ಒನ್ಬಶಿರಾ: ಹೀಗೊಂದು ಅಪಾಯಕಾರಿ ಉತ್ಸವ

– .

ಜಗತ್ತಿನಲ್ಲಿ ಆಚರಣೆಯಲ್ಲಿರುವ ಅತ್ಯಂತ ಅಪಾಯಕಾರಿ ಉತ್ಸವಗಳಲ್ಲಿ ಜಪಾನ್ ದೇಶದ ಒನ್ಬಶಿರಾ ಉತ್ಸವ ಮೊದಲ ಐದರಲ್ಲಿ ಸ್ತಾನಗಳಿಸಿದೆ. ಪ್ರತಿ ಆರು ವರುಶಗಳಿಗೊಮ್ಮೆ ಆಚರಿಸಲಾಗುವ ಈ ಉತ್ಸವವು ನೆನ್ನೆ ಮೊನ್ನೆಯದಲ್ಲ. ಇದಕ್ಕೆ ಸರಿ ಸುಮಾರು 1200 ವರುಶಗಳಶ್ಟು ಹಳೆಯ ಇತಿಹಾಸವಿದೆ. ಒನ್ಬಶಿರಾ ಉತ್ಸವವು ಜಪಾನಿನ ದೊಡ್ಡ ಮೂರು ಅವಾಸ್ತವಿಕ ಕಲ್ಪನೆಯ ಉತ್ಸವಗಳಲ್ಲಿ ಒಂದಾಗಿದೆ. ಈ ಹಿಂದೆ 2004, 2010 ಮತ್ತು 2016ರಲ್ಲಿ ನಡೆದ ಉತ್ಸವದಲ್ಲಿ ಕ್ರಮವಾಗಿ ಎರಡು, ಎರಡು, ಒಂದು ಸಾವು ಸಂಬವಿಸಿದ್ದವು. ಈ ಕಾರಣದಿಂದಲೇ ಇದನ್ನು ಅತ್ಯಂತ ಅಪಾಯಕಾರಿ ಉತ್ಸವಗಳ ಪಟ್ಟಿಗೆ ಸೇರಿಸಿರುವುದು.

2022 ರಲ್ಲಿ ಮತ್ತೊಮ್ಮೆ ನಡೆಯಲಿರುವ ಒನ್ಬಶಿರಾ

ಈ ವರುಶ ಮತ್ತೊಮ್ಮೆ ಈ ಉತ್ಸವ ನಡೆಯಲಿದೆ. ಏಪ್ರಿಲ್ 2, 2022ರ ಶನಿವಾರ ಪ್ರಾರಂಬವಾಗುವ ಈ ಉತ್ಸವ, 15ನೇ ಜೂನ್ 2022ರ ಬುದವಾರದಂದು ಮುಗಿಯುತ್ತದೆ. ಜಪಾನಿನ ಚುಬು ಪ್ರದೇಶದಲ್ಲಿನ ನಾಗಾನೊ ಆಡಳಿತದ ವ್ಯಾಪ್ತಿಯಲ್ಲಿರುವ ಸುವಾ ತೈಶಾ ದೇವಾಲಯವನ್ನು ಮತ್ತೆ ಕಟ್ಟುವಾಗ ಒನ್ಬಶಿರಾ ಉತ್ಸವ ಆಚರಣೆಗೆ ಬಂದಿದೆ. ಈ ಉತ್ಸವದ ಪರಾಕಾಶ್ಟೆಯು ಕಿಯೋಟೋಶಿ (ಯುವಕರು ಕಡಿದಾದ ಇಳಿಜಾರಿನಲ್ಲಿ ಮರದ ದಿಮ್ಮಿಗಳ ಮೇಲೆ ಸವಾರಿ ಮಾಡುತ್ತಾ ಜಾರುವುದು) ಮತ್ತು ಟಟೆ ಒನ್ಬಶಿರಾವನ್ನು (ನಂತರ ಆ ದಿಮ್ಮಿಗಳನ್ನು ಕಂಬಗಳಾಗಿ ನಿಲ್ಲಿಸುವವರೆಗೂ) ಒಳಗೊಂಡಿದೆ. 1998ರಲ್ಲಿನ ನಗಾನೊ ಒಲಂಪಿಕ್ಸ್‌ನ ಉದ್ಗಾಟನಾ ಸಮಾರಂಬದಲ್ಲಿ ಟಟೆ ಒನ್ಬಶಿರಾವನ್ನು ಪಸ್ತುತಪಡಿಸಲಾದ ಕಾರಣ ಈ ಉತ್ಸವ ವಿಶ್ವವಿಕ್ಯಾತವಾಗಿದೆ.

ಉತ್ಸವದ ಹಿಂದಿನ ತಯಾರಿಗಳು

ಸುವಾ ತೈಶಾ ನಾಲ್ಕು ದೇವಾಲಯಗಳನ್ನು ಹೊಂದಿದ್ದು, ಒನ್ಬಶಿರಾ ಉತ್ಸವಕ್ಕಾಗಿ ಕಾಡಿನಿಂದ ಬ್ರುಹತ್ ಮರಗಳನ್ನು ಕಡಿದು ಅದರ ದಿಮ್ಮಿಗಳನ್ನು ತಂದು ಈ ನಾಲ್ಕೂ ದೇವಾಲಯದ ನಾಲ್ಕೂ ಮೂಲೆಗಳಲ್ಲಿ ಒಂದರಂತೆ, ಒಟ್ಟಾರೆ ಹದಿನಾರು ಕಂಬಗಳನ್ನು ನಿಲ್ಲಿಸಲಾಗುತ್ತದೆ. ಈ ಬ್ರುಹತ್ ಕಂಬಗಳನ್ನೇ ‘ಒನ್ಬಶಿರಾ’ ಎನ್ನುವುದು. ನಾಲ್ಕು ಕಂಬಗಳ ನಡುವೆ ದೇವಾಲಯದ ಪವಿತ್ರ ಸ್ತಳವನ್ನು ಗುರುತಿಸಲಾಗುತ್ತದೆ. ದೇವಾಲಯದ ಬುನಾದಿ ಶಿತಿಲವಾಗದಂತೆ ಬೆಂಬಲಿಸುವ ಸಲುವಾಗಿ ಈ ರೀತಿಯಲ್ಲಿ ಕಂಬಗಳನ್ನು ನೆಡಲಾಗುತ್ತದೆ.

ಒನ್ಬಶಿರಾ ಉತ್ಸವವನ್ನು ಎರಡು ಬಾಗಗಳಾಗಿ ವಿಂಗಡಿಸಬಹುದು. ಮೊದಲನೆಯ ಬಾಗ ಯಮದಾಶಿ. ಯಮದಾಶಿಯಲ್ಲಿ ಪರ‍್ವತ ಪ್ರದೇಶದಿಂದ ದೊಡ್ಡ ಮರದ ಕಾಂಡಗಳನ್ನು ಗುರುತಿಸಿ ಬೀಳಿಸುವುದು. ಎರಡನೆಯದು ಸಟೋಬಿಕಿ. ಸಟೋಬಿಕಿಯಲ್ಲಿ ಮರದ ಕಾಂಡಗಳನ್ನು ದೇವಾಲಯದ ಮೈದಾನಕ್ಕೆ ಎಳೆದು ತರುವುದು. ಈ ಸಮಯದಲ್ಲಿ ಇಡೀ ಸುವಾ ಪ್ರದೇಶದಲ್ಲಿ ಹಬ್ಬದ ವಾತಾವರಣವಿರುತ್ತದೆ. ಏಪ್ರಿಲ್ ಮೊದಲಲ್ಲಿ ನಡೆಯುವ ಯಮದಶಿಯಲ್ಲಿ ದೇವಾಲಯಕ್ಕೆ ಬೇಕಾಗುವ ಹದಿನಾರು ಬಾರಿ ಗಾತ್ರದ, 200 ವರುಶದಶ್ಟು ಹಳೆಯ ಜಪಾನಿನ ಪಿರ‍್ ಮರಗಳನ್ನು ಗುರುತಿಸಿ ಅವುಗಳನ್ನು ಕತ್ತರಿಸಲಾಗುತ್ತದೆ. ಒಂದೊಂದು ಮರದ ದಿಮ್ಮಿಯೂ ಕಡಿಮೆ ಎಂದರೂ ಒಂದು ಮೀಟರ‍್ ಸುತ್ತಳತೆಯ, ಹದಿನಾರು ಮೀಟರ‍್ ಉದ್ದದ, ಸುಮಾರು ಹನ್ನೆರೆಡು ಟನ್ ತೂಕದ್ದಾಗಿರುತ್ತದೆ.

ಪ್ರಾಣವನ್ನೇ ಪಣಕ್ಕಿಡುವ ಜನರು

ಯಮದಾಶಿಯ ಒಂದು ಬಾಗವಾದ ಕಿಯೋಟೋಶಿಯಲ್ಲಿ ಜನರು ಒನ್ಬಶಿರಾದ (ಮರದ ದಿಮ್ಮಿ) ಮೇಲೆ ಕುಳಿತು ಸುಮಾರು ನೂರು ಮೀಟರ‍್ ಉದ್ದವಿರುವ ಕಡಿದಾದ 30 ರಿಂದ 40 ಡಿಗ್ರಿ ಇಳಿಜಾರಿನಲ್ಲಿ ಕೆಳಕ್ಕೆ ಜಾರುತ್ತಾರೆ. ಅದರ ಮೇಲೆ ಕುಳಿತವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜಾರುವ ದ್ರುಶ್ಯ ಅತಿ ರೋಚಕ ಹಾಗೂ ಮೈನವಿರೇಳಿಸುತ್ತದೆ. ಇದೇ ರೀತಿಯಲ್ಲಿ ಎಲ್ಲಾ ಹದಿನಾರು ಮರದ ದಿಮ್ಮಿಗಳನ್ನೂ ಪರ‍್ವತದಿಂದ ಕೆಳಕ್ಕೆ ಜಾರಿಸಿ ತರಲಾಗುತ್ತದೆ. ಹೀಗೆ ಪರ‍್ವತದಿಂದ ಕೆಳಕ್ಕೆ ತರಲಾದ ಮರದ ದಿಮ್ಮಿಗಳನ್ನು ಸುಮಾರು ಒಂದು ತಿಂಗಳ ಕಾಲ, ಅಂದರೆ ಮೇ ತಿಂಗಳ ಆರಂಬದಲ್ಲಿ ಪ್ರಾರಂಬವಾಗುವ ಸಟೋಬಿಕಿಯವರೆಗೂ, ಇಳಿಜಾರಿನ ತಪ್ಪಲಿನಲ್ಲೇ ಬಿಟ್ಟಿರಲಾಗುತ್ತದೆ. ನಂತರ ಅವುಗಳನ್ನು ದೇವಾಲಯದ ಆವರಣಕ್ಕೆ ಸಾಗಿಸುವ ಕೆಲಸ ಪ್ರಾರಂಬವಾಗುತ್ತದೆ. ಪರ‍್ವತದ ಬುಡದಿಂದ ದೇವಾಲಯದ ಆವರಣಕ್ಕೆ ಹತ್ತು ಕಿಲೋಮೀಟರ‍್ ದೂರವಿದ್ದು, ಅಲ್ಲಿಗೆ ಸಾಗಿಸಲು ಕನಿಶ್ಟ ಮೂರು ದಿನಗಳ ಅವಶ್ಯಕತೆ ಇರುತ್ತದೆ. ಅಲ್ಲಿ ಸೇರಿರುವ ಜನರು ಈ ಬಾರಿ ಗಾತ್ರದ ಮರದ ದಿಮ್ಮಿಗಳನ್ನು, ವಿಶೇಶ ಹಾಡುಗಳನ್ನು ಹಾಡುತ್ತಾ ಒಬ್ಬರೊನ್ನೊಬ್ಬರು ಹುರಿದುಂಬಿಸುತ್ತಾ ಎಳೆಯುತ್ತಾರೆ. ಮರದ ದಿಮ್ಮಿಗಳನ್ನು ಎಳೆಯುವ ಉತ್ಸವದಲ್ಲಿ ಸಮುರಾಯ್ ರೀತಿಯ ಮೆರವಣಿಗೆ ಮತ್ತು ಸಾಂಪ್ರದಾಯಿಕ ಹೂವಿನಿಂದ ಅಲಂಕ್ರುತವಾದ ಟೋಪಿಗಳನ್ನು ದರಿಸಿದವರಿಂದ ನ್ರುತ್ಯ ಸಹ ಇದರ ಬಾಗವಾಗಿದ್ದು, ಮರದ ದಿಮ್ಮಿಗಳನ್ನು ಎಳೆಯುವವರಿಗೆ ಉತ್ತೇಜನ ನೀಡುತ್ತದೆ.

ಉತ್ಸವದ ಕೊನೆಯ ಚರಣದಲ್ಲಿ ಮರದ ದಿಮ್ಮಿಗಳನ್ನು ದೇವಾಲಯದ ಬಳಿ ಅದನ್ನು ಲಂಬವಾಗಿ ನಿಲ್ಲಿಸಬೇಕಿರುವ ಸ್ತಳಕ್ಕೆ ತರಲಾಗುತ್ತದೆ. ಪ್ರತಿ ಒನ್ಬಶಿರಾಗೂ ಎರಡೆರಡು ಬಾರೀ ಗಾತ್ರದ ಹಾಗೂ ಸಾಕಶ್ಟು ಉದ್ದದ ಹಗ್ಗವನ್ನು ಬಿಗಿಯಲಾಗುತ್ತದೆ. ಮರದ ದಿಮ್ಮಿಯನ್ನು ಲಂಬವಾಗಿ ನಿಲ್ಲಿಸಲು ಹಗ್ಗಗಳನ್ನು ನೆರೆದಿರುವ ಜನಸ್ತೋಮ ಒಟ್ಟಾಗಿ ಎಳೆಯುತ್ತದೆ. ಈ ಸಮಯದಲ್ಲಿ ಕೆಲವು ಯುವಕರು ಮರದ ದಿಮ್ಮಿಯ ಮೇಲೆ ಕುಳಿತು, ಅದು ಹದಿನಾರು ಮೀಟರ‍್ ಎತ್ತರಕ್ಕೆ ನಿಲ್ಲುತ್ತಿದ್ದಂತೆ, ಆ ಎತ್ತರದಲ್ಲಿ ಕೆಲವು ಸಾಹಸಗಳನ್ನು ಮಾಡಿ ನೆರೆದಿದ್ದವರನ್ನು ಬೆರಗುಗೊಳಿಸಿ ಮಂತ್ರ ಮುಗ್ದರನ್ನಾಗಿಸುತ್ತಾರೆ.

ಒಮ್ಮೆ ಎಲ್ಲಾ ಹದಿನಾರು ಒನ್ಬಶಿರಾ (ಮರದ ದಿಮ್ಮಿಗಳು) ನೇರವಾಗಿ ನಿಂತಲ್ಲಿ, ಅಲ್ಲಿಗೆ, ಇದರ ತಯಾರಿಕೆಯ ಸಮಯ ಸೇರಿದಂತೆ ಮೂರು ವರುಶಗಳ ಸತತ ಪರಿಶ್ರಮದ, ಅತ್ಯಂತ ಅಪಾಯಕಾರಿ, ಒನ್ಬಶಿರಾ ಉತ್ಸವ ಸಂಪನ್ನಗೊಳ್ಳುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ:  holidappy.com, onbashirafestival.com, go-nagano.netjapancheapo.comnymag.com, kuriositas.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: