ವಿದಿಯಾಟದ ಪಾತ್ರದಾರಿ

– .

ಬಾರತೀಯ ಮಹಾಕಾವ್ಯದ ರಚನೆಯ ಹಿಂದಿನ ಮೇರು ಪರ‍್ವತದಂತಹ ಪ್ರತಿಬೆಯುಳ್ಳ ವಾಲ್ಮೀಕಿ ಮುನಿಗಳ ವಿರಚಿತ ರಾಮಾಯಣ ಕ್ರುತಿಯಲ್ಲಿ ಆಕಸ್ಮಾತ್ ನಾನೇನಾದರೂ “ಸೌಮಿತ್ರಿಯ(ಲಕ್ಶ್ಮಣ) ಪಾತ್ರವಾಗಿದ್ದಿದ್ದರೆ”?

“ನಾನು ರಗುವಂಶದ ಅಜ ಮಹಾರಾಜ – ಇಂದುಮತಿಯರ ಮೊಮ್ಮಗನಾಗಿ, ದಶರತ – ಸುಮಿತ್ರೆಯರ ಮಗನಾಗಿ, ಶತ್ರುಗ್ನ – ಬರತರಿಗೆ ಹಿರಿಯನಾದರೂ ಸಹ ಸಾದು ಜನರ ಮಿತ್ರನು,‌ ದೀರನು, ಶೂರನು, ವೀರನು, ಗಂಬೀರನು, ಸದ್ಗುಣ ಸಾರನು, ಅಂಜಿಸುವವರನ್ನೇ ಅಂಜಿಸುವವನು, ಹಸುಗೂಸಿನ ಮನಸಿನವನು, ಪಿತ್ರುವಾಕ್ಯ ಪರಿಪಾಲನೆಗಾಗಿ ಅರಸುತನ ತೊರೆದವನು, ಕೆಟ್ಟ ಕನಸಿನಿರುಳ ಕಳೆಯುವ ಸುಪ್ರಬಾತನು, ಗುರುಸಿದ್ದರೆ ಮೆಚ್ಚಿರುವ ಸನ್ಮಂಗಳ ಮೂರ‍್ತಿಯಾದ ಶ್ರೀರಾಮಚಂದ್ರನ ಅನುಜನಾಗಿ(ತಮ್ಮ) ಅನುಕ್ಶಣವು ಎಡೆಬಿಡದೇ ಅವನೊಡನೆ ಇರುವಂತಹ ಬಾಗ್ಯ ನನ್ನದು.

ಅಣ್ಣ ಹಾಗೂ ನನ್ನನ್ನು ಮೋಹಿಸಿ ಬಂದ ರಾಕ್ಶಸಿ ಶೂರ‍್ಪನಕಿಯನ್ನು ಶಾಂತಚಿತ್ತದಿಂದ ಸಮಾದಾನಿಸಿ ಸಂತೈಸಿ ಕಳಿಸದೆ, ಅವಳ ಕಿವಿ ಮೂಗು ಕತ್ತರಿಸಿ ಅವಮಾನ ಮಾಡಿದ್ದು ಮುಂದಾಗುವ ಮಹಾಕೆಡುಕಿಗೆ ಮೂಲಕಾರಣವಾಗುತ್ತಿರಲಿಲ್ಲ. ಆದದ್ದು ಆಗಿಹೋಯಿತು ಮುಂದೇನು ಮಾಡುವುದು ಎಂದು ಚಿಂತಿಸುವ ಸಮಯದಲ್ಲಿಯೇ ಅಂದು ನಾನೇನಾದರೂ ಮಾಯಾವಿ ರಾವಣನು ಮಾರೀಚನನ್ನು ಮಾಯಾ ಜಿಂಕೆಯನ್ನಾಗಿಸಿ ಸೀತೆಯ ಮನವನು ಸೂರೆಗೊಳ್ಳುವಂತೆ ಮಾಡಿದಾಗ, ಜಿಂಕೆಯ ಮೇಲಿನ ಮೋಹದಿಂದ ಅತ್ತಿಗೆ ಅಣ್ಣನಿಗೆ ಆ ಜಿಂಕೆ ನನಗೆ ಬೇಕೆಂದು ಹಿಡಿದು ತರುವಂತೆ ಕಳಿಸಿದಾಗ, ನಾನು ಬಹಳ ಜಾಗ್ರತೆಯಿಂದಿರಬೇಕಿತ್ತು. ಮಾಯಾ ಜಿಂಕೆಯು ಮಾಯಾವಿತನವೆಂದು, ಶ್ರೀರಾಮನ ಪರಾಕ್ರಮದ ಬಗ್ಗೆ ನನಗೆ ಗೊತ್ತಿದ್ದರೂ ಕೂಡ ಅತ್ತಿಗೆಯ ಕೆಲವು ಮಾತುಗಳಿಂದ ಮನನೊಂದು ಅಸಹಾಯಕನಾಗಿ ಮರುಮಾತಿಲ್ಲದೆ, ಅತ್ತಿಗೆಗೆ ನಾನು ಹಾಕಿದ ಮೂರು ಗೆರೆಗಳನ್ನು ದಾಟಿ ಹೊರಗೆ ಬರಬಾರದೆಂದು ಸೂಚಿಸಿ, ಜಿಂಕೆ ಅರಸಿ ಹೊರಟ ಅಣ್ಣನನ್ನೇ ಹಿಂಬಾಲಿಸಿ ತಪ್ಪು ಮಾಡಿಬಿಟ್ಟೆ.

ಅಂದು ನಾನು ಅತ್ತಿಗೆಯ ಮಾತುಗಳಿಗೆ ಕಿವಿಗೊಡದೆ ಅವಳ ಕಾವಲಿಗೆ ನಿಂತಿದ್ದಿದ್ದರೆ, ಇಲ್ಲವೇ ಅತ್ತಿಗೆಯನ್ನು ಗೌಪ್ಯ ಸ್ತಳದಲ್ಲಿರಿಸಿ, ಅವಳ ರಕ್ಶಣೆಗಾಗಿ ನನ್ನ ಮಂತ್ರ ಬಲದಿಂದ ಸೀತಾದೇವಿಯ ಮತ್ತೊಂದು ರೂಪವನ್ನು ಸ್ರುಶ್ಟಿಸಿದ್ದರೆ ಸೀತಾಪಹರಣವೇ ನಡೆಯುತ್ತಿರಲಿಲ್ಲ. ಸೀತಾ ವಿಮೋಚನೆಗೆ ರಾಮ-ರಾವಣರ ನಡುವೆ ಯುದ್ದವಾಗುತ್ತಿರಲಿಲ್ಲ. ಲಕ್ಶಾಂತರ ಅಮಾಯಕರ ಬಲಿಯಾಗುತ್ತಿರಲಿಲ್ಲ, ಲಂಕಾದಹನವಾಗುತ್ತಿರಲಿಲ್ಲ. ಆದರೇನು ಮಾಡುವುದು ವಿದಿಯಾಟದ ನಿಯಮದಂತೆ ನಾನು ಪಾತ್ರದಾರಿಯಾಗಿ ಅಬಿನಯಿಸಲೇಬೇಕಿತ್ತು. ಇಂದ್ರಜಿತುವಿನ ಸಂಹಾರ ಮಾಡಲೇಬೇಕಿತ್ತು. ಮೂರ‍್ಚೆಗೊಂಡಾಗ ಹನುಮ ಚಿಕಿತ್ಸೆಗೆ ಸಂಜೀವಿನಿ ಪರ‍್ವತವನ್ನು ಹೊತ್ತು ತರಲು ಕಾರಣೀಬೂತನಾಗಬೇಕಿತ್ತು. ರಾಮ-ಸೀತೆಯ ಪುನರಾಗಮನದ ನಂತರ ಮರಳಿ ಕಾಡಿಗೆ ತುಂಬು ಗರ‍್ಬಿಣಿ ಅತ್ತಿಗೆಯನ್ನು ಏಕಾಂಗಿ ಬಿಟ್ಟು ಬರುವ ಪಾಪ ಕ್ರುತ್ಯಕ್ಕೆ ಕಾರಣವಾಗಬೇಕಿತ್ತು. ಸೋದರ ವಾತ್ಸಲ್ಯಕ್ಕೆ ನಾನೊಂದು ಉದಾಹರಣೆಯಾಗಬೇಕಿತ್ತು.”

ಹಾಗಾಗಿ ನಾವುಗಳು  ದುಡುಕಿನ ನಿರ‍್ದಾರದಿಂದ ಹಿಂದೆ ಸರಿಯದಿದ್ದರೆ ಮುಂದೆ ಆಗುವ ಗಟನೆಗಳಿಗೆ ನಾವುಗಳೇ ಕಾರಣವೆಂಬ ಸತ್ಯ ಅರಿತು ಜೀವನದಲ್ಲಿ ಸದಾಕಾಲ ತಾಳ್ಮೆಯಿಂದ ಬಾಳಬೇಕಲ್ಲವೇ?

(ಚಿತ್ರ ಸೆಲೆ: wikimedia.org  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: