ಜಟಾಯು – ವಿಶ್ವದ ಅತಿ ದೊಡ್ಡ ಪಕ್ಶಿ ಶಿಲ್ಪ

.

ರಾಮಾಯಣ, ಮಹಾಬಾರತ ಮತ್ತು ಬಗವದ್ಗೀತೆ ಇವು ಹಿಂದೂಗಳ ಪವಿತ್ರ ಗ್ರಂತಗಳು ಎಂದು ನಂಬಲಾಗುತ್ತದೆ. ಬಾರತದಲ್ಲಿ ರಾಮಾಯಣದ ಕತೆ ಕೇಳದವರು ಇಲ್ಲವೇ ಇಲ್ಲ ಎನ್ನಬಹುದು. ರಾಮಾಯಣದ ಪ್ರಮುಕ ಪಾತ್ರಗಳಲ್ಲಿ ಜಟಾಯು ಸಹ ಒಂದು. ರಾವಣ, ಸೀತೆಯನ್ನು ಅಪಹರಿಸಿಕೊಂಡು ಪುಶ್ಪಕ ವಿಮಾನದಲ್ಲಿ ಹೋಗುತ್ತಿರುವಾಗ, ಮಾರ‍್ಗದ ಮದ್ಯೆ ಅವನನ್ನು ತಡೆದು, ಅವನೊಡನೆ ಹೋರಾಡಿದ ಪಕ್ಶಿರಾಜನೇ ಜಟಾಯು. ರಾವಣ ಮತ್ತು ಜಟಾಯುವಿನ ನಡುವೆ ನಡೆದ ಬೀಕರ ಕಾಳಗದಲ್ಲಿ, ರಾವಣ ಜಟಾಯುವಿನ ಎರಡೂ ರೆಕ್ಕೆಗಳನ್ನು ಕತ್ತರಿಸಿದ. ಜಟಾಯು ಹಾರಾಡುವ ಶಕ್ತಿಯನ್ನು ಕಳೆದುಕೊಂಡು ನಿತ್ರಾಣನಾಗಿ ಕೆಳಗುರುಳಿತು. ಹಾಗೆ ಕೆಳಗುರುಳಿಬಿದ್ದ ಸ್ತಳದಲ್ಲೇ ವಿಶ್ವದ ಅತಿ ದೊಡ್ಡ ಪಕ್ಶಿ ಶಿಲ್ಪ ನಿರ‍್ಮಾಣವಾಗಿರುವುದು ಎನ್ನುತ್ತವೆ ಅಲ್ಲಿ ಲಬ್ಯವಿರುವ ಬರಹಗಳು. ಇದಕ್ಕೆ ಜಟಾಯು ಪ್ರಕ್ರುತಿ ಉದ್ಯಾನ ಎಂದು ನಾಮಕರಣ ಮಾಡಲಾಗಿದೆ. ರಾಮಾಯಣದ ಪೌರಾಣಿಕ ಪಕ್ಶಿ ಜಟಾಯುವಿಗೆ ಸಮರ‍್ಪಿತವಾದ ಈ ಬ್ರುಹತ್ ಶಿಲ್ಪವು, ಮಹಿಳಾ ಸುರಕ್ಶತೆಗೆ ಮತ್ತು ಗೌರವಕ್ಕೆ ಸಲ್ಲಿಸಿದ ಅತ್ಯುನ್ನತ ಗೌರವವಾಗಿದೆ. ಅಪಹರಿಸಲ್ಪಟ್ಟ ಸೀತೆಯನ್ನು ಕಾಪಾಡುವ ಸಲುವಾಗಿ, ದೈತ್ಯ ರಾವಣನ ವಿರುದ್ದ ಹೋರಾಡಿ, ಅಪ್ರತಿಮ ಶೌರ‍್ಯ ಮತ್ತು ಪರಾಕ್ರಮವನ್ನು ಮೆರೆದ ಜಟಾಯುವಿನ ತ್ಯಾಗ ಮತ್ತು ಬಲಿದಾನವನ್ನು ಈ ಪ್ರಕ್ರುತಿ ಉದ್ಯಾನವನ ಸಂಕೇತಿಸುತ್ತದೆ.

ಹೇಗಿದೆ ಈ ಜಟಾಯು ಶಿಲ್ಪ?

ಜಟಾಯು ಪ್ರಕ್ರುತಿ ಉದ್ಯಾನವನದಲ್ಲಿ ರಚಿತವಾಗಿರುವ ಜಟಾಯುವಿನ ಶಿಲ್ಪ ಅಂಗಾತ ಮಲಗಿದಂತಿದೆ. ರಾವಣನ ಹೊಡೆತಕ್ಕೆ ಜರ‍್ಜರಿತನಾಗಿ, ರೆಕ್ಕೆಗಳನ್ನು ಕಳೆದುಕೊಂಡು, ನೋವುಂಡ ಜಟಾಯು, ಕಾಲುಗಳನ್ನು ಮುಗಿಲ ಕಡೆಗೇರಿಸಿ, ತನ್ನದೇ ಬೆನ್ನಿನ ಮೇಲೆ ಬಿದ್ದಂತಿದೆ. ಅದರ ಮುಕದಲ್ಲಿ ತಾನು ಅನುಬವಿಸುತ್ತಿರುವ ನೋವಿನ ಚಾಯೆ, ಜೀವನದ ಅಂತಿಮ ಕ್ಶಣಗಳಲ್ಲಿ ಇರುವಂತೆ ನಿರ‍್ಮಿಸಲಾಗಿದೆ. ಈ ಅದ್ಬುತ ರಚನೆಯ ಹಿಂದಿರುವ ರೂವಾರಿ ಕಲಾವಿದ-ಶಿಲ್ಪಿ-ಚಲನಚಿತ್ರ ನಿರ‍್ಮಾಪಕರಾದ ರಾಜೀವ್ ಅಂಚಲ್.

ವಿಶ್ವಾದ್ಯಂತ ಮಹಿಳಾ ಸುರಕ್ಶತೆ ಒಂದು ಜ್ವಲಂತ ಸಮಸ್ಯೆಯಾಗಿದೆ. ಜಟಾಯುವಿನ ಶಿಲ್ಪವು ಮಹಿಳಾ ಸುರಕ್ಶತೆಗೆ ಅತಿ ದೊಡ್ಡ ಕೊಡುಗೆ. ಸಮಕಾಲೀನ ಸಾಮಾಜಿಕ ಸಮಸ್ಯೆಯನ್ನು ಸಾಂಕೇತಿಕವಾಗಿ ಇದರಲ್ಲಿ ಸಂಯೋಜಿಸಿರುವುದನ್ನು ಕಾಣಬಹುದಾಗಿದೆ. ಜಟಾಯುವಿನ ಶಿಲ್ಪವನ್ನು ನೋಡುವವರ ಮೇಲೆ ಪ್ರಬಾವ ಬೀರುವಂತೆ ಈ ಕಲಾಕ್ರುತಿಯನ್ನು ವಿನ್ಯಾಸಗೊಳಿಸಲಾಗಿದೆ.

ಕಟ್ಟಿರುವ ಬಗೆ

ತಿರುವನಂತಪುರದಿಂದ ಸುಮಾರು 50 ಕೀಲೋ ಮೀಟರ್ ದೂರದ ಚಡಯಮಂಗಲಂ ನಲ್ಲಿರುವ, ಹಾಲಿ ಜಟಾಯು ಪ್ರಕ್ರುತಿ ಉದ್ಯಾನವಿರುವ ಸ್ತಳವನ್ನೇ ಜಟಾಯು ರಾವಣನೊಡನೆ ಹೋರಾಡಿ ನೆಲಕ್ಕೆ ಬಿದ್ದ ನಿಕರ ಸ್ತಳ ಎಂದು ಹೇಳಲಾಗುತ್ತದೆ. 1,200 ಅಡಿ ಎತ್ತರದಲ್ಲಿರುವ, ಹೆಣ್ಣಿನ ರಕ್ಶಣೆಗಾಗಿ ಹೋರಾಡಿದ ಶೌರ‍್ಯ, ಶಕ್ತಿಗೆ ಹೆಸರಾದ ಜಟಾಯುವಿನ ಗೌರವಾರ‍್ತವಾಗಿ ನಿರ‍್ಮಾಣವಾಗಿರುವ ಈ ಪಕ್ಶಿ ಶಿಲ್ಪ, ವಿಶ್ವದಲ್ಲೇ ಅತಿ ದೊಡ್ಡ ಪಕ್ಶಿ ಶಿಲ್ಪ ಎಂಬ ಕ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಪಕ್ಶಿ ಶಿಲ್ಪದಲ್ಲಿನ ಉಗುರುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ದೇಹದ ಬಾಗಗಳನ್ನು ಸಿಮೆಂಟ್ ಕಾಂಕ್ರೀಟಿನಿಂದ ನಿರ‍್ಮಿಸಲಾಗಿದೆ. ಉಗುರುಗಳು ಮಾತ್ರ ಉಕ್ಕಿನಿಂದ ಮಾಡಲ್ಪಟ್ಟಿವೆ. ಈ ಶಿಲ್ಪದ ಉದ್ದ 200 ಅಡಿ, ಅಗಲ 150 ಅಡಿ, ಎತ್ತರ 70 ಅಡಿ ಇದೆ. ಈ ಬ್ರುಹತ್ ಪಕ್ಶಿ ಶಿಲ್ಪ 1,400 ಚದರ ಮೀಟರ್ ಜಾಗವನ್ನು ಆಕ್ರಮಿಸಿಕೊಂಡಿದೆ. ಈ ಎಲ್ಲಾ ಕಾರಣಕ್ಕೆ ಅದು ಗಿನ್ನೆಸ್ ಬುಕ್ ಆಪ್ ವರ‌್ಲ್ಡ್ ರೆಕಾರ‍್ಡ್ಸ್ ನಲ್ಲಿ ವಿಶ್ವದ ಅತಿ ದೊಡ್ಡ ಪಕ್ಶಿ ಶಿಲ್ಪವಾಗಿ ಸ್ತಾನ ಪಡೆದಿದೆ.

ರಾಮನ ಹೆಜ್ಜೆ ಗುರುತು ಎಂದು ಗುರುತಿಸಲಾದ ಹೆಜ್ಜೆ ಗುರುತೊಂದು, ಜಟಾಯುವಿನ ಶಿಲ್ಪವಿರುವ ಸ್ತಳದಲ್ಲಿದೆ ಎಂದು ನಂಬಲಾಗಿದೆ. ಉದ್ಯಾನದ ಹಿಂಬದಿಯಲ್ಲಿ, ಜಟಾಯುವಿಗೆ ಸಂಬಂದಿಸಿದ ಐತಿಹಾಸಿಕ ಹಾಗೂ ದಾರ‍್ಮಿಕ ಅರ‍್ತ ಮತ್ತು ವಿವರಗನ್ನೊಳಗೊಂಡ ಗ್ರಂತ ಬಂಡಾರ ಇದೆ. ಇದರೊಂದಿಗೆ ಶ್ರೀ ರಾಮ ದೇವರಿಗೆ ಸಮರ‍್ಪಿತವಾದ ದೇವಾಲಯ ನಿರ‍್ಮಿಸಲಾಗಿದೆ.

ಈ ದೊಡ್ಡ ಯೋಜನೆ ನಡೆದು ಬಂದ ಹಾದಿ

ಜಟಾಯುವಿನ ಅತಿ ದೊಡ್ಡ ಶಿಲ್ಪ ನಿರ‍್ಮಾಣವಾಗಿರುವುದು 65 ಎಕರೆ ಬೂ ಪ್ರದೇಶದ ಹ್ರುದಯ ಬಾಗದಲ್ಲಿ. ಜಟಾಯುವಿನ ಕಣ್ಣಿನಲ್ಲಿರುವ ವೀಕ್ಶಣಾಲಯವು ಇಲ್ಲಿನ ಪ್ರಮುಕ ಆಕರ‍್ಶಣೆಗಳಲ್ಲಿ ಒಂದಾಗಿದೆ. ಈ ಕಣ್ಣಿನ ಮೂಲಕ ಸುತ್ತಮುತ್ತಲ ಹಳ್ಳಿಯ ಸೊಬಗು, ಸುಂದರವಾದ, ಕಣ್ಣಿಗೆ ತಂಪೆರೆಯುವ, ಹಸಿರು ತುಂಬಿದ ಕಣಿವೆಗಳು, ಪರ‍್ವತಗಳು ಮುಂತಾದವುಗಳ ನೋಟವನ್ನು ಆನಂದಿಸಬಹುದು. ಜಟಾಯುವಿನ ಶಿಲ್ಪದ ಒಳಗೆ ಬಹು ಆಯಾಮದ ಮಿನಿ ತಿಯೇಟರ್ ಇದೆ. ಈ ಶಿಲ್ಪದೊಳಗೆ ಬಹು ಹಂತದ ವಸ್ತು ಸಂಗ್ರಹಾಲಯವನ್ನು ಅಬಿವ್ರುದ್ದಿಪಡಿಸಲಾಗಿದೆ. ಜಟಾಯು ಶಿಲ್ಪದ ಪಕ್ಶಿ ನೋಟ ನೋಡಲು ಹೆಲಿಕಾಪ್ಟರ್ ಸೌಲಬ್ಯ ಸಹ ಲಬ್ಯವಿದೆ. ಕೇರಳ ಪ್ರವಾಸೋದ್ಯಮ ಮತ್ತು ಶಿಲ್ಪಿ ರಾಜೀವ್ ಅಂಚಲ್ ನಡುವಿನ ಜಂಟಿ ಪ್ರಯತ್ನದ ಈ ಯೋಜನೆಗೆ 2008ರಲ್ಲೇ ಅನುಮೋದನೆ ದೊರೆತಿತ್ತು. ಕೆಲಸಕ್ಕೆ ಚಾಲನೆ ದೊರಕಿದ್ದು 2011ರಲ್ಲಿ. ಅಲ್ಲಿಂದ ಮೊದಲ ಹಂತದ ಕಾಮಗಾರಿ ಕೊನೆಗೊಳ್ಳಲು ಆರು ವರ‍್ಶಗಳ ಸಮಯಾವಕಾಶ ಬೇಕಾಯಿತು. 2017ರ ಡಿಸೆಂಬರ್ ನಲ್ಲಿ ಇದನ್ನು ಸಾರ‍್ವಜನಿಕರಿಗಾಗಿ ಲೋಕಾರ‍್ಪಣೆ ಮಾಡಲಾಯಿತು. ಪವ್ರಾಸೋದ್ಯಮಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಸವಾರಿ ಮತ್ತು ಕೇಬಲ್ ಕಾರ್ ಸೌಲಬ್ಯವನ್ನು, ಎರಡನೇ ಹಂತದಲ್ಲಿ ಸೇರಿಸಲಾಗಿ, 2018ರಲ್ಲಿ ಸಾರ‍್ವಜನಿಕರಿಗೆ ತೆರೆಯಲಾಯಿತು.

ಜಟಾಯು, ಮಾನವ, ಪ್ರಾಣಿ, ಪಕ್ಶಿಗಳು ಮತ್ತು ಇತರೆ ಜೀವಿಗಳ ಜೊತೆ ಸೌಹಾರ‍್ದದಿಂದ, ಪರಸ್ಪರ ಕಾಳಜಿಯಿಂದ, ಬೂಮಿಯ ಮೇಲೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದುದರ ಪ್ರತಿನಿದಿಯಾಗಿದೆ. ಈ ಪ್ರದೇಶವನ್ನು ರಾಶ್ಟ್ರೀಯ ಹಾಗೂ ಅಂತರರಾಶ್ಟ್ರೀಯ ಪ್ರವಾಸಿಗರಿಗೆ, ಹಚ್ಚ ಹಸಿರಿನ ಪರಿಸರವನ್ನು ಅನುಬವಿಸುವಂತಹ ತಾಣವಾಗಿ ಅಬಿವ್ರುದ್ದಿ ಪಡಿಸಲಾಗಿದೆ. ಈ ತತ್ವಕ್ಕನುಗುಣವಾಗಿ, 1.5 ಮಿಲಿಯನ್ ಲೀಟರ್ ಸಾಮರ‍್ತ್ಯದ ಅತಿ ದೊಡ್ಡ ಮಳೆ ನೀರು ಸಂಗ್ರಹಣಾ ಜಲಾಶಯವನ್ನು ಇಲ್ಲಿ ನಿರ‍್ಮಿಸಲಾಗಿದೆ. ಇದೇ ನೀರನ್ನು ಬಳಸಿಕೊಂಡು ಉದ್ಯಾನದ ಸಸ್ಯ ಸಂಪತ್ತನ್ನು ಅಬಿವ್ರುದ್ದಿ ಪಡಿಸಲಾಗುತ್ತಿದೆ. ಸುತ್ತ ಮುತ್ತಲ ಪ್ರದೇಶದಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯಲು ರೈತರಿಗೆ ಇದೇ ನೀರನ್ನು ಹರಿಸಲಾಗುತ್ತಿದೆ. ಇದರೊಂದಿಗೆ ಉದ್ಯಾನವನವು ತನ್ನ ದಿನ ನಿತ್ಯದ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಳ್ಳಲು ಸೌರ ಶಕ್ತಿಯನ್ನು ಬಳಕೆ ಮಾಡುತ್ತಿರುವುದು ಪರಿಸರದ ಮೇಲಿರುವ ಕಾಳಜಿಗೆ ಸಾಕ್ಶಿ.

(ಮಾಹಿತಿ ಮತ್ತು ಚಿತ್ರ ಸೆಲೆ: thebetterindia.com, creativeyatra.com, nativeplanet.com, jatayuearthscenter.in, mymodernmet.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: