ಮರಿಯಪ್ಪ ಕೆಂಪಯ್ಯ – ಬಾರತದ ಪುಟ್ಬಾಲ್ ದಂತಕತೆ

ರಾಮಚಂದ್ರ ಮಹಾರುದ್ರಪ್ಪ.

ಬಾರತದಲ್ಲಿ ಹೇಳಿಕೊಳ್ಳುವಂತಹ ಪುಟ್ಬಾಲ್ ಇತಿಹಾಸವಿಲ್ಲದಿದ್ದರೂ ಹಿಂದೆ ಕೆಲವು ಬಾರಿ ರಾಶ್ಟ್ರೀಯ ತಂಡ ಅರ‍್ಹತೆ ಪಡೆದು ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದುಂಟು. ಆ ಹೊತ್ತಿನಲ್ಲಿ 1956 ರ ಮೆಲ್ಬರ‍್ನ್ ಒಲಂಪಿಕ್ಸ್ ಮತ್ತು 1960ರ ರೋಮ್ ಒಲಂಪಿಕ್ಸ್ ನಲ್ಲಿ ಬಾರತದ ತಂಡದ ಬರವಸೆಯ ಮಿಡ್ ಪೀಲ್ಡರ‍್ ಆಗಿ ತಂಡದ ಆದಾರ ಸ್ತಂಬವಾಗಿದ್ದವರೇ ಕನ್ನಡಿಗ ಮರಿಯಪ್ಪ ಕೆಂಪಯ್ಯ. ಮಾಸ್ಟರ‍್ ಡ್ರಿಬ್ಲರ‍್ ಎಂದೇ ಹೆಸರುವಾಸಿಯಾಗಿದ್ದ ಕೆಂಪಯ್ಯ, ಪುಟ್ಬಾಲ್ ಅಂಗಳದಲ್ಲಿ ಪಾದರಸದಂತೆ ಸಂಚರಿಸಿ ಕ್ಶಣ ಮಾತ್ರದಲ್ಲಿ ಎದುರಾಳಿಯಿಂದ ಚೆಂಡು ಕಸಿದುಕೊಳ್ಳುವುದರಲ್ಲಿ ನಿಪುಣರಾಗಿದ್ದರು.

ಹುಟ್ಟು – ಆಟದ ನಂಟು

ಬೆಂಗಳೂರಿನಲ್ಲಿ ಮಾರ‍್ಚ್ 4, 1932 ರಲ್ಲಿ ಕೆಂಪಯ್ಯ ಹುಟ್ಟಿದರು. ನಗರದ ಹಲಸೂರಿನಲ್ಲಿ ಬೆಳೆದ ಅವರಿಗೆ ಎಳವೆಯಿಂದಲೇ ಆಟದ ಗೀಳು ಅಂಟಿಕೊಂಡಿತು. ಅಶ್ಟೇನೂ ಎತ್ತರವಿರದ ಕೆಂಪಯ್ಯ ಮೊದಲಿಗೆ ಬಾಕ್ಸಿಂಗ್ ಆಯ್ದುಕೊಂಡರು. ಆ ಬಳಿಕ ಕೆಲಕಾಲ ಅತ್ಲೆಟಿಕ್ಸ್ ಗೆ ಮನಸೋತು ಲಾಂಗ್ ಡಿಸ್ಟನ್ಸ್ ಓಟಗಾರನಾಗುವತ್ತ ಬೆವರು ಹರಿಸಿದರು. ನಂತರ ಅತ್ಲೆಟಿಕ್ಸ್ ಕೂಡ ಅವರಿಗೆ ಹಿಡಿಸದೆ ಹೋಯಿತು. ಆದರೆ ಅಟೋಟೋಗಳ ಬಗ್ಗೆ ವಿಶೇಶ ಒಲವು ಹೊಂದಿದ್ದ ಅವರನ್ನು ಕಡೆಗೆ ಪುಟ್ಬಾಲ್ ತನ್ನತ್ತ ಸೆಳೆಯಿತು. ಮನೆಯ ಸುತ್ತಮುತ್ತ ಇದ್ದ ಹಲವಾರು ಪುಟ್ಬಾಲ್ ಮೈದಾನಗಳಲ್ಲಿ ದಿನವೂ ಸ್ತಳೀಯ ಕ್ಲಬ್ ತಂಡಗಳ ನಿರಂತರ ಅಬ್ಯಾಸವನ್ನು ಗಮನಿಸುತ್ತಿದ್ದ ಕೆಂಪಯ್ಯನವರು, ತಮ್ಮ ಬೂಟ್ಸ್ ನ ಲೇಸ್ ಗಳನ್ನು ಬಿಗಿ ಮಾಡಿಕೊಂಡು ಕಣಕ್ಕೆ ಇಳಿದರು. ಬೆಂಗಳೂರಿನ RBANMS ಶಾಲೆಯಲ್ಲಿ ಓದುವಾಗಲೂ ಕೂಡ ತಮ್ಮ ಪುಟ್ಬಾಲ್ ಕಲಿಕೆಯನ್ನು ಮುಂದುವರೆಸಿ, ವೇಗವಾಗಿ ಓಡುತ್ತಲೇ ಚೆಂಡನ್ನು ಕಸಿದುಕೊಳ್ಳುವ ಚಳಕ ಮತ್ತು ಡ್ರಿಬ್ಲಿಂಗ್ ಚಳಕವನ್ನು ಮೈಗೂಡಿಸಿಕೊಂಡು ಆಟಗಾರನಾಗಿ ಬೆಳೆಯುತ್ತಾ ಹೋದರು. ಶಾಲಾ ಶಿಕ್ಶಣ ಮುಗಿಯುವ ಹೊತ್ತಿಗೆ ಸತತವಾದ ಅಬ್ಯಾಸದಿಂದ ವ್ರುತ್ತಿಪರ ಪುಟ್ಬಾಲ್ ಪಟುವಂತೆ ಅವರು ರೂಪುಗೊಂಡರು. 1950 ರ ದಶಕದ ಆರಂಬದಲ್ಲಿ ಹದಿನೆಂಟರ ಹರೆಯದ ಕೆಂಪಯ್ಯರನ್ನು ಸ್ತಳೀಯರೆಲ್ಲಾ ಬರವಸೆಯ ಕಣ್ಣುಗಳಿಂದ ನೋಡುವ ಮಟ್ಟಿಗೆ ಮೋಡಿ ಮಾಡಿ, ಮನೆಮಾತಾದದ್ದು ವಿಶೇಶ.

ವ್ರುತ್ತಿಪರ ಪುಟ್ಬಾಲ್ ಬದುಕು

ಮೊದಲಿಗೆ ಬೆಂಗಳೂರು ಮುಸ್ಲಿಮ್ಸ್ ಕ್ಲಬ್ ಪರ ವ್ರುತ್ತಿಪರ ಪುಟ್ಬಾಲ್ ಆಡಿದ ಕೆಂಪಯ್ಯನವರು, ಅವರ ತಂಡಕ್ಕೆ ಸಾಕಶ್ಟು ಪಂದ್ಯಾವಳಿಗಳಲ್ಲಿ ಗೆಲುವು ದಕ್ಕಿಸಿಕೊಟ್ಟು ಹೆಸರು ಗಳಿಸಿದರು. ಕ್ಲಬ್ ಮಟ್ಟದಲ್ಲಿ ತಮ್ಮ ಅಳವನ್ನು ಸಾಬೀತು ಮಾಡಿದ ಮೇಲೆ 1954 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಸಂತೋಶ್ ಟ್ರೋಪಿ ಪಂದ್ಯಾವಳಿಗೆ ಅವರನ್ನು ಮೈಸೂರು ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಇಲ್ಲೂ ಕೂಡ ತಮ್ಮ ಅಪರೂಪದ ಕಾಲ್ಚಳಕದಿಂದ ಸಂಚಲನ ಮೂಡಿಸಿ ಅಂಗಳದಲ್ಲಿ ನೆರೆದ್ದಿದ್ದ ಬಂಗಾಳಿಗಳ ಮೆಚ್ಚುಗೆ ಗಳಿಸಿದರು. ಕೆಂಪಯ್ಯರ ಅಗಾದ ಪ್ರತಿಬೆಯನ್ನು ಕಂಡು ಪ್ರಬಾವಗೊಂಡ ಈಸ್ಟ್ ಬಂಗಾಳ ತಂಡ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ನಂತರ 1956 ರಲ್ಲಿ ದೆಹಲಿಯಲ್ಲಿ ನಡೆದ ದುರಂದ್ ಕಪ್ ಅನ್ನು ಈಸ್ಟ್ ಬಂಗಾಳ ತಂಡ ಗೆದ್ದು ಬೀಗಿತು. ಈ ಗೆಲುವಿನ ಪ್ರಮುಕ ರೂವಾರಿ ಕನ್ನಡಿಗ ಕೆಂಪಯ್ಯ ಆಗಿದ್ದರು. ಇದರ ಬೆನ್ನಲ್ಲೇ ರೋವರ‍್ಸ್ ಕಪ್ ನಲ್ಲಿ ಮೊಹಮಡ್ಡನ್ ಸ್ಪೋರ‍್ಟಿಂಗ್ ತಂಡದ ಪರ ಆಡಿ ಬಲಿಶ್ಟ ಮೋಹನ್ ಬಗಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಪೈನಲ್ಸ್ ನಲ್ಲಿ ಮಣಿಸಿ, ಪ್ರಶಸ್ತಿಯನ್ನು ತಮ್ಮ ತಂಡದ ಮುಡಿಗೇರಿಸಿದರು. ಸೋಲರಿಯದ ಮೋಹನ್ ಬಗಾನ್ ತಂಡವನ್ನು ಮಂಡಿಯೂರುವಂತೆ ಮಾಡಿದ ಕೆಂಪಯ್ಯನವರ ಈ ಸೊಗಸಾದ ಪ್ರದರ‍್ಶನ ಪುಟ್ಬಾಲ್ ಜಗತ್ತು ಬೆಕ್ಕಸ ಬೆರಗಾಗುವಂತೆ ಮಾಡಿತು. ಅಕ್ಶರಶಹ ಅವರು ಪವಾಡವನ್ನೇ ಮಾಡಿದ್ದರು. ಪುಟ್ಬಾಲ್ ವಲಯದಲ್ಲಿ ಅವರ ಆಕ್ರಮಣಕಾರಿ ಆಟ ತೀವ್ರ ಚರ‍್ಚೆ ಹಾಗೂ ವಿಮರ‍್ಶೆಗೆ ಗ್ರಾಸವಾಯಿತು. ಬಳಿಕ ತಮಗೆ ಸೋಲುಣಿಸಿದ ಕೆಂಪಯ್ಯನವರನ್ನು ಮೋಹನ್ ಬಗಾನ್ ತಂಡ ತಡಮಾಡದೆ ತನ್ನ ತೆಕ್ಕೆಗೆ ಹಾಕಿಕೊಂಡಿತು. 1957 ರಿಂದ ಎಂಟು ವರುಶಗಳ ಕಾಲ ಮೋಹನ್ ಬಗಾನ್ ಪರ ಕಣಕ್ಕಿಳಿದ ಕೆಂಪಯ್ಯ ತಮ್ಮ ಹೊಸತಂಡಕ್ಕೂ ಹಲವಾರು ಗೆಲುವುಗಳನ್ನು ಕಾಣಿಕೆಯಾಗಿ ನೀಡಿದರು. ಈ ಹೊತ್ತಿನಲ್ಲಿ ಸತತ ಐದು IFA ಶೀಲ್ಡ್ ಪೈನಲ್ಸ್ ಆಡಿದ ಮೋಹನ್ ಬಗಾನ್ ಸತತ ಮೂರು ಬಾರಿ (1960-62) ಪ್ರಶಸ್ತಿಯನ್ನು ಗೆದ್ದು ಇತಿಹಾಸ ಬರೆಯಿತು. ಮತ್ತು1963-65 ರ ವರೆಗೂ ಸತತ ಮೂರು ವರುಶ ದುರಂದ್ ಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಕೂಡ ಈ ತಂಡ ಪಡೆಯಿತು. ಒಟ್ಟು ಐದು ಬಾರಿ ದುರಂದ್ ಕಪ್ ಕೂಡ ಗೆದ್ದು ಬಾರತದ ಪುಟ್ಬಾಲ್ ಲೋಕದ ದೊಡ್ಡಣ್ಣನಂತೆ ಮೋಹನ್ ಬಗಾನ್ ಮೆರೆಯಿತು. ತಂಡದ ಸುವರ‍್ಣ ಯುಗವಾಗಿದ್ದ ಹೊತ್ತಿನಲ್ಲಿ ತಂಡಕ್ಕೆ ಅತಿಹೆಚ್ಚು ಕೊಡುಗೆ ನೀಡಿ ಎದುರಾಳಿಯನ್ನು ನಡುಗಿಸಿದವರಲ್ಲಿ ಮುಂಚೂಣಿಯಲ್ಲಿದ್ದವರು ಕೆಂಪಯ್ಯನವರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ತಮ್ಮ ವರುಶಗಳ ಅನುಬವದಿಂದ ತಂಡದ ಮೇಲೆ ತನ್ನಂಬಿಕೆಯ ಚಾಪನ್ನು ಅವರು ಮೂಡಿಸಿದ್ದರು. ಹಾಗಾಗಿಯೇ ಒಂದರ ಹಿಂದೊಂದು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಾ ತಂಡದ ಗೆಲುವಿನ ನಾಗಾಲೋಟ ಸುಮಾರು ಒಂದು ದಶಕದ ವರೆಗೂ ಮುಂದುವರೆಯಿತು. ನಂತರ ತಮ್ಮನ್ನು ದತ್ತು ಪಡೆದಿದ್ದ ಬಂಗಾಳದ ಪರ ಕೂಡ ಕೆಲ ಕಾಲ ಕೆಂಪಯ್ಯ ಅವರು ಸಂತೋಶ್ ಟ್ರೋಪಿಯಲ್ಲಿ ಆಡಿದರು.

ಅಂತರಾಶ್ಟ್ರೀಯ ವ್ರುತ್ತಿ ಬದುಕು

1955 ರಿಂದ 1964 ರ ತನಕ ಬಾರತ ತಂಡದ ಅವಿಬಾಜ್ಯ ಅಂಗವಾಗಿದ್ದ ಕೆಂಪಯ್ಯನವರು ಎರಡು ಒಲಂಪಿಕ್ಸ್ ಹಾಗೂ ಒಂದು ಏಶಿಯನ್ ಗೇಮ್ಸ್ ಒಳಗೊಂಡು ಹಲವಾರು ಅಂತರಾಶ್ಟ್ರೀಯ ಪಂದ್ಯಾವಳಿಗಳಲ್ಲಿ ಸೆಣಿಸಿದರು. 1956 ರ ಮೆಲ್ಬರ‍್ನ್ ಒಲಂಪಿಕ್ಸ್ ನಲ್ಲಿ ಬಾರತ ಆಸ್ಟ್ರೇಲಿಯವನ್ನು (4-1) ರಿಂದ ಮಣಿಸಿ ಸೆಮಿಪೈನಲ್ ವರೆಗೂ ತಲುಪಿ, ಕೂದಲೆಳೆಯಲ್ಲಿ ಪದಕ ವಂಚಿತರಾಗಿದ್ದು ಒಲಂಪಿಕ್ಸ್ ನಲ್ಲಿ ಇಲ್ಲಿವರೆಗೂ ಬಾರತದ ಶ್ರೇಶ್ಟ ಸಾದನೆ. ತಂಡದ ಈ ಅಚ್ಚಳಿಯದ ಅದ್ವಿತೀಯ ಸಾದನೆ ಹಿಂದೆ ಮಿಡ್ ಪೀಲ್ಡರ‍್ ಕೆಂಪಯ್ಯರ ಶ್ರಮ ಸಾಕಶ್ಟಿತ್ತು. ಪೀಟರ‍್ ತಂಗರಾಜ್, ಜರ‍್ರ‍್ನೈಲ್ ಸಿಂಗ್, ಚೂನಿಗೋಸ್ವಾಮಿ , ಪಿ.ಕೆ ಬ್ಯಾನರ‍್ಜಿ, ಯೂಸುಪ್ ಕಾನ್ ರಂತಹ ತಮ್ಮ ಸಮಕಾಲೀನರಾದ ಹಲವಾರು ದಿಗ್ಗಜ ಆಟಗಾರರ ಪೈಕಿ ಕೆಂಪಯ್ಯ ವಿಶಿಶ್ಟವಾಗಿ ನಿಲ್ಲುತ್ತಾರೆ. ಅವರ ದಣಿವರಿಯದ ವ್ರುತ್ತಿಪರತೆಯಿಂದ ಬಾರತದ ಕೋಚ್ ರಹೀಮ್ ರ ನೆಚ್ಚಿನ ಆಟಗಾರರೆನಿಸಿಕೊಂಡರು. ನಿರಂತರ ದೈಹಿಕ ಕಸರತ್ತು, ಶಿಸ್ತಿನ ಊಟ ಕ್ರಮ, ಶ್ರಮ ಅವರ ಮೇರುಗುಣಗಳಾಗಿದ್ದವು. ಪ್ರತೀ ದಿನ ಅಬ್ಯಾಸದ ಬಳಿಕವೂ ಅವರು ಮೈದಾನದಲ್ಲಿ 12 ಸುತ್ತು ಓಡುತ್ತಿದ್ದದ್ದು ಹಾಗೂ ಕೋಚ್ ವಿಶ್ರಾಂತಿ ದಿನ ನೀಡಿದಾಗಲೂ ಅವರು ಸ್ವಇಚ್ಚೆಯಿಂದ ಅಬ್ಯಾಸ ಮಾಡುತ್ತಿದ್ದದ್ದು ನಂಬಲಸಾದ್ಯವಾದರೂ ದಿಟ. ಕೆಲವು ವರುಶಗಳ ಕಾಲ ಇಂಗ್ಲೆಂಡ್ ನ ಹ್ಯಾರಿ ರೈಟ್ ಬಾರತದ ಕೋಚ್ ಆಗಿದ್ದಾಗ ಕೆಂಪಯ್ಯರ ಚಳಕ ಹಾಗೂ ದೈಹಿಕ ಶಿಸ್ತನ್ನು ಕಂಡು ಇಂಗ್ಲೆಂಡ್ ನ ವ್ರುತ್ತಿಪರ ಆಟಗಾರರಿಗೆ ಕೆಂಪಯ್ಯ ಸರಿಸಮಾನರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹೆಚ್ಚಾಗಿ ಬಲ ಹಾಪ್ ಎಡೆಗೆ ಆಡುತ್ತಿದ್ದ ಕೆಂಪಯ್ಯ ಮೈದಾನದ ಎಲ್ಲೆಡೆಯಲ್ಲೂ ಅಶ್ಟೇ ಪಕ್ವತೆಯಿಂದ ಆಡಬಲ್ಲ ಅಂಜಿಕೆ ಅರಿಯದ ಹೋರಾಟಗಾರರಾಗಿದ್ದರು. ಅವರ ಬ್ಲಾಕಿಂಗ್, ಟ್ಯಾಕ್ಲಿಂಗ್ ಮತ್ತು ಪಾಸ್ ಮಾಡುವ ಚಳಕ ವಿಶ್ವದರ‍್ಜೆ ಮಟ್ಟದ್ದಾಗಿದ್ದವು. ಚೆಂಡು ಹತೋಟಿಗೆ ಪಡೆದ ಎದುರಾಳಿ ಅವರೆದುರು ಒಂದು ಕ್ಶಣ ಕೂಡ ಮೈಮರೆಯುವಂತಿರಲಿಲ್ಲ. ಮೂರ‍್ನಾಲ್ಕು ಮಂದಿ ಸುತ್ತುಗಟ್ಟಿದ್ದರೂ ಅವರ ಕಣ್ತಪ್ಪಿಸಿ ಚೆಂಡು ಕಸಿಯುವ ವಿಶೇಶ ಚಳಕ ಕೆಂಪಯ್ಯರಲ್ಲಿತ್ತು. ಗಟ್ಟಿತನ, ಹೋರಾಟಕ್ಕೆ ಹೆಸರುವಾಸಿಯಾಗಿದ್ದ ಕೆಂಪಯ್ಯ ಈಗಿನ ಆಟಗಾರರಿಗೆ ದೊಡ್ಡ ಮಾದರಿ ಎಂದು ಪುಟ್ಬಾಲ್ ಪಂಡಿತರು ಈಗಲೂ ನೆನೆಯುವುದುಂಟು. ಬಾರತದ ಪುಟ್ಬಾಲ್ ಇತಿಹಾಸದಲ್ಲಿ ಆ ಬಗೆಯ ಗೌರವಾನ್ವಿತ ಎಡೆ ಕನ್ನಡಿಗ ಕೆಂಪಯ್ಯ ಸಂಪಾದಿಸಿದ್ದಾರೆ.

ನಿವ್ರುತ್ತಿ ನಂತರದ ಬದುಕು

ಆಟಗಾರನಾಗಿ ತಮ್ಮ ವ್ರುತ್ತಿ ಬದುಕು ಪೂರೈಸಿದ ಮೇಲೆ ಕೆಂಪಯ್ಯ ಹಲವಾರು ತಂಡಗಳ ಕೋಚ್ ಆಗಿ ದಶಕಗಳ ಕಾಲ ಆಟದೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿದ್ದರು. ಬೆಂಗಳೂರಿನ LRDE ತಂಡ, ಕರ‍್ನಾಟಕದ ಕಿರಿಯರ ಹಾಗೂ ಹಿರಿಯರ ತಂಡಕ್ಕೂ ಅವರು ತಮ್ಮ ಅನುಬವವನ್ನು ದಾರೆ ಎರೆದರು. ದೊಡ್ಡ ಗುರಿಗಳನ್ನು ಇಟ್ಟುಕೊಳ್ಳದೆ ಆಟಗಾರರು ಕೇವಲ ಒಂದು ಸರ‍್ಕಾರಿ ಕೆಲಸಕ್ಕಾಗಿ ಪುಟ್ಬಾಲ್ ಆಡುವುದು ಕೆಂಪಯ್ಯರಿಗೆ ಹಿಡುಸುತ್ತಿರಲಿಲ್ಲ. ತಮ್ಮ ವ್ರುತ್ತಿಪರತೆಯಿಂದ ಸದಾ ಯುವ ಆಟಗಾರರಿಗೆ ಅಂತರಾಶ್ಟ್ರೀಯ ಮಟ್ಟ ತಲುಪುವಂತೆ ಹುರಿದುಂಬಿಸಿ ಅವರ ಬೆನ್ನಿಗೆ ನಿಲ್ಲುತ್ತಿದ್ದರು. ಬದುಕಲ್ಲಿ ಒಳ್ಳೆ ಶಿಸ್ತು ಕ್ರಮ ಹೊಂದಿದ್ದ ಅವರು ತಮ್ಮ ಬಳಿ ಪಳಗಿದ ಆಟಗಾರರಿಗೂ ಅವೇ ಗುಣಗಳನ್ನುರೂಡಿ ಮಾಡಿಸಿ, ಕರ‍್ನಾಟಕದಿಂದ ಹಲವಾರು ಆಟಗಾರರು 70 ಹಾಗೂ 80 ರ ದಶಕದಲ್ಲಿ ರಾಶ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದರು.

ಕೆಂಪಯ್ಯನವರಿಗೆ ಒಲಿದು ಬಂದ ಪ್ರಶಸ್ತಿಗಳು

ಪುಟ್ಬಾಲ್ ದಿಗ್ಗಜ ಕೆಂಪಯ್ಯರ ದಶಕಗಳ ಸಾದನೆಗಳಿಗೆ ಸಹಜವಾಗಿಯೇ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದವು. ಅವುಗಳಲ್ಲಿ 1962 ರಲ್ಲಿ ಪಡೆದ ‘ಬೆಸ್ಟ್ ವಿಂಗ್ ಹಾಪ್’ ಅವಾರ‍್ಡ್ ಹಾಗೂ 2000 ದಲ್ಲಿ ಗಳಿಸಿದ’ಸ್ಪೋರ‍್ಟ್ಸ್ ಮ್ಯಾನ್ ಆಪ್ ದಿ ಮಿಲೇನಿಯಮ್’ ಪ್ರಶಸ್ತಿಗಳು ಪ್ರಮುಕವಾದವು. ಇದಲ್ಲದೆ 1968 ರಲ್ಲಿ ಕರ‍್ನಾಟಕದ ಮುಕ್ಯಮಂತ್ರಿಗಳಿಂದ ಗೌರವಾನ್ವಿತ ಪ್ರಶಸ್ತಿ ಮತ್ತು 1983 ರಲ್ಲಿ ಕರ‍್ನಾಟಕ ಪುಟ್ಬಾಲ್ ಅಸೋಶಿಯೇಶನ್ ನ ವಿಶೇಶ ಪ್ರಶಸ್ತಿ ಪಡೆದಿದ್ದರು.

ಅಶ್ಟೆಲ್ಲಾ ಸಾದನೆ ಮಾಡಿ ಬೆಂಗಳೂರಿನಲ್ಲಿ ಎಲೆಮರೆಕಾಯಿಯಂತೆ ಬದುಕು ಸಾಗಿಸುತ್ತಿದ್ದ ಸರಳ ವ್ಯಕ್ತಿತ್ವದ ಕೆಂಪಯ್ಯನವರು, ಜುಲೈ 2, 2008 ರಂದು ತಮ್ಮ 75 ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದರು. ಅವರ ಸಾವಿನಿಂದ ಬಾರತದ ಪುಟ್ಬಾಲ್ ಇತಿಹಾಸದ ಒಂದು ದೊಡ್ಡ ಕೊಂಡಿಯೇ ಕಳಚಿದಂತಾಗಿದ್ದು ಸುಳ್ಳಲ್ಲ. ತಮ್ಮ ಬದುಕಿನ ಕೊನೆ ಕಾಲದವರೆಗೂ ಪುಟ್ಬಾಲ್ ಗಾಗಿ ಜೀವ ತೇದ ಕೆಂಪಯ್ಯ ನಿಜಕ್ಕೂ ಒಬ್ಬ ಶ್ರೇಶ್ಟ ದಂತಕತೆ. ಬಾರತದ ಉದ್ದಗಲಕ್ಕೂ ಈ ದಿಗ್ಗಜ ಕನ್ನಡಿಗನನ್ನುಇಂದಿಗೂ ಗೌರವಿಸುವವರಿದ್ದಾರೆ.

ಕರ‍್ನಾಟಕದಲ್ಲಿ ಪುಟ್ಬಾಲ್ ಇತಿಹಾಸವಿಲ್ಲ ಎಂದು ಮೂಗು ಮುರಿಯುವವರಿಗೆ ಕೆಂಪಯ್ಯರಂತಹ ಒಬ್ಬ ಮಹಾನ್ ಆಟಗಾರ ನಮ್ಮ ನಾಡಿನವರು ಎಂದು ಮರೆಯದೆ ಹೆಮ್ಮೆಯಿಂದ ನೆನಪಿಸೋಣ! ಹಾಗೆಯೇ ಮುಂದಿನ ಪೀಳಿಗೆಯ ಕನ್ನಡಿಗರಿಗೂ ಅವರ ಸಾದನೆಗಳನ್ನು ಪರಿಚಯಿಸೋಣ.

( ಚಿತ್ರಸೆಲೆ : sportskeeda.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: