ಕಾಸ್ಕಾಟಾ ಡೆಲ್ಲೆ ಮಾರ‍್ಮೋರ್ ಜಲಪಾತ

– .

ಕಾಸ್ಕಾಟಾ ಡೆಲ್ಲ ಮಾರ‍್ಮೋರ್ ಜಲಪಾತವಿರುವುದು ಇಟಲಿಯ ಉಂಬ್ರಿಯಾ ಪ್ರದೇಶದಲ್ಲಿ. ಟೆರ‍್ನಿ ನಗರದಿಂದ ಪೂರ‍್ವಕ್ಕೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ. ಮಾರ‍್ಮೋರ್ ಪಾಲ್ಸ್ ಎಂದು ಕರೆಯಲ್ಪಡುವ ಈ ಜಲಪಾತ ಮೂರು ಹಂತಗಳ ಮನಮೋಹಕ ಜಲಪಾತವಾಗಿದೆ. ಮಾರ‍್ಮೋರ್ ಜಲಪಾತವು ಪ್ರಕ್ರುತಿ ಮತ್ತು ಮಾನವನ ಸಹಯೋಗದಿಂದ ಮಿಳಿತವಾದ ಚಿತ್ತಾಕರ‍್ಶಕ ಹಾಗೂ ಬವ್ಯತೆಯಿಂದ ಕೂಡಿದ ಜಲಪಾತವಾಗಿದೆ.

ಈ ಜಲಪಾತದ ಹಿನ್ನೆಲೆ

ಈ ಜಲಪಾತದ ವೈಶಿಶ್ಟ್ಯವೆಂದರೆ, ಎರಡು ಸಾವಿರದ ಎರಡು ನೂರು ವರ‍್ಶಗಳ ಹಿಂದೆ ಈ ಜಾಗದಲ್ಲಿ ಯಾವುದೇ ಜಲಪಾತ ಇರಲಿಲ್ಲ ಎಂಬುದು. ಈ ಜಲಪಾತವು ವೆಲಿನೋ ನದಿಯ ಹರಿವಿನಿಂದ ಉಂಟಾಗಿದೆ. ಮೊದಲಿಗೆ ವೆಲಿನೋ ನದಿಯು, ಬೇರೆಯದೇ ದಿಕ್ಕಿನಲ್ಲಿ ಹರಿದು ರೈಟಿಯ ಜೌಗು ಪ್ರದೇಶದಲ್ಲಿ ಕೊನೆಗೊಳ್ಳುತ್ತಿತ್ತು. ಇಲ್ಲಿ ನಿಂತ ನೀರು ನಿಶ್ಚಲವಾದ ಕಾರಣ, ಅನಪೇಕ್ಶಿತ ಕ್ರಿಮಿಗಳಿಂದ ತುಂಬಿ, ಕಲುಶಿತಗೊಂಡು, ಅನಾರೋಗ್ಯಕ್ಕೆ ಮೂಲವಾಯಿತು. ಸುತ್ತ ಮುತ್ತಲಿನ ಜನರ ಮೇಲೆ ಇದರ ಪರಿಣಾಮವನ್ನು ಮನಗಂಡ ರೋಮನ್ ಕಾನ್ಸಲ್ ಮ್ಯಾನಿಯಸ್ ಕ್ಯೂರಿಯಸ್ ಡೆಂಟಟಸ್, ಈ ಜೌಗು ಪ್ರದೇಶದಲ್ಲಿ ನಿಶ್ಚಲವಾಗಿ ನಿಂತ ನೀರನ್ನು ಬರಿದು ಮಾಡಲು, ಕ್ಯೂರಿಯಾನೋ ಟ್ರೆಂಚ್ ಎಂಬ ಕಾಲುವೆಯನ್ನು ನಿರ‍್ಮಿಸುವಂತೆ ಕ್ರಿ.ಪೂ 271 ರಲ್ಲಿ ಆದೇಶಿಸಿದ. ಅದರಂತೆ ಕಾಲುವೆಯ ಮೂಲಕ ಹರಿದು ಬಂದ ನೀರು, ಮಾರ‍್ಮೋರ್ ಎಂಬ ನೈಸರ‍್ಗಿಕ ಕಣಿವೆಯಲ್ಲಿ ಹರಿದು, ಕಣಿವೆಯ ಕೆಳಗಿನ ‘ನೇರಾ’ ನದಿಯನ್ನು ಸೇರುವಂತೆ ಯೋಜನೆ ರೂಪಿಸಲಾಯಿತು. ಈ ಯೋಜನೆಯೂ ನಿರೀಕ್ಶಿತ ಪಲಿತಾಂಶ ನೀಡಲಿಲ್ಲ. ವೆಲಿನೋ ನದಿಯಲ್ಲಿ ನೀರು ಹೆಚ್ಚಾದಾಗ, ರೈಟಿ ಜೌಗು ಪ್ರದೇಶಕ್ಕೆ ನೀರಿನ ಹರಿವು ಹರಿಯಲು ಪ್ರಾರಂಬವಾಯಿತು. ಹೀಗೆ ಮಾನವ ನಿರ‍್ಮಿತ ಕಾಲುವೆಯಲ್ಲಿ ಹರಿದ ನೀರು ರೈಟಿ ಕಣಿವೆ ಮತ್ತು ಅದರ ಅವಳಿ ಕಣಿವೆ ಟೆರ‍್ನಿಯಲ್ಲಿ ಪ್ರವಾಹವನ್ನು ಸ್ರುಶ್ಟಿಮಾಡಿತು. ಇದರಿಂದ ರೈಟಿ ಹಾಗೂ ಟೆರ‍್ನಿ ಕಣಿವೆಯ ನಿವಾಸಿಗಳ ನಡುವೆ ಮನಸ್ತಾಪ ಉಂಟಾಗಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಈ ತೊಂದರೆಯಿಂದ ಪಾರಾಗಲು, ಟೆರ‍್ನಿ ನಿವಾಸಿಗಳು ಮಾನವ ನಿರ‍್ಮಿತ ಕಾಲುವೆಯನ್ನು ಮುಚ್ಚುವಂತೆ ಆಗ್ರಹಿಸಲು ಶುರುಮಾಡಿದರು. ಆದರೆ ರೈಟಿ ಕಣಿವೆಯ ನಿವಾಸಿಗಳು ಜೌಗು ಪ್ರದೇಶದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಲು, ಮಾನವ ನಿರ‍್ಮಿತ ಕಾಲುವೆಯಲ್ಲಿ ಇನ್ನೂ ಹೆಚ್ಚು ನೀರನ್ನು ಹರಿಯುವಂತೆ ಮಾಡಲು ಅಪೇಕ್ಶಿಸಿದ್ದರು. ಈ ಸಮಸ್ಯೆ ಉಲ್ಬಣಗೊಂಡು, ಕೊನೆಗೆ ಈ ವ್ಯಾಜ್ಯವನ್ನು ಕ್ರಿ.ಪೂ 54 ರಲ್ಲಿ ರೋಮನ್ ಸೆನೆಟ್ ಇತ್ಯರ‍್ತಗೊಳಿಸಲು ಪ್ರಯತ್ನಿಸಿತು. ಅಲ್ಲೂ ಒಮ್ಮತದ ಅಬಿಪ್ರಾಯಾಕ್ಕೆ ಬರಲು ಸಾದ್ಯವಾಗಲಿಲ್ಲ. ಶತಮಾನಗಳು ಉರುಳಿದರೂ ಇದು ಬಗೆಹರಿಯದ ವಿವಾದವಾಗಿತ್ತು.

ನೆನೆಗುದಿಗೆ ಬಿದ್ದ ಯೋಜನೆ

ರೋಮನ್ ಸಾಮ್ರಾಜ್ಯದ ಪತನದ ನಂತರ, ಈ ವ್ಯಾಜ್ಯ ನೆನೆಗುದಿಗೆ ಬಿದ್ದಿತು. ನಿರ‍್ವಹಣೆಯ ಕೊರತೆಯಿಂದ ಮಾನವ ನಿರ‍್ಮಿತ ಕಾಲುವೆಯಲ್ಲಿ ಹೂಳು ತುಂಬಲು ಶುರುವಾಯಿತು. ರೈಟಿ ಮತ್ತೆ ಯತಾಸ್ತಿತಿಗೆ ತಲುಪಿ ಅಲ್ಲಿ ನೀರು ಶೇಕರಣೆಯಾಗಲು ಪ್ರಾರಂಬವಾಯಿತು. ಇದರಿಂದ ಪ್ರವಾಹ ಸಹ ಉಂಟಾಗಿ ಸುತ್ತ ಮುತ್ತಲಿನ ಪ್ರದೇಶದವರಿಗೆ ಬಹಳ ನಶ್ಟವಾಗತೊಡಗಿತು.

16ನೇ ಶತಮಾನದಿಂದ 18ನೇ ಶತಮಾನದವರೆಗೆ ನಡೆದ ಸುದಾರಣೆ

16ನೇ ಶತಮಾನದ ಮದ್ಯದಲ್ಲಿ ಪೋಪ್ ಜಾನ್ ಪಾಲ್ III ಇಲ್ಲಿ ಸುದಾರಣಾ ಕ್ರಮ ಕೈಗೊಂಡರು. ನೀರಿನ ಹರಿವನ್ನು ನಿಯಂತ್ರಿಸಲು ಕವಾಟುಗಳನ್ನು ಸ್ತಾಪಿಸಲಾಯಿತು. ಹೀಗೆ ಮುಂದುವರೆದ ಸುದಾರಣಾ ಕಾರ‍್ಯ, 18ನೇ ಶತಮಾನದ ಕೊನೆಯಲ್ಲಿ ಪೋಪ್ ಪಯಸ್ VI ಸೂಚನೆಯ ಮೇರೆಗೆ ಆಂಡ್ರಿಯಾ ವಿಸಿ ಎಂಬ ವಾಸ್ತು ಶಿಲ್ಪಿ, ಈ ಜಲಪಾತಕ್ಕೆ ಪ್ರಸ್ತುತ ನೋಟವನ್ನು ನೀಡಿ, ಹೊಂದಾಣಿಕೆ ಮಾಡಿ, ಶಾಶ್ವತ ಪರಿಹಾರಕ್ಕಾಗಿ ಶ್ರಮಿಸಿದರು. ಎರಡು ಶತಮಾನಗಳ ಕಾಲ ಯಾವುದೇ ಕ್ರಮ ಜರುಗಿಸದೆ ನಿಶ್ಕ್ರಿಯವಾಗಿದ್ದ ಈ ಜಲಪಾತದ ಪ್ರವಾಹ ಸಮಸ್ಯೆಯನ್ನು ಆಂಡ್ರಿಯಾ ವಿಸಿಗೆ ನಿವಾರಿಸಲು ಸಾದ್ಯವಾಗಿದ್ದು, ವೆಲಿನೋ ನದಿಯ ಬದಿಯಲ್ಲಿ ಜಲ ವಿದ್ಯುತ್ ಸ್ತಾವರವನ್ನು ಸ್ತಾಪಿಸಿದ್ದರಿಂದ. ಜಲಪಾತಕ್ಕೆ ಹೋಗಬೇಕಿದ್ದ ಹೆಚ್ಚುವರಿ ನೀರು ಇಲ್ಲಿ ಉಪಯೋಗಕ್ಕೆ ಬಂದಿತು. ಇದರಿಂದ ನೀರಿನ ಹರಿವು ನಿಯಂತ್ರಣಕ್ಕೆ ಬಂದಿತು. ಅದಾಗ್ಯೂ ನದಿಯ ನೀರನ್ನು ಪ್ರತಿ ದಿನ ಎರಡು ಬಾರಿ ಜಲಪಾತಕ್ಕೆ ಬಿಡುಗಡೆ ಮಾಡುವ ವ್ಯವಸ್ತೆ ಮಾಡಲಾಗಿದೆ. ಪ್ರತಿ ಬಾರಿ ಒಂದು ಗಂಟೆಯ ಕಾಲ ಅಂದರೆ 12:00 ರಿಂದ 13:00 ರ ನಡುವೆ ಮತ್ತು ನಂತರ 16:00 ರಿಂದ 17:00 ರ ನಡುವೆ ಮಾತ್ರ. ರಜಾ ದಿನಗಳಲ್ಲಿ ಹಾಗೂ ಪ್ರವಾಸಿಗರು ಹೆಚ್ಚಾಗಿ ಆಗಮಿಸಿದ ದಿನಗಳಲ್ಲಿ, ಅವರ ಮನರಂಜನೆಗಾಗಿ ಹೆಚ್ಚು ಕಾಲ ನೀರನ್ನು ಬಿಡುಗಡೆ ಮಾಡಲು ಈಗ ಕ್ರಮಕೈಗೊಳ್ಳಲಾಗಿದೆ. ಮಾರ‍್ಮೋರ್ ಜಲಪಾತವು ಒಟ್ಟು 165 ಮೀಟರ್ (541 ಅಡಿ)ಎತ್ತರವಾಗಿದೆ. ಇದರಲ್ಲಿ ಮೂರು ಬಾಗಗಳಲ್ಲಿ ನೀರು ದುಮ್ಮಿಕ್ಕುತ್ತದೆ. ಮೊದಲನೆಯ ಬಾಗವು ಒಟ್ಟು ಎತ್ತರದಲ್ಲಿ ಅರ‍್ದ ಬಾಗ ಅಂದರೆ, 83 (272 ಅಡಿ) ಮೀಟರ‍್ಗಳಶ್ಟು ಎತ್ತರವಾಗಿದ್ದರೆ, ಎರಡನೇ ಹಾಗೂ ಮೂರನೇ ಬಾಗಗಳು ಉಳಿದರ‍್ದ ಎತ್ತರವನ್ನು ಹಂಚಿಕೊಂಡಿವೆ.

(ಮಾಹಿತಿ ಮತ್ತು ಚಿತ್ರಸೆಲೆ : europeanwaterfalls.com, umbriatourism.it, bellaumbria.net, dreamdiscoveritalia.com, usefultravelarticles.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: