ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ.

ಬಂದಗಳ ಬಂದುತ್ವವನು
ಬೆಂದು ಬೆಸೆಯುವ
ಬಡತನದ ಬಂದಿ ನಾನು
ನೊಂದು ನಂದಿರುವ
ನೂರಾರು ನೊಂದ ಮನಗಳ
ಕಂದೀಲಿನ ಬೆಳಕು ನಾನು

ಅಂದು ಇಂದಿನ
ಇಂದು ಅಂದಿನ
ಮುಂದುಮುಂದಿನ ಹೂ ನಾನು
ಹೊಂದಿ ಬದುಕುವ
ಹಂದಿ ನಾಯಿಗಳ
ಗೊಂದು ಹತ್ತಿದ ಪಾಪಿ ನಾನು

ಹೊದ್ದು ಮಲಗಲು
ಗೆದ್ದು ಬೀಗಲು
ಬಿದ್ದು ಎದ್ದಿರುವ ಬುದ್ದು ನಾನು
ಮದ್ದು ಮೆದ್ದಿರುವ
ರದ್ದಿ ಕಾಗದದ
ಹಳೆಯ ಹಳತು ಸುದ್ದಿ ನಾನು

ನಾಳೆ ಕನಸುಗಳು
ಹಾಗೆ ಮುನಿಸುಗಳು
ಚುಚ್ಚಿ ಕೊಂದಿಹ ದೇಹ ನಾನು
ಸಿಡಿಲ ಸಿಡಿತಕೆ
ಮುಗಿಲ ಮೊರೆತಕೆ
ಮೀರಬಲ್ಲ ದ್ವನಿಯು ನಾನು

ಅಜಾತಿ ಜ್ಯೋತಿಗೆ
ಜೀತಕೆರಗುತ
ಜೋತು ಜೀಕುವ ಜ್ವಾಲೆ ನಾನು
ಜಗದ ದುಗುಡವ
ದೂರ ದೂಡುವ
ಜಾಗ್ರುತ ಮನದ ಬೆಂಕಿ ಹೂ ನಾನು

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: