ಬೆಲ್ಲ – ಒಂದು ಕಿರುಬರಹ

ಶ್ಯಾಮಲಶ್ರೀ.ಕೆ.ಎಸ್.

ಸಿಹಿ ಎಂದ ಕೂಡಲೇ ಮೊದಲು ನೆನಪಾಗುವುದು ಸಿಹಿತಿಂಡಿಗಳು. ಹಿರಿಯರಿಂದ ಕಿರಿಯರವರೆಗೂ ಸಿಹಿತಿಂಡಿಗಳೆಂದರೆ ಬಾಯಿ ನೀರೂರುವುದು ಸಹಜ. ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಮಾಡುವ ಹೋಳಿಗೆ, ಪಾಯಸ, ಕಜ್ಜಾಯ, ಕಡುಬು, ತಂಬಿಟ್ಟು – ಇವುಗಳ ತಯಾರಿಕೆಯಲ್ಲಿ ಬಳಸುವಂತಹ ಸಿಹಿ ಪದಾರ‍್ತ ಬೆಲ್ಲ. ಆದ್ದರಿಂದ ಬೆಲ್ಲವನ್ನು ಸಾಂಪ್ರದಾಯಿಕ ಸಿಹಿ ಪದಾರ‍್ತವೆಂದೇ ಗುರುತಿಸಲಾಗುತ್ತದೆ.

ಬೆಲ್ಲದಿಂದ ಮಾಡುವಂತಹ ತಿನಿಸುಗಳು ಸ್ವಾದಬರಿತವೂ ಹಾಗೂ ಆರೋಗ್ಯದಾಯಕವೂ ಆಗಿರುತ್ತದೆ. ಬೆಲ್ಲವು ಏಶ್ಯಾ, ಆಪ್ರಿಕಾ ಹಾಗೂ ದಕ್ಶಿಣ ಅಮೇರಿಕಗಳಲ್ಲಿ ಪರಿಚಿತ. ನಮ್ಮ ದಕ್ಶಿಣಬಾರತದ ಎಲ್ಲೆಡೆ ಚಿರಪರಿಚಿತ. ಯುಗಾದಿ ಹಬ್ಬದಂದು ಬೇವು ಬೆಲ್ಲ, ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚುವಂತಹ ಸಂಪ್ರದಾಯ ನಮ್ಮಲ್ಲಿ ರೂಡಿಯಲ್ಲಿದ್ದು ನೆರೆಹೊರೆಯವರೊಂದಿಗೆ ಒಂದು ಬಾವನಾತ್ಮಕ ಸಂಬಂದವನ್ನು ಬೆಳೆಸುತ್ತಾ ಬಂದಿದೆ .

ಬೆಲ್ಲವನ್ನು ಆಲೆಮನೆಯಲ್ಲಿ ಕಬ್ಬಿನ ರಸದಿಂದ ತಯಾರಿಸುವರೆಂಬುದು ಎಲ್ಲರಿಗೂ ತಿಳಿದ ವಿಶಯ. ಅಂಗಡಿಗಳಲ್ಲಿ ಉಂಡೆಬೆಲ್ಲ, ಅಚ್ಚುಬೆಲ್ಲ, ಮುದ್ದೆಬೆಲ್ಲ, ಬಕೆಟ್ ಬೆಲ್ಲ..ಹೀಗೆ ವಿವಿದ ರೂಪಗಳಲ್ಲಿ ನೋಡಿರುತ್ತೇವೆ. ಮೊದಲಿಗೆ ನಮ್ಮ ಹಿರಿಯರು ಮನೆಗೆ ಬಂದ ಅತಿತಿಗಳಿಗೆ ಬೆಲ್ಲದ ಪಾನಕವನ್ನು ನೀಡುವಂತಹ ಪದ್ದತಿಯನ್ನು ರೂಡಿಸಿಕೊಂಡಿದ್ದರು. ಈಗ ಬೆಲ್ಲಕ್ಕಿಂತ ಸಕ್ಕರೆ ಬಳಕೆಯೇ ಅದಿಕವಾಗಿದೆ. ಸಿಹಿ ತಿಂಡಿಗಳಾದ ಮೈಸೂರುಪಾಕ್, ಜಿಲೇಬಿ, ಜಾಮೂನು, ಜಹಂಗೀರ‍್,ಬಾದಾಮ್ ಪುರಿ ಮುಂತಾದ ಬೇಕರಿ ತಿನಿಸುಗಳು, ತಂಪುಪಾನೀಯಗಳು, ಕಾಪಿ, ಟೀ ಇವುಗಳ ತಯಾರಿಕೆಯಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಸಕ್ಕರೆ ಸೇವನೆಯಿಂದ ಒಳಿತಿಗಿಂತಲೂ ಕೆಡುಕೇ ಹೆಚ್ಚು ಎನ್ನಬಹುದು. ನಮ್ಮ ಶರೀರಕ್ಕೆ ಅಗತ್ಯವಿರುವಂತಹ ಪೋಶಕಾಂಶಗಳು ಸಕ್ಕರೆಯಲ್ಲಿ ಅಶ್ಟಾಗಿ ದೊರಕುವುದಿಲ್ಲ.

ಬೆಲ್ಲದಲ್ಲಿ ಕ್ಯಾಲ್ಸಿಯಂ, ರಂಜಕ,ಕಬ್ಬಿಣ,ಸತು ಹಾಗೂ ಇನ್ನಿತರ ಪೋಶಕಾಂಶಗಳ ಮಹಾಪೂರವೇ ಅಡಗಿದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಸತುವಿನ ಅಂಶ ಅದಿಕವಾಗಿರುವುದರಿಂದ, ಬೆಲ್ಲವು ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸುವುದಲ್ಲದೆ ರಕ್ತಹೀನತೆಯನ್ನು ತಡೆಗಟ್ಟುವುದು, ಬೆಲ್ಲವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ರೋಗನಿರೋದಕ ಶಕ್ತಿ ಹೆಚ್ಚುವುದು ಎಂದು ಹೇಳಲಾಗುವುದು ಹಾಗೂ ಶರೀರದ ತೂಕದ ಸಮತೋಲನವನ್ನು ಕಾಪಾಡುವಲ್ಲಿ ಅದು ಸಹಕಾರಿಯಾಗಿದೆ ಎಂಬುದು ತಜ್ನರ ಅಬಿಪ್ರಾಯ. ಬೆಲ್ಲವು ಜೀರ‍್ಣಕ್ರಿಯೆಯನ್ನು ಹೆಚ್ಚಿಸುವುದರಲ್ಲೂ ಸಹಕಾರಿ ಹಾಗೂ ಚಳಿಗಾಲದಲ್ಲಿ ಬರುವ ಗಂಟಲು ನೋವು, ಗಂಟಲು ಕೆರೆತಗಳಿಗೆ ರಾಮಬಾಣವಾಗಿದ್ದು ಶ್ವಾಸಕೋಶದ ಆರೋಗ್ಯವನ್ನು ವ್ರುದ್ದಿಸುವುದು ಎಂದು ಹೇಳಲಾಗುತ್ತದೆ.

ಬೆಲ್ಲವು ಉಶ್ಣ ಪದಾರ‍್ತವೆಂಬುದು ಹಿರಿಯರ ಅಬಿಪ್ರಾಯವಾಗಿದ್ದು ಶೀತದಿಂದಾದ ನೆಗಡಿ, ಕೆಮ್ಮು, ಜ್ವರದಿಂದ ಹೊರ ಬರಲು ಹಳೇ ಕಾಲದಲ್ಲಿ ಮಕ್ಕಳಿಗೆ ಬೆಲ್ಲವನ್ನು ನೀಡುತ್ತಿದ್ದರಂತೆ. ಆರೋಗ್ಯದ ನಿಮಿತ್ತ ಆಯುರ‍್ವೇದದಲ್ಲಿಯೂ ಬೆಲ್ಲಕ್ಕೆ ಪ್ರಾಮುಕ್ಯತೆಯನ್ನು ನೀಡುತ್ತಾ ಬಂದಿದೆ. ಡಯಾಬಿಟೀಸ್ ನಂತಹ ಮಾರಕ ಕಾಯಿಲೆಗಳಿಂದ ದೂರ ಉಳಿಯಲು ಹಾಗೂ ದೇಹದ ಸದ್ರುಡತೆಯನ್ನು ಕಾಪಾಡಿಕೊಳ್ಳಲು ಜನರು ಬೆಲ್ಲದ ಕಾಪಿ/ಚಹಾವನ್ನು ಹೀರುವುದು ಈಗೀಗ ಕಂಡುಬರುತ್ತಿದೆ.

( ಚಿತ್ರಸೆಲೆ : kn.wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: