ಬಿಟ್ ಕಾಯಿನ್: ಕುತೂಹಲಕಾರಿ ಸಂಗತಿಗಳು

– ನಿತಿನ್ ಗೌಡ.

ಸಾಟಿ ಪದ್ದತಿಯಿಂದ (ತೆರು/ barter system) ಹಿಡಿದು ಡಿಜಿಟಲ್ ಕರೆನ್ಸಿಯವರೆಗೂ “ದುಡ್ಡು” ಬಹಳ ದೊಡ್ಡ ಹಾದಿ‌ ಸವೆಸಿದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ದಿನಕಳೆದಂತೆ  ಕ್ರಿಪ್ಟೋಕರೆನ್ಸಿಗಳು ಹೆಚ್ಚು ಬೇಗನೆ ಮುನ್ನೆಲೆಗೆ‌ ಬರುತ್ತಿದ್ದಾವೆ. ದುಡ್ಡಿನ ಕೊಡುಕೊಳ್ಳುವಿಕೆಯಲ್ಲಿ ಯಾವುದೇ ಆಳ್ವಿಕೆ(ಸರಕಾರ), ಹಣಮನೆ(ಬ್ಯಾಂಕ್) ಇತ್ಯಾದಿಯವರ‌ ಮದ್ಯಸ್ತಿಕೆಯಿಲ್ಲದೇ ಬ್ಲಾಕ್‌ಚೈನ್ ಚಳಕವನ್ನು‌ ತಳಹದಿಯಾಗಿಟ್ಟುಕೊಂಡು, ಅದರ ಒಂದು ಬಗೆಯ ಬಳಕವಾಗಿ(application) ಆಗಿರುವವೇ ಕ್ರಿಪ್ಟೋಕರೆನ್ಸಿಗಳು. ಇದಕ್ಕೆ ಮುನ್ನುಡಿ ಬರೆದಿದ್ದು “ಬಿಟ್ ಕಾಯಿನ್”. ಇದನ್ನು ಡಿಜಿಟಲ್ ಚಿನ್ನ ಅನ್ನುತ್ತಾರೆ. 2009ರಲ್ಲಿ ಸತೋಶಿ ನಾಕಮೋಟೋ (Satoshi Nakamoto – ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ) ಎಂಬುವರ ವೈಟ್ ಪೇಪರ್ ಮೂಲಕ ಬಿಟ್ ಕಾಯಿನ್ ಜಗತ್ತಿಗೆ ತೆರೆದುಕೊಂಡಿತು. 2010ರಲ್ಲಿ ಇದರ ಬೆಲೆ 0.008$(3.66 ಪೈಸೆ) ಇಂದ 0.08$ (3 ರೂ 66 ಪೈಸೆ)ಗೆ ತಲುಪಿತು. 2011ರಲ್ಲಿ 1$ ಮತ್ತು ಇಂದಿಗೆ 57,683$ (42,82,568 ರೂ!!).

ಅಂದರೆ  2010ರಲ್ಲಿ ಮೂರೂವರೆ ಪೈಸೆ ಹೂಡಿಕೆ  ಮಾಡಿದ್ದರೆ ಇಂದಿಗೆ 43ಲಕ್ಶ!! ಬಹುಶಹ ಯಾವ ಬಗೆಯ ಶೇರುಮಾರುಕಟ್ಟೆಯೂ ಹತ್ತು-ಹನ್ನೊಂದು ವರುಶಕ್ಕೆ ಈ ಬಗೆಯ ಲಾಬ ಕೊಟ್ಟಿರಲಿಕ್ಕಿಲ್ಲ. ಬಿಟ್ ಕಾಯಿನ್ ಬಗೆಗಿನ ಇಂತಹುದೇ ಕೆಲವು ಸೋಜಿಗದ ಸಂಗತಿಗಳು ಇಲ್ಲಿವೆ.

  • ಜಗತ್ತಿನಲ್ಲಿ ಒಟ್ಟು 21ಮಿಲಿಯನ್( 2 ಕೋಟಿ 10ಲಕ್ಶ) ಬಿಟ್ ಕಾಯಿನ್ ಗಳನ್ನು ಮಾತ್ರ ಮೈನ್ ಮಾಡಬಹುದು. ಅಂದರೆ ಒಟ್ಟು 21ಮಿಲಿಯನ್ ಬಿಟ್‌ಕಾಯಿನ್ ಮಾತ್ರ ಚಲಾವಣೆಯಲ್ಲಿ ಇರಲು ಸಾದ್ಯ. ಅದರ ನಂತರ ಬೇಡಿಕೆ ಹೆಚ್ಚಾದಂತೆ ಪೂರೈಕೆ ಇಲ್ಲದಾಗಿ, ಇರುವ ಬಿಟ್ ಕಾಯಿನ್ ಬೆಲೆ ಇನ್ನೂ ಏರುತ್ತಾ ಸಾಗುತ್ತದೆ.
  • ಈಗಾಗಲೇ ಶೇ90 ರಶ್ಟು (18.8ಮಿಲಿಯನ್) ಬಿಟ್ ಕಾಯಿನ್ ಮೈನ್ ಆಗಿದೆ. ಹೀಗಿದ್ದೂ ಇನ್ನು ಉಳಿದ 2.2 ಮಿಲಿಯನ್ ಬಿಟ್ ಕಾಯಿನ್ ಮೈನ್ ಆಗಲು 120(2140 ಇಸವಿ) ವರುಶ ಬೇಕು. ಪ್ರತೀ ನಾಲ್ಕು ವರುಶಕ್ಕೆ ಮೈನ್ ಮಾಡಬಹುದಾದ ಬಿಟ್‌ಕಾಯಿನ್ ಸಂಕ್ಯೆ ಅರ‍್ದಕ್ಕೆ ಮೊಟಕಾಗಲಿದ್ದು, ಈ ಕಾರಣಕ್ಕಾಗಿ ಕೊನೆಯ ಬಿಟ್ ಕಾಯಿನ್ ಪಡೆಯಲು ಇನ್ನೂ 120 ವರುಶ ಕಾಯಬೇಕು. ಬಹುಶಹ ಕೊನೆಯ ಬಿಟ್ ಕಾಯಿನ್ ಮೈನ್ ಆಗಿದ್ದನ್ನು ನೋಡಲು ನಮ್ಮಲ್ಲಿ ಯಾರು ಇರುತ್ತಾರೋ ಏನೋ 🙂
  • ಬಿಟ್‌ಕಾಯಿನಿನಾ ಮೊದಲ‌‌ ವ್ಯಾಪಾರ ವಹಿವಾಟು, ಪೀಜಾ(Pizza) ಕೊಂಡುಕೊಂಡಿರುವುದಾಗಿದೆ. ಹೌದು, ಮೇ 22 2010ರಂದು ಲಾಸ್ಲೋ ಹ್ಯಾನಿಯೇಚ್ಜ್ (Laszlo Hanyecz) ಅವರು ಹತ್ತು ಸಾವಿರ ಬಿಟ್ ಕಾಯಿನ್‍‍‍‍ಗಳನ್ನು ಬಳಸಿ ಅಂದಿಗೆ $41 ಬೆಲೆಯಿದ್ದ ಎರಡು ಪಾಪ ಜಾನ್ಸ್ ಪೀಜಾ ಕೊಂಡಿದ್ದರು. ಈ ದಿನವನ್ನು ಇಂದಿಗೂ ಬಿಟ್‍ಕಾಯಿನ್ ಪೀಜಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದಿಗೆ  10,000 ಬಿಟ್ ಕಾಯಿನ್ ಬೆಲೆ  4300ಕೋಟಿ ರೂ!
  • 2021ರ ನವೆಂಬರ್ ಮೊದಲಿಗೆ ಬಿಟ್ ಕಾಯಿನ್ ಮಾರುಕಟ್ಟೆ ಹರವು  $1.18 ಟ್ರಿಲಿಯನ್(trillion) ಅಂದರೆ ಅಂದಾಜು ಬಾರತದ ಹಣಕಾಸು ಮಾರುಕಟ್ಟೆಯ ಮೂರನೇ ಒಂದು ಬಾಗದಶ್ಟಿತ್ತು.
  • ಬಿಟ್ ಕಾಯಿನ್ ವಿಳಾಸವನ್ನು ಯಾವುದಾದರು ಸಾಪ್ಟ್ ವಾಲೆಟ್ ಇಲ್ಲವೇ ಹಾರ‍್ಡ್ ವಾಲೆಟ್ ನಲ್ಲಿ ಉಳಿಸಲಾಗುತ್ತದೆ. ಅಂದರೆ ನಮಗೆ ಎರಡು ಕೀಲಿಗಳನ್ನು( ಬಹುದೊಡ್ಡ ಅಂಕಿ) ನೀಡಲಾಗುತ್ತದೆ. ಇದರಲ್ಲಿ ಒಂದು ಕಾಸಗಿ ಕೀ, ಇದನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು ಮತ್ತೊಂದು ಪಬ್ಲಿಕ್ ಕೀ. ಒಂದು ವೇಳೆ ಕಾಸಗಿ ಕೀ ಅಂಕೆಯನ್ನು ನಾವು ಮರೆತಲ್ಲಿ ನಾವು ನಮ್ಮ ಬಿಟ್ ಕಾಯಿನ್ ಆಸೆ ಬಿಡಬೇಕು. ಅಂದರೆ ಅದು ನಮ್ಮ ಕೈ ತಪ್ಪಿದಂತೆ! ಕಾಸಗೀ ಕೀ ಇನ್ನೊಬ್ಬರಿಗೆ  ದೊರೆತರೂ ಕೂಡ ನಮ್ಮ ಬಿಟ್ ಕಾಯಿನ್ ಅನ್ನು ಆನ್ಲೈನ್ ನಲ್ಲಿ ಕಳುವು ಮಾಡಬಹುದು. ಪಬ್ಲಿಕ್ ಕೀ, ಇದು ನಾವು ಬಿಟ್ ಕಾಯಿನ್ ವಹಿವಾಟಿಗೆ, ಕಳುಹಿಸಲು ಮತ್ತು ಇನ್ನೊಬ್ಬರಿಂದ ಪಡೆಯಲು ಬಳಸಲಾಗುತ್ತದೆ. ಇದನ್ನು ಎಲ್ಲರಿಗೂ ತೋರಿಸಬಹುದು.   
  • ಜಗತ್ತಿನ 20% ಬಿಟ್ ಕಾಯಿನ್ ಗಳು ಕಳೆದು ಹೋಗಿದ್ದಾವೆ ಅತವಾ ಅವುಗಳು ಮರಳಿಪಡೆಯಲು ಸಾದ್ಯವಾಗದಂತ ವಾಲೆಟ್ ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾವೆ. ಇಂದಿಗೆ( ಈ ಸೆಪ್ಟೆಂಬರ್) ಅದು  ಸುಮಾರು 37. 6ಲಕ್ಶ BTCಗೆ ಸಮ. ಇದರಲ್ಲಿ ಸತೋಶಿ ನಾಕಮೋಟೋ ಬಳಿಯೇ ಹನ್ನೊಂದು ಲಕ್ಶ ಬಿಟ್ ಕಾಯಿನ್ ಇದೆ.
  • ಬ್ಲಾಕ್‍ಚೈನ್(Blockchain.com) ಮಿಂದಾಣದ ಪ್ರಕಾರ 2009 ರಿಂದ ಇಲ್ಲಿಯವರೆಗೆ ಒಟ್ಟೂ ಅಂದಾಜು 6,86,00,000 (686 ಮಿಲಿಯನ್ ಅತವಾ 6 ಕೋಟಿ 86 ಲಕ್ಶ) ಬಿಟ್ ಕಾಯಿನ್ ವಹಿವಾಟುಗಳು ನಡೆದಿವೆ. 
  • ಇಂದಿಗೆ, ಇಂದಿನ ಬೆಲೆಗನುಸಾರ ಅಂದಾಜು ಒಂದು ಲಕ್ಶ ಬಿಟ್ ಕಾಯಿನ್ ಮಿಲೇನಿಯರ್ ( ಲಕ್ಶಾದಿಪತಿ ) ಗಳು ಇರಬಹುದು ಎಂದು ಅಂದಾಜಿಸಲಾಗಿದೆ.
  • ಜನವರಿ 2021 ರ ಹೊತ್ತಿಗೆ  ಜಗತ್ತಿನಲ್ಲಿ ಒಟ್ಟು  14,000  ಬಿಟ್‌ಕಾಯಿನ್ ಎ.ಟಿ.ಮ್ ಗಳು ಬಳಕೆಯಲ್ಲಿದ್ದವು.
  • ಬಿಟ್ ಕಾಯಿನ್ ಜಾಲವು(ನೆಟ್‍‍ವರ‍್ಕ್) ಸರಾಸರಿ ಅಮೇರಿಕಾದ ವಾಶಿಂಗ್‍ಟನ್ ಡಿ.ಸಿ ರಾಜ್ಯ ವರುಶಕ್ಕೆ ಎಶ್ಟು ಮಿಂಚು(ಕರೆಂಟ್) ಬಳಸುತ್ತದೋ ಅಶ್ಟೇ ಮಿಂಚು ಬಳಸುತ್ತದೆ.
  • ಬಿಟ್‍ಕಾಯಿನ್ ಗು ಕರೆಂಟಿಗು ಏನು ಸಂಬಂದ ? ಹೀಗೆ ನಿಮ್ಮಲ್ಲಿ ಕೇಳ್ವಿ ಇರಬಹುದು. ಬಿಟ್‍ಕಾಯಿನ್ ವಹಿವಾಟು ನಡೆದ ನಂತರ, ಆ ವಹಿವಾಟನ್ನು ಬಿಟ್‍ಕಾಯಿನ್ ಜಾಲದಲ್ಲಿ ಹುಡುಕಿ, ಗುರುತಿಸಿ ಯಾರದರೂ ಕಚಿತ ಪಡಿಸಬೇಕು. ಹೀಗೆ ಕಚಿತ ಪಡಿಸುವವರನ್ನು ಮತ್ತು ಅದನ್ನು ಕೊಡುಕೊಳು ಕಡತದಲ್ಲಿ(ಪಬ್ಲಿಕ್ ಲೆಡ್ಜರ್) ದಾಕಲಿಸುವವರನ್ನು ಮೈನರ‍್ಸ್ ಎನ್ನುವರು. ಈ ಕೆಲಸಕ್ಕಾಗಿ ಮೈನರ‍್ಸ್ ಗೆ  ಸ್ವಲ್ಪ ಬಿಟ್ ಕಾಯಿನ್ ಅನ್ನು ಬಳುವಳಿಯಾಗಿ ಕೊಡಲಾಗುತ್ತದೆ. ಆದರೆ ಈ ಕೆಲಸ ಅಶ್ಟು ಸುಲಬವಲ್ಲ, ಬಿಟ್‍ಕಾಯಿನ್ ಜಾಲದಲ್ಲಿ ವಹಿವಾಟನ್ನು ಗುರುತಿಸಲು ಸಾಕಶ್ಟು ಎಣಿಕಾ ಬಲ(ಕಂಪ್ಯೂಟಿಂಗ್ ಪವರ್) ಬೇಕಾಗುತ್ತದೆ. ಇದಕ್ಕಾಗಿ ಒಳ್ಳೆಯ ಕಂಪ್ಯೂಟಿಂಗ್ ಪವರ್ ಇರುವ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ. ಆದ್ದರಿಂದ ಈ ಕೆಲಸ ಗಳಿಗೆ ಬಳಸುವ ಕಂಪ್ಯೂಟರ‍್ ಬಹಳ ಹೆಚ್ಚು ಕರೆಂಟ್ ಅನ್ನು ಬಳಸುತ್ತದೆ. ಬಿಟ್‍ಕಾಯಿನ್ ಮೈನಿಂಗ್ ಒಂತರಾ ಊಹೆಯ ಕೆಲಸ. ಯಾರ ಬಳಿ ಹೆಚ್ಚು ಕಂಪ್ಯೂಟಿಂಗ್ ಪವರ್ ಇರುತ್ತದೋ, ಅವರು ಕಡಿಮೆ ಸಮಯದಲ್ಲಿ ಹೆಚ್ಚು ಊಹೆಗಳನ್ನು ಮಾಡಬಹುದು. ಹೀಗಾಗಿ ಅವರು ಆ ವಹಿವಾಟನ್ನು ಕಚಿತವಾಗಿ ಗುರುತಿಸೋ ಸಾದ್ಯತೆಗಳೂ ಹೆಚ್ಚಿರುತ್ತದೆ. ಹೀಗಿದ್ದೂ ಇದೊಂದು ಲಾಟರಿ ಆಟದ ತರಹ, ಯಾರಾದರೂ ಅದ್ರುಶ್ಟವಂತರಿಗೆ, ಈ ವಹಿವಾಟು ಬಿಟ್‍ಕಾಯಿನ್ ನೆಟ್‍ವರ‍್ಕ್ ನಲ್ಲಿ ಮೊದಲೇ ಸಿಗಲೂಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: blockchain.com, fool.com, statista.com, nytimes.com, pixabay.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: