ಸೋಮಾರಿತನದಿಂದ ಒಳಿತಾಗುವುದೇ?

– ವಿಜಯಮಹಾಂತೇಶ ಮುಜಗೊಂಡ.

ಕ್ರಿಸ್ ಬೇಲಿ ಅವರು Hyperfocus: How to Be More Productive in a World of Distraction ಪುಸ್ತಕದ ಬರಹಗಾರರು. ಅವರು ಮಾಡುಗತನದ(productivity) ಕುರಿತಂತೆ ಹಲವಾರು ಹೊತ್ತಗೆಗಳನ್ನು ಬರೆದಿದ್ದಾರೆ. ಅಚ್ಚರಿಯ ಮಾತೆಂದರೆ ಮಾಡುಗತನದ ಸುತ್ತ ಅರಕೆ(research) ಮಾಡಿರುವ ಕ್ರಿಸ್, ತಾವು ಒಬ್ಬ ಸೋಮಾರಿ ಎಂದು ಹೇಳಿಕೊಳ್ಳುತ್ತಾರೆ. “ಕೆಲಸದಿಂದ ಬಿಡುವಿದ್ದಾಗ ಮನೆಯಿಂದ ಹೊರಹೋಗುವ ಬದಲು ಹೆಚ್ಚಾಗಿ ಮನೆಯಲ್ಲೇ ಉಳಿದುಕೊಂಡು, ಓದುವುದು, ಇಲ್ಲವೇ ಪಿಜ್ಜಾ ತಿಂದು ದಿನಗಳೆಯಲು ಬಯಸುತ್ತೇನೆ. ಹಾಗೆ ನೋಡಿದರೆ ಸೋಮಾರಿತನವೇ ನನ್ನ ಮಾಡುಗತನವನ್ನು ಹೆಚ್ಚಿಸುತ್ತದೆ. ಅರಿಮೆಯ ಹಿನ್ನೆಲೆಯಿಂದ ನೋಡಿದರೂ ಇದು ದಿಟ” ಎನ್ನುತ್ತಾರೆ ಕ್ರಿಸ್.

ಕೆಲಸದಲ್ಲಿ ತೊಡಗಿಸಿಕೊಳ್ಳದೇ ಸುಮ್ಮನೆ ಕುಳಿತಾಗ ಬೇಡವಾದ ಯೋಚನೆಗಳು ನಮ್ಮ ತಲೆಯಲ್ಲಿ ಸೇರಿಕೊಳ್ಳುತ್ತವೆ. ದಿಟವಾಗಿ ಹೇಳುವುದಾದರೆ, ಸೋಮಾರಿತನ ಎಂದರೆ ಇಲ್ಲಸಲ್ಲದ ವಿಶಯಗಳನ್ನು ತಲೆಗೆ ತುಂಬಿಸಿಕೊಂಡು ಚಿಂತೆ ಮಾಡುತ್ತ ಕೂರುವುದಲ್ಲ. ಯಾವುದೇ ಕೆಲಸವನ್ನು ಮಾಡದೇ ಹಾಗೆಯೇ ಸುಮ್ಮನೆ ಕಾಲ ಕಳೆಯುವುದು. ಇಂತಹ ಹೊತ್ತಿನಲ್ಲಿ ನಾವು ಯಾವುದಾದರೂ ಕೆಲಸ ಮಾಡಲು ತುಡಿಯುತ್ತಿರುತ್ತೇವೆ. ಹಲವಾರು ಹೊತ್ತಗೆಗಳನ್ನು ಓದುವುದು, ಕಂಪ್ಯೂಟರ್ ಮುಂದೆ ಕೂತು ಮಿಂಚೆ ನೋಡುವುದು, ಸುದ್ದಿ ಓದುವುದು, ಪೇಸ್‌ಬುಕ್ ಇಲ್ಲವೇ ಬೇರೆ ಮಿಂದಾಣಗಳನ್ನು ಸುಮ್ಮನೇ ತಡಕಾಡುತ್ತಿರುತ್ತೇವೆ. ಇಂತಹ ಕೆಲಸಗಳು ಮಾನಸಿಕವಾಗಿ ನಮ್ಮನ್ನು ಇನ್ನಶ್ಟು ಹೈರಾಣಾಗಿಸುತ್ತವೆ.

ಕೆಲಸ ಮಾಡುವ ಹೊತ್ತಿನಲ್ಲಿ ನಮ್ಮ ಗಮನ ಕೆಲಸದ ಮೇಲಿರುತ್ತದೆ ಇಲ್ಲವೇ ಅರೆಮನಸ್ಸಿನಿಂದ ಕೆಲಸ ಮಾಡುತ್ತಿರುತ್ತೇವೆ. ಕೆಲಸ ಇಲ್ಲದಿರುವ ಬಿಡುವಿನ ಹೊತ್ತಿನಲ್ಲಿ ನಮ್ಮ ಗಮನ ಕೆಲವೊಮ್ಮೆ ಹಿಡಿತದಲ್ಲಿದ್ದರೆ, ಇನ್ನೂ ಕೆಲವೊಮ್ಮೆ ನಮ್ಮ ಗಮನ ಅಶ್ಟಾಗಿ ಹಿಡಿತದಲ್ಲಿರುವುದಿಲ್ಲ. ಹಲವು ಸಲ ನಮಗೆ ಗೊತ್ತಿಲ್ಲದಂತೆಯೇ ಏನೇನೋ ಯೋಚನೆ ಮಾಡುತ್ತಿರುತ್ತೇವೆ. ಮಾಡುವ ಕೆಲಸದ ಮೇಲೆ ಪೂರ‍್ತಿಯಾಗಿ ನಮ್ಮ ಗಮನ ಇದ್ದರೆ, ಮಾಡುಗತನ ಹೆಚ್ಚು ಎಂದು ಹೇಳಬಹುದು. ಗಮನ ಹಿಡಿತದಲ್ಲಿ ಇಲ್ಲದಿರುವಾಗ ನಾವು ಹೊಸತೇನನ್ನಾದರೂ ಮಾಡಬೇಕೆಂದು ತುಡಿಯುತ್ತಿರುತ್ತೇವೆ.

ಹೊಸತೇನನ್ನಾದರೂ ಹುಟ್ಟುಹಾಕುವಂತಹ ಸ್ರುಜನಶೀಲ ಯೋಚನೆಗಳು ಬರುವುದು ಯಾವುದೇ ಕೆಲಸವನ್ನು ಅರೆಮನಸ್ಸಿನಿಂದ ಮಾಡುತ್ತಿರುವಾಗ, ಇಲ್ಲವೇ ಮಾಡಲು ಯಾವುದೇ ಕೆಲಸವಿಲ್ಲದಿರುವಾಗ! ನೀವು ಮಾಡಿರುವ/ಮಾಡುತ್ತಿರುವ ಹೊಸ ಕೆಲಸದ ಕುರಿತ ಮೊಟ್ಟಮೊದಲ ಹೊಳಹು ಯಾವಾಗ ಮೂಡಿತು ಎಂದು ಒಮ್ಮೆ ಯೋಚಿಸಿ ನೋಡಿ. ಸುಮ್ಮನೆ ಕುಳಿತಿರುವಾಗ, ಸ್ನಾನದ ಕೋಣೆಯಲ್ಲಿದ್ದಾಗ, ಎಲ್ಲಿಗಾದರೂ ಹೋಗುತ್ತಿರುವಾಗ, ಊಟ-ತಿಂಡಿ ಮಾಡುತ್ತಾ ಸುಮ್ಮನೇ ಹರಟುತ್ತಿರುವಾಗಲೇ ಹೊಸ ಆಲೋಚನೆಗಳು ಮತ್ತು ಹೊಳಹುಗಳು ಮೂಡಿರುತ್ತವೆ. ಮಾಡುಗತನ ಬೇಡುವ ಕೆಲಸಗಳಲ್ಲಿ ಹೆಚ್ಚು ಗಮನವಿಟ್ಟು ತೊಡಗಿಸಿಕೊಂಡಾಗ ಹೊಸ ಬಗೆಯ ವಿಚಾರಗಳು ಮನಸ್ಸಿನಲ್ಲಿ ಮೂಡುವುದಿಲ್ಲ.

ಕೆಲಸದಲ್ಲಿ ತೊಡಗಿಕೊಂಡಾಗ ಹೊಸ ಯೋಚನೆಗಳು ಯಾಕೆ ಹೊಳೆಯುವುದಿಲ್ಲ. ಕೆಲಸದಲ್ಲಿ ತೊಡಗಿಕೊಂಡಾಗ ಮತ್ತು ತೊಡಗಿಕೊಳ್ಳದೇ ಇದ್ದಾಗ ನಮ್ಮ ಗಮನ ಹೇಗೆ ಕೆಲಸ ಮಾಡುತ್ತದೆ? ಈ ಬಗ್ಗೆ ಇನ್ನಶ್ಟು ವಿಶಯಗಳು ಮುಂದಿನ ಬರಹದಲ್ಲಿ.

(ಮಾಹಿತಿ ಮತ್ತು ಚಿತ್ರ ಸೆಲೆ: time.com, wedowe.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks