ಬಟಾಣಿ ಪಲಾವ್

– ಸವಿತಾ.

  ಬೇಕಾಗುವ ಸಾಮಾನುಗಳು

  • ಅಕ್ಕಿ – 1 ಲೋಟ (ಬಾಸುಮತಿ ಅತವಾ ಯಾವುದೇ ಅಕ್ಕಿ)
  • ಹಸಿ ಬಟಾಣಿ ಅತವಾ ನೆನೆಸಿದ ಬಟಾಣಿ – 1 ಲೋಟ
  • ಈರುಳ್ಳಿ – 1
  • ಹಸಿ ಮೆಣಸಿನಕಾಯಿ – 3
  • ಚಕ್ಕೆ – 1 ಇಂಚು
  • ಏಲಕ್ಕಿ – 2
  • ಲವಂಗ – 4
  • ನಕ್ಶತ್ರ ಹೂವು – 1
  • ದಾಲ್ಚಿನಿ ಎಲೆ (ಪಲಾವ್ ಎಲೆ) – 1
  • ಗೋಡಂಬಿ – 6
  • ಒಣ ದ್ರಾಕ್ಶಿ – 10
  • ನಿಂಬೆ ರಸ – ಅರ‍್ದ ಹೋಳು
  • ಎಣ್ಣೆ – 3 ಚಮಚ
  • ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಬಟ್ಟಲು
  • ಜೀರಿಗೆ – ಅರ‍್ದ ಚಮಚ
  • ಹಸಿ ಶುಂಟಿ – ಕಾಲು ಇಂಚು

ಮಾಡುವ ಬಗೆ:

ಮೊದಲಿಗೆ ಬಾಸುಮತಿ ಅಕ್ಕಿ ತೊಳೆದು ಅರ‍್ದ ಗಂಟೆ ನೆನೆಯಲು ಬಿಡಬೇಕು (ಅಕ್ಕಿ ಬೇರೆಯದಾದರೂ ಹೀಗೆ ತೊಳೆದು ನೆನೆ ಇಟ್ಟುಕೊಳ್ಳಬಹುದು). ನಂತರ ಈರುಳ್ಳಿ, ಹಸಿ ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿ. ಆಮೇಲೆ, ಶುಂಟಿ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿರಿ. ಆಮೇಲೆ ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಜೀರಿಗೆ, ಚಕ್ಕೆ, ಲವಂಗ, ದಾಲ್ಚಿನಿ ಎಲೆ, ಏಲಕ್ಕಿ ಮತ್ತು ನಕ್ಶತ್ರ ಹೂವು ಹಾಕಿರಿ. ನಂತರ ಗೋಡಂಬಿ ಮತ್ತು ಒಣ ದ್ರಾಕ್ಶಿ ಸ್ವಲ್ಪ ಹಾಕಿ ಹುರಿಯಿರಿ. ನಂತರ ಹಸಿ ಶುಂಟಿ ಸ್ವಲ್ಪ, ಕತ್ತರಿಸಿದ ಈರುಳ್ಳಿ ಮತ್ತು ಹಸಿ ಬಟಾಣಿ ಕಾಳು ಹಾಕಿ ಹುರಿಯಿರಿ. ಆಮೇಲೆ ಅರ‍್ದ ಬಟ್ಟಲು ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿರಿ. ನಂತರ ನೆನೆಸಿದ ಅಕ್ಕಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ನಿಂಬೆ ರಸ, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಎರಡು ಲೋಟ ನೀರು ಸೇರಿಸಿ ಕುದಿಸಿ ಇಳಿಸಿ ( ಕುಕ್ಕರ್‍‍ನಲ್ಲಿ ಎರಡು ಕೂಗು ಕುದಿಸಬಹುದು ಇಲ್ಲವಾದಲ್ಲಿ ಹೊರಗೂ ಕುದಿಸಬಹುದು). ಈಗ ಇದರಮೇಲೆ ಕತ್ತರಿಸಿಟ್ಟ ಅರ‍್ದ ಬಟ್ಟಲು ಕೊತ್ತಂಬರಿ ಸೊಪ್ಪು ಉದುರಿಸಿರಿ. ಈಗ ಬಿಸಿ ಬಿಸಿ ಬಟಾಣಿ ಪಲಾವ್ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: