ಹಿತಕಿದ ಅವರೆಕಾಳು ಸಾಂಬಾರ್

ಶ್ಯಾಮಲಶ್ರೀ.ಕೆ.ಎಸ್.

ಬೇಕಾಗುವ ಸಾಮಾನುಗಳು

 • ಹಿತಕಿದ ಅವರೆಕಾಳು – 1/2 ಕೆಜಿ
 • ಈರುಳ್ಳಿ (ಮದ್ಯಮ ಗಾತ್ರ) – 2
 • ಬೆಳ್ಳುಳ್ಳಿ – 10-12 ಎಸಳು
 • ಟೊಮ್ಯಾಟೊ (ಮದ್ಯಮ ಗಾತ್ರ) – 2
 • ಶುಂಟಿ – 1/2 ಇಂಚು
 • ಲವಂಗ – 2
 • ಚಕ್ಕೆ – 1/2 ಇಂಚು
 • ಗಸಗಸೆ – 1 ಟೀ ಚಮಚ
 • ಹಸಿ ತೆಂಗಿನಕಾಯಿಯ ತುರಿ – 4 ಟೀ ಚಮಚ
 • ಅಚ್ಚ ಕಾರದ ಪುಡಿ – 3/4 ಟೀ ಚಮಚ
 • ಮಸಾಲೆ ಪುಡಿ ಅತವಾ ದನಿಯಾ ಪುಡಿ – 2 ಟೀ ಚಮಚ (3 ಟೀ ಚಮಚ ದನಿಯಾ + ಮೆಂತ್ಯ 4 ಕಾಳು, ಕರಿ ಮೆಣಸು 4ಕಾಳು ಹುರಿದು 1/4 ಚಮಚ ಅರಿಶಿಣ ಸೇರಿಸಿ ಪುಡಿ ಮಾಡಿದ ಮಿಶ್ರಣ)
 • ಕೊತ್ತಂಬರಿ – ಸ್ವಲ್ಪ
 • ಉಪ್ಪು – ರುಚಿಗೆ ತಕ್ಕಶ್ಟು
 • ಅಡುಗೆ ಎಣ್ಣೆ – 4 ಟೀ ಚಮಚ

ಮಾಡುವ ಬಗೆ

ಒಂದು ಬಾಣಲೆಯಲ್ಲಿ 1 ಟೀ ಚಮಚ ಅಡಿಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಎಸಳುಗಳು,ಕತ್ತರಿಸಿದ ಟೊಮ್ಯಾಟೊ ಬಾಡಿಸಿ ಮಿಕ್ಸಿ ಜಾರ್ ಗೆ ಹಾಕಿ. ಅದರೊಂದಿಗೆ ಹುರಿದ ಗಸಗಸೆ, ಚಕ್ಕೆ, ಲವಂಗ ,ಶುಂಟಿ ,ದನಿಯಾಪುಡಿ, ಅಚ್ಚ ಕಾರದ ಪುಡಿ , ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಗೂ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಮತ್ತೊಂದೆಡೆ ಒಂದು ಬಾಣಲೆಯಲ್ಲಿ ಒಂದು ಟೀ ಚಮಚ ಅಡಿಗೆ ಎಣ್ಣೆಯನ್ನು ಹಾಕಿ ಬಿಸಿಯಾದ ಮೇಲೆ ಹಿತಕಿದ ಅವರೆ ಕಾಳುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಾಡಿಸಿ ಪಕ್ಕಕ್ಕೆ ತೆಗೆದಿಡಬೇಕು.

ಇನ್ನೊಂದು ಪಾತ್ರೆಯಲ್ಲಿ 2 ಟೀ ಚಮಚ ಎಣ್ಣೆ ಯನ್ನು ಹಾಕಿ ಬಿಸಿಯಾದ ನಂತರ ಸ್ವಲ್ಪ ಕತ್ತರಿಸಿದ ಈರುಳ್ಳಿ (1/2 ಈರುಳ್ಳಿ)ಹಾಕಿ ಬಾಡಿಸಿ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ರುಬ್ಬಿಟ್ಟ ಮಿಶ್ರಣವನ್ನ ಸೇರಿಸಿ , ಅಗತ್ಯವಿದ್ದಶ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಹಾಗೆಯೇ ಕುದಿಯುತ್ತಿರುವ ಮಿಶ್ರಣಕ್ಕೆ ಬಾಡಿಸಿಟ್ಟುಕೊಂಡಿದ್ದ ಹಿತಕಿದ ಅವರೆಕಾಳುಗಳನ್ನು ಹಾಕಿ, ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿ ಬೇಯಿಸಿ ಇಳಿಸಿ. ಬೇಯಿಸುವಾಗ ಕಾಳು ತೀರಾ ಮೆತ್ತಗಾಗದಂತೆ ನೋಡಿಕೊಳ್ಳಿ. ಸಾಂಬಾರ್ ತುಂಬಾ ತಿಳಿಸಾರಿನಂತೆ ಇರಬಾರದು. ಸ್ವಲ್ಪ ಮಂದವಾಗಿರಬೇಕು. ಈಗ ಹಿತಕಿದ ಅವರೆಕಾಳು ಸಾಂಬಾರ್ ಸವಿಯಲು ಸಿದ್ದ. ಈ ಸಾಂಬಾರ್ ಪೂರಿ, ಅತವಾ ರಾಗಿಮುದ್ದೆ ಯೊಡನೆ ಸವಿಯಲು ಸೊಗಸಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: