ಹಸಿಕಾಳುಗಳು

ಶ್ಯಾಮಲಶ್ರೀ.ಕೆ.ಎಸ್.

ಮಳೆಗಾಲ ಮಾಯವಾಗಿ ಚಳಿಗಾಲ ಶುರುವಾಯಿತೆಂದರೆ ಸಾಕು, ಹಸಿಕಾಳುಗಳದ್ದೇ ಹಿಗ್ಗು. ಎಲ್ಲಾ ತರಕಾರಿಗಳನ್ನು ಹಿಂದಿಕ್ಕಿ ಲಗ್ಗೆ ಹಾಕಿ ಬಿಡುತ್ತವೆ. ಅಲಸಂದೆ, ತೊಗರಿ, ಅವರೆ ಹೀಗೆ, ಸಾಲು ಸಾಲು ಹಸಿಕಾಳುಗಳು ಪಸಲು ನೀಡುವ ಸಂಬ್ರಮ. ಇವೆಲ್ಲವೂ ದ್ವಿದಳ ದಾನ್ಯಗಳ ಗುಂಪಿಗೆ ಸೇರಿವೆ. ನಮ್ಮ ಕರುನಾಡಿನಲ್ಲಿ ಹೆಚ್ಚಾಗಿ ಎಲ್ಲರೂ ಹಸಿಕಾಳುಗಳ ಪ್ರಿಯರು. ಬರಣಿ ಮಳೆ ಬಂತೆಂದರೆ ರೈತರಿಗೆ ಕಾಯಕದ ಸಡಗರ. ಮಳೆ ನೀರನ್ನು ಮಾತ್ರ ಅವಲಂಬಿತವಾಗಿರುವ ಹಸಿಕಾಳುಗಳು, ದಿಣ್ಣೆ ಬೂಮಿಯಲ್ಲಿಯೇ ಬೆಳೆಯುವಂತಹುದಾಗಿವೆ. ರಾಗಿ ಪೈರನ್ನು ನಾಟಿ ಮಾಡಿದ ಹೊಲದಲ್ಲಿ, ಜೋಳದ ಜೊತೆ, ಕಾಲಿ ಜಾಗಗಳಿದ್ದರೆ ಅಲ್ಲಲ್ಲಿ ಅವರೆಕಾಯಿ, ತೊಗರಿಕಾಯಿ, ಅಲಸಂದೆ ಗಿಡಗಳ ಸಾಲುಗಳು ಬೆಳೆದಿರುವುದನ್ನು ಕಾಣಬಹುದು.

ಅಲಸಂದೆ

ಅಲಸಂದೆ (ಅಲಸಂಡೆ) ಇದರ ವೈಜ್ನಾನಿಕ ಹೆಸರು ‘ವಿಗ್ನಾ ಉಂಗ್ವಿಕ್ಯುಲೇಟ’ (Vigna Unguiculata) ಇದರ ಮೂಲ ದಕ್ಶಿಣ ಆಪ್ರಿಕಾ. ಆದರೆ ದಕ್ಶಿಣ ಬಾರತದಲ್ಲೇ ಇದು ಚಿರಪರಿಚಿತ. ಸಾಮಾನ್ಯವಾಗಿ ಎರಡರಿಂದ ಮೂರು ಅಡಿ ಎತ್ತರದಲ್ಲಿ ಬೆಳೆಯುವ ಅಲಸಂದೆಕಾಯಿಯ ಕಾಳುಗಳಿಗೆ ‘ಕೌ ಪೀ’ (Cow Pea) ಅತವಾ ‘ಬ್ಲ್ಯಾಕ್ ಐಡ್ ಪೀಸ್’ (Black Eyed Peas) ಎಂದು ಕರೆಯುವರು. ಅಲಸಂದೆಕಾಳುಗಳು ಹಸಿರು ಹಾಗೂ ಬಿಳಿ ಬಣ್ಣದ್ದಾಗಿರುತ್ತವೆ.

ತೊಗರಿಕಾಯಿ

‘ಕೆಜನಸ್ ಕೆಜೆನ’ (Cajanus Cajana ) ಎಂಬ ವೈಜ್ನಾನಿಕ ಹೆಸರಿನಿಂದ ಕರೆಯಲ್ಪಡುವ ತೊಗರಿಕಾಯಿಯ ಮೂಲ ದಕ್ಶಿಣ ಬಾರತ. ತೊಗರಿಕಾಳು ನೋಡಲು ಪಾರಿವಾಳದ ಕಣ್ಣುಗಳನ್ನು ಹೋಲುವುದರಿಂದ ಇಂಗ್ಲೀಶ್ ನಲ್ಲಿ ‘ಪಿಜನ್ ಪಿ’ (Pigeon Pea) ಎಂಬ ಹೆಸರಿದೆ. ತೊಗರಿಕಾಯಿ ಗಿಡಗಳು ಒಂದರಿಂದ ಮೂರು ಮೀಟರ್ ಎತ್ತರಕ್ಕೆ ಬೆಳೆದು ನಿಂತು, ಕಾಯಿಗಳು ಜೋತಾಡುವುದನ್ನು ನೋಡುವುದೇ ಕುಶಿ. ಕಪ್ಪು ಮಿಶ್ರಿತ ಹಸಿರುಬಣ್ಣ ಹಾಗೂ ಮಾಸಲು ಬಣ್ಣದ ತೊಗರಿಕಾಳುಗಳು ಕಾಣಸಿಗುತ್ತವೆ.

ಅವರೆಕಾಯಿ

‘ಹೈಯಸಿಂತ್ ಬೀನ್’ (Hyacinth Bean) ಎಂದು ಕರೆಸಿಕೊಳ್ಳುವ ಅವರೆಕಾಯಿಯ ವೈಜ್ನಾನಿಕ ಹೆಸರು ‘ಲ್ಯಾಬ್ ಲ್ಯಾಬ್ ಪರ‍್ಪೂರಿಯಸ್’ (Bab Bab Purpureus). ಅವರೆಕಾಯಿ ಗಿಡಗಳು ಸುಮಾರು 60 ಸೆಂಟಿಮೀಟರ‍್ಗಳಶ್ಟು ಎತ್ತರಕ್ಕೆ ಬೆಳೆಯುತ್ತವೆ. ಅವರೆಕಾಳನ್ನು ಹಸಿಕಾಳಿನ ರಾಜನೆಂದರೆ ತಪ್ಪಾಗಲಾರದು. ಮನೆಮಂದಿಯೆಲ್ಲ ಇಶ್ಟ ಪಟ್ಟು ತಿನ್ನುವಂತಹದು ಈ ಅವರೆಕಾಳು. ಕರ‍್ನಾಟಕದ ಹೆಮ್ಮೆಯ ದ್ವಿದಳ ದಾನ್ಯ ಈ ಅವರೆಕಾಳು. ಅವರೆಕಾಳು ಸಾಮಾನ್ಯವಾಗಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಅವರೆಕಾಯಿಯಲ್ಲಿ ಸೊಗಡು ಅವರೆ, ಮಣಿ ಅವರೆ, ದಪ್ಪವರೆ ಎಂಬ ಬಗೆ ಬಗೆಯ ತಳಿಗಳಿವೆ. ಅವರೆಕಾಯಿಯಲ್ಲಿ ಚಪ್ಪರದವರೆ ಅತವಾ ನೆಲ್ಲವರೆ ಎಂಬ ಇನ್ನೊಂದು ಬಗೆಯ ತಳಿಯುಂಟು. ಬಳ್ಳಿಯ ರೀತಿಯಲ್ಲಿ ಬೆಳೆಯುವುದು ಇದರ ವಿಶೇಶ. ಚಪ್ಪರದವರೆಯು ಕಾಳಿಗಿಂತ, ಕಾಯಿ ಸಮೇತ ಬಳಸಿ ಹುಳಿ ಮತ್ತು ಬಸ್ಸಾರಿನ ಅಡುಗೆಗೆ ಬಳಕೆಯಾಗುವುದು.

ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು

ಈ ಚಳಿಗಾಲದ ಅವದಿಯಲ್ಲಿ ಯಾವ ಅಡಿಗೆ ಮಾಡಿದರೂ ಸರಿಯೇ ನಮ್ಮ ಹೆಣ್ಣುಮಕ್ಕಳು ಅವುಗಳಲ್ಲಿ ಹಸಿಕಾಳುಗಳನ್ನು ಬಳಸದೇ ಇರುವುದಿಲ್ಲ. ಈ ಹಸಿಕಾಳುಗಳನ್ನು ಚಳಿಗಾಲದ ಕಾಯಂ ಸದಸ್ಯರೆನ್ನಬಹುದು. ತೊಗರಿ, ಅಲಸಂದೆ, ಅವರೆಕಾಯಿಗಳನ್ನು ಸುಲಿಯುವುದು ಸ್ವಲ್ಪ ತ್ರಾಸು ಎನಿಸಿದರೂ, ಈ ಕಾಳುಗಳಿಂದ ತಯಾರಿಸುವ ಅಡಿಗೆ, ತಿಂಡಿಗಳ ಗಮಲು ಎಲ್ಲವನ್ನೂ ಮರೆಸಿ ಬಿಡುತ್ತದೆ. ಪ್ರಕ್ರುತಿಯ ನಿಯಮದಂತೆಯೇ ತೊಗರಿಕಾಯಿಯ ಸರದಿ ಮುಗಿಯೋವಶ್ಟರಲ್ಲಿಯೇ ಅವರೆಕಾಯಿಗಳು ಕಾಣತೊಡಗುತ್ತವೆ. ತೊಗರಿಕಾಳು, ಅವರೆಕಾಳುಗಳನ್ನು ಬಳಸಿ ಮಾಡುವ ಉಪ್ಪಿಟ್ಟು, ಪಲಾವ್, ಹುಳಿ, ಉಪ್ಸಾರು, ಬಸ್ಸಾರು ಬಹಳ ರುಚಿಕಟ್ಟಾಗಿರುತ್ತವೆ. ಅದರಲ್ಲೂ ಅವರೇ ಕಾಳಿನ ಇದಕವರೆ (ಹಿತಕಿದವರೆ/ಹಿಚಕಿದವರೆ) ಸಾರಿನ‌ ರುಚಿಯಂತೂ ವರ‍್ಣನೆಗೆ ನಿಲುಕದ್ದು. ಅವರೆಕಾಯಿ ಒಂದು ಬಗೆಯ ಸೊಗಡಿನ ಸುವಾಸನೆಯಿಂದ ಕೂಡಿದ್ದರೆ ಮಾತ್ರ ಅಡಿಗೆ ರುಚಿಯಾಗಿರುತ್ತದೆ ಎಂಬ ನಂಬಿಕೆಯಿದೆ. ಕೆಲವೆಡೆ ಎಳೆ ಅವರೆಕಾಳು ಬಳಸಿ ತಯಾರಿಸುವ ಉಪ್ಪೆಸರು ಸ್ವಾದಬರಿತವಾಗಿರುತ್ತದೆ. ಬೇರೆ ರುತುಗಳಲ್ಲಿ ಅವರೆಯನ್ನು ನೀರನ್ನು ಹಾಯಿಸಿ ಬೆಳೆಯಬಹುದಾದರೂ, ಕಾಳುಗಳಲ್ಲಿ ಸೊಗಡು ಇರುವುದಿಲ್ಲ ಹಾಗೂ ರುಚಿಯು ಅಶ್ಟಕಶ್ಟೆ.

ಅಲಸಂದೆಕಾಳುಗಳು ಉಪ್ಪಿಟ್ಟು, ಪಲಾವ್, ಈ ಬಗೆಯ ತಿಂಡಿಗಳಿಗೆ ಸೂಕ್ತವಾದುದಲ್ಲ. ಆದರೆ ಅಲಸಂದೆಕಾಳಿನ ಉಪ್ಸಾರು ತುಂಬಾ ರುಚಿಬರಿತವಾಗಿರುತ್ತದೆ. ಹಾಗೆಯೇ ಬಸ್ಸಾರು, ಪಲ್ಯ ಹಾಗೂ ಹುಳಿಯನ್ನು ತಯಾರಿಸಲು ಅಲಸಂದೆ ಯೋಗ್ಯವಾಗಿದೆ. ತೊಗರಿ, ಅವರೆ, ಅಲಸಂದೆಕಾಳುಗಳ ಉಪ್ಸಾರು, ಬಸ್ಸಾರಿನ ಜೊತೆ ಸವಿಯಲು ಬಿಸಿ ಬಿಸಿ ರಾಗಿಮುದ್ದೆಯೇ ಸೂಕ್ತ. ಇದಕವರೆ ಸಾರಿನ ಜೊತೆ ರಾಗಿಮುದ್ದೆ, ಚಪಾತಿ, ಪೂರಿ, ದೋಸೆ ಹೀಗೆ ಎಲ್ಲವೂ ಸವಿಯಬಹುದಾಗಿದೆ. ಅವರೆಕಾಳಿನ ರೊಟ್ಟಿ, ಸಾಗು, ಕರಿದ ಇದಕವರೆ ಹೀಗೆ ಅವರೆಕಾಳಿನಿಂದ ತಯಾರಿಸಲಾಗುವ ಎಲ್ಲಾ ಬಕ್ಶ್ಯಗಳು ಎಲ್ಲರಿಗೂ ಅಚ್ಚುಮೆಚ್ಚು. ಈ ಹಸಿಕಾಳುಗಳ ನಡುವೆಯೇ, ಹಸಿ ಬಟಾಣಿಯನ್ನು ಅಲ್ಲಲ್ಲಿ ಗಮನಿಸಿರಬಹುದು. ಇದು ಕೇವಲ ಉಪ್ಪಿಟ್ಟು, ಪಲಾವ್, ಚಿತ್ರಾನ್ನ, ಬಿಸಿಬೇಳೆ ಬಾತ್, ಬಟಾಣಿ ಸಾಗುಗಳಿಗಶ್ಟೇ ಯೋಗ್ಯವಾಗಿರುತ್ತದೆ. ಜೊತೆಗೆ ರುಚಿಯಾಗಿಯೂ ಇರುತ್ತದೆ.

ಸುಗ್ಗಿಯಲ್ಲಿ ಕಂಡು, ಶಿವರಾತ್ರಿಗೆ ಮರೆಯಾಗುವ ಅವರೆ

ಪ್ರತಿ ವರ‍್ಶ ಜನವರಿಯಲ್ಲಿ ಆಚರಿಸುವ ಸಂಕ್ರಾಂತಿಯ ಸುಗ್ಗಿಯಲ್ಲಿ ಅವರೆಕಾಳಿನ ವಿಶೇಶ ಕಾದ್ಯಗಳನ್ನು ಮಾಡಲಾಗುತ್ತದೆ. ಶಿವರಾತ್ರಿ ಕಳೆದ ನಂತರ ಈ ಹಸಿಕಾಳುಗಳು ಮಾಯವಾಗಿಬಿಡುತ್ತವೆ. ಈ ಎಲ್ಲಾ ಗಿಡಗಳು ದನಕರುಗಳಿಗೆ ಒಳ್ಳೆಯ ಮೇವು. ಈ ಕಾಯಿಗಳ ಕ್ರುಶಿ ಮುಗಿದ ನಂತರ ಮಣ್ಣಿನಲ್ಲಿ ಕೊಳೆಸಿದರೆ, ಹೊಲಕ್ಕೆ ಉತ್ತಮ ನೈಸರ‍್ಗಿಕ ಗೊಬ್ಬರವು ದೊರಕಿದಂತಾಗುತ್ತದೆ.

ತೊಗರಿಕಾಳು ಹಾಗೂ ಅವರೆಕಾಳುಗಳನ್ನು ಒಣಗಿಸಿ ಎರಡು ಹೋಳುಗಳಾಗಿ ಪರಿವರ‍್ತಿಸಿ ತೊಗರಿಬೇಳೆ, ಅವರೆಬೇಳೆಗಳಾಗಿ ಉಪಯೋಗಿಸಬಹುದು. ಅವರೆಬೇಳೆಗಿಂತ, ತೊಗರಿಬೇಳೆಯು ಅಡಿಗೆಗೆ ರುಚಿ ಕೊಡುವುದರಿಂದ, ನಿತ್ಯ ಬಳಕೆಗಾಗಿ ಉಪಯೋಗಿಸುವುದು. ಬೇಳೆ ಮಾಡಲಿಕ್ಕಾಗಿಯೇ ಯಂತ್ರಗಳು ಇರುವುವು. ಹಿಂದೆ ಹಳ್ಳಿಗಳಲ್ಲಿ ಹಿರಿಯರು ಒಣಕಾಳುಗಳನ್ನು ಸೀಳಿ ಬೇಳೆ ಮಾಡಲು ಅನುಕೂಲವಾದಂತಹ ನುಣುಪಾದ ಕಲ್ಲು ಗುಂಡುಗಳನ್ನು ಬಳಸುತ್ತಿದ್ದರು.

ಪೋಶಕಾಂಶಗಳ ಆಗರ

ಹಸಿಕಾಳುಗಳು ವಿಟಮಿನ್ ಸಿ, ಬಿ ಹೀಗೆ ಇತರ ಪೋಶಕಾಂಶಗಳ ಆಗರ. ಎಲ್ಲಾ ವಿದದಲ್ಲಿಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಹಸಿಕಾಳುಗಳಲ್ಲಿ ಅತಿಯಾದ ಕೊಬ್ಬಿನಂಶ ಇಲ್ಲದಿರುವುದರಿಂದ ಹ್ರುದಯ ಸಂಬಂದೀ ರೋಗಗಳಿಗೆ ಕಾರಣವಾಗುವುದಿಲ್ಲ. ಇವು ರಕ್ತ ಶುದ್ದಿಗೂ ಉಪಯೋಗಕಾರಿ. ನಾರಿನಂಶ ಇರುವುದರಿಂದ ಜೀರ‍್ಣಕ್ರಿಯೆಯೂ ಸುಲಬ, ರಕ್ತದಲ್ಲಿನ ಸಕ್ಕರೆಮಟ್ಟವನ್ನು ಸಮತೋಲನದಲ್ಲಿಡುತ್ತವೆ.

ಮಿತ, ಹಿತ

ಆದರೆ ಹಸಿಕಾಳಿನ ಅತಿಯಾದ ಸೇವನೆಯಿಂದ ಒಮ್ಮೊಮ್ಮೆ ಆಮ್ಲೀಯತೆ (Acidity) ಉಲ್ಬಣವಾಗಿ, ಅಜೀರ‍್ಣತೆ ಉಂಟಾಗುವ ಸಂಬವವಿದೆ. ಅದರಲ್ಲೂ ಪುಟ್ಟ ಮಕ್ಕಳಲ್ಲಿ ಬಹು ಬೇಗನೆ ಅಜೀರ‍್ಣತೆಯಾಗುವ ಸಂಬವವಿದೆ. ಆದ್ದರಿಂದ ಇವುಗಳ ಬಳಕೆ ಮಿತವಾಗಿದ್ದರೆ ಒಳಿತು.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: