ಪದಗಳಾಟ ‘ವರ‍್ಡಲ್’

– ಪ್ರಶಾಂತ. ಆರ್. ಮುಜಗೊಂಡ.

ಕೂಡುದಾಣಗಳಲ್ಲಿ ಕಳೆದ ಒಂದೆರಡು ತಿಂಗಳಿಂದ ಸುದ್ದಿಯಲ್ಲಿರುವ ವರ‍್ಡಲ್(WORDLE) ಎಂಬ ಆಟದ ಬಗ್ಗೆ ನೀವು ಕೇಳಿರಬಹುದು. ನಿಮ್ಮ ಗೆಳೆಯರಲ್ಲಿ ಯಾರಾದರೊಬ್ಬರು ಮಿಂದಾಣದಲ್ಲಿ ಸಣ್ಣ ಸಣ್ಣ ಚೌಕಾಕಾರದ ಹಸಿರು, ಹಳದಿ, ಮತ್ತು ಬೂದುಬಣ್ಣದ ಸಣ್ಣ ಸಣ್ಣ ಟೈಲ್ಸ್ ಗಳಂತಿರುವ ಏನೋ ಒಂದು ಚಿತ್ರವನ್ನು ಹಂಚಿಕೊಳ್ಳುತ್ತಿರುವುದನ್ನ ಕಂಡಿರಬಹುದು. ಇನ್ನೂ ಈ ಆಟವನ್ನು ನೀವೇನಾದರೂ ಈಗಾಗಲೇ ಆಡಿದ್ದರೆ, ಅದರಲ್ಲಿ ಕೊಟ್ಟಿರುವ ಒಟ್ಟು ಪ್ರಯತ್ನಗಳ ಮುಂಚೆ ಪೂರ‍್ತಿಗೊಳಿಸಿದ್ದರೆ ಅದೊಂದು ಸಡಗರವೇ ಆಗಿರುತ್ತದೆ. ಏನಿದು ಈ ವರ‍್ಡಲ್ ಆಟ ಅಂತ ಇನ್ನೂ ತಿಳಿಯದೆ ಗೊಂದಲದಲ್ಲಿ ಇರುವವರಿಗಾಗಿಯೇ ಈ ಸಣ್ಣ ಬರಹ.

ಐದು ಬರಿಗೆಗಳ(Letters) ಪದವನ್ನು, ಆರು ಪ್ರಯತ್ನದಲ್ಲಿ ಊಹಿಸುವ ಒಗಟಿನ ಆಟವೇ ಈ ವರ‍್ಡಲ್. ಈ ಆಟವನ್ನು ಹುಟ್ಟು ಹಾಕಿದ್ದು ಜೋಶ ವಾರ‍್ಡ್ಲಲ್ ಎಂಬ ಅಮೇರಿಕಾದ ಕಂಪ್ಯೂಟರ್ ಇಂಜನಿಯರ್. ಒಗಟುಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ತನ್ನ ಪ್ರೀತಿಯ ಸಂಗಾತಿಯೊಂದಿಗೆ ಆಟವಾಡಲೆಂದೇ ಈ ಆಟವನ್ನು ಹೊರತಂದಿದ್ದರಂತೆ. ಈಗ ಇದೇ ಆಟವು ಲಕ್ಶಾಂತರ ಜನರ ಮೆಚ್ಚಿನ ಆಟವಾಗಿ ಸುದ್ದಿಯಲ್ಲಿರುವುದು ಒಂದು ಸೋಜಿಗದ ಸುದ್ದಿಯೇ ಹೌದು.

ವರ‍್ಡಲ್ ಆಟವನ್ನಾಡಲು ನೀವು ಯಾವುದೇ ತರಹದ ಬಳಕಗಳನ್ನು(Application) ನಿಮ್ಮ ಪೋನಿಗೆ ಇಳಿಸಿಕೊಳ್ಳುವುದು ಬೇಕಾಗಿಲ್ಲ. ಮಿಂಬಲೆಯಲ್ಲಿ WORDLE ಎಂದು ಬರೆದು ಹುಡುಕಿದರೆ ನೀವು ವರ‍್ಡಲ್ ಆಟದ ಮಿನ್ನೆಲೆಯನ್ನು ತಲುಪುವ ಕೊಂಡಿಯನ್ನು ಕಾಣಬಹದು, ಅತವಾ ನೇರವಾಗಿ wordle ಎಂಬ ಮಿನ್ನೆಲೆಗೆ ಹೋಗಿ ಆಟವನ್ನಾಡಲು ತೊಡಗಬಹುದು.

ಮೇಲೆ ಹೇಳಿದ ಮಿನ್ನೆಲೆಯನ್ನು ತೆರೆದಾಗ ನಿಮಗೆ ಆಟದ ಕೆಲವು ನಿಯಮಗಳು ಮತ್ತು ಹಸಿರು, ಹಳದಿ ಮತ್ತು ಬೂದು ಬಣ್ಣಗಳು ಏನನ್ನು ಹೇಳುತ್ತವೆ ಎಂಬ ತಿಳುಹಿಕೆಗಳು(suggestions) ಬರುತ್ತವೆ. ಅದನ್ನು ನೀವು ಓದಿ ತೆಗೆದ ನಂತರ ನಿಮ್ಮ ಮುಂದೆ 6 ಅಡ್ಡಸಾಲುಗಳು (Row) ಮತ್ತು 5 ಉದ್ದಸಾಲುಗಳನ್ನುಳ್ಳ (Column) ಡಬ್ಬದಂತೆ ಕಾಲಿಯಿರುವ ಒಂದು ಅಣಿಮಣೆ (Matrix ) ಬರುತ್ತದೆ. ಒಂದೊಂದು ಡಬ್ಬದಲ್ಲಿ ಒಂದೊಂದು ಬರಿಗೆಯನ್ನು ಮೂಡಿಸಿ, ಪದವೊಂದನ್ನು ಊಹಿಸುವುದೇ ಆಟ. ಈಗ ನೀವು 5 ಬರಿಗೆಯ ಪದವನ್ನು[ಒಂದೊಂದು ಸಾಲಿನ 5 ಡಬ್ಬಗಳಲ್ಲಿ] ತುಂಬಿಸುತ್ತಾ 6 ಪ್ರಯತ್ನದಲ್ಲಿ (6 ಅಡ್ಡ ಸಾಲುಗಳು) ಊಹಿಸಿ ಬರೆಯುತ್ತಾ ಹೋಗಬೇಕು.
ನಿಮ್ಮ ಮೊದಲ ಪ್ರಯತ್ನವು ಯಾವುದೇ ಸುಳಿವು ಇರದ ಒಂದು ಕುರುಡು ಊಹೆಯಾಗಿರುತ್ತದೆ. ಮೊದಲ ಸಾಲಿನಲ್ಲಿ ನೀವು 5 ಬರಿಗೆಯುಳ್ಳ ಯಾವುದಾದರೊಂದು ಹುರುಳುಳ್ಳ ಇಂಗ್ಲಿಶ್ ಪದವನ್ನು ಬರೆದು ಸೇರಿಸಬೇಕು. ನಂತರ ನೀವು ಬರೆದ ಪದದಲ್ಲಿರುವ 5 ಬರಿಗೆಗಳಿಗೆ ವರ‍್ಡಲ್ ಹಸಿರು, ಹಳದಿ ಮತ್ತು ಬೂದುಬಣ್ಣವನ್ನೂ ತುಂಬುತ್ತದೆ.

ಈ ಬಗೆ ಬಗೆಯ ಮೂರೂ ಬಣ್ಣಗಳನ್ನು ತುಂಬಿಸಿಕೊಂಡ ಬರಿಗೆಗಳು ಮಾತ್ರವೇ ನಿಮ್ಮ ಮುಂದಿನ ಮತ್ತೊಂದು ಊಹೆಗೆ ಇರುವ ಸುಳಿವುಗಳು. ಅದು ಹೇಗೆಂದರೆ

– ಇಲ್ಲಿ ಹಸಿರು ಬಣ್ಣ ತುಂಬಿಸಿಕೊಂಡ ಬರಿಗೆಯು ನೀವು ಊಹಿಸಬೇಕಾದ ಪದದಲ್ಲಿರುವ ಬರಿಗೆಯೇ ಆಗಿದ್ದು ಮತ್ತು ಈಗ ಅದು ಇರುವ ಜಾಗವೂ ಸರಿಯಾಗಿದೆ ಎಂದು ತಿಳಿಸುತ್ತದೆ.
– ಹಳದಿ ಬಣ್ಣವನ್ನು ಹೊಂದಿರುವ ಬರಿಗೆಯೂ ನೀವು ಊಹಿಸಬೇಕಾಗಿರುವ ಪದದಲ್ಲಿರುವ ಬರಿಗೆಯೇ ಆಗಿದ್ದು, ಆದರೆ ಅದು ತಪ್ಪಾದ ಜಾಗದಲ್ಲಿದೆ ಎಂದು ತಿಳಿಸುತ್ತದೆ.
– ಇನ್ನು ಬೂದುಬಣ್ಣ ಹೊಂದಿರುವ ಬರಿಗೆಗಳು ನೀವು ಊಹಿಸಬೇಕಾದ ಪದದಲ್ಲಿ ಇಲ್ಲದೆ ಇರುವ ಬರಿಗೆಗಳು ಎಂದು ತಿಳಿಸುತ್ತದೆ.

ಇದೇ ಬಗೆಯಲ್ಲಿ ಮೊದಲ ಪ್ರಯತ್ನದಲ್ಲಿ ಬರೆದ ಪದದ ಬರಿಗೆಗಳಿಗೆ WORDLE ನೀಡಿರುವ ಬಣ್ಣಗಳನ್ನು ಸುಳಿವುಗಳಾಗಿ ಇಟ್ಟುಕೊಂಡು ಮುಂದಿನ ಸಾಲಿನಲ್ಲಿ ಪದ ಊಹಿಸುವುದನ್ನು ಮುಂದುವರೆಸಬೇಕು, ಹೀಗೆ ಒಟ್ಟು 6 ಪ್ರಯತ್ನದಲ್ಲಿ ನೀವು ಸರಿಯಾದ ಪದವನ್ನು ಗುರುತಿಸಿದರೆ ಈ ಒಗಟನ್ನು ನೀವು ಬಗೆಹರಿಸಿದಂತೆ. ಅತೀ ಕಡಿಮೆ ಪ್ರಯತ್ನದಲ್ಲಿ ಇದನ್ನು ಬಗೆಹರಿಸುವುದೇ ಈಗ ಎಲ್ಲರ ಮುಂದಿರುವ ಗುರಿ.

ಸುಳುವಾದ ಒಗಟಿನ ಆಟವಾದ ವರ‍್ಡಲ್ ಅನ್ನು ಬಗೆಹರಿಸಲು ಪ್ರಯತ್ನ ಪಟ್ಟಾಗ ನಿಮ್ಮ ಇಂಗ್ಲಿಶ್ ಪದಸಂಪತ್ತನ್ನು ಬೆಳೆಸಿಕೊಳ್ಳಬಹುದು. ಸದ್ಯ ದಿನಕ್ಕೊಂದು ಪದವನ್ನು ಮಾತ್ರ ಊಹಿಸಲು ವರ‍್ಡಲ್ ನೀಡುತ್ತಿದ್ದು, ನೀವು ಇಂದಿನ ಒಗಟನ್ನು ಬಗೆಹರಿಸಿದರೆ ಮುಂದಿನ ಒಗಟಿಗೆ ನಾಳೆಯವರೆಗೂ ಕಾಯಬೇಕು.

(ಚಿತ್ರಸೆಲೆ: powerlanguage.co.uk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: