ಮನಿಲಾದ ಐಶಾರಾಮಿ ಸಮಾದಿಗಳು

– .

ಹೆಚ್ಚಾಗಿ ಸಮಾದಿ, ಸ್ಮಶಾನವೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಸಾಮಾನ್ಯವಾಗಿ ಕುರುಚಲು ಗಿಡಗಳಿಂದ ತುಂಬಿದ, ಸ್ವಚ್ಚವಿರದ ಪ್ರದೇಶವೆಂದರೆ ಅದು ಸ್ಮಶಾನ. ಸಾಮಾನ್ಯವಾಗಿ ನಗರದ ಊರಿನ ದಕ್ಶಿಣ ಬಾಗದಲ್ಲಿ ಸ್ಮಶಾನಗಳಿರುತ್ತವೆ. ಎಲ್ಲೆಲ್ಲಿ ಸತ್ತವರ ದೇಹವನ್ನು ಚಿತೆಗೆ ಅರ‍್ಪಿಸಲಾಗುತ್ತದೋ ಅಲ್ಲಿ ಯಾವುದೇ ರೀತಿಯಾದ ಸ್ಮಾರಕಗಳು ಇರುವುದಿಲ್ಲ. ಆದರೆ ಯಾವ ಸ್ಮಶಾನದಲ್ಲಿ ಸತ್ತವರ ದೇಹವನ್ನು ಹೂಳಲಾಗುತ್ತದೋ ಅಲ್ಲೆಲ್ಲಾ ಸತ್ತವರ ನೆನಪಿಗಾಗಿ ಹಾಗೂ ಗುರುತಿಸಲು ಸಾದ್ಯವಾಗುವಂತೆ ಸಮಾದಿಯನ್ನು, ಅವರವರ ಗನತೆಗೆ ತಕ್ಕಂತೆ ನಿರ‍್ಮಿಸುವುದನ್ನು ಕಾಣಬಹುದು. ವರ‍್ಶಕ್ಕೆ ಒಂದೆರೆಡು ಬಾರಿ ಸಮಾದಿಗೆ ಬೇಟಿ ನೀಡಿ ಗೌರವ ಸಮರ‍್ಪಣೆ ಮಾಡುವ ಸಂಪ್ರದಾಯ ಬಹಳಶ್ಟು ದರ‍್ಮಗಳಲ್ಲಿವೆ.

ಐಶಾರಾಮಿ ಬಡಾವಣೆಯಂತಿರುವ ಮನಿಲಾದ ಸಮಾದಿಗಳು

ಪಿಲಿಪೈನ್ಸ್ ರಾಜದಾನಿ ಮನಿಲಾದಲ್ಲಿರುವ ಸ್ಮಶಾನ ಈ ಎಲ್ಲಾ ಅನಿಸಿಕೆಗಳಿಗೆ ವ್ಯತಿರಿಕ್ತವಾಗಿದೆ. ಇಲ್ಲಿರುವುದು ಸಾಂಪ್ರದಾಯಿಕ ಸಮಾದಿಗಳಲ್ಲ. ಬದಲಿಗೆ ಯಾರೂ ಊಹಿಸಲಾಗದಂತಹ ಐಶಾರಾಮಿ ಸಮಾದಿಗಳು. ಈ ಸಮಾದಿಗಳ ಸೊಬಗನ್ನು ನೋಡಿಯೇ ಆನಂದಿಸಬೇಕು. ಈ ಸ್ಮಶಾನದ ಒಳ ಹೋದಾಗ, ಅತ್ಯಂತ ಸುಸಜ್ಜಿತ ಹಾಗೂ ಬಹಳ ಅಚ್ಚುಕಟ್ಟಾಗಿ ಯೋಜಿಸಲಾದ ಬಡಾವಣೆಯನ್ನು ಹೊಕ್ಕ ಅನುಬವ ಆಗುತ್ತದೆ. ಈ ಬಡಾವಣೆಯಲ್ಲಿನ ಮನೆಗಳ ಸೊಬಗನ್ನು ವೀಕ್ಶಿಸುತ್ತಾ ಸಾಗಿದರೆ, ಇದು ನಿಜಕ್ಕೂ ಸ್ಮಶಾನವೇ? ಎಂಬ ಅನುಮಾನ ಮೂಡುವುದರಲ್ಲಿ ಕಂಡಿತವಾಗಿಯೂ ಆಶ್ಚರ‍್ಯವೇನಿಲ್ಲ.

19ನೇ ಶತಮಾನದ ಅಂತ್ಯದಲ್ಲಿ ನಿರ‍್ಮಾಣಗೊಂಡ ಈ ಐಶಾರಾಮಿ ಬಡಾವಣೆ ಚೀನೀಯರಿಗಾಗಿ ಇರುವ ಸ್ಮಶಾನ. ಈ ಸ್ಮಶಾನವನ್ನು “ಲಿಟಲ್ ಬೆವರ‍್ಲಿ ಹಿಲ್ಸ್” ಎಂದೂ ಕರೆಯಲಾಗುತ್ತದೆ. ಇದಕ್ಕೆ ಐಶಾರಾಮಿ ಎಂಬ ಗುರುತು ಅಂಟಲು ಮೂಲ ಕಾರಣ ಇಲ್ಲಿರುವ ಸಮಾದಿಗಳ ಬವ್ಯತೆ ಮತ್ತು ಅದಕ್ಕೆ ವ್ಯಯಿಸಿರುವ ಸಂಪತ್ತು. ಕೆಲವೊಂದು ಸಮಾದಿಗಳು ಎರಡು ಮೂರು ಅಂತಸ್ತಿನ ವಿಲ್ಲಾಗಳಂತಿವೆ. ಇದರ ಜೊತೆಗೆ ಅದರಲ್ಲಿ ವಾಸಿಸಲು ಅವಶ್ಯವಿರುವ ಪೂರ‍್ಣ ಸೌಕರ‍್ಯವನ್ನು ಹೊಂದಿರುವುದು ವಿಶೇಶ. ಸ್ಪ್ಯಾನಿಶ್ ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಪಿಲಿಪೈನ್ಸ್ ನಲ್ಲಿನ ಕ್ಯಾತೋಲಿಕ್ ಸ್ಮಶಾನಗಳಲ್ಲಿ ಕಳೇಬರಗಳನ್ನು ಸಮಾದಿ ಮಾಡಲು ಚೀನೀಯರಿಗೆ ಅವಕಾಶ ಇರಲಿಲ್ಲ. ಚೀನೀಯರು ಅಂದಿನ ಸಮಯದಲ್ಲಿ ಮನಿಲಾದ ಅತ್ಯಂತ ಶ್ರೀಮಂತರಲ್ಲಿ ಮಂಚೂಣಿಯಲ್ಲಿದ್ದರು. ಹಣದ ಬಲ ಮತ್ತು ಸಂಗಟನೆಯ ಶಕ್ತಿಪ್ರದರ‍್ಶನ ಮಾಡಲು ಬೇರೆಯದೇ ಜಾಗದಲ್ಲಿ, ಸ್ಪ್ಯಾನಿಶ್ ವಸಾಹತುಶಾಹಿಗೆ ಸೆಡ್ಡು ಹೊಡೆಯುವಂತೆ, ಅತ್ಯಂತ ಐಶಾರಾಮಿ ಸ್ಮಾರಕ ಸ್ಮಶಾನಗಳನ್ನು ಚೀನೀಯರು ನಿರ‍್ಮಿಸಿದರು.

ಇಲ್ಲಿನ ಬಹುತೇಕ ಸಮಾದಿಗಳು ಹವಾನಿಯಂತ್ರಿತ ವ್ಯವಸ್ತೆ ಹೊಂದಿವೆ!

ಮನಿಲಾದಲ್ಲಿರುವ ಈ ಐಶಾರಾಮಿ ಸ್ಮಶಾನಕ್ಕೆ ನೀವು ಬೇಟಿ ನೀಡಿದ್ದೇ ಆದಲ್ಲಿ, ಮನಿಲಾದ ಆಡಂಬರದ ಉಪನಗರ ಹೊಕ್ಕಂತಾಗುತ್ತದೆ. ಎರಡೂ ಬದಿಯಲ್ಲಿ ವಾಹನ ಚಲಾಯಿಸಲು ಸಾಕಶ್ಟು ಸ್ತಳಾವಕಾಶವಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಎರಡು ಮೂರು ಅಂತಸ್ತಿನ ಮನೆಯಂತಹ ಸಮಾದಿಗಳನ್ನು ಕಾಣಬಹುದು. ಇದರಲ್ಲಿ ಬಹುತೇಕ ಸಮಾದಿಗಳು ಹವಾನಿಯಂತ್ರಿತ ವ್ಯವಸ್ತೆ ಹೊಂದಿವೆ. ಸದಾಕಾಲ ಬಿಸಿ ಅತವಾ ತಂಪಾದ ನೀರು ಲಬ್ಯವಿರುವ ಸ್ನಾನಗ್ರುಹಗಳು, ವಿಶ್ರಾಂತಿ ಕೊಟಡಿಗಳು  ಇಲ್ಲಿ ಲಬ್ಯವಿವೆ. ಕೆಲವು ವಸತಿ ಸಂಕೀರ‍್ಣಗಳಂತಿವೆ. ಇನ್ನು ಕೆಲವು ಕಟ್ಟಡಗಳಲ್ಲಿ ನಿವಾಸಿಗಳಿದ್ದು, ಯಾವುದೇ ಸಮಸ್ಯೆಯಿಲ್ಲದೆ ಅವರುಗಳು ಸತ್ತವರ ಸಮಾದಿಯ ಜೊತೆ ಸ್ತಳವನ್ನು ಹಂಚಿಕೊಂಡಿದ್ದಾರೆ. ಸ್ಪ್ಯಾನಿಶ್ ವಸಾಹತುಗಾರರು ಕ್ಯಾತೋಲಿಕ್ ಸ್ಮಶಾನಗಳನ್ನು ಬಳಸದಂತೆ ಚೀನೀಯರಿಗೆ ತಡೆಯೊಡ್ಡಿದಾಗ, ಚೀನಾದ ವಾಣಿಜ್ಯ ಸಮುದಾಯವು ಸಾಂಪ್ರದಾಯಿಕವಲ್ಲದ ಸ್ಮಶಾನವನ್ನು ತಮ್ಮದೇ ಆದ ಜಾಗದಲ್ಲಿ ಸ್ತಾಪಿಸಿತು. ಇಲ್ಲಿ ಚೀನೀಯರು ತಮ್ಮ ಆಸೆ ಅಬಿಲಾಶೆಯಂತೆ, ತಮ್ಮ ಪ್ರೀತಿ ಪಾತ್ರರ ಮರಣಾನಂತರದ ಜೀವನವೂ ಆರಾಮವಾಗಿರಲಿ ಎಂಬ ಬಾವನೆಯಿಂದ, ಹಣವನ್ನು ಸುರಿದು ಸಮಾದಿಗಳನ್ನು ವೈಬವೋಪೂರಿತವಾಗಿ ನಿರ‍್ಮಿಸಿದರು. ಆದರೆ ಚೀನೀ ಸಮುದಾಯದವರು ಮಕ್ಕಳು ಮರಣಿಸಿದರೆ, ಅವರಿಗಾಗಿ ಸಮಾದಿಯನ್ನು ನಿರ‍್ಮಿಸುತ್ತಿರಲಿಲ್ಲ. ಬದಲಿಗೆ ಮಕ್ಕಳ ಕಳೇಬರವನ್ನು ಸುಟ್ಟು, ಚಿತಾಬಸ್ಮವನ್ನು ಕರಂಡಿಕೆಯಲ್ಲಿ ಶೇಕರಿಸಿ ಸ್ಮಶಾನದ ಒಳಗೆ ಒಂದು ಅನನ್ಯ ಸ್ತಳದಲ್ಲಿ ಇರಿಸುತ್ತಿದ್ದರು.

ಸ್ಮಶಾನದಲ್ಲಿವೆ ಎಲ್ಲಾ ಆದುನಿಕ ಸೌಲಬ್ಯಗಳು

ಈ ಸಮಾದಿ ಮನೆಗಳು ಆರಾಮದಾಯಕ ಮತ್ತು ಐಶಾರಾಮಿ ವ್ಯವಸ್ತೆ ಹೊಂದಿವೆ, ಅಲ್ಲಿಗೆ ಬೇಟಿ ನೀಡುವ ಸಂಬಂದಿಗಳು ಶಾಶ್ವತವಾಗಿ ಅಲ್ಲೇ ವಾಸಿಸಲು ಇಶ್ಟಪಡುವುದರಲ್ಲಿ ಆಶ್ಚರ‍್ಯವೇನಿಲ್ಲ. ಇಲ್ಲೇ ವಾಸಿಸುತ್ತಿರುವ ಕೆಲವು ನಿವಾಸಿಗಳು ತಾವು ಹುಟ್ಟಿದಾಗಿಂದ ಇಲ್ಲೇ ಇರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮೇಲೆ ಹೇಳಿದಂತೆ ಇದೊಂದು ಯೋಜನಾಬದ್ದವಾದ ಬಡಾವಣೆ. ಇಲ್ಲಿ ವಿದ್ಯುತ್, ನೀರು, ಒಳಚರಂಡಿ ವ್ಯವಸ್ತೆ, ದೂರವಾಣಿ ಮಾರ‍್ಗಗಳು, ಸೆಲ್ಯುಲಾರ್ ಸಂಪರ‍್ಕ, ವೈ-ಪೈ ಮತ್ತು ಸ್ತಳೀಯ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಆದುನಿಕ ಸೌಲಬ್ಯಗಳು ಲಬ್ಯವಿವೆ. ಈ ಎಲ್ಲಾ ಸೌಕರ‍್ಯದಿಂದಾಗಿ, ಹಿರಿಯರ ಸಮಾದಿಗೆ ಅಪರೂಪಕ್ಕೊಮ್ಮೆ ಬೇಟಿ ನೀಡುವ ಸಂಬಂದಿಕರಿಗೆ ಬಹಳವೇ ಅನುಕೂಲಕರವಾಗಿರುತ್ತದೆ. ವಾರಾಂತ್ಯದಲ್ಲಿ ಅವರುಗಳು ಇಲ್ಲೇ ಉಳಿಯಲೂಬಹುದು.

ಇಲ್ಲಿ ಸ್ಮಶಾನದ ಸ್ತಳವನ್ನು ಬಾಡಿಗೆಗೆ ಸಹ ಪಡೆಯಬಹುದು!

ಇಂದಿಗೂ ಈ ಸ್ಮಶಾನದ ಬಡಾವಣೆಯಲ್ಲಿ ಸತ್ತವರ ಸಂಪತ್ತಿಗೆ ಸಮನಾದ ಆಡಂಬರದ ಸಮಾದಿಗಳನ್ನು ನಿರ‍್ಮಿಸಲಾಗುತ್ತಿದೆ. ಈ ಬಡಾವಣೆಯಲ್ಲಿ, ಸಮಾದಿ ಸ್ತಳವನ್ನು ಬಾಡಿಗೆಗೆ ನೀಡುವ ಸೌಕರ‍್ಯ ಸಹ ಇದೆ. ಒಂದು ಸ್ಮಶಾನದ ಬಾಡಿಗೆ 25 ವರ‍್ಶಕ್ಕೆ ಸರಿ ಸುಮಾರು 5 ಕೋಟಿ ಪೆಸೊಗಳಶ್ಟಾಗಿದೆ(ಅಂದಾಜು 7.4 ಕೋಟಿ ರೂಪಾಯಿಗಳು). ಇಶ್ಟು ದೀರ‍್ಗ ಸಮಯದ ನಂತರ ಮತ್ತೆ 5 ಕೋಟಿ ಪೆಸೊ ನೀಡಿ ನವೀಕರಿಸಬಹುದಾದ ಸೌಲಬ್ಯ ಸಹ ಇದೆ. ಇಲ್ಲವಾದಲ್ಲಿ ಸಮಾದಿಯನ್ನು ಬೇರೆಡೆಗೆ ಸ್ತಳಾಂತರಿಸಿಕೊಳ್ಳಬಹುದು. ಸ್ಮಶಾನದ ಈ ಬಡಾವಣೆಯಲ್ಲಿ ಚೊಂಗ್ ಹಾಕ್ ಟಾಂಗ್ ಎಂಬ ಪ್ರಸಿದ್ದ ದೇವಾಲಯವಿದೆ. ಇದು ಮನಿಲಾದ ಅತ್ಯಂತ ಹಳೆಯ ಚೀನೀ ದೇವಾಲಯ. ಎರಡನೇ ಮಹಾ ಯುದ್ದದಲ್ಲಿ ಜಪಾನಿ ಸೈನಿಕರಿಂದ ಹತರಾದ ಚೀನೀ ನಾಯಕರನ್ನು ಗೌರವಿಸಲು 1950ರಲ್ಲಿ ‘ಹುತಾತ್ಮರ ಸಬಾಂಗಣ’, 1968ರಲ್ಲಿನ ಬೀಕರ ಬೂಕಂಪನದಲ್ಲಿ ಸತ್ತ ಚೀನೀ ಮೂಲದವರ ಸ್ಮರಣಾರ‍್ತ ತಲೆಯೆತ್ತಿರುವ ‘ರೂಬಿ ಸ್ಮಾರಕ’ ಈ ಬಡಾವಣೆಯ ಹೆಗ್ಗುರುತುಗಳಾಗಿವೆ. ಒಟ್ಟಿನಲ್ಲಿ ಈ ಸಮಾದಿಗಳು ತಮ್ಮ ಈ ಎಲ್ಲಾ ವಿಶೇಶತೆಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿವೆ.

(ಮಾಹಿತಿ ಮತ್ತು ಚಿತ್ರ ಸೆಲೆ: amusingplanet.com , fabulousphilippines.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: