ತೈಲ್ಯಾಂಡಿನ ಬೌದ್ದ ದೀಕ್ಶೆ ಪಡೆವ ಪದ್ದತಿ!

– .

ಬೌದ್ದ ಸನ್ಯಾಸಿಯಾಗಿ ದೀಕ್ಶೆ ತೆಗೆದುಕೊಳ್ಳುವುದು ತಾಯ್ ಪುರುಶರ ಜೀವನದಲ್ಲಿ ಅತ್ಯಂತ ಪ್ರಮುಕ ಗಟ್ಟ. ತೈಲ್ಯಾಂಡಿನಲ್ಲಿ ಬಹುತೇಕ ಪುರುಶರು ತಮ್ಮ ಜೀವಮಾನದಲ್ಲಿ ಒಂದಲ್ಲಾ ಒಂದು ಬಾರಿ ಈ ದೀಕ್ಶೆಯನ್ನು ಪಡೆಯುವುದು ಬೌದ್ದ ದರ‍್ಮದಲ್ಲಿನ ನಂಬಿಕೆಗೆ ಮತ್ತು ಪೋಶಕರಿಗೆ ಸೂಚಿಸುವ ಗೌರವವಾಗಿದೆ. ತಾಯ್ ಸಮಾಜದಲ್ಲಿ ವೈಯುಕ್ತಿಕ ಮತ್ತು ಕೌಟುಂಬಿಕ ಅರ‍್ಹತೆ ಪಡೆಯಲು ಇದು ಸಹಾಯಕಾರಿ.

ದೀಕ್ಶೆಯ ಮೊದಲು

ದೀಕ್ಶೆ ಪಡೆಯುವ ನಿರ‍್ದಾರ ಮಾಡಿದ ವ್ಯಕ್ತಿ ಬೌದ್ದ ಆಚರಣೆಯಲ್ಲಿ ಬಳಸುವ ಪಟಣಗಳನ್ನು ಅದ್ಯಯನ ಮತ್ತು ಕಂಟಪಾಟ ಮಾಡಿರಬೇಕು. ಬೌದ್ದ ಪಟಣಗಳು ಪಾಲಿ ಬಾಶೆಯಲ್ಲಿರುವ ಕಾರಣ, ಮಾತ್ರುಬಾಶೆಯಲ್ಲಿ ಪಟಣ ಸಾದ್ಯವಿಲ್ಲ. ಹಾಗಾಗಿ ಪಾಲಿ ಬಾಶೆಯನ್ನು ಪೂರ‍್ಣವಾಗಿ ಕಲಿಯುವುದು ಅನಿವಾರ‍್ಯ. ಒಮ್ಮೆ ದೀಕ್ಶೆ ಪಡೆದು ಸನ್ಯಾಸಿಯಾದವರು ಲೌಕಿಕ ಸಮಸ್ಯೆಗಳನ್ನು ನಿಬಾಯಿಸುವ ಕಾರ‍್ಯ ನಿರ‍್ವಹಿಸುವಂತಿಲ್ಲ. ದೀಕ್ಶೆ ಪಡೆಯುವ ಮುನ್ನವೇ ಅವೆಲ್ಲ ಕ್ರಮದಲ್ಲಿರುವುದೇ ಎಂದು ಕಚಿತಪಡಿಸಿಕೊಳ್ಳಬೇಕು. ಸನ್ಯಾಸಿಯಾದ ನಂತರ ಹಣಕಾಸಿನ ವ್ಯವಹಾರ ಸಂಪೂರ‍್ಣ ನಿಶಿದ್ದ. ಸನ್ಯಾಸತ್ವ ಸ್ವೀಕರಿಸುವ ಮುನ್ನವೇ ಅದಕ್ಕೆ ಸೂಕ್ತ ವ್ಯವಸ್ತೆ ಮಾಡಿರಬೇಕು. ದೀಕ್ಶೆ ಪಡೆಯುವ ವ್ಯಕ್ತಿಯು ತನ್ನ ಮೂಲ ಉದ್ದೇಶವನ್ನು, ತನ್ನದೇ ಆಯ್ಕೆಯ ಮಟಕ್ಕೆ ತಿಳಿಸಿ, ಆ ಮಟದಲ್ಲೇ ಬೌದ್ದ ದರ‍್ಮದ ಬಗ್ಗೆ ಅದ್ಯಯನ ಮಾಡಬೇಕಿರುತ್ತದೆ. ನಂತರದ ದಿನಗಳಲ್ಲಿ, ತಾನು ಸನ್ಯಾಸ ದೀಕ್ಶೆ ಪಡೆಯುವ ದಿನಾಂಕವನ್ನು ಮಟಕ್ಕೆ ಮೊದಲೇ ತಿಳಿಸಬೇಕಿರುತ್ತದೆ.

ದೀಕ್ಶೆಯು ಮೊದಲು ದೀಕ್ಶೆ ಪಡೆಯುವವರ ಮನೆಯಲ್ಲಿ ಅದ್ಬುತವಾದ ದೊಡ್ಡ ಸಮಾರಂಬ ನಡೆಸಲಾಗುತ್ತದೆ. ದೀಕ್ಶೆಯನ್ನು ಬೋದಿಸುವ ಹಿರಿಯ ಸನ್ಯಾಸಿ, ದೀಕ್ಶೆ ಪಡೆಯಲಿರುವ ವ್ಯಕ್ತಿಯ ಮನೆಗೆ ಬೇಟಿ ನೀಡುತ್ತಾರೆ. ಇದನ್ನು ‘ನಾಕ್’ ಎನ್ನಲಾಗುವುದು. ಈತ ದೀಕ್ಶೆ ಪಡೆಯಲು ಇಚ್ಚಿಸಿರುವ ವ್ಯಕ್ತಿಯೊಡನೆ ಪ್ರಾರ‍್ತನೆ ಮತ್ತು ಬೌದ್ದ ಪಟಣಗಳನ್ನು ಪಟಿಸಿ, ನಂತರ ದೀಕ್ಶೆ ಪಡೆಯುವವನ ಮುಕ ಮತ್ತು ತಲೆಯ ಮೇಲಿರುವ ಕೂದಲು ಮತ್ತು ಹುಬ್ಬಿನ ಕೂದಲನ್ನು ತೆಗೆಯುತ್ತಾರೆ. ಈ ಸಮಯದಲ್ಲಿ ತೆಗೆದ ಕೂದಲು ನೆಲೆದ ಮೇಲೆ ಬೀಳದಂತೆ ಎಚ್ಚರ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕೂದಲುಗಳನ್ನು ತಾವರೆಯ ಎಲೆಯ ಮೇಲೆ ಹಿಡಿದು ಪಕ್ಕಕ್ಕಿಡಲಾಗುತ್ತದೆ ಇಲ್ಲವೆ ಹಾಗೆಯೇ ನದಿಯ ನೀರಿನಲ್ಲಿ ತೇಲಿ ಬಿಡಲಾಗುತ್ತದೆ. ದೀಕ್ಶೆಯನ್ನು ಬೋದಿಸಲು ಬಂದ ಸನ್ಯಾಸಿಯು ಮುಕದ ಮೇಲಿನ ಕೂದಲನ್ನು ಪೂರ‍್ಣವಾಗಿ ತೆಗೆದ ನಂತರ, ಆ ವ್ಯಕ್ತಿಯ ತಲೆಯ ಮೇಲೆ ಶುದ್ದೀಕರಣದ ಸಾಂಕೇತಿಕವಾಗಿ ನೀರನ್ನು ಹಾಕುತ್ತಾರೆ. ಈ ಸಮಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಬೌದ್ದ ಪಟಣಗಳನ್ನು ಮಾಡುತ್ತಾ ಆಶೀರ‍್ವದಿಸುತ್ತಾರೆ. ಇದಾದ ನಂತರ ಶುಬ್ರತೆ ಹಾಗೂ ಶುದ್ದತೆಯ ಪ್ರತೀಕವಾದ ಬಿಳಿ ನಿಲುವಂಗಿಯನ್ನು ಆತ ದರಿಸುತ್ತಾನೆ.

ಮನೆಯಿಂದ ಬೀಳ್ಕೊಡುಗೆ

ಮನೆಯಲ್ಲಿ ಈ ಕಾರ‍್ಯಕ್ರಮಗಳಾದ ಮೇಲೆ, ಅತಿ ರಂಜಿತ, ಸಂಬ್ರಮದಾಯಕ ಮತ್ತು ಸಂತೋಶದಾಯಕ ಮೆರವಣಿಗೆಯಲ್ಲಿ ದೀಕ್ಶೆ ಪಡೆದವರನ್ನು ಮಟಕ್ಕೆ ಕರೆದೊಯ್ಯಲಾಗುತ್ತದೆ. ದೀಕ್ಶೆಯನ್ನು ಪಡೆಯುವ ವ್ಯಕ್ತಿ ಯಾವುದಾದರೂ ಸಾರಿಗೆ ವಿದಾನಗಳ ಮೂಲಕ, ಎಂದರೆ, ಕಾರಾಗಲಿ, ಆಟೋ ರೀತಿಯ ವಾಹನವಾಗಲಿ, ಟಂ ಟಂ ನಂತಹ ವಾಹನದಲ್ಲಾಗಲಿ ಪ್ರಯಾಣಿಸಬೇಕಿರುತ್ತದೆ. ಏಕೆಂದರೆ ಆತನ ಪಾದಗಳು ನೆಲವನ್ನು ಸಂಪರ‍್ಕಿಸುವಂತಿಲ್ಲ. ಯಾವುದೇ ವಾಹನ ವ್ಯವಸ್ತೆಯಾಗದಿದ್ದಲ್ಲಿ, ಮಟವು ಹತ್ತಿರವಿದ್ದರೆ ಆತನನ್ನು, ಆತನ ಸ್ನೇಹಿತರು ಹೆಗಲ ಮೇಲೆ ಹೊತ್ತಾದರೂ ಕರೆದೊಯ್ಯಬೇಕಿರುವುದು ಅನಿವಾರ‍್ಯ. ಈ ಮೆರವಣಿಗೆಯಲ್ಲಿ ಆತನ ಹಿತೈಶಿಗಳು, ಪ್ರೀತಿಪಾತ್ರರು ದಂಡು ದಂಡಾಗಿ ಮಟದ ಮುಂಬಾಗಿಲವರೆಗೂ ಆತನನ್ನು ಹಿಂಬಾಲಿಸುವುದು ಸಾಮಾನ್ಯ. ಹಿಂಬಾಲಿಸುವವರು ಅಪಾರ ಪ್ರಮಾಣದ ಕಾಣಿಕೆಗಳನ್ನು ಮತ್ತು ಬೌದ್ದ ಸನ್ಯಾಸಿಯಾಗುವವನಿಗೆ ಅವಶ್ಯವಿರುವ ವಸ್ತುಗಳನ್ನೆಲ್ಲಾ ಮೆರವಣಿಗೆಯಲ್ಲಿ ಸಾಗಿಸುತ್ತಾರೆ.

ಮಟದಲ್ಲಿನ ವಿದಿವಿದಾನಗಳು

ಮಟಕ್ಕೆ ಬಂದು ದೀಕ್ಶೆ ಪಡೆಯುತ್ತಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಸದಸ್ಯರು ಗೌರವ ಪೂರ‍್ವಕವಾಗಿ ಮಟವನ್ನು ಮೂರು ಬಾರಿ ಪ್ರದಕ್ಶಿಣೆ ಹಾಕುವರು. ನಂತರ ದೀಕ್ಶೆ ಪಡೆಯುವ ವ್ಯಕ್ತಿ ಮಟಾದೀಶರನ್ನು (ಮುಕ್ಯ ಸನ್ಯಾಸಿಯನ್ನು) ಬೇಟಿಯಾಗುತ್ತಾನೆ. ಬೇಟಿಯ ಸಮಯದಲ್ಲಿ ಕೆಲವು ಬೌದ್ದ ದರ‍್ಮಗ್ರಂತಗಳನ್ನು ಪಟಿಸಿ, ಮಟಾದೀಶರೊಂದಿಗೆ ಸಂಬಾಶಣೆ ನಡೆಸಿ, ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ದೀಕ್ಶೆಯನ್ನು ನೀಡಿ ದೀಕ್ಶೆ ಪಡೆದವರನ್ನು ಸನ್ಯಾಸಿಗಳ ಸಂಗಕ್ಕೆ ಸೇರ‍್ಪಡೆಗೊಳಿಸುತ್ತಾರೆ.

ಇದಾದ ಕೂಡಲೇ ಆತನ ಕುಟುಂಬ ಸದಸ್ಯರು ಮೊಣಕಾಲ ಮೇಲೆ ಕೂತು, ಆತ ಮಟದಲ್ಲಿರುವಶ್ಟು ಸಮಯಕ್ಕೆ ಅವಶ್ಯವಿರುವ ಎಲ್ಲವನ್ನೂ ಅವನಿಗೆ ನೀಡುತ್ತಾರೆ. ಅದರಲ್ಲಿ ಕೇಸರಿ ವಸ್ತ್ರಗಳು, ಬಿಕ್ಶೆಯ ಬಟ್ಟಲು, ರೇಜರ್, ಸೂಜಿ ಮತ್ತು ನೀರನ್ನು ಸೋಸುವ ವಸ್ತ್ರಗಳು ಇವೇ ಮುಂತಾದ ಪ್ರಮುಕ ಎಂಟು ನಿಗದಿತ ವಸ್ತುಗಳು ಸೇರಿರುತ್ತವೆ. ಇದರೊಂದಿಗೆ ಒಂದು ಜೊತೆ ಚಪ್ಪಲಿ, ಒಂದು ಚೀಲ, ಮಲಗಲು ಚಾಪೆ, ದಿಂಬು ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ.

ದೀಕ್ಶಾ ಪ್ರತಿಜ್ನೆಯನ್ನು ಸ್ವೀಕರಿಸಿದ ಹಾಗೂ ಸಂಬಂದಿಕರಿಂದ ಗೌರವಿಸಲ್ಪಟ್ಟ ನಂತರ ಆತ ಕೇಸರಿ ಬಣ್ಣದ ನಿಲುವಂಗಿಯನ್ನು ತೊಟ್ಟು, ಅದಿಕ್ರುತವಾಗಿ ಬೌದ್ದ ಸನ್ಯಾಸಿಯಾಗುತ್ತಾನೆ. ಈ ಎಲ್ಲಾ ಆಚರಣೆಗಳು ಸಂಪನ್ನವಾದ ನಂತರ, ಮಟದಲ್ಲಿನ ಇತರೆ ಸನ್ಯಾಸಿಗಳು, ಹೊಸದಾಗಿ ದೀಕ್ಶೆ ಪಡೆದು ತಮ್ಮೊಡನೆ ಸೇರ‍್ಪಡೆಗೊಂಡ ಸನ್ಯಾಸಿಯ ಜೋತೆ ಸಹ ಬೋಜನವನ್ನು ಮಾಡುತ್ತಾರೆ. ತದನಂತರ ಅವರುಗಳಾರೂ ಮರುದಿನದವರೆಗೂ ತಿನ್ನಲು ಏನನ್ನೂ ಸ್ವೀಕರಿಸುವುದಿಲ್ಲ. ಸನ್ಯಾಸಿಗಳ ಬೋಜನ ಮುಗಿದ ಮೇಲೆ, ಹೊಸದಾಗಿ ಸೇರ‍್ಪಡೆಯಾದ ಸನ್ಯಾಸಿಯ ಕುಟುಂಬ ವರ‍್ಗದವರು, ಮಟದಲ್ಲಿಯೇ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಮನೆಯಲ್ಲಿ ಪಾರ‍್ಟಿ ಮಾಡುವ ಕುಟುಂಬ ಸದಸ್ಯರು

ಸನ್ಯಾಸ ದೀಕ್ಶೆ ಪಡೆದ ವ್ಯಕ್ತಿಯ ಕುಟುಂಬ ಸದಸ್ಯರು, ಸ್ನೇಹಿತರು ನಂತರ ಮನೆಯಲ್ಲಿ ದೊಡ್ಡ ಪಾರ‍್ಟಿಯನ್ನೇ ಅಯೋಜಿಸುತ್ತಾರೆ. ಅದರಲ್ಲಿ ತಿಂದುಣ್ಣಲು ಸಾಕಶ್ಟು ಪದಾರ‍್ತಗಳನ್ನು, ಕುಡಿದು ತೇಗಲು ಸಾಕಶ್ಟು ಪಾನೀಯಗಳನ್ನು, ಜೋಡಿಸಿಟ್ಟಿರುತ್ತಾರೆ. ಇದರೊಂದಿಗೆ ಸಂಗೀತ ಕಾರ‍್ಯಕ್ರಮ, ಲೈವ್ ಬ್ಯಾಂಡುಗಳು, ತಾಯ್ ವಿಸ್ಕಿ, ತಾಯ್, ಮನರಂಜಿಸಲು ಬಾಡಿಗೆ ನರ‍್ತಕಿಯರು ಬಾಗಿಯಾಗುತ್ತಾರೆ.

ಜೀವನ ಪರ‍್ಯಂತ ಸನ್ಯಾಸಿಯಾಗಿಯೇ ಇರಬೇಕೆಂಬ ನಿಯಮವಿಲ್ಲ

ದೀಕ್ಶೆ ಪಡೆದ ವ್ಯಕ್ತಿ ಒಂದು ವಾರದಿಂದ ಮೂರು ತಿಂಗಳವರೆಗೆ, ಎಶ್ಟೇ ಸಮಯದವರೆಗಾದರೂ ಮಟದಲ್ಲಿ ಉಳಿಯಬಹುದು. ಜೀವನ ಪರ‍್ಯಂತ ಸನ್ಯಾಸಿಯಾಗಿಯೇ ಮುಂದುವರೆಯಬೇಕು ಎಂಬ ನಿಯಮವಿಲ್ಲ. ಹಾಗಾಗಿ ತೈಲ್ಯಾಂಡಿನ ಬಹುತೇಕ ಪುರುಶರು ಸನ್ಯಾಸ ದೀಕ್ಶೆಯನ್ನು ಮದುವೆಗೆ ಮುನ್ನ ಪಡೆದಿರುತ್ತಾರೆ. ಇದರಿಂದ ತೈಲ್ಯಾಂಡಿನಲ್ಲಿ ಬೌದ್ದ ದೀಕ್ಶೆ ಪಡೆದವರ ಸಂಕ್ಯೆ ಬಹಳಶ್ಟಿದೆ.

(ಮಾಹಿತಿ ಮತ್ತು ಚಿತ್ರಸೆಲೆ: theculturetrip.com, discoverwalks.com, thailand-property.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: