ಸುಸ್ತಿರ ಕ್ರುಶಿಯಲ್ಲಿ ಸೂಕ್ಶ್ಮಾಣು ಜೀವಿಗಳ ಪಾತ್ರ

–  ರಾಜಬಕ್ಶಿ ನದಾಪ.

ಬೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಆಹಾರ ಸೇವಿಸಲೇಬೇಕು. ಇದು ಪ್ರಕ್ರುತಿ ನಿಯಮ. ಬೂಮಿಯ ಜನಸಂಕ್ಯೆ ಸುಮಾರು 800 ಕೋಟಿಯ ಹತ್ತಿರಕ್ಕೆ ಬಂದಿದೆ. ಸದ್ಯದ ಪರಿಸ್ತಿತಿಯಲ್ಲಿ ಬೆಳೆಯುತ್ತಿರುವ ಈ ಜನಸಂಕ್ಯೆಗೆ ಆಹಾರ ಒದಗಿಸುವುದು ಒಂದು ದೊಡ್ಡ ಸವಾಲೇ ಸರಿ. ಆದರೆ ಅದಕ್ಕೆ ತದ್ವಿರುದ್ದವಾಗಿ ಉಳುವ ಕ್ರುಶಿ ಬೂಮಿ ಮಾತ್ರ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿಯೇ ಕ್ರುಶಿ ಉತ್ಪಾದಕತೆಯನ್ನು ಹೆಚ್ಚಿಸುವುದು ಅನಿವಾರ‍್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹಿಂದೆ ರಾಸಾಯನಿಕ ಪೋಶಕಾಂಶಗಳನ್ನು ಹಾಗೂ ಪೀಡೆನಾಶಕಗಳನ್ನು ಅತ್ಯಂತ ಅವೈಜ್ನಾನಿಕವಾಗಿ ಬಳಸಿದ್ದೇವೆ. ಅದರಲ್ಲೂ ಸಾರಜನಕ ಮತ್ತು ರಂಜಕ ಆದಾರಿತ ಪೋಶಕಾಂಶಗಳದ್ದೇ ಅಪಾರ ಕೊಡುಗೆಯಾಗಿದೆ. ನಮಗೆಲ್ಲ ಈಗ ನಿದಾನವಾಗಿ ಈ ಕಾರ‍್ಕೋಟಕ ರಾಸಾಯನಿಕಗಳ ಅಸಲಿಯತ್ತು ತಿಳಿಯತೊಡಗಿದೆ ಹಾಗೂ ನಾವೆಲ್ಲರೂ ಸುಸ್ತಿರ ಕ್ರುಶಿ ಪದ್ದತಿಗಳತ್ತ ಮುಕ ಮಾಡುವುದು ಅನಿವಾರ‍್ಯವಾಗಿದೆ.

ಸೂಕ್ಶ್ಮಾಣು ಜೀವಿಗಳೆಂಬ ಜೈವಿಕ ಗೊಬ್ಬರ

ಸುಸ್ತಿರ ಕ್ರುಶಿ(Sustainable farming) ಪದ್ದತಿಗಳಿಂದ ಆಹಾರೋತ್ಪಾದನೆ ಹೆಚ್ಚಿಸುವುದರ ಬಗ್ಗೆ ಮಾತನಾಡುವುದಾದರೆ ಮಣ್ಣಿನಲ್ಲಿನ ಸೂಕ್ಶ್ಮಾಣು ಜೀವಿಗಳನ್ನು ನಾವು ಕಡೆಗಣಿಸುವಂತಿಲ್ಲ. ಈ ಸೂಕ್ಶ್ಮಾಣು ಜೀವಿಗಳು ಸಸ್ಯಗಳ ಸ್ವಾಸ್ತ್ಯವನ್ನು ಕಾಪಾಡುವುದರ ಜೊತೆಗೆ ಇಳುವರಿಯನ್ನು ಕೂಡ ಹೆಚ್ಚಿಸುತ್ತವೆ. ಮುಕ್ಯವಾಗಿ ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ನಮ್ಮ ನೆಲ, ಜಲ, ಗಾಳಿ ಹಾಗೂ ನಮ್ಮ ಆರೋಗ್ಯ ಕೂಡ ಹಾಳಾಗುವುದನ್ನು ತಡೆಯುತ್ತವೆ. ಈ ಸೂಕ್ಶ್ಮಾಣು ಜೀವಿಗಳು ಮಣ್ಣಿನಲ್ಲಿದ್ದುಕೊಂಡು ಸಸ್ಯಗಳಿಗೆ ಪೋಶಕಾಂಶಗಳನ್ನು ಒದಗಿಸುತ್ತವೆಯಲ್ಲದೇ ಅವುಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಇವುಗಳು ಮಣ್ಣಿನ ಆರೋಗ್ಯವನ್ನು ಕಾಪಾಡುವುದಲ್ಲದೇ ನಮ್ಮ ಪರಿಸರಕ್ಕೆ ಕಡಿಮೆ ಹಾನಿಕಾರಕವಾಗಿದ್ದು, ಹೆಚ್ಚು ಸುಸ್ತಿರ ಮತ್ತು ರಾಸಾಯನಿಕ ಗೊಬ್ಬರಗಳಿಗಿಂತ ಅಗ್ಗವಾಗಿವೆ.

                           ಜೈವಿಕ ಗೊಬ್ಬರವಾಗಿ ಸಸ್ಯಾಬಿವ್ರುದ್ದಿಯಲ್ಲಿ ಸೂಕ್ಶ್ಮಾಣು ಜೀವಿಗಳ ಪಾತ್ರ

 

ಪೋಶಕಾಂಶಗಳ ಪೂರೈಕೆ

ಜೀವವಿರುವ ಪ್ರತಿಯೊಂದು ಜೀವಿಗೆ ಸಾರಜನಕ ಅತ್ಯವಶ್ಯಕವಾಗಿದೆ. ಮಣ್ಣಿನಲ್ಲಿ ಸಾಕಶ್ಟು ಪ್ರಮಾಣದ ಸಾರಜನಕವಿದ್ದರೂ ಸಸ್ಯಗಳು ಸಾರಜನಕದ ಕೊರತೆಯನ್ನು ಎದುರಿಸುತ್ತವೆ. ಇದಕ್ಕೆ ಕಾರಣ ಅದು ಉಪಯೋಗವಾಗುವ ರೂಪದಲ್ಲಿ ಇಲ್ಲದಿರುವುದಾಗಿದೆ. ಹಾಗಾಗಿ, ಸೂಕ್ಶ್ಮಾಣು ಜೀವಿಗಳು ಇಲ್ಲಿ ಮಹತ್ವದ ಪಾತ್ರವನ್ನು ನಿರ‍್ವಹಿಸುತ್ತವೆ. ಇವು ವಾತಾವರಣದ ಸಾರಜನಕವನ್ನು(N2) ಉಪಯುಕ್ತ ರೂಪಕ್ಕೆ(NH3) “ನೈಟ್ರೋಜಿನೇಸ್” ಎಂಬ ಕಿಣ್ವದ ಸಹಾಯದಿಂದ ಪರಿವರ‍್ತಿಸುತ್ತವೆ.

ಉಪಯುಕ್ತ ರೂಪದ ಸಾರಜನಕವನ್ನು ಸುಲಬವಾಗಿ ಪಡೆಯಲು ಕೆಲವೊಂದು ಸಸ್ಯಗಳು ಬ್ಯಾಕ್ಟಿರಿಯಾಗಳ ಸಹಕಾರದೊಂದಿಗೆ ಬದುಕುವ ವ್ಯವಸ್ತೆಯನ್ನು ರೂಡಿಸಿಕೊಂಡಿವೆ. ಉದಾಹರಣೆಗೆ ಕೆಲವೊಂದು ದ್ವಿದಳ ದಾನ್ಯದ ಬೆಳೆಗಳು ತಮ್ಮ ಬೇರುಗಳಲ್ಲಿ ವಿಶೇಶವಾದ ಗಂಟುಗಳನ್ನು ಹೊಂದಿರುತ್ತವೆ. ಈ ಗಂಟುಗಳಲ್ಲಿ ಸಾರಜನಕ ಸ್ತಿರೀಕರಿಸುವ ‘ರೈಜೋಬಿಯಂ’ ಎಂಬ ಬ್ಯಾಕ್ಟಿರಿಯಾ ಇರುತ್ತದೆ. ಕಡಲೆಬೇಳೆ ಈ ಬ್ಯಾಕ್ಟಿರಿಯಾದೊಂದಿಗೆ ಬೆಳೆದಾಗ ಅದರ ಇಳುವರಿ ಸುಮಾರು 250% ಹೆಚ್ಚಾಗಿದೆ. ‘ಬ್ರಾಡಿರೈಜೋಬಿಯಂ’(Bradyrhizobium) ಜಾತಿಯ ಬ್ಯಾಕ್ಟಿರಿಯಾವನ್ನು ಹೆಸರುಬೇಳೆ ಜೊತೆಗೆ ಬೆಳೆದಾಗ ಅದು ಸಸ್ಯದ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಿದ್ದು, ಕೀಟಬಾದೆಯ ನಿರೋದಕತೆಯನ್ನು ಹೆಚ್ಚಿಸಿಕೊಂಡಿರುವುದು ಕಂಡುಬಂದಿದೆ. ‘ಸೈನೋಬ್ಯಾಕ್ಟಿರಿಯಾ’(Cyanobacteria) ಕೂಡ ಸಾರಜನಕದ ಸ್ತಿರೀಕರಣ ಮಾಡುತ್ತದೆ. ಗೋದಿ ಬೆಳೆಯನ್ನು ಕ್ಯಾಲೋತ್ರಿಕ್ಸ ಗೋಸೀ(Calothrix ghosei), ಹ್ಯಾಪಲೋಸಿಪಾನ್ ಇಂಟ್ರಿಕ್ಯಾಟಸ್(Hapalosiphon intricatus) ಮತ್ತು ನೋಸ್ಟೋಕ್(Nostoc) ವರ‍್ಗ ಎಂಬ ಸೈನೋಬ್ಯಾಕ್ಟಿರಿಯಾದ ವಿವಿದ ಜಾತಿಯ ಬ್ಯಾಕ್ಟಿರಿಯಾದೊಂದಿಗೆ ಬೆಳೆದಾಗ ಅವು ಎತ್ತರಕ್ಕೆ ಬೆಳೆಯುವುದನ್ನು ಹಾಗೂ ಹೆಚ್ಚು ಕಾಳುಗಳನ್ನು ಹೊಂದಿರುವುದನ್ನು ಗಮನಿಸಬಹುದು. ಇದರ ಜೊತೆಗೆ ನೊಸ್ಟೋಕ್ ಅತವಾ ಅನಾಬೆನಾ(Anabaena) ಜಾತಿಯ ಬ್ಯಾಕ್ಟಿರಿಯಾದೊಂದಿಗೆ ಬೆಳೆದಾಗ ಗಿಡದ ಬೇರಿನ ಉದ್ದ ಹೆಚ್ಚಾಗುವುದರ ಜೊತೆಗೆ ಸಸ್ಯದ ಸಾರಜನಕ ಪ್ರಮಾಣದಲ್ಲೂ ಏರಿಕೆ ಕಂಡು ಬಂದಿದೆ. ಸೈನೋಬ್ಯಾಕ್ಟಿರಿಯಾ ಜಲ ಪರಿಸರದಲ್ಲೂ ಕೂಡ ಸಾರಜನಕ ಸ್ತಿರೀಕರಿಸುವ ಪ್ರಮುಕ ಬ್ಯಾಕ್ಟಿರಿಯಾವಾಗಿದೆ. ಈ ಕೆಲಸವನ್ನು ಬತ್ತದ ಬೆಳೆಯಲ್ಲಿ ವಿಶೇಶವಾಗಿ ಕಾಣಬಹುದು .

ಸಸ್ಯಗಳ ಬೆಳವಣಿಗೆಯಲ್ಲಿ ಸೂಕ್ಶ್ಮಾಣು ಜೀವಿಗಳ ಪಾತ್ರ

ಸಾರಜನಕವನ್ನು ಹೊರತುಪಡಿಸಿ, ಸೂಕ್ಶ್ಮಾಣು ಜೀವಿಗಳು ಸಸ್ಯಗಳಿಗೆ ‘ಪೈಟೋಹಾರ‍್ಮೋನು’ ಗಳೆಂದು ಕರೆಯಲ್ಪಡುವ ಹಲವಾರು ವಿದದ ಪೋಶಕಾಂಶಗಳು, ಜೀವಸತ್ವಗಳು ಹಾಗೂ ಹಾರ‍್ಮೋನುಗಳನ್ನು ನೀಡುತ್ತವೆ. ಈ ‘ಪೈಟೋಹಾರ‍್ಮೋನು’ಗಳು ಸಸ್ಯಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ ಸಸ್ಯಗಳ ಜೀವ ಚಯಾಪಚಯ ಕಾರ‍್ಯದಲ್ಲಿ(Plant metabolism) ಮತ್ತು ಒತ್ತಡ ಪ್ರತಿಕ್ರಿಯೆಯಲ್ಲಿ(Stress response) ಸಂದೇಶ ನೀಡುವ ಜೀವಕಣಗಳಾಗಿ ಕಾರ‍್ಯನಿರ‍್ವಹಿಸುತ್ತವೆ. ‘ರೈಜೋಬಿಯಮ್’ ಬ್ಯಾಕ್ಟಿರಿಯಾ ಸಾಸಿವೆ ಬೆಳೆಯ ಜೊತೆಯಲ್ಲಿ ಬೆಳೆದಲ್ಲಿ, ಅದರಲ್ಲಿ ‘ಪೈಟೋಹಾರ‍್ಮೋನು’ಗಳನ್ನು ಉತ್ಪತ್ತಿ ಆಗುವುದರಿಂದ ಬೆಳೆಯ ಬೆಳವಣಿಗೆಯಲ್ಲಿ ವ್ರುದ್ದಿ ಕಂಡುಬರುತ್ತದೆ. ಮೆಕ್ಕೆಜೋಳದ ಬೆಳೆಯಲ್ಲಿ ‘ಅಜೋಸ್ಪಿರಿಲ್ಲಂ ಬ್ರಾಸಿಲೆನ್ಸ್’ (Azospirillum brasilense) ಉಪಸ್ತಿತಿಯಿಂದ ‘ಪೈಟೋಹಾರ‍್ಮೋನು’ಗಳ ಸಂಕ್ಯೆಯಲ್ಲಿ ಗಣನೀಯ ಏರಿಕೆಯಾಗಿ ಬೆಳೆಯ ಬೆಳವಣಿಗೆಯ ಪಲಿತಾಂಶದಲ್ಲಿ ವ್ರುದ್ದಿ ಕಂಡು ಬಂದಿದೆ. 80% ಕ್ಕೂ ಹೆಚ್ಚು ‘ರೈಜೋಬಿಯಾ’ ಬ್ಯಾಕ್ಟಿರಿಯಾಗಳು ಸಸ್ಯದ ಬಹುಪಯುಕ್ತ ‘ಪೈಟೋಹಾರ‍್ಮೋನು’ ಆಗಿರುವ ‘ಇಂಡೋಲ್-3-ಅಸಿಟಿಕ್ ಆಸಿಡ್’(IAA) ಅನ್ನು ಉತ್ಪಾದಿಸುತ್ತವೆ. ಈ ‘ಪೈಟೋಹಾರ‍್ಮೋನು’ ಸಸ್ಯದ ಬೆಳವಣಿಗೆ, ಜೀವಕೋಶದ ಕೋಶವಿಬಜನೆ(Cell differentiation) ಹಾಗೂ ಒತ್ತಡ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ, ಈ ಬ್ಯಾಕ್ಟಿರಿಯಾ ‘ಇಂಡೋಲ್-3-ಅಸಿಟಿಕ್ ಆಸಿಡ್’ ಅನ್ನು ಉತ್ಪಾದಿಸುವ ಮೂಲಕ ಸಸ್ಯದ ಬೆಳವಣಿಗೆಯನ್ನು ವ್ರುದ್ದಿಸುತ್ತವೆ ಹಾಗೂ ಇದು ಸಸ್ಯಗಳಿಗೆ ಹೆಚ್ಚಿನ ಪೋಶಕಾಂಶಗಳನ್ನು ಹೀರಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಒಂದೇ ಜಾತಿಯ ಬ್ಯಾಕ್ಟೀರಿಯಾಗಳ ಜೊತೆ ಜೊತೆಗೆ ಸೂಕ್ಶ್ಮಾಣು ಜೀವಿಗಳ ಸಮುದಾಯವು ಕೂಡ ಸಸ್ಯದ ಆರೋಗ್ಯ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತವೆ. ಆರ‍್ಕಿಯಾ(Archaea), ಬ್ಯಾಕ್ಟಿರಿಯಾ ಮತ್ತು ಶಿಲೀಂದ್ರಗಳು ಎಲ್ಲ ಸಸ್ಯದ ಬೇರಿನ ಜೊತೆಗೂಡಿ ಸಹಕ್ರಿಯೆಯ ಮೂಲಕ ಹೆಚ್ಚಿನ ಪೋಶಕಾಂಶಗಳನ್ನು ಒದಗಿಸುತ್ತವೆ. ಸಂಶೋದಕರು, ಈ ಸೂಕ್ಶ್ಮಾಣು ಜೀವಿಗಳ ಸಮುದಾಯಗಳ ಪ್ರಮುಕ ಸಹಕ್ರಿಯೆಗಳನ್ನು ತಿಳಿದುಕೊಳ್ಳಲು ಅದ್ಯಯನ ನಡೆಸುತ್ತಿದ್ದಾರೆ. ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರತಿ ಬೆಳೆಗೂ ನಿರ‍್ದಿಶ್ಟವಾಗಿ ಸರಿಹೊಂದುವ ಸೂಕ್ಶ್ಮಾಣು ಜೀವಿಗಳ ಸಮುದಾಯವನ್ನು ವಿನ್ಯಾಸಗೊಳಿಸುವುದೇ ಇವರ ಉದ್ದೇಶವಾಗಿದೆ. ಒಮ್ಮೆ ಯೋಚಿಸಿ, ಮುಂದೊಂದು ದಿನ ನೀವು ನಿಮ್ಮ ಬೆಳೆ, ಹವಾಮಾನ ಹಾಗೂ ಮಣ್ಣಿನ ಗುಣಕ್ಕೆ ಅನುಗುಣವಾದ ಜೈವಿಕ ಗೊಬ್ಬರವನ್ನು ಪಡೆಯಬಹುದು.

ಬೆಳೆ ಸಂರಕ್ಶಣೆ

ಈ ಸೂಕ್ಶ್ಮಾಣು ಜೀವಿಗಳು ಬೆಳೆಗಳಿಗೆ ಕೇವಲ ಪೋಶಕಾಂಶಗಳನ್ನು ಒದಗಿಸುವುದಲ್ಲದೇ, ಅವುಗಳನ್ನು ಹಾನಿಕಾರಕ ರೋಗರುಜಿನಗಳಿಂದ ಕೂಡ ಕಾಪಾಡುತ್ತವೆ. ವಿಶೇಶವಾಗಿ ಬೆಳೆಗಳನ್ನು ಕಾಡುವ ರೋಗಕಾರಕ ಶಿಲೀಂದ್ರಗಳಿಂದ ಕಾಪಾಡುತ್ತವೆ. ಉದಾಹರಣೆಗೆ, ‘ಸೂಡೋಮೋನಾಸ್’(Pseudomonas) ಮತ್ತು ‘ಬ್ಯಾಸಿಲ್ಲಸ್’(Bacillus) ತಳಿಯ ಬ್ಯಾಕ್ಟಿರಿಯಾಗಳು ಕಾಪಿ ಬೆಳೆಯನ್ನು ಹಾನಿಕಾರಕ ಶಿಲೀಂದ್ರದ ಆಕ್ರಮಣದಿಂದ ತಡೆಯಲು ‘ಹೈಡ್ರೋಜನ್ ಸೈನೈಡ್’ನಂತಹ ವಿಶಕಾರಿ ರಾಸಾಯನಿಕಗಳನ್ನು ಸ್ರವಿಸುತ್ತವೆ. ಮತ್ತೊಂದು ಬಗೆಯ ‘ಬ್ಯಾಸಿಲ್ಲಸ್’ ತಳಿಯು ಮೆಕ್ಕೆಜೋಳದಲ್ಲಿ ಶಿಲೀಂದ್ರನಾಶಕ ಕಣಗಳನ್ನು ಉತ್ಪಾದಿಸುವುದಲ್ಲದೇ ಕಾಳು ಕಟ್ಟುವಿಕೆಯನ್ನು ಕೂಡ ವ್ರುದ್ದಿಸುತ್ತದೆ. ‘ಓಕ್ರೋಬ್ಯಾಕ್ಟ್ರಮ್ ಆ್ಯಂತ್ರೋಪಿ ಟಿ.ಆರ್.ಎಸ್-2’(Ochrobactrum anthropi TRS‐2) ಬ್ಯಾಕ್ಟಿರಿಯಾ ಶಿಲೀಂದ್ರದ ವಿರುದ್ದ ಹೋರಾಡಬಲ್ಲದು ಹಾಗೂ ಚಹಾ ಬೆಳೆಯಲ್ಲಿ ಈ ಬ್ಯಾಕ್ಟಿರಿಯಾವನ್ನು ಹಾಕುವುದರಿಂದ ‘ಪೆಲ್ಲಿನಸ್ ನೋಕ್ಸಿಯಸ್’(Phellinus noxius) ಶಿಲೀಂದ್ರದಿಂದ ಉಂಟಾಗುವ ಕಂದು ಬೇರು ಕೊಳೆ ರೋಗ ಕಡಿಮೆಯಾಗುತ್ತದೆ. ಕೆಲವು ಬ್ಯಾಕ್ಟಿರಿಯಾಗಳು ಸಸ್ಯದ ಒಳಸೇರುವ ರೋಗಕಾರಕ ಶಿಲೀಂದ್ರಗಳನ್ನು ತಡೆಯಲು ಅವುಗಳ ಬೇರುಗಳ ಮೇಲೆ ಜೈವಿಕ ಪದರಗಳನ್ನೂ ಕೂಡ ರಚಿಸುತ್ತವೆ.

ಕ್ರುಶಿ ಬೆಳೆಗಳು ಹಲವಾರು ರೋಗ ಮತ್ತು ಕೀಟಗಳಲ್ಲದೇ, ದುಂಡುಹುಳುಗಳಿಂದ(Nematod) ಕೂಡ ಹಾನಿಗೊಳಗಾಗುತ್ತವೆ. ‘ನೆಮಟೋಪಾಗಸ್’(Nematophagous) ಬ್ಯಾಕ್ಟಿರಿಯಾ ವಿಶಕಾರಿ ರಾಸಾಯನಿಕಗಳ ಮೂಲಕ ಹಾಗೂ ಆಹಾರವನ್ನು ಕಸಿಯುವುದರ ಮೂಲಕ ನೆಮಟೋಡ್‍ಗಳ ಬೆಳವಣಿಗೆಯನ್ನು ತಡೆಯುತ್ತವೆ. ಉದಾಹರಣೆಗೆ, ‘ಪಾಶ್ಚೂರಿಯಾ ಪೆನೆಟ್ರಾನ್ಸಬ್ಯಾಕ್ಟಿರಿಯಾ’(Pasteuria penetransbacteria) ನೆಮಾಟೋಡ್‍ಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ ‘ಸೂಡೋಮೋನಾಸ್’ ತಳಿ ಆಲೂಗಡ್ಡೆಯಲ್ಲಿ ಹಾನಿ ಮಾಡುವ ನೆಮಾಟೋಡ್ ವಿರುದ್ದ ಪ್ರತಿಜೀವಕಗಳನ್ನು ಸ್ರುಶ್ಟಿಸಿ ಅವುಗಳನ್ನು ಕೊಲ್ಲುತ್ತದೆ. ರೋಗಕಾರಕಗಳು ಯಾವುದೇ ಇರಲಿ, ಮಣ್ಣಿನ ಸೂಕ್ಶ್ಮಾಣು ಜೀವಿಗಳು ಸಸ್ಯಗಳನ್ನು ಅವುಗಳಿಂದ ಕಾಪಾಡುವ ಹಲವಾರು ವಿದಾನಗಳನ್ನು ಬೆಳೆಸಿಕೊಂಡಿವೆ.

ಜೈವಿಕ ಗೊಬ್ಬರಗಳ ಅನಿವಾರ‍್ಯತೆ

ಜಗತ್ತಿನ ಜನಸಂಕ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೆಚ್ಚುತ್ತಿರುವ ಈ ಜನಸಂಕ್ಯೆಗೆ ಆಹಾರ ಒದಗಿಸಲು ಸುರಕ್ಶಿತ, ಸುಸ್ತಿರ ಹಾಗೂ ಕಡಿಮೆ ಕರ‍್ಚಿನ ಕ್ರುಶಿ ವಿದಾನಗಳ ಅವಶ್ಯಕತೆ ತುಂಬಾ ಇದೆ. ಈ ನಿಟ್ಟಿನಲ್ಲಿ ಈ ಜೈವಿಕ ಗೊಬ್ಬರಗಳು ಅದ್ಬುತ ಪಾತ್ರ ವಹಿಸಬಲ್ಲವು. ಇವುಗಳು ನಮ್ಮ ಬೆಳೆಗಳನ್ನು ಬೆಳೆಸಿ ಕಾಪಾಡುವುದರ ಮೂಲಕ ನಮ್ಮ ಊಟದ ತಟ್ಟೆಗೆ ಸುರಕ್ಶಿತ ಪೋಶಕಾಂಶಗಳನ್ನು ಒದಗಿಸಬಲ್ಲವು. ಇದಲ್ಲದೆ ಜೈವಿಕ ಗೊಬ್ಬರಗಳು ರಾಸಾಯನಿಕ ಗೊಬ್ಬರಗಳಿಗೆ ಹೋಲಿಸಿದಾಗ ಅತ್ಯಂತ ಆರೋಗ್ಯಯುತ, ಸುಸ್ತಿರ ಹಾಗೂ ಕಡಿಮೆ ಕರ‍್ಚಿನವು. ಈ ನಿಟ್ಟಿನಲ್ಲಿ, ಇನ್ನು ಮುಂದೆ ನಿಮ್ಮ ತೋಟಕ್ಕಾಗಲಿ ಅತವಾ ಹೊಲಕ್ಕಾಗಲಿ ಹೋದಾಗ ರಾಸಾಯನಿಕ ಗೊಬ್ಬರ ಹಾಗೂ ಪೀಡೆನಾಶಕ ಹಾಕುವುದರ ಬದಲಿಗೆ ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳನ್ನು ಬಳಸುವ ಬಗ್ಗೆ ಯೋಚಿಸಿ ನೋಡಿ. ಪ್ರಕ್ರುತಿ ಇದ್ದರೆ ನಾವು, ಪ್ರಕ್ರುತಿಯ ರಕ್ಶಣೆಯೇ ನಮ್ಮ ರಕ್ಶಣೆ ಅಲ್ಲವೇ?

( ಚಿತ್ರ ಮತ್ತು ಮಾಹಿತಿ ಸೆಲೆ: pixabay.com , sarahs-world.blog , link.springer.com , akjournals.com , mdpi.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: