ಅಂಬಿಗರ ಚೌಡಯ್ಯನ ವಚನ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.

ಅತ್ಯಾಹಾರವನುಂಡು
ಹೊತ್ತುಗಳೆದು
ಹೋಕಿನ ಮಾತನಾಡುತ್ತ
ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ
ಮತ್ತೆ ಶಿವನ ನೆನೆದೆನೆಂದಡೆ
ಶಿವನವರ ಎತ್ತಲೆಂದರಿಯನೆಂದಾತ
ನಮ್ಮಂಬಿಗರ ಚೌಡಯ್ಯ.

ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಗಳಲ್ಲಿಯೇ ತೊಡಗಿಕೊಂಡು ಜತೆಜತೆಗೆ ಶಿವನಾಮ ಸ್ಮರಣೆಯನ್ನು ಮಾಡಿದ ಮಾತ್ರಕ್ಕೆ ವ್ಯಕ್ತಿಗಳು ಒಳ್ಳೆಯವರಾಗುವುದಿಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

“ಕೆಟ್ಟ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸವು ಅವನಿಗೆ, ಅವನ ಕುಟುಂಬಕ್ಕೆ, ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಉಂಟುಮಾಡುವುದು.

“ಒಳ್ಳೆಯ ವ್ಯಕ್ತಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸವು ಅವನಿಗೆ, ಅವನ ಕುಟುಂಬಕ್ಕೆ ಒಳಿತನ್ನು ಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು.

ಅತ್ಯಾಹಾರವನು+ಉಂಡು; ಆಹಾರ=ಉಣಿಸು ತಿನಸು; ಅತ್ಯಾಹಾರ=ಹೆಚ್ಚಿನ ಪ್ರಮಾಣದ ಆಹಾರ; ಉಣ್=ತಿನ್ನು/ಸೇವಿಸು; ಅತ್ಯಾಹಾರವನುಂಡು=ಒಂದು ಇತಿಮಿತಿಯಿಲ್ಲದೆ ಅತಿ ಹೆಚ್ಚಾಗಿ ಆಹಾರವನ್ನು ತಿಂದು;

ಹೊತ್ತು+ಕಳೆದು; ಹೊತ್ತು=ಸಮಯ/ವೇಳೆ; ಕಳೆ=ಹಾಳುಮಾಡು; ಹೊತ್ತುಗಳೆದು=ತನಗೆ ಮತ್ತು ಇತರರಿಗೆ ಒಳಿತನ್ನು ಉಂಟುಮಾಡುವ ಯಾವುದೇ ಒಂದು ದುಡಿಮೆಯನ್ನು ಮಾಡದೇ, ಸುಮ್ಮನೆ ಕುಂತು ನಿಂತು ನಿದ್ರಿಸಿ ಕಾಲವನ್ನು ನೂಕುತ್ತಿರುವುದು; ಹೋಕು=ತಿರುಳಿಲ್ಲದ/ಬರಿದಾದ/ಹಾಳಾದ; ಮಾತು=ಸೊಲ್ಲು/ನುಡಿ; ಹೋಕಿನ ಮಾತನಾಡುತ್ತ=ಕೆಲಸಕ್ಕೆ ಬಾರದ ಮಾತನ್ನಾಡುತ್ತ/ಪೊಳ್ಳು ಮಾತನ್ನಾಡುತ್ತ;

ಚಿತ್ತ=ಮನಸ್ಸು; ಪರಿ=ರೀತಿ; ವ್ಯವಹಾರ=ಯಾವುದಾದರೊಂದು ಬಗೆಯ ಕೆಲಸದಲ್ಲಿ ತೊಡಗುವುದು; ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ=ಮನಸ್ಸು ಬಂದ ರೀತಿಯಲ್ಲಿ ನಡೆದುಕೊಳ್ಳುತ್ತ/ಮನದಲ್ಲಿ ಮೂಡುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೆ ಕೆಟ್ಟ ಕೆಲಸಗಳನ್ನೇ ಮಾಡುತ್ತ;

ಮತ್ತೆ=ಇದರ ಜತೆಗೆ; ಶಿವ=ದೇವರು; ನೆನೆದೆನ್+ಎಂದಡೆ; ನೆನೆ=ಸ್ಮರಿಸು/ಜಪಿಸು/ಚಿಂತಿಸು; ಎಂದಡೆ=ಎಂದರೆ; ಶಿವನ ನೆನೆದೆನೆಂದಡೆ=ಶಿವನಾಮ ಸ್ಮರಣೆಯಲ್ಲಿ ನಾನು ತೊಡಗಿದ್ದೇನೆ ಎಂದು ಹೇಳಿಕೊಂಡರೆ;

ಶಿವನ+ಅವರ; ಅವರ=ಅಂತಹ ವ್ಯಕ್ತಿಗಳನ್ನು; ಎತ್ತಲ್+ಎಂದು+ಅರಿಯನ್+ಎಂದ+ಆತ; ಎತ್ತಲ್=ಯಾವ ಕಡೆಯ; ಅರಿ=ತಿಳಿ; ಅರಿಯನ್=ತಿಳಿಯನು;

ಶಿವನವರ ಎತ್ತಲೆಂದರಿಯನು=ಕೆಟ್ಟ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿಗಳನ್ನು ಶಿವನು ಯಾವ ರೀತಿಯಿಂದಲೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಶಿವಶರಣಶರಣೆಯರ ಪಾಲಿಗೆ ಶಿವನು ಕಲ್ಲಿನ, ಮಣ್ಣಿನ, ಲೋಹದ ವಿಗ್ರಹವಾಗಿರಲಿಲ್ಲ. ವಚನಕಾರರ ಶಿವನು ಒಳ್ಳೆಯ ನಡೆನುಡಿಗಳ ಪ್ರತಿರೂಪವಾಗಿದ್ದನು;

ನಮ್ಮ+ಅಂಬಿಗರ; ಅಂಬಿಗ=ದೋಣಿಯನ್ನು ನಡೆಸುವ ಕಾಯಕವನ್ನು ಮಾಡುವವನು;

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: