ಲೋಟಸ್ ಟವರ್ – ಕೊಲಂಬೊ

– .

ಬಾರತದ ದಕ್ಶಿಣ ಬಾಗದಲ್ಲಿರುವ ನಾಡು ಶ್ರೀಲಂಕಾ. ಶ್ರೀಲಂಕಾದ ಆರ‍್ತಿಕ ಚಟುವಟಿಕೆಗಳ ಹಾಗೂ ಬೌಗೋಳಿಕ ರಾಜದಾನಿ ಕೊಲಂಬೊ. ಇಲ್ಲಿನ ಅತಿ ಎತ್ತರದ ಗೋಪುರವೇ ಕೊಲಂಬೊ ಲೋಟಸ್ ಟವರ್. ಇದು ಕೊಲಂಬೋದ ಸಾಂಕೇತಿಕ ಹೆಗ್ಗುರುತು. ಈ ಗೋಪುರದ ಎತ್ತರ 356 ಮೀಟರ್. 2019ರಂತೆ ಈ ಗೋಪುರವು ದಕ್ಶಿಣ ಏಶ್ಯಾದಲ್ಲೇ ಅತಿ ಎತ್ತರದ ಸ್ವಯಂ-ಬೆಂಬಲಿತ ರಚನೆ. ಗೋಪುರವನ್ನು ನಿರ‍್ಮಿಸುವಾಗ ಅದಕ್ಕೆ ಉಪಯೋಗಿಸಿರುವ ಬ್ಲಾಕ್‍ಗಳಾಗಲಿ, ಇಟ್ಟಿಗೆಗಳಾಗಲಿ ಒಂದಕ್ಕೊಂದು ಪೂರಕವಾಗಿ ಒತ್ತಾಸೆಯಾಗಿವೆ. ಹೊರಗಿನ ಆಸರೆಯಿಲ್ಲದೆ ನೇರವಾಗಿ ನಿಂತಿರುವ ಅತಿ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಬಾರತದಲ್ಲಿರುವ ಐಎನ್‍ಎಸ್ ಕಟ್ಟಬೊಮ್ಮನ್ ಇದಕ್ಕಿಂತಲೂ ಎತ್ತರದ ಗೋಪುರವಾದರೂ, ಅದು ‘ಗೈವೈರ್’ಗಳ ಸಹಾಯದಿಂದ ಲಂಬವಾಗಿ ನಿಂತಿದೆ. ಜಗತ್ತಿನಲ್ಲಿ ಪೂರ‍್ಣಗೊಂಡಿರುವ ಗೋಪುರಗಳನ್ನು ಗಣನೆಗೆ ತೆಗೆದುಕೊಂಡಾಗ, ಕೊಲಂಬೊ ಲೋಟಸ್ ಟವರ್ ವಿಶ್ವದಲ್ಲಿ 19ನೇ ಅತಿ ಎತ್ತರದ ಹಾಗೂ ಏಶ್ಯಾದ 11 ನೇ ಅತಿ ಎತ್ತರದ ಗೋಪುರ ಎಂಬ ಕ್ಯಾತಿ ಮುಡಿಗೇರಿಸಿಕೊಂಡಿದೆ.

ಮೊದಲು ಇದನ್ನು ಪೆಲಿಗೊಡ ಉಪನಗರದಲ್ಲಿ ನಿರ‍್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಶ್ರೀಲಂಕಾ ಸರ‍್ಕಾರದ್ದೇ ಬೇರೆ ಯೋಜನೆ ಮತ್ತು ಉದ್ದೇಶಗಳಿತ್ತು. ಅದರ ಅನ್ವಯ ಈ ಗೋಪುರವನ್ನು ಪೆಲುಗೊಡಾದಿಂದ ಕೊಲಂಬೊಗೆ ಸ್ತಳಾಂತರಿಸಲು ತೀರ‍್ಮಾನಿಸಲಾಯಿತು. ಕಮಲದ ಆಕಾರವನ್ನು ಹೊಂದಿರುವ ಈ ಗೋಪುರವನ್ನು ಸಂವಹನ, ವೀಕ್ಶಣೆ ಮತ್ತು ಇತರೆ ಸೌಲಬ್ಯಗಳಿಗೆ ಬಳಸಲಾಗುತ್ತಿದೆ. ಈ ಗೋಪುರದ ನಿರ‍್ಮಾಣಕ್ಕೆ ತಗುಲಿದ ವೆಚ್ಚ 104.3 ಮಿಲಿಯನ್ ಡಾಲರ್‌ಗಳು. ಚೀನಾ ದೇಶದ ಎಕ್ಸಿಮ್ ಬ್ಯಾಂಕ್ ಆಪ್ ಪೀಪಲ್ಸ್ ರಿಪಬ್ಲಿಕ್ ಆಪ್ ಚೈನಾ ಇದರ ನಿರ‍್ಮಾಣಕ್ಕೆ ಹಣ ಸಹಾಯ ಮಾಡಿದೆ. ಅತಿ ಎತ್ತರದ ಗೋಪುರವಾದ ಕಾರಣ, ಕೊಲಂಬೊ ನಗರದ ಸುತ್ತ ಮುತ್ತ, ಎತ್ತಲಿಂದ ನೋಡಿದರೂ ಇದು ಕಂಡು ಬರುತ್ತದೆ. ಕೊಲಂಬೋದ ಉಪನಗರಗಳಿಂದಲೂ, ಸುತ್ತ ಹರಿದು ಹೋಗುವ ಹೆದ್ದಾರಿಗಳಿಂದಲೂ ಈ ಗೋಪುರವನ್ನು ಕಾಣಬಹುದು. ದೇಶದ ಆರ‍್ತಿಕ ರಾಜದಾನಿ ಕೊಲಂಬೊದ ಉಪನಗರಗಳ ಮಿತಿಯಲ್ಲಿ ಇದನ್ನು ನಿರ‍್ಮಿಸಲು ಆರಂಬಿಕವಾಗಿ ಉದ್ದೇಶಿಸಲಾಗಿತ್ತಾದರೂ, ಸರ‍್ಕಾರ ತನ್ನ ನಿರ‍್ದಾರವನ್ನು ಬದಲಿಸಿ ನಗರದ ಹ್ರುದಯಬಾಗದಲ್ಲಿನ ಬೈರಾ ಸರೋವರಕ್ಕೆ ಜಲಾಬಿಮುಕವಾಗಿ ನಿರ‍್ಮಿಸುವ ಯೋಜನೆಯನ್ನು ಪ್ರಕಟಿಸಿತು. ಇದರ ಹಿಂದೆ ಇದನ್ನು ಪ್ರವಾಸಿತಾಣವನ್ನಾಗಿ ಅಬಿವ್ರುದ್ದಿ ಪಡಿಸುವ ಉದ್ದೇಶವಿತ್ತು.

ಈ ಗೋಪುರದ ವಿನ್ಯಾಸವು ಕಮಲದ ಹೂವಿನಿಂದ ಪ್ರೇರಿತವಾಗಿದ್ದು, ಶ್ರೀಲಂಕಾದ ಸಂಸ್ಕ್ರುತಿಯಲ್ಲಿ ಕಮಲ ಶುದ್ದತೆ ಹಾಗೂ ದೇಶದ ಅಬಿವ್ರುದ್ದಿಯನ್ನು ಸಂಕೇತಿಸುತ್ತದೆ. ಗೋಪುರದ ತಳಬಾಗವು ಎರಡು ತಲೆಗೆಳಗಾದ ವಿಶಮ ಸಮಾನಾಂತರ ಚತುರ‍್ಬುಜಾಕಾರದ (trapezoidal) ಕಮಲ ಸಿಂಹಾಸನದಿಂದ ಪ್ರೇರಿತ ರಚನೆಯಾಗಿದೆ. ಗೋಪುರದ ಬಣ್ಣವನ್ನು ಗುಲಾಬಿ ಮತ್ತು ತೆಳು ಹಳದಿ ಬಣ್ಣದಲ್ಲಿ ಮೂಡಿಸಿದ್ದು, ಗಾಜಿನ ಲೇಪನವನ್ನು ಬಳಸಿ, ಒಂದರ ನಂತರ ಒಂದರ ಬದಲಾವಣೆ ಬಹಳ ನಾಜೂಕಾಗಿರುವಂತೆ ಯೋಜಿಸಲಾಗಿದೆ. ಒಟ್ಟಾರೆ 350 ಮೀಟರ್ ಎತ್ತರವಿರುವ ಈ ಗೋಪುರದಲ್ಲಿನ ನೆಲದ ವಿಸ್ತೀರ‍್ಣ 30,600 ಚದರ ಮೀಟರ್. ಇವುಗಳನ್ನು ಬಾಡಿಗೆ/ಗುತ್ತಿಗೆ ಆದಾರದ ಮೇಲೆ ನೀಡಿರುವುದೇ ಇದರ ನಿರ‍್ವಹಣೆಗೆ ಆದಾಯದ ಮೂಲ. ಇಲ್ಲಿಂದ ರೇಡಿಯೋ ಮತ್ತು ದೂರದರ‍್ಶನ ಪ್ರಸಾರ ಅಂಟೆನಾಗಳು ಕೆಲಸ ನಿರ‍್ವಹಿಸುತ್ತಿದ್ದು, ಒಟ್ಟಾರೆ 50 ದೂರದರ‍್ಶನ ಸೇವೆಗಳು, 35 ಎಪ್.ಎಮ್.ರೇಡಿಯೋ ಕೇಂದ್ರಗಳು ಮತ್ತು 20 ದೂರಸಂಪರ‍್ಕ ಸೇವಾ ಕೇಂದ್ರಗಳು ಇದರಲ್ಲಿವೆ. ಇದರೊಡನೆ ಅನೇಕ ಪ್ರವಾಸಿ ಆಕರ‍್ಶಣೆಗಳೂ ಸಹ ಈ ಗೋಪುರದಲ್ಲಿ ಅಳವಡಿಸಲಾಗಿದೆ.

ಈ ಲೋಟಸ್ ಗೋಪುರದ ಒಳ ಹೋಗಲು ನಾಲ್ಕು ಬಾಗಿಲುಗಳಿದ್ದು, ಅದರಲ್ಲಿ ಗಣ್ಯಾತಿಗಣ್ಯರಿಗೆ ಎರಡು ಬಾಗಿಲುಗಳನ್ನು ಮೀಸಲಿಡಲಾಗಿದ್ದು, ಇನ್ನೆರಡು ಬಾಗಿಲುಗಳು ಸಾರ‍್ವಜನಿಕರಿಗೆ ತೆರೆದಿರುತ್ತವೆ. ನೆಲ ಮಹಡಿಯಲ್ಲಿ ದೂರಸಂಪರ‍್ಕ ವಸ್ತುಸಂಗ್ರಹಾಲಯ ಮತ್ತು ರೆಸ್ಟೋರೆಂಟ್ ಗಳಿವೆ. ಗೋಪುರದ ಪೋಡಿಯಮ್‍ನಲ್ಲಿ ಆರು ಮಹಡಿಗಳಿದ್ದು, ಅದರಲ್ಲಿ ಮೊದಲನೆಯ ಮಹಡಿ ವಸ್ತುಸಂಗ್ರಹಾಲಯದ ಜೊತೆಗೆ ಎರಡು ಪ್ರದರ‍್ಶನ ಸಬಾಂಗಣಗಳನ್ನು ಹೊಂದಿದೆ. ಎರಡನೇ ಮಹಡಿಯಲ್ಲಿ ಕಾನ್ಪರೆನ್ಸ್ ಹಾಲ್ ಗಳಿದ್ದು, ಒಟ್ಟಾರೆ 500 ಆಸನಗಳಿವೆ. ಮೂರನೆಯ ಮಹಡಿಯನ್ನು ರೆಸ್ಟೋರಂಟ್ ಗಳು, ಸೂಪರ್ ಮಾರ‍್ಕೆಟ್‍ಗಳು, ಪುಡ್ ಕೋರ‍್ಟ್ ಗಳು ಅಲಂಕರಿಸಿವೆ. ನಾಲ್ಕನೆಯ ಮಹಡಿಯಲ್ಲಿ ಒಂದು ಸಾವಿರ ಆಸನಗಳ ಸಬಾಂಗಣ ಹಾಗೂ ಐದನೆಯ ಮಹಡಿಯಲ್ಲಿ ಐಶಾರಮಿ ಹೋಟೆಲ್ ಕೊಟಡಿಗಳಿವೆ. ಆರನೆಯ ಮಹಡಿಯಲ್ಲಿ ವೀಕ್ಶಣಾ ಗ್ಯಾಲರಿ ಇದೆ. ಅಲ್ಲಿಂದ ಹೊರ ಬಾಗದ ದೊಡ್ಡ ವಾಟರ್ ಪಾರ‍್ಕಿನ ಬೂದ್ರುಶ್ಯ ಮತ್ತು ಕೊಲಂಬೊ ಮಹಾನಗರದ ವೀಕ್ಶಣೆ ಮಾಡಬಹುದಾಗಿದೆ. ಈ ಗೋಪುರವು ಹಾಲಿ ಶ್ರೀಲಂಕಾ ರಕ್ಶಣಾ ಇಲಾಕೆಯ ಸುಪರ‍್ದಿಯಲ್ಲಿದೆ. ಗೋಪುರದ ಈ ಯೋಜನೆಯ ಮುಕ್ಯ ಗುತ್ತಿಗೆದಾರರು ಚೀನಾದ, ಚೀನಾ ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಆಮದು ಮತ್ತು ರಪ್ತು ಕಾರ‍್ಪೊರೇಶನ್ (CEIEC).

(ಮಾಹಿತಿ ಮತ್ತು ಚಿತ್ರಸೆಲೆ: lakpura.comsrilankamirror.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: