ಕವಿತೆ: ಸಂಕಲ್ಪ

– ಕಾಂತರಾಜು ಕನಕಪುರ.

ನಿನ್ನ ಬಿಟ್ಟು ಒಂದರೆಗಳಿಗೆ ಇರಲಾರೆ
ಎಂದವಳು ಮರೆತು ಹಾಯಾಗಿರಬೇಕಾದರೆ
ನಾನೂ ಸಂಕಲ್ಪ ಮಾಡಿದ್ದೇನೆ
ಮತ್ತೆ ಎಂದಿಗೂ
ನಿನ್ನ ಕುರಿತು ಯೋಚಿಸುವುದಿಲ್ಲವೆಂದು

ನಿನ್ನ ಜೊತೆಗೆ ಮಾತನಾಡದೆ ಇರಲಾರೆ
ಎಂದವಳು ಮೂಕಳಾದ ಮೇಲೆ
ನಾನೂ ಸಂಕಲ್ಪ ಮಾಡಿದ್ದೇನೆ
ಮತ್ತೆ ಎಂದಿಗೂ
ನಿನ್ನ ಕುರಿತು ಒಂದೇ ಒಂದು ಮಾತು ಆಡುವುದಿಲ್ಲವೆಂದು

ನಿನ್ನ ಮರೆತು ಬದುಕಿರಲಾರೆ
ಎಂದವಳು ನಿರುಮ್ಮಳವಾಗಿರುವಾಗ
ನಾನೂ ಸಂಕಲ್ಪ ಮಾಡಿದ್ದೇನೆ
ಮತ್ತೆ ಎಂದಿಗೂ
ನಿನ್ನನ್ನು ಯಾವತ್ತೂ ನೆನೆಯುವುದಿಲ್ಲವೆಂದು

ಹೀಗೆ ಸಾವಿರ ಸಂಕಲ್ಪಗಳನ್ನು
ದಿನವೂ ಮಾಡಿದ ನನಗೆ
ಮರೆವಿನ ಕಾಯಿಲೆ ಇರಬೇಕು
ಗೈದ ಯಾವ ಸಂಕಲ್ಪವೂ ನೆನಪಿರುವುದಿಲ್ಲ

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: