ವಿಶ್ವದ ಆಳವಾದ ಡೈವಿಂಗ್ ಪೂಲ್ – ಡೀಪ್ ಡೈವ್ ದುಬೈ

– .

ವಿಶ್ವದ ಅತ್ಯಂತ ಆಳವಾದ ಡೈವಿಂಗ್ ಪೂಲ್, ಡೀಪ್ ಡೈವ್, ಇರುವುದು ದುಬೈನಲ್ಲಿ. ಡೀಪ್ ಡೈವ್‍‍ನ ಆಳ ಅರವತ್ತು ಮೀಟರ‍್ಗಳು. ಇಶ್ಟು ಆಳದ ಡೈವಿಂಗ್ ಪೂಲ್ ವಿಶ್ವದ ಬೇರೆಲ್ಲೂ ಇಲ್ಲ. ಈ ಡೈವಿಂಗ್ ಪೂಲ್‍‍ನಲ್ಲಿ ದುಮುಕಿ ಈಜಾಡುವುದೇ ಒಂದು ಅತ್ಯಂತ ರೋಚಕ ಅನುಬವ ನೀಡುತ್ತದೆ. ಅರವತ್ತು ಮೀಟರ‍್ಗಳಶ್ಟು ಆಳವಾದ ಈ ಡೈವಿಂಗ್ ಪೂಲ್ ವ್ರುತ್ತಿಪರ ಈಜುಗಾರರಿಗಾಗಿ ಹಾಗೂ ಕಲಿಯಲು ಇಶ್ಟ ಪಡುವ ಅಬ್ಯರ‍್ತಿಗಳಿಗಾಗಿ ನಿರ‍್ಮಿಸಲಾಗಿದೆ. ಕಲಿಯುವವರಿಗೆ ಇದು ಅತ್ಯಂತ ಹೆಚ್ಚಿನ ಬದ್ರತೆ ಹಾಗೂ ಸುರಕ್ಶತೆಯನ್ನು ಒದಗಿಸುವ ತಾಣ. ಹಾಗಾಗಿ ಯಾವುದೇ ಹಿಂಜರಿಕೆ ಅತವಾ ಹೆದರಿಕೆ ಇಲ್ಲದೆ ಡೈವಿಂಗ್ ಮಾಡಲು ಹಾಗೂ ಕಲಿಯಲು ಇಲ್ಲಿ ಅವಕಾಶವಿದೆ. ಹದಿನಾಲ್ಕು ಮಿಲಿಯನ್ ಲೀಟರ್ ನೀರಿದ್ದಲ್ಲಿ ಮಾತ್ರ ಪೂಲ್ನ ಪೂರ‍್ಣ ಪ್ರಮಾಣ ತುಂಬಲು ಸಾದ್ಯ. ಇಶ್ಟು ಆಳವಾದ ಈ ಡೈವಿಂಗ್ ಪೂಲ್ ನುರಿತ ಅನುಬವಿ ಡೈವರ್‍‍ಗಳಿಗೆ ಹೊಸ ಹೊಸ ಅನ್ವೇಶಣೆಗೆ ದಾರಿ ಮಾಡಿಕೊಡುವುದರ ಜೊತೆಗೆ ಹೊಸ ಹೊಸ ಸಾಹಸಗಳನ್ನು ಮಾಡಲು ಪ್ರೇರೇಪಿಸುತ್ತದೆ.

ಯುನೈಟೆಡ್ ಆರಬ್ ಎಮಿರೇಟ್ಸಿನ ಶ್ರೀಮಂತ ಪರಂಪರೆಗೆ ಪುಟವಿಟ್ಟಂತೆ ದುಬೈನ ಡೀಪ್ ಡೈವ್ ಪೂಲ್ ಹೊರಹೊಮ್ಮಿದೆ. ಅರವತ್ತು ಮೀಟರ್ ಆಳಕ್ಕೆ ದುಮುಕಬಹುದಾದ ಡೈವಿಂಗ್ ಸೌಲಬ್ಯ ಹೊಂದಿರುವ ವಿಶ್ವದ ಏಕೈಕ ಪೂಲ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ವಿಶ್ವದ ಬೇರಾವುದೇ ಡೈವಿಂಗ್ ಪೂಲ್ಗೆ ಹೋಲಿಸಿದರೆ, ಎರಡನೇ ಅತ್ಯಂತ ಆಳದ ಡೈವಿಂಗ್ ಪೂಲ್ಗಿಂತ, ಇದು ಹದಿನೈದು ಮೀಟರ್‍‍ನಶ್ಟು ಹೆಚ್ಚು ಆಳ ಮತ್ತು ಅದರ ನಾಲ್ಕು ಪಟ್ಟು ದೊಡ್ಡದಾಗಿದೆ. ಗಾತ್ರದಲ್ಲಿ ಇದು ಆರು ಒಲಿಂಪಿಕ್ ಸ್ವಿಮ್ಮಿಂಗ್ ಪೂಲ್ಗಳಶ್ಟಿದೆ. ಇಲ್ಲಿನ ನೀರಿನ ಉಶ್ಣತೆಯನ್ನು ಸದಾಕಾಲ 30 ಡಿಗ್ರಿ ಸೆಲ್ಶಿಯಸ್‍ ಮಟ್ಟದಶ್ಟು (860 ಪ್ಯಾರನ್ಹೀಟ್) ಕಾಪಾಡಿಕೊಳ್ಳಲಾಗುತ್ತದೆ. ಈ ಕಾರಣದಿಂದ ಇಲ್ಲಿ ಡೈವ್ ಮಾಡಲು ಇಚ್ಚಿಸುವವರು, ಚಳಿಯನ್ನು ತಡೆಯಲು ದಪ್ಪನೆಯ ವೆಟ್‍ಸೂಟ್ಗಳನ್ನು ದರಿಸುವ ಅಗತ್ಯತೆಯಿಲ್ಲ. ಇಲ್ಲಿನ ಮತ್ತೊಂದು ಅಸಾದಾರಣತೆ ಏನೆಂದರೆ ಹವಾಮಾನದ ವೈಪರಿತ್ಯ ಪರಿಸ್ತಿತಿಯಲ್ಲಿ ಡೈವ್ ಮಾಡುವುದನ್ನು ರದ್ದುಗೊಳಿಸಲಾಗುವುದಿಲ್ಲ. ಅದಕ್ಕೆ ತಕ್ಕ ಹಾಗೂ ಸೂಕ್ತ ವ್ಯವಸ್ತೆಗಳು ಇಲ್ಲಿ ಲಬ್ಯವಿದೆ. ಇದರಿಂದಾಗ ಪರಿಪೂರ‍್ಣ ಡೈವಿಂಗ್ ಅನುಬವವನ್ನು ಇಲ್ಲಿ ಪಡೆಯಲು ಸಾದ್ಯವಿದೆ.

ಡೈವಿಂಗ್ ಪೂಲಿನಲ್ಲಿರುವ ಸೌಲಬ್ಯಗಳು

ಈ ಅತ್ಯಾದುನಿಕ ಡೈವಿಂಗ್ ಪೂಲ್ನ ಆಕರ‍್ಶಣೆ ಏನೆಂದರೆ; ಒಮ್ಮೆ ಡೈವ್ ಮಾಡಿ ನೀರೊಳಗೆ ಇಳಿದು ಆಳ ಆಳಕ್ಕೆ ಹೋಗುತ್ತಿದ್ದರೆ, ಡೈವರ‍್ರುಗಳಿಗೆ ಅದ್ಬುತವಾದ ಮತ್ತೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಈ ನೀರಿನೊಳಗಿನ ಮುಳುಗಿಹೋದ ನಗರದ ಅವಶೇಶಗಳ ಅನ್ವೇಶಣೆ ಅತ್ಯಂತ ರೋಚಕ ಅನುಬವ ನೀಡುತ್ತದೆ. ಈ ರೀತಿ ಆಳಕ್ಕೆ ಹೋಗಿ ಅನ್ವೇಶಣೆಯಲ್ಲಿ ನಿರತರಾದ ಡೈವರ‍್ರುಗಳ ಸುರಕ್ಶತೆಯನ್ನು ಕಚಿತಪಡಿಸಿಕೊಳ್ಳಲು ನೀರಿನೊಳಗೆ, ಪೂಲಿನ ಸುತ್ತಲೂ ಐವತ್ತಾರು ಕ್ಯಾಮೆರಾಗಳನ್ನು (ಬಿಗ್ ಬಾಸ್ ಮನೆಯಲ್ಲಿರುವಂತೆ) ಅಳವಡಿಸಲಾಗಿದೆ. ಅತ್ಯಾದುನಿಕ ಬೆಳಕು ಮತ್ತು ದ್ವನಿಯ ವ್ಯವಸ್ತೆ ಡೈವರ‍್ರುಗಳಲ್ಲಿ ವಿವಿದ ರೀತಿಯ ಮನಸ್ತಿತಿಯನ್ನು ಸ್ರುಶ್ಟಿಸಲು ಸಹಾಯಕವಾಗುತ್ತದೆ.

ಡೀಪ್ ಡೈವ್ ದುಬೈ, ಅತ್ಯಂತ ಅನುಬವಿ ವ್ರುತಿಪರ ಸ್ಕೂಬಾ ಮತ್ತು ಪ್ರೀ ಡೈವ್ ಪರಿಣಿತ ಸಿಬ್ಬಂದಿಯನ್ನು ಹೊಂದಿದೆ. ಇಲ್ಲಿ ಡೈವಿಂಗಿಗೆ ಹೋಗುವ ಡೈವರ‍್ರುಗಳಿಗೆ ಸಲಹೆಗಳನ್ನು ಹಾಗೂ ಹಲವಾರು ತಂತ್ರಗಾರಿಕೆಗಳನ್ನು ಅವರುಗಳು ಕಲಿಸಿಕೊಡುತ್ತಾರೆ. ಇದು ಅತ್ಯಂತ ಆಳವಾದ ಡೈವಿಂಗ್ ಪೂಲಾದ ಹಿನ್ನೆಲೆಯಲ್ಲಿ, ಸುದಾರಿತ ಡೈವಿಂಗ್ ತಂತ್ರಗಳನ್ನು ಸಹ ಬೋದಿಸುತ್ತಾರೆ. ಡೈವರ‍್ರುಗಳ ಸುರಕ್ಶಿತತೆಯನ್ನು ಕಚಿತಪಡಿಸುತ್ತಾರೆ ಮತ್ತು ಡೈವಿಂಗಿಗೆ ಬಳಸುವ ಹೊಸ ಉಪಕರಣಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕು ಎಂಬುದರ ಶಿಕ್ಶಣವನ್ನೂ ನೀಡುತ್ತಾರೆ.

ಸುರಕ್ಶತೆ ಮತ್ತು ನೈರ‍್ಮಲ್ಯದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ದ್ರುಶ್ಟಿಯಿಂದ ಪ್ರತಿ ಆರು ಗಂಟೆಗೊಮ್ಮೆ ಪಿಲ್ಟರ‍್ಗಳ ಮೂಲಕ ನೀರನ್ನು ಹಾಯಿಸಿ ಶುದ್ದಿಗೊಳಿಸಲಾಗುತ್ತದೆ. ಇಶ್ಟೆಲ್ಲಾ ಸುರಕ್ಶಿತ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಅಕಸ್ಮಾತ್ ಅನಾಹುತ ಜರುಗಿದ ಸಂದರ‍್ಬಗಳಲ್ಲಿ ಡೈವರ‍್ರುಗಳಿಗೆ ಚಿಕಿತ್ಸೆ ನೀಡಲು, ಹೈಪರ‍್ಬೇರಿಕ್ ಪರಿಣಿತಿ ಹೊಂದಿದ ಹನ್ನೆರೆಡು ನುರಿತ ಸಿಬ್ಬಂದಿಯ ಬಲ ಇಲ್ಲಿದೆ. ಈಗಾಗಲೇ ತಿಳಿಸಿರುವಂತೆ ಡೀಪ್ ಡೈವ್ ಪೂಲ್ ನಲ್ಲಿ 56 ಕ್ಯಾಮರಾಗಳಿವೆ. ಅದರಲ್ಲಿ ಸದಾಕಾಲ ಮೂಡಿಬರುವ ಚಿತ್ರಗಳನ್ನು ಪ್ರದರ‍್ಶಿಸಲು ದೊಡ್ಡ ದೊಡ್ಡ ಪರದೆಗಳಿವೆ. ಪರದೆಗಳಲ್ಲಿ ಮೂಡಿಬರುತ್ತಿರುವ ಚಿತ್ರಣಗಳ ಮೇಲ್ವಿಚಾರಣೆಯನ್ನು ನುರಿತ ಡೈವರ‍್ರುಗಳು ಸದಾ ಕಾಲ ಮಾಡುತ್ತಿರುತ್ತಾರೆ. ಸಂಬವನೀಯ ಅನಾಹುತವಾಗುವುದು ಕಂಡು ಬಂದ ಕೂಡಲೇ, ಕ್ಶಿಪ್ರವೇಗದಲ್ಲಿ ಅವರುಗಳು ಕಾರ‍್ಯನಿರತರಾಗಿ ಕ್ರಮ ಜರುಗಿಸಿ ಅನಾಹುತಗಳಾಗುವುದನ್ನು ತಪ್ಪಿಸುತ್ತಾರೆ.

ಡೀಪ್ ಡೈವ್ನಲ್ಲಿ ಅಳವಡಿಸಿರುವ ಐವತ್ತಾರು ಕ್ಯಾಮೆರಾಗಳ ಮೂಲಕ ದೊಡ್ಡ ಪರದೆಯ ಮೇಲೆ ಮೂಡಿಬರುವ ಚಿತ್ರಗಳನ್ನು ವೀಕ್ಶಿಸಲು ಡೈವರ‍್ರುಗಳ ಕುಟುಂಬದವರು, ಸ್ನೇಹಿತರು ಮತ್ತು ಸಂದರ‍್ಶಕರಿಗೂ ಸಹ ಅವಕಾಶವಿದೆ. ಹೊಸದಾಗಿ ಡೈವ್ ಮಾಡಲು ಬಂದವರಿಗೆ ದರಿಸಲು ಅವಶ್ಯವಿರುವ ಡೈವಿಂಗ್ ಸೂಟ್ ಮತ್ತು ಇತರೆ ವಸ್ತಗಳನ್ನು ಕರೀದಿಸಲು ಶಾಪ್‍ಗಳು, ಗಿಪ್ಟ್ ಶಾಪ್ ಮತ್ತು ರೆಸ್ಟೋರೆಂಟ್ ಸೌಲಬ್ಯ ಸಹ ಈ ಸಂಕೀರ‍್ಣದಲ್ಲಿದೆ. ಇದೊಂದು ಸಂಪೂರ‍್ಣ ಪ್ಯಾಕೇಜ್ ಒಳಗೊಂಡ ಪ್ರದೇಶ ಎಂದರೆ ತಪ್ಪಾಗುವುದಿಲ್ಲ.

ಇಶ್ಟೆಲ್ಲಾ ಐಶಾರಾಮಿ ವ್ಯವಸ್ತೆಯನ್ನು ಒಳಗೊಂಡಿರುವ ಇದು, ವೀಕ್ಶಕರ ಜೇಬನ್ನು ಕಂಡಿತಾ ಬಿಸಿ ಮಾಡುತ್ತದೆ. ಡೀಪ್ ಡೈವ್ನಲ್ಲಿ ಸ್ಕೂಬಾ ಅನುಬವ ಪಡೆಯಲು 1200 ದಿರ‍್ಹಾಮ್ ಹಾಗೂ ಸಾಮಾನ್ಯ ಡೈವಿಂಗ್ಗೆ 900 ದಿರ‍್ಹಾಮ್ ನಿಂದ ದಾರಣೆ ಪ್ರಾರಂಬವಾಗುತ್ತದೆ. ಮೊದಲ ಬಾರಿ ಡೈವಿಂಗ್ ಮಾಡುವವರ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿರುವುದರಿಂದ ಹಾಗೂ ಹೆಚ್ಚು ರಿಸ್ಕ್ ಇರುವುದರಿಂದ, ಅವರಿಗೆ 1500 ದಿರ‍್ಹಾಮ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಇಲ್ಲಿ ಡೈವ್ ಮಾಡಲು ಉದ್ದೇಶಿಸಿರುವವರ ವಯೋಮಾನ ಕನಿಶ್ಟ ಹತ್ತು ವರ‍್ಶವಿರಬೇಕಾದ್ದು ಕಡ್ಡಾಯ. ಡೀಪ್ ಡೈವ್ ದುಬೈ, ನಾಡ್ ಆಲ್ ಶೆಬಾದಲ್ಲಿದೆ. ಇಲ್ಲಿಗೆ ಬರಲು ಡೌನ್ಟೌನ್ ದುಬೈನಿಂದ ಹದಿನೈದು ನಿಮಿಶ ಮತ್ತು ದುಬೈ ಅಂತರರಾಶ್ಟ್ರೀಯ ವಿಮಾನ ನಿಲ್ದಾಣದಿಂದ ಇಪ್ಪತ್ತೈದು ನಿಮಿಶದ ಪ್ರಯಾಣ ಸಾಕು.

(ಮಾಹಿತಿ ಮತ್ತು ಚಿತ್ರ ಸೆಲೆ: mybestplace.com, guinnessworldrecords.com, travelandleisure.com, deepdivedubai.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: