ಎನ್. ಲಿಂಗಪ್ಪ – ಕರ‍್ನಾಟಕದ ಹೆಮ್ಮೆಯ ದಿಗ್ಗಜ ಅತ್ಲೆಟಿಕ್ಸ್ ಕೋಚ್

– ರಾಮಚಂದ್ರ ಮಹಾರುದ್ರಪ್ಪ.

ಒಬ್ಬ ಆಟಗಾರ ಗೆಲುವು ಕಂಡು ದೊಡ್ಡ ಮಟ್ಟಕ್ಕೆ ತಲುಪಿ, ದೇಶಕ್ಕೆ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವಾರು ವರುಶಗಳ ನಿರಂತರ ಶ್ರಮ ಇದ್ದೇ ಇರುತ್ತದೆ. ಹಾಗೇ ಅವರ ಬೆಳವಣಿಗೆಯ ಹಿಂದೆ ನೆರಳಂತೆ ಸದಾ ಜೊತೆಗಿದ್ದು ಆಟವನ್ನುತಿದ್ದಿ-ತೀಡುವ ಕೋಚ್ ಗಳ ಮಾರ‍್ಗದರ‍್ಶನ ಕೂಡ ಯಶಸ್ಸಿನಲ್ಲಿ ಮುಕ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಅತ್ಲೆಟಿಕ್ಸ್ ನಲ್ಲಿ ಕೋಚ್ ರ ಮಹತ್ವ ಇನ್ನೂ ಹೆಚ್ಚಿರುತ್ತದೆ. ಹೀಗೆ ಅಂತರಾಶ್ಟ್ರೀಯ ಮಟ್ಟದ ಹಲವಾರು ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಬಾರತದ ಎಶ್ಟೋ ಆಟಗಾರರನ್ನು ಪೋಟಿಗೆ ಅಣಿ ಮಾಡಿದ ಕರ‍್ನಾಟಕದ ಹೆಮ್ಮೆಯ ದಿಗ್ಗಜ ಅತ್ಲೆಟಿಕ್ಸ್ ಕೋಚ್ ಹಾಗೂ ನಮ್ಮ ನಾಡಿನಿಂದ ಮೊದಲ ಬಾರಿಗೆ ಪ್ರತಿಶ್ಟಿತ ದ್ರೋಣಾಚಾರ‍್ಯ ಪ್ರಶಸ್ತಿ ಪಡೆದವರು ಎನ್.ಲಿಂಗಪ್ಪನವರು.

ಲಿಂಗಪ್ಪನವರ ಆಟದ ಮೊದಲ ದಿನಗಳು

ಏಪ್ರಿಲ್ 5, 1924 ರಂದು ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯಲ್ಲಿ ಲಿಂಗಪ್ಪನವರು ಹುಟ್ಟಿದರು. ಯುನೈಟೆಡ್ ಮಿಶನ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ನಾನಾ ಬಗೆಯ ಆಟಗಳಲ್ಲಿ ತೊಡಗಿ ಅವರು ಗಮನ ಸೆಳೆದರು. ಪ್ರೌಡ ಶಾಲೆ ತಲುಪುವ ಹೊತ್ತಿಗೆ ತ್ರೋ ಬಾಲ್, ಜಾವೆಲಿನ್ ತ್ರೋ, ಕ್ರಿಕೆಟ್, ಬಾಸ್ಕೆಟ್ ಬಾಲ್ ಹಾಗೂ ಪುಟ್‌ಬಾಲ್ ಆಟಗಳಲ್ಲಿ ಲಿಂಗಪ್ಪನವರು ನಿಪುಣತೆ ಸಾದಿಸಿದರು. ನಂತರ 1947 ರ ಯೂತ್ ಪೆಸ್ಟಿವಲ್ ನಲ್ಲಿ ಜಾವೆಲಿನ್ ತ್ರೋ ಪೋಟಿಯಲ್ಲಿ ಬಂಗಾರದ ಪದಕ ಗೆದ್ದು ಗಮನ ಸೆಳೆದರು. ಆ ಬಳಿಕ ಅದೇ ವರುಶ ಮೈಸೂರು ಒಲಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ತ್ರೋ ನಲ್ಲಿ ಬಂಗಾರ ಹಾಗೂ 5 ಕಿಮೀ ನಡಿಗೆಯಲ್ಲಿ ಕಂಚಿನ ಪದಕ ಗೆದ್ದರು. 1952 ರಲ್ಲಿ ಬಾರತ ಒಲಂಪಿಕ್ ಕ್ರೀಡಾಕೂಟ ಮದ್ರಾಸ್ ನಲ್ಲಿ ಜರುಗಿದಾಗ 10 ಕಿಮೀ ನಡಿಗೆಯಲ್ಲಿ ಲಿಂಗಪ್ಪನವರು ಮತ್ತೊಮ್ಮೆ ಕಂಚಿನ ಪದಕ ಗೆದ್ದರು. ಅಲ್ಲಿಂದ ಎರಡು ವರುಶಗಳ ಬಳಿಕ ದೆಹಲಿಯಲ್ಲಿ ನಡೆದ ನ್ಯಾಶನಲ್ ಗೇಮ್ಸ್ ನಲ್ಲಿ 10 ಕಿಮೀ ನಡಿಗೆಯಲ್ಲಿ ಬೆಳ್ಳಿ ಪದಕವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಈ ನಿರಂತರ ಪ್ರದರ‍್ಶನಗಳಿಂದ ಲಿಂಗಪ್ಪನವರು 1954 ರಲ್ಲಿ ಮನಿಲಾದಲ್ಲಿ ನಡೆಯಲಿದ್ದ ಏಶಿಯನ್ ಗೇಮ್ಸ್ ನಲ್ಲಿ ಬಾರತ ತಂಡದಲ್ಲಿ ಎಡೆ ಪಡೆದರು. ಆದರೆ ಕಡೇ ಗಳಿಗೆಯಲ್ಲಿ ನಡಿಗೆ ಪೋಟಿಗಳು ರದ್ದಾಗಿ ತೀವ್ರ ನಿರಾಸೆ ಅನುಬವಿಸಿದರು. ಕಡೆಗೆ 1957 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ್ ರಾಜ್ಯ ಕ್ರೀಡಾಕೂಟದಲ್ಲಿ ನಡಿಗೆಯಲ್ಲಿ ಇನ್ನೊಮ್ಮೆ ಕಂಚಿನ ಪದಕ ಗೆದ್ದು ಬೀಗಿದರು.

ಇಳಿ ವಯಸ್ಸಿನಲ್ಲೂ ಕೋಚ್ ಲಿಂಗಪ್ಪನವರ ಪದಕ ಬೇಟೆ

ಬೆಂಗಳೂರಿನ ಸರ‍್ಕಾರಿ ಕಾಲೇಜ್ ಒಂದರಲ್ಲಿ ಕೆಲಸ ಮಾಡುತ್ತಲೇ 1962/63 ರಲ್ಲಿ ದೈಹಿಕ ಶಿಕ್ಶಣದಲ್ಲಿ ಲಿಂಗಪ್ಪನವರು ಡಿಪ್ಲೊಮ ಪಡೆದರು. ಇದಕ್ಕೂ ಮುನ್ನ 1955/56 ರಲ್ಲೇ ರಾಜಕುಮಾರಿ ಅಮ್ರಿತಾ ಕೌರ್ ಕೋಚಿಂಗ್ ಯೋಜನೆ ಅಡಿ ತರಬೇತಿ ಪಡೆದು ವ್ರುತ್ತಿಪರ ಕೋಚ್ ಆಗುವತ್ತ ಅವರು ತಮ್ಮ ಮೊದಲ ಹೆಜ್ಜೆ ಇಟ್ಟಿದ್ದರು. ಕೋಚ್ ಗಳಿಗೆ ಬೇಕಾದ ಎಲ್ಲಾ ಹೊಸ ಚಳಕಗಳನ್ನೂ, ತಂತ್ರಗಾರಿಕೆಯನ್ನೂ ಮೈಗೂಡಿಸಿಕೊಂಡು ಒಬ್ಬ ಕೋಚ್ ಆಗಿ ಲಿಂಗಪ್ಪನವರು ಪಕ್ವವಾಗುತ್ತಾ ಹೋದರು. ಅಮೇರಿಕಾದ ಕೋಚ್ ಗಳ ಅಡಿಯಲ್ಲೂ ಹಲವಾರು ಕ್ಲಿನಿಕ್ ಹಾಗೂ ಕ್ಯಾಂಪ್ ಗಳಲ್ಲಿ ಪಾಲ್ಗೊಂಡು ಒಬ್ಬ ಪರಿಪೂರ‍್ಣ ಕೋಚ್ ಆದರು. ಹೆಚ್ಚು ಹುರುಪು, ಹುಮ್ಮಸ್ಸಿನಿಂದ ಬೆಂಗಳೂರಿನ ಅನೇಕ ವಿದ್ಯಾಸಂಸ್ತೆಗಳು, ಕ್ಲಬ್, ಪೊಲೀಸ್ ಹಾಗೂ ಅಂಚೆ ಇಲಾಕೆಯ ಅತ್ಲೀಟ್ ಗಳಿಗೆ ಲಿಂಗಪ್ಪನವರು ತರಬೇತಿ ನೀಡುತ್ತಾ ತಮ್ಮ ಕೋಚ್ ವ್ರುತ್ತಿಬದುಕು ಮೊದಲು ಮಾಡಿದರು. ತಮ್ಮ ಸದ್ರುಡ ಮೈ ಅಳವನ್ನು ಬಳಸಿಕೊಂಡು ಹಿರಿಯರ ಶಾಟ್ ಪುಟ್, ಡಿಸ್ಕಸ್ ಹಾಗೂ ಜಾವೆಲಿನ್ ಪಂದ್ಯಾವಳಿಗಳಲ್ಲಿ ಲಿಂಗಪ್ಪನವರು ಪಾಲ್ಗೊಳ್ಳುತ್ತಲೇ ಇದ್ದರು. ರಾಜ್ಯ ಹಾಗೂ ರಾಶ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡ ಮೇಲೆ 1987 ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತರಾಶ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ (60 ವರುಶ ಮೇಲ್ಪಟ್ಟವರ ಪೋಟಿ) ಸೆಣಸಿ ವಿವಿದ ಆಟಗಳಲ್ಲಿ ಒಟ್ಟು ಮೂರು ಬಂಗಾರದ ಪದಕಗಳನ್ನು ಗೆದ್ದರು. ಆ ಬಳಿಕ ಮಲೇಶಿಯಾದಲ್ಲಿ ನಡೆದ 70 ವರುಶ ಮೇಲ್ಪಟ್ಟವರ ಪೋಟಿಯಲ್ಲೂ ಸಹ ಇನ್ನೊಮ್ಮೆ ಮೂರು ಬಂಗಾರದ ಪದಕಗಳನ್ನು ನಿರಾಯಾಸವಾಗಿ ಗೆದ್ದರು. ಮುಂದೆ ಬೆಂಗಳೂರಿನಲ್ಲಿ ನಡೆದ ಏಶಿಯನ್ ಮಾಸ್ಟರ‍್ಸ್ ಕ್ರೀಡಾಕೂಟದಲ್ಲೂ ಒಂದು ಬಂಗಾರ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡು ಇಳಿ ವಯಸ್ಸಿನಲ್ಲೂ ಯುವಕರು ನಾಚುವಂತೆ ಪ್ರಾಬಲ್ಯ ಮೆರೆದರು.

ದಿಗ್ಗಜ ಕೋಚ್ ಆಗಿ ಬೆಳೆದ ಶಿಸ್ತಿನ ಸಿಪಾಯಿ

ಮೊದಲಿಗೆ 20 ವರುಶಗಳ ಕಾಲ ಸ್ಪೋರ‍್ಟ್ಸ್ ಅತಾರಿಟಿ ಆಪ್ ಇಂಡಿಯಾ (SAI) ದಲ್ಲಿ ಕೋಚ್ ಆಗಿ ದುಡಿದ ಲಿಂಗಪ್ಪನವರು, ಬಳಿಕ ಕಾಸಗಿ ಆಗಿ ಕೂಡ ತರಬೇತಿ ನೀಡುತ್ತಾ ಹೋದರು. ಕೋಲಾರದ ಪೊಲೀಸ್ ತಂಡಗಳಿಗೆ ತರಬೇತಿ ನೀಡುವುದರೊಟ್ಟಿಗೆ ಹಲವಾರು ಓಟಗಾರರನ್ನು ಅಣಿ ಮಾಡಿದರು. ಅವರ ಗರಡಿಯಲ್ಲಿ ಪಳಗಿದ ಹಲವಾರು ಮಂದಿ ಆಟಗಾರರು ರಾಶ್ಟ್ರೀಯ ಹಾಗೂ ಅಂತರಾಶ್ಟ್ರೀಯ ಮಟ್ಟದ ಪೋಟಿಗಳಲ್ಲಿ ಯಶಸ್ಸು ಕಂಡಿದ್ದಾರೆ. ಅವರಲ್ಲಿ, 1996 ರಲ್ಲಿ ಕೇಪ್ ಟೌನ್ ನಲ್ಲಿ ನಡೆದ ವರ‍್ಲ್ಡ್ ಕ್ರಾಸ್ ಕೌಂಟಿ ರೇಸ್ ನಲ್ಲಿ ಪಾಲ್ಗೊಂಡ ಎಲ್.ಮಂಜುಳಾ ಪ್ರಮುಕರು. ಸತತ ನಾಲ್ಕು ಒಲಂಪಿಕ್ಸ್ ಗಳಲ್ಲಿ – ಮೆಲ್ಬರ‍್ನ್ (1956), ರೋಮ್ (1960), ಟೋಕಿಯೋ (1964), ಮೆಕ್ಸಿಕೋ (1968), ಬಾರತ ತಂಡದ ಅತ್ಲೆಟಿಕ್ಸ್ ಕೋಚ್ ಆಗಿದ್ದ ಹೆಗ್ಗಳಿಕೆಯೊಂದಿಗೆ ಮೂರು ಏಶಿಯನ್ ಗೇಮ್ಸ್ ಗಳಲ್ಲಿ [ಜಕಾರ‍್ತ (1966), ಬ್ಯಾಂಗ್‌ಕಾಕ್ (1970) ಹಾಗೂ ತೆಹರೇನ್ (1974)], ಕೂಡ ಕೋಚ್ ಆಗಿ ಸೇವೆ ಸಲ್ಲಿಸಿ ಇತಿಹಾಸ ಬರೆದರು. ದಶಕಗಳಕಾಲ ಅಶ್ಟು ದೊಡ್ಡ ಮಟ್ಟದಲ್ಲಿ ಅವರ ಸೇವೆಯನ್ನು ಬಾರತ ತಂಡ ಪಡೆದದ್ದು ಲಿಂಗಪ್ಪನವರ ಕೋಚಿಂಗ್ ಅಳವಿಗೆ ಹಿಡಿದ ಕನ್ನಡಿ ಎಂದೇ ಹೇಳಬೇಕು. 1958 ರ ಕಾರ‍್ಡಿಪ್ ಗೇಮ್ಸ್ ನಲ್ಲೂ ಅವರು ಕೋಚ್ ಆಗಿದ್ದರು. ಹೆಂಗಸರ ತಂಡ, ಶಾಲೆ, ಕಾಲೇಜ್, ವಿಶ್ವವಿದ್ಯಾಲಯಗಳು, ಪೊಲೀಸ್ ತಂಡಗಳಾದಿಯಾಗಿ ಲಿಂಗಪ್ಪನವರು ದುಡಿಯದ ವಿಬಾಗಗಳೇ ಇಲ್ಲ ಎನ್ನಬಹುದು. ತಮ್ಮ ಕಾಸಗಿ ತರಬೇತಿಯ ವ್ರುತ್ತಿ ಬದುಕಿನಲ್ಲಿ ಯಾರಿಂದಲೂ ಒಂದು ರೂಪಾಯಿ ಪಡೆಯದೇ ನೂರಾರು ಗುಣಮಟ್ಟದ ಅತ್ಲೀಟ್ ಗಳನ್ನು ಹುಟ್ಟು ಹಾಕಿದ ಲಿಂಗಪ್ಪನವರ ನಿಸ್ವಾರ‍್ತ ಸೇವೆ ಇಂದು ನಮಗೆ ಪವಾಡದಂತೆ ಕಂಡರೆ ಅಚ್ಚರಿ ಇಲ್ಲ. ತಮ್ಮ ಗರಡಿಯಲ್ಲಿರುವ ಪ್ರತಿಯೊಬ್ಬ ಅತ್ಲೀಟ್ ನ ಪ್ರತಿಬೆಯನ್ನು ಪ್ರತ್ಯೇಕವಾಗಿ ಅರಿತು ಅದಕ್ಕೆ ತಕ್ಕಂತೆ ತರಬೇತಿ ನೀಡುತ್ತಿದ್ದ ಅವರ ಶೈಲಿ ಇಂದಿಗೂ ಯುವ ಕೋಚ್ ಗಳಿಗೆ ಮಾದರಿ. ಅವರಡಿ ಆಟದ ಪಟ್ಟುಗಳನ್ನು ಕಲಿತ ಹಲವಾರು ಆಟಗಾರರು ರಾಜ್ಯ ಹಾಗೂ ರಾಶ್ಟ್ರ ಮಟ್ಟದಲ್ಲಿ ಮಿಂಚಿದರೆ ಒಟ್ಟು 14 ಮಂದಿ ಅಂತರಾಶ್ಟ್ರೀಯ ಮಟ್ಟದಲ್ಲೂ ತಮ್ಮ ಚಾಪು ಮೂಡಿಸಿದರು. ಈ ಯಶಸ್ಸಿನ ಹಿಂದೆ ಲಿಂಗಪ್ಪನವರ ವರುಶಗಳ ಶ್ರಮವನ್ನು ಮರೆಯುವಂತಿಲ್ಲ. ಮ್ಯಾರತಾನ್ ಓಟಗಾರ ಡಿ.ವೈ. ಬಿರೇದಾರ್, ಸ್ಪ್ರಿಂಟರ್ ಗಳಾದ ಪಿ.ಸಿ ಪೊನ್ನಪ್ಪ, ಡೇವಿಡ್ ಪ್ರೇಮನಾತ್, ಉದಯ್ ಪ್ರಬು, ಎ.ಪಿ ರಾಮಸ್ವಾಮಿ, ಸುಂದರ್ ರಾಜ್ ಶೆಟ್ಟಿ, ರಾಬಿನ್ ಪಾಲ್, ವಂದನಾ ರಾವ್, ಅಶ್ವಿನಿ ನಾಚಪ್ಪ, ಮಿಡೆಲ್ ಡಿಸ್ಟೆನ್ಸ್ ಓಟಗಾರರಾದ ಉಮಾ ದೇವಿ, ಹರ‍್ಡ್ಲರ್ ಪಟು ಕೆ.ಸಿ ಶಂಕರ್, ಲಾಂಗ್ ಜಂಪರ್ ಸತೀಶ್ ಪಿಳ್ಳೈ, ಕ್ರಾಸ್ ಕಂಟ್ರಿ ಓಟಗಾರ‍್ತಿ ಮಂಜುಳಾ ಹಾಗೂ ವಾಲ್ಕರ್ ಪಟು ಪ್ರಾನ್ಸಿಸ್ ಕ್ಸೇವಿಯರ್ ಅವರ ಗರಡಿಯ ಹೆಸರುವಾಸಿ ಅಂತರಾಶ್ಟ್ರೀಯ ಆಟಗಾರರು. ಇಂದು ಅತ್ಲೆಟಿಕ್ಸ್ ನಲ್ಲಿ ಹೆಚ್ಚು ಡ್ರಗ್ಸ್, ಬ್ರಶ್ಟಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರ ಬಗ್ಗೆ ಟೀಕಿಸುವ ಲಿಂಗಪ್ಪನವರು, ಆಟಗಾರರಿಗೆ ಶ್ರಮ ಪಡದೆ, ಬೆವರು ಹರಿಸದೆ ಯಶಸ್ಸು ಪಡೆಯೋ ತುಡಿತವೇ ಇವೆಲ್ಲದಕ್ಕೆ ಕಾರಣ ಎನ್ನುತ್ತಾರೆ. ಮೊಳಕೆಯಲ್ಲಿ ಇವನ್ನು ಚಿವುಟಬೇಕು. ಅತ್ಲೀಟ್ ಗಳಿಗೆ ಎಳೆವೆಯಲ್ಲೇ ಆಟದ ನೇರ‍್ಮೆಯ ಬಗ್ಗೆ ಮನದಟ್ಟು ಮಾಡಿಸಿದರೆ ಬವಿಶ್ಯದಲ್ಲಿ ಆಟಕ್ಕೆ ಕಳಂಕ ತರುವ ಇಂತಹ ಮೋಸದ ಪ್ರಕರಣಗಳನ್ನು ತಡೆಗಟ್ಟಬಹುದು ಎಂಬುದು ಅವರ ಆಶಯ.

ಲಿಂಗಪ್ಪನವರಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು

1955 ರಿಂದ 2018 ರ ತನಕ ಸತತ 63 ವರುಶಗಳ ಕಾಲ ಕೋಚ್ ಆಗಿ ದುಡಿದ ಲಿಂಗಪ್ಪನವರಿಗೆ ಸರ‍್ಕಾರದಿಂದ, ಹಲವಾರು ಸಂಗ ಸಂಸ್ತೆಗಳಿಂದ ಸಾಕಶ್ಟು ಪ್ರಶಸ್ತಿ, ಪುರಸ್ಕಾರಗಳು ಒಲಿದು ಬಂದಿವೆ. ಅವುಗಳಲ್ಲಿ2014 ರಲ್ಲಿ ಬಾರತ ಸರ‍್ಕಾರದಿಂದ ಪಡೆದ ಪ್ರತಿಶ್ಟಿತ ದ್ರೋಣಾಚಾರ‍್ಯ ಪ್ರಶಸ್ತಿ ಪ್ರಮುಕವಾದುದು. ಕರ‍್ನಾಟಕ ರಾಜ್ಯ ಸರ‍್ಕಾರದಿಂದ ಜೀವಮಾನ ಸಾದನೆ ಪ್ರಶಸ್ತಿ, 1987 ರಲ್ಲಿ ದಸರಾ ಪ್ರಶಸ್ತಿ, 1994 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2002 ರಲ್ಲಿ ಕರ‍್ನಾಟಕ ಒಲಂಪಿಕ್ ಸಂಗದಿಂದ ಶ್ರೇಶ್ಟ ಕೋಚ್ ಪ್ರಶಸ್ತಿ, 2003 ರಲ್ಲಿ ಕೆಂಪೇಗೌಡ ಶ್ರೇಶ್ಟ ಕೋಚ್ ಪ್ರಶಸ್ತಿ, 2004 ರಲ್ಲಿ ಕರ‍್ನಾಟಕ ಚೇತನ ಪ್ರಶಸ್ತಿ ಹಾಗೂ 2014 ರಲ್ಲಿ ಕರ‍್ನಾಟಕ ಅಮೆಚರ್ ಅತ್ಲೆಟಿಕ್ ಸಂಸ್ತೆಯಿಂದ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರಿನ ಕಂಟೀರವ ಕ್ರೀಡಾಂಗಣ ಕಟ್ಟಡದ ಕೆಲಸ ಮೊದಲ್ಗೊಂಡ ದಿನಗಳಿಂದಲೂ ಅಲ್ಲಿನ ಆದಾರ ಸ್ತಂಬದಂತಿದ್ದು, ಹತ್ತಿರದಿಂದ ಎಲ್ಲವನ್ನೂ ನೋಡಿಕೊಂಡು, ಕ್ರೀಡಾಂಗಣವನ್ನೇ ತಮ್ಮ ಎರಡನೇ ಮನೆಯನ್ನಾಗಿ ಮಾಡಿಕೊಂಡು ನೂರಾರು ಆಟಗಾರರನ್ನು ಬೆಳಕಿಗೆ ತಂದ ಕನ್ನಡಿಗ ಲಿಂಗಪ್ಪನವರ ಸೇವೆ ಪ್ರತಿ ಒಬ್ಬ ಕನ್ನಡಿಗನಿಗೂ ತಿಳಿಯಬೇಕು. ತಮ್ಮ ಸ್ಕೂಟರ್ ನಲ್ಲಿ ಹೊರಟು ತಪ್ಪದೆ ಪ್ರತೀ ದಿನ ಮುಂಜಾನೆ 6ಕ್ಕೆ ಕಂಟೀರವ ಅಂಗಳ ತಲುಪಿ ಏನನ್ನೂ ಎದುರುನೋಡದೆ ಆಟಗಾರರಿಗೆ ತರಬೇತಿ ನೀಡುತ್ತಿದ್ದ ಅವರ ಬದುಕು ಒಂದು ದಂತಕತೆ ಎಂದರೆ ತಪ್ಪಾಗಲಾರದು. 95 ವರುಶಗಳ ಸಾರ‍್ತಕ ಬದುಕು ನಡೆಸಿದ ಲಿಂಗಪ್ಪನವರು ಜೂನ್ 18, 2019 ರಂದು ನಮ್ಮನ್ನೆಲ್ಲ ಅಗಲಿದರು. ಆದರೆ ಅತ್ಲೆಟಿಕ್ಸ್ ಇರುವ ತನಕ ಈ ದಿಗ್ಗಜ ಕನ್ನಡಿಗನ ಹೆಸರು ಅಜರಾಮರ ಎಂಬುದು ದಿಟ!

(ಚಿತ್ರ ಸೆಲೆ: edubilla.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: