ಕರ‍್ನಾಟಕದ ಮಿಸ್ಟರ್ ಕ್ರಿಕೆಟ್ – ಎಮ್. ಚಿನ್ನಸ್ವಾಮಿ

– ರಾಮಚಂದ್ರ ಮಹಾರುದ್ರಪ್ಪ.

M Chinnaswamy, ಎಮ್. ಚಿನ್ನಸ್ವಾಮಿ

ಕ್ರಿಕೆಟ್ ಆಟ ಬಾರತದಲ್ಲಿ ಜನಪ್ರಿಯಗೊಂಡು ಇಂದು ಬಾರತೀಯರ ಬದುಕಿನ ಒಂದು ಬಾಗವೇ ಆಗಿರುವುದರ ಹಿಂದೆ ಹಲವಾರು ದಿಗ್ಗಜ ಆಟಗಾರರ ಜೊತೆಗೆ ಕೆಲವು ನಿಸ್ವಾರ‍್ತ ಕ್ರಿಕೆಟ್ ಆಡಳಿತಗಾರರ ಪರಿಶ್ರಮ ಕೂಡ ಸಾಕಶ್ಟಿದೆ. ಕ್ರಿಕೆಟ್ನಲ್ಲಿ ಹೆಚ್ಚು ಹಣ ಇರದ ಕಾಲದಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ಕಟ್ಟಿ ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲೇ ಆಗಿತ್ತು. ಇಂತಹ ಸಾಕಶ್ಟು ಸವಾಲುಗಳನ್ನು ಹಿಮ್ಮೆಟ್ಟಿ ದಶಕಗಳ ಕಾಲ ಆಡಳಿತಗಾರನಾಗಿ ಬಾರತದಲ್ಲಿ ಕ್ರಿಕೆಟ್ ಅನ್ನು ಪೋಶಿಸಿವುದರೊಟ್ಟಿಗೆ 1974 ರಲ್ಲಿ ಬೆಂಗಳೂರಿಗೆ ಟೆಸ್ಟ್ ಕ್ರಿಕೆಟ್ ಅನ್ನು ತಂದವರೇ ಕರ‍್ನಾಟಕದ ಮೇರು ಆಡಳಿತಗಾರ ಎಮ್. ಚಿನ್ನಸ್ವಾಮಿಯವರು.

ಹುಟ್ಟು – ಕ್ರಿಕೆಟ್ ನಂಟು

ಮಾರ‍್ಚ್ 29, 1900 ರಲ್ಲಿ ಕರ‍್ನಾಟಕದ ಪಾಂಡವಪುರದಲ್ಲಿ ಹುಟ್ಟಿದ ಚಿನ್ನಸ್ವಾಮಿ ಅವರು ಮೊದಲ ಹಂತದ ಶಾಲಾಕಲಿಕೆಯನ್ನು ತುಮಕೂರು ಹಾಗೂ ಆ ಬಳಿಕ ಮೈಸೂರಿನಲ್ಲಿ ಪೂರೈಸಿದರು. ಮುಂದೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು ನಂತರ 1925 ರಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ತಮ್ಮ ವ್ರುತ್ತಿಯನ್ನು ಮೊದಲುಮಾಡಿದರು. ತಮ್ಮ ಶಾಲಾ ದಿನಗಳಲ್ಲಿ ಪುಟ್ಬಾಲ್, ಟೇಬಲ್ ಟೆನ್ನಿಸ್ ಮತ್ತು ಕ್ರಿಕೆಟ್ ಆಡಿದ್ದ ಅವರಿಗೆ ಎಳವೆಯಿಂದಲೇ ಕ್ರಿಕೆಟ್ ಮೇಲೆ ವಿಶೇಶವಾದ ಒಲವಿತ್ತು. ವ್ರುತ್ತಿಪರರಾಗಿ ಯಾವ ಮಟ್ಟದಲ್ಲೂ ಚಿನ್ನಸ್ವಾಮಿಯವರು ಕ್ರಿಕೆಟ್ ಆಡದೆ ಹೋದರೂ ಅಬಿಮಾನಿಯಾಗಿ ಆಟದೊಂದಿಗೆ ಸದಾ ನಿಕಟ ನಂಟು ಹೊಂದಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನದ ಬಳಿ ಇದ್ದ ಕ್ರಿಶ್ಣ ಬಿಲ್ಡಿಂಗ್ಸ್ ಬಳಿ ವಕೀಲರಾಗಿ ತಮ್ಮ ಕಚೇರಿಯನ್ನು ತೆರೆದ ಮೇಲೆ ರಾಜ್ಯ ಕ್ರಿಕೆಟ್ ಅನ್ನು ಕಣ್ಣುಮುಂದೆ ಇನ್ನೂ ಹತ್ತಿರದಿಂದ ನೋಡುತ್ತಾ ಆಟದೊಂದಿಗೆ ಬೆಸೆದು ಹೋದರು. ಆಗಿನ ದಿನಗಳಲ್ಲಿ ಮೈಸೂರು ರಾಜ್ಯ ಕ್ರಿಕೆಟ್ ನ ತವರಾಗಿದ್ದ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಆಟದ ಆಯೋಜಕ ಚಟುವಟಿಕೆಗಳೊಂದಿಗೆ ತೊಡಗಿಕೊಂಡ ಚಿನ್ನಸ್ವಾಮಿಯವರು ಒಂದೊಂದೇ ಮೆಟ್ಟಿಲು ಏರುತ್ತಾ ಬೆಳೆದು ಕಡೆಗೆ 1953 ರಲ್ಲಿ ಮೈಸೂರು ರಾಜ್ಯ ಕ್ರಿಕೆಟ್ ಸಂಸ್ತೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಆ ಹೊತ್ತಿನಲ್ಲಿ ಅದಿಕ್ರುತವಾಗಿ ವಕೀಲರಾಗಿ ದುಡಿಯುತ್ತಿದ್ದರೂ ಕ್ರಿಕೆಟ್ ಆಟವೇ ಅವರ ಜೀವಾಳವಾಗಿದ್ದದು ವಿಶೇಶ.

ಆಡಳಿತಗಾರರಾಗಿ ಚಿನ್ನಸ್ವಾಮಿ

ಸುಮಾರು 40 ವರುಶ ವಕೀಲರಾಗಿ ದುಡಿದ ಮೇಲೆ 1963 ರಲ್ಲಿ ತಮ್ಮ ಮೂಲ ವ್ರುತ್ತಿಯನ್ನು ತ್ಯಜಿಸಿ ಚಿನ್ನಸ್ವಾಮಿಯವರು ಪೂರ‍್ಣ ಪ್ರಮಾಣದ ಕ್ರಿಕೆಟ್ ಆಡಳಿತಗಾರರಾದರು. ಬೆಂಗಳೂರಿನಲ್ಲಿ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟದ ಸುಸಜ್ಜಿತ ಕ್ರೀಡಾಂಗಣ ಕಟ್ಟಬೇಕು ಎನ್ನುವುದು ಅವರ ಬಹುಕಾಲದ ಹೆಬ್ಬಯಕೆ ಆಗಿತ್ತು. ಅಂದಿನ ಮುಕ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ಕಾಂಗ್ರೆಸ್ ಅದ್ಯಕ್ಶ, ಹಿರಿಯ ನಾಯಕರಾಗಿದ್ದ ಎಸ್. ನಿಜಲಿಂಗಪ್ಪ ಅವರನ್ನು ಎಡಬಿಡದೆ ತಾಳ್ಮೆಯಿಂದ ಬೇಟಿ ಮಾಡಿ, ಅವರ ಮನವೊಲಿಸಿ ಕಡೆಗೂ ಕ್ರೀಡಾಂಗಣ ಕಟ್ಟಲು ಬೆಂಗಳೂರಿನ ಹ್ರುದಯ ಬಾಗದಲ್ಲಿ ಎಡೆ ಪಡೆಯುತ್ತಾರೆ. ಇದು ಅವರ ಹಟ ಹಾಗೂ ಚಲಕ್ಕೆ ಸಿಕ್ಕ ಪ್ರತಿಪಲ ಎಂದೇ ಹೇಳಬೇಕು. ಕಲ್ಲುಗಳಿಂದ ಕೂಡಿದ್ದ ಆ ಎಡೆಯನ್ನು ಸೇನೆಯ ಸಹಾಯ ಪಡೆದು ಮೊದಲಿಗೆ ಸಮ ಮಾಡಿ, 1968 ರಲ್ಲಿ ಕ್ರೀಡಾಂಗಣ ಕಟ್ಟಡದ ಕೆಲಸ ಶುರು ಮಾಡಿದಾಗ ರಾಜ್ಯ ಕ್ರಿಕೆಟ್ ಸಂಸ್ತೆಯ ಬೊಕ್ಕಸದಲ್ಲಿ ಕೇವಲ 8 ಲಕ್ಶ ರೂಪಾಯಿ ಮಾತ್ರ ಇದ್ದುದ್ದುರಿಂದ ದೊಡ್ಡ ಹಿನ್ನಡೆಯಾಗುತ್ತದೆ. ಆದರೆ ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆಯುವ ಜಾಯಮಾನದವರಾಗಿರದ ಚಿನ್ನಸ್ವಾಮಿಯವರು ಎದೆಗುಂದದೆ ಹಣ ಸಂಗ್ರಹಿಸಲು ಕ್ಲಬ್ ಸದಸ್ಯತ್ವ, ಪ್ರಾಯೋಜಕತ್ವದಂತಹ ಯೋಜನೆಗಳನ್ನು ರೂಪಿಸುತ್ತಾರೆ. ಜೊತೆಗೆ ಕೆಲವರಿಂದ ದೇಣಿಗೆಯನ್ನು ಪಡೆಯುವಲ್ಲಿಯೂ ಯಶಸ್ವಿಯಾಗುತ್ತಾರೆ. ರಾಜ್ಯ ಕ್ರಿಕೆಟ್ ಇತಿಹಾಸಗಾರರು ಬೆಂಗಳೂರಿನ ಕ್ರೀಡಾಂಗಣದ ಪ್ರತೀ ಒಂದು ಇಟ್ಟಿಗೆ ಕೂಡ ಚಿನ್ನಸ್ವಾಮಿಯವರ ಹೆಸರು ಹೇಳುತ್ತದೆ ಎಂದು ಬಣ್ಣಿಸೋದು ಅತಿಶಯವೇನಲ್ಲ. ಏಕೆಂದರೆ ಪ್ರತೀ ದಿನ ಮಳೆ, ಬಿಸಿಲು ಯಾವುವನ್ನೂ ಲೆಕ್ಕಿಸದೆ ಕೈಯಲ್ಲಿ ಒಂದು ಕೊಡೆ ಹಿಡಿದುಕೊಂಡು ಸಿಮೆಂಟ್ ಮೂಟೆಗಳ ಲೆಕ್ಕದಿಂದ ಹಿಡಿದು, ಮರಳು ಕಾಂಕ್ರೀಟ್ ಬೆರಸಿ ಒಂದೊಂದು ಇಟ್ಟಿಗೆಯನ್ನು ಇಡುವುದನ್ನೂ ಕೂಡ ಮುಂದೆ ನಿಂತು ಅವರು ಕಾಳಜಿಯಿಂದ ನೋಡಿಕೊಂಡಿದ್ದರು. ಬೆಂಗಳೂರಿನ ಈ ಹೊಸ ಕ್ರೀಡಾಂಗಣದಲ್ಲಿ 1972 ರಲ್ಲಿ ಮೈಸೂರು ಹಾಗೂ ಹೈದರಾಬಾದ್ ನಡುವೆ ಮೊದಲ ರಣಜಿ ಪಂದ್ಯ ನಡೆದರೆ, ಚಿನ್ನಸ್ವಾಮಿಯವರ ಬಹುದಿನದ ಕನಸಾಗಿದ್ದ ಟೆಸ್ಟ್ ಪಂದ್ಯ, ಬಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ 1974 ರಲ್ಲಿ ನಡೆಯಿತು. ಮೊದಲ ಪಂದ್ಯಕ್ಕೇ ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ ಕನ್ನಡಿಗರ ಕ್ರಿಕೆಟ್ ಪ್ರೀತಿಗೆ ಸಾಕ್ಶಿಯಾಗಿತ್ತು. ಪಂದ್ಯವೊಂದನ್ನು ಆಯೋಜಿಸಿ ಅಂದು ಬೆಂಗಳೂರು ಕೂಡ ಟೆಸ್ಟ್ ಕ್ರಿಕೆಟ್ ನ ಬವ್ಯ ಇತಿಹಾಸದ ಪುಟ ಸೇರಿ ಕನ್ನಡಿಗರಿಗೆ ಹೆಮ್ಮೆ ತಂದಿತು. ಜೊತೆಗೆ ರಾಜ್ಯದ ಕ್ರಿಕೆಟ್ ತಂಡವನ್ನು ಬಲಗೊಳ್ಳಿಸಲು ಪ್ರತಿಬಾನ್ವಿತ ಆಟಗಾರರ ಆಯ್ಕೆಗಾಗಿ ಚಿನ್ನಸ್ವಾಮಿಯವರ ಹೊಸಬಗೆಯ ವಿಶೇಶ ಯೋಜನೆಗಳು, ಕಿರಿಯರ ಮತ್ತು ವಲಯವಾರು ಪಂದ್ಯಾವಳಿಗಳು 1974 ರಲ್ಲಿ ರಣಜಿ ಟೂರ‍್ನಿ ಗೆಲುವಿನ ಮೂಲಕ ಪಲ ಕೊಟ್ಟವು ಎಂದರೆ ತಪ್ಪಾಗಲಾರದು.

ದಕ್ಶಿಣ ಬಾರತದ ಕ್ರಿಕೆಟ್ ಸಂಸ್ತೆಗಳಾದ ಮದ್ರಾಸ್ ಮತ್ತು ಹೈದರಾಬಾದ್ ಒಟ್ಟಿಗೆ ಒಳ್ಳೆ ನಂಟನ್ನು ಬೆಳೆಸಿಕೊಂಡು ಆಡಳಿತದಲ್ಲಿ ಎಲ್ಲರ ವಿಶ್ವಾಸ ಗಳಿಸಿ ಬಿಸಿಸಿಐ ನಲ್ಲೂ ಚಿನ್ನಸ್ವಾಮಿ ಪ್ರಬಾವಶಾಲಿಯಾಗುತ್ತಾ ಬೆಳೆಯುತ್ತಾ ಹೋದರು. 1958 ರಿಂದ 1960 ಬಿಸಿಸಿಐನ ಜಾಯಿಂಟ್ ಸೆಕ್ರೆಟರಿ ಆಗಿದ್ದ ಅವರು 1965 ರಲ್ಲಿ ಹಾನರರಿ ಸೆಕ್ರೆಟರಿ ಗದ್ದುಗೆಗೆ ಏರಿದರು. ಆ ಬಳಿಕ 1967/68 ರ ಬಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಜಾಂಜಿ ಆಗಿದ್ದರು. 1965 ರಿಂದ ಸತತ 11 ವರ‍್ಶಗಳ ಕಾಲ ಉಪಾದ್ಯಕ್ಶರಾಗಿ ಕೂಡ ದುಡಿದರು. ಕಡೆಗೆ 1977 ರಿಂದ 1980 ರವೆರಗೂ ಬಿಸಿಸಿಐ ಅದ್ಯಕ್ಶರಾಗಿ ಬಾರತದ ಕ್ರಿಕೆಟ್ ಅದಿಕಾರದ ಚುಕ್ಕಾಣಿ ಹಿಡಿದರು. ಇಂದಿಗೂ ಆಡಳಿತದಲ್ಲಿ ಚಿನ್ನಸ್ವಾಮಿಯವರು ಏರಿದ ಈ ಮಟ್ಟವನ್ನು ಯಾವೊಬ್ಬ ಕನ್ನಡಿಗನೂ ಏರಿಲ್ಲ ಎಂದರೆ ಯಾರಾದರೂ ಊಹಿಸಬಹುದು ಅವರ ಸಾದನೆ ಏನು ಎಂದು. ಚಿನ್ನಸ್ವಾಮಿಯವರು ಬಿಸಿಸಿಐ ಅದ್ಯಕ್ಶರಾಗಿ ಅದಿಕಾರದ ಚುಕ್ಕಾಣಿ ಹಿಡಿದಾಗ ಸಂಸ್ತೆಯ ಬೊಕ್ಕಸದಲ್ಲಿ 1.4 ಕೋಟಿ ರೂಪಾಯಿಗಳು ಇದ್ದವು. ಕೇವಲ ಪಂದ್ಯಗಳ ಟಿಕೆಟ್ ಮಾರಾಟವೊಂದೇ ಆದಾಯದ ಮಾರ‍್ಗವಾಗಿದ್ದಾಗ ಚಿನ್ನಸ್ವಾಮಿಯವರು ಒಂದು ಕೋಟಿ ರೂಪಾಯಿಗಳನ್ನು ಆರು ಪ್ರತ್ಯೇಕ ಕಾಸಗಿ ಸಂಸ್ತೆಗಳಲ್ಲಿ ಹೂಡಿಕೆ ಮಾಡಿ ಅವುಗಳಿಂದ ಬಡ್ಡಿ ರೂಪದಲ್ಲಿ ವಾರ‍್ಶಿಕ 14 ಲಕ್ಶ ರೂಪಾಯಿಗಳು ಸಂಸ್ತೆಗೆ ಹರಿದು ಬರುವಂತೆ ಮಾಡಿದರು. ದೇಸೀ ಕ್ರಿಕೆಟ್ ಆಯೋಜನೆ, ಕೋಚಿಂಗ್ ಶಿಬಿರಗಳು, ಆಟಗಾರರ ಪ್ರಯಾಣ ಹಾಗೂ ಎಲ್ಲಾ ಬಗೆಯ ಕರ‍್ಚು-ವೆಚ್ಚಗಳಿಗಾಗಿ ಬಿಸಿಸಿಐಗೆ ಬೇಕಿದ್ದ ವಾರ‍್ಶಿಕ 9 ಲಕ್ಶ ರೂಪಾಯಿಗಳನ್ನು ಹೂಡಿಕೆಯಿಂದ ಬಂದ ಹಣದಿಂದ ನಿಬಾಯಿಸಿ ಸಂಸ್ತೆಯ ಬೊಕ್ಕಸ ತುಂಬಿಸುತ್ತಾ ಹೋದರು. ಅವರ ಆಡಳಿತದ ಮೂರೂ ವರ‍್ಶಗಳಲ್ಲಿ ಬಿಸಿಸಿಐ ಎಂದೂ ಕಾಣದ ಲಾಬ ಕಂಡಿತು. ಹಾಗೂ ಅಂತರಾಶ್ಟ್ರೀಯ ಕ್ರಿಕೆಟ್ ಗೆ ಕಂಟಕಪ್ರಾಯವಾಗಿದ್ದ 1977 ರ ಕೆರ‍್ರಿ ಪ್ಯಾಕರ್ ರೆಬೆಲ್ ಲೀಗ್ ಪ್ರಹಸನದ ವೇಳೆ ಬಾರತದ ಯಾವೊಬ್ಬ ಆಟಗಾರ ಕೂಡ ಹಣದ ಆಮಿಶಕ್ಕೊಳಗಾಗಿ ರಾಶ್ಟ್ರೀಯ ತಂಡ ತೊರೆಯದಂತೆ ನೋಡಿಕೊಳ್ಳುವಲ್ಲಿ ಚಿನ್ನಸ್ವಾಮಿಯವರ ಪಾತ್ರ ಹಿರಿದಿತ್ತು. ಎಲ್ಲಾ ದೇಶದ ದಿಗ್ಗಜ ಆಟಗಾರರೂ ಅಂತರಾಶ್ಟ್ರೀಯ ಕ್ರಿಕೆಟ್ ಅನ್ನು ಬದಿಗೊತ್ತಿ ಕೆರ‍್ರಿ ಪ್ಯಾಕರ್ ಗಾಗಿ ಆಡಲು ಕಣಕ್ಕಿಳಿದರೂ ಬಾರತದ ಒಬ್ಬ ಆಟಗಾರ ಕೂಡ ಪ್ಯಾಕರ್ ತೆಕ್ಕೆಗೆ ಬೀಳದದ್ದು ಕ್ರಿಕೆಟ್ ಇತಿಹಾಸದಲ್ಲಿ ಬಾರತದ ಹೆಚ್ಚುಗಾರಿಕೆ ಎಂದೇ ಕ್ರಿಕೆಟ್ ಪಂಡಿತರು ಇಂದಿಗೂ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಐಸಿಸಿಯಲ್ಲಿ ಬಾರತದ ಪ್ರತಿನಿದಿಯಾಗಿ ಕೂಡ ಅವರು 1965, 1973 ಮತ್ತು 1977-1980 ರ ನಡುವೆ ಹಾಜರಿದ್ದು ಬಾರತದ ಬೇಡಿಕೆಗಳನ್ನು ಮುಂದಿಟ್ಟಿದ್ದರು.

ಕ್ರಿಕೆಟಿಗರ ನೆಚ್ಚಿನ ಆಡಳಿತಗಾರ

ಒಂದು ಕಾಲದಲ್ಲಿ ಬಿಸಿಸಿಐ ಅದಿಕಾರದಲ್ಲಿ ಬಾಂಬೆಯ ಪ್ರಬಾವ ಹೆಚ್ಚಿದ್ದಾಗ ಸ್ವಂತ ಬಲದಿಂದ ಬೆಳೆದು ಕರ‍್ನಾಟಕದ ಇರುವಿಕೆಯನ್ನು ಬಾರತದ ಕ್ರಿಕೆಟ್ ವಲಯದಲ್ಲಿ ನೆನಪಿಸಿದ ಚಿನ್ನಸ್ವಾಮಿಯವರ ಸಾದನೆ ನಿಜಕ್ಕೂ ಅದ್ವಿತೀಯ. ಆಟದ ಸಂಬಂದ ಕ್ರಿಕೆಟಿಗರ ಕುಂದು ಕೊರತೆಗಳನ್ನು ವಿಚಾರಿಸುತ್ತಾ ಸದಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಚಿನ್ನಸ್ವಾಮಿಯವರು ಕರ‍್ನಾಟಕದ ಆಟಗಾರರ ನೆಚ್ಚಿನ ಆಡಳಿತಗಾರರಾಗಿದ್ದರು. ನಾಡಿನ ದಿಗ್ಗಜ ಆಟಗಾರರಾದ ಪ್ರಸನ್ನ, ಚಂದ್ರಶೇಕರ್, ವಿಶ್ವನಾತ್ ಹಾಗೂ ಸುದಾಕರ್ ರಾವ್ ಅವರು ಈಗಲೂ ಅವರ ಕೊಡುಗೆಗಳನ್ನು ನೆನೆದು ಕರ‍್ನಾಟಕದಲ್ಲಿ ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯಲು ಚಿನ್ನಸ್ವಾಮಿಯವರ ಶ್ರಮವೇ ಕಾರಣ ಎನ್ನುತ್ತಾರೆ. ಗಾವಸ್ಕರ್, ಬೇಡಿ, ಕಪಿಲ್ ದೇವ್ ಆದಿಯಾಗಿ ಬಾರತದ ಎಲ್ಲಾ ದಿಗ್ಗಜ ಆಟಗಾರರೂ ಚಿನ್ನಸ್ವಾಮಿಯವರ ಬಗ್ಗೆ ವಿಶೇಶ ಗೌರವ ಹೊಂದಿದ್ದಾರೆ. ಈಗಲೂ ಮಾತಿಗಿಳಿದರೆ ಆಟದ ದಿನಗಳಲ್ಲಿ ಅವರ ನೆರವನ್ನು ಬಣ್ಣಿಸುತ್ತಾರೆ.

ಕ್ರಿಕೆಟೇತರ ಚಟುವಟಿಕೆಗಳು

ಕ್ರಿಕೆಟ್ ಗಾಗಿ ತಮ್ಮ ಮೂಲ ವಕೀಲ ವ್ರುತ್ತಿಯನ್ನೇ ತ್ಯಜಿಸಿದ್ದ ಚಿನ್ನಸ್ವಾಮಿಯವರು ಕ್ರಿಕೆಟ್ ಹೊರತಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಪ್ರತಿಶ್ಟಿತ MES ಕಾಲೇಜ್ ಅನ್ನು ಹುಟ್ಟುಹಾಕಿದವರಲ್ಲಿ ಅವರೂ ಒಬ್ಬರು. ಮಲ್ಲೇಶ್ವರಮ್ ಕೋ-ಆಪರೇಟೀವ್ ಬ್ಯಾಂಕ್ ನ ಅದ್ಯಕ್ಶ ಹಾಗೂ ಮಲ್ಲೇಶ್ವರಮ್ ಕೋ-ಆಪರೇಟೀವ್ ಸೊಸೈಟಿಯ ಸೆಕ್ರೆಟರಿ ಆಗಿಯೂ ಅವರು ಸೇವೆ ಸಲ್ಲಿಸಿದರು. ಮಲ್ಲೇಶ್ವರಮ್ ಸುತ್ತಮುತ್ತಲಿನ ಪ್ರದೇಶಗಳಿಗೆ ಒಂದು ಆಸ್ಪತ್ರೆಯ ಅಗತ್ಯ ಕಂಡು ಬಂದಾಗ ಮನೆ-ಮನೆಗಳಿಗೆ ತೆರಳಿ ಚಂದಾ ಎತ್ತಿ ಸಂಗ್ರಹಿಸಿದ ಹಣವನ್ನು ರಾಜ್ಯ ಸರ‍್ಕಾರಕ್ಕೆ ನೀಡಿ ಆಸ್ಪತ್ರೆಯ ಬೇಡಿಕೆ ಮುಂದಿಟ್ಟಿದ್ದರು. ಚಿನ್ನಸ್ವಾಮಿಯವರು ಅಂದು ಬಿತ್ತಿದ ಬೀಜ ಇಂದು ನಮ್ಮ ಮುಂದಿರುವ ಮಲ್ಲೇಶ್ವರಮ್ ನ ಕೆ.ಸಿ ಜೆನೆರಲ್ ಆಸ್ಪತ್ರೆಯ ರೂಪ ಪಡೆದಿದೆ.

ಆಟಗಾರನಾಗಿ ಬ್ಯಾಟ್ ಅತವಾ ಬಾಲ್ ಹಿಡಿದು ಕಣಕ್ಕಿಳಿಯದೇ ಕರ‍್ನಾಟಕ ಕ್ರಿಕೆಟ್ ಗೆ ಮುನ್ನುಡಿ ಬರೆದ ಚಿನ್ನಸ್ವಾಮಿಯವರಿಗೆ ಗೌರವ ಸೂಚಿಸುವ ಸಲುವಾಗಿ ಅವರ ವಿರೋದದ ನಡುವೆಯೂ ಕೆ.ಎಸ್.ಸಿ.ಎ ಕ್ರೀಡಾಂಗಣವನ್ನು ಆಡಳಿತ ವರ‍್ಗ ಎಮ್. ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಮರುಹೆಸರಿಸಿತು. ಕ್ರಿಕೆಟ್ ಗಾಗಿ ಜೀವ ತೇದ ಅವರ ಆಡಳಿತದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದದ್ದನ್ನು ಈಗಲೂ ಬಾರತದ ಕ್ರಿಕೆಟ್ ಆಡಳಿತ ವರ‍್ಗ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಕ್ರಿಕೆಟ್ ಮಾತುಕತೆಗಳಿಗೆ ಎಡೆಯಾಗಿದ್ದ ಬೆಂಗಳೂರಿನ ಅವರ ಮನೆಯನ್ನು ಕ್ರಿಕೆಟ್ ವಲಯದಲ್ಲಿ ‘ಕ್ರಿಕೆಟ್ ಹೌಸ್’ ಎಂದೇ ಇಂದಿಗೂ ಕರೆಯುತ್ತಾರೆ. ಹಾಗಾಗಿಯೇ ಅವರು ‘ಕರ‍್ನಾಟಕದ ಮಿಸ್ಟರ್ ಕ್ರಿಕೆಟ್’ ಎಂದೇ ಪ್ರಕ್ಯಾತರು. ಹೀಗೆ ದಶಕಗಳ ಕಾಲ ಎಡಬಿಡದೆ ಆಟದ ಬೆಳವಣಿಗೆಗಾಗಿ ದುಡಿದು ಕ್ರಿಕೆಟ್ ಅಂಗಳದಲ್ಲಿ ತಮ್ಮದೇ ವಿಶಿಶ್ಟ ಚಾಪು ಮೂಡಿಸಿದ್ದ ಚಿನ್ನಸ್ವಾಮಿಯವರು ನವೆಂಬರ್ 8, 1991 ರಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದರು. ನೇರ‍್ಮೆ, ಶಿಸ್ತಿಗೆ ಹೆಸರುವಾಸಿಯಾಗಿದ್ದ ಅವರ ಸಾವಿನ ಬಳಿಕ ಅವರ ಬ್ಯಾಂಕ್ ಕಾತೆಯಲ್ಲಿ ಕೇವಲ 13 ರೂಪಾಯಿಗಳು ಇದ್ದದ್ದು ಅವರ ನಿಶ್ಟೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಎಂದು ಅವರ ಕುಟುಂಬ ಹೆಮ್ಮೆಯಿಂದ ನೆನೆಯುತ್ತದೆ. ಆಟಗಾರನಾಗದೆ ಕೂಡ ಕ್ರಿಕೆಟ್ ಗೆ ಕೊಡುಗೆ ನೀಡಬಹುದು ಎನ್ನುವುದಕ್ಕೆ ಚಿನ್ನಸ್ವಾಮಿಯವರ ಬದುಕು ಸೂಕ್ತ ಎತ್ತುಗೆ. ನಮ್ಮ ನಾಡಿನ ಇಂತಹ ಒಬ್ಬ ದಿಗ್ಗಜ ಆಡಳಿತಗಾರರನ್ನು ನಾವು ಮರೆಯದೆ ಸದಾ ಗೌರವದಿಂದ ನೆನೆಯೋಣ.

(ಚಿತ್ರಸೆಲೆ: Sporting Legends of Bengaluru)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: