ಅಡಿಕೆ ಬೆಳೆ – ಒಂದು ಇಣುಕು ನೋಟ

   ಕಂತು-2

– ನಿತಿನ್ ಗೌಡ.                                                                                                                                            

adike

ಅಡಿಕೆ ಕರ್‍ನಾಟಕದ ತೋಟಗಾರಿಕಾ ಬೆಳೆಗಳ ಮಾರುಕಟ್ಟೆಯಲ್ಲಿ ಬಹುದೊಡ್ಡ ಪಾಲನ್ನು ಹೊಂದಿದೆ. ಇಂದು ಅಡಿಕೆಯ ಬಳಕೆ ತಿನ್ನುವುದಕ್ಕಶ್ಟೇ ಸೀಮಿತವಾಗಿಲ್ಲ. ಅಡಿಕೆ ‘ಟೀ’ ಇಂದ ಹಿಡಿದು ಪ್ಲಾಸ್ಟಿಕ್ ಗೆ ಪರ್‍ಯಾಯವಾಗಿ ಬಳಸಬಹುದಾದ ಪರಿಸರ ಸ್ನೇಹಿ ತಟ್ಟೆ-ಲೋಟಗಳ ತಯಾರಿಕೆಗೆ ಅಡಿಕೆ ಬಳಕೆಯಾಗುತ್ತಿದೆ.

ಅಡಿಕೆ ಬಾರತಕ್ಕೆ ಹೊರಗಿನಿಂದ ಬಂದ ಬೆಳೆಯಾಗಿದೆ. ಹೀಗಿದ್ದರೂ, 2017ರ ಲೆಕ್ಕಾಚಾರ ನೋಡಿದಾಗ ಜಗತ್ತಿನ ಅರ‍್ದಕ್ಕಿಂತ (54%) ಹೆಚ್ಚಿನ ಅಡಿಕೆ ಬೆಳೆ, ಬಾರತದಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಕರುನಾಡಿನದ್ದೇ ಸಿಂಹಪಾಲು(62.69% 2013-14). ಇನ್ನುಳಿದಂತೆ ಬಾರತದಲ್ಲಿ ಅಸ್ಸಾಮ್, ಕೇರಳ, ಮೇಗಾಲಯ, ತಮಿಳುನಾಡು, ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಇನ್ನೂ ಕೆಲ ರಾಜ್ಯಗಳಲ್ಲಿ ಬೆಳೆಯುತ್ತಾರೆ. ಇದಲ್ಲದೇ ಹೊರದೇಶಗಳಾದ ಮಲೇಶಿಯಾ, ಬಾಂಗ್ಲಾದೇಶ, ಇಂಡೋನೇಶಿಯ, ಚೀನಾ ಮತ್ತು ಪಿಲಿಪೈನ್ಸ್ ನಾಡುಗಳಲ್ಲೂ ಬೆಳೆಯುತ್ತಾರೆ.

ಅಡಿಕೆ, ಹೆಚ್ಚಾಗಿ ಕರುನಾಡಿನ ಮಲೆನಾಡು ಮತ್ತು ಕರಾವಳಿ ಬಾಗದ ರೈತರ ಬದುಕಿನೊಟ್ಟಿಗೆ ಬೆಸೆದುಕೊಂಡಿರುವ ಮತ್ತು ಅವರ ಬದುಕನ್ನು, ಹಣಕಾಸಿನ ಮಟ್ಟವನ್ನು ಮೇಲೆತ್ತಿ ಹಸನಾಗಿಸಿದ ಒಂದು ವಾಣಿಜ್ಯ ಬೆಳೆ ಎಂದರೆ ತಪ್ಪಾಗಲಾರದು. ತನ್ನ ಹಲವಾರು ಬಳಕೆಗಳಿಂದ, ಇತ್ತೀಚಿಗೆ ಅಡಿಕೆ ಒಂದು ಮುಕ್ಯ ವಾಣಿಜ್ಯ ಬೆಳೆಯಾಗಿ ಹೊರ ಹೊಮ್ಮುತ್ತಿದೆ. ಇದೇ ಕಾರಣಕ್ಕೆ ಇಂದು ಅರೆ ಮಲೆನಾಡಿನಲ್ಲೂ ಕೂಡ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದನ್ನು ಕಾಣಬಹುದು.

ಅಡಿಕೆ ಬೆಳೆಯನ್ನು ಎಲ್ಲೆಲ್ಲಿ ಬೆಳೆಯಬಹುದು?

ಅಡಿಕೆ ಬೆಳೆಯಲು ಸುತ್ತಣದ ಕಾವು, ನೆಲದ ಗುಣ, ಮಳೆ, ಸಮುದ್ರ ಮಟ್ಟದಿಂದ ಇರುವ ಪ್ರದೇಶದ ಎತ್ತರ ಬೆಳೆಯ ಏಳ್ಗೆಯಲ್ಲಿ ಒಂದು ಅರಿದಾದ (main) ಪಾತ್ರವಹಿಸುತ್ತದೆ. 10 ರಿಂದ 40 ಡಿಗ್ರಿ ಸೆಂಟಿಗ್ರೇಡ್ ಕಾವು, ಬರಿದಾದ ನೆಲ (Drained soil), ಸಮುದ್ರ ಮಟ್ಟದಿಂದ ಸರಾಸರಿ 1000 ಮೀಟರ‍್ ಎತ್ತರದ ಎಡೆ, ವರುಶಕ್ಕೆ 750 ರಿಂದ 4,500 ಎಂ.ಎಂ. ಮಳೆ ಇವೆಲ್ಲವೂ ಅಡಿಕೆ ಬೆಳೆಗೆ ಬೇಕಾದ ಪೂರಕವಾದ ಸುತ್ತಣದ ಬೇಡಿಕೆಗಳಾಗಿವೆ. ಸಾಮಾನ್ಯವಾಗಿ ಒಳ್ಳೆಯ ಬೇಸಾಯ ಮಾಡಿದಲ್ಲಿ, ಅಡಿಕೆ ಮರ ಐದರಿಂದ ಆರು ವರುಶವಾಗುತ್ತಿದ್ದಂತೆ ಹಿಂಗಾರ (ಅಡಿಕೆ ತೆನೆ) ಒಡೆಯಲು ಮೊದಲು ಮಾಡುತ್ತದೆ. 8 ರಿಂದ 10 ವರುಶದ ತರುವಾಯ ಒಳ್ಳೆಯ, ಪೂರ‍್ಣ ಮಟ್ಟದ ಇಳುವರಿಯನ್ನು ಎದುರುನೋಡಬಹುದು.

ಅಡಿಕೆ ಸಸಿ ತಯಾರಿಕೆ ಹೇಗೆ?

ಚಪ್ಪರದ ನೆರಳಿನಡಿ ಇಟ್ಟಿರುವ ಒಗ್ಗುಹಾಕಿದ ಅಡಿಕೆ ಗಿಡಗಳು

20-25 ವರುಶ ಮೇಲ್ಪಟ್ಟ ಮರದ ಹಣ್ಣನ್ನು ಒಗ್ಗುಹಾಕಲು (Process of seeding and raising of arecaunaut saplings) ಬಳಸಬಹುದು. ಮಣ್ಣು ಮತ್ತು ಸಾವಯವ ಗೊಬ್ಬರ/ಎಲೆ-ಸಗಣಿ ಗೊಬ್ಬರ ಸೇರಿಸಿ ಕಲಸಿಟ್ಟುಕೊಳ್ಳಬೇಕು. ಆಮೇಲೆ ಒಂದು ಇಲ್ಲವೇ ಎರಡು ಕೆ.ಜಿ. ಕೊಟ್ಟೆಗಳಲ್ಲಿ(Bag) ಮಣ್ಣನ್ನು ತುಂಬಿ, ಅಡಿಕೆ ಹಣ್ಣನ್ನು ಅದರಲ್ಲಿ ಮೇಲಿಗೆ (ಮೇಲೆ) ಹೂಳಬೇಕು. ಈ ಕೊಟ್ಟೆಗಳನ್ನು ಚಪ್ಪರದ ಅಡಿಯಲ್ಲಿ ಇಟ್ಟು, ಬಿಸಿಲು ಕಡಿಮೆ ಬರುವಂತೆ ನೋಡಿಕೊಳ್ಳಬೇಕು ಮತ್ತು ಆಗಾಗ ನೀರು ಸಿಂಪಡಿಸುತ್ತಾ ಕಳೆ ಬಾರದಂತೆ ನೋಡಿಕೊಳ್ಳಬೇಕು. ಆಗಾಗ ಸಗಣಿ ನೀರನ್ನು ಮಾಡಿ ಕೂಡ ಹಾಕಬಹುದು. ಒಂದರಿಂದ – ಒಂದೂವರೆ ವರುಶಗಳ ನಂತರ, ಒಗ್ಗು ಹಾಕಿದ ಗಿಡಗಳನ್ನು ನೆಡಲು ಬಳಸಬಹುದು.

ತೋಟದೊಳಗಿಟ್ಟಿರುವ ಅಡಿಕೆ ಸಸಿಗಳು

ಅಡಿಕೆ ಗಿಡ ಸಾಮಾನ್ಯವಾಗಿ ಹಂಕಲಿನಲ್ಲಿ(ಕಾಲಿ ಹೊಲ) ನೆಟ್ಟಾಗ ಬೇಗನೆ ದೊಡ್ಡದಾಗುವುದು ಮತ್ತು ಗದ್ದೆಯಲ್ಲಿ ನೆಟ್ಟಾಗ ಕೊಂಚ ನಿದಾನವಾಗಿ ಬೆಳೆಯುವುದಾದರೂ, ಹೆಚ್ಚು ಕಾಲ ಬದುಕುತ್ತದೆಯೆಂದು ಬಲ್ಲವರು ಅನ್ನುವರು. ಸಾಮಾನ್ಯವಾಗಿ ಅಡಿಕೆ ಗಿಡಗಳ ನಡುವೆ 9-10 ಅಡಿ ಅಂತರ ಇದ್ದರೆ ಒಳ್ಳೆಯದು. ಇದರಿಂದ ಮುಂದೆ ಅಡಿಕೆ ಗಿಡ ಮರವಾದಾಗ, ಗಾಳಿಗೆ ಒಂದಕ್ಕೊಂದು ಹೊಡೆದುಕೊಳ್ಳುವುದು ಕಡಿಮೆಯಾಗುತ್ತದೆ, ಅಲ್ಲದೇ ಗಿಡಗಳ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಇದಲ್ಲದೆ ಟಿಲ್ಲರ್-ಟ್ರ್ಯಾಕ್ಟರ್‌ಗಳು ಓಡಾಡಲು ಅನುಕೂಲವಾಗುತ್ತದೆ.

ಅಡಿಕೆಯ ಜೊತೆ ಯಾವ ಬೆಳೆಯನ್ನು ಬೆಳೆಯಬಹುದು? 

ಅಡಿಕೆ ಜೊತೆ ಬಾಳೆ ಮತ್ತು ಶುಂಟಿಯನ್ನು ಬೆಳೆದಿರುವುದು

ಅಡಿಕೆಯ ಜೊತೆ ಬಾಳೆ, ಕಾಳುಮೆಣಸು, ಸುವರ‍್ಣ ಗೆಡ್ಡೆ, ಕಾಪಿ, ಕಬ್ಬು, ಶುಂಟಿ ಬೆಳೆಯಬಹುದು. ಇದರಲ್ಲಿ ಬಾಳೆ, ಕಾಳುಮೆಣಸು, ಕಾಪಿ ಸಾಮಾನ್ಯವಾಗಿ ಹೆಚ್ಚಾಗಿ ಬೆಳೆಯುವ ಬೆಳೆಗಳಾಗಿವೆ. ಶುಂಟಿ ಬೆಳೆಯೊಂದಿಗೆ ಅಡಿಕೆ ಗಿಡ ಹಾಕಿದಲ್ಲಿ, ಎರಡು ವರುಶದಲ್ಲಿ ಆಗುವ ಬೆಳವಣಿಗೆಯನ್ನು ಒಂದೇ ವರುಶದಲ್ಲಿ ಕಾಣಬಹುದು. ಇದಕ್ಕೆ ಕಾರಣ ಶುಂಟಿಗೆ ಮಾಡುವ ಆರಯ್ಕೆ. ಇದರ ಸಾರವನ್ನು ಅಡಿಕೆ ಗಿಡಗಳು ಚೆನ್ನಾಗಿ ಬಳಸಿಕೊಳ್ಳುತ್ತವೆ, ಅದರಲ್ಲೂ ಹಂಕಲಲ್ಲಿ ಬೆಳೆದಾಗ ಅಡಿಕೆ ಬೆಳೆ ಇನ್ನಶ್ಟು ಚೆನ್ನಾಗಿ ಬೆಳೆಯುತ್ತದೆ.

ಬೆಳೆದ ಅಡಿಕೆ ಮರಕ್ಕೆ ಹಬ್ಬಿಸಿರುವ ಕಾಳುಮೆಣಸಿನ ಬಳ್ಳಿ

ಕಂತು-2

(ಮಾಹಿತಿ ಸೆಲೆ: wikipedia.org, tssindia.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: