ಎಮ್ಮಾ ರಾಡುಕಾನು – ಟೆನ್ನಿಸ್ ನ ಹೊಸ ಮಿಂಚು

– ರಾಮಚಂದ್ರ ಮಹಾರುದ್ರಪ್ಪ.

2021 ರ ಹೆಂಗಸರ ಯು.ಎಸ್ ಓಪನ್ ಪೈನಲ್ ನಲ್ಲಿ ಕೆನಡಾದ ಲೇಯ್ಲಾಹ್ ಪರ‍್ನಾಂಡೀಸ್ ರನ್ನು (6-4, 6-3) ನೇರ ಸೆಟ್ ನಿಂದ ಮಣಿಸಿ ಯುನೈಟೆಡ್ ಕಿಂಗ್ಡಮ್ ನ ಹದಿನೆಂಟರ ಹರೆಯದ ಹುಡುಗಿ ಎಮ್ಮಾ ರಾಡುಕಾನು ಟೆನ್ನಿಸ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದರು. ಹೌದು! ಅವರು ಮಾಡಿದ ಈ ಸಾದನೆ ಟೆನ್ನಿಸ್ ಅಂಗಳದಲ್ಲಿ ಹಿಂದೆಂದೂ ಕಂಡು ಕೇಳರಿಯದ ದಾಕಲೆ. ಓಪನ್ ಎರಾದಲ್ಲಿ ಅರ‍್ಹತಾ ಸುತ್ತಿನ ಮೂಲಕ ಪ್ರಮುಕ ಪೋಟಿಗೆ ಪ್ರವೇಶ ಪಡೆದು ಗ್ರ್ಯಾಂಡ್‍ಸ್ಲಾಮ್ ಗೆದ್ದ ಮೊದಲ ಆಟಗಾರ‍್ತಿ, ಎಂಬ ಹಿರಿಮೆ ಎಮ್ಮಾ ತಮ್ಮದಾಗಿಸಿಕೊಂಡರು. ಗಂಡಸರ ಪೋಟಿಯೂ ಸೇರಿದಂತೆ ಇದು ಟೆನ್ನಿಸ್ ಲೋಕದಲ್ಲೇ ಮೊದಲು! ಅವರ ಈ ಗ್ರ್ಯಾಂಡ್‍ಸ್ಲಾಮ್ ಗೆಲುವು 1977 ರ ಬಳಿಕ ಬ್ರಿಟಿಶ್ ಆಟಗಾರ‍್ತಿಯೊಬ್ಬರ ಮೊದಲ ಪ್ರಶಸ್ತಿ ಎಂಬ ಹೆಚ್ಚುಗಾರಿಕೆ ಕೂಡ ಪಡೆಯಿತು. ಈ ಗ್ರ್ಯಾಂಡ್‍ಸ್ಲಾಮ್ ಪೋಟಿಯ ಅಶ್ಟೂ ಪಂದ್ಯಗಳಲ್ಲಿ ಒಂದೂ ಸೆಟ್ ಸೋಲದ ಎಮ್ಮಾರ ಆಟವನ್ನು ಪವಾಡವೆಂದೇ ಟೆನ್ನಿಸ್ ಪಂಡಿತರು ಕೊಂಡಾಡುತ್ತಿರುವುದು ಅತಿಶಯವೇನಲ್ಲ.

ಹುಟ್ಟು – ಟೆನ್ನಿಸ್ ನ ಮೊದಲ ದಿನಗಳು

ನವೆಂಬರ್ 13, 2002 ರಂದು ಟೊರಾಂಟೊದಲ್ಲಿ ಚೀನಾದ ತಾಯಿ ಹಾಗೂ ರೊಮೇನಿಯಾದ ತಂದೆಯ ಮಗಳಾಗಿ ಎಮ್ಮಾ ಹುಟ್ಟಿದರು. ಎಮ್ಮಾ ಎರಡು ವರುಶದ ಮಗುವಾಗಿದ್ದಾಗ ಅವರ ಕುಟುಂಬ ಇಂಗ್ಲೆಂಡ್ ಗೆ ಬಂದು ನೆಲೆಸಿತು. ತನ್ನ ಐದನೇ ವಯಸ್ಸಿಗೇ ಟೆನ್ನಿಸ್ ಆಡಲು ಮೊದಲು ಮಾಡಿದ ಪುಟ್ಟ ಎಮ್ಮಾ ಟೆನ್ನಿಸ್ ಆಟಗಾರ‍್ತಿಯರಾದ ಚೀನಾದ ಲೀ ನಾ ಮತ್ತು ರೊಮೇನಿಯಾದ ಸಿಮೋನಾ ಹಲೇಪ್ ರ ಆಟವನ್ನು ಮೆಚ್ಚಿ ಅವರಂತೆಯೇ ತಮ್ಮ ಆಟದ ಚಳಕಗಳನ್ನೂ ಮೈಗೂಡಿಸಿಕೊಂಡರು. ಸೆಲೆಕ್ಟೀವ್ ಗ್ರಾಮರ್ ಸ್ಕೂಲ್ ನಲ್ಲಿ ಕಲಿಯುತ್ತಾ ಬಾಸ್ಕೆಟ್ ಬಾಲ್, ಗಾಲ್ಪ್, ಸ್ಕೀಯಿಂಗ್, ಮೋಟೋಕ್ರಾಸ್ ಕೂಡ ಅವರು ಆಡಿದ್ದುಂಟು. ವ್ರುತ್ತಿಪರ ಟೆನ್ನಿಸ್ ತರಬೇತಿ ಪಡೆದು 2018 ರಲ್ಲಿ ಎಮ್ಮಾ ITF ಚಂಡೀಗಡ್ ಲಾನ್ ಟೆನ್ನಿಸ್ ಟೂರ‍್ನಿ ಗೆದ್ದು ಆ ಬಳಿಕ ದೆಹಲಿಯಲ್ಲಿ ಗ್ರೇಡ್-2 ಕಿರಿಯರ ಟೂರ‍್ನಿ ಕೂಡ ಗೆದ್ದರು. ಆನಂತರ ಅದೇ ವರುಶ 15 ರ ಹರೆಯದ ಎಮ್ಮಾ ಕಿರಿಯರ ವಿಂಬಲ್ಡನ್ ಹಾಗೂ ಯು.ಎಸ್ ಓಪನ್ ನ ಕ್ವಾರ‍್ಟರ್‌ ಪೈನಲ್ ತಲುಪಿ ವ್ರುತ್ತಿಪರ ಆಟಗಾರ‍್ತಿಯಾಗಿ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು.

ವ್ರುತ್ತಿಪರ ಟೆನ್ನಿಸ್

2018 ರ ಕೊನೆಯಲ್ಲಿ ಪ್ರೊಪೆಶನಲ್ ಆಟಗಾರ‍್ತಿಯ ಅರ‍್ಹತೆ ಪಡೆದ ಎಮ್ಮಾ 2019 ರಲ್ಲಿ ಮೊದಲಿಗೆ ಮಹಾರಾಶ್ಟ್ರದ ಸೋಲಾಪುರ್ ಓಪನ್ ನಲ್ಲಿ ಪಾಲ್ಗೊಂಡು ಎರಡನೇ ಸುತ್ತಿನಲ್ಲಿ ಸೋಲುಂಡರು. ಬಳಿಕ ಅದೇ ವರುಶದ ಕೊನೆಯಲ್ಲಿ ಪುಣೆಯಲ್ಲಿ ITF NECC ಡೆಕ್ಕನ್ ಟೂರ‍್ನಿ ಗೆದ್ದು ತಮ್ಮ ವ್ರುತ್ತಿ ಬದುಕಿನ ಮೊದಲ ಪ್ರಶಸ್ತಿ ಪಡೆದರು. ಅಲ್ಲಿಂದ 2021 ರ ಜೂನ್ ನಲ್ಲಿ ವೈಲ್ಡ್ ಕಾರ‍್ಡ್ ಮೂಲಕ ನಾಟಿಂಗ್‌ಹ್ಯಾಮ್ ಓಪನ್ ನಲ್ಲಿ ಆಡಿದ ಎಮ್ಮಾ ಮೊದಲ ಸುತ್ತಿನಲ್ಲೇ ಹೊರಬಿದ್ದರು. WTA ನ 338ನೇ ರಾಂಕ್ ಪಡೆದಿದ್ದ ಎಮ್ಮಾ ನಂತರ ಮತ್ತೊಮ್ಮೆ ವೈಲ್ಡ್ ಕಾರ‍್ಡ್ ಮೂಲಕ 2021 ರ ವಿಂಬಲ್ಡನ್ ಗೆ ಅರ‍್ಹತೆ ಪಡೆದು ಎಲ್ಲರೂ ಅಚ್ಚರಿ ಪಡುವಂತೆ ನಾಲ್ಕನೇ ಸುತ್ತು ತಲುಪಿದರು. ಆದರೆ ನಾಲ್ಕನೇ ಸುತ್ತಿನ ಪಂದ್ಯದ ವೇಳೆ ಎರಡನೇ ಸೆಟ್ ನಲ್ಲಿ ಉಸಿರಾಟದ ತೊಂದರೆಯಿಂದ ಹೊರನಡೆಯಬೇಕಾಯಿತು. ನಂತರ ಸಿಲಿಕಾನ್ ವ್ಯಾಲೀ ಕ್ಲಾಸಿಕ್ ಟೂರ‍್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ಆಂಡ್ರೂ ರಿಚರ‍್ಡ್ಸನ್ ರನ್ನು ತಮ್ಮ ಹೊಸ ಕೋಚ್ ಆಗಿ ನೇಮಿಸಿಕೊಂಡರು. ನಂತರ ಯು.ಎಸ್ ಓಪನ್ ಗೂ ಮುನ್ನ ಶಿಕಾಗೋನಲ್ಲಿ ನಡೆದ WTA 125 ಟೂರ‍್ನಿಯ ಪೈನಲ್ ತಲುಪಿ ತಮ್ಮ ರ‍್ಯಾಂಕಿಂಗ್ ಅನ್ನು ಸುದಾರಿಸಿಕೊಂಡರು (150).

ಯು.ಎಸ್ ಓಪನ್ ಅರ‍್ಹತಾ ಪಂದ್ಯಗಳಲ್ಲಿ ಆಡಿದ ಎಮ್ಮಾ ಮೂರೂ ಪಂದ್ಯಗಳಲ್ಲಿ ನೇರ ಸೆಟ್ ಗಳಿಂದ ಗೆದ್ದು ಮುಕ್ಯ ಪಂದ್ಯಾವಳಿ ತಲುಪಿದರು. ಅಲ್ಲೂ ಕೂಡ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸಿದ ಇಂಗ್ಲೆಂಡ್ ನ ಈ ಹುಡುಗಿ ನೋಡನೋಡುತ್ತಿದ್ದಂತೆ ಸರಾಗವಾಗಿ ಪಂದ್ಯದಿಂದ ಪಂದ್ಯಕ್ಕೆ ತಮ್ಮ ಆಟವನ್ನು ಬಲಗೊಳಿಸಿಕೊಳ್ಳುತ್ತಾ ಪೈನಲ್ ನೆಡೆಗೆ ದಾಪುಗಾಲಿಟ್ಟರು. ಕಡೆಗೆ ಆ ದೊಡ್ಡ ಗಟ್ಟದಲ್ಲೂ ಎದೆಗುಂದದೆ ಯು.ಎಸ್ ಓಪನ್ ಪೈನಲ್ ಪಂದ್ಯವನ್ನೂ ನಿರಾಯಾಸವಾಗಿ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಮರಿಯಾ ಶರಪೋವಾ (2004) ಬಳಿಕ ಗ್ರ್ಯಾಂಡ್‍ಸ್ಲಾಮ್ ಗೆದ್ದ ಅತ್ಯಂತ ಕಿರಿಯ ಆಟಗಾರ‍್ತಿಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾದರು. ತಮ್ಮ ವ್ರುತ್ತಿ ಬದುಕಿನಲ್ಲಿ ಅಲ್ಲಿಯವರೆಗೂ ಒಂದು WTA ಟೂರ‍್ನಿಯನ್ನೂ ಗೆಲ್ಲದ ಎಮ್ಮಾ ಕೇವಲ ಮೂರು ವಾರಗಳಲ್ಲಿ ಈ ಪವಾಡದಂತಹ ಗ್ರ್ಯಾಂಡ್‍ಸ್ಲಾಮ್ ಗೆಲುವಿನಿಂದ ಟೆನ್ನಿಸ್ ಜಗತ್ತು ಬೆಕ್ಕಸಬೆರಗಾಗುವಂತೆ ಮಾಡಿದರು. ನಂತರ ಸಹಜವಾಗಿಯೇ ಎಲ್ಲಾ ಕಡೆಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತು. ತಾವು ಪಾಲ್ಗೊಂಡ ಎರಡನೇ ಗ್ರ್ಯಾಂಡ್‍ಸ್ಲಾಮ್ ಅನ್ನೇ ಗೆದ್ದು ತಕ್ಕೆಗೆ ಹಾಕಿಕೊಂಡ ಎಮ್ಮಾರದು ವಿಶಿಶ್ಟ ಮತ್ತುಅಪರೂಪದ ಸಾದನೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನೂ ಕ್ಲೇ ಅಂಗಳದಲ್ಲಿ ಒಂದೂ ಪಂದ್ಯವನ್ನು ಅವರು ಆಡದಿರುವುದು ನಂಬಲಸಾದ್ಯವಾದರೂ ದಿಟ. ಈ ಗೆಲುವಿನಿಂದ ಎಮ್ಮಾ ರಾಡುಕಾನು 23ನೇ ರ್‍ಯಾಂಕ್ ಗೆ ಜಿಗಿದರು.

ಎಮ್ಮಾರ ಆಟ ಮತ್ತು ಮುಂದಿನ ಸವಾಲುಗಳು

ಆಕ್ರಮಣಕಾರಿ ಬೇಸ್ಲೈನ್ ಆಟಗಾರ‍್ತಿ ಆಗಿರುವ ಎಮ್ಮಾ ತಮ್ಮ ಎರಡು ಕೈಗಳ ಬ್ಯಾಕ್ ಹ್ಯಾಂಡ್ ಹೊಡೆತಗಳಿಂದ ಹೆಚ್ಚೆಚ್ಚು ವಿನ್ನರ್ ಗಳನ್ನು ಪಡೆಯುವುದರಲ್ಲಿ ನಿಸ್ಸೀಮರು. ಅವರ ಬ್ಯಾಕ್ ಹ್ಯಾಂಡ್ ನಶ್ಟು ಅವರ ಪೋರ್ ಹ್ಯಾಂಡ್ ಪಕ್ವವಲ್ಲದಿದ್ದರೂ ಈ ಹೊಡೆತಗಳಲ್ಲಿಯೂ ಹೆಚ್ಚೇನೂ ಕುಂದುಗಳು ಇನ್ನೂ ಕಂಡುಬಂದಿಲ್ಲ. ಎದುರಾಳಿಯ ಸರ‍್ವ್ ಅನ್ನು ಬಿರುಸಾಗಿ ಹಿಂದಿರುಗಿಸುವ ಅವರ ವಿಶಿಶ್ಟ ಚಳಕವೇ ಎಮ್ಮಾರ ಪ್ರಮುಕ ಶಕ್ತಿ . ಇದರೊಟ್ಟಿಗೆ ಕೋರ‍್ಟ್ ನ ಎಲ್ಲಾ ದಿಕ್ಕುಗಳಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸುವ ಅವರು ಹೆಚ್ಚು ರ‍್ಯಾಲಿಗಳಲ್ಲಿಯೂ ದಣಿಯದೆ ಎದುರಾಳಿ ತಪ್ಪು ಮಾಡುವಂತೆ ತಮ್ಮ ಹೊಡೆತಗಳ ಕೋನ ಮತ್ತು ವೇಗವನ್ನು ಕ್ಶಣಮಾತ್ರದಲ್ಲಿ ಮಾರ‍್ಪಡಿಸಬಲ್ಲರು. ಇಂತಹ ಅಗಾದ ಪ್ರತಿಬೆ ಹೊಂದಿರುವ ಎಮ್ಮಾ ವ್ರುತ್ತಿಪರ ಟೆನ್ನಿಸ್ ನಲ್ಲಿ ನಿರಂತರತೆ ಕಾಪಾಡಿಕೊಂಡು ಹೆಚ್ಚೆಚ್ಚು ಗ್ರ್ಯಾಂಡ್‍ಸ್ಲಾಮ್ ಗಳನ್ನುಗೆಲ್ಲಲು ಇನ್ನೂ ಕಲಿಯುವುದು ಸಾಕಶ್ಟಿದೆ ಎಂಬುವುದು ಟೆನ್ನಿಸ್ ಪಂಡಿತರ ಅಂಬೋಣ.

ಹಿಂದೆ ಅನಿರೀಕ್ಶಿತವಾಗಿ ಒಂದು ಗೆಲುವು ಪಡೆದು ಮರೆಯಾಗಿರುವ ಎಶ್ಟೋ ಆಟಗಾರರ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ ಅವರಂತಾಗದೆ ಅಗ್ರಮಾನ್ಯ ಆಟಗಾರ‍್ತಿಯಾಗುವತ್ತ ಎಮ್ಮಾರ ಆಟ ಮುಂದುವರೆಯಲಿ ಎಂಬುದು ಟೆನ್ನಿಸ್ ಪ್ರಿಯರ ಹೆಬ್ಬಯಕೆ. ಆ ಅಳವು ಎಮ್ಮಾರಲ್ಲಿ ಕಂಡಿತವಾಗಿ ಇದೆ ಎಂಬುದು ಸುಳ್ಳಲ್ಲ. 2022 ರ ಆಸ್ಟ್ರೇಲಿಯಾ ಓಪನ್ ಗೂ ಮುನ್ನ ಮುಂಬರುವ ದಿನಗಳಲ್ಲಿ ಬಹಳಶ್ಟು WTA ಟೂರ‍್ನಿಗಳಲ್ಲಿ ಕಣಕ್ಕಿಳಿಯಲಿರುವ ಎಮ್ಮಾ ರಾಡುಕಾನು ಮೇಲೆ ಈಗ ತಾವೊಬ್ಬ ಮುಕ್ಯ ಆಟಗಾರ‍್ತಿ ಎಂದು ಸಾಕಶ್ಟು ಒತ್ತಡ ಇದೆ. ಹಾಗಾಗಿ ಇವನ್ನೆಲ್ಲಾ ಹಿಮ್ಮೆಟ್ಟಿ ಎಲ್ಲಾ ಸವಾಲುಗಳನ್ನು ಎದುರಿಸಿ ಅವರು ಯಶಸ್ಸು ಕಾಣಲಿ ಎಂದು ಹಾರೈಸೋಣ!

(ಚಿತ್ರ ಸೆಲೆ: indiatimes.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: