ಉಂಡವಲ್ಲಿ ಗುಹೆಗಳು

– .

ಆಂದ್ರ ಪ್ರದೇಶದ ಗುಂಟೂರಿನಿಂದ 32 ಕಿಲೋಮೀಟರ್ ಹಾಗೂ ವಿಜಯವಾಡದಿಂದ 8 ಕಿಲೋಮೀಟರ್ ದೂರದಲ್ಲಿ ಉಂಡವಲ್ಲಿ ಎಂಬ ಹಳ್ಳಿಯಿದೆ. ಈ ಹಳ್ಳಿ ಪ್ರಸಿದ್ದಿಗೆ ಬಂದಿರುವುದು ಇಲ್ಲಿರುವ ಪುರಾತನ ಗುಹೆಗಳಿಂದ. ಕ್ರಿಶ್ಣಾ ನದಿಗೆ ಅಬಿಮುಕವಾಗಿರುವ ಎತ್ತರದ ಬೆಟ್ಟಗಳಲ್ಲಿ ಈ ಗುಹೆಗಳನ್ನು ಕಾಣಬಹುದು.

ಹಿನ್ನೆಲೆ

ಉಂಡವಲ್ಲಿ ಗುಹೆಗಳು ನಾಲ್ಕು ಅಂತಸ್ತಿನಿಂದ ಕೂಡಿವೆ. ಪುರಾತತ್ವ ಇಲಾಕೆಯ ವರದಿಯಂತೆ ಇದು ಏಳನೆ ಶತಮಾನದಶ್ಟು ಹಿಂದಿನದು. ಈ ವಿಲಕ್ಶಣ ಗುಹೆಗಳು ಅನಂತಪದ್ಮನಾಬಸ್ವಾಮಿ ಮತ್ತು ನರಸಿಂಹಸ್ವಾಮಿಗೆ ಸಮರ‍್ಪಿತವಾಗಿವೆ. ಕೊಂಡವೀಡು ರೆಡ್ಡಿಗಳಲ್ಲಿ ಒಬ್ಬರಾದ ಮಾದವ ರೆಡ್ಡಿ, ತನ್ನ ಅದೀನದಲ್ಲಿದ್ದ ಈ ಪ್ರದೇಶ ಹಾಗೂ ಹೊಂದಿಕೊಂಡ ಗುಹೆಗಳನ್ನು ಅನಂತಪದ್ಮನಾಬಸ್ವಾಮಿ ಮತ್ತು ನರಸಿಂಹಸ್ವಾಮಿ ದೇವಾಲಯಗಳನ್ನು ನಿರ‍್ಮಿಸಲು ಉಡುಗೊರೆಯಾಗಿ ನೀಡಿದ್ದರು ಎಂದು ಸ್ತಳೀಯ ಐತಿಹಾಸಿಕ ಪುರಾವೆಗಳು ತಿಳಿಸುತ್ತವೆ. ಅನಂತಪದ್ಮನಾಬಸ್ವಾಮಿ, ನರಸಿಂಹಸ್ವಾಮಿ ದೇವಾಲಯಗಳಲ್ಲದೆ, ತ್ರಿಮೂರ‍್ತಿಗಳಾದ ಬ್ರಹ್ಮ ವಿಶ್ಣು ಮತ್ತು ಶಿವನ ದೇವಾಲಗಳನ್ನೂ ಸಹ ಇಲ್ಲಿ ನೋಡಬಹುದು.

ಕಣ್ಮನ ಸೆಳೆವ ಗುಹೆಗಳು

ದೂರದಿಂದ ನೋಡಿದರೆ ಇದೊಂದು ಪರಿತ್ಯಕ್ತ ಕೋಟೆಯಂತೆ ಕಂಡುಬಂದರೂ ಹತ್ತಿರ ಹೋದಂತೆ ರೋಮಾಂಚಕಾರಿ ದ್ರುಶ್ಯ ಕಂಡ ಆನುಬವವಾಗುತ್ತದೆ. ಈ ದೊಡ್ಡ ಗುಹೆಗಳನ್ನು ಏಕಶಿಲಾ ಮರಳುಗಲ್ಲಿನಲ್ಲಿ ಕೆತ್ತಿರುವುದು ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ. ನಾಲ್ಕು ಅಂತಸ್ತಿನ ಉಂಡವಲ್ಲಿಯ ಗುಹೆಗಳು, ಅನುಕ್ರಮವಾಗಿ ಪ್ರತಿ ಮಹಡಿಗೂ ಚಿಕ್ಕದಾಗುತ್ತಾ ಹೋಗುತ್ತವೆ. ಮೊದಲ ಮಹಡಿಯ ಮುಂಬಾಗವು 29 ಮೀಟರ್ ಅಗಲವಾಗಿದೆ. ಈ ಗುಹೆಗಳನ್ನು ಕಂಡಾಗ ಮೊದಲಿಗೆ ಮನದಲ್ಲಿ ಮೂಡುವುದು ಇದು ಗುಪ್ತರ ಕಾಲದ ವಾಸ್ತುಶಿಲ್ಪದ ಪ್ರಬಾವವನ್ನು ಹೋಲುತ್ತದೆ ಎಂಬುದು. ಆದೆ ಎರಡನೆಯ ಮಹಡಿಯಲ್ಲಿರುವ ವಾಸ್ತುಶಿಲ್ಪದಲ್ಲಿ ಚಾಲುಕ್ಯರ ವಾಸ್ತುಶಿಲ್ಪದ ವರ‍್ಚಸ್ಸನ್ನು ಕಾಣಬಹುದು.

ಮೊದಲ ಮಹಡಿಯನ್ನು ಎಂಟು ಚೌಕಾಕಾರದ ಬ್ರುಹತ್ ಕಂಬಗಳ ನಡುವೆಯಿರುವ ಏಳು ಬಾಗಿಲುಗಳ ಮೂಲಕ ಒಳಬರಬಹುದು . ಮೊದಲ ಮಹಡಿಯಲ್ಲಿನ ಯೋಜನೆ ಮತ್ತು ಶಿಲ್ಪಗಳ ಶೈಲಿಯನ್ನು ಗಮನಿಸಿದರೆ ಇದು ಬೌದ್ದ ಮಟ – ‘ವಿಹಾರ’ ದಂತೆ ತೋರುತ್ತದೆ. ಇಲ್ಲಿನ ಸಣ್ಣ ಸಣ್ಣ ಕೋಣೆಗಳು ಕಲ್ಲಿನಲ್ಲಿ ಕಡೆದ ಹಳೆಯ ಕೋಣೆಗಳಂತಿವೆ. ಎಂಟು ಕಂಬಗಳನ್ನು ಒಳಗೊಂಡ ಹಜಾರ ಪೂರ‍್ಣವಾದಂತೆ ಕಂಡುಬರುವುದಿಲ್ಲ. ತ್ರಿಮೂರ‍್ತಿಗಳಾದ ಬ್ರಹ್ಮ, ವಿಶ್ಣು ಮತ್ತು ಮಹೇಶ್ವರರ ಪ್ರತ್ಯೇಕ ದೇವಾಲಯಗಳು ಈ ಮಹಡಿಯಲ್ಲಿದ್ದು, ಪ್ರತಿಯೊಂದರ ಮುಂದೆಯೂ ಕಂಬಗಳಿಂದ ಆವ್ರುತವಾದ ದೊಡ್ಡ ಸಬಾಂಗಣವಿದೆ. ತ್ರಿಮೂರ‍್ತಿಗಳು ಸ್ರುಶ್ಟಿ, ನಿರ‍್ವಹಣೆ ಮತ್ತು ವಿನಾಶವನ್ನು ಸಂಕೇತಿಸುತ್ತವೆ. ಏಳು ಮತ್ತು ಎಂಟನೆ ಶತಮಾನದಲ್ಲಿ ರಚಿಸಲಾಗಿದೆ ಎನ್ನಲಾದ ಪೌರಾಣಿಕ ಕತೆಗಳನ್ನು ಪ್ರತಿನಿದಿಸುವ ಬಿತ್ತಿಚಿತ್ರಗಳು ಮೊದಲ ಮಹಡಿಯ ಗೋಡೆಗಳನ್ನು ಅಲಂಕರಿಸಿವೆ. ಇಲ್ಲಿ ಕಾಣಸಿಗುವ ಬಣ್ಣದ ಚಿತ್ರಗಳನ್ನು ಸೂಕ್ಶ್ಮವಾಗಿ ಗಮನಿಸಿದಾಗ ಎಲ್ಲಾ ವರ‍್ಣಚಿತ್ರಗಳು ನಂತರದ ದಿನಗಳಲ್ಲಿ ಚಿತ್ರಿಸಲಾಗಿರುವುದು ಸ್ಪಶ್ಟವಾಗುತ್ತದೆ.

ಎರಡನೆಯ ಮಹಡಿಯಲ್ಲಿ ಬಗವಾನ್ ಮಹಾ ವಿಶ್ಣುವು, ಅನಂತಪದ್ಮನಾಬನ ರೂಪದಲ್ಲಿ ಒರಗಿರುವ ಐದು ಮೀಟರ್ ಉದ್ದದ ದೊಡ್ಡ ಹಾಗೂ ಅತ್ಯಂತ ಬವ್ಯವಾದ ಪ್ರತಿಮೆಯನ್ನು ಹೊಂದಿರುವ ದೇವಾಲಯವಿದೆ. ಒರಗಿರುವ ಬಂಗಿಯ ಈ ಪ್ರತಿಮೆಯನ್ನು ಒಂದೇ ಗ್ರಾನೈಟಿನಲ್ಲಿ ಕೆತ್ತಲಾಗಿರುವುದು ಇದರ ಗಮನಾರ‍್ಹ ವೈಶಿಶ್ಟ್ಯ. ಮಹಾವಿಶ್ಣುವಿನ ಕತ್ತಿನ ಮೇಲೆ ಆದಿಶೇಶ ತನ್ನ ಹೆಡೆಯನ್ನು ತೆರೆದುಕೊಂಡಿರುವಂತೆ ರಚಿಸಲಾಗಿದೆ. ಇವಿಶ್ಟೇ ಅಲ್ಲದೆ ಇನ್ನು ಹಲವಾರು ಇತರೆ ಶಿಲ್ಪಗಳಿಂದ ಈ ದೇವಾಲಯ ಕಣ್ಮನ ಸೆಳೆಯುತ್ತದೆ.

ಮೂರನೆ ಮಹಡಿಯ ಮುಂಬಾಗವು ಹಲವಾರು ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ. ಅವುಗಳ ಜೊತೆಗೆ ಆನೆಗಳು ಮತ್ತು ಸಿಂಹಗಳ ಚಿತ್ರಗಳನ್ನೂ ಕಾಣಬಹುದು. ಸುತ್ತಲಿನ ಹಸಿರು ಬೆಟ್ಟಗಳು, ಅದರ ಕೆಳಗಿನ ತಾಳೆ ಮರಗಳ ಸುಂದರವಾದ ನೋಟ ನೋಡುಗರನ್ನು ಮಂತ್ರಮುಗ್ದಗೊಳಿಸುತ್ತದೆ.
ಉಂಡವಲ್ಲಿ ಗುಹೆಗಳು ಬೌದ್ದರ ಕಾಲದಲ್ಲಿ ಕಲ್ಲನ್ನು ಕೊರೆದು ನಿರ‍್ಮಿಸಿರುವ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಗಳಲ್ಲಿ ಒಂದಾಗಿದೆ.

ಸೌಹಾರ‍್ದತೆಯ ಸಂಕೇತ

ಈ ಪ್ರದೇಶವು ವಿಶ್ಣುಕುಂಡಿನ ರಾಜರ ಆಳ್ವಿಕೆಯಲ್ಲಿತ್ತು. ಅವರುಗಳು ಬೌದ್ದ ದರ‍್ಮದ ಬೆಂಬಲಿಗರಾಗಿದ್ದರು. ಹಾಗಾಗಿ ಉಂಡವಲ್ಲಿ ಗುಹೆಗಳಲ್ಲಿ ಮೊದಲು ಬೌದ್ದ ದೇವಾಲಯಗಳನ್ನು ಪ್ರಾರಂಬಿಸಲಾಯಿತು ಹಾಗೂ ಈ ಗುಹೆಗಳನ್ನು ಬೌದ್ದ ಸಂನ್ಯಾಸಿಗಳು ತಮ್ಮ ವಿಶ್ರಾಂತಿ ಗ್ರುಹಗಳನ್ನಾಗಿ ಬಳಸುತ್ತಿದ್ದರು. ಕಾಲಕ್ರಮೇಣ ಹಿಂದೂಗಳು ಈ ಪ್ರದೇಶವನ್ನು ಸ್ವಾದೀನಪಡಿಸಿಕೊಂಡು, ಹಿಂದೂ ದರ‍್ಮದ ಕಲಾಕ್ರುತಿಗಳನ್ನು ಪ್ರತಿಶ್ಟಾಪಿಸಿದರೂ, ಸೌಹಾರ‍್ದತೆಯ ಸಂಕೇತವಾಗಿ ಬೌದ್ದ ಪ್ರತಿಮೆಗಳನ್ನು ಹಾಳುಗೆಡವದೆ ಸಂರಕ್ಶಿಸಿದ್ದಾರೆ.

(ಮಾಹಿತಿ ಮತ್ತು ಚಿತ್ರಸೆಲೆ: ecoindia.com, wondermondo.com, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: