆಕಾಡಾಗಿದೆ. ನೂರಾರು ಬುಡಕಟ್ಟು ಜನಾಂಗಗಳು, ದೊಡ್ಡ ದೊಡ್ಡ ನದಿಗಳು ಮತ್ತು ಸಾವಿರಾರು ಬಗೆಯ ಗಿಡ-ಮರ ಪ್ರಾಣಿ, ಹಕ್ಕಿ, ಹುಳ, ಕೀಟಗಳನ್ನು ಒಳಗೊಂಡ ಜೀವವೈವಿದ್ಯತೆ – ಹೀಗೆ ಊಹೆಗೂ ನಿಲುಕದ ನಿಸರ‍್ಗದ ಸೋಜಿಗಗಳನ್ನು ಅಮೆಜಾನ್ ಮಳೆಕಾಡು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ದಿನ ಉರುಳಿದಂತೆ ಮನುಶ್ಯ ಆ ಸೋಜಿಗದ ಎಳೆಗಳನ್ನು ಒಂದೊಂದೇ ಬಿಡಿಸುತ್ತಾ ನಿಬ್ಬೆರಗಾಗುತ್ತಿದ್ದಾನೆ. ಇಂತಹ ಅಮೆಜಾನ್ ಮಳೆಕಾಡಿನ ಸುತ್ತಲಿರುವ, ಇನ್ನಶ್ಟು ಬೆರಗಾಗಿಸುವ ಸಂಗತಿಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

  • ಅಮೆಜಾನ್ ಮಳೆಕಾಡುಗಳು ತೆಂಕಣ ಅಮೇರಿಕಾದಲ್ಲಿದ್ದು, 9 ದೇಶಗಳಲ್ಲಿ, 55 ಲಕ್ಶ ಚದರ ಕಿ.ಮೀ ಹಬ್ಬಿಕೊಂಡಿದೆ. ಅಂದರೆ ಕರ‍್ನಾಟಕದ ಹರವಿನ ಸುಮಾರು 28 ಪಟ್ಟು! ಅಲ್ಲದೇ ಒಟ್ಟು ಕಾಡಿನ ಶೇ 60 ರಶ್ಟು ಹರವು ಬ್ರೆಜಿಲ್‌ಗೆ ಸೇರಿದೆ.

  • ಬೂಮಿಯ ಒಟ್ಟು ನೆಲದ ಹರವಿನಲ್ಲಿ, ಈ ಕಾಡುಗಳು ಶೇಕಡ 6 ರಶ್ಟೇ ಇವೆ. ಹೀಗಿದ್ದರೂ ಕೂಡ, ಬೂಮಿಯ ಮೇಲಿನ ಒಟ್ಟು ಉಸಿರುಗಾಳಿಯಲ್ಲಿ ಶೇಕಡ 20 ರಶ್ಟು, ಅಮೆಜಾನ್ ಮಳೆಕಾಡುಗಳೇ ನೀಡುತ್ತವೆ! ಆದ್ದರಿಂದಲೇ ಇವುಗಳನ್ನು ನಮ್ಮ ಇಳೆಯ ಉಸಿರು ಚೀಲ ಎನ್ನುವರು.
  • ಅಮೆಜಾನ್ ಮಳೆಕಾಡುಗಳು ಜಗತ್ತಿನ 40,000 ಬಗೆಯ ಮರ-ಗಿಡಗಳಿಗೆ, 1,300 ಹಕ್ಕಿಗಳ ಪಂಗಡಗಳಿಗೆ , 2,200 ಬಗೆಯ ಮೀನಿನ ತಳಿಗಳಿಗೆ , 427 ಬಗೆಯ ಮೊಲೆಯೂಡಿಗಳಿಗೆ (Mammals) , 430 ಬಗೆಯ ನೆಲದಮೇಲೂ ಮತ್ತು ನೀರಿನಡಿಯಲ್ಲೂ ಇರಬಲ್ಲ ಪ್ರಾಣಿಗಳಿಗೆ ಮತ್ತು 25 ಲಕ್ಶ ಬಗೆಯ ಹುಳ/ಕೀಟಗಳಿಗೆ ತವರು ನೆಲೆಯಾಗಿದೆ.
  •  ಜಗತ್ತು ಕಂಡುಕೊಂಡಿರುವ ಒಟ್ಟೂ ಜೀವವೈವಿದ್ಯತೆಯಲ್ಲಿ (Bio Diversity), 10% ನಶ್ಟು ಜೀವವೈವಿದ್ಯತೆ ಅಮೆಜಾನ್ ಮಳೆಗಾಡುಗಳ ಸರಹದ್ದಿನೊಳಗಿದೆ.
  • ಜಗತ್ತಿನಲ್ಲಿರುವ ಪ್ರತಿ ಐದು ಹಕ್ಕಿಗಳ ಮತ್ತು ಮೀನಿನ ತಳಿಗಳಲ್ಲಿ, ಒಂದು ಅಮೆಜಾನ್ ಮಳೆಕಾಡಿನಲ್ಲಿ ಕಾಣಸಿಗುತ್ತದೆ.
  • ಪ್ರತಿದಿನ 137 ಬಗೆಯ ಪ್ರಾಣಿ, ಗಿಡ ಮತ್ತು ಹುಳಗಳ ಪಂಗಡಗಳಿಗೆ ಸೇರಿದ ಜೀವಿಗಳು ಇಲ್ಲಿ ಅಳಿದುಹೋಗುತ್ತಿವೆ. ಬೆಳೆ ಬೆಳೆಯಲು ಮತ್ತು ಜಾನುವಾರುಗಳನ್ನು ಮೇಯಿಸುವ ಸಲುವಾಗಿ ಕಾಡನ್ನು ಕಡಿಯಲಾಗುತ್ತಿದೆ. ಪ್ರತಿ ಸೆಕೆಂಡಿಗೆ 1.5 ಎಕರೆಯಶ್ಟು ಕಾಡು ಅಳಿಯುತ್ತಿದೆ. ಹೀಗೆಯೇ ಮುಂದುವರಿದಲ್ಲಿ, ಮುಂದಿನ 40 ವರುಶಗಳಲ್ಲಿ ಮಳೆಕಾಡುಗಳು ಹೇಳ ಹೆಸರಿಲ್ಲದಂತಾಗುತ್ತವೆ.
  • ಅಮೆಜಾನ್ ಕಾಡು, ಸುಮಾರು 400-500 ಬಗೆಯ ಅಮೇರಿಂಡಿಯನ್ ಬುಡಕಟ್ಟುಗಳಿಗೆ ನೆಲೆಯಾಗಿದೆ. ಇದರಲ್ಲಿ ಅಂದಾಜು 50 ಬುಡಕಟ್ಟುಗಳು ತಮ್ಮದೇ ಆದ ನುಡಿ ಮತ್ತು ಸಂಸ್ಕ್ರುತಿಯನ್ನು ಹೊಂದಿದ್ದು ಹೊರ ಜಗತ್ತಿಗೆ ತೆರೆದುಕೊಂಡಿಲ್ಲ. ಹೆಚ್ಚಾಗಿ ಅವರು ಅಲೆಮಾರಿಗಳಾಗಿದ್ದು, ಬೇಟೆಯಾಡುತ್ತಾ ಜೀವನ ಸಾಗಿಸುವರು.
  • ಅಮೆಜಾನ್ ಮಳೆಕಾಡುಗಳಲ್ಲಿ ಹರಿಯುವ ಅಮೆಜಾನ್ ನದಿಯು, ಜಗತ್ತಿನ ಎರಡನೇ ಅತೀ ಉದ್ದದ ನದಿಯಾಗಿದ್ದು, ನೈಲ್ ನದಿಯ ನಂತರದ ಸ್ತಾನದಲ್ಲಿದೆ. ನೀರಿನ ಅಳವಿ (volume) ನೋಡಿದಾಗ , ಇದು ಜಗತ್ತಿನ ದೊಡ್ಡ ನದಿಗಳಲ್ಲಿ ಮೊದಲ ಸ್ತಾನ ಪಡೆದಿದೆ.
  • ಅಮೆಜಾನ್ ನದಿಯು 6,840 ಕಿ.ಮೀ ನಶ್ಟು ಉದ್ದವಿದ್ದು, 17 ಕೂಡುಹೊಳೆಗಳನ್ನು (Tributaries) ಹೊಂದಿದೆ. ಪ್ರತಿ ಸೆಕೆಂಡಿಗೆ ಅಮೆಜಾನ್ ನದಿಯು 2,09,000 ಕ್ಯೂಬಿಕ್ ಮೀಟರ್‌ ಅಂದರೆ ಸುಮಾರು 20 ಕೋಟಿಗೂ ಹೆಚ್ಚು ಲೀಟರ್‌ ನೀರನ್ನು ಕಡಲೆಡೆಗೆ ಹೊರಹಾಕುತ್ತದೆ. ಇದರ ಅಂದಾಜು ಹೇಳಬೇಕೆಂದರೆ, ಕೇವಲ 2 ಗಂಟೆಗಿಂತ ಕಡಿಮೆ ಹೊತ್ತಿನಲ್ಲಿ ನಮ್ಮ ಕೆ.ಆರ್‌.ಎಸ್(K.R.S) ಅಣೆಕಟ್ಟಿನಲ್ಲಿ ಕೂಡಿಡಬಹುದಾದ(49.45 ಟಿ.ಎಮ್.ಸಿ) ಒಟ್ಟೂ ನೀರನ್ನು, ಅಮೆಜಾನ್ ನದಿಯು ಹೊರಹಾಕುತ್ತದೆ.
  • ಈ ಕಾಡುಗಳು ಎಶ್ಟು ದಟ್ಟವಾಗಿವೆಯೆಂದರೆ, ಮಳೆ ಬಂದಾಗ ಮಳೆಹನಿ ನೆಲ ಮುಟ್ಟಲು, 10 ನಿಮಿಶ ತಗುಲುತ್ತದೆ. ನೇಸರನ ಕೇವಲ ಶೇಕಡ 1 ರಶ್ಟು ಬೆಳಕು, ಕಾಡಿನ ತಳ ಮುಟ್ಟುವುದರಿಂದ, ಕಾಡಿನಲ್ಲಿ ಯಾವಾಗಲೂ ಕತ್ತಲು ಕವಿದಿರುತ್ತದೆ.
  • ಹವಾಮಾನ ಬದಲಾವಣೆಯು (Climate change) ಅಮೆಜಾನ್ ಮಳೆಕಾಡುಗಳ ಮೇಲೆ ಪರಿಣಾಮ ಬೀರಬಲ್ಲದು. ಕೇವಲ ಮೂರು ಡಿಗ್ರಿ ಕಾವಿನೇರಿಕೆಯಿಂದ, ಶೇ 75% ರಶ್ಟು ಅಮೆಜಾನ್ ಮಳೆಕಾಡುಗಳು ಅಳಿದುಹೋಗಬಹುದು. ಇಡಿನೆಲ ಬಿಸಿಯಾಗುವಿಕೆಯಿಂದ (Global Warming) ಕೇವಲ 100 ವರುಶಗಳಲ್ಲಿ ಮಳೆಕಾಡುಗಳು ಅಳಿಯಬಹುದೆಂದು ಬಲ್ಲವರು ಹೇಳುತ್ತಾರೆ.
  • ಅಮೆಜಾನ್ ಮಳೆಕಾಡುಗಳು, ಸಿರಿವಂತ ಗಿಡ-ಮರಗಳನ್ನು ಹೊಂದಿದ್ದರೂ ಕೂಡ,ಆ ನೆಲವು ಎಡೆಬಿಡದೆ ನಡೆಸಬಲ್ಲ ಬೇಸಾಯಕ್ಕೆ ಒಗ್ಗುವುದಿಲ್ಲ. ಅಲ್ಲಿನ ನೆಲದಲ್ಲಿರುವ ಕೆಲವು ಗಣಿವುಟ್ಟುಕಗಳ (Minerals) ಕೊರತೆಯೇ ಇದಕ್ಕೆ ಕಾರಣವಾಗಿದೆ.

( ಚಿತ್ರ ಮತ್ತು ಮಾಹಿತಿ ಸೆಲೆ: Indiatoday.in , wikipedia.org, unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: