ವೈಪಲ್ಯಗಳನ್ನು ಅಳಿಸಲಾಗದು. ಆದರೆ…

–  ಪ್ರಕಾಶ್ ಮಲೆಬೆಟ್ಟು.

ಸೋಯ್ಚಿರೊ ಹೆಸರು ಕೇಳಿದ್ದೀರಾ? ಇಲ್ವಲ್ಲ ಯಾರಪ್ಪ ಇದು ಅಂತ ಯೋಚನೆ ಮಾಡ್ತಾಯಿದ್ದೀರಾ! ಸರಿ ಹಾಗಾದ್ರೆ ಪೂರ‍್ಣ ಹೆಸರು ಹೇಳ್ತೀನಿ ಕೇಳಿ. ಸೋಯ್ಚಿರೊ ಹೋಂಡಾ, ಹೋಂಡಾ ಹೆಸರು ಕೇಳದವರು ಯಾರೂ ಇಲ್ಲ ಅಲ್ವ! ಹೌದು ನಿಮ್ಮ ಊಹೆ ನಿಜ. ಸೋಯ್ಚಿರೊ ಹೋಂಡಾ, ಹೋಂಡಾ ಮೋಟರ‍್ಸ್ ಕಂಪೆನಿಯ ಸಂಸ್ತಾಪಕರು. ಇಂದು, ಹೋಂಡಾ ಕಂಪೆನಿ ಅಮೇರಿಕ ಮತ್ತು ಜಪಾನ್ ದೇಶಗಳಲ್ಲಿ 100,000 ಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ. ಆದರೆ ನಿಮಗೆ ಗೊತ್ತಿರಲಿ ಹೋಂಡಾದ ಯಶಸ್ಸಿನ ಹಿಂದೆ ಇರುವುದು ಒಬ್ಬ ವ್ಯಕ್ತಿಯು ಬದ್ದತೆ ಮತ್ತು ಶ್ರಮ.

ಸೋಯ್ಚಿರೊ ಹೋಂಡಾ ಚಿನ್ನದ ಚಮಚದಲ್ಲಿ ಊಟ ಮಾಡಿಕೊಂಡು ಬೆಳೆದವರಲ್ಲ. ಅವರು ಕಂಡ ಉದ್ಯಮದ ಕನಸು ಕೂಡ ಸುಲಬದಲ್ಲಿ ಅವರಿಗೆ ದಕ್ಕಲಿಲ್ಲ. ಅಲ್ಲಿ ಶ್ರಮ ಇತ್ತು, ಕೆಲಸದ ಬಗ್ಗೆ ಬದ್ದತೆ ಇತ್ತು ನಿಜ, ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಸೋಲಿತ್ತು. ಅವರು ಒಂದು ಕಡೆ ಹೇಳ್ತಾರೆ “ಅನೇಕ ಜನರು ಯಶಸ್ಸಿನ ಕನಸು ಕಾಣುತ್ತಾರೆ. ಆದರೆ ನಾನು ಹೇಳುತ್ತೇನೆ, ಪುನರಾವರ‍್ತಿತ ವೈಪಲ್ಯಗಳು ಮತ್ತು ನಮ್ಮ ಆತ್ಮಾವಲೋಕನದಿಂದ ಮಾತ್ರ ಯಶಸ್ಸನ್ನು ಸಾದಿಸಬಹುದು. ವಾಸ್ತವವಾಗಿ, ಯಶಸ್ಸು ನಮ್ಮ ಕೆಲಸದ ಶೇಕಡಾ 1 ಬಾಗವನ್ನು ಮಾತ್ರ ಪ್ರತಿನಿದಿಸುತ್ತದೆ ಮತ್ತು ಆ ಯಶಸ್ಸಿಗೆ ಕಾರಣ ಮಿಕ್ಕ ಶೇಕಡಾ 99 ಪ್ರತಿಶತದಶ್ಟು ಇರುವ ನಮ್ಮ ವೈಪಲ್ಯಗಳು. ಅವರ ಮಾತನ್ನು ಸರಳವಾಗಿ ಹೇಳಬೇಕಂದರೆ ಯಶಸ್ಸಿಗೆ 99% ಕಾರಣ ನಮ್ಮ ವೈಪಲ್ಯಗಳು. ಅವರ ಜೀವನದ ಬಗ್ಗೆನೇ ಹೇಳೋದಾದ್ರೆ, ಬಾಳಿನುದ್ದಕ್ಕೂ ಸತತ ಸೋಲುಗಳು. ಅಪ್ಪನಿಗೆ ಸೈಕಲ್ ರಿಪೇರಿ ಮಾಡುವ ಅಂಗಡಿ ಇತ್ತು. ಬಾಲ್ಯದಿಂದಲೇ ಸೋಯ್ಚಿರೊ ಹೋಂಡಾ ಅವರಿಗೆ ವಾಹನಗಳ ಹುಚ್ಚು.

ಶಾಲಾ ದಿನಗಳಲ್ಲಿ, ವಾಹನ ತಯಾರಿಕೆಯಲ್ಲಿ ಬೇಕಾಗುವ ಪಿಸ್ಟನ್ ರಿಂಗ್ ಅಬಿವ್ರುದ್ದಿಪಡಿಸಿ, ಆಗ ಹೆಸರುವಾಸಿಯಾಗಿದ್ದ ಟೊಯೋಟಾ ಕಂಪೆನಿಗೆ ಆ ಪರಿಕಲ್ಪನೆಯನ್ನು ಮಾರಾಟ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಅದನ್ನು ಅಬಿವ್ರುದ್ದಿಪಡಿಸಲು ರಾತ್ರಿ ಹಗಲು ಶ್ರಮವಹಿಸಿ ಅನೇಕ ವರ‍್ಶಗಳ ಕಾಲ ಶ್ರಮಪಟ್ಟರು. ಅದರ ವಿನ್ಯಾಸವನ್ನು ಪೂರ‍್ಣಗೊಳಿಸಿ ಒಂದು ಉತ್ಕ್ರುಶ್ಟವಾದ ವಸ್ತುವನ್ನು ಅಬಿವ್ರುದ್ದಿಪಡಿಸುವುದು ಅವರ ಮಹಾದಾಸೆಯಾಗಿತ್ತು. ಹಣದ ಕೊರತೆ ಬಂದಾಗ ಹೆಂಡತಿಯ ಆಬರಣಗಳನ್ನು ಅಡವಿಡಬೇಕಾಗಿ ಬಂದಾಗಲೂ ಅವರು ಹಿಂಜರಿಯಲಿಲ್ಲ. ಕಡೆಗೂ ತಮ್ಮ ಉತ್ಪನ್ನವನ್ನು ಅಬಿವ್ರುದ್ದಿಪಡಿಸಿ ಟೊಯೋಟಾ ಕಂಪೆನಿಗೆ ಕೊಟ್ಟಾಗ, ಅವರು ತಮ್ಮ ಕಂಪೆನಿಯ ಗುಣಮಟ್ಟಕ್ಕೆ ನಿಮ್ಮ ಉತ್ಪನ್ನ ಹೊಂದಿಕೆಯಾಗಲ್ಲ ಅಂತ ತಿರಸ್ಕರಿಸಿಬಿಟ್ಟರು. ಪದವಿ ಪಡೆದು ಕೆಲಸದಲ್ಲಿರುವ ದೊಡ್ಡ ದೊಡ್ಡ ಎಂಜಿನೀಯರ್ ಗಳು ಇವರನ್ನು ನೋಡಿ ನಕ್ಕರು. ಆದರೆ ಇವರು ಸೋಲೊಪ್ಪಿಕೊಳ್ಳುವ ಅಸಾಮಿಯಲ್ಲ ಕಣ್ರೀ. ದ್ರುತಿಗೆಡಲಿಲ್ಲ, ತನ್ನ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ್ತೆ ಎರಡು ವರ‍್ಶಗಳ ಕಾಲ ಶ್ರಮಪಟ್ಟು ಮರು ವಿನ್ಯಾಸ ತಯಾರು ಮಾಡಿ ಮತ್ತೆ ಟೊಯೋಟಾ ಕಂಪೆನಿಯ ಬಾಗಿಲು ತಟ್ಟಿದರು. ಈ ಬಾರಿ ಟೊಯೋಟಾ ಕಂಪೆನಿಗೆ ಇವರ ವಿನ್ಯಾಸವನ್ನು ನಿರಾಕರಿಸಲು ಯಾವುದೇ ಕಾರಣಗಳಿರಲಿಲ್ಲ. ಹಾಗಾಗಿ ಟೊಯೋಟಾ ಕಂಪೆನಿ ಸೋಯ್ಚಿರೊ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತು.

ಟೊಯೋಟಾ ಕಂಪೆನಿಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ಆ ಬಿಡಿಬಾಗವನ್ನು ತಯಾರು ಮಾಡಬೇಕಾದ್ರೆ ಕಾರ‍್ಕಾನೆಯ ಅಗತ್ಯ ಇತ್ತು. ಆದರೆ ಆಗ ಜಪಾನ್ ದೇಶ ಯುದ್ದಕ್ಕೆ ತಯಾರಾಗುತ್ತಿತ್ತು. ಕಾರ‍್ಕಾನೆ ಕಟ್ಟಲು ಬೇಕಾದ ಸಾಮಗ್ರಿಗಳು ದೊರಕುವುದು ದುಸ್ತರವಾಯಿತು. ಆದರೆ ಹೋಂಡಾ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ಕಾಂಕ್ರೀಟ್ ತಯಾರಿಸುವ ಹೊಸ ವಿದಾನವನ್ನು ಕಂಡು ಹಿಡಿದು, ತಮ್ಮ ಕಾರ‍್ಕಾನೆಯನ್ನು ನಿರ‍್ಮಿಸಿದರು. ಆದರೆ ಸೋಲು ಬೆಂಬಿಡದೆ ಕಾಡುತ್ತಿತ್ತು. ಯುದ್ದ ನಡೆಯುತಿತ್ತು ಇನ್ನೇನು ಬಿಡಿ ಬಾಗಗಳ ಉತ್ಪಾದನೆ ಶುರು ಮಾಡಬೇಕು, ಎರಡು ಬಾಂಬುಗಳು ಬಿದ್ದು ಕಾರ‍್ಕಾನೆ ಸಂಪೂರ‍್ಣ ನಾಶವಾಗಿ ಬಿಟ್ಟಿತು. ಉತ್ಪಾದನೆ ಪುನರಾರಂಬಿಸಲು ಸ್ಟೀಲ್ ಕೂಡ ಸಿಗದೇ ಎಲ್ಲ ದಾರಿ ಮುಚ್ಚಿಕೊಳ್ಳಲಾರಂಬಿಸಿತು.

ಆದರೆ ಹೋಂಡಾ ಗಟ್ಟಿ ಆಸಾಮಿ ಸ್ವಾಮಿ. ಜೀವನದಲ್ಲಿ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ತನ್ನ ಕಾರ‍್ಕಾನೆಯನ್ನು ಮರು ನಿರ‍್ಮಿಸಿ, ಅಮೆರಿಕದ ಯುದ್ದ ವಿಮಾನಗಳು ಬೇಡ ಎಂದು ಬಿಸಾಡಿದ್ದ, ಗ್ಯಾಸೋಲಿನ್ ಕ್ಯಾನ್ಗಳನ್ನು ಉತ್ಪಾದನೆ ಆರಂಬಿಸಲು ಉಪಯೋಗಿಸಿದರು. ಕಡೆಗೂ ಗೆದ್ದೇ ಬಿಟ್ರ! ಇಲ್ಲ. ಬೂಕಂಪವಾಗಿ ಅವರ ಕಾರ‍್ಕಾನೆ ನಾಶವಾಗಿಬಿಟ್ಟಿತು. ಮನುಶ್ಯನಿಗೆ ಸೋಲು ಬಂದ್ರೆ ನಾಶ ಮಾಡದೇ ಬಿಡಲ್ಲ ಎಂದು ಹಟ ತೊಟ್ಟಿರುವಂತೆ ಬೆಂಬಿಡದೆ ಕಾಡುತ್ತೆ, ಅಲ್ವೇ. ಯುದ್ದ ಮುಗಿದ ನಂತರ ಕಚ್ಚಾ ವಸ್ತುಗಳು ದೊರೆಯದೆ ವಾಹನಗಳ ಉತ್ಪಾದನೆ ಸ್ತಗಿತಗೊಂಡಿತು. ಜನ ಅನಿವಾರ‍್ಯವಾಗಿ ನಡೆದು ಇಲ್ಲವೇ ಸೈಕಲ್ಲಿನ ಮೇಲೆ ತಮ್ಮ ಜಾಗ ಸೇರಬೇಕಾಗಿ ಬಂತು. ನಮ್ಮ ಹೋಂಡಾ ಆ ಸೈಕಲಿಗೆ ಒಂದು ಇಂಜಿನ್ ತಯಾರಿಸಿದರು. ಆದರೆ ಅದನ್ನು ಮಾರುಕಟ್ಟೆಗೆ ತರಲು ಇಲ್ಲವೇ ಉತ್ಪಾದನೆ ಆರಂಬಿಸಲು ಅವರ ಬಳಿ ಹಣವಿರಲಿಲ್ಲ. ಹಾಗಂತ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ದೇಶದ 18,000 ಸೈಕಲ್ ಅಂಗಡಿ ಮಾಲೀಕರಿಗೆ ಪತ್ರ ಬರೆದು ತನ್ನ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು, ಸಹಾಯ ಕೇಳಿದರು. ಅದರಲ್ಲಿ 5,000 ಜನ ಅವರಿಗೆ ಉತ್ತಮ ಪ್ರತಿಕ್ರಿಯೆ ಕೊಟ್ಟು, ತಮ್ಮಿಂದಾದ ಹಣದ ಸಹಾಯ ಮಾಡಿ ಬೆಂಬಲ ಕೊಟ್ಟರು. ಆದರೆ ಅವರು ತಯಾರಿಸಿದ ಆ ಇಂಜಿನ್ ತುಂಬಾ ಬಾರವಿತ್ತು. ಹಾಗಾಗಿ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹೋಂಡಾ ಹಟ ಬಿಡಲಿಲ್ಲ. ಹಗುರ ಇಂಜಿನ್ ಉಳ್ಳ ಬೈಕ್ ತಯಾರಿಸಿದರು. ಅಲ್ಲಿಂದ ಅಮೇರಿಕ ಮತ್ತು ಯೂರೋಪಿಗೆ ರಪ್ತು ಮಾಡಲು ಆರಂಬಿಸಿದರು. ಆದರೆ ಮತೊಮ್ಮೆ ಮಾರುಕಟ್ಟೆಯಲ್ಲಿ ವಾಹನಗಳ ನಿರ‍್ಮಾಣಕ್ಕೆ ಕಚ್ಚಾ ವಸ್ತುಗಳ ಕೊರತೆ ಬಂದಾಗ ಚಿಕ್ಕ ಕಾರುಗಳ ಉತ್ಪಾದನೆ ಆರಂಬಿಸಿ ಇಡೀ ಪ್ರಪಂಚದ ಮನ ಗೆದ್ರು ಹೋಂಡಾ.

ನೋಡಿ ಎಶ್ಟೊಂದು ಸೋಲುಗಳು. ಆದರೆ ಇವತ್ತು ಅವರ ಕಂಪೆನಿ ಪ್ರಪಂಚದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪೆನಿಗಳಲ್ಲಿ ಒಂದು. ಒಂದು ಬಾರಿ ಸೋತರೇನೇ ನಮ್ಮಿಂದ ತಡೆದುಕೊಳ್ಳಲು ಆಗಲ್ಲ. ಹೀಗಿರುವಾಗ ಹಲವು ಬಾರಿ ಸೋತು, ಪೆಟ್ಟು ತಿಂದ್ರೆ ಎದ್ದು ನಿಲ್ಲಲಿಕ್ಕೆ ಸಾದ್ಯನಾ? ಕಂಡಿತ ಸಾದ್ಯ. ಸಾದ್ಯ ಮಾಡಿ ತೋರಿಸಿದ್ರು ಸೋಯ್ಚಿರೊ ಹೋಂಡಾ.

ನಿಜ ಗೆಳೆಯರೇ ಎಶ್ಟೇ ಮುನ್ನೆಚ್ಚರಿಕೆ ವಹಿಸಿಕೊಂಡು ಮುನ್ನಡೆದರೂ, ಕೆಲವೊಮ್ಮೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾದ್ಯವಾಗುವುದಿಲ್ಲ. ತಪ್ಪು ತಿಳಿದೋ ತಿಳಿಯದೆಯೋ ನಡೆದೇ ಬಿಡುತ್ತೆ. ನಡೆದ ತಪ್ಪನ್ನು, ಮೈಮೇಲೆ ಎಳೆದುಕೊಂಡ ಸೋಲನ್ನು ನಮ್ಮಿಂದ ಅಳಿಸಲು ಆಗೋದಿಲ್ಲ. ಸೋಲು ಸೋಲೇ. ಆದರೆ ಆ ಸೋಲಿನಿಂದ ಪಾಟ ಕಲಿತು ಮುನ್ನುಗ್ಗುವುದನ್ನು ಬಿಟ್ಟು ಬಿಡಬಾರದು. ಉದ್ಯಮಿಯಾಗಬೇಕೆಂಬ ಕನಸಿಗೆ ನೀರೆರೆದು ಉದ್ಯಮ ಶುರು ಮಾಡಿ ಆಯಿತು. ಆದರೆ ಅನಿರೀಕ್ಶಿತ ಸೋಲು ಉಂಟಾಯಿತು ಅಂದುಕೊಳ್ಳಿ. ಅಲ್ಲಿಗೆ ಆ ಕನಸನ್ನು ಮರೆತು, ಜೀವನಪೂರ‍್ತಿ ಎಲ್ಲಾದ್ರೂ ಸಂಬಳಕ್ಕೆ ಕೆಲಸ ಮಾಡುತ್ತ ಆಯಸ್ಸನ್ನು ಕಳೆಯುವುದನ್ನು ಬದುಕು ಎನ್ನಲಾಗುವುದಿಲ್ಲ. ವಿಪಲರಾಗಿದ್ದೀರಾ ಸರಿ. ತಾತ್ಕಾಲಿಕವಾಗಿ ಆರ‍್ತಿಕ ಪರಿಸ್ತಿತಿ ಸರಿ ಹೋಗಬೇಕಾದ್ರೆ, ಎಲ್ಲಾದ್ರೂ ಕೆಲಸ ಮಾಡಲೇಬೇಕು. ತಪ್ಪಿಲ್ಲ. ಆದ್ರೆ ಹಾಗಂತ ನಿಮ್ಮ ಮೂಲ ಕನಸನ್ನು ಮರೆತು ಬಿಡಬಾರದು. ಸರಿಯಾದ ತಯಾರಿ ಮಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ಮತ್ತೆ ಪ್ರಯತ್ನಿಸಬೇಕು. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತೆ. ಇದು ಎಲ್ಲ ಕನಸುಗಳಿಗೆ ಅನ್ವಯವಾಗುತ್ತೆ.

ಬರಹಗಾರನಾಗಬೇಕೆಂಬ ಕನಸಿರುತ್ತೆ. ಆದರೆ ಯಾವುದೇ ಪತ್ರಿಕೆಗೆ ಕಳುಹಿಸಿದರು ಯಾರೂ ಪ್ರತಿಕ್ರಿಯೆ ಕೊಡ್ತಾಯಿಲ್ವಾ? ಸಾಮಾಜಿಕ ಮಾದ್ಯಮಗಳಲ್ಲಿ ಕೂಡ ಯಾರೂ ನಿಮ್ಮ ಬರಹವನ್ನ ಮೆಚ್ಚೋದಿಲ್ವ? ಸ್ನೇಹಿತರು ಕೂಡ ಪ್ರತಿಕ್ರಿಯೆ ಕೊಡಲ್ವಾ? ನೊಂದುಕೊಳ್ಳಬೇಡಿ. ಅದರ ಅರ‍್ತ ಇಶ್ಟೇ , ನೀವು ಇನ್ನಶ್ಟು ಸುದಾರಿಸಿಕೊಳ್ಳಬೇಕು. ನಿಮ್ಮ ಬರಹ ಮತ್ತಶ್ಟು ಉತ್ತಮಗೊಳ್ಳಬೇಕು. ಪ್ರತಿಕ್ರಿಯೆ ಕಂಡಿತ ಬಂದೇ ಬರುತ್ತೆ. ಇಲ್ಲ, ಯಾರು ಓದಲ್ಲ ಅಂತ ಬರೆಯುವುದನ್ನು ನಿಲ್ಲಿಸಿದ್ರೋ, ನಿಮ್ಮ ಕನಸಿಗೆ ನೀವೇ ಕೊಳ್ಳಿ ಇಟ್ಟಂತೆ. ನೀವು ಬರೆಯದಿದ್ದರೆ ಯಾರಿಗೂ ನಶ್ಟ ಇಲ್ಲ. ನಶ್ಟ ಅಂತ ಏನಾದ್ರೂ ಆದ್ರೆ ಅದು ನಿಮಗೇನೇ. ನೀವು ಸಂಗೀತಗಾರರಾಗಿರಬಹುದು, ಒಳ್ಳೆ ಆಟಗಾರನಾಗಿರಬಹುದು, ಮಾರಾಟಗಾರನಾಗಿರಬಹುದು, ಇಲ್ಲ ಶಿಕ್ಶಕನಾಗಿರಬಹುದು, ಯಾವುದೇ ಹುದ್ದೆಯಲ್ಲಿರಬಹುದು, ಸೋಲಿಗೆ ಕಳವಳಗೊಳ್ಳಬೇಡಿ. ನಿಮ್ಮ ಸೋಲಿಗೆ, ನಿಮ್ಮ ತಪ್ಪಿಗೆ ನೀವೇ ಕಾರಣ ಅನ್ನೋದನ್ನ ಮರೆಯಬೇಡಿ. ಸುದಾರಣೆಗೆ ಮಾರ‍್ಗೋಪಾಯವನ್ನು ಹುಡುಕಿ, ನಿಮ್ಮನ್ನು ನೀವು ಸುದಾರಿಸಿಕೊಳ್ಳಿ. ಇನ್ನಶ್ಟು, ಮತ್ತಶ್ಟು ಉತ್ತಮಗೊಳ್ಳಿ. ಸತತ ಪ್ರಯತ್ನ ಮುಂದುವರೆಸಿದರೆ ಒಂದು ದಿನ ಗೆಲುವು ನಿಮ್ಮದಾಗುತ್ತೆ. ಸೋಲು ತಾತ್ಕಾಲಿಕ. ಆ ಸೋಲನ್ನು ನಿಮ್ಮ ಗೆಲುವಿಗೆ ಮೆಟ್ಟಿಲುಗಳನ್ನಾಗಿಸಿಕೊಂಡ್ರೆ ಯಶಸ್ಸಿನ ಹಾದಿ ಸುಗಮ.

ವೈಪಲ್ಯಗಳನ್ನು ಅಳಿಸಲಾಗದು, ಆದರೆ ಯಶಸ್ಸಿಗೆ ಅದನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳಬಹುದು.

(ಚಿತ್ರ ಸೆಲೆ: wealthygorilla.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: