‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ – ಹೊಟ್ಟೆಯ ಆರೋಗ್ಯದ ಸುತ್ತ

– ಸಂಜೀವ್ ಹೆಚ್. ಎಸ್.

ಜನ ದಿನವಿಡೀ ದುಡಿಯುವುದು ಹೊಟ್ಟೆಪಾಡಿಗಾಗಿ, ಹೊಟ್ಟೆಯ ಹಸಿವು ತಣಿಸುವುವ ಸಲುವಾಗಿದೆ. ಹಸಿವು ಅನ್ನೋದು ಇಲ್ಲದೇ ಇದ್ದಿದ್ದರೆ, ಜಗತ್ತು ನಿಂತ ನೀರಾಗುತ್ತಿತ್ತು. ದಾಸರು, “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಇದೇ ಕಾರಣಕ್ಕೆ ಹೇಳಿದ್ದಾರೆ. ಹೊಟ್ಟೆಯನ್ನು ಸರಿಯಾಗಿಟ್ಟುಕೊಳ್ಳಲು ಹಲವಾರು ದಾರಿಗಳಿವೆ. ಸಾಮಾನ್ಯವಾಗಿ ಬೊಜ್ಜಿನಿಂದ ಹೊಟ್ಟೆ ದೊಡ್ಡದಾಗಿ ಕಾಣುತ್ತದೆ. ಇದಲ್ಲದೇ ಹೊಟ್ಟೆಯೊಳಗೆ ಸಮಸ್ಯೆ ಕಂಡುಬಂದರೆ ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ತರಹದ ಸಮಸ್ಯೆ ಶುರುವಾಗಬಹುದು.

ಮನುಶ್ಯನ ದೇಹದ ಪ್ರಮುಕ ಅಂಗಗಳಲ್ಲಿ ಹೊಟ್ಟೆ ಕೂಡ ಒಂದಾಗಿದೆ. ನಾವು ಸೇವಿಸುವ ಆಹಾರವನ್ನು ಸರಿಯಾದ ರೀತಿಯಲ್ಲಿ ತನ್ನಲ್ಲಿ ಶೇಕರಣೆ ಮಾಡಿ ಅದನ್ನು ಜೀರ‍್ಣವಾಗುವಂತೆ ನೋಡಿಕೊಂಡು, ನಮ್ಮ ಇಡೀ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕಾರ‍್ಯವನ್ನು ಹೊಟ್ಟೆ ಮಾಡುತ್ತದೆ. ಹೊಟ್ಟೆಗೆ ಊಟ ಕಡಿಮೆಯಾದರೆ ಅತವಾ ಹಸಿವು ಹೆಚ್ಚಾದರೂ ಅದು ದೇಹದ ಮೇಲೆ ಸಂಪೂರ‍್ಣ ಪರಿಣಾಮ ಬೀರುತ್ತದೆ. ಹೀಗಾಗಿ ಹಸಿವಾದಾಗ ಎಲ್ಲರ ಗಮನ ಹೊಟ್ಟೆಯ ಮೇಲಿರುತ್ತದೆ.

ಹೊಟ್ಟೆಯನ್ನು ನಮ್ಮ ದೇಹದ ಎರಡನೇ ಮೆದುಳು ಎನ್ನುತ್ತಾರೆ. ಹೊಟ್ಟೆಯ ಆರೋಗ್ಯ ಚೆನ್ನಾಗಿರುವುದು ಎಶ್ಟು ಮುಕ್ಯ ಎಂದು ವಿವರಿಸಿ ಹೇಳಬೇಕಾದ್ದಿಲ್ಲ. ಒಂದು ಬಾರಿ ಹೊಟ್ಟೆ ಕೆಟ್ಟು ಹೋಗಿ ಅದರಿಂದಾಗುವ ಸಮಸ್ಯೆ ಅನುಬವಿಸಿದರೆ ಸಾಕು, ಇನ್ನೊಮ್ಮೆ ಇಂತಹ ಸಮಸ್ಯೆ ಉಂಟಾಗುವುದು ಬೇಡಪ್ಪಾ ಎಂದೆನಿಸಿ ಬಿಡುತ್ತದೆ. ಅಲ್ಲದೇ ಜಟರಕ್ಕೆ ಅತವಾ ಕರುಳಿಗೆ ನೆಮ್ಮದಿ ಕೊಡುವುದು ಎಶ್ಟು ಅಗತ್ಯವೆಂದು ತಿಳಿಯುತ್ತದೆ. ಆಹಾರ ಸೇವನೆ ಸರಿಯಾದ ರೀತಿ ಆಗದೇ ಇದ್ದರೆ ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಗಳು ಎದುರಾಗುತ್ತವೆ. ಇದು ಮುಂದುವರಿದು ವಾಂತಿ, ಬೇದಿ ಮತ್ತು ತಲೆನೋವು ಕೂಡ ಜತೆಯಾಗಬಹುದು. ಇದಲ್ಲದೆ ನಾವು ಅತಿ ಒತ್ತಡ, ಬೇಸರ ಮತ್ತು ನೋವು ಅನುಬವಿಸುತ್ತಿದ್ದರೆ ಅದರಿಂದಲೂ ಹೊಟ್ಟೆ ನೋವು ಬರಬಹುದು. ಹಾಗಾಗಿ, ಜಟರ ಮತ್ತು ಕರುಳನ್ನೂ ಸೇರಿಸಿ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಯದ ಅಬಾವದಿಂದಾಗಿ ಜನರು ಪಾಸ್ಟ್ ಪುಡ್( Fast Food) ಹಾಗೂ ಕುರಕಲು ತಿಂಡಿಗಳ( Junk food ) ಮೊರೆ ಹೋಗುತ್ತಿದ್ದು, ಆರೋಗ್ಯಕರ ಆಹಾರಗಳನ್ನು ಮರೆತು ಹೋಗುತ್ತಿದ್ದಾರೆ. ಹೀಗಾಗಿ ಜನರಲ್ಲಿ ಹೊಟ್ಟೆಯ ಸಂಬಂದಿತ ಸಮಸ್ಯೆಗಳು, ಅಜೀರ‍್ಣ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಹೊಟ್ಟೆಯ ಆರೋಗ್ಯವು ಉತ್ತಮವಾಗಿದ್ದರೆ, ಸಂಪೂರ‍್ಣ ದೇಹವು ಆರೋಗ್ಯಕಾರಿಯಾಗಿರುತ್ತದೆ. ನಾವು ತಿನ್ನುವಂತಹ ಆಹಾರವನ್ನು ಸರಿಯಾಗಿ ಜೀರ‍್ಣಗೊಳಿಸಿ, ಬಳಿಕ ಅದರಲ್ಲಿ ಇರುವಂತಹ ಪೋಶಕಾಂಶಗಳನ್ನು ದೇಹಕ್ಕೆ ನೀಡುವುದು ಹಾಗೂ ಕಲ್ಮಶವನ್ನು ಹೊರಹಾಕುವ ಕೆಲಸವನ್ನು ಜೀರ‍್ಣಕ್ರಿಯೆ ವ್ಯವಸ್ತೆಯು ಮಾಡುವುದು. ಇದು ಆರೋಗ್ಯಕಾರಿ ಆಗಿದ್ದರೆ ಆಗ ಕಂಡಿತವಾಗಿಯೂ ಉತ್ತಮ ಆರೋಗ್ಯ ಲಬ್ಯವಾಗುತ್ತದೆ. ಹೊಟ್ಟೆಯನ್ನು ಎಲ್ಲಾ ರೀತಿಯ ಸಮಸ್ಯೆಗಳಿಂದ ದೂರವಿಡುವುದು ಕೂಡ ನಮ್ಮ ಆಹಾರಕ್ರಮದ ಪ್ರಮುಕ ಕಾರ‍್ಯವಾಗಿದೆ. ಲಗು ಹಾಗೂ ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ ಅದು ಜೀರ‍್ಣಕ್ರಿಯೆಗೆ ತುಂಬಾ ಸಹಕಾರಿ. ಇಶ್ಟು ಮಾತ್ರವಲ್ಲದೆ ಇದು ತೂಕ ಇಳಿಸಲು ಕೂಡ ಸಹಕಾರಿಯಾಗಿದೆ. ಕೆಲವೊಂದು ಆಹಾರಗಳು ಜೀರ‍್ಣಕ್ರಿಯೆ ವ್ಯವಸ್ತೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತವೆ.

ಹೊಟ್ಟೆಯ ಆರೋಗ್ಯಕ್ಕೆ ಪ್ರೊಬಯೋಟಿಕ್ ಮತ್ತು ಪ್ರಿಬಯೋಟಿಕ್ ಆಹಾರಗಳು ತುಂಬಾ ಲಾಬಕಾರಿ. ಇಂತಹ ಕೆಲವೊಂದು ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರ‍್ಪಡೆಗೊಳಿಸಿದರೆ ಆಗ ಹೊಟ್ಟೆಯ ಅನಾರೋಗ್ಯವನ್ನು ದೂರವಿಡಬಹುದು. ಹೊಟ್ಟೆಯಲ್ಲಿ ಸಮಸ್ಯೆಗಳು ಎದುರಾದಾಗ ಸಾಮಾನ್ಯವಾಗಿ ಮಲಬದ್ದತೆ, ಅಜೀರ‍್ಣ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು ಮತ್ತು ವಿಪರೀತವಾದ ಉಶ್ಣ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮನುಶ್ಯನ ಹೊಟ್ಟೆ ಆರೋಗ್ಯವಾಗಿರಬೇಕೆಂದರೆ ಮೊದಲು ನಾವು ತಿನ್ನುವಂತಹ ಆಹಾರ ಜೀರ‍್ಣವಾಗಬೇಕು. ಹೊಟ್ಟೆಯಲ್ಲಿ ಕೆಲವೊಂದು ಸೂಕ್ಶ್ಮ ಜೀವಿಗಳಿರಲಿದ್ದು, ಇವು ಜೀರ‍್ಣಕ್ರಿಯೆಗೆ ಸಹಕಾರಿಯಾಗಿರುತ್ತವೆ. ನಾರಿನಾಂಶ ಮತ್ತು ಜೀವಂತ ಬ್ಯಾಕ್ಟೀರಿಯಾ ಹೊಂದಿರುವಂತಹ ಕೆಲವು ಆಹಾರಗಳು ಜೀರ‍್ಣಕ್ರಿಯೆಯನ್ನು ಸುದಾರಣೆ ಮಾಡುವವು. ಉದರದ ಆರೋಗ್ಯ ರಕ್ಶಿಸಿಕೊಂಡರೆ ಹ್ರುದಯ ಅತವಾ ಮದುಮೇಹಕ್ಕೆ ಸಂಬಂದಿಸಿದ ಕಾಯಿಲೆಗಳಿಂದ ದೂರವಿರಬಹುದು.

ಹೊಟ್ಟೆಯ ಉತ್ತಮ ಆರೋಗ್ಯಕ್ಕಾಗಿ:

  1. ಹಸಿ ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇದು ಅತ್ಯಂತ ಸರಳ ಹಾಗೂ ಸುಲಬ ಮಾರ‍್ಗವಾಗಿದೆ. ಸಂಸ್ಕರಿಸಿದ ಆಹಾರಕ್ಕಿಂತ, ಆದಶ್ಟು ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರವಾಗಿರುತ್ತದೆ. ಚೆನ್ನಾಗಿ ಹಸಿಯಾಗಿರುವ ಹಣ್ಣು ತರಕಾರಿಯನ್ನು ಅಗೆದು ತಿನ್ನುವುದರಿಂದ ದೇಹಕ್ಕೆ ಬೇಕಾಗಿರುವ ರಾಸಾಯನಿಕಗಳು ಉತ್ಪತ್ತಿಯಾಗಿ ಸಕ್ರಿಯ ಜೀರ‍್ಣಕ್ರಿಯೆ ಉಂಟಾಗುತ್ತದೆ.
  2. ನಾರಿನಾಂಶವಿರುವ ಆಹಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ನಾರಿನಾಂಶವಿರುವ ಆಹಾರ ಸೇವಿಸುವುದು ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇರುವ ಮತ್ತೊಂದು ಉತ್ತಮ ಮಾರ‍್ಗವಾಗಿದೆ. ಇದಕ್ಕಾಗಿ ಹಣ್ಣು, ಸೊಪ್ಪು, ತರಕಾರಿಗಳು ಮತ್ತು ಕಾಳುಗಳನ್ನು ಹೆಚ್ಚಾಗಿ ತಿನ್ನಬಹುದು. ಮೈದಾ ಬದಲು ಗೋದಿ ಸೇವಿಸುವುದು ಮತ್ತು ಹಣ್ಣುಗಳನ್ನು ಜ್ಯೂಸ್ ಮಾಡದೆ, ಹಾಗೆಯೇ ಸೇವಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ದ್ವಿದಳ ಮತ್ತು ಕಿರುದಾನ್ಯಗಳು ಅತ್ಯುತ್ತಮವಾದ ಆಹಾರವಾಗಿವೆ. ಇವು ನಮ್ಮ ದೇಹಕ್ಕೆ ನಾರಿನಾಂಶವನ್ನು ಒದಗಿಸಿ ನಮ್ಮ ಜೀರ‍್ಣಕ್ರಿಯೆ ವ್ಯವಸ್ತೆಯ ಜಟರ ಮತ್ತು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿಯಾಗಿವೆ.
  3. ನಮ್ಮ ತಟ್ಟೆಯಲ್ಲಿ ಶೇ. 75ರಶ್ಟು ಹಣ್ಣು, ತರಕಾರಿಗಳಿದ್ದರೆ ಒಳ್ಳೆಯದು. ದಾಳಿಂಬೆ, ಕ್ರಾನ್ಬೆರಿಯಂತಹ ಹಣ್ಣುಗಳು ನಮ್ಮ ಊಟದ ತಟ್ಟೆಯಲ್ಲಿದ್ದರೆ ಒಳ್ಳೆಯದು. ಸಸ್ಯಜನ್ಯ ಆಹಾರವನ್ನು ಹೆಚ್ಚು ಸೇವಿಸುವುದು ಸೂಕ್ತ. ಜೊತೆಗೆ ನಮಗೆ ಹಿತ ಎನಿಸುವ ಆಹಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಒತ್ತಾಯಕ್ಕಾಗಿ ಯಾವುದೇ ಆಹಾರ ಸ್ವೀಕರಿಸುವುದು ಒಳ್ಳೆಯದಲ್ಲ.
  4. ಚೆನ್ನಾಗಿ ನಿದ್ರೆ ಮಾಡುವುದು ಮುಕ್ಯವಾಗಿದೆ. ನಾವು ಸರಿಯಾಗಿ ನಿದ್ದೆ ಮಾಡದಿದ್ದರೆ ಅತವಾ ಒತ್ತಡದಲ್ಲಿ ಬದುಕಿದರೆ ಅದು ನಿಮ್ಮ ಕರುಳಿನ ಅತವಾ ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ, ಒಬ್ಬ ವ್ಯಕ್ತಿ ದಿನಕ್ಕೆ 7 ರಿಂದ 8 ಗಂಟೆ ನಿದ್ರಿಸುವುದು ಅವಶ್ಯಕವಾಗಿದೆ. ಜೊತೆಗೆ, ಒತ್ತಡ ನಿವಾರಣೆಗೆ ನಮಗೆ ಹಿತವೆನಿಸುವ ಚಟುವಟಿಕೆಗಳನ್ನು ಮಾಡುತ್ತಿರಬೇಕು. ಯೋಗ ಮಾಡುವುದು, ದ್ಯಾನಕ್ಕೆ ಕೂರುವುದರಿಂದ ಮನಸ್ಸು ಹತೋಟಿಯಲ್ಲಿದ್ದು, ಒತ್ತಡ ನಿವಾರಣೆಯಾಗುತ್ತದೆ.
  5. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ನಿಗದಿತ ಆಹಾರ ಸೇವಿಸುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ. ನಮಗೆ ಅಗತ್ಯವಾದ ಬ್ಯಾಕ್ಟೀರಿಯಾ ಉತ್ಪಾದನೆಯೂ ಹೆಚ್ಚುತ್ತದೆ. ಬ್ಯುಟಿರೇಟ್ ಎಂಬ ಆಸಿಡ್ ಉತ್ಪಾದನೆ ಆಗಿ ಜೀರ‍್ಣಕ್ರಿಯೆಯನ್ನು ಸುಲಬವಾಗಿಸುತ್ತದೆ. ಹೀಗೆ ಒಳ್ಳೆಯ ಆಹಾರದ ಜೊತೆಗೆ ವ್ಯಾಯಾಮವೂ ಮುಕ್ಯವಾಗಿದೆ.
  6. ಆಹಾರ ಸೇವಿಸುವ ರೀತಿಯ ಮೇಲೆ ಗಮನಹರಿಸಬೇಕು. ನಾವು ಯಾವ ರೀತಿ ಆಹಾರ ಸೇವಿಸುತ್ತೇವೆಂಬುದು ಕೂಡ ಜೀರ‍್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತುಕೊಂಡು ಆರಾಮವಾಗಿ ಆಹಾರವನ್ನು ಸೇವಿಸಿ ಆನಂದಿಸಬೇಕು.

ಇವೆಲ್ಲ ಕಾರಣಗಳಿಂದ ದೇಹದ ಎರಡನೇ ಮೆದುಳು ಎಂದು ಕರೆಯಲ್ಪಡುವ ಹೊಟ್ಟೆಯ ಆರೋಗ್ಯ ಕಾಪಾಡಲು ಬೇಕಾದ ಗಮನ ನೀಡುವುದರ ಮೂಲಕ ಹೊಟ್ಟೆಯ ಮಾತನ್ನು ಆಲಿಸೋಣ.

(ಚಿತ್ರಸೆಲೆ: neem.world )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: