ಲೇಪಾಕ್ಶಿಯ ತೂಗಾಡುವ ಸ್ತಂಬ

– .


ಲೇಪಾಕ್ಶಿ, ಆಂದ್ರ ಪ್ರದೇಶದಲ್ಲಿರುವ ಪ್ರಸಿದ್ದ ಪವಿತ್ರ ಸ್ತಳ. ಇಲ್ಲಿ 16ನೇ ಶತಮಾನದಲ್ಲಿ ನಿರ‍್ಮಿಸಲಾದ ವೀರಬದ್ರ ದೇವಾಲಯವಿದೆ. ವಿಜಯನಗರದ ವಾಸ್ತು ಶಿಲ್ಪದ ವೈಬವವನ್ನು, ಶಿವನಿಗೆ ಸಮರ‍್ಪಿಸಲಾದ ಈ ದೇವಾಲಯದಲ್ಲಿ ಕಾಣಬಹುದು. ಈ ದೇವಾಲಯದ ಪ್ರತಿಯೊಂದು ಮೇಲ್ಮೈನಲ್ಲೂ ವೈವಿದ್ಯಮಯ ಕೆತ್ತನೆಗಳು ಮತ್ತು ವರ‍್ಣ ಚಿತ್ರಗಳಿವೆ. ದೇವಾಲಯದ ಮುಂಬಾಗದಲ್ಲಿ, ಸರಿ ಸುಮಾರು 200 ಮೀಟರ್ ದೂರದಲ್ಲಿ ದೊಡ್ಡ ನಂದಿಯ ವಿಗ್ರಹವಿದೆ. ಇದನ್ನು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿರುವುದು ವಿಶೇಶ. ಕಪ್ಪು ಶಿಲೆಯಿಂದ ಮಾಡಲ್ಪಟ್ಟ ಅನೇಕ ನಂದಿ ವಿಗ್ರಹಗಳಲ್ಲಿ ಇದು ಅತಿ ದೊಡ್ಡದು ಎಂಬ ಕ್ಯಾತಿಯನ್ನು ಗಳಿಸಿದೆ.

ದೇವಾಲಯದ ನಿರ‍್ಮಾಣ

1530 ಮತ್ತು 1545ರ ನಡುವೆ ನಿರ‍್ಮಾಣವಾದ ವೀರಬದ್ರ ದೇವಾಲಯ ಬಹಳ ವಿಸ್ತಾರವಾಗಿದ್ದು, ಇದರಲ್ಲಿ 20 ಅಡಿ ಎತ್ತರದ, ಎಪ್ಪತ್ತು ಸ್ತಂಬಗಳಿವೆ. ಈ ಸ್ತಂಬಗಳೇ ಮೇಲ್ಚಾವಣಿಗೆ ಆದಾರ. ಎಪ್ಪತ್ತು ಸ್ತಂಬಗಳಲ್ಲಿ, ಅರವತ್ತೊಂಬತ್ತು ಸ್ತಂಬಗಳು ಮೇಲ್ಚಾವಣಿಯನ್ನು ಸುರಕ್ಶಿತವಾಗಿರಿಸಲು ಆಸರೆಯಾಗಿದ್ದರೆ, ಒಂದು ಸ್ತಂಬ ಮಾತ್ರ ಮೇಲ್ಚಾವಣಿಯಿಂದ ತೂಗಾಡುತ್ತಿದೆ. ಇದೇ ಈ ದೇವಾಲಯದ ವೈಶಿಶ್ಟ್ಯ. ತೂಗಾಡುವ ಸ್ತಂಬವೂ ಸೇರಿದಂತೆ ಎಲ್ಲಾ ಸ್ತಂಬಗಳೂ ಅದ್ಬುತ ಕೆತ್ತನೆಗಳ ಆಗರ. ಅತ್ಯಂತ ನಿಪುಣ ಕುಶಲ ಕರ‍್ಮಿಗಳಿಂದ ಕೆತ್ತಲಾದ ಚಿತ್ರಗಳನ್ನು ಅವುಗಳ ಮೇಲೆ ಕಾಣಬಹುದು.

ತೂಗಾಡುವ ಸ್ತಂಬ

ಈ ತೂಗಾಡುವ ಸ್ತಂಬದ ತಳಬಾಗಕ್ಕೂ ಮತ್ತು ನೆಲಕ್ಕೂ ಅಂತರವಿದೆ. ಇದು ನೆಲಕ್ಕೆ ಸೋಕದೆ, ನೆಲದಿಂದ ಒಂದರ‍್ದ ಸೆಂಟಿಮೀಟರ್ ನಶ್ಟು ಬೆಳಕು ಸಲೀಸಾಗಿ ಹಾದು ಹೋಗುವಶ್ಟು ಎತ್ತರದಲ್ಲಿದೆ. ತೆಳ್ಳನೆಯ ಬಟ್ಟೆಯಾಗಲಿ ಅತವಾ ಕಾಗದವಾಗಲಿ ಇದರಲ್ಲಿ ಹಾದು ಹೋಗಬಹುದಾದಶ್ಟು ಸ್ತಳಾವಕಾಶವಿದೆ. ಇಶ್ಟು ಬಾರೀ ತೂಕದ ಈ ಸ್ತಂಬವು, ನೆಲದ ಆದಾರದಿಂದ ನಿಂತಿಲ್ಲ ಎಂಬುದು ಸೋಜಿಗವೇ ಸರಿ.

ಇದರ ಹಿಂದಿರುವ ರಹಸ್ಯವಾದರೂ ಏನು?

1910ರಲ್ಲಿ ಹ್ಯಾಮಿಲ್ಟನ್ ಎಂಬ ಬ್ರಿಟಿಶ್ ಇಂಜಿನಿಯರ್, ತನ್ನ ಕೆಟ್ಟ ಕುತೂಹಲದಿಂದ ಮತ್ತು ತೂಗಾಡುವ ಸ್ತಂಬದ ಹಿಂದಿರುವ ತಾಂತ್ರಿಕತೆಯ ರಹಸ್ಯವನ್ನು ಅರಿಯಲು ಹುನ್ನಾರ ನಡೆಸಿ, ಇದು ವಾಸ್ತು ಶಿಲ್ಪದ ದೋಶ ಎಂದು ಪರಿಗಣಿಸಿ, ಸರಿಪಡಿಸಲು ಪ್ರಯತ್ನಿಸಿದನಂತೆ. ಆದರೆ ಅವನ ಪ್ರಯತ್ನ ಸಂಪೂರ‍್ಣ ವಿಪಲವಾಯಿತು. ಆ ಸಂದರ‍್ಬದಲ್ಲಿ, ಈ ತೂಗಾಡುವ ಸ್ತಂಬವು, ತನ್ನ ಮೂಲ ಸ್ತಳದಿಂದ ಕೊಂಚ ಸ್ತಳಾಂತರವಾಗಿದೆ. ಆದರೂ ತೂಗಾಡುವ ಈ ಸ್ತಂಬದ ರಹಸ್ಯ, ರಹಸ್ಯವಾಗಿಯೇ ಉಳಿದು ಹೋಯಿತು. ಇದು ಲೇಪಾಕ್ಶಿ ದೇವಾಲಯದ ಕಲಾತ್ಮಕ ಹಾಗೂ ಪುರಾತತ್ವ ವೈಬವದ ಅದ್ಬುತ ಉದಾಹರಣೆ. ಹ್ಯಾಮಿಲ್ಟನ್ ತನ್ನ ಕಾರ‍್ಯಾಚರಣೆಯಲ್ಲಿ, ತೂಗಾಡುವ ಸ್ತಂಬದ ಮೂಲೆಯೊಂದು ನೆಲ ಸ್ಪರ‍್ಶಿಸುವಂತೆ ಮಾಡುವಲ್ಲಿ ಯಶಸ್ವಿಯಾದರೂ, ಮೇಲ್ಚಾವಣಿಯ ವರ‍್ಣಚಿತ್ರಗಳನ್ನು ವಿರೂಪಗೊಳಿಸಿ ಕುಕ್ಯಾತಿ ಗಳಿಸಿದ. ಕಾರ‍್ಯಾಚರಣೆಯನ್ನು ಮುಂದುವರೆಸಿ ಹೆಚ್ಚಿನ ಪ್ರಯತ್ನಕ್ಕೆ ಕೈ ಹಾಕಿದಲ್ಲಿ, ಇಡೀ ದೇವಾಲಯಕ್ಕೆ ಹಾನಿಯಾಗುತ್ತದೆಂದು ಅರಿತ ಆತ, ತನ್ನ ಕಾರ‍್ಯಾಚರಣೆಯನ್ನು ಅಲ್ಲಿಗೆ ನಿಲ್ಲಿಸಿದ. ನಂತರದ ದಿನಗಳಲ್ಲಿ ನಡೆದ ಹೆಚ್ಚಿನ ಸಂಶೋದನೆಯಿಂದ, ಈ ಸ್ತಂಬವು ಮೇಲ್ಚಾವಣಿಗೆ ನಿಲುಬಾರವಾಗಿ ಕಾರ‍್ಯ ನಿರ‍್ವಹಿಸುತ್ತದೆ ಮತ್ತು ಇದರ ಒಂದು ಸಣ್ಣ ಬದಲಾವಣೆಯೂ ಸಹ ಮೇಲ್ಚಾವಣಿಯ ಸಮತೋಲನವನ್ನು ಹಾಳು ಮಾಡುವುದಲ್ಲದೆ, ಇಡೀ ದೇವಾಲಯದ ಕಟ್ಟಡ ವಿನ್ಯಾಸಕ್ಕೆ ಹಾನಿಯಾಗಬಹುದೆಂದು ತಿಳಿದುಬರುತ್ತದೆ.

ಹದಿನಾರನೇ ಶತಮಾನದಲ್ಲಿ ನಿರ‍್ಮಾಣವಾದ, ಕಲ್ಲಿನಿಂದ ರಚಿಸಲ್ಪಟ್ಟ ಈ ಬವ್ಯ ದೇವಾಲಯ, ಪ್ರಾಚೀನ ಮತ್ತು ಮದ್ಯ ಕಾಲದ ಬಾರತದ ಅತ್ಯಂತ ಪ್ರಸಿದ್ದ ದೇವಲಯಗಳಲ್ಲಿ ಒಂದು. ನಿರ‍್ಮಾಣಗಾರರ ಹಾಗೂ ಬಾರತೀಯ ಇಂಜಿನಿಯರುಗಳ ಅದ್ಬುತ ಪ್ರತಿಬೆಗೆ ಇದು ಸಾಕ್ಶಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ:  amusingplanet.com, businessinsider.in, incredibleindia.org, trendpickle.com, oyorooms.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.